ಅದೃಶ್ಯಕವಿ

ಬದಲಾಯಿಸಿ

ಹದಿನಾರನೆಯ ಶತಮಾನದಲ್ಲಿದ್ದ ಈ ಕವಿ ಪ್ರೌಢರಾಯನ ಕಾವ್ಯವನ್ನು ಬರೆದಿದ್ದಾನೆ. ತಂದೆ ಅಣ್ಣೇಂದ್ರ ಗುರು ಮಳೆಯ ಮಲ್ಲೇಶ; ಸ್ಥಳ ಬಿಜಾಪುರ ಪ್ರಾಂತದ ತೊರೆಸಾಲ ಪರಗಣೆಯ ಕೊಲ್ಲಾಪುರ, ದೇಸಾಯಿ ನಾಡೆರೆಯ ಹಕ್ಕರಿ ವಂಶಕ್ಕೆ ಸೇರಿದವ: ವೀರಶೈವ ಕವಿ. ಇಷ್ಟದೈವ ಉಪ್ಪಗಿರಿಯ ಸಂಗಮನಾಥ. ಈತನಿಗೆ ಅದ್ರೀಶಪ್ಪ ಎಂಬ ಹೆಸರು ಇದ್ದಂತೆ ತೋರುತ್ತದೆ.

ಈ ಕವಿ ಪ್ರೌಢರಾಯನ ಕಾವ್ಯವನ್ನೇ ಅಲ್ಲದೆ ಮತ್ತೆರಡು ಕಾವ್ಯಗಳನ್ನು ಬರೆದಿರಬಹುದೆಂದು ಈ ಕಾವ್ಯದ ಸಂಪಾದಕರಾದ ಪ್ರೊ.ಸ.ಶಿ.ಭೂಸನೂರಮಠರು ಊಹಿಸಿದ್ದಾರೆ.

ಪ್ರೌಢರಾಯನ ಕಾವ್ಯ ವಾರ್ಧಕಷಟ್ಪದಿಯಲ್ಲಿದೆ. ಇದರಲ್ಲಿ 21 ಸಂಧಿಗಳೂ 1113 ಪದ್ಯಗಳೂ ಇವೆ. ಈ ಕಾವ್ಯದಲ್ಲಿ ಎಂಬತ್ತಕ್ಕಿಂತಲೂ ಹೆಚ್ಚು ಶಿವಶರಣರ ಕಥೆಗಳನ್ನು ನಿರೂಪಿಸಲಾಗಿದೆ. ಇದನ್ನು ವಿಜಯನಗರದ ರಾಜನಾದ ಪ್ರೌಢರಾಯನಿಗೆ ಆತನ ಮಂತ್ರಿಯಾದ ಜಕ್ಕಣಾಚಾರ್ಯ ಬಿತ್ತರಿಸಿದುದನ್ನು ಕವಿ ಈ ಕಾವ್ಯದಲ್ಲಿ ಹೇಳಿದ್ದಾನೆ; ಭೂರಮಣ ಪ್ರೌಢಂಗೆ ಜಕ್ಕಣಾರ್ಯರು ಕಥಾಸಾರಮಂ ಪೇಳ್ದುದಂ ವಾರ್ಧೀಕ ಷಟ್ಪದಿಯ ದಾರದಿಂ ದಿವ್ಯಮಣಿಯನು ಪೋಣಿಪಂತೆ ಗುರುವಂಘ್ರಿ ಬಲದಿಂದುಸುರುವೆನು. ಚಾರಿತ್ರಿಕ ಮಹತಿಗಳಿಂದ ಕೂಡಿರುವ ಈ ಕಾವ್ಯ ಕೆಲವಾರು ದೃಷ್ಟಿಗಳಿಂದ ಬಹುಮುಖ್ಯವಾದುದಾಗಿದೆ.

(ಎನ್.ಬಿ.)