ಅನ್ಯಮನಃಸ್ಪರ್ಶನ ಒಬ್ಬನ ಮನಸ್ಸಿನ ಮೇಲೆ ಮೊತ್ತೊಬ್ಬನ ಮನಸ್ಸು ಭಾವಪ್ರಭಾವದ ಮೂಲಕ (ಇಂದ್ರಿಯಗಳ ಮೂಲಕವಲ್ಲ) ಕಾರ್ಯ ಮಾಡುವುದು (ಟೆಲೆಪತಿ). ಅಂದರೆ ಜ್ಞಾನೇಂದ್ರಿಯಗಳನ್ನುಪಯೋಗಿಸದೆ ಅನ್ಯನೊಬ್ಬನ ಮನಸ್ಸಿನಲ್ಲಿ ಉಂಟಾಗುವ ಭಾವನೆಗಳನ್ನು, ಯೋಚನೆಗಳನ್ನು ಮೊತ್ತೊಬ್ಬನು ತಿಳಿದುಕೊಳ್ಳುವುದು ಎಂದರ್ಥ.

ಪರಿಕಲ್ಪನೆ ಬದಲಾಯಿಸಿ

ಆ ವ್ಯಕ್ತಿ ಹತ್ತಿರದಲ್ಲಿದ್ದರೂ ಇರಬಹುದು. ಇಲ್ಲವೆ ಕಣ್ಣಿಗೆ ಕಾಣದಂತೆ ಅತಿ ದೂರದಲ್ಲಿದ್ದರೂ ಇರಬಹುದು. ಯೋಗಾಭ್ಯಾಸದ ಮೂಲಕ ಇಂಥ ಶಕ್ತಿಯನ್ನು ಪಡೆಯಬಹುದೆಂದು ಪತಂಜಲಿ ತನ್ನ ಯೋಗಸೂತ್ರದಲ್ಲಿ ಬಹುಹಿಂದೆಯೇ ಹೇಳಿದ್ದಾನೆ. ಈ ನಂಬಿಕೆ ಪ್ರಾಚೀನ ಕಾಲದಿಂದೂ ಅನೇಕ ಪ್ರದೇಶಗಳಲ್ಲಿದೆ. ಇಂಥ ಶಕ್ತಿ ಇಲ್ಲವೆಂದೂ ಜ್ಞಾನೇಂದ್ರಿಯದ ಮೂಲಕವಲ್ಲದೆ ಜ್ಞಾನವನ್ನು ಪಡೆಯುವುದು ಅಸಾಧ್ಯವೆಂದೂ ಚಾರ್ವಾಕರ ನಂಬಿಕೆ. ಇಂದಿಗೂ ತಜ್ಞರಲ್ಲಿ ಈ ಬಗ್ಗೆ ವಾದವಿವಾದಗಳಿವೆ. ಕೆಲವರು ಅನ್ಯಮನಃಸ್ಪರ್ಶನ ನಡೆಯುವುದೆಂದೂ ಇದಕ್ಕೆ ಆಧಾರವನ್ನು ವೈಜ್ಞಾನಿಕ ರೀತಿಯಿಂದ ಕಂಡುಹಿಡಿಯಲು ಸಾಧ್ಯವೆಂದೂ ನಂಬಿ ಅನೇಕ ಪರಿಶೋಧನೆಗಳನ್ನು ನಡೆಸಿರುವರು. ಇನ್ನು ಕೆಲವರು ಇದು ಅಸಾಧ್ಯವೆಂದೂ, ಈ ನಂಬಿಕೆ ನಿರಾಧಾರವೆಂದೂ ತಳ್ಳಿ ಹಾಕಿ ಈ ಬಗ್ಗೆ ಯೋಚನೆ ಮಾಡುವುದು, ಪ್ರಯೋಗಗಳನ್ನು ನಡೆಸುವುದು ಕೇವಲ ಕಾಲವ್ಯಯವೆಂದು ತೀರ್ಮಾನಿಸಿರುವರು. ಮತ್ತೆ ಕೆಲವು ಸಂದೇಹವಾದಿಗಳು ಪರಿಶೋಧನೆಗಳನ್ನು ನಡೆಸಿ ಆಮೇಲೆ ಈ ವಿಚಾರವನ್ನು ತಳ್ಳಿ ಹಾಕುವುದು ಉತ್ತಮವೆಂದು ಪ್ರಯೋಗಗಳನ್ನು ನಡೆಸಿರುವರು. ಇಂಥ ವಿಷಯಗಳನ್ನು ಪರಿಶೋಧಿಸಲು ಭೌತಾತೀತ ವಿಷಯ ಸಂಶೋಧನ ಸಂಸ್ಥೆ (ಸೊಸೈಟಿ ಫಾರ್ ಸೈಕಿಕಲ್ ರಿಸರ್ಚ್) ಎಂಬ ಒಂದು ಸಂಸ್ಥೆಯನ್ನು ಲಂಡನ್ನಿನಲ್ಲಿ ಸ್ಥಾಪಿಸಿದರು (1882). ಅನ್ಯಮನಃಸ್ಪರ್ಶನದ ಘಟನೆಗಳನ್ನು ಶೇಖರಿಸಿ ಕೆಲವನ್ನು ಸಂಶೋಧನೆಗೆ ಗುರಿಮಾಡಿದರು. ಆದರೆ ಈ ವಿಷಯದಲ್ಲಿ ನಂಬಿಕೆ ಇದ್ದವರು ಇದು ಸತ್ಯ ಎಂದು ತಮ್ಮ ನಂಬಿಕೆಯನ್ನು ಈ ಮೂಲಕ ಬಲಪಡಿಸಿಕೊಂಡರು. ಇತರರು ಇವೆಲ್ಲ ಕಟ್ಟುಕಥೆಗಳೆಂದೂ, ಈ ಪರಿಶೋಧನೆಗಳು ನಂಬಲರ್ಹವಾದ ಆಧಾರಗಳನ್ನು ಪಡೆದಿಲ್ಲವೆಂದೂ ತಿರಸ್ಕರಿಸಿದರು.

ಸಂಶೋಧನೆಗಳು ಬದಲಾಯಿಸಿ

ಇತ್ತೀಚೆಗೆ ಈ ಬಗ್ಗೆ ಶೋಧನೆಮಾಡಲು ಮನಃಶಾಸ್ತ್ರಜ್ಞರು ಅಂಕಿಅಂಶ ಪರಿಶೀಲನ ವಿಧಾನವನ್ನೊಳಗೊಂಡ ಪ್ರಾಯೋಗಿಕ ಮಾರ್ಗವನ್ನು ಅವಲಂಬಿಸಿರುವರು. ಉದಾಹರಣೆಗೆ ಒಂದು ಇಸ್ಪೀಟ್ ಪ್ಯಾಕನ್ನು ತೆಗೆದುಕೊಂಡು ಎಲೆಗಳನ್ನು ಚೆನ್ನಾಗಿ ಕಲಸಿ ಅವುಗಳಲ್ಲಿ ಒಂದನ್ನು ಕೈಗೆ ತೆಗೆದುಕೊಂಡು ಒಬ್ಬ ವ್ಯಕ್ತಿ ಒಂದು ಕೊಠಡಿಯಲ್ಲಿ ಕುಳಿತು ನೋಡುತ್ತಿದ್ದರೆ ಅದೇ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿ ಇನ್ನೊಂದು ಕೊಠಡಿಯಲ್ಲಿ ಆ ಎಲೆ ಇಂಥದೆಂದು ತನ್ನ ಪಟ್ಟಿಯಲ್ಲಿ ಬರೆದಿಡುವನು. ಪ್ಯಾಕಿನಲ್ಲಿ ನಾಲ್ಕು ವಿಧವಾದ ಎಲೆಗಳು ಇರುವುದರಿಂದ ನಾಲ್ಕು ಸಲಕ್ಕೆ ಆಕಸ್ಮಿಕವಾಗಿ ಒಂದು ಎಲೆಯನ್ನು ತಪ್ಪಿಲ್ಲದೆ ಕಂಡುಹಿಡಿಯುವುದು ಸಾಧ್ಯ. ಆದರೆ ಸೇಕಡ ಮೂವತ್ತು ಅಥವಾ ನಲವತ್ತು ಸಲ ತಪ್ಪಿಲ್ಲದೆ ಕಂಡುಹಿಡಿದರೆ ಅದು ಕೇವಲ ಆಕಸ್ಮಿಕ ಘಟನೆಯಲ್ಲದೆ ಒಂದು ನಿರ್ದಿಷ್ಟ ಘಟನೆಯಾಗಿ ಅನ್ಯಮನಃಸ್ಪರ್ಶನೆಗೆ ಆಧಾರವಾಗಬಹುದು. ಇಂಥ ಪ್ರಯೋಗಗಳು ಅನೇಕ ವರ್ಷಗಳ ಕಾಲ ನಡೆದುವು. ಕೆಲವು ವೇಳೆ ಇದು ಕೇವಲ ಆಕಸ್ಮಿಕವೆಂದೂ ಮತ್ತೆ ಕೆಲವು ಸಾರಿ ನಿರ್ದಿಷ್ಟವಾದದ್ದೆಂದೂ ತೋರಿಬಂತು.

 
Zener cards

ರ್ಹೈನ್ ಮತ್ತು ಆತನ ಸಹೋದ್ಯೋಗಿಗಳು ಡ್ಯೂಕ್ ವಿಶ್ವವಿದ್ಯಾನಿಲಯದಲ್ಲಿ ಒಂದು ಹೊಸ ವಿಧಾನವನ್ನು ಕಂಡುಹಿಡಿದರು (ಸು. 1929). ಇಸ್ಪೀಟು ಎಲೆಗಳ ಬದಲು ಜೀನರ್ ಎಲೆಗಳನ್ನು ಉಪಯೋಗಿಸಿದರು. ಈ ಎಲೆಗಳ ಮೇಲೆ ವೃತ್ತರೇಖೆ, ಚಚ್ಚೌಕರೇಖೆ, ಐದು ಮೂಲೆಗಳ ನಕ್ಷತ್ರರೇಖೆ, ಧನಗುರುತು ಮತ್ತು ವಕ್ರರೇಖೆ-ಈ ಐದು ಚಿನ್ಹೆಗಳು ಇರುವುವು. ಒಂದೊಂದು ಪ್ಯಾಕಿನಲ್ಲಿ ಇಪ್ಪತ್ತೈದು ಎಲೆಗಳು. ಆಕಸ್ಮಿಕ ಘಟನೆಯಿಂದ ಇಪ್ಪತ್ತೈದು ಎಲೆಗಳಲ್ಲಿ ಐದು ಎಲೆಗಳನ್ನು ತಪ್ಪಿಲ್ಲದೆ ಹೇಳುವುದು ಸಾಧ್ಯ. ಆದರೆ ರ್ಹೈನ್ ನಡೆಸಿದ ಪ್ರಯೋಗಗಳಲ್ಲಿ ಕೆಲವರು ಇಪ್ಪತ್ತೈದು ಎಲೆಗಳಿಗೆ ಏಳು, ಎಂಟು ಎಲೆಗಳನ್ನು ಸರಿಯಾಗಿ ಗುರುತಿಸಿದರು. ಅನ್ಯಮನಃಸ್ಪರ್ಶನೆಯಲ್ಲಿ ನಂಬಿಕೆಯನ್ನಿಟ್ಟಿರುವವರು, ಇಡದವರು, ಸುಮಾರು ಮೂವತ್ತು ವಿಶ್ವವಿದ್ಯಾನಿಲಯಗಳಲ್ಲಿ ಲಕ್ಷಾಂತರ ಸಲ ಪ್ರಯೋಗಗಳನ್ನು ನಡೆಸಿಲ್ಲದೆ ಕೆಲವರು ರ್ಹೈನ್ ಊಹೆ ಸರಿಯೆಂದು ತೋರಿಸಿಕೊಟ್ಟಿರುವರು. ಅಂಕಿ ಅಂಶ ಪದ್ಧತಿಯಲ್ಲೂ ಪ್ರಾಯೋಗಿಕ ರಚನೆಯಲ್ಲೂ ಇರುವ ಲೋಪದೋಷಗಳನ್ನು ಪರಿಹಾರ ಮಾಡಿದರು. ಆಕಸ್ಮಿಕ ಘಟನೆಗಿಂತ ಹೆಚ್ಚಾಗಿ ಕೆಲವು ವ್ಯಕ್ತಿಗಳು ಬಹುದೂರದಿಂದ ಈ ಎಲೆಗಳನ್ನು ಸರಿಯಾಗಿ ಗುರುತಿಸಬಲ್ಲರೆಂದು ಈಗ ಖಚಿತವಾಗಿದೆ. ಆದರೆ ಈ ಶಕ್ತಿ ಎಂಥ ವ್ಯಕ್ತಿಗಳಲ್ಲಿ ಇರುವುದೆಂಬುದನ್ನು ಕಂಡುಹಿಡಿಯುವುದು ಇನ್ನೂ ಸಾಧ್ಯವಾಗಿಲ್ಲ. ಈ ಶಕ್ತಿಗೂ ಬುದ್ಧಿಶಕ್ತಿಗೂ ಯಾವ ಸಂಬಂಧವೂ ಇಲ್ಲವೆಂಬುದು ಸ್ಪಷ್ಟ. ಆದರೆ ಈ ಶಕ್ತಿಗೂ ವ್ಯಕ್ತಿತ್ವಭೇಧಗಳಿಗೂ ಇರುವ ಸಂಬಂಧ ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಇದಲ್ಲದೆ ಯಾವ ಪರಿಸ್ಥಿತಿಯಲ್ಲಿ ಈ ಶಕ್ತಿ ರೂಪುಗೊಳ್ಳುವುದೆಂಬುದನ್ನು ಇನ್ನೂ ನಿರ್ಧರಿಸಿಲ್ಲ. ಕಡೆಯದಾಗಿ ಇಂಥ ಜ್ಞಾನ ಯಾವ ರೀತಿಯಿಂದ ಉತ್ಪನ್ನವಾಗುವುದೆಂಬುದನ್ನೂ ಇನ್ನೂ ಸರಿಯಾಗಿ ತಿಳಿದಿಲ್ಲ. ಅಂದರೆ ಅನ್ಯಮನಃಸ್ಪರ್ಶನೆ ಕೆಲ ವ್ಯಕ್ತಿಗಳಲ್ಲಿ, ಕೆಲ ಸಂದರ್ಭಗಳಲ್ಲಿ ಉಂಟಾಗುವುದೆಂಬುದು ಮಾತ್ರ ಈಗ ಖಚಿತವಾಗಿ ತಿಳಿದುಬಂದಿದೆ. ಆದರೆ ಈ ಶಕ್ತಿ ಎಂಥ ವ್ಯಕ್ತಿಗಳಲ್ಲಿ, ಎಂಥ ಸನ್ನಿವೇಶಗಳಲ್ಲಿ, ಎಂಥ ಮಾರ್ಗದಿಂದ ಉಂಟಾಗುವುದೆಂದು ಈಗ ನಮಗೆ ದೊರೆತಿರುವ ಜ್ಞಾನದ ಆಧಾರದ ಮೇಲೆ ಹೇಳಲು ಸಾಧ್ಯವಿಲ್ಲ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: