ಅಲೆಕ್ಸಾಂಡರ್ ಡಫ್(1806-1878. ಭಾರತದಲ್ಲಿದ್ದ ಒಬ್ಬ ಸ್ಕಾಟಿಷ್ ಪಾದ್ರಿ, ಶಿಕ್ಷಣ ಪ್ರಚಾರಕ, ಪತ್ರಿಕೋದ್ಯಮಿ, ಗ್ರಂಥಕರ್ತ.

ಬದುಕು, ಸಾಧನೆ ಬದಲಾಯಿಸಿ

ಜನನ 1806ರ ಏಪ್ರಿಲ್ 27ರಂದು, ಪರ್ತ್‍ಷೈರಿನ ಮೌಲಿನ್ ಎಂಬಲ್ಲಿ. ಸ್ಕಾಟ್ಲೆಂಡಿನ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಈತ ವಿದ್ಯಾಭ್ಯಾಸ ಮಾಡುತ್ತಿದ್ದಾಗ ತಾಮಸ್ ಚಾಮರ್ಸನ ಪ್ರಭಾವಕ್ಕೆ ಒಳಗಾದ; 1829ರಲ್ಲಿ ದೀಕ್ಷೆ ಪಡೆದ. ಮತಪ್ರಚಾರ ಕಾರ್ಯಕ್ಕಾಗಿ ಇವನನ್ನು ಭಾರತಕ್ಕೆ ಕಳುಹಿಸಲು ವಿದೇಶಿಯ ಕ್ರೈಸ್ತಧರ್ಮ ಪ್ರಚಾರ ಸಮಿತಿ ನಿರ್ಧರಿಸಿತು. ಇವನ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದ ಹಡಗು ಮಾರ್ಗ ಮಧ್ಯದಲ್ಲಿ ಎರಡು ಸಾರಿ ಅಪಘಾತಕ್ಕೆ ಈಡಾಯಿತು. ಇವನ ಆಸ್ತಿಯೆಲ್ಲ ನಾಶವಾಯಿತು. ಇವನು 1830ರಲ್ಲಿ ಕಲ್ಕತ್ತ ತಲುಪಿದ. ಉನ್ನತ ಜಾತಿಯವರನ್ನು ಕ್ರೈಸ್ತರನ್ನಾಗಿ ಪರಿವರ್ತಿಸಲು ಇವನು ಯೋಚಿಸಿ, ಅದಕ್ಕಾಗಿ ಶಿಕ್ಷಣ ಪ್ರಚಾರಕ್ಕೆ ವಿಶೇಷ ಗಮನ ನೀಡಿದ. ಬೈಬಲಿನ ಬೋಧನೆಯೊಂದಿಗೆ ಇತರ ವಿಷಯಗಳನ್ನೂ ಬೋಧಿಸುವ ಶಾಲೆಯೊಂದನ್ನು ಪ್ರಾರಂಭಿಸಿದ. ಕ್ರಮೇಣ ಈ ಶಾಲೆ ಬೆಳೆದು ಕ್ರೈಸ್ತ ಪ್ರಚಾರ ಕಾಲೇಜು ಸ್ಥಾಪಿತವಾಯಿತು. ಡಫ್ಫನ ಉದ್ದೇಶಗಳಿಗೆ ಸರ್ಕಾರದ ಪುರಸ್ಕಾರವೂ ಪ್ರಾಪ್ತವಾಯಿತು.

ಡಫ್ ಇಂಗ್ಲೆಂಡಿಗೆ ಮರಳಿ ಅಲ್ಲಿ ಆರು ವರ್ಷ ಇದ್ದು 1840ರಲ್ಲಿ ಭಾರತಕ್ಕೆ ಮತ್ತೆ ಬಂದ. ಆ ವೇಳೆಗೆ ಭಾರತದಲ್ಲಿ ಸರ್ಕಾರದ ಧೋರಣೆ ಬದಲಾಗಿತ್ತು. ಅವನಿಗೆ ಸರ್ಕಾರದಿಂದ ಮೊದಲಿನಷ್ಟು ಸಹಕಾರ ದೊರಕಲಿಲ್ಲ. 1843ರಲ್ಲಿ ಸ್ಕಾಟ್ಲೆಂಡಿನ ಚರ್ಚಿನಲ್ಲಿ ಒಡಕುಂಟಾಯಿತು. ಚರ್ಚು ಸರ್ಕಾರದಿಂದ ಸ್ವತಂತ್ರವಾಗಿರಬೇಕೆಂಬ ಭಾವನೆಯುಳ್ಳ ಅನೇಕ ಪಾದ್ರಿಗಳು ಸ್ಕಾಟ್ಲೆಂಡ್ ಚರ್ಚಿನಿಂದ ಹೊರಬಂದು ಸ್ವತಂತ್ರ ಚರ್ಚನ್ನು ಸ್ಥಾಪಿಸಿಕೊಂಡರು. ಡಫ್ ಸ್ವತಂತ್ರ ಚರ್ಚಿನ ಪರವಾಗಿದ್ದ ಆದ್ದರಿಂದ ಇವನು ಕಾಲೇಜ್ ಕಟ್ಟಡವನ್ನೂ ಅದರ ಇತರ ಎಲ್ಲ ಆಸ್ತಿಗಳನ್ನೂ ಬಿಟ್ಟುಕೊಡಬೇಕಾಯಿತು. ಆದರೆ ಇವನು ಧೈರ್ಯಗುಂದದೆ ಇನ್ನೊಂದು ಸಂಸ್ಥೆಯನ್ನು ಸ್ಥಾಪಿಸುವ ಕಾರ್ಯದಲ್ಲಿ ಉದ್ಯುಕ್ತನಾದ. ಕಲ್ಕತ್ತ ರಿವ್ಯೂ ಎಂಬ ಪತ್ರಿಕೆಯ ಸ್ಥಾಪನೆಯಲ್ಲಿ ಪಾತ್ರವಹಿಸಿ 1845-1849ರಲ್ಲಿ ಅದರ ಸಂಪಾದಕನಾಗಿದ್ದು, 1849ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ.

1856ರಲ್ಲಿ ಮತ್ತೆ ಭಾರತಕ್ಕೆ ಬಂದ. 1858ರಲ್ಲಿ ಪ್ರಕಟವಾದ ದಿ ಇಂಡಿಯನ್ ಮ್ಯೂಟಿನಿ: ಇಟ್ಸ್ ಕಾಸಸ್ ಅಂಡ್ ರಿಸಲ್ಟ್ಸ್ ಎಂಬ ತನ್ನ ಗ್ರಂಥದಲ್ಲಿ ಇವನು ಆಗಿನ ಭಾರತ ಸರ್ಕಾರದ ನೀತಿಯನ್ನು ಕಟುವಾಗಿ ಟೀಕಿಸಿದ್ದಾನೆ. ಇವನು ಕಲ್ಕತ್ತ ವಿಶ್ವವಿದ್ಯಾಲಯದ ಬೆಳೆವಣಿಗೆಗಾಗಿ ವಿಶೇಷ ಗಮನ ನೀಡಿದ. 1863ರಲ್ಲಿ ಅದರ ಕುಲಪತಿಯಾಗಲು ಆಹ್ವಾನ ಬಂದಿತ್ತು. ಆದರೆ ಅನಾರೋಗ್ಯದಿಂದಾಗಿ ಇವನು ಭಾರತದಿಂದ ಹಿಂದಿರುಗಿದ. 1878ರಲ್ಲಿ ಈತ ತೀರಿಕೊಂಡ.



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: