ಅರಸೀಕೆರೆ ವಿಧಾನಸಭಾ ಕ್ಷೇತ್ರ

ಅರಸೀಕೆರೆ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೧೯೪) ಹಾಸನ ಜಿಲ್ಲೆಗೆ ಸೇರಿರುವ ವಿಧಾನಸಭಾ ಕ್ಷೇತ್ರ. ಬೇಲೂರು, ಹಾಸನ ಹೊಳೆನರಸಿಪುರ ಮತ್ತು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಗಳು ಈ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕ್ಷೇತ್ರಗಳಾಗಿವೆ[೧]. ಇದು ಸಾಮಾನ್ಯ ಮೀಸಲು ಕ್ಷೇತ್ರ.

ಹಾಸನ ಜಿಲ್ಲೆಯ ನಕ್ಷೆ(ಅರಸೀಕೆರೆ ವಿಧಾನಸಭಾ ಕ್ಷೇತ್ರ ಕೆಂಪು ಬಣ್ಣದಲ್ಲಿದೆ)

ಚುನಾವಣಾ ಇತಿಹಾಸ ಬದಲಾಯಿಸಿ

ಅರಸೀಕೆರೆ ಕಲ್ಪತರುವಿನ ನಾಡು ಎಂದೇ ಹೆಸರುವಾಸಿಯಾಗಿದೆ. ಇಲ್ಲಿನ ತೆಂಗು ಮತ್ತು ಒಣಕೊಬ್ಬರಿ ಬಹಳ ಜನಪ್ರಿಯವಾಗಿದೆ. ಇದಲ್ಲದೆ ರಾಗಿ, ಮೆಣಸು ಎಣ್ಣೆಕಾಳು, ಜೋಳ ಇವುಗಳನ್ನೂ ಸಹ ಇಲ್ಲಿ ಬೆಳೆಯಲಾಗುತ್ತದೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಸಲ ಚುನಾವಣೆ ೧೯೫೨ರಲ್ಲಿ ನಡೆಯಿತು. ಕೆ ಪಂಚಾಕ್ಷರಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಕೆ‌ಎಂಪಿಪಿ ಪಕ್ಷದ ಪಿ ಬಿ ಬೊಮ್ಮಣ್ಣ ಅವರ ವಿರುದ್ಧ ೨೮೩ ಮತಗಳ ಅಂತರದಿಂದ ಜಯಗಳಿಸಿದರು[೨]. ೧೯೫೨ರಿಂದ ೨೦೧೮ರವರೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೭ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಅದೇ ರೀತಿ ಜನತಾ ದಳ ಪಕ್ಷದ ಅಭ್ಯರ್ಥಿಗಳು ೪ ಬಾರಿ, ಮತ್ತು ಬಿಜೆಪಿ, ಪಿಎಸ್‌ಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಒಂದು ಬಾರಿ ಜಯಗಳಿಸಿ ಶಾಸಕರಾಗಿದ್ದಾರೆ. ಜನತಾ ದಳ (ಜಾತ್ಯಾತೀತ) ಪಕ್ಷದ ಕೆ ಎಮ್ ಶಿವಲಿಂಗೇಗೌಡ ಸತತ ಮೂರು ಬಾರಿ-೨೦೦೮, ೨೦೧೩ ಮತ್ತು ೨೦೧೮ರಲ್ಲಿ ಚುನಾವಣೆಯನ್ನು ಗೆದ್ದು ಶಾಸಕರಾಗಿರುವುದು ಈ ಕ್ಷೇತ್ರದ ವಿಶೇಷವಾಗಿದೆ[೩]. ೨೦೦೮ರಲ್ಲಿ ಜನತಾ ದಳ (ಜಾತ್ಯಾತೀತ) ಪಕ್ಷದಿಂದ ಸ್ಪರ್ಧಿಸಿದ ಶಿವಲಿಂಗೇಗೌಡರು ೭೪,೨೨೬ ಮತಗಳನ್ನು ಪಡೆದು ತಮ್ಮ ಎದುರಾಳಿ, ಕಾಂಗ್ರೆಸ್‌ನ ಜಿ ವಿ ಸಿದ್ಧಪ್ಪ ವಿರುದ್ದ ೩೪,೨೨೬ ಮತಗಳ ಅಂತರದಿಂದ ಗೆದ್ದರು. ೨೦೧೩ರಲ್ಲಿ ಶಿವಲಿಂಗೇಗೌಡರು ೭೬,೫೭೯ ಮತಗಳನ್ನು ಪಡೆದು ಎದುರಾಳಿ ಕಾಂಗ್ರೆಸ್ ಪಕ್ಷದ ಬಿ ಶಿವರಾಮು ವಿರುದ್ಧ ೨೯,೬೩೧ ಮತಗಳ ಅಂತರದಿಂದ ಜಯಗಳಿಸಿದರು. ಇನ್ನು ೨೦೧೮ರಲ್ಲಿಯೂ ಶಿವಲಿಂಗೇಗೌಡರು ೯೩,೩೮೬ ಮತಗಳನ್ನು ಪಡೆದು ಎದುರಾಳಿ, ಕಾಂಗ್ರೆಸ್‌ ಪಕ್ಷದ ಜಿ ಬಿ ಶಶಿಧರ ವಿರುದ್ಧ ೪೨,೮೮೧ ಮತಗಳ ಅಂತರದಿಂದ ವಿಜಯಿಯಾದರು[೪][೫].

ಮತದಾರರು ಬದಲಾಯಿಸಿ

ಅಂಕಿ ಅಂಶಗಳು ಬದಲಾಯಿಸಿ

ಅರಸೀಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಒಟ್ಟು ಸಂಖ್ಯೆ ೨,೧೬,೦೦೭.

  • ಪುರುಷ ಮತದಾರರು- ೧,೦೭,೪೨೧
  • ಮಹಿಳಾ ಮತದಾರರು- ೧,೦೮,೫೮೧
  • ತೃತಿಯ ಲಿಂಗಿ ಮತದಾರರು- ೭

ಜಾತಿವಾರು ಬದಲಾಯಿಸಿ

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತ ಮತಗಳದ್ದು ಹೆಚ್ಚಿನ ಪ್ರಾಬಲ್ಯವಿದೆ. ಅದೇ ರೀತಿ ಇಲ್ಲಿಯವರೆಗಿನ ಚುನಾವಣೆಯಲ್ಲಿ ಗೆದ್ದವರಲ್ಲಿ ಲಿಂಗಾಯಿತ ಅಭ್ಯರ್ಥಿಗಳೇ ಹೆಚ್ಚು. ಆದರೆ ಈ ದಾಖಲೆಯನ್ನು ಲಿಂಗಾಯಿತರಲ್ಲದ ಕೆ ಎಂ ಶಿವಲಿಂಗೇಗೌಡರು ಮುರಿದು ಸತತ ೩ ಬಾರಿ ಗೆಲುವು ಸಾಧಿಸಿದರು. ರಾಜ್ಯದಲ್ಲಿ ಲಿಂಗಾಯಿತ ನಾಯಕರಿರುವ ಸರ್ಕಾರ ರಚಿಸಿರುವ ಬಿಜೆಪಿ ಇಲ್ಲಿ ಒಂದೇ ಬಾರಿ(೨೦೦೪ರ ವಿ.ಸ. ಚುನಾವಣೆ, ಅಭ್ಯರ್ಥಿ ಎ ಎಸ್ ಬಸವರಾಜು) ಗೆಲುವಿನ ಖಾತೆ ತೆರೆದಿದ್ದು ಸ್ವಾರಸ್ಯಕರ ಸಂಗತಿ. ಇನ್ನು ಒಕ್ಕಲಿಗರು, ಕುರುಬರು, ಮುಸ್ಲಿಮರು, ಪ.ಜಾತಿ ಮತ್ತು ಪಂಗಡಗಳ ಮತದಾರರು ಸಹ ಗಮನಾರ್ಹ ಪಾತ್ರವಹಿಸುತ್ತಾರೆ[೬].

ಇವನ್ನೂ ಓದಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ಹಾಸನ ವಿಧಾನಸಭಾ ಕ್ಷೇತ್ರಗಳು". eedina.com. ಈ ದಿನ. Retrieved 12 May 2023.
  2. "ಹಾಸನ ವಿಧಾನಸಭಾ ಕ್ಷೇತ್ರಗಳು". eedina.com. ಈ ದಿನ. Retrieved 12 May 2023.
  3. "Arsikere Assembly Constituency, Karnataka". elections.in. 5 Dots Partners. Retrieved 12 May 2023.
  4. "ಅರಸೀಕೆರೆಯಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಶಿವಲಿಂಗೇಗೌಡರಿಗೆ ಈ ಬಾರಿ ಸಿಗುತ್ತಾ ಜಯ?". publictv.in. ಪಬ್ಲಿಕ್ ಟಿವಿ. Retrieved 12 May 2023.
  5. "ಅರಸೀಕೆರೆ ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 12 May 2023.
  6. "ಹಾಸನ ವಿಧಾನಸಭಾ ಕ್ಷೇತ್ರಗಳು". eedina.com. ಈ ದಿನ. Retrieved 12 May 2023.