ಅರಳಿಮರ ಮೊರೇಸೀ ಕುಟುಂಬಕ್ಕೆ ಸೇರಿದ ಮರ (ಫೈಕಸ್ ರಿಲಿಜಿಯೋಸ ಇದರ ವೈಜ್ಞಾನಿಕ ಹೆಸರು.) ಅಶ್ವತ್ಥವೃಕ್ಷ ಇದರ ಪರ್ಯಾಯನಾಮ. ಉಗಮಸ್ಥಾನ ಭಾರತ. ಹಲವು ಶತಮಾನಗಳ ಕಾಲ ಇದು ಜೀವಂತವಾಗಿದ್ದ ದಾಖಲೆಗಳಿವೆ. ಪ್ರ ಶ.ಪೂ. 288ರಲ್ಲಿ ನೆಟ್ಟ ಒಂದು ಮರ ಶ್ರೀಲಂಕದಲ್ಲಿ ಇದ್ದಿತು. ವಿದುರಾಶ್ವತ್ಥದಲ್ಲಿರುವ ಅರಳಿಮರವೂ ಬಹು ಹಳೆಯದು. ಅರಳಿಯ ಎಳೆಯ ಎಲೆ ತಾಮ್ರವರ್ಣದ್ದು, ಬಲಿತ ಎಲೆ ಹಸಿರು, ಹೂಗೊಂಚಲು ಹೈಪ್ಯಾಂತೋಡಿಯಂ ಮಾದರಿಯದು. ಬೆಳೆಯುವ ಆರಂಭದಲ್ಲಿ ಅಪ್ಪು ಸಸ್ಯವಾಗಿದ್ದು, ಅನಂತರ ಸ್ವತಂತ್ರ ಮರವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕೊಂಬೆಗಳಿವೆ. ಇದು ನಿತ್ಯಹರಿದ್ವರ್ಣದ ಮರ, ಬುದ್ಧದೇವನಿಗೆ ಜ್ಞಾನೋದಯವಾದ ಬುದ್ಧಗಯದಲ್ಲಿರುವ ಬೋಧಿವೃಕ್ಷ ಒಂದು ಪ್ರಸಿದ್ಧ ಅರಳಿಮರ. ಹಿಂದುಗಳಿಗೂ ಬೌದ್ಧರಿಗೂ ಪವಿತ್ರ ಸ್ಥಾನ ಎನ್ನಲಾಗುತ್ತದೆ. ಬೀಜಗಳಿಂದ ಅಥವಾ ಬೆಳೆದ ಸಸ್ಯಗಳಿಂದ ಈ ಸಸ್ಯಗಳನ್ನು ವೃದ್ಧಿ ಮಾಡಬಹುದು. ನಿರ್ಲಿಂಗರೀತಿಯಲ್ಲಿ ಇದನ್ನು ವೃದ್ಧಿಮಾಡಲಾಗುವುದಿಲ್ಲ.

ಅರಳಿಮರ

ವಿಶಿಷ್ಟತೆ

ಬದಲಾಯಿಸಿ
  • ಆಮ್ಲಜನಕದ ಆಗರ: ‘ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಮರಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸಿದರೆ, ಅರಳಿ ಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದು ಸಸ್ಯಗಳಲ್ಲೇ ಪ್ರಾಮುಖ್ಯವಾದ ಭೇಧ. ನಗರದ ವಾಯುಮಾಲಿನ್ಯ ನಿಯಂತ್ರಣದಲ್ಲಿ ಈ ಮರಗಳ ಕೊಡುಗೆ ಮಹತ್ವದ್ದು.(ಸಸ್ಯ ವೈದ್ಯ ವಿಜಯ್‌ ನಿಶಾಂತ್‌).[]
  • ಸರ್ವದೇವತಾತ್ಮಕವಾಗಿ ವೃಕ್ಷರಾಜನೆನಿಸಿಕೊಂಡಿರುವ ಈ ಮರವನ್ನು ದೇವಾಲಯಗಳಲ್ಲಿ ಬೆಳೆಸುತ್ತಾರೆ. ಸಾಲುಮರಗಳಾಗಿ ಬೆಳೆಸುವುದೂ ವಾಡಿಕೆ. ಮರ ಬಹು ಗಟ್ಟಿಯಾಗಿದ್ದು ಮಳೆಗಾಳಿಗೆ ಬೀಳುವುದಿಲ್ಲ. ಸೊಂಪಾದ ನೆರಳು ಕೊಡುತ್ತದೆ. ಸಾವಿರಾರು ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಹುಲ್ಲಿಗಿಂತ ಎರಡು ಮೂರು ಪಟ್ಟು ಪ್ರೋಟೀನು ಹೆಚ್ಚಾಗಿರುವ ಇದರ ಎಲೆಗಳು ದನಕರುಗಳಿಗೆ, ಆನೆಗಳಿಗೆ ಉತ್ತಮ ಮೇವು. ಮಯನ್ಮಾರ್‍ನಲ್ಲಿ ಹಕ್ಕಿಗಳು ತಿನ್ನುತ್ತವೆ.
  • ಇದರ ತೊಗಟೆಯಿಂದ ಟ್ಯಾನಿನ್ ತೆಗೆಯುತ್ತಾರೆ. ಬರ್ಮದಲ್ಲಿ ಇದರ ನಾರಿನಿಂದ ಕಾಗದ ತಯಾರಿಸುತ್ತಿದ್ದರಂತೆ. ಇದರಿಂದ ಹಾಲ್ನೊರೆ(ಲೇಟೆಕ್ಸ್) ದೊರೆಯುತ್ತದೆ. ಅಸ್ಸಾಂ, ಮಧ್ಯ ಪ್ರದೇಶ, ಬಂಗಾಲಗಳಲ್ಲಿ ಅರಗಿನ ಕೀಟಕ್ಕೆ ಆಶಯವೆನಿಸಿದೆ. ಅಸ್ಸಾಮಿನಲ್ಲಿ ಇದರ ಎಲೆಗಳನ್ನು ಒಂದು ಬಗೆಯ ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುತ್ತಾರೆ.
  • ಇದರ ಅರಗನ್ನು ಮರದ ರಂಧ್ರ ಮುಚ್ಚಲು, ಆಭರಣಮಾಡಲು ಬಳಸುತ್ತಾರೆ. ಪೆಟ್ಟಿಗೆ, ಬೆಂಕಿಪೊಟ್ಟಣ ತಯಾರಿಕೆಗೆ ಮರದ ಹಲಗೆ ಉಪಯೋಗವಾಗುತ್ತದೆ. ಚಿಗುರು ವಿರೇಚಕ. ತೊಗಟೆ ಬಾಯಿಹುಣ್ಣು, ಆಮಶಂಕೆ, ಮೇಹರೋಗಗಳಿಗೆ ಔಷಧ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಒಣ ಎಲೆಯ ನಾರಿನಿಂದ ದೇಹದ ಮೇಲೆ ಸುಂದರ ಚಿತ್ರಗಳನ್ನು ಬರೆಯುತ್ತಾರೆ.
  • ಬೆಳೆಯುವುದು ನಿಧಾನವಾದರೂ ಶಾಶ್ವತವಾಗಿದ್ದು ಅನೇಕ ಉಪಯೋಗಗಳಿಗೆ ಒದಗುತ್ತದಾದ ಕಾರಣ ಇದನ್ನು ಹೇರಳವಾಗಿ ಬೆಳೆಸಬಹುದು. ಇದೊಂದು ಹೆಮ್ಮರ. ಹಿಂದು ಧರ್ಮೀಯರು ಇದನ್ನು ಪವಿತ್ರವಾದ ಮರವೆಂದು ಪೂಜೆ ಮಾಡುವರು. ನೆರಳಿಗಾಗಿಯೂ ಬೆಳೆಸಬಹುದು. ಇದರ ಕಟ್ಟಿಗೆಯನ್ನು ಹೋಮ ಹವನಾದಿ ಧಾರ್ಮಿಕ ವ್ರತಾಚರಣೆಗಳಲ್ಲಿ ಉಪಯೋಗಿಸುತ್ತಾರೆ.
  • ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಬಳಸುವುದುಂಟು. ಅರಳಿಮರಗಳನ್ನು ತೋಟಗಳಲ್ಲೂ ದೇವಸ್ಥಾನಗಳ ಪರಿಸರದಲ್ಲೂ ಹೆದ್ದಾರಿಯ ಇಬ್ಬದಿಗಳಲ್ಲೂ ನೆರಳಿಗಾಗಿ ಬೆಳೆಸುತ್ತಾರೆ. ಕೆಲವು ಜಾತಿಯ ಅರಗಿನ ಹುಳುಗಳನ್ನು ಬೆಳೆಸುವುದಕ್ಕೂ ಇವುಗಳ ಉಪಯೋಗವಿದೆ. ಎಲೆಯನ್ನು ದನಕರು, ಆಡು, ಕುರಿಗಳಿಗೆ ಮೇವಾಗಿ ಬಳಸುತ್ತಾರೆ.
  • ಇವುಗಳ ಹಾಲಿನಲ್ಲಿರುವ ಜಿಗುಟಾದ ದ್ರವದಿಂದ ರಬ್ಬರನ್ನು ಮಾಡಬಹುದು. ಅರಳಿಮರವನ್ನು ಸೌದೆಯಾಗಿ ಉಪಯೋಗಿಸುತ್ತಾರೆ. ಕೆಲವು ಜಾತಿಯ ಮರಗಳ ಎಲೆ, ಬೇರು ಮತ್ತು ತೊಗಟೆಯ ಕಷಾಯವನ್ನು ಭೇದಿ, ವಾಂತಿ, ಹಲ್ಲುನೋವು, ದಮ್ಮು ಇತ್ಯಾದಿ ರೋಗಗಳಿಗೆ ಉಪಯೋಗಿಸುತ್ತಾರೆ.

ಉಲ್ಲೇಖ

ಬದಲಾಯಿಸಿ


"https://kn.wikipedia.org/w/index.php?title=ಅರಳಿಮರ&oldid=1162754" ಇಂದ ಪಡೆಯಲ್ಪಟ್ಟಿದೆ