ಅಥರ್ವನ್
ಅಥರ್ವನ್ ಈ ಶಬ್ದ ವೇದಕಾಲಕ್ಕಿಂತಲೂ ಪ್ರಾಚೀನವಾದುದು; ಇಂಡೋ-ಇರಾನಿಯನ್ ಯುಗದಲ್ಲಿಯೇ ಪ್ರಚಾರದಲ್ಲಿದ್ದುದಕ್ಕೆ ಅವೆಸ್ತಾ ಗ್ರಂಥದಲ್ಲಿ ಬರುವ ಅಥ್ರವನ್ ಎಂಬ ಶಬ್ದಪ್ರಯೋಗ ಪ್ರಮಾಣವೊದಗಿಸುತ್ತದೆ. ಅಥ್ರವನ್ ಎಂದರೆ ಅಗ್ನಿ-ಪೂಜಕ ಪುರೋಹಿತರೆಂಬ ಅರ್ಥ ಅವೆಸ್ತಾದಲ್ಲಿರುವುದರಿಂದ ವೇದಕಾಲದಲ್ಲೂ ಅದೇ ಮೂಲಾರ್ಥ ಅದಕ್ಕೆ ಇತ್ತೆಂದು ವಿದ್ವಾಂಸರು ಊಹಿಸುತ್ತಾರೆ. ಆದರೆ ಬಹಳ ಹಿಂದೆಯೇ ಆ ಪುರೋಹಿತರ ಕರ್ಮ-ಶಾಂತಿಕ ಹಾಗೂ ಅಭಿಚಾರಿಕ- ಈ ಶಬ್ದದಿಂದ ಬೋಧಿತವಾಗುತ್ತಿದ್ದುದಕ್ಕೂ ಪ್ರಮಾಣಗಳಿವೆ. ಋಗ್ವೇದದ ಏಳನೆಯ ಮಂಡಲದ ಆದಿಯಲ್ಲಿ ಅಗ್ನಿಯನ್ನೇ ಅಥರ್ಯು ಎಂದು ಸ್ತುತಿಸಲಾಗಿದೆ. ಇದರ ಮೇಲಿಂದ ಅಥರ್ ಎಂಬ ಕಲ್ಪಿತ ಶಬ್ದಕ್ಕೆ ಮಂತ್ರವಿದ್ಯಾ ಎಂಬರ್ಥವನ್ನು ಊಹಿಸಿ, ಅಥರ್ವನ್ ಎಂದರೆ ಮಂತ್ರವಿದ್ಯಾಪರಿಣತ ಎಂಬ ವ್ಯುತ್ಪತ್ತಿಯನ್ನು ಹೇಳಬಹುದು. ಭೃಗು, ಅಂಗಿರಸ ಈ ಹೆಸರುಗಳೊಂದಿಗೆ ಅಥರ್ವರ ಉಲ್ಲೇಖ ಹೆಚ್ಚು. ಆದ್ದರಿಂದ ಈ ಮಾಂತ್ರಿಕ ಪುರೋಹಿತರು ಹೆಚ್ಚಾಗಿ ಆ ಋಷಿವಂಶದವರಿದ್ದಿರಬಹುದು. ಇವರ ವೇದವೇ ಅಥರ್ವವೇದ. ಅಥರ್ವವೇದದಲ್ಲಿ ಅಥರ್ವನ್ ಎಂದರೆ ಸೃಷ್ಟಿಕರ್ತ ಪ್ರಜಾಪತಿಯೇ ಎಂದು ಹೇಳಲಾಗಿರುವುದಲ್ಲದೆ ಪುರುಷನ ಶೀರ್ಷ, ಹೃದಯಗಳನ್ನು ಹೊಲಿಗೆ ಹಾಕಿ ಪರಬ್ರಹ್ಮನ ನಿವಾಸವಾಗುವಂತೆ ಮಾಡಿದ ದೇವತೆಯೆಂದು ವರ್ಣಿಸಲಾಗಿದೆ (10.2.26-29). ಬ್ರಹ್ಮವಿದ್ಯಾಸಂಪ್ರದಾಯದ ಋಷಿಗಳನ್ನು ಹೇಳುವಾಗ ಆತ್ಮೋಪನಿಷತ್ತು ಅಥರ್ವಋಷಿಗಳನ್ನೂ ಹೆಸರಿಸಿದೆ.