ಅಧಿಗಣಕ ಬದಲಾಯಿಸಿ

ಸರ್ಕಾರದ ಅಥವಾ ಬಂಡವಾಳ ಸಂಸ್ಥೆಯ, ಆದಾಯವೆಚ್ಚಗಳ ಪಟ್ಟಿಯನ್ನು ವ್ಯವಸ್ಥಿತ ರೀತಿಯಲ್ಲಿ ತಯಾರಿಸಿ, ಲಾಭನಷ್ಟಗಳ ವಿವರವನ್ನು ತಿಳಿಸಿ, ಆ ಸಂಸ್ಥೆಯ ಪುರೋಭಿವೃದ್ಧಿಗೆ ಸಹಾಯ ಮಾಡುವ ಅಧಿಕಾರಿ (ಕನ್‍ಟ್ರೋಲರ್). ಇವನ ವ್ಯವಹಾರ ನಾನಾ ಮುಖವಾದದ್ದು, ಮುಖ್ಯವಾದದ್ದು: ನಿಷ್ಕøಷ್ಟವಾದ ವಿವರಗಳನ್ನೂ ಅಂಕಿಅಂಶಗಳನ್ನೂ ದೊರಕಿಸಿಕೊಂಡು, ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ವರ್ಷದ ಆಯವ್ಯಯದ ಅಂದಾಜುಪಟ್ಟಿಯನ್ನು ಕ್ರಮವಿಹಿತವಾದ, ಅಧಿಕಾರಯುಕ್ತವಾದ, ಅವಶ್ಯಕ ವರದಿಗಳನ್ನು ತಯಾರಿಸಿ ಸರ್ಕಾರದ ಅಥವಾ ಸಂಸ್ಥೆಯ ಮುಂದಿನ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡುತ್ತಾನೆ. ಖಾಸಗಿಸಂಸ್ಥೆಗಳಲ್ಲಿ ಅವನ ಜವಾಬ್ದಾರಿ ವ್ಯಾಪಕವಾದುದು. ಅವನ ಅಧಿಕಾರ ಆಯವ್ಯಯಗಳ ವಿತರಣೆಗೆ ಮಾತ್ರವಲ್ಲದೆ, ಸಂಸ್ಥೆ ಹಾಕಿಕೊಂಡಿರುವ ಯೋಜನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅಗತ್ಯ ವಿವರಗಳನ್ನೊದಗಿಸಿ ಆಡಳಿತವರ್ಗ ಅಂತ್ಯ ನಿರ್ಧಾರವನ್ನು ಕೈಗೊಳ್ಳುವಂತೆ ಮಾಡುವುದೇ ಆಗಿದೆ. ಅವನ ಕೈಕೆಳಗೆ ಲೆಕ್ಕಪರೀಕ್ಷರು (ಆಡಿಟರ್‍ಗಳು) ಇರುತ್ತಾರೆ; ಅವರ ಕಾರ್ಯಕ್ರಮಗಳನ್ನು ನಿಯೋಜಿಸಿ ಮೇಲ್ವಿಚಾರಣೆ ನಡೆಸುತ್ತಾನೆ; ಅವನ ವರದಿ, ಅವರು ಒದಗಿಸುವ ವಿವರಗಳನ್ನು ಅವಲಂಬಿಸಿರುತ್ತದೆ. ಅವನ ಅಧಿಕಾರಕ್ಕೂ ಕೋಶಾಧ್ಯಕ್ಷನ (ಟ್ರೆಷóರರ್) ಅಧಿಕಾರಕ್ಕೂ ವ್ಯತ್ಯಾಸವಿದೆ. ಕೋಶಕ್ಕೆ ಬರುವ ಹಣಕಾಸುಗಳ ಲೆಕ್ಕವನ್ನಿಟ್ಟು ಖರ್ಚಾಗುವ ಹಣದ ವಿವರಗಳನ್ನು ಒದಗಿಸುವುದು ಮಾತ್ರ ಕೋಶಾಧ್ಯಕ್ಷನ ಕೆಲಸ. ಆ ಹಣ ಎಲ್ಲಿಂದ, ಹೇಗೆ ಬರಬೇಕು, ಅದರ ವಿನಿಯೋಗ ಯಾವ ರೀತಿಯಲ್ಲಿರಬೇಕು, ಎಂಬುದನ್ನು ತನ್ನ ವರದಿಯಲ್ಲಿ ಅಧಿಗಣಕ ಸೂಚಿಸುತ್ತಾನೆ.

ಇಂಗ್ಲೆಂಡಿನಲ್ಲಿ ಅಧಿಗಣಕನ (ಕನ್‍ಟ್ರೋಲರ್ ಆ್ಯಂಡ್ ಆಡಿಟರ್ ಜನರಲ್) ಅಧಿಕಾರ ಮಹತ್ವದ್ದು. ಅವನದು ಶಾಸನಬದ್ಧ ಅಧಿಕಾರ, ಸರ್ಕಾರವೇ ಅವನನ್ನು ನಿಯಮಿಸಿದರೂ ಪಾರ್ಲಿಮೆಂಟಿಗೆ ಮಾತ್ರ ಜವಾಬ್ದಾರ; ಕೆಲವು ಸಾಮಾನ್ಯ ವಿಷಯಗಳಲ್ಲಿ ಮಾತ್ರ ಅವನು ಸರ್ಕಾರಕ್ಕೆ ಅಧೀನ. ಅಮೆರಿಕ ಸಂಯುಕ್ತಸಂಸ್ಥಾನದ ಕೇಂದ್ರಸರ್ಕಾರದಲ್ಲೂ ಅಧಿಗಣಕ ಕಾಂಗ್ರೆಸ್ಸಿಗೆ ಮಾತ್ರ ಅಧೀನ; ಕಾರ್ಯಶಾಖೆಗೆ (ಎಗ್ಸಿಕ್ಯುಟಿವ್) ಅವನು ಅಧೀನನಲ್ಲ. ಭಾರತ ಸರ್ಕಾರದಲ್ಲೂ ಅವನ ಅಧಿಕಾರ ಶಾಸನಬದ್ಧವಾದದ್ದು. ಕೇಂದ್ರದ ಮತ್ತು ಪ್ರಾಂತಸರ್ಕಾರಗಳ ಆಯವ್ಯಯಗಳ ಮೇಲ್ವಿಚಾರಣೆ ಅವನಿಗೆ ಸೇರಿದ್ದು. ಅವನು ತನ್ನ ವರದಿಗಳನ್ನು ರಾಷ್ಟ್ರಾಧ್ಯಕ್ಷನಿಗೆ ಸಲ್ಲಿಸುತ್ತಾನೆ; ಮುಂದೆ ಶಾಸನಸಭೆಯಲ್ಲಿ ಅವುಗಳ ಪರಿಶೀಲನೆ ನಡೆಯುತ್ತದೆ. (ಕೆ.ವಿ.ವಿ.)

"https://kn.wikipedia.org/w/index.php?title=ಅಧಿಗಣಕ&oldid=794407" ಇಂದ ಪಡೆಯಲ್ಪಟ್ಟಿದೆ