ಅರೇಲಿಯ : ಅರೇಲೀಯೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಸ್ಯ. ಪೊದೆಯಾಗಿ, ಪರ್ಣಸಸಿಯಾಗಿ, ಮರವಾಗಿ ಬೆಳೆಯುತ್ತದೆ. ಅಲಂಕಾರದ ಗಿಡವಾಗಿ, ಬೇಲಿಯ ಗಿಡವಾಗಿ ಬೆಳೆಸುತ್ತಾರೆ. ಕಾಂಡದ ಮೇಲೆ ಮುಳ್ಳುಗಳಿರುತ್ತವೆ. ಪತ್ರಗಳು ಸಂಯುಕ್ತ ಮಾದರಿಯವಾಗಿದ್ದು ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿ. ಹೂಗೊಂಚಲು ಅಂಬೆಲ್ ಮಾದರಿಯದು. 5 ಕೇಸರಗಳೂ 5 ಭಾಗದ ಅಂಡಾಶಯವೂ ಇವೆ. ಇದರದ್ದು ಬಹುಬೀಜಫಲ, ಬೆರಿ ಅಥವಾ ಡ್ರೂಪ್ ಮಾದರಿಯದು. ಅರೇಲಿಯ ಗಯಿಲ್‍ಪೊಲೈ ಪ್ರಸಿದ್ಧ ಪ್ರಭೇದ. ಎಲೆಗಳು ಮನೋಹರವಾಗಿರುತ್ತವೆ. ಅರೇಲಿಯ ರೆಸಿಮೋಸ ಬಹು ಕವಲೊಡೆಯುವ ದೀರ್ಘಾವಧಿ ಸಸ್ಯ. ಅರೇಲಿಯ ನೂಡಿಕ್ಯಾಲಿಸ್ ಕುಬ್ಜ ಅರೇಲಿಯ ಎಂದು ಹೆಸರುವಾಸಿಯಾಗಿದೆ. ಅರೇಲಿಯ ಕಾರ್ಡೇಟ ಪ್ರಭೇದದ ಎಳೆಯ ಕಾಂಡವನ್ನು ಜಪಾನಿಗಳು ತಿನ್ನುತ್ತಾರಾದ ಕಾರಣ ಇದಕ್ಕೆ ಅರೇಲಿಯ ಎಡುಲಿಸ್ ಎಂಬ ಹೆಸರಿದೆ. ಇದು ಜಪಾನ್, ಚೀನಗಳ ಮೂಲದ್ದು. ಗಿಡ 3 ಮೀ ಎತ್ತರಕ್ಕೆ ಬೆಳೆಯುತ್ತ್ತದೆ. ಅರೇಲಿಯ ಹಿಸ್ಪಿಡ 1 ಮೀ ಎತ್ತರಕ್ಕೆ ಬೆಳೆಯುವ ಪೊದೆ. ಹೂ ಬಿಳುಪು; ಹಣ್ಣು ಕಡುಗೆಂಪು. 10 ಮೀ ಎತರ ಬೆಳೆಯುವ ಪ್ರಭೇದವೆಂದರೆ ಅರೇಲಿಯ ಸೈನೋಸ. ತುಂಡುಗಳಿಂದ ಹೊಸಗಿಡಗಳನ್ನು ಬೆಳೆಸುತ್ತಾರೆ. ದೀರ್ಘಾವಧಿ ಸಸ್ಯ ವಾದ್ದರಿಂದ ಒಳ್ಳೆಯ ಗೊಬ್ಬರ ಅಗತ್ಯ. ಜೌಗಿನಲ್ಲಿ ಇದು ಚೆನ್ನಾಗಿ ಬೆಳೆಯದು. ಬಿಸಿಲು ಹೆಚ್ಚಾದರೆ ಎಲೆ, ಹೂಗಳ ಬಣ್ಣ ಮಾಸುತ್ತದೆ. ನೆರಳು ಇದ್ದಲ್ಲಿ ಬೆಳೆ ಹಸನಾಗುತ್ತದೆ. ಸಾಮಾನ್ಯವಾಗಿ ಗಿಡಗಳಿಗೆ ಹುಳು ಬೀಳದು. ಕೆಲವು ಬಾರಿ ಮೀಲೀ ಬಗ್ಸ್, ಶಲ್ಕ ಕೀಟಗಳು ಹತ್ತಬಹುದು. ಹತ್ತಿದರೂ ಅವುಗಳ ನಿವಾರಣೆ ಸುಲಭ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅರೇಲಿಯ&oldid=614233" ಇಂದ ಪಡೆಯಲ್ಪಟ್ಟಿದೆ