ಅಮೆರಿಕದ ಸ್ವಾತಂತ್ರ್ಯ
ಅಮೆರಿಕದ ಸ್ವಾತಂತ್ರ್ಯಉತ್ತರ ಅಮೆರಿಕದ ಸಂಯುಕ್ತಸಂಸ್ಥಾನ ಸ್ವತಂತ್ರ್ಯ ರಾಷ್ಟ್ರವಾದದ್ದು ಪ್ರಪಂಚದ ಇತಿಹಾಸದಲ್ಲಿ ಒಂದು ಮುಖ್ಯ ಘಟನೆ. ಅಮೆರಿಕನ್ನರು ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದೆ ತಮ್ಮ ಸ್ವಾತಂತ್ರ್ಯವನ್ನು ಪಡೆಯಲು ಒಗ್ಗಟ್ಟಾಗಿ ಹೋರಾಡಿದುದು ಆದರ್ಶಪ್ರಾಯವಾಗಿದೆ. ಫ್ರಾನ್ಸ್ ದೇಶದ ಮಹಾಕ್ರಾಂತಿಗೆ ಇದು ಸ್ಪೂರ್ತಿ ನೀಡಿತು. (20)ನೆಯ ಶತಮಾನದಲ್ಲಿ ಅಮೆರಿಕ ಪ್ರಪಂಚದ ಆಗುಹೋಗುಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿ, ಪ್ರಜಾಪ್ರಭುತ್ವದ ಸಂರಕ್ಷಣೆ ಮತ್ತು ಭದ್ರತೆಗೆ ಸ್ಥಿರವಾದ ಬೆಂಬಲ ಕೊಡುತ್ತಿದೆ. ಅದೇ ಅದರ ಸ್ವಾತಂತ್ರ್ಯದ ಮುಖ್ಯ ಸಂದೇಶ. ಭಾರತದಂತೆಯೇ, ಅಮೆರಿಕಾ ಕೂಡ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಸಾಹತುವಾಗಿತ್ತು. ಯುರೋಪ್‌ನಲ್ಲಿ 'ಏಳು ವರ್ಷಗಳ ಯುದ್ಧ' ಮುಗಿದ ಮೇಲೆ ಉತ್ತರ ಅಮೆರಿಕಾದಲ್ಲಿ ಫ್ರೆಂಚ್ ಪ್ರಭಾವ ಕಡಿಮೆಯಾಗಿತ್ತು. ಅಮೆರಿಕಾದಲ್ಲಿ ನೆಲೆಯಾಗಿದ್ದ ಜನರಿಗೆ ಸ್ವ ಆಡಳಿತದ ಆಸೆ ಇದ್ದರೂ, ಬ್ರಿಟಿಷ್ ಸೈನ್ಯ, ನೌಕಾದಳ ಅಮೆರಿಕಾವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿತ್ತು. ಈ ಬ್ರಹತ್ ಸೈನ್ಯದ ನಿರ್ವಹಣೆಗಾಗಿ ಬ್ರಿಟಿಷ್ ಸರಕಾರ ಅಮೆರಿಕಾದ ಮೇಲೆ ಹೆಚ್ಚುವರಿ ತೆರಿಗೆಗಳನ್ನು ಹೇರಿತು. ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಅಮೆರಿಕಾವನ್ನು ಪ್ರತಿನಿಧಿಸಲು ಯಾವೊಬ್ಬ ಪ್ರತಿನಿಧಿಯೂ ಇರಲಿಲ್ಲವಾದ ಕಾರಣ, ಅಮೆರಿಕನ್ನರು ನೇರ ಕಾರ್ಯಾಚಾರಣೆಗಿಳಿದರು.
1773ರಲ್ಲಿ ಬೊಸ್ಟನ್ ಬಂದರಿನಲ್ಲಿ ಬಂದಿಳಿದ ಹಡಗುಗಳಿದ್ಧ 50 ರೆಡ್ ಇಂಡಿಯನ್ಹುಗುಂಪುವೊಂದು ವೇಷ ಧರಿಸಿಕೊಡು 340 ಚಹಾ ಪೆಟ್ಟಿಗೆಗಳುನು ಸಮುದ್ರಕ್ಕೆ ಎಸೆಯುವ ಮೂಲಕ, ಅಮೆರಿಕನ್ನರತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಈ ಘಟನೆ ಇತಿಹಾ ಸದ ಪುಟಗಳಲ್ಲಿ 'ಬೋಸ್ಟನ್ ಟೀ ಪಾರ್ಟಿ' ಎಂಬ ಹೆಸರಿನಿಂದ ಚಿರಪರಿಚಿತ. ಇದರಿಂದ ಉದ್ರಿಕ್ತಗೊಂಡ ಬ್ರಿಟಿಷ್ ಸರಕಾರ ಮಸಾಚ್ಯುಸೆಟ್ಸ್ಅನ್ನು ಸೈನಿಕ ಆಡಳಿತಕ್ಕೆ ಒಳಪಡಿಸಿತು. 1776 ಜುಲೈ04ರಲ್ಲಿ ಅಮೆರಿಕನ್ನರು ಜಾರ್ಜ್ ವಾಷಿಂಗ್‌ಟನ್ ರನ್ನು ಅಮೆರಿಕಾ ವಸಾಹತುಗಳ ಮಹಾದಂಡನಾಯಕರೆಂದು ಘೋಷಿಸಿದರು. ಸೋಲೇ ಕಾಣದ ಬ್ರಿಟಿಷ್ ಸೈನ್ಯಕ್ಕೆ ಅಮೆರಿಕನ್ನರು ಸಾಲು ಸಾಲು ಸೋಲಿನ ರುಚಿ ತೋರಿಸಿದರು. 1778ರಲ್ಲಿ ಅಮೆರಿಕಾಕ್ಕೆ ಫ್ರೆಂಚರ ಸಹಾಯಹಸ್ತ ದೊರಕಿ ಆನೆಬಲ ಬಂದತ್ತಾಗಿತ್ತು.
ಲೆಕ್ಸಿಂಗ್‌ಟನ್, ಸರಟೋಗಗಳಲ್ಲಿ ಸೋಲು ಅನುಭವಿಸಿದ ಬ್ರಿಟಿಷರಿಗೆ ಆಶಾಕಿರಣವಾಗಿ 1780ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಚಾರ್ಲ್ಸ್‌ಟೌನ್ ಪಟ್ಟಣವನ್ನು ವಶಪಡಿಸಿಕೊಂಡ. ಆದರೆ ಇದು ಅಲ್ಪಕಾಲದ ಯಶಸ್ಸು, 1781ರ ಅಕ್ಟೋಬರ್‌ನಲ್ಲಿ ಕಾರ್ನ್‌ವಾಲಿಸ್ ಯಾರ್ಕ್‌ಟೌನ್ ನಲ್ಲಿ ಅಮೆರಿಕನ್ನರಿಗೆ ಶರಣಾಗತನಾದ. ಯುದ್ಧ ಅಂತ್ಯವಾಗಿದ್ದು 1781ರಲ್ಲೇ ಆದರೂ, ಆರು ವರ್ಷಗಳ ಹಿಂದೆಯೇ ಅಂದರೆ 4 ಜುಲೈ 1776ರಲ್ಲಿಯೇ ಅಮೆರಿಕಾದ 13 ವಸಾಹತುಗಳ ಪ್ರತಿನಿಧಿಗಳು ಅಮೆರಿಕಾದ ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿ ಬ್ರಿಟನ್ ಜೊತೆಗಿನ ಎಲ್ಲ ರಾಜಕಿಯ ಸಂಬಂಧಗಳನ್ನು ಕೊನೆಗೊಳಿಸಿದರು. ವಾಷಿಂಗ್‌ಟನ್, ಜೆಫರ್‌ಸನ್ ಮುಂತಾದವರು ಅಮೆರಿಕಾ ಕ್ರಾಂತಿಯ ರೂವಾರಿಗಳು. ಜುಲೈ 4 ಅಮೆರಿಕಾ ಮಾತ್ರವಲ್ಲ ವಿಶ್ವಕ್ಕೆ ಸ್ಪೂರ್ತಿಯಾದ ದಿನ. ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಸೋಲಿಸುವ ಮೂಲಕ, ಅಮೆರಿಕಾದ ಕ್ರಾಂತಿ ಮುಂದೆ ಅನೇಕ ದೇಶಗಳ ಸ್ವಾತಂತ್ರ್ಯ ಸಂಗ್ರಾಮಗಳಿಗೆ ಮಾದರಿಯಾಯಿತು.
ವಸಾಹತುಗಳಲ್ಲಿ ಸಿದ್ಧತೆ
ಬದಲಾಯಿಸಿರಾಜಕೀಯ ಮತ್ತು ಮತಸಂಬಂಧವಾದ ಕಾರಣಗಳಿಗಾಗಿ ಯೂರೋಪಿನ ಅನೇಕ ಸಾಹಸೀರಾಷ್ಟ್ರಗಳು ಅಮೆರಿಕೆಗೆ ವಲಸೆ ಬಂದು ನೆಲೆಸಲುದ್ಯುಕ್ತವಾದುವು. (15)ನೆಯ ಶತಮಾನದಲ್ಲಿ ಸ್ಪ್ಯಾನಿಷ್, ಇಂಗ್ಲಿಷ್ ಮತ್ತು ಫ್ರೆಂಚ್ ಜನರು ಅಮೆರಿಕದಲ್ಲಿ ವಸಾಹತುಗಳನ್ನು (ಕಾಲೋನಿ) ಸ್ಥಾಪಿಸುತ್ತ ಬಂದರು. ಡಚ್ಚರು ಮತ್ತು ಸ್ವೀಡಿಷ್ ಜನರೂ ಅಲ್ಲಿನ ಕೆಲವು ಭಾಗಗಳಲ್ಲಿ ನೆಲೆಸಿದರು. ಸ್ಪೇನಿನ ಅಧಿಕಾರ ಪಶ್ಚಿಮದಲ್ಲಿ ಕ್ಯಾಲಿಫೋರ್ನಿಯದವರೆಗೂ ವ್ಯಾಪಿಸಿತು. ಫ್ರೆಂಚರು ಕೆನಡದಲ್ಲಿ ನೆಲೆಸಿದರು. ಬ್ರಟಿಷರು ಅಟ್ಲಾಂಟಿಕ್ ಸಮುದ್ರತೀರದ ವರ್ಜಿನಿಯದಲ್ಲಿ ಜೇಮ್ಸ್‍ಟೌನ್ ಎಂಬ ಮೊದಲ ಪಟ್ಟಣವನ್ನು 1607ರಲ್ಲಿ ಸ್ಥಾಪಿಸಿದರು. ಇಂಗ್ಲೆಂಡಿನಿಂದ ಧಾರ್ಮಿಕ ಕಾರಣಕ್ಕಾಗಿ ಅಮೆರಿಕಕ್ಕೆ ಹೊರಟ ಯಾತ್ರಾರ್ಥಿಗಳಾದ ಪಾದ್ರಿಗಳು (ಪಿಲ್‍ಗ್ರಿಮ್ ಫಾದರ್ಸ್) 1620ರಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡು ಮತಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದರು. ಇಂಗ್ಲೀಷರ ವಸಾಹತುಗಳಿಗೆ ಕೆನಡದ ಫ್ರೆಂಚರಿಂದ ಅಪಾಯವಿತ್ತು. ಸಪ್ತವಾರ್ಷಿಕ ಯುದ್ಧದ (1756-1763) ಅನಂತರ ಕೆನಡ ಇಂಗ್ಲಿಷರ ವಶವಾಯಿತು.
ಪರಿಣಾಮ
ಬದಲಾಯಿಸಿಬ್ರಿಟಿಷರವಾದ 13 ವಸಾಹೈತುಗಳು 1763ರ ವರೆಗೆ ಹೇಗೋ ತಾಯ್ನಾಡು ವಿಧಿಸಿದ್ದ ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬಂದುವಾದರೂ ಯಾನಕ್ಕೆ ಸಂಬಂಧಿಸಿದ ನ್ಯಾವಿಗೇಷನ್ ಆಕ್ಟ್, ಕಚ್ಚಾಪದಾರ್ಥಗಳ ರಫ್ತು ಮತ್ತು ಕೈಗಾರಿಕೆಗಳ ಪೈಪೋಟಿಗಳ ಬಗ್ಗೆ ಇದ್ದ ಕಾನೂನುಗಳು-ಈ ಮುಂತಾದ ವಿಷಯಗಳನ್ನು ಪ್ರತಿಭಟಿಸುವ ಪ್ರಯತ್ನಗಳು ಕಾಣತೊಡಗಿದವು. 1770ರಲ್ಲಿ ಫ್ರೆಂಚರ ಭಯ ತಪ್ಪಿದ ಮೇಲಂತೂ ಈ ಚಳವಳಿಗಳು ಉಗ್ರರೂಪ ತಾಳಿದವು. ಈ ಮಧ್ಯೆ ತನ್ನ ರಕ್ಷಣಾವೆಚ್ಚವನ್ನು ಸರಿದೂಗಿಸಲು ಬ್ರಿಟನ್ ಜಾರಿಗೆ ತಂದ ಸಕ್ಕರೆ ಕಾನೂನು (1764) ಹೆಚ್ಚಿನ ತೆರಿಗೆ ವಿದಿಸಿದ್ದರಿಂದ ಇದ್ದ ಅಸಮಾಧಾನ ಇನ್ನೂ ಬೆಳೆಯಿತು.[೧]
ಸ್ಟಾಂಪ್ ಆಕ್ಟ್
ಬದಲಾಯಿಸಿಇದೇ ರೀತಿಯಲ್ಲಿ ಸ್ಟಾಂಪ್ ಆಕ್ಟ್ (1765) ಜಾರಿಗೆ ಬಂದು ಕಾನೂನು ಪತ್ರಗಳ ಮೇಲೆ ಹೆಚ್ಚಿನ ತೆರಿಗೆ ಬಿತ್ತು. ಈ ತೆರಿಗೆಗೆ ಎಲ್ಲೆಲ್ಲಿಯೂ ಪ್ರತಿಭಟನೆಗಳು ನಡೆದು, ಎಲ್ಲ ವರ್ಗದವರೂ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದರು. ತೆರಿಗೆ ಹೆಚ್ಚು ಹೊರೆ ಆಗದಿದ್ದರೂ ಅದರ ಮೂಲತತ್ತ್ವವನ್ನು ಅಮೆರಿಕನ್ನರು ಬಹಿರಂಗವಾಗಿ ವಿರೋಧಿಸಿದರು. ನ್ಯೂಯಾರ್ಕಿನಲ್ಲಿ ಎಲ್ಲ ವಸಾಹತುಗಳ ಪ್ರತಿನಿಧಿಗಳು ಸಭೆಸೇರಿ, ಕಾಂಗ್ರೆಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸ್ಟಾಂಪ್ ಆಕ್ಟಿಗೆ ವಿರೋಧವನ್ನು ರೂಢೀಕರಿಸಿ ಅಮೆರಿಕದ ವಿಚಾರಗಳಲ್ಲಿ ಇಂಗ್ಲಿಷ್ ಪಾರ್ಲಿಮೆಂಟ್ ಕೈಹಾಕುವುದನ್ನು ಖಂಡಿಸಿದರು.ಸ್ಟಾಂಪ್ ಆಕ್ಟ್ ಪ್ರಾತಿನಿಧ್ಯದ ಮೂಲಪ್ರಶ್ನೆ ತಲೆ ಎತ್ತಲು ಅವಕಾಶ ಮಾಡಿಕೊಟ್ಟಿತು. ಅಮೆರಿಕನ್ನರು ತಾವು ನೇರವಾಗಿ ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್ ಸಭೆಗೆ ಸದಸ್ಯರನ್ನು ಚುನಾಯಿಸದೆ ಇರುವುದರಿಂದ ತಮಗೆ ಪ್ರಾತಿನಿಧ್ಯವಿಲ್ಲವೆಂದು ವಾದಿಸಿದರು. ತಮ್ಮ ಚುನಾಯಿತ ಪ್ರತಿನಿಧಿಗಳಿಲ್ಲದ ಯಾವ ಸಭೆಗೂ ತಮ್ಮ ಮೇಲೆ ತೆರಿಗೆ ಹೊರಿಸುವ ಅಧಿಕಾರವಿಲ್ಲವೆಂದು ವಾದಿಸಿದರು. ಬ್ರಿಟಿಷ್ ವರ್ತಕರು, ಅಮೆರಿಕ ತಮ್ಮ ವ್ಯಾಪಾರವನ್ನು ಬಹಿಷ್ಕರಿಸಬಹುದೆಂದು ಯೋಚಿಸಿ ಸ್ಟಾಂಪ್ ಆಕ್ಟ್‍ನ್ನು ರದ್ದು ಪಡಿಸಲು ಒತ್ತಾಯ ಪಡಿಸಿದರಾಗಿ ಸ್ಟಾಂಪ್ ಆಕ್ಟ್‍ನ್ನು ರದ್ದು ಪಡಿಸಲಾಯಿತು. ಅಮೆರಿಕದಲ್ಲಿ ಎಲ್ಲೆಲ್ಲಿಯೂ ಸಂತೋಷ ಸಂಭ್ರಮ ಕಾಣಿಸಿತು. ಆದರೆ 1767ರಲ್ಲಿ ಲಾರ್ಡ್ ಟೌನ್‍ಶೆಂಡ್‍ನ ಸಲಹೆಯಂತೆ ಬ್ರಿಟಿಷ್ ಪಾರ್ಲಿಮೆಂಟ್ ಅಮೆರಿಕಕ್ಕೆ ರಫ್ತಾಗುವ ಟೀಸೊಪ್ಪು, ಗಾಜು ಮತ್ತು ಕಾಗದದ ಮೇಲೆ ತೆರಿಗೆ ವಿಧಿಸಿತು. ಮತ್ತೊಮ್ಮೆ ಎಲ್ಲೆಲ್ಲಿಯೂ ಪ್ರತಿಭಟನೆಗಳು ತಲೆದೋರಿದವು. ಕೊನೆಗೆ ಬ್ರಿಟಿಷ್ ಸರ್ಕಾರ ಗಾಜು, ಕಾಗದ ಮುಂತಾದ ವಸ್ತುಗಳ ಮೇಲಿನ ತೆರಿಗೆಯನ್ನು ರದ್ದು ಮಾಡಿ, ಟೀ ಮೇಲಿನ ಸುಂಕವನ್ನು ಮಾತ್ರ ಉಳಿಸಿಕೊಂಡಿತು. ಇದಕ್ಕೆ ಕಾರಣ, ವಸಾಹುತಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಇಂಗ್ಲೆಂಡ್ ಸರ್ಕಾರಕ್ಕೆ ಇದೆ ಎಂಬ ತತ್ತ್ವವನ್ನು ಸಮರ್ಥಿಸುವುದಕ್ಕಾಗಿ, ಈ ಹಕ್ಕು ಇಲ್ಲವೇ ಇಲ್ಲ ಎಂದು ವಾದಿಸುತ್ತಿದ್ದ ಅಮೆರಿಕನ್ನರಿಗೆ ಇದರಿಂದ ಕೊಂಚವೂ ಸಮಾಧಾನವಾಗದೆ ಅವರ ಪ್ರತಿಭಟನೆ ಹೆಚ್ಚಿತು.
ಬ್ರಿಟಿಷ್ ದಬ್ಬಾಳಿಕೆ
ಬದಲಾಯಿಸಿಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯನ್ನು ಕಂಡು ಅಮೆರಿಕನ್ನರು ರೋಸಿಹೋದರು. ಇಂಗ್ಲೆಂಡಿನಲ್ಲಿ ಪ್ರಜಾಪ್ರತಿನಿಧಿಗಳ ಪ್ರಭುತ್ವವನ್ನು ಆಚರಣೆಯಲ್ಲಿಟ್ಟುಕೊಂಡು ಮೇಲೆ ಮಾತ್ರ ನಿರಂಕುಶಾಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ ತಮ್ಮವರೇ ಆದ ಅಮೆರಿಕನ್ನರ ಮನೋಧರ್ಮವನ್ನರಿಯದೆ, ಅವರಿಗೆ ಬುದ್ಧಿ ಕಲಿಸಬೇಕೆಂದು ಬಾಸ್ಟನ್ ರೇವಿಗೆ ಹಡಗುಗಳು ಬರುವುದನ್ನು ನಿಲ್ಲಿಸಿದರು. ಅಮೆರಿಕನ್ನರ ಪ್ರತಿಭಟನೆ ಉಗ್ರರೂಪವನ್ನು ತಾಳಿತು. ಇಂಗ್ಲಿಷ್ ವರ್ತಕರು ಮಾರಾಟಕ್ಕಾಗಿ 10,000 ಪೌಂಡು ಬೆಲೆಬಾಳುವ ಟೀ ಸೊಪ್ಪನ್ನು ಬಾಸ್ಟನ್ ರೇವಿಗೆ ತಂದಿದ್ದರು. ರೆಡ್ ಇಂಡಿಯನ್ನರ ವೇಷಧರಿಸಿದ್ದ ಕೆಲವು ಅಮೆರಿಕನ್ನರು ಆ ಹಡಗಿಗೆ ನುಗ್ಗಿ ಆ ಟೀಸೊಪ್ಪನ್ನೆಲ್ಲ ಸಮುದ್ರಕ್ಕೆ ಸುರಿದರು. ಅಮೆರಿಕನ್ನರಲ್ಲಿ ಕೆಲವರು ಈ ದೊಂಬಿಯಲ್ಲಿ ಮಡಿದರು. ವಸಾಹತುಗಳ ಕೋಪ ಮತ್ತಷ್ಟು ಹೆಚ್ಚಿತು. "ಬ್ರಿಟಿಷರ ದಬ್ಬಾಳಿಕೆಯನ್ನು ಮೂಲೋತ್ಪಾಟನ ಮಾಡದ ಹೊರತು ತಮ್ಮ ಸ್ವಾತಂತ್ರ್ಯ ಎಂದಿಗೂ ಉಳಿಯುವುದಿಲ್ಲ" ಎಂಬ ಕೂಗು ಅಮೆರಿಕೆಯಲ್ಲೆಲ್ಲ ಹರಡಿತು. ಶಾಂತಿಯಿಂದ ಈ ಪ್ರಶ್ನೆಯನ್ನು ಇತ್ಯರ್ಥಮಾಡಲು ಸಾಧ್ಯವಾಗಲಿಲ್ಲ.
ಅಮೆರಿಕನ್ನರ ಸಭೆ
ಬದಲಾಯಿಸಿ1774ರಲ್ಲಿ ಫಿಲಿಡೆಲ್ಫಿಯದಲ್ಲಿ ಅಮೆರಿಕನ್ನರ ಒಂದು ದೊಡ್ಡ ಸಭೆ ಸೇರಿತು. ಎಲ್ಲ ಭಾಗಗಳಿಂದ 51 ಜನ ಪ್ರತಿನಿಧಿಗಳು ಬಂದು ನೆರೆದರು. ಜಾರ್ಜ್ ವಾಷಿಂಗ್‍ಟನ್ ತನ್ನ ಪ್ರಾಂತ್ಯದ ಇತರ ಪ್ರತಿನಿಧಿಗಳ ಜೊತೆಯಲ್ಲಿ ಈ ಸಭೆಗೆ ಬಂದ. ಇಲ್ಲಿಗೆ ಹೊರಟಾಗ ವರ್ಜಿನಿಯದ ಜನರು ಅವರಿಗೆ ಈ ಸಲಹೆಯನ್ನು ಕೊಟ್ಟರು: "ಇಂಗ್ಲೆಂಡಿನ ದೊರೆ ನಮ್ಮ ದೇಶದಲ್ಲಿ ಸೈನ್ಯಾಧಿಕಾರಿಗಳಿಗೆ ಸರ್ವಾಧಿಕಾರವನ್ನು ಕೊಟ್ಟಿದ್ದಾನೆ. ದಬ್ಬಾಲಿಕೆಯಿಂದ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸಬೇಕೆಂದು ಆ ದೊರೆ ಪ್ರಯತ್ನಿಸುತ್ತಿರುವಂತೆ ಕಾಣುವುದು. ಆ ಸರ್ಕಾರವನ್ನು ಹೊಗಳುವುದಕ್ಕಾಗಿ ನಾವು ಇಲ್ಲಿಗೆ ಬಂದವರಲ್ಲ. ರಾಜರು ಸಮಾಜದ ಸೇವೆಗಾಗಿ ಇರತಕ್ಕವರು. ಇಂಗ್ಲೆಂಡಿನ ಅಧಿಕಾರಿಗಳು ನಮ್ಮ ಅಧಿನಿವೇಶನಗಳಲ್ಲಿರುವುದು ನಿಶ್ಚಯ; ಆದರೆ ನಮ್ಮ ಸುಖದುಃಖಗಳನ್ನು ವಿಚಾರಿಸುವವರು ಯಾರೂ ಇಲ್ಲ. ಆದ್ದರಿಂದ ನೀವು ದುಡುಕದೆ ಬುದ್ಧಿವಂತಿಕೆಯಿಂದ ನಿಮ್ಮ ಸಲಹೆಗಳನ್ನು ಕೊಡಿ. ರಾಜಕಾರ್ಯಗಳಿಗೆ ಸತ್ಯವೇ ಮೂಲ ಮಂತ್ರವೆಂಬುದನ್ನು ಮರೆಯಬೇಡಿ. ನಿಮ್ಮ ಕರ್ತವ್ಯವನ್ನು ನೀವು ಮಾಡಿದರೆ ಮಾನವ ಗುಣ ನಿಮ್ಮನ್ನು ಕೊಂಡಾಡುವುದು. ಈ ಕೆಲಸದಲ್ಲಿ ನೀವು ಸೋತರೂ ಚಿಂತೆಯಿಲ್ಲ; ಸ್ವಾರ್ಥತೆಯಿಂದ ಒಬ್ಬ ಮತ್ತೊಬ್ಬನ ಹಕ್ಕನ್ನು ಅಪಹರಿಸುವುದಕ್ಕೆ ಅವಕಾಶವನ್ನು ಕೊಡದಿರಿ. ಇಂಗ್ಲೆಂಡನ್ನು ದೂರ ಮಾಡುವುದು ನಮ್ಮ ಉದ್ದೇಶವಲ್ಲ. ನಮಗೆ ಬೇಕಾದುದು ಶಾಂತಿ. ಇದು ನ್ಯಾಯರೀತಿಯಲ್ಲಿ ಸಿಕ್ಕುವುದು ಮುಖ್ಯ". ಮಹಾಸಭೆಯಲ್ಲಿ ಇಂಗ್ಲಿಷರ ದಬ್ಬಾಳಿಕೆಯ ವಿಷಯ ಅಮೂಲಾಗ್ರವಾಗಿ ಚರ್ಚಿಸಲ್ಪಟ್ಟು ಅಮೆರಿಕನ್ನರು ತಮ್ಮ ಪರಾಧೀನತೆಯನ್ನು ಕೊನೆಗಾಣಿಸಬೇಕೆಂಬ ತೀರ್ಮಾನ ಸರ್ವಾನು ಮತದಿಂದ ಅಂಗೀಕೃತವಾಯಿತು. ಜಾರ್ಜ್ ವಾಷಿಂಗ್‍ಟನ್ ರಕ್ಷಣಾ ಸೈನ್ಯದ ಸರ್ವಾಧಿಕಾರ ವಹಿಸಿಕೊಂಡ. ಆತ ಯುದ್ಧದಲ್ಲಿ, ಶಾಂತಿಯಲ್ಲಿ ಮತ್ತು ಜನರ ಹೃದಯದಲ್ಲಿಯೂ ಮೊಟ್ಟಮೊದಲನೆಯವನಾದ.
ಸ್ವಾತಂತ್ರ್ಯ ಘೋಷಣೆ
ಬದಲಾಯಿಸಿಬ್ರಿಟಿಷ್ ಸರ್ಕಾರ ಅಮೆರಿಕನ್ನರ ಮೇಲೆ ಬಲಪ್ರಯೋಗ ಮಾಡುವ ಶಾಸನಗಳನ್ನು ವಿಧಿಸಲು ಪ್ರಯತ್ನ ಮಾಡಿದ್ದರಿಂದ ಅದು ಯಾವ ರೀತಿಯ ರಾಜಿಮನೋಭಾವವನ್ನೂ ಹೊಂದಿಲ್ಲವೆಂಬುದು ವ್ಯಕ್ತವಾಯಿತು. ಅಮೆರಿಕನ್ನರಲ್ಲಿ ಬಹುಜನ ಅತಿವಿರೋಧವನ್ನು ತೋರಿಸದೆ ಯಾವುದಾದರೂ ನ್ಯಾಯವಾದ ರೀತಿಯಲ್ಲಿ ಒಪ್ಪಂದಕ್ಕೆ ಬರಬೇಕೆಂದು ಆಶಿಸಿದರು. ಆದರೆ ಮೂರನೆಯ ಜಾರ್ಜ್ ಯಾವ ರಿಯಾಯಿತಿಯನ್ನೂ ತೋರಿಸುವುದಕ್ಕೆ ಸಿದ್ಧನಾಗಿರಲಿಲ್ಲ. ಅದರ ಬದಲು ಜನರಲ್ ಥಾಮಸ್ ಗೇಜ್ ಎಂಬುವವನನ್ನು ಮುಖ್ಯ ಸೇನಾಧಿಪತಿಯಾಗಿ ನೇಮಿಸಿದ್ದು ಈ ಸಮಸ್ಯೆ ಯುದ್ಧದಿಂದಲೇ ಇತ್ಯರ್ಥವಾಗಬೇಕೆಂಬುದನ್ನು ಬಹಿರಂಗಪಡಿಸಿದಂತಾಯಿತು. ಲೆಕ್ಸಿಂಗ್‍ಟನ್ ಎಂಬ ಸ್ಥಳದಲ್ಲಿ ಬ್ರಿಟಿಷ್ ಸೈನಿಕರು ಹಾರಿಸಿದ ಮೊದಲ ಗುಂಡು ಅಮೆರಿಕದ ಸ್ವಾತಂತ್ರ್ಯಯುದ್ಧಕ್ಕೆ ನಾಂದಿಯಾಯಿತು. ಈ ಘಟನೆ ವಿದ್ಯುದಾಘಾತದಂತೆ ಎಲ್ಲೆಲ್ಲಿಯೂ ಹರಡಿತು. (1776)ರಲ್ಲಿ ಥಾಮಸ್ ಜೆಫರ್ಸನ್ ತಯಾರಿಸಿದ ಸ್ವಾತಂತ್ರ್ಯಘೋಷಣೆಯನ್ನು ಅಮೆರಿಕದ ಕಾಂಗ್ರೆಸ್ ಅಂಗೀಕರಿಸಿತು. ಬೆಂಜಮಿನ್ ಫ್ರಾಂಕ್ಲಿನ್, ಡಿಕಿನ್ಸನ್ ಎಂಬ ಇತರ ನಾಯಕರೂ ಒಟ್ಟು ಗೂಡಿ ಮುಂದಿನ ಕ್ರಮವನ್ನು ನಿಷ್ಕರ್ಷೆಮಾಡಿದರು. (1776) ಜಿಲೈ (4) ಪ್ರಪಂಚದ ಇತಿಹಾಸದಲ್ಲಿ ಒಂದು ಮುಖ್ಯ ದಿನ. ಅಂದು ಒಂದು ಹೊಸ ಜನಾಂಗ ಉದ್ಭವಿಸಿ, ಮಾನವನ ಸ್ವಾತಂತ್ರ್ಯದ ತತ್ತ್ವಕ್ಕೆ ಪ್ರೇರಕಶಕ್ತಿಯನ್ನು ಕೊಟ್ಟಿತು. ಈ ಸ್ವಾತಂತ್ರ್ಯಘೋಷಣೆ ವ್ಯಕ್ತಿಸ್ವಾತಂತ್ರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವುದು ಇದರ ಶ್ರೇಷ್ಠತೆಯನ್ನು ಸೂಚಿಸುತ್ತದೆ. "ನಾವು ಈ ಕೆಲವು ಸತ್ಯಗಳನ್ನು ಸ್ವತಸ್ಸಿದ್ಧವೆಂದು ತಿಳಿದಿದ್ದೇವೆ. ಎಲ್ಲ ಮನುಷ್ಯರೂ ಜನ್ಮತಃ ಸಮಾನರು. ಇತರರಿಗೆ ಅಧೀನವಾಗಿರದಂತೆ ಪ್ರತಿಯೊಬ್ಬನಿಗೂ ಕೆಲವು ಹಕ್ಕುಗಳನ್ನು ಪರಮಾತ್ಮ ಮಾನ್ಯವಾಗಿ ಕೊಟ್ಟಿರುವನು. ಇವುಗಳಲ್ಲಿ ಬದುಕು, ಸ್ವಾತಂತ್ರ್ಯ ಮತ್ತು ನೆಮ್ಮದಿಯ ಗುರಿ, ಮುಖ್ಯವಾದುವು. ಈ ಹಕ್ಕುಗಳನ್ನು ಸಾಧಿಸಲು ಸರ್ಕಾರಗಳನ್ನು ನಿರ್ಮಿಸಲಾಗಿದೆ. ಈ ಸರ್ಕಾರಗಳು ಪ್ರಜೆಗಳ ಬೆಂಬಲದಿಂದ ಆಡಳಿತವನ್ನು ನಡೆಸುತ್ತವೆ. ಆಡಳಿತ ಈ ಆಜನಸಿದ್ಧಹಕ್ಕುಗಳನ್ನು ನಾಶಮಾಡಲು ಯತ್ನಿಸಿದರೆ, ಪ್ರಜೆಗಳು ಹೊಸ ಆಡಳಿತವನ್ನು ನಿರ್ಮಾಣಮಾಡಿ ತಮ್ಮ ಭದ್ರತೆಯನ್ನೂ ಸುಖವನ್ನೂ ಕಾಪಾಡಿಕೊಳ್ಳಬಹುದು"-ಇದೇ ಆ ಘೋಷಣೆಯ ಸಾರಾಂಶ. ಇದರಿಂದ "ಆಡಳಿತ ಇರುವುದು ಜನರಿಗೋಸ್ಕರ, ಜನರು ಇರುವುದು ಆಡಳಿತಕ್ಕೋಸ್ಕರ ಅಲ್ಲ" ಎಂಬ ಸಿದ್ಧಾಂತ ಜನಾದರಣೀಯವಾಯಿತು. ಈ ಘೋಷಣೆ ಜನರಲ್ಲಿ ಒಂದು ಹೊಸ ಉತ್ಸಾಹವನ್ನುಂಟುಮಾಡಿ, ತಮ್ಮ ವ್ಯಕ್ತಿಸ್ವಾತಂತ್ರ್ಯಕ್ಕೂ ಸ್ವರಾಜ್ಯಕ್ಕೂ ಸಮಾಜದಲ್ಲಿ ಗೌರವಸ್ಥಾನಕ್ಕೂ ಹೋರಾಟ ನಡೆಸಲು ಸ್ಫೂರ್ತಿಯನ್ನು ಕೊಟ್ಟಿತು. ಮೂರನೆಯ ಜಾರ್ಜ್ ಮಾಡಿದ ಅನ್ಯಾಯಗಳನ್ನು ವಿರೋಧಿಸಿ, ಜನಸಾಮಾನ್ಯರಿಗೆ ಈ ಹೋರಾಟ ವೈಯಕ್ತಿಕವೆಂಬುದನ್ನು ಶ್ರುತಪಡಿಸಿ, ಅವರ ಮನಸ್ಸನ್ನು ಸೆಳೆಯಿತು.
ಸ್ವಾತಂತ್ರ್ಯ ಯುದ್ಧ
ಬದಲಾಯಿಸಿಸ್ವಾತಂತ್ರ್ಯ ಯುದ್ಧ (1777-83): ಮತ್ತೊಬ್ಬರ ಅಧಿಕಾರದ ಸುಳಿಗೆ ಸಿಕ್ಕಿ ನರಳುತ್ತಿರುವ ಜನರು ಅಂಥ ಪರಾಧೀನತೆಯಿಂದ ತಪ್ಪಿಸಿಕೊಂಡು, ಸ್ವತಂತ್ರ ರಾಜ್ಯವನ್ನು ಹೂಡುವುದು ಸುಲಭವಲ್ಲ. ಇವುಗಳಿಗಾಗಿ ಅನೇಕ ಕಷ್ಟಗಳನ್ನು ಸಹಿಸಬೇಕಾಗುವುದು. ಸಾವಿರಾರು ಜನರು ಸಾಯಲು ಸಿದ್ಧರಾಗಿರಬೇಕು. ಯಾವ ಜನರಲ್ಲಿ ದೇಶಕ್ಕೋಸ್ಕರ ಕಷ್ಟಪಡುವ ಸಹನೆಯೂ ಸಾಮಥ್ರ್ಯವೂ ಇರುವವೋ ಅಂಥವರೇ ಸ್ವತಂತ್ರರಾಜ್ಯವನ್ನು ಅನುಭವಿಸುವ ಯೋಗ್ಯತೆ ಪಡೆಯುವರು. ಇದಕ್ಕೆ ಅಮೆರಿಕದ ಜನರೇ ನಿದರ್ಶನ. ಎಂಟು ವರ್ಷಗಳವರೆಗೆ ಯುದ್ಧಮಾಡಿ ನ್ಯೂಯಾರ್ಕ್, ಬ್ರಾಂಡಿವೈನ್, ಜರ್ಮನ್‍ಟೌನ್ ಮೊದಲಾದ ಸ್ಥಳಗಳಲ್ಲಿ ಎಷ್ಟುಸಲ ಪರಾಜಿತರಾದರೂ ಧೈರ್ಯಗೆಡದೆ, ಶತ್ರುಗಳನ್ನು ಟ್ರೆಂಟಿನ್, ಪ್ರಿನ್ಸ್‍ಟೌನ್, ಸಾರಟೋಗ, ಯಾರ್ಕ್‍ಟೌನ್ ಮುಂತಾದ ಸ್ಥಳಗಳಲ್ಲಿ ಸೋಲಿಸಿ ಜಯಸ್ತಂಬವನ್ನು ನೆಟ್ಟರು. ದೇಶಾಭಿಮಾನದಿಂದಲೂ ಸ್ವಾತಂತ್ರ್ಯಾಭಿಮಾನದಿಂದಲೂ ಯುದ್ಧಮಾಡಿದ ವಸಾಹತುವಾಸಿಗಳ ಮುಂದೆ (30,000) ಇಂಗ್ಲಿಷ್ ಸೈನಿಕರು ನಿಲ್ಲಲಾರದೆ ಹೋದರು. "ಅಮೆರಿಕ ಅಧಿನಿವೇಶಿಗಳನ್ನು ಸೋಲಿಸುವುದು ಅಸಾಧ್ಯ" ಎಂಬುದಾಗಿ ಬ್ರಿಟಿಷರ ಪ್ರಧಾನಮಂತ್ರಿ ಪಿಟ್ಟ್ ಪಾರ್ಲಿಮೆಂಟಿನಲ್ಲಿ ಹೇಳಿದ ಮಾತು ನಿಜವಾಯಿತು. ಅವರ ಸೇನಾನಾಯಕನಾದ ಜಾರ್ಜ್ ವಾಷಿಂಗ್‍ಟನ್‍ನ ಪ್ರತಿಜ್ಞೆ ನೆರವೇರಿತು. ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಅಧಿನಿವೇಶಿಗಳಿಗೆ ಇತರ ಪಾಶ್ಚಾತ್ಯ ಜನರು-ಪೋಲೆಂಡಿನ ಥಾಡ್ಸೂಸ್ ಕಾಸಿಸ್ಕಿ ಮತ್ತು ಪಲಾಸ್ಕಿಯವರೂ ಫ್ರಾನ್ಸಿನ ಲಾಫೇಟರವರೂ ಪ್ರಷ್ಯದೇಶದ ವಾನ್ ಸ್ಟುಬೆನ್‍ರವರೂ-ಸಹಾಯಮಾಡಿ ಕೀರ್ತಿಯನ್ನು ಸಂಪಾದಿಸಿಕೊಂಡರು. ಇವರಲ್ಲಿ ಫ್ರೆಂಚರು ಮಾಡಿದ ಸಹಾಯ ಸ್ತೋತ್ರಾರ್ಹ. ಇಂಗ್ಲಿಷ್ ಸೇನಾಪತಿಯಾದ ಕಾರನ್‍ವಾಲಿಸ್ (1781)ರಲ್ಲಿ ಯಾರ್ಕ್‍ಟೌನಿನಲ್ಲಿ ಶರಣಾಗತನಾದ. ಕೊನೆಗೆ (1883)ರಲ್ಲಿ ಪ್ಯಾರಿಸ್ ಕರಾರಿನ ಪ್ರಕಾರ ಅಮೆರಿಕ ಸಂಯುಕ್ತಸಂಸ್ಥಾನಗಳು ಸ್ವತಂತ್ರ್ಯರಾಜ್ಯಗಳೆಂದು ಅಂಗೀಕೃತವಾದುವು. ಈ ಯುದ್ದದಲ್ಲಿ ಭಾಗವಹಿಸಿದ್ದ ಫ್ರೆಂಚರು ತಮ್ಮ ದೇಶಕ್ಕೆ ಹಿಂತಿರುಗಿ, ಅಮೆರಿಕನ್ನರ ದೇಶಾಭಿಮಾನವನ್ನೂ ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟಗಳನ್ನೂ ತ್ಯಾಗಗಳನ್ನೂ ಸ್ತೋತ್ರಮಾಡಿ, ಸ್ವಾತಂತ್ರ್ಯದ ಕಹಳೆಯನ್ನು ಊದಿ, ಸ್ವಾತಂತ್ರ್ಯದ ಗಾನವನ್ನು ಎಲ್ಲೆಲ್ಲಿಯೂ ಹಾಡಿ, ತಮ್ಮ ಮಹಾಕ್ರಾಂತಿಗೆ ನೆಲಗಟ್ಟನ್ನು ಸಿದ್ಧ ಪಡಿಸಿದರು.
ಹೊಸ ರಾಜ್ಯಾಂಗ
ಬದಲಾಯಿಸಿಸ್ವಾತಂತ್ರ್ಯವನ್ನು ಪಡೆದಮೇಲೆ ಅಮೆರಿಕನ್ನರು ನಿರೂಪಿಸಿದ ರಾಜ್ಯಾಂಗ ಅವರ ರಾಜಕೀಯ, ಸಾಮಾಜಿಕ ಸ್ಥಿತಿಗಳಿಗೆ ಅನುಗುಣವಾಗಿ-'ಜನಗಳಿಂದಲೇ ಸ್ವರಾಜ್ಯ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿತು. ಮುಖ್ಯವಾಗಿ ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ ಇರಬಹುದಾದ ಕಾನೂನಿನ ಭಿನ್ನತೆಗಳನ್ನು ರದ್ದು ಮಾಡುವುದೇ ಅದರ ಮುಖ್ಯಾಂಶ. `ಮಾನವನ ಹಕ್ಕುಗಳು ಎಂಬ ಭಾವಾತ್ಮಕದಾಖಲೆಯನ್ನು ಬಹಿರಂಗಪಡಿಸಲಾಯಿತು. ಇದರಿಂದ ಸ್ಪೇನ್ ಮತ್ತು ಯೂರೋಪಿನ ಇತರ ರಾಷ್ಟ್ರಗಳು ಅಮೆರಿಕದ ತಮ್ಮ ವಸಾಹತುಗಳಿಗೆ ಅಪ್ರೇರಿತವಾಗಿ ಸ್ವಾತಂತ್ರ್ಯವನ್ನು ಕೊಟ್ಟವು. ಹೊಸರಾಷ್ಟ್ರಕ್ಕೆ ರಾಜ್ಯಾಂಗವನ್ನು ತಯಾರಿಸುವುದಕ್ಕೆ ವಾಷಿಂಗ್‍ಟನ್, ಜೇಮ್ಸ್ ಮ್ಯಾಡಿಸನ್, ಜೆಫರ್ಸನ್ ಮುಂತಾದ ದೇಶಾಭಿಮಾನಿಗಳು (1787)ರಲ್ಲಿ ಫಿಲಿಡೆಲ್ಫಿಯದಲ್ಲಿ ಸಮಾವೇಶವಾಗಿ ಅದುವರೆಗೆ ಮತ್ತೆಲ್ಲೂ ಕಾಣದ ಆಡಳಿತ ಪದ್ಧತಿಯನ್ನು ರಚಿಸಿದರು. ಸಂಯುಕ್ತಸಂಸ್ಥಾನಕ್ಕೆಲ್ಲ ಕಟ್ಟುನಿಟ್ಟಾದ ಲಿಖಿತರಾಜ್ಯಾಂಗ, ಕಾನೂನು ಇರಬೇಕೆಂದು ಅದನ್ನು ಬದಲಾಯಿಸಬೇಕಾದರೆ ತಿದ್ದುಪಡಿ (ಅಮೆಂಡ್‍ಮೆಂಟ್) ಅತ್ಯಗತ್ಯವೆಂದೂ ಫೆಡೆರಲ್ (ಸಂಯುಕ್ತ) ಸರ್ಕಾರಕ್ಕೂ ಸಂಸ್ಥಾನಕ್ಕೂ ಇರುವ ವ್ಯಾಪ್ತಿಯನ್ನು ನಿರ್ಧರಿಸಬೇಕೆಂದೂ ತೀರ್ಮಾನಿಸಿದರು. ಅಲ್ಲದೆ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ಪ್ರತ್ಯೇಕವಾಗಿರಬೇಕೆಂದೂ ಎಲ್ಲ ಅಧಿಕಾರಿಗಳನ್ನೂ ಚುನಾಯಿಸಬೇಕೆಂದೂ ಸಂಯುಕ್ತರಾಷ್ಟ್ರಕ್ಕೆಲ್ಲ ಅಧ್ಯಕ್ಷ (ಪ್ರೆಸಿಡೆಂಟ್) ಪ್ರಜಾಪ್ರತಿನಿಧಿ ಸಭೆ (ಕಾಂಗ್ರೆಸ್) ಮತ್ತು ಪ್ರಮುಖ ನ್ಯಾಯಾಲಯ ಇರಬೇಕೆಂದೂ ನಿರ್ಧರಿಸಲಾಯಿತು. ಅಲ್ಲದೆ ಜಾರ್ಜ್ ವಾಷಿಂಗ್‍ಟನ್ ಮೊದಲ ಅಧ್ಯಕ್ಷನಾಗಿ ಚುನಾಯಿತನಾದ. ಸಂಯುಕ್ತಸಂಸ್ಥಾನದ ರಾಜಧಾನಿಗೆ ವಾಷಿಂಗ್‍ಟನ್‍ನ ಹೆಸರನ್ನೇ ಕೊಟ್ಟರು. ಅಧ್ಯಕ್ಷ ವಾಷಿಂಗ್‍ಟನ್ ಯಾವ ರಾಜಕೀಯ ಪಂಗಡಕ್ಕೂ ಸೇರದೆ ದೇಶದ ಹಿತವನ್ನೇ ದೃಷ್ಟಿಯಲ್ಲಿಟ್ಟುಕೊಂಡು ತಾನೂ ಸಮಾಜ ಸೇವಕಮಾತ್ರ, ಎಂದು ತಿಳಿದು ಕೆಲಸಮಾಡಿದ. ಹೊಸದಾಗಿ ಸ್ಥಾಪಿತವಾದ ಸಂಯುಕ್ತಸಂಸ್ಥಾನಕ್ಕೆ ಇವ ಮೊದಲನೆಯ ಅಧ್ಯಕ್ಷನಾದುದರಿಂದ ರಾಜ್ಯರಚನೆಗೆ ಹೊಸ ಇಲಾಖೆಗಳನ್ನು ಏರ್ಪಡಿಸುವುದು, ಅಧಿಕಾರಿಗಳನ್ನು ನೇಮಿಸುವುದು, ಕೆಲಸ ಹಂಚುವುದು, ರಾಜ್ಯಕಾರ್ಯಸೌಕರ್ಯಕ್ಕಾಗಿ ಕಾನೂನುಗಳನ್ನು ಆಚರಣೆಗೆ ತರುವುದು, ಹಣಕಾಸಿನ ಏರ್ಪಾಡು ಮಾಡುವುದು-ಇವುಗಳಿಗೆ ಹೆಚ್ಚು ಗಮನ ಕೊಟ್ಟ. ಇದುವರೆಗೂ ಪ್ರತ್ಯೇಕವಾಗಿದ್ದ ಅಮೆರಿಕದ ನೆಲಸುನಾಡಿಗರು ಈಗ ಒಂದೇ ಕುಟುಂಬಕ್ಕೆ ಸೇರಿದಂತಾಯಿತು. ಈ ರಾಜ್ಯದ ಪ್ರಜೆಗಳಿಗೆ ವ್ಯಕ್ತಿಸ್ವಾತಂತ್ರ್ಯ, ದುಷ್ಟ ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಅರ್ಜಿಯನ್ನು ಹಾಕುವ ಸ್ವಾತಂತ್ರ್ಯ-ಇವು ದೊರಕಿದುವು. ಹೊಸ ಬ್ಯಾಂಕುಗಳ, ಭಾರಿ ಕಟ್ಟಡಗಳ, ನಿರ್ಮಾಣಕಾರ್ಯಗಳು ಪ್ರಾರಂಭವಾದುವು. ಅಧಿನಿವೇಶಿಗಳು ಯುದ್ಧಕಾಲದಲ್ಲಿ ಮಾಡಿದ ಸಾಲಗಳನ್ನು ಹೊಸ ಸರ್ಕಾರ ವಹಿಸಿಕೊಂಡಿತು. ಅಮದು ರಫ್ತುಗಳ ಮೇಲೆ ಸುಂಕಗಳನ್ನು ಹಾಕುವ ಪದ್ಧತಿ ರೂಢಿಗೆ ಬಂತು. ಕ್ರಮೇಣ ಹಣಕಾಸಿನ ಮುಗ್ಗಟ್ಟು ಕಡಿಮೆಯಾಗಿ ಆರ್ಥಿಕಸ್ಥಿತಿಯಲ್ಲಿ ದೇಶವು ಅಭಿವೃದ್ಧಿಗೆ ಬಂದಿತು.
ಜೇಮ್ಸ್ ಮನ್ರೊ ತತ್ತ್ವ
ಬದಲಾಯಿಸಿ(1817-1825)ರವರೆಗೆ ಅಧ್ಯಕ್ಷನಾಗಿದ್ದ ಜೇಮ್ಸ್ ಮನ್ರೊ ತತ್ತ್ವ ಎಂಬ ನೀತಿಯನ್ನು ಜಾರಿಗೆ ತಂದ. ಯೂರೋಪಿನಲ್ಲಿ ನೆಪೋಲಿಯನ್ನನ ಪತನಾನಂತರ ಮೆಟರ್ನಿಕ್ ಪ್ರಜಾಪ್ರಭುತ್ವ ತತ್ತ್ವಗಳನ್ನು ವಿರೋಧಿಸಿ ನಿರಂಕುಶಾಧಿಕಾರವನ್ನು ಸ್ಥಾಪಿಸಿದ. ದಕ್ಷಿಣ ಅಮೆರಿಕದ ಸ್ಪ್ಯಾನಿಷ್ ವಲಸೆಗಳು ಯೂರೋಪಿಯನ್ನರ ನಿರಂಕುಶಾಧಿಕಾರವನ್ನು ಒಪ್ಪಿಕೊಳ್ಳದೆ ದಂಗೆ ಎದ್ದುವು. ಅವುಗಳನ್ನಡಗಿಸಲು ಯೂರೋಪಿನ ರಾಷ್ಟ್ರಗಳು ಪ್ರಯತ್ನಿಸಿದಾಗ ಮನ್ರೊ ಅಮೆರಿಕ ಅಮೆರಿಕನ್ನರಿಗೆ ಮಾತ್ರ ಎಂದೂ ಯೂರೋಪಿನವರು ದಕ್ಷಿಣ ಅಮೆರಿಕದ ವ್ಯವಹಾರಗಳಲ್ಲಿ ಪ್ರವೇಶಿಸಕೂಡದೆಂದೂ ಘೋಷಿಸಿದ. ಇದರಿಂದ ಅಮೆರಿಕಖಂಡಕ್ಕೆ ಸಂಯುಕ್ತಸಂಸ್ಥಾನವೇ ರಕ್ಷೆಯಾಯಿತು. ಅಮೆರಿಕ ಹಳೆಯ ವಿಶ್ವಯುದ್ಧಗಳಲ್ಲಿ ಭಾಗವಹಿಸದೆ ಪ್ರತ್ಯೇಕವಾಗಿತ್ತು. ಎರಡನೆಯ ಮಹಾಯುದ್ಧದವರೆಗೂ ಈ ತಾಟಸ್ಥ್ಯನೀತಿಯನ್ನು ಅನುಸರಿಸಿ ಪ್ರಪಂಚದ ಮುಖಂಡತ್ವವನ್ನು ವಹಿಸಲು ಹಿಂತೆಗೆಯಿತು. ಆದರೆ ಎರಡನೆಯ ಪ್ರಪಂಚದ ಮಹಾಯುದ್ಧದಲ್ಲಿ ಅಮೆರಿಕ ಪ್ರಜಾಪ್ರಭುತ್ವದ ರಕ್ಷಣೆಗಾಗಿ ತಾಟಸ್ಥ್ಯನೀತಿಯನ್ನು ನಿರಾಕರಿಸಿ, ಮಹಾಯುದ್ಧದಲ್ಲಿ ಭಾಗವಹಿಸಿ ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಸ್ಥಿರವಾಗಿ ಉಳಿಯುವಂತೆ ಮಾಡಿತು.
ಅಮೆರಿಕ ಕ್ರಾಂತಿ
ಬದಲಾಯಿಸಿಸುಮಾರು ಎರಡು ಶತಮಾನಗಳ ಹಿಂದೆ ವಸಾಹತುಶಾಹಿಯ ವಿರುದ್ಧ ಆರಂಭವಾದ ಅಮೆರಿಕ ಕ್ರಾಂತಿ, ಜೀವನದ ಉತ್ಕರ್ಷವನ್ನು ಸಾಧಿಸುವ ಹಾದಿಯಲ್ಲಿ ಮುಂದುವರಿಯುತ್ತಲೇ ಇದೆ. ಉತ್ತಮ ಪರಿವರ್ತನೆಯ ಕ್ರಾಂತಿ ಇದು. ಪ್ರಗತಿಪರವಾದ ಆರ್ಥಿಕ ವ್ಯವಸ್ಥೆಯ ಫಲವಾಗಿ ಅನುದಿನವೂ ಪರಿವರ್ತನಶೀಲವಾದ ಬಂಡವಾಳಶಾಹಿ ಅಧಿಕಾಧಿಕ ಪ್ರಯೋಜನಗಳನ್ನು ಪ್ರತಿಯೊಬ್ಬರೂ ಇದರಿಂದ ಅನುಭವಿಸಬಹುದಾಗಿದೆ. ಭಾರಿ ಶ್ರೀಮಂತನ ಜೊತೆಯಲ್ಲೂ ಸಮಾನಸ್ಕಂದನಾಗಿ ನಿಲ್ಲುವ ಅವಕಾಶ ದಟ್ಟದರಿದ್ರ ಕಾರ್ಮಿಕನಿಗೂ ಸಲ್ಲಬೇಕು ಎಂಬ ಆಕಾಂಕ್ಷೆ (18)ನೆಯ ಶತಮಾನದ ಜೆಫರ್ಸನ್ನನದು. ಅಮೆರಿಕದಲ್ಲಿ ಗುಲಾಮಗಿರಿಯನ್ನು ರದ್ದುಪಡಿಸಿದ ಏಬ್ರಹಾಂ ಲಿಂಕನ್ 'ಶ್ರಮೋತ್ಪನ್ನವಾದ ಒಳ್ಳೆಯ ವಸ್ತುಗಳು ಯಾರ ಶ್ರಮದಿಂದ ಸಿದ್ಧವಾದವೋ ಅವರಿಗೆ ಸಲ್ಲಬೇಕು ಎಂಬುದಾಗಿ (19)ನೆಯ ಶತಮಾನದಲ್ಲಿ ಸಾರಿದ. ಪ್ರವರ್ಧಮಾನರಾಷ್ಟ್ರೀಯ ಆದಾಯ; ಅದರಲ್ಲಿ ಎಲ್ಲರಿಗೂ ಯಥಾಯೋಗ್ಯವಾದ ಪಾಲು; ವೈಯಕ್ತಿಕ ಸಾಹಸೋದ್ಯಮಗಳಿಗೆ ಹಿತಕರವಾದ ವಾತಾವರಣ ಸೃಷ್ಟಿಸುವುದಕ್ಕೆ ಬದ್ಧವಾದ ಹಾಗೂ ಉಳಿತಾಯಕ್ಕೆ ಸಹಾಯಕವಾದ ಉತ್ತೇಜನ ವ್ಯಕ್ತಿ ಹಾಳಾಗುವುದನ್ನು ತಪ್ಪಿಸಿ ಅವನ ಜೀವನವನ್ನು ಸುಗಮಗೊಳಿಸುವುದು, ಕೆಲಸಗಾರರ ಭದ್ರತೆ, ಅವರ ಯೋಗಕ್ಷೇಮಗಳಿಗೆ ಪ್ರೋತ್ಸಾಹ, ಸರ್ವಸಾಮಾನ್ಯವಾದ ಅಪಾಯಗಳ ನಿವಾರಣೆಗಳನ್ನು ಭದ್ರಪಡಿಸಬಲ್ಲ ಒಂದು ಸರ್ಕಾರ-ಇವು (20)ನೆಯ ಶತಮಾನದ ಮಧ್ಯಕಾಲದ ಆರ್ಥಿಕ ಗುರಿಗಳು ಎಂಬುದಾಗಿ ಐಸೆನ್‍ಹೋವರ್ ನುಡಿದಿದ್ದಾರೆ. ಅಮೆರಿಕದ ಮೂಲಭೂತ ಪ್ರಣಾಳಿಕೆಗಳನ್ನು ಸಾರುವ ತತ್ತ್ವಗಳನ್ನು ಅನುಷ್ಠಾನಕ್ಕೆ ತರಲು ಅಮೆರಿಕನ್ನರು ನಾನಾ ವಿಧಾನಗಳಲ್ಲಿ ಪ್ರಯತ್ನಿಸಿದ್ದಾರೆ. ಹೀಗೆ ಇಂದಿನ ಅಮೆರಿಕದ ಜನಜೀವನದ (190) ವರ್ಷಗಳ ಕೆಳಗೆ ಮುಂದಿಡಲಾದ ಕ್ರಾಂತಿತತ್ತ್ವಗಳನ್ನು ಅನುಸರಿಸುತ್ತದೆ. "ವರ್ಗರಹಿತ ಸಮಾಜವನ್ನು ಕುರಿತು ಮಾತನಾಡುವ ಅನೇಕ ರಾಷ್ಟ್ರಗಳಿಗಿಂತ ಆಚರಣೆಯಲ್ಲಿ ಅಮೆರಿಕ ಮುಂದಿದೆ. ಬಂಡವಾಳಶಾಹಿಯೊಂದಿಗೆ ಜೊತೆಗೂಡಿದ ಪ್ರಜಾಸತ್ತೆ, ಬಂಡವಾಳಶಾಹಿಯ ಅನೇಕ ಕೆಡುಕುಗಳನ್ನು ದುರ್ಬಲಗೊಳಿಸಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ; ವಾಸ್ತವಾಗಿ ಬಂಡವಾಳಶಾಹಿಯ ಹಿಂದಿನ ಸ್ವರೂಪವೇ ಈಗ ಬದಲಾಗಿದೆ" ಎಂಬ ನೆಹರೂರವರ ನುಡಿಯನ್ನು ಇಂದಿನ ಅಮೆರಿಕ ಸಮರ್ಥಿಸಿದೆ. (ಬಿ.ಎಸ್.ಕೆ.)
ಉಲ್ಲೇಖಗಳು
ಬದಲಾಯಿಸಿ