ಅನೂರೂಪ ಶ್ರೇಣಿಗಳು

ಅನುರೂಪ ಶ್ರೇಣಿಗಳು ಎಂದರೆ ಒಂದು ಸಂಯುಕ್ತಕ್ಕೂ ಅದರ ಪಕ್ಕದ ಸಂಯುಕ್ತಕ್ಕೂ ಅಣುಸೂತ್ರದಲ್ಲಿ ವ್ಯತ್ಯಾಸವಿರುವಂಥ ಸಾವಯವ ಸಂಯುಕ್ತಗಳ ಶ್ರೇಣಿಗಳು (ಹೊಮೊಲೋಗಸ್ ಸೀರೀಸ್).[] ಇದಕ್ಕೆ ಅತ್ಯಂತ ಸರಳ ನಿದರ್ಶನ, ಆಲ್ಕೇನ್ ಶ್ರೇಣಿ. ಈ ಶ್ರೇಣಿಗೆ ಸೇರಿದ ಸಂಯುಕ್ತಗಳನ್ನು ಆಲ್ಕೇನ್‌ಗಳೆಂದು ಕರೆಯುತ್ತಾರೆ. ಇವೆಲ್ಲವೂ ಹೈಡ್ರೋಕಾರ್ಬನ್‌ಗಳು. ಆಂದರೆ ಹೈಡ್ರೋಜನ್, ಕಾರ್ಬನ್‌ಗಳೆರಡೇ ಇರುವ ಸಂಯುಕ್ತಗಳು.

CH4 				... ಮೀಥೇನ್
CH3-CH3 			... ಈಥೇನ್
CH3-CH2-CH3 			... ಪ್ರೊಪೇನ್
CH3-CH2-CH2-CH3 			... ಬ್ಯೂಟೇನ್
CH3-CH2-CH2-CH2-CH3 		... ಪೆಂಟೇನ್, ಇತ್ಯಾದಿ

ಆಲ್ಕೇನ್ ಶ್ರೇಣಿ ಹೊರತು ಎಲ್ಲ ಅನುರೂಪ ಶ್ರೇಣಿಗಳಿಗೂ ಒಂದು ವಿಶಿಷ್ಟ ಅಣ್ವಂಗವಿರುತ್ತದೆ (ರ‍್ಯಾಡಿಕಲ್). ಅಣ್ವಂಗವೆಂದರೆ ವಿಶಿಷ್ಟ ರಾಸಾಯನಿಕ ಗುಣಗಳುಳ್ಳ ಒಂದು ನಿರ್ದಿಷ್ಟ ಪರಮಾಣುಪುಂಜ. ಒಂದು ಅನುರೂಪ ಶ್ರೇಣಿಗೆ ಸೇರಿದ ಎಲ್ಲ ಸಂಯುಕ್ತಗಳಲ್ಲೂ ಒಂದೇ ಅಣ್ವಂಗವಿರುತ್ತದೆ. ಉದಾಹರಣೆಗೆ, ಅಣ್ವಂಗ ಆಲಿಫ್ಯಾಟಿಕ್ ಆಲ್ಕೊಹಾಲ್ ಶ್ರೇಣಿಯ ಎಲ್ಲ ಸಂಯುಕ್ತಗಳಲ್ಲೂ ಇರುತ್ತದೆ.

CH3OH 			 ... ಮೀಥೈಲ್ ಆಲ್ಕೊಹಾಲ್
CH3-CH2OH 		 ... ಈಥೈಲ್ ಆಲ್ಕೊಹಾಲ್
CH3-CH2-CH2OH 		 ... ಪ್ರೊಪೈಲ್ ಆಲ್ಕೊಹಾಲ್
CH3-CH2-CH2-CH2OH	 ... ಬ್ಯೂಟೈಲ್ ಆಲ್ಕೊಹಾಲ್

ಹೀಗೆಯೇ ಆಲಿಫ್ಯಾಟಿಕ್ ಅಮಿನ್‌ಗಳಲ್ಲಿ -NH2 ಅಣ್ವಂಗವೂ ಅಲ್ಟಿಹೈಡುಗಳಲ್ಲಿ -CHO ಅಣ್ವಂಗವೂ ಕಾರ್ಬಾಕ್ಸಿಲಿಕ್ ಆಮ್ಲಗಳಲ್ಲಿ COOH ಅಣ್ವಂಗವೂ ಇರುತ್ತದೆ.

ಒಂದು ಅನುರೂಪಶ್ರೇಣಿಗೆ ಸೇರಿದ ಸಂಯುಕ್ತಗಳೆಲ್ಲಕ್ಕೂ, ಒಂದು ಸಾಮಾನ್ಯ ಅಣುಸೂತ್ರವನ್ನು ಬರೆಯಬಹುದು. ಉದಾಹರಣಿಗೆ ಆಲ್ಕೇನ್‌ಗಳ ಅಣುಸೂತ್ರ CnH2n+2. ಆಲಿಫ್ಯಾಟಿಕ್ ಆಲ್ಕೊಹಾಲ್‌ಗಳ ಅಣುಸೂತ್ರ CnH2n+1OH. ಅಲ್ಲದೆ ಒಂದು ಅನುರೂಪಶ್ರೇಣಿಯ ಎಲ್ಲ ಸಂಯುಕ್ತಗಳಲ್ಲಿಯೂ ಒಂದೇ ಅಣ್ವಂಗವಿರುವುದರಿಂದ ಅವುಗಳ ರಾಸಾಯನಿಕ ವರ್ತನೆ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಆದರೆ ಬಣ್ಣ, ವಾಸನೆ, ದ್ರವಿಸುವ ಬಿಂದು, ಕುದಿಯುವ ಬಿಂದು, ಮುಂತಾದ ಭೌತಿಕ ಗುಣಗಳನ್ನು ತೆಗೆದುಕೊಂಡರೆ ಶ್ರೇಣಿಯಲ್ಲಿ ಅಣುತೂಕ ಹೆಚ್ಚಾಗುತ್ತ ಹೋದಂತೆ, ಈ ಭೌತಿಕಗುಣಗಳು ಒಂದು ಕ್ರಮದಲ್ಲಿ ವ್ಯತ್ಯಾಸವಾಗುತ್ತ ಹೋಗುತ್ತವೆ. ಅನುರೂಪಶ್ರೇಣಿಗೆ ಸೇರಿದ ಸಂಯುಕ್ತಗಳ ಗುಣಗಳಲ್ಲಿ ಈ ರೀತಿಯ ಒಂದು ಕ್ರಮಬದ್ಧ ವ್ಯವಸ್ಥೆ ಇರುವುದರಿಂದ ಅವುಗಳ ಅಧ್ಯಯನ ಸುಗಮಗೊಳ್ಳುತ್ತದೆ.

ಅನುರೂಪಶ್ರೇಣಿಗೆ ಸೇರಿದ ಸಂಯುಕ್ತಗಳಲ್ಲಿ ಒಂದನ್ನು ಇನ್ನೊಂದರ ಅನುರೂಪಿ (ಹೊಮೊಲೋಗ್) ಎನ್ನುತ್ತಾರೆ.[] ಪ್ರೊಪೇನ್ ಈಥೇನಿನ ಮೇಲಿನ ಅನುರೂಪಿ; ಮೀಥೇನು ಈಥೇನಿನ ಕೆಳಗಿನ ಅನುರೂಪಿ. ಕೆಲವುವೇಳೆ ಎರಡು ಸಂಯುಕ್ತಗಳು ಒಂದು ಅನುರೂಪ ಶ್ರೇಣಿಗೆ ಸೇರದಿದ್ದರೂ, ಅವೆರಡಕ್ಕೂ CH2 ವ್ಯತ್ಯಾಸವಿದ್ದರೆ ಒಂದನ್ನು ಇನ್ನೊಂದರ ಅನುರೂಪಿ ಎನ್ನುವುದುಂಟು. ಉದಾಹರಣೆಗೆ ಟಾಲ್ವೀನನ್ನು (C6H5CH3) ಬೆಂಜ಼ೀನಿನ (C6H6) ಅನುರೂಪಿ ಎನ್ನುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. Brown, Theodore L. (It was first discovered by an thomos Reddy 1998 scientist); LeMay, H. Eugene (Harold Eugene); Bursten, Bruce Edward (1991). Chemistry: the central science (5th ed.). Englewood Cliffs, NJ: Prentice Hall. pp. 940. ISBN 978-0-13-126202-7. OCLC 21973767.{{cite book}}: CS1 maint: numeric names: authors list (link)
  2. See In re Henze, 181 F.2d 196, 201 (CCPA 1950), in which the court stated, "In effect, the nature of homologues and the close relationship the physical and chemical properties of one member of a series bears to adjacent members is such that a presumption of unpatentability arises against a claim directed to a composition of matter, the adjacent homologue of which is old in the art."
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: