ಅಮೆರಿಕದ ಇಂಡಿಯನರ ಭಾಷೆಗಳು
ಅಮೆರಿಕದ ಇಂಡಿಯನರ ಭಾಷೆಗಳು : ಇವು ಅಮೆರಿಕ ಖಂಡದ ಮೂಲ ನಿವಾಸಿಗಳ ಭಾಷೆಗಳು. ಅಲ್ಲಿಗೆ ಯುರೊಪಿನವರು ವಲಸೆ ಹೋಗಿ, ನೆಲಸಿ, ತಮ್ಮ ಭಾಷೆಗಳಾದ ಇಂಗ್ಲಿಷ್, ಸ್ಪ್ಯಾನಿಷ್, ಪೋರ್ಚುಗೀಸ್, ಫ್ರೆಂಚ್ ಭಾಷೆಗಳ ಪ್ರಭಾವವನ್ನು ಬೆಳೆಸಿದ ಮೇಲೂ ಮೂಲಭಾಷೆಗಳಲ್ಲಿ ಇನ್ನೂ ಕೆಲವು ಭಾಷೆಗಳು ತಮ್ಮ ಸತ್ತ್ವದಿಂದ ಉಳಿದು ಬೆಳೆಯುತ್ತಲಿವೆ. ಕೊಲಂಬಸ್ ಅಮೆರಿಕವನ್ನು ಇಂಡಿಯ ಎಂದು ಕರೆದಂತೆ, ಅಲ್ಲಿಯ ಜನರನ್ನು ಇಂಡಿಯನ್ನರೆಂದು ಕರೆದ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೊ, ಗ್ರೀನ್‍ಲೆಂಡ್, ವೆಸ್ಟ್ ಇಂಡೀಸ್ ಗಳವರೆಗೆ ಹಬ್ಬಿರುವ ಈ ಜನಾಂಗದ ವೈವಿಧ್ಯ ಮಯ ಜೀವನಕ್ರಮದ ಅಭ್ಯಾಸ ಮಾಡಿದಂತೆಲ್ಲ ಅವರ ಭಾಷೆಯಲ್ಲಿಯ ಅಪರಿಮಿತ ವೈವಿಧ್ಯ ದಂಗುಬಡಿಸುತ್ತದೆ. ಕೊಲಂಬಸನ ಕಾಲಕ್ಕಾಗಲೆ ಅಲ್ಲಿಯ ಭಾಷೆಗಳು ಅಪರಿಮಿತವಾಗಿದ್ದುವು. ಉತ್ತರ ಮತ್ತು ಮಧ್ಯ ಅಮೆರಿಕಗಳಲ್ಲಿ ೪೦ ಭಾಷಾ ವರ್ಗಗಳು ಮತ್ತು ದಕ್ಷಿಣ ಅಮೆರಿಕದಲ್ಲಿ ಇನ್ನೂ ೪೦ ಭಾಷಾವರ್ಗಗಳು ಇದ್ದುವು. ಈ ಸುಮಾರು ೮೦ ಭಾಷಾವರ್ಗಗಳಲ್ಲಿ ೨,೦೦೦ಕ್ಕಿಂತ ಹೆಚ್ಚು ಭಾಷೆಗಳು ಅಡಕವಾಗಿವೆಯೆಂದು ಅಂದಾಜು ಮಾಡಲಾಗಿದೆ. ಈ ಸಂಖ್ಯೆ ಜಗತ್ತಿನ ಒಟ್ಟು ಭಾಷೆಗಳ ಸಂಖ್ಯೆಯ ೧/೩ಕ್ಕಿಂತ ಹೆಚ್ಚಾಗುತ್ತದೆ. ಇವುಗಳಲ್ಲಿ ಕೆಲವೊಂದು ಭಾಷೆಗಳು ಕೇವಲ ಸಣ್ಣ ಗುಂಪುಗಳಲ್ಲಿ ಮಾತ್ರ ಪ್ರಚಲಿತವಾಗಿದ್ದರೆ ಮತ್ತೆ ಕೆಲವು ಬಹು ವ್ಯಾಪಕವಾಗಿ ಹರಡಿದ್ದುವು. ಆಧುನಿಕ ಸುಸಂಸ್ಕೃತ ಜನಾಂಗಗಳ ಸಂಸ್ಕೃತಿ, ಭಾಷೆಗಳ ಸಂಪರ್ಕವಾದಮೇಲೆ ಈ ಭಾಷೆಗಳು ಬಹಳಷ್ಟು ತೀವ್ರ ಗತಿಯಿಂದ ಕಣ್ಮರೆಯಾಗುತ್ತಲಿವೆ, ಕಣ್ಮರೆಯಾಗಿವೆ. ವಿದ್ವಾಂಸರ ಅಂದಾಜಿನ ಪ್ರಕಾರ ಆ ಖಂಡದ ಶೋಧವಾದ ಅನಂತರ, ಈ ೩೦೦ ವರ್ಷಗಳ ಅವಧಿಯಲ್ಲಿ ಸುಮಾರು ಸಾವಿರದಷ್ಟು ಭಾಷೆಗಳು ಕಣ್ಮರೆಯಾಗಿವೆ. ಬಿಡಿ ಭಾಷೆಗಳಲ್ಲದೆ ಅನೇಕ ಭಾಷಾವರ್ಗಗಳೇ ಸಂಪೂರ್ಣ ಕಣ್ಮರೆಯಾಗಿವೆ. ಈಗ ಸುಮಾರು ೪೦-೫೦ ಭಾಷಾವರ್ಗಗಳು ಮಾತ್ರ ಉಳಿದಿವೆ. ಈ ಭಾಷೆಗಳ ಸಂಘಟಿತ ಹಾಗೂ ವ್ಯವಸ್ಥಿತ ಅಭ್ಯಾಸವಾಗದ ಕಾರಣ ಅನೇಕ ಭಾಷೆಗಳನ್ನು ಸ್ಥೂಲವಾಗಿಯೇ ಆಯಾ ವರ್ಗಗಳಲ್ಲಿ ಸೇರಿಸಲಾಗಿದೆ. ಕಣ್ಮರೆಯಾದ ಕೆಲವು ಭಾಷೆಗಳನ್ನು ಹೀಗೆ ಹೆಸರಿಸಬಹುದು: ೧. ಮೊಹೆಗನ್; ೨. ಗನ್ ಸೆಟ್; ೩. ನತಿಕ್; ೪. ಪೆಕೂಟ್; ೫. ಪೊವ್ಹತಮ್; ೬. ಪೆಲ್ಟೆ; ೭. ಕೊಮೆಕ್ರುಡೂ; ೮. ಯನ; ೯. ಚಿಬ್ಟಾ ೧೦. ಚೊರೊಟಿಗಾ; ೧೧. ಉಂಪಹಾ; ೧೨. ಆಜ್ಟೆಕ್ ಇತ್ಯಾದಿ. ಮೇಲೆ ಹೇಳಿದ ೪೦-೫೦ ಭಾಷಾವರ್ಗಗಳನ್ನೂ ಅಥವಾ ಈಗ ಉಳಿದಿರುವ ೧,೦೦೦ದಷ್ಟು ಭಾಷೆಗಳನ್ನೂ ಹೆಸರಿಸುವುದು ಇಲ್ಲಿ ಅಪ್ರಕೃತ. ಅದಕ್ಕಾಗಿ ಕೆಲ ಪ್ರಮುಖ ಭಾಷಾವರ್ಗಗಳನ್ನೂ ಅವುಗಳಲ್ಲಿಯ ಕೆಲವು ಪ್ರಮುಖ ಭಾಷೆಗಳನ್ನೂ ಇಲ್ಲಿ ಗಮನಿಸಲಾಗಿದೆ. ಕೆಲವು ಪ್ರಮುಖ ಭಾಷಾವರ್ಗಗಳು ಹೀಗಿವೆ: ೧. ಅಲ್ಗೊಂಕ್ಪಿಯನ್; ೨. ಇರೋಕ್ವಿಯನ್, ೩. ಅಥಬಾಸ್ಕನ್; ೪. ಅರವಕ್; ೫. ಕ್ಯಾರಿಬ್; ೬. ಜಪೊಟಿಕ್; ೭. ನಹುತ್ಲನ್; ೮. ಮಾಯ; ೯. ಮಸ್ಕೊಗಿನ್; ೧೦. ಸಿಯೋವನ್; ೧೧. ಅರೊಚನಿಯನ್; ೧೨. ಉತೊಅಜ್ಬೆಕನ್; ೧೩. ಎಸ್ಕಿಮೊ-ಅಲ್ಯೂಟ್; ಇತ್ಯಾದಿ. ಆಯಾ ಭಾಷಾವರ್ಗಗಳನ್ನೂ ಅವುಗಳಲ್ಲಿಯ ಭಾಷೆಗಳನ್ನೂ ಪ್ರಾದೇಶಿಕತೆಯ ಆಧಾರದ ಮೇಲೆ ಹೀಗೆ ವಿವರಿಸಬಹುದು: ದಕ್ಷಿಣ ಅಮೆರಿಕೆಯಲ್ಲಿ- ೧. ಅರೇಚನಿಯನ್; ೨. ಅಯ್ಮರ್; ೩. ಕ್ಪೆಚುವಾ; ೪. ಚಿಬ್ಬಾ-ಇವು ದಕ್ಷಿಣದಿಂದ ಉತ್ತರಕ್ಕೆ ಹರಡಿವೆ. ೧. ಅರವಕ್; ೨. ಕ್ಯಾರಿಬ್; ೩. ತುಪಿ; ೪ ಪನೂ; ೫. ತುಕಾನೊವರ್ಗಗಳೂ ಉಷ್ಣವಲಯದಿಂದ ವೆಸ್ಟ್ ಇಂಡೀಸ್ ವರೆಗೆ ಹರಡಿವೆ. ೧. ಗೆ; ೨. ಗಾಮಚುರು; ೩. ಪೆಲ್ಚೆ; ೪. ಚಿಹ್ವೆಲ್ಬೆ ವರ್ಗಗಳು ಬೆಜಿಲ್ ನಿಂದ ಟಿಮೇರಾ ಬೆಲ್ ಫಗ್ಮೋಡದವರೆಗೆ ಹರಡಿವೆ. ಉತ್ತರ ಅಮೆರಿಕೆಯಲ್ಲಿ - ೧. ಎಸ್ಕಿಮೊ (ಆಲಾಸ್ಕದಿಂದ ಗ್ರೀನ್‍ಲೆಂಡ್ ವರೆಗೆ); ೨. ಅಥಬಾಸ್ಕನ್ (ಕೆನಡ ಅಲಾಸ್ಕಗಳ ಒಳಭಾಗದಲ್ಲಿ); ೩. ಅಲ್ಗೊಂ; ಕ್ಪಿಯನ್ (ಪೂರ್ವ ಕೆನಡ, ಗೇಟ್ ಲೇಕ್ ಭಾಗದಲ್ಲಿ); ೪. ಇರೊಕ್ವಿಯನ್; (ನ್ಯೂಯಾರ್ಕ್, ಪೆನ್ಸಿಲ್ವೇನಿಯ, ಓಹಿಯೊ ಭಾಗದಲ್ಲಿ); ೫. ನೆಯೋವನ್; (ಮೈದಾನಗಳಲ್ಲಿ); ೬. ಮುಸ್ಕೊಗಿನ್; ೭. ಉತೋ ಆಜ್ಟೇಕಿಯನ್ (ಮೆಕ್ಸಿಕೊ, ಕ್ಯಾಲಿಫೋರ್ನಿಯ); ೮ ಮಾಯ (ಗ್ವಾಟೆಮಾಲ). ಮಧ್ಯ ಅಮೆರಿಕೆಯಲ್ಲಿ - ೧. ನಹುಅತ್ಲ; ೨. ಕ್ವೀಚೆ; ೩. ಚಕ್ಚಿಕ್ವೆಲ್; ೪. ಮಮ್; ೫. ಯುಚ್ ಟೆಕ್; ೬. ಕೆಕ್ಚಿ; ೭. ಒಟೋಮಿ; ೮. ಜಪೊಟೆಕ್; ೯. ಮಿಕ್ಸ್ ಟೆಕ್; ೧೦. ತೊತೊನಕ್ (ಉತ್ತರ ಮೆಕ್ಸಿಕೊ ಮತ್ತು ಗ್ವಾಟೆಮಾಲಗಳಲ್ಲಿ). ಕೆಲವು ಸಣ್ಣ ಭಾಷೆಗಳು ಮಾಯವಾಗುತ್ತಿದ್ದರೂ ನವಹೊ ಭಾಷಾಜನಾಂಗದ ಸಂಖ್ಯೆ ಹೆಚ್ಚುತ್ತಲಿದೆ. ಮೇಲಿನ ಎಲ್ಲ ಭಾಷಾವರ್ಗಗಳಲ್ಲಿ ಅಲ್ಗೊಂಕ್ವಿಯನ್ ಪ್ರಮುಖ ಭಾಷಾವರ್ಗ.ಈ ವರ್ಗದ ಭಾಷೆಗಳು ಕೆರೂಲಿನ ಪೂರ್ವ ಕರಾವಳಿಯಿಂದ ಉತ್ತರದ ಕಡೆಗೆ ಲ್ಯಾಬ್ರಡಾರ್ ವರೆಗಿನ ಪ್ರದೇಶಗಳಲ್ಲಿ ಬಳಕೆಯಲ್ಲಿವೆ. ಇಂಗ್ಲಿಷ್, ಫ್ರೆಂಚ್ ಭಾಷೆಗಳೊಡನೆ ಸಂಪರ್ಕ ಹೊಂದಿದ ಮೊದಲ ಭಾಷೆಗಳಿವು. ಅಮೆರಿಕದಲ್ಲಿ ಬಹಳಷ್ಟು ಸ್ಥಳವಾಚಕಗಳು ಈ ಭಾಷೆಗಳಿಂದ ಬಂದಿವೆ. ಉದಾಹರಣೆಗೆ: ಮಿಸಿಸಿಪಿ, ಮೆಸಾಚುಸೆಟ್ಸ್, ವಿಸ್ಕನ್ಸಿನ್, ಮಿಚಿಗನ್, ಇಲಿನಾಯ್, ಶಿಕಾಗೊ-ಇತ್ಯಾದಿ. ಮೆಸಾಚುಸೆಟ್ಸ್ ಮಹತ್ವದ್ದಲ್ಲದ ಭಾಷೆಯಾದರೂ ಅಮೆರಿಕದಲ್ಲಿ ಬೈಬಲ್ಲಿನ ಪ್ರಥಮ ಭಾಷಾಂತರಕ್ಕೆ ಬಳಕೆಯಾದ್ದರಿಂದ ಪ್ರಸಿದ್ಧವಾಗಿದೆ. ಪೊವ್‍ಹತನ್, ದೆಲ್ವರೆ, ಮೊಹೆಗನ್, ಪೆನೂಬ್ ಸ್ಕಾಟ್, ಪಾನಮಕ್ಕೊಡಿ ಮತ್ತು ಮಿಚಮಕ್-ಇವು ಕರಾವಳಿಯ ಭಾಷೆಗಳು. ಇವುಗಳ ಉತ್ತರಕ್ಕೆ ಹಾಗೂ ಪಶ್ಚಿಮಕ್ಕೆ ಈ ನಾಲ್ಕು ಮುಖ್ಯ ಭಾಷೆಗಳಿವೆ: ಫಾಕ್ಸ್ (ವಿಸ್ಕನ್ಸಿನ್‍ನಲಿ), ಕ್ರೀ (ಹಾತಸನ್ ಬೇನಲ್ಲಿ), ಮೆನೊಮಿನಿ (ಮಿಚಿಗನ್ ಮೇಲ್ಭಾಗದಲ್ಲಿ), ಒಜಿಬ್ವಾ (ಗೇಟ್ ಲೇಕ್ಸ್ ಉತ್ತರ ಭಾಗದಲ್ಲಿ). ಸಾಹಿತ್ಯೇತಿಹಾಸವಿಲ್ಲದ ಭಾಷೆಗಳ ತೌಲನಿಕ ಅಭ್ಯಾಸ ನಡೆಸಿರುವ ಲಿಯೊನಾಲ್ಡ್ ಬ್ಲೂಮ್ ಫೀಲ್ಡ್ ಈ ಭಾಷೆಗಳನ್ನು ಗಮನಿಸಿದ್ದಾನೆ. ಪೊಟಾವಟೋಮಿ (ಮಿಚಿಗನ್ನಿನ ಕೆಳಭಾಗ) ಇಲಿನಾಯ್ ಮತ್ತು ಶವ್ನಿ (ಟೆನೆಸ್ಸಿ) ಪರಸ್ಪರ ಸಂಬಂಧವುಳ್ಳ ಭಾಷೆಗಳು. ಬ್ಲ್ಯಾಕ್ ಫುಟ್, ಅಂಪಹೊ, ಚೆಯೆನ್ನಿ ಅದೇ ವರ್ಗದ ದೂರಸಂಬಂಧಿ ಭಾಷೆಗಳು. ಈ ಭಾಷೆಗಳ ರಚನೆಯಲ್ಲೂ ಹೆಚ್ಚಿನ ವೈವಿಧ್ಯವಿದೆ. ಎಲ್ಲಕ್ಕೂ ಸಾಮಾನ್ಯವಾದ ಅಂಶಗಳು ಕೆಲವಿದ್ದರೂ ಪರಸ್ಪರ ಭಿನ್ನಾಂಶಗಳು ಸಾಕಷ್ಟಿವೆ. ಇವುಗಳ ರಚನೆ ಇಂಡೊ ಯುರೋಪಿಯನ್ ಅಥವಾ ಇನ್ನಿತರ ಭಾಷಾವರ್ಗಗಳ ರಚನೆಗಿಂತ ಬಹು ಭಿನ್ನ. ಹೀಗಾಗಿ ಯುರೋಪಿಯನ್ನರು ಇವನ್ನು ಅಮೂರ್ತ ವಿಚಾರಗಳನ್ನು ವ್ಯಕ್ತಮಾಡಲಾರದ ಕಾಡುಭಾಷೆಗಳೆಂದು ತಪ್ಪಾಗಿ ತಿಳಿಯಲು ಅವಕಾಶವಾದಂತಾಗಿದೆ. ಸಾಮಾನ್ಯ ವಾಗಿ ಈ ಎಲ್ಲ ಭಾಷೆಗಳಿಗೂ ಅನ್ವಯಿಸಿ ಒಂದು ಧ್ವನಿನಿಮಾಸಮಾಮ್ನಾಯವನ್ನು ಕೊಡಬಹುದು. ೧೯೫೭ರಲ್ಲಿ ಪೀಯರ್ಸ್ ಎಂಬ ವಿದ್ವಾಂಸ ೧೭೬ ಪ್ರಾತಿನಿಧಿಕ ಭಾಷೆಗಳನ್ನು ಆಯ್ದುಕೊಂಡು ಅಲ್ಲಿ ೬೧ ವ್ಯಂಜನಧ್ವನಿಮಾಗಳಿವೆಯೆಂದು ಲೆಕ್ಕ ಹಾಕಿದ. ಅಂದರೆ ಇವುಗಳಿಗೆ ಸ್ವರಧ್ವನಿಮಾಗಳ ಮೊತ್ತವನ್ನು ಗರಿಷ್ಠ ಮಿತಿಯಲ್ಲಿ ಹಿಡಿದರೂ ಒಟ್ಟು ಧ್ವನಿಮಾಗಳ ಸಂಖ್ಯೆ ೮೦ನ್ನು ಮೀರಲಾರದು. ಈ ಧ್ವನಿಮಾಗಳಲ್ಲಿ ಸಾಕಷ್ಟು ಇಂಡೊ-ಯೂರೋಪಿಯನ್ ಭಾಷೆಯ ಧ್ವನಿಮಾಗಳಿಗೆ ಸಂವಾದಿಯಾಗಿದ್ದರೂ ಕೆಲವು ತೀರ ಭಿನ್ನವಾಗಿ ಹೊರಗಿನವರಿಗೆ ಉಚ್ಚಾರಣೆಯಲ್ಲಿ ತೊಂದರೆ ಕೊಡುತ್ತವೆ. ಅಲ್ಲಿಯ ಬಹಳಷ್ಟು ಭಾಷೆಗಳಲ್ಲಿ ಪ್,ತ್,ಕ್ ಸ್ಪರ್ಶಗಳು ಕೆಲವೊಮ್ಮೆ ಕಂಠ್ಯ ಸ್ಥಾನದಲ್ಲಿ ಶ್ವಾ¸ನಿರೋಧದಿಂದ ಉಂಟಾಗುತ್ತವೆ. ಇದು ಉಳಿದವರಿಗೆ ನಿಜವಾಗಿಯೂ ಕಷ್ಟಸಾಧ್ಯಕೆಲಸ. ಅಲ್ಲದೆ ಈ ಭಾಷೆಗಳು ತಾನ (ಟೋನ್) ಭಾಷೆಗಳು. ಕೇವಲ ವಿವಿಧತಾನಸ್ತರಗಳ ವ್ಯತ್ಯಾಸದ ಮೂಲಕ ಅರ್ಥವ್ಯತ್ಯಾಸವಾಗುತ್ತದೆ. ಅದೇ ರೀತಿ ಇನ್ನೊಂದು ವೈಶಿಷ್ಯವಂದರೆ, ಭಾಷೆಗಳು ಘೋಷ-ಅಘೋಷ ಸ್ವರಗಳಲ್ಲಿ, ಅಥವಾ ಪಿಸು (ವಿಸ್ಪರ್ಡ್) ಸ್ವರಗಳಲ್ಲಿ ಮಹತ್ವಪೂರ್ಣ ವ್ಯತ್ಯಾಸಗಳನ್ನು ಕಲ್ಪಿಸಿಕೊಂಡಿವೆ. ಇನ್ನು ಈ ಭಾಷೆಗಳ ವ್ಯಾಕರಣ. ಮೊದಲನೆಯದಾಗಿ ಇವು ಬಹುಸಂಯೋಗಿ (ಪಾಲಿ ಸಿಂತೆಟಿಕ್) ಭಾಷೆಗಳು. ಅಂದರೆ ಒಂದೇ ಶಬ್ದದ ರಚನೆಯಲ್ಲಿ ಅನೇಕ ಅಂಶಗಳನ್ನು ಕೂಡಿಸಿರುವುದು. ಇಂಥ ಒಂದು ಶಬ್ದವನ್ನುನಾವು ಇನ್ನಿತರ ಭಾಷೆಗಳಲ್ಲಿ ಭಾಷಾಂತರಿಸ ಬೇಕಾದಾಗ ಒಂದು ವಾಕ್ಯವನ್ನೇ ಬಳಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಎಸ್ಕಿಮೊದಲ್ಲಿನ ಒಂದು ಶಬ್ದ-ಅನೆರ್ಕುವಾತಿತ್. ನೀವು ಹೊರಹೋಗು ವಂತೆ ಅವನು ಬಿನ್ನವಿಸುತ್ತಾನೆ - ಎಂದು ಇದಕ್ಕೆ ಅರ್ಥ. ಇಲ್ಲಿ ಆ - ಎಂದರೆ ಅವನು (ಕರ್ತೃ); ಅನೆರ್ - ಹೊರಹೋಗಲು (ಪ್ರಾರಂಭದ ಈ ಅ ಮುಂದಿನ ಆ ದೊಡನೆ ಸೇರಿಹೋಗಿದೆ); ಕುವಾ - ಬಿನ್ನವಿಸುತ್ತಾನೆ; ತಿತ್ ನೀನು. ಅಲ್ಗೊಂಕ್ವಿಯನ್ ಭಾಷಾವರ್ಗದ ಕ್ರೀ ಭಾಷೆಯ ರೂಪಗಳನ್ನು ಉದಾಹರಿಸಬಹುದು.
ಕ್ರಿಯಾರೂಪ | ಅರ್ಥ | ಪ್ರತ್ಯಯ | ಕರ್ತೃ ಕರ್ಮ |
---|---|---|---|
ನಿಸಾಕಿಹಾದ್ (ಪ್ರ.ಪು. ಏಕ) | ನಾನು ಅವನನ್ನು ಪ್ರೀತಿಸುತ್ತೇನೆ | - ಆವ್ | ಉ.ಪು. ಏಕ |
ನಿಸಾಕಿಹಾವಕ್(ಪ್ರ.ಪು. ಬಹು) | ನಾನು ಅವರನ್ನು ಪ್ರೀತಿಸುತ್ತೇನೆ | - ಅವಕ್ | -"- |
ಕಿಸಾಕಿಹಾವ್ (ಪ್ರ.ಪು. ಏಕ) | ನೀನು ಅವನನ್ನು ಪ್ರೀತಿಸುತ್ತೀ | - ಆವ್ | ಮ.ಪು. ಏಕ |
ನಿಸಾಕಿಹಿಕ್ (ಉ.ಪು. ಏಕ ) | ಅವನು ನನ್ನನ್ನು ಪ್ರೀತಿಸುತ್ತಾನೆ | - ಇಕ್ | ಪ್ರ. .ಪು. ಏಕ |
ಮೇಲಿನ ಪ್ರಯೋಗಗಳಲ್ಲಿ ಒಂದೊಂದು ಪ್ರತ್ಯಯವೂ ಅನೇಕ ಅರ್ಥಗಳನ್ನು ಸೂಚಿಸುವುದನ್ನು ನೋಡಬಹುದು. ಈ ಪ್ರತ್ಯಯಗಳನ್ನು ಇದಕ್ಕಿಂತ ಮುಂದೆ ಒಡೆಯಲು ಸಾಧ್ಯವಿಲ್ಲ. ಈ ಭಾಷೆಗಳ ವ್ಯಾಕರಣ ರಚನೆ ವೈವಿಧ್ಯಮಯವೂ ಸಂಕೀರ್ಣವೂ ಆಗಿದ್ದು, ಸಲ್ಪ ಪರಿಮಿತಿಯಲ್ಲಿ ಅದನ್ನು ವರ್ಣಿಸಲು ಸಾಧ್ಯವೇ ಇಲ್ಲ. ದೃಷ್ಟಾಂತಕ್ಕಾಗಿ ಕೆಲ ಉದಾಹರಣೆಗಳನ್ನು ಮಾತ್ರ ಕೊಡಬಹುದು. ಚಿಚಿ ಮೆಚೌ - ಜೊನಚ್ ಭಾಷೆ.
ಏಕವಚನ | ದ್ವಿವಚನ | ಬಹುವಚನ | |
---|---|---|---|
ಉ.ಪು. | ನಾತು-ನನ್ನ ಚಿಕ್ಕಮ್ಮ | ನಾತುಸ್-ನಮ್ಮಿಬ್ಬರ ಚಿಕ್ಕಮ್ಮ | ನಾತುನ್-ನಮ್ಮ ಚಿಕ್ಕಮ್ಮ |
ಮ.ಪು. | ಉತು-ನಿನ್ನ ಚಿಕ್ಕಮ್ಮ | ಉತುಸ್-ನಿಮ್ಮಿಬ್ಬರ ಚಿಕ್ಕಮ್ಮ | ಉತುನ್-ನಿಮ್ಮ ಚಿಕ್ಕಮ್ಮ |
ಪ್ರ ಪು. | ಎರು-ಅವನ ಚಿಕ್ಕಮ್ಮ | ಎರುಸ್-ಅವರಿಬ್ಬರ ಚಿಕ್ಕಮ್ಮ | ಎರುನ್-ಅವರ ಚಿಕ್ಕಮ್ಮ |
ಮೇಲಿನ ಉದಾಹರಣೆಗಳಿಂದ ನಾಮಪದಗಳೊಡನೆ ಸರ್ವನಾಮಗಳು ಕೂಡಿದ್ದು
ಮತ್ತು ಕಾಂಡ (ಸ್ಟೆಮ್ ) ಚಿಕ್ಕಮ್ಮ ಪ್ರತಿಪುರುಷದಲ್ಲೂ ಭಿನ್ನವಾಗುವುದೂ ಕಂಡುಬರುತ್ತದೆ.
ಶಬ್ದಮಿತಿಯಲ್ಲೂ ಅತ್ಯಂತ ವ್ಯತ್ಯಾಸವಿದೆ. ಶಬ್ದ ಶಬ್ದದಲ್ಲಿ ಕೆಲವೇ ಧ್ವನಿಮಾಗಳಿಂದ
ಅನೇಕ ಧ್ವನಿಮಾಗಳಿರಬಹುದು. ಅತಿ ಉದ್ದ ಶಬ್ದವೊಂದನ್ನು ಉದಾಹರಿಸಬಹುದು.
ದಕ್ಷಿಣ ಪೈಯುತೆ ಭಾಷೆಯಲ್ಲಿ ವೀ-ತೊ-ಕುಚುಮ್-ಪುನ್ ಕು-ರುಗನಿ-ಯುನ್ವಿ-ವ-
ನ್ತು-ಮ್ ಎಂದರೆ ಕುಳಿತು ಚೂರಿಯಿಂದ ಕುರಿ, ಆಕಳು ಅಥವಾ ಹೋರಿಯನ್ನು
ಕೊಯ್ಯುವರು ಎಂದರ್ಥ.
ಈ ಮೇಲಿನ ವಿವರಣೆಯಿಂದ ಬೇರೆ ಯಾವುದೋ ಒಂದು ವ್ಯಾಕರಣವನ್ನು
ಅದರ ಮೇಲೆ ಹೇರಲು ಸಾಧ್ಯವಿಲ್ಲ, ಅದಕ್ಕೆ ತನ್ನದೆ ಆದ ರಚನೆಯಿದೆಯೆಂಬುದು
ಸ್ಪಷ್ಟವಾಗುತ್ತದೆ.