ಅರ್ಬಿ ಜಲಪಾತ, ಮಣಿಪಾಲ

ಅರ್ಬಿ ಜಲಪಾತ
ಅರ್ಬಿ ಜಲಪಾತ
ಸ್ಥಳಉಡುಪಿ ಜಿಲ್ಲೆ, ಕರ್ನಾಟಕ, ಭಾರತ
ನಿರ್ದೇಶಾಂಕಗಳ13°20'11"N 74°47'36"E

ಸ್ಥಳ ಬದಲಾಯಿಸಿ

ಅರ್ಬಿ ಜಲಪಾತವು ಕರ್ನಾಟಕದ ಮಣಿಪಾಲದ ಸಮೀಪದಲ್ಲಿದೆ. ಇದು ಮಣಿಪಾಲದ ದಶರಥ ನಗರದ ವೈಷ್ಣವಿ ದೇವಸ್ಥಾನದ ಹಿಂಭಾಗದಲ್ಲಿದೆ. ಇದು ಮಣಿಪಾಲದಿಂದ ಕೇವಲ ೨ ಕಿ.ಮೀ. ದೂರದಲ್ಲಿದೆ. ಇದು ದಟ್ಟವಾದ ಮರಗಳ ನಡುವೆ ಕಾಲೋಚಿತ ಸಣ್ಣ ಜಲಪಾತವಾಗಿದೆ. ದಟ್ಟವಾದ ಮರ-ಗಿಡಗಳು ಮತ್ತು ಬಂಡೆಗಳು ಈ ಜಲಪಾತವನ್ನು ಸುತ್ತುವರೆದಿವೆ. ಈ ಜಲಪಾತವು ವಿಶೇಷವಾಗಿ ಭಾರೀ ಮಳೆಯ ಸಮಯದಲ್ಲಿ ಭಾರೀ ಶಬ್ದದೊಂದಿಗೆ ಸುಂದರವಾಗಿ ಹರಿಯುತ್ತದೆ.[೧]

ವಿಶೇಷತೆ ಬದಲಾಯಿಸಿ

ಪ್ರತಿ ಮಳೆಗಾಲದ ಆರಂಭದೊಂದಿಗೆ, ಅರ್ಬಿ ಎಂದು ಕರೆಯಲ್ಪಡುವ ಈ ಜಲಪಾತವು ಪ್ರಕೃತಿಯ ನಡುವೆ ಕಾಣಿಸಿಕೊಳ್ಳುತ್ತದೆ ಮತ್ತು ವಿವಿಧ ಪ್ರದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಮಳೆಗಾಲದ ನಂತರ ಅದು ಕಣ್ಮರೆಯಾಗುತ್ತದೆ. ಇದು ಮಳೆಗಾಲದಲ್ಲಿ ಕೇವಲ ನಾಲ್ಕೈದು ತಿಂಗಳು ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಈ ಜಲಪಾತವನ್ನು ಋತುವಿನ ಜಲಪಾತಗಳು ಅಥವಾ ಮಳೆಗಾಲದ ಜಲಪಾತಗಳು ಎಂದು ಕರೆಯಲಾಗುತ್ತದೆ.[೨] ಈ ಜಲಪಾತವು ಬೆಟ್ಟದ ಮೇಲಿನ ಬಂಡೆಗಳ ಕೆಳಗೆ ಬೇರುಗಳಿಂದ ಒಸರುವ ನೀರಿನಿಂದ ಹೊರಹೊಮ್ಮುತ್ತದೆ ಮತ್ತು ಬಂಡೆಗಳು ಮತ್ತು ಮರಗಳ ಮೂಲಕ ಹಲವಾರು ಶಾಖೆಗಳಾಗಿ ಬೀಳುತ್ತದೆ.

ಈ ಜಲಪಾತವು ಮಣಿಪಾಲದಿಂದ ಸುಮಾರು ೨ ಕಿ. ಮೀ. ದೂರದಲ್ಲಿರುವ ಬಡಗುಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ದಶರಥ ನಗರದ ಅರ್ಬಿಕೋಡಿ ವೈಷ್ಣವಿ ದುರ್ಗೆಯ ದೇವಸ್ಥಾನದ ಬಳಿಯ ಶ್ರೀ ಬ್ರಹ್ಮ ರಾಮೇಶ್ವರ ಭಜನಾ ಮಂದಿರದ ಹಿಂಭಾಗದ ಬೆಟ್ಟದಿಂದ ಹರಿಯುತ್ತದೆ. ಸಾಮಾನ್ಯವಾಗಿ, ಮೇ ಅಥವಾ ಜೂನ್‌ನಲ್ಲಿ ಮಳೆಗಾಲ ಪ್ರಾರಂಭವಾದ ತಕ್ಷಣ ಜಲಪಾತಗಳು ಕಾಣಿಸಿಕೊಳ್ಳುತ್ತವೆ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ಕಣ್ಮರೆಯಾಗುತ್ತವೆ. ಆದರೆ ಜನವರಿವರೆಗೆ ಜಲಪಾತದಲ್ಲಿ ಅಲ್ಪ ಪ್ರಮಾಣದ ನೀರು ಇರುತ್ತದೆ. ಜೂನ್ ನಿಂದ ಅಕ್ಟೋಬರ್ ವರೆಗೆ ಜಲಪಾತಕ್ಕೆ ಭೇಟಿ ನೀಡಲು ಸರಿಯಾದ ಸಮಯವಾಗಿದೆ.[೩]

ಮಾರ್ಗ ಸೂಚಿ ಬದಲಾಯಿಸಿ

ಇದು ಉಡುಪಿಯಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ. ಮಣಿಪಾಲದಿಂದ ಮಂಚಿಗೆ ಬಸ್ಸಿನಲ್ಲಿ ಹೋಗಿ ದಶರಥ ನಗರದಲ್ಲಿ ಬಸ್ಸಿನಿಂದ ಇಳಿದ ನಂತರ ಜಲಪಾತವನ್ನು ತಲುಪಲು ಅರ್ಧ ಕಿ.ಮೀ. ಇರುವುದು.[೨]

ಮಣಿಪಾಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಾರಾಂತ್ಯದಲ್ಲಿ ಇದು ಪ್ರಮುಖ ಆಕರ್ಷಣೆಯಾಗಿದೆ. ವಿದ್ಯಾರ್ಥಿಗಳಂತೆ ಉಡುಪಿ, ಕುಂದಾಪುರ, ಮಣಿಪಾಲ, ಪರ್ಕಳ ಮತ್ತಿತರ ಕಡೆಯಿಂದ ಜನರು ಕುಟುಂಬ ಸಮೇತ ಈ ಜಲಪಾತಕ್ಕೆ ಭೇಟಿ ನೀಡುತ್ತಾರೆ. ಜಲಪಾತವು ಹೆಚ್ಚು ಆಳವಿಲ್ಲದಿರುವುದರಿಂದ, ಇತರ ಜಲಪಾತಗಳಂತೆ ಜೀವಕ್ಕೆ ಯಾವುದೇ ಅಪಾಯವಿಲ್ಲ. ಹಾಗಾಗಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಜಲಪಾತಕ್ಕೆ ಭೇಟಿ ನೀಡುತ್ತಾರೆ.

ಉಲ್ಲೇಖಗಳು ಬದಲಾಯಿಸಿ