ಅಣಬೆ

(ಅಣಬೆಗಳು ಇಂದ ಪುನರ್ನಿರ್ದೇಶಿತ)
Mushroom
ಅಣಬೆ
Scientific classification
ಸಾಮ್ರಾಜ್ಯ:
Division:

ಅಣಬೆ (ಅಥವಾ ನಾಯಿಕೊಡೆ) ಸಾಮಾನ್ಯವಾಗಿ ನೆಲದ ಮೇಲುಗಡೆ ಮಣ್ಣಿನ ಮೇಲೆ ಅಥವಾ ಅದರ ಆಹಾರ ಮೂಲದ ಮೇಲೆ ಫಲಬಿಡುವ ಶಿಲೀಂಧ್ರದ ತಿರುಳಿನಿಂದ ಕೂಡಿದ, ಬೀಜಕಗಳನ್ನು ಹೊರುವ ಹಣ್ಣಿನಂಥ ಕಾಯ. ಅಣಬೆ ಪದವನ್ನು ಬಹುತೇಕ ಹಲವುವೇಳೆ ಕಾಂಡ (ತೊಟ್ಟು), ಶಿರಹೊದಿಕೆ (ಪೈಲಿಯಸ್), ಮತ್ತು ಶಿರಹೊದಿಕೆಯ ಕೆಳಭಾಗದ ಮೇಲೆ ಕಿವಿರುಗಳನ್ನು (ಪಟಲ) ಹೊಂದಿರುವ ಶಿಲೀಂಧ್ರಗಳಿಗೆ (ಬಸಿಡೀಯೊಮೈಕೋಟಾ, ಅಗ್ಯಾರಿಕೊಮೈಸೀಟೀಸ್) ಅನ್ವಯಿಸಲಾಗುತ್ತದೆ. ಈ ಕಿವಿರುಗಳು ನೆಲ ಅಥವಾ ಅದರ ನಿವಾಸಿ ಮೇಲ್ಮೆ ಮೇಲೆ ಹರಡಲು ಶಿಲೀಂಧ್ರಕ್ಕೆ ಸಹಾಯ ಮಾಡುವ ಸೂಕ್ಷ್ಮ ಬೀಜಕಗಳನ್ನು ಉತ್ಪಾದಿಸುತ್ತವೆ. ಅಗ್ಯಾರಿಕೇಲಿಸ್ ವಿಭಾಗದಲ್ಲಿ ಬರುವ ಬೆಸಿಡಿಯೋ ಬೀಜಾಣು ವರ್ಗಕ್ಕೆ ಸೇರಿವೆ.ಇದರಲ್ಲಿ ಸುಮಾರು ೧೨೫ ಜಾತಿಗಳೂ ೪೦೦೦ ಪ್ರಭೇಧಗಳೂ ಇದ್ದು ಎಲ್ಲೆಡೆಯೂ ಪಸರಿಸಿವೆ. ಇವು ಹೆಚ್ಚು ತೇವಾಂಶ ಮತ್ತು ಆದ್ರತೆಯಿರುವ ವಾತಾವರಣದಲ್ಲಿ ಹುಲುಸಾಗಿ ಬೆಳೆಯುತ್ತವೆ. ಅಣಬೆಗಳು ಸಸ್ಯಗಳಂತೆ ಸಾವಯವಯುತ ಮಣ್ಣು ಮತ್ತು ಸತ್ತೆಗಳ ಮೇಲೆ ಬೆಳೆಯುತ್ತವೆ. ಅವುಗಳಿಗೆ ಸಸ್ಯಗಳಂತೆ ಹರಿತ್ತಿರುವುದಿಲ್ಲ. ಅಣಬೆಗಳ ರಚನಾಂಗಗಳು ಬಹಳ ಸರಳವಾಗಿದ್ದು ಸಸ್ಯಗಳಿಗಿಂತ ಭಿನ್ನವಾಗಿರುತ್ತವೆ. ಅಣಬೆಯ ಬೀಜಾಣು ಬಹಳ ಚಿಕ್ಕದಾಗಿದ್ದು ಸೂಕ್ಷ್ಮದರ್ಶಕಗಳ ಸಹಾಯದಿಂದ ವೀಕ್ಷಿಸಬಹುದು.

ದುಂಡಾಗಿಯೂ ಮೊಟ್ಟೆಯಾಕಾರದಲ್ಲಿಯೂ ಸಣ್ಣ ಸಣ್ಣ ಗಂಟಿನಾಕಾರದಲ್ಲಿಯೂ ಕವಕತಂತುವಿನ ಅಂಚಿನಲ್ಲಿ ಅಣಬೆಗಳು ಕಾಣಿಸಿಕೊಳ್ಳುತ್ತವೆ. ಇವನ್ನು ಸಾಮಾನ್ಯವಾಗಿ ಗುಂಡಿಗಳೆಂದು ಕರೆಯುತ್ತಾರೆ.

ಕಿನ್ನರಿಯರ ನೃತ್ಯರಂಗ

ಬದಲಾಯಿಸಿ

ವಂಶಾಭಿವೃದ್ಧಿಯ ಸಮಯದಲ್ಲಿ ಬೀಜಾಣು ತಂತುಗಳು ಉಂಗುರಾಕಾರವನ್ನು ಪಡೆದು ತುದಿಯಲ್ಲಿ ಕವಕಜಾಲಗಳನ್ನು ಪಡೆಯುತ್ತವೆ. ಇಂಥ ಆಕೃತಿಗಳು ಹುಲ್ಲುಗಾವಲಿನಲ್ಲಿ ವೃತ್ತಾಕಾರವಾಗಿ ಬೆಳೆದಿರುತ್ತವೆ.ಇವನ್ನು ಕಿನ್ನರಿಯರ ನೃತ್ಯರಂಗ ಇಂದು ಕರೆಯುತ್ತಾರೆ.

ಬೆಳವಣಿಗೆ

ಬದಲಾಯಿಸಿ

ರಾಬರ್ಟ್ ಹುಕ್ (೧೬೬೫) ಹಾಗೂ ಇತರ ವಿಜ್ಞಾನಿಗಳ ಸಂಶೋಧನೆಗಳಿಂದ ಅಣಬೆಯು ಇತರ ಸಸ್ಯಗಳಂತೆ ಜನ್ಮತಾಳುವುದೆಂದು ತಿಳಿದುಬಂದಿದೆ. ಪರ್ವತಪ್ರದೇಶಗಳಲ್ಲಿ ಹಾಗೂ ಬೆಟ್ಟಗುಡ್ಡಗಳ ಬಯಲಿನಲ್ಲಿ ಇವು ಹೆಚ್ಚು ಕಾಣ ಸಿಗುತ್ತವೆ. ವಲ್ವಾರಿಲ್ಲಾ ವಾಲ್ವೇಸಿ,ಮರಾಸ್ಮಯಸ್ ಒರಿಡೆಸ್-ಇತ್ಯಾದಿಗಳು ಕೊಳೆತ ಪ್ರದೇಶಗಳಲ್ಲಿ ಹಾಗೂ ಗೊಬ್ಬರ ಮತ್ತು ರಾಸಾಯನಿಕ ವಸ್ತುಗಳ ಮೇಲೆ ಬೆಳೆಯುತ್ತವೆ. ಪ್ಲುರೋಟಿಸ್ ಮತ್ತು ಲೆಂಟಿನಸ್ ಜಾತಿಯ ಅಣಬೆಗಳು ಮರದ ಮೇಲೆ ಬೆಳೆಯುತ್ತವೆ. ಇನ್ನು ಕೆಲವು ಜಾತಿಯವು ಬದನಿಕೆಗಳಾಗಿದ್ದು, ಕಾಡಿನ ಮರಗಳ ಮೇಲೆ ಬೆಳೆಯುತ್ತವೆ. ಕೊಪ್ರಿನಸ್,ಮರಾಸ್ಮಿಯಸ್ ಮತ್ತು ಅಗ್ಯಾರಿ ಕಸ್ ಸಗಣಿಯ ಮೇಲೆ ಬೆಳೆಯುತ್ತವೆ. ಉಷ್ಣಾಂಶ, ಮಣ್ಣಿನಲ್ಲಿರುವ ಶೈತ್ಯ ಮತ್ತು ದೊರಕುವ ಕೊಳೆತ ರಾಸಾಯನಿಕ ಅಂಶಗಳು ಅಣಬೆಗಳ ಬೆಳವಣಿಗೆಗೆ ಬಹು ಮುಖ್ಯವಾದುವು. ಈ ರೀತಿಯ ಗುಣವಿರುವ ಕಡೆ ಅಣಬೆಗಳು ಹೆಚ್ಚಾಗಿ ಹರಡಿ ಕೊಡಿರುತ್ತವೆ.[]

ಪೌಷ್ಟಿಕಾಂಶಗಳು

ಬದಲಾಯಿಸಿ

ತಾಜಾ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳು ಅಣಬೆಯಲ್ಲಿ ಇವೆ.ಕೆಲವು ಜಾತಿಯ ಅಣಬೆಗಳಲ್ಲಿ ಫೋಲಿಕ್ ಆಮ ಹೆಚ್ಚಾಗಿರುವುದೆಂದು ತಿಳಿದುಬಂದಿದೆ. ಈ ಆಮ್ಲವನ್ನು ರಕ್ತ ಕ್ಷಯದಿಂದ ನರಳುವ ರೋಗಿಗಳಿಗೆ ಕೊಡುತ್ತಾರೆ. ೧೦೦-೨೦೦ಗ್ರಾಂ ಒಣಗಿದ ಅಣಬೆಗಳಲ್ಲಿ ಒಬ್ಬ ಆರೋಗ್ಯವಂತನಿಗೆ ಬೇಕಾಗುವಷ್ಟು ಪೌಷ್ಟಿಕಾಂಶವಿರುವುದೆಂದು (ಸುಮಾರು ೭೨%-೮೨% ಸಾರಜನಕ ಪ್ರೋಟೀನ್ ರೂಪದಲ್ಲಿದೆ) ಪ್ರಯೋಗಗಳಿಂದ ತಿಳಿದು ಬಂದಿದೆ.

ಅಣಬೆಯ ಪದಾರ್ಥಗಳು

ಬದಲಾಯಿಸಿ

ಅಣಬೆಯ ಪದಾರ್ಥಗಳು ಬಹಳ ರುಚಿಕರವಾಗಿದ್ದು, ಮೊಟ್ಟೆ ಮಾಂಸಗಳ ರುಚಿಯನ್ನು ಮೀರಿಸಬಲ್ಲವು. ಆದ್ದರಿಂದಲೇ ರೋಮನ್ ದೇಶದ ಜನರು ಅಣಬೆಗಳನ್ನು ದೇವರ ಆಹಾರವೆಂದು ವರ್ಣಿಸಿದ್ದಾರೆ. ಚೀಣಿಯರು ಅಣಬೆಯ ತಿಂಡಿಗಳು ಆರೋಗ್ಯ ಮತ್ತು ಹರ್ಷದಾಯಕವೆಂದು ಬಣ್ಣಿಸಿದ್ದಾರೆ. ಹೀಗೆ ಅಣಬೆಯಿಂದ ತಯಾರಿಸಿದ ತಿಂಡಿಗಳು ರುಚಿಕರ ಮಾತ್ರವೇ ಅಲ್ಲ ಅವು ಪುಷ್ಟಿದಾಯಕವೂ ಹೌದು. ಅಣಬೆಗಳಲ್ಲಿ ನಮ್ಮ ಶರೀರಕ್ಕೆ ಅವಶ್ಯಕವಾದ ಪ್ರೋಟೀನುಗಳು, ಅಮೈನೋ, ಆಮ್ಲಗಳು (ಅಲಾನಿನ್, ಲೈಸಿನ್, ಲೂಸಿನ್, ವೇಲಿನ, ಮಿಥಿಯಾನಿನ್, ಗ್ಲೈಸಿನ್, ಆಸ್ಪಾರ್ಟಿಕ್ ಆಮ್ಲ, ಗ್ಲುಟಾಮಿಕ್ ಆಮ್ಲ ಮುಂತಾದವು) ಜೀವಸತ್ವಗಳಾದ, ರೈಬೋ, ಫ್ಲೇವಿನ್, ನಿಯಾಸಿನ್, ಥೈಯಾಮಿನ್, ಪೆಂಟ್ಥೋನಿಕ್ ಆಮ್ಲ, ಬಯೋಟಿನ್, ಆಸ್ಕಾರ್ಬಿಕ್ ಆಮ್ಲ, ನಿಕೋಟಿನಿಕ್ ಆಮ್ಲ ಹಾಗೂ ಖನಿಜಾಂಶಗಳಾದ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಂಗಳು ಅಧಿಕ ಪ್ರಮಾಣದಲ್ಲಿವೆ. ಅಣಬೆಯಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶ ಕಡಿಮೆ ಪ್ರಮಾಣದಲ್ಲಿರುವುದರಿಂದ ಸಿಹಿಮೂತ್ರ ಮತ್ತು ಹೃದ್ರೋಗಿಗಗಳಿಗೆ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ.ಅಣಬೆಗಳು ಕೇವಲ ಆಹಾರ ಪದಾರ್ಥಗಳಿಗೆ ಮೀಸಲಾಗಿರದೆ, ಬೇರೆ ಬೇರೆ ಉದ್ದಿಮೆಗಳಲ್ಲಿ ಅದರದೇ ಆದ ಪ್ರಾಮುಖ್ಯತೆಯನ್ನು ಪಡೆದಿವೆ. ಚಿತ್ರಕಾರರಿಗೆ ಅವು ಸೌಂದರ್ಯದ ವಸ್ತುಗಳಾಗಿವೆ. ಗಿಡಮೂಲಿಕೆಗಳಂತೆ ಅಣಬೆಗಳನ್ನು ಔಷಧಿಯ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ವಾಸ್ತು ಶಿಲ್ಪಿಗಳಿಗೆ ಅವು ಮಾದರಿಗಳಾಗಿದ್ದು, ಅಣಬೆಗಳ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನೆರವಾಗಿವೆ. ಅಕ್ಕಸಾಲಿಗಳು ಒಡವೆಗಳನ್ನು ಸಹ ಅಣಬೆಗಳ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ವಸ್ತ್ರವಿನ್ಯಾಸಕಾರರು ಅಣಬೆಗಳ ಚಿತ್ರಗಳನ್ನು ಬಟ್ಟೆಗಳ ಮೇಲೆ ಹೆಚ್ಚು ಮಾಡಿರುವುದನ್ನು ಕಾಣಬಹುದು.

ಅಣಬೆಯ ರಸ

ಬದಲಾಯಿಸಿ

ಅಣಬೆಯ ರಸದಲ್ಲಿನ ರಸಾಯನಿಕಗಳು ಹಲವರು ಕ್ರಿಮಿಕೀಟಗಳ ಹತೋಟಿಯಲ್ಲಿ ಫಲಕಾರಿಯಾಗಿವೆ. ಆದರೂ ಸಹ ಇಂತಹ ಅನೇಕ ಅಣಬೆಗಳ ಉಪಯೋಗಗಳನ್ನು ಇನ್ನೂ ಪರಿಶೋಧಿಸಬೇಕಾಗಿದೆ. ಉದಾಹರಣೆಗೆ ಜಪಾನಿನ ಅಣಬೆಯಲ್ಲಿ ಶಿಲೀಂಧ್ರ ನಿರೋಧಕವನ್ನು ಹೆಸರಿಸಲಾಗಿದೆ. ಓಂಫಲೋಟಸ್ ಒಲೆರಿಯಸ್ ಎಂಬ ವಿಷ ಅಣಬೆಯ ರಸಾಯನಿಕವು ಪ್ಲಾಸ್ಮೋಡಿಯಂ ಗ್ಯಾಲಿನೇಸಿಯಸ್ ಎಂಬ ಪ್ರೊಟೋಜೋವಾ ಕ್ರಿಮಿಯ ಮೇಲೆ ಹತೋಟಿಕಾರಿಯಾಗಿದೆ. ಪಾಲಿಪೋರಸ್ ಅಫಿಸಿನೇಲಿಸ್ ಮತ್ತು ಫೋಮ್ಸ್ ಇಗ್ನೇರಿಸಿ ಎಂಬ ಅಣಬೆಗಳನ್ನು ರಕ್ತ ಹೆಪ್ಪುಗಟ್ಟಲು ಬಳಸಲಾಗಿದೆ. ಕ್ಯಾಲ್ವೇಸಿಯಾ ಜೈಗಾಂಸಿಯಾ ಎಂಬ ಅಣಬೆಯನ್ನು ಮತ್ತು ಬರುವಿಕೆಗೆ ಬಳಸಲಾಗಿದೆ.[]

ಅರಣ್ಯ ಪ್ರದೇಶ

ಬದಲಾಯಿಸಿ

ಅರಣ್ಯ ಪ್ರದೇಶದಲ್ಲಿ ಅಣಬೆಗಳ ಪಾತ್ರ ಬಹುಮುಖ್ಯ. ಇವು ಅರಣ್ಯದಲ್ಲಿ ಬಿದ್ದ ಕಡ್ಡಿ ಕಸ ಮುಂತಾದ ಸಾವಯವ ವಸ್ತುಗಳ ಕೊಳೆಯುವಿಕೆಗೆ ಕಾರಣವಾಗಿವೆ. ಇದರಿಂದ ಆ ಪ್ರದೇಶದ ಭೂಮಿ ಫಲವತ್ತಾಗುವುದಲ್ಲದೆ, ಅಲ್ಲಿದ್ದ ಕಸಕಡ್ಡಿಗಳ ವಿಲೇವಾರಿ ಆದಂತಾಗುತ್ತದೆ. ಅರಣ್ಯ ಸಸ್ಯಗಳ ಬೇರುಗಳಲ್ಲಿ ಅನೇಕ ಮೈಕೋರೈಜಾ ಅಣಬೆಗಳ ಸಂಬಂಧವಿರುವುದರಿಂದ ಅವು ಅರಣ್ಯ ಸಸ್ಯಗಳ ಹಾಗೂ ಇತರೆ ಸಸ್ಯಗಳಿಗೆ ಬೇಕಾದ ರಂಜಕ ಮುಂತಾದ ಆಹಾರಾಂಶಗಳನ್ನು ಒದಗಿಸುತ್ತದೆ. ಈ ಒಂದು ಸ್ವಾಭಾವಿಕ ಸಂಬಂಧದಿಂದ ಶಿಲೀಂಧ್ರಗಳು ಬಾಹ್ಯವಾಗಿ ಬೇರುಗಳನ್ನು ಸುತ್ತುವರಿಯುವುದರಿಂದ ಒಣಗಲು ಸ್ಥಿತಿಯಲ್ಲಿ ಸಸ್ಯವು ತೇವಾಂಶ ಕೊರತೆಯಿಂದ ಬಳಲದಂತೆ ಸಹಾಯಕಾರಿಯಾಗಿವೆ. ಈ ಅಣಬೆಗಳು ಆಂಟಿಬೈಯೋಟಿಕ್ ಎಂಬ ಕ್ರಿಮಿನಾಶಕ ರಸಾಯನಿಕಗಳನ್ನು ಬಿಡುಗಡೆ ಮಾಡುವುದರಿಂದ ಬೇರುಗಳಿಗೆ ಬರುವ ರೋಗಗಳನ್ನು ತಡೆಗಟ್ಟಬಲ್ಲವಾಗಿವೆ.

ಅಣಬೆ ಕೃಷಿಯ ಪ್ರಯೋಜನಗಳು

ಬದಲಾಯಿಸಿ

ಅಣಬೆ ಕೃಷಿಗೆ ಕಡಿಮೆ ಜಾಗವಿದ್ದು, ಸಣ್ಣ ರೈತರು, ಭೂರಹಿತರು ಮತ್ತು ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಬಹುದಾಗಿದೆ.ಅಣಬೆಗಳು ಗೋಧಿ ಭತ್ತದ ಹುಲ್ಲು ಇತ್ಯಾದಿ ಸಾವಯವ ವಸ್ತುಗಳ ಮೇಲೆ ಹುಲುಸಾಗಿ ಬೆಳೆಯುವುದರಿಂದ ಇಂತಹ ವಸ್ತುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಇವು ದನಕರುಗಳಿಗೆ ಅಷ್ಟೇನು ಪುಷ್ಟಿಕರ ಮೇವಲ್ಲ.ಅಣಬೆಗಳಲ್ಲಿ ತರಕಾರಿಗಳಿಗಿಂತ ಉತ್ತಮ ಪೌಷ್ಠಿಕಾಂಶಗಳಿರುವುದರಿಂದ ಕುಟುಂಬದ ಸಲುವಾಗಿ ಸಣ್ಣ ಪ್ರಮಾಣದಲ್ಲಿ ಬೆಳೆದು, ತಮ್ಮ ಆಹಾರದಲ್ಲಿನ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಬಹುದು.ಅಣಬೆ ಕೃಷಿಯನ್ನು ವೈಜ್ಞಾನಿಕವಾಗಿ ದೊಡ್ಡ ಪ್ರಮಾಣದಲ್ಲಿ ಕೈಗೊಂಡಲ್ಲಿ ಹೆಚ್ಚಿನ ವಿದೇಶಿ ವಿನಿಮಯಗೊಳಿಸಬಹುದಾಗಿದೆ. ಅಣಬೆ ಉದ್ದಿಮೆಯಲ್ಲಿ ರಸಾಯನಿಕ ಉದ್ದಿಮೆಗಳಂತೆ ಪರಿಸರ ಮಾಲಿನ್ಯವಿರುವುದಿಲ್ಲ.ಪಾಶ್ಚಿಮಾತ್ಯ ದೇಶಗಳಲ್ಲಿ ಔಷಧೀಯ ಅಣಬೆಗಳಿಗೆ ಬಹಳಷ್ಟು ಬೇಡಿಕೆಯಿರುವುದರಿಂದ, ಉತ್ತಮ ಸಂಶೋಧನೆಯಿಂದ ನಮ್ಮ ದೇಶದಲ್ಲಿರುವ ಇಂತಹ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.ನಮ್ಮ ರಾಜ್ಯದ ಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ಅನೇಕ ಜಾತಿಯ ಅಣಬೆಗಳ ಸ್ವಾಭಾವಿಕ ಸಂಪನ್ಮೂಲಗಳಿದ್ದು, ಅವುಗಳ ಬಗ್ಗೆ ಕೂಲಂಕುಷ ಅಧ್ಯಯನ ನಡೆಯಬೇಕಾಗಿದೆ. ಇಂತಹ ಅಧ್ಯಯನಗಳನ್ನು ಕೈಗೆತ್ತಿಕೊಂಡು, ಅಣಬೆಗಳ ಶೋಧನೆ ಸ್ವಾಭಾವಿಕವಾಗಿ ಲಭ್ಯವಿರುವ ಖಾದ್ಯ ಅಣಬೆಗಳ ಕೃಷಿಗೈಯುವ ಸಾಧ್ಯ ಅಸಾಧ್ಯತೆ ಹಾಗೂ ಕರ್ನಾಟಕ ರಾಜ್ಯ ಭೂಪಟದಲ್ಲಿ ಅಣಬೆಗಳ ನಿಕ್ಷೇಪಗಳನ್ನು ಗುರುತಿಸುವಂತ ಸಂಶೋಧನೆ, ಕೃಷಿ ವಿಶ್ವವಿದ್ಯಾನಿಲಯಗಳ, ಸಂಶೋಧನಾ ಸಂಸ್ಥೆಗಳ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ.

ಅಣಬೆಗಳ ವಿಧಗಳು

ಬದಲಾಯಿಸಿ

ಅಣಬೆಗಳಲ್ಲಿ ಖಾದ್ಯ ಅಣಬೆಗಳು ಮತ್ತು ವಿಷ ಅಣಬೆಗಳು ಎಂಬ ಎರಡು ವಿಧಗಳಿವೆ. ವಿಷ ಅಣಬೆಗಳು ತಿನ್ನಲು ಯೋಗ್ಯವಿರುವುದಿಲ್ಲ. ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕವಾಗಿವೆ. ಆದರೆ, ಖಾದ್ಯ ಅಣಬೆಗಳು ಪುಷ್ಟಿಕರ ಆಹಾರಾಂಶವನ್ನು ಹೊಂದಿದ್ದು, ರುಚಿಕರ ಮತ್ತು ಆರೋಗ್ಯಕರ ಭೋಜನಕ್ಕೆ ಅಮೂಲ್ಯ ತರಕಾರಿಗಳಾಗಿವೆ. ಮಳೆಗಾಲದ ದಿನಗಳಲ್ಲಿ ಕಾಡುಮೇಡುಗಳು ಮತ್ತು ಹೊಲಗದ್ದೆಗಳ ಬದುಗಳಲ್ಲಿ ಬೆಳೆಯುವ ಖಾದ್ಯ ಅಣಬೆಗಳನ್ನು ಪತ್ತೆ ಹಚ್ಚಿ ತಂದು ತರಕಾರಿಗಳಂತೆ ಉಪಯೋಗಿಸುವುದನ್ನು ಈಗಲೂ ಸಹ ನಮ್ಮ ರೈತ ಮಹಿಳೆಯರಲ್ಲಿ ವಾಡಿಕೆಯಲ್ಲಿದೆ. ಪ್ರತಿವರ್ಷ ಅಣಬೆಗಳು ಮೂಡುತ್ತಿದ್ದ ಜಾಗಕ್ಕೆ ಹೋಗಿ ಅಣಬೆಗಳನ್ನು ಹುಡುಕುವುದು ಇಂದಿಗೂ ಸತ್ಯಸಂಗತಿಯಾಗಿದೆ.ಸ್ವಾಭಾವಿಕವಾಗಿ ಅಣಬೆಗಳು ವಿವಿಧ ಬಣ್ಣ ಮತ್ತು ರಚನೆಗಳನ್ನು ಹೊಂದಿದ್ದು ಮಾನವನಲ್ಲಿ ಕುತೂಹಲ ಕೆರಳಿಸಿವೆ. ಅವುಗಳ ಈ ವಿಸ್ಮಯ ರೂಪವನ್ನು ಪ್ರಕೃತಿಯಲ್ಲಿ ನೋಡಲು ಬಹಳ ಸುಂದರ. ಆದರೆ, ಇಂತಹ ಅಣಬೆಗಳು ವಿಷಕಾರಕಗಳೆಂಬುದನ್ನು ಮರೆಯಬಾರದು. ಏಕೆಂದರೆ, ಬಹುತೇಕ ವರ್ಣರಂಜಿತ ಅಣಬೆಗಳು ವಿಷ ಅಣಬೆಗಳ ಗುಂಪಿಗೆ ಸೇರಿರುತ್ತವೆ. ಆದ್ದರಿಂದ, ಸ್ವಾಭಾವಿಕವಾಗಿ ಬೆಳೆಯುವ ಅಣಬೆಗಳನ್ನು, ಖಾದ್ಯ ಅಣಬೆಯೆಂದು ಖಚಿತವಾಗಿ ತಿಳಿಯದಿದ್ದಲ್ಲಿ ಉಪಯೋಗಿಸಬಾರದು. ಹಾಗೆಂದು ವರ್ಣ ರಂಜಿತ ಅಣಬೆಗಳೆಲ್ಲ ವಿಷ ಅಣಬೆಗಳೆಂದು ಹೇಳಲಾಗುವುದಿಲ್ಲ. ಏಕೆಂದರೆ ಕೆಲವು ಜಾತಿಯ ಬಣ್ಣದ ಅಣಬೆಗಳು ಸಹ ಖಾದ್ಯ ಅಣಬೆಗಳಾಗಿವೆ. ಉದಾಹರಣಗೆ ಬೋಲಿಟಸ್ ಮತ್ತು ಪ್ಲೋರೋಟಸ್ ಇಯಸ್ ಅಣಬೆಗಳು ಬಣ್ಣ ಹೊಂದಿದ್ದು ತಿನ್ನಲು ಯೋಗ್ಯವಾಗಿವೆ.[]

ಔಷಧಿಯ ಅಣಬೆಗಳು

ಬದಲಾಯಿಸಿ

ಅನೇಕ ಬಗೆಯ ಗಿಡಮೂಲಿಕೆಗಳಂತೆ ಶಿಲೀಂಧ್ರ ಜನಿತ ಔಷಧಿಗಳ ಬಳಕೆಯು ಮಾನವನಿಗೆ ತಿಳಿದಿತ್ತು. ದಿವ್ಯಾಔಷಧಿಗಳೆಂದು ಹೆಸರು ವಾಸಿಯಾದ ಪೆನಿಸಿಲಿನ್, ಇತ್ಯಾದಿ ಜೀವನಿರೋಧಕಗಳು. ಶಿಲೀಂಧ್ರ ಮತ್ತು ಇತರೆ ಸೂಕ್ಷ್ಮ ಜೀವಿಗಳಿಂದ ಸ್ರವಿಸುವ ರಸಾಯನಿಕಗಳಾಗಿದ್ದು ಅದೇ ಗುಂಪಿನ ಜೀವಾಣುಗಳಿಗೆ ಮಾರಕವಾಗಿವೆ. ಇದೇ ರೀತಿ ಹಲವು ಜಾತಿಯ ಅಣಬೆಗಳು ಸಹ ಔಷಧಿಯ ಮೌಲ್ಯಗಳನ್ನು ಹೊಂದಿದ್ದು ಅವುಗಳನ್ನು ಔಷಧಿಯಲ್ಲಿ ಬಳಸಲಾಗುತ್ತಿದೆ. ಆಹಾರ ಅಣಬೆಗಳು ಮತ್ತು ವಿಷ ಅಣಬೆಗಳು ಎರಡರಲ್ಲೂ, ಔಷಧಿಯ ಗುಣಗಳಿದ್ದು ಅವುಗಳನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ ಅನೇಕ ರೀತಿಯ ಅಣಬೆಗಳಿಂದ ಸಿದ್ಧಪಡಿಸಿದ ಔಷಧಿಗಳನ್ನು ಗುಳಿಗೆ, ಕ್ಯಾಪ್ಸೂಲ್ ಮತ್ತು ಸಿರಪ್ಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. 1991 ರಲ್ಲಿ ಜಗತ್ತಿನ ಅಣಬೆ ಉತ್ಪತ್ತಿಯನ್ನು ಮೌಲ್ಯವನ್ನು 8.5 ಬಿಲಿಯನ್ ಡಾಲರುಗಳಷ್ಟು ಅಂದಾಜು ಮಾಡಲಾಗಿದ್ದು, ಅದೇ ವರ್ಷ 1.2 ಬಿಲಿಯನ್ ಡಾಲರ್ಗಳಷ್ಟು ಔಷಧಿಯ ಅಣಬೆಗಳಿಂದಲೇ ಉತ್ಪತ್ತಿಯಾಗಿದೆಯೆಂದೂ ಸಹ ಅಂದಾಜು ಮಾಡಲಾಗಿದೆ. ಗ್ಯಾನೋಡರ್ಮ ಲುಸಿಡಮ್ ಎಂಬುದು ಪ್ರಮುಖ ಔಷಧಿಯ ಅಣಬೆಯಾಗಿದೆ.

ಅಗ್ಯಾರಿಕಸ್ ಕಂಪೆಸ್ಟ್ರಿಸ್ ಅಣಬೆ

ಬದಲಾಯಿಸಿ

ಭಾರತದಲ್ಲಿ ಎಲ್ಲೆಡೆಯೂ ಹರಡಿದೆ. ಮಳೆಗಾಲದಲ್ಲಿ ಕೊಳೆತ ಸಾವಯವ ವಸ್ತುಗಳ ಮೇಲೆ ಬೆಳೆಯುತ್ತದೆ. ಗಿಡದ ಹಣ್ಣಿನ ಭಾಗ ಬಿಳುಪಾಗಿದ್ದು ಅದಕ್ಕೊಂದು ತೊಟ್ಟಿದ್ದು ಅದರ ಮೇಲೆ ಟೋಪಿಯಾಕಾರದ ವಸ್ತುವಿರುತ್ತದೆ. ಅದರ ವ್ಯಾಸ ಸುಮಾರು ೫-೧೦ಸೆಂ.ಮೀ. ಇರುತ್ತದೆ. ಟೋಪಿಯ ಕೆಳಭಾಗದಲ್ಲಿ ಗಿಲ್ಲುಗಳಿವೆ. ಅವು ಎಳೆಯದಾಗಿರುವಾಗ ಬೆಳ್ಳಗಿದ್ದು ಬೆಳೆಯುತ್ತ ಹೋದಂತೆ ಕಂದುಬಣ್ಣಕ್ಕೆ ತಿರುಗುತ್ತವೆ. ಈ ಅಣಬೆ ಕೃತಕ ವಾತಾವರಣದಲ್ಲಿ ಬೆಳೆಸಲು ಬಹಳ ಯೋಗ್ಯವಾಗಿದೆ. ಅಗ್ಯಾರಿಕಸ್ ಕಂಪೆಸ್ಟ್ರಿಸ್ ನಲ್ಲಿ ಅಮೈಲೇಸ್,ಮಾಲ್ಟೇಸ್,ಪ್ರೊಟಿಯೇಸ್,ಕ್ಯಾಟಲೇಸ್,ಟೈರೋಸಿನೇಸ್,ಪಾಲಿಫಿನಾಕ್ಸಿಡೇಸ್ ಮುಂತಾದ ಅನೇಕ ಎನಜೈಮ್ ಗಳಿರುತ್ತವೆ.

ವಲ್ವಾರಿಯಾ ಡಿಪ್ಲೇಸಿಯ ಅಣಬೆ

ಬದಲಾಯಿಸಿ

ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.೬-೧೨ಸೆಂ.ಮೀ. ಗಳಿರುವ ಇದರ ತೊಟ್ಟು ಬೆಳ್ಳಗಿರುತ್ತದೆ.ಬುಡದ ಭಾಗದಲ್ಲಿ ದಪ್ಪವಾಗಿ ಊದಿಕೊಂಡಿರುವ ಟೋಪಿ ಗುರಾಣಿಯಂತಿದ್ದು,ಅಂಚು ನುಲಿನುಲಿಕೆಯಾಗಿರುತ್ತದೆ. ಹೊರಮೈ ನವಿರಾಗಿರುವ ಈ ಅಣಬೆ ತಿನ್ನಲು ಬಹು ರುಚಿಯಾಗಿರುತ್ತದೆ. ಕೃತಕ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ಕೊಳೆತ ಹುಲ್ಲು ಮೇಲೆ ಬೆಲೆಯುತ್ತದೆ. ಇದನ್ನು ಬೆಳೆಸಬೇಕಾದರೆ, ಮೊದಲು ಅಂಡಗಳ ಸಮೂಹವನ್ನು ನಿಯಂತ್ರಿತ ವಾತಾವರಣದಲ್ಲಿ ಉಷ್ಣಾಂಶದಲ್ಲಿ ಅಗಾರ್-ಅಗಾರ್ ದ್ರಾವಣದಲ್ಲಿ ಬೆಳೆಸಿದ ಅನಂತರ ಪಾತಿಯಲಿ ಬಿತ್ತಬೇಕು. ಈ ಪಾತಿಯನ್ನು ಭತ್ತದ ಹುಲ್ಲಿನೊಂದಿಗೆ ಒಂದು ದಿನವೆಲ್ಲ ನೆನೆಸಿ ಅದರ ಮೇಲೆ ದಾಲ್ ಚಿಮುಕಿಸಿ ಒಂದೊಂದು ಎಳೆಯಾಗಿ ಹುಲ್ಲನ್ನು ಮುಚ್ಚಬೇಕು. ಹೀಗೆ ೩-೪ ಪದರಗಳನ್ನು ಒಂದರ ಮೇಲೊಂದು ಇಟ್ಟ ಅನಂತರ,ಹುಲ್ಲನ್ನು ಉಪಕರಣಗಳಿಂದ ಒತ್ತಬೇಕು. ಈ ರೀತಿ ಪಾತಿಯನ್ನು ಮಾಡಿ ಅದಕ್ಕೆ ಪ್ರತಿದಿನವೂ ಎರಡುಬಾರಿ ನೀರು ಹಾಕಬೇಕು. ೧೫-೨೦ ದಿನಗಳ ಅನಂತರ ಅಣಬೆಗಳು ಕಾಣಿಸಿಕೊಳ್ಳುತ್ತವೆ.

ಪೊಮೆಂಟಾರಿಯಸ್ ಮತ್ತು ಗ್ಯಾನೋಡೆರ್ಮಾ ಅಪುಲಾಟೂಸ್ ಅಣಬೆಗಳು

ಬದಲಾಯಿಸಿ

ಇದಲ್ಲದೆ ಫೋಮ್ಸ್ ಪೊಮೆಂಟಾರಿಯಸ್ ಮತ್ತು ಗ್ಯಾನೋಡೆರ್ಮಾ ಅಪುಲಾಟೂಸ್ ಎಂಬ ಅಣಬೆಗಳನ್ನು ಉಡುಪು ಮತ್ತು ಆಟಿಕೆಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಪಾಲಿಪೋರಸ್ ಸ್ಕಾಮೋಸ ಎಂಬ ಅಣಬೆಯಿಂದ ಬಾಟಲ್ಗಳ ಮುಚ್ಚಳಗಳನ್ನು ತಯಾರಿಸಬಹುದು. Poಟಥಿಠಿoಡಿus gisಠಿiಜus ಎಂಬ ಅಣಬೆಯಿಂದ ಕಂದು ರಸವನ್ನು ತೆಗೆದು, ರೇಷ್ಮೆ, ಹತ್ತಿ ಮತ್ತು ಉಣ್ಣೆ ಬಟ್ಟೆಗಳಿಗೆ ಬಣ್ಣಹಾಕಲು ಉಪಯೋಗಿಸುತ್ತಾರೆ. ಪಾಲಿಪೋರಸ್ ಪೋಮೆಂಟಾರಿಯಸ್ ಮತ್ತು ಪಾಲಿಪೋರಸ್ ಇಗ್ನೇರಿಯಸ್ ಎಂಬ ಅಣಬೆಗಳು ಆಕರ್ಷಿತ ಅಂಗರಚನೆ ಹೊಂದಿದ್ದು ಅವುಗಳನ್ನು ಹೂದಾನಿಗಳಲ್ಲಿ ಬಳಸಲಾಗುತ್ತಿದೆ. ಕೆಲವು ಅಣಬೆಗಳಿಗೆ ಬೆಳಕು ಚಿಮ್ಮುವ ಸಾಮಥ್ರ್ಯವಿರುವುದರಿಂದ ವಿಜ್ಞಾನಿಗಳೂ ಹಾಗೂ ಶಿಲೀಂಧ್ರ ತಜ್ಞರನ್ನು ಗಾಢವಾಗಿ ಆಕರ್ಷಿಸಿವೆ.ಇದುವರೆಗೂ, ಸುಮಾರು 2000 ಖಾದ್ಯ ಅಣಬೆಗಳನ್ನು ಗುರುತಿಸಿದ್ದು, ಕೇವಲ 20 ಪ್ರಭೇದಗಳನ್ನು ಕೃಷಿ ಮಾಡಲಾಗುತ್ತಿದೆ. ಭಾರತದಲ್ಲಿ ಸದ್ಯಕ್ಕೆ ಕೃಷಿಯಲ್ಲಿರುವ ಮುಖ್ಯ ಅಣಬೆಗಳೆಂದರೆ, ಗುಂಡಿ, ಅಣಬೆ, ಚಿಪ್ಪಣಬೆ, ಭತ್ತದಹುಲ್ಲಿನ ಅಣಬೆ, ಶಿಟಾಕೆ ಅಣಬೆ, ಅರಿಕ್ಯುಲೇರಿಯಾ ಅಣಬೆ ಇತ್ಯಾದಿಗಳು.

ವಿಷಕಾರಿ ಅಣಬೆಗಳು

ಬದಲಾಯಿಸಿ

ಅಮಾನಿಟ ಫೆಲ್ಲಾಯ್ ಡಿಸ್

ಬದಲಾಯಿಸಿ

ಅಮಾನಿಟ ಫೆಲ್ಲಾಯ್ ಡಿಸ್ ಎಂಬ ಅಣಬೆ ಅತ್ಯಂತ ಅಪಾಯಕಾರಿ.೯೦% ರಷ್ಟು ಸಾವುಗಳಿಗೆ ಈ ಅಣಬೆ ಕಾರಣವಾಗಿದೆ. ಇದಕ್ಕೆ ಬೆಳ್ಳಗಿರುವ ತೊಟ್ಟಿದ್ದು , ದೊಡ್ಡ ಹಸಿರು ಮಿಶ್ರಿತ ಬಿಳುಪಿನ ವೃತ್ತಾಕಾರದ ಟೋಪಿಯಿದ್ದು ಅದರಲ್ಲಿರುವ ಪದರಗಳು ಎಳೆಯದಾಗಿರುವಾಗ ಬೆಳ್ಳಗಿದ್ದು ಅನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ವಿಷಕಾರಿ ಅಣಬೆಯಾಗಿರುವುದು ಇದರಲ್ಲಿರುವ ಫೆಲ್ಲಾಡಿನ್ ಮತ್ತು ಅಮಾನಿಟೀನ್ ಎಂಬ ರಾಸಾಯನಿಕ ವಸ್ತುಗಳಿಂದ. ಈ ಅಣಬೆಯನ್ನು ಸೇವಿಸಿದಾಗ ಹೊಟ್ಟೆನೋವು,ವಾಂತಿ,ಭೇದಿ,ವಿಪರೀತ ಬಾಯಾರಿಕೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೇವಿಸಿದ ಅನಂತರ ೬-೪೦ ಗಂಟೆಯೊಳಗೆ ರೋಗಲಕ್ಷಣಗಳು ಕಾಣಿಸಿಕೊಂಡು ೪-೫ ದಿನಗಳಲ್ಲಿ ಸಾವು ಸಂಭವಿಸುತ್ತದೆ. ತಿಂದವರು ಗುಣಮುಖವಾಗುವುದು ಅಪರೂಪ.

ಅಮಾನಿಟ ಮ್ಯಾಕ್ಸೆರಿಯಾ

ಬದಲಾಯಿಸಿ

ಅಮಾನಿಟ ಮ್ಯಾಕ್ಸೆರಿಯಾ ಎಂಬ ಮತ್ತೊಂದು ಅಣಬೆಯೂ ವಿಷಯುಕ್ತವಾದದು. ಸಾಮಾನ್ಯವಾಗಿ ಕಪ್ಪು ಬಣ್ಣದ್ದಾಗಿದ್ದು ,ಹಳದಿ ಎಲೆಗಳನ್ನು ಹೊಂದಿದೆ. ಬಿಳಿಯ ಪದರಗಳೂ ಅವುಗಳ ಮೇಲೆ ಹಳದಿ ಚುಕ್ಕೆಗಳೂ ಇವೆ;ಅವಕ್ಕೆ ಸೂಕ್ಷ್ಮವಾದ ಹಲ್ಲುಗಳಿವೆ. ಹಿಂದೆ ಈ ಅಣಬೆಯನ್ನು ರಷ್ಯದಲ್ಲಿ ಮಾದಕ ವಸ್ತುವನ್ನು ತಯಾರಿಸಲು ಉಪಯೋಗಿಸುತ್ತಿದ್ದರು. ಯೂರೋಪಿನ ಹಲವು ದೇಶಗಳಲ್ಲೂ ರಷ್ಯದಲ್ಲೂ ತಿಗಣೆ,ಕ್ರಿಮಿ ಮುಂತಾದುವುಗಳನ್ನು ಕೊಲ್ಲಲು ಇದನ್ನು ಕ್ರಿಮಿನಾಶಕವಾಗಿ ಉಪಯೋಗಿಸುವರು. ಅಮಾನಿಟ ಪಾಂತರೀನ,ರುಸುಲಾ ಎಮೆಟಿಕಾ,ಗೈರೊ ಮಿತ್ರ ಎಸ್ ಕ್ಯುಲೆಂಟಾ,ಸ್ಟ್ರೊಫೆರಿಯಾ ಸೆಮಿಗ್ಲೊಬೆಲಾ,ಲಾಕ್ಟೇರಿಯಸ್ ವೆಲ್ಲಾರಿಸ್,ಲೆಪಿಯೋಟಾ ಎರಿಸ್ ಟೇಟ,ಮಾರಸ್ಮಿಯಸ್ ಯರೆನ್ಸ್-ಇವು ವಿಷಕಾರಿ ಅಣಬೆಗಳು.

ಕಿವಿರುಗಳ ಅಣಬೆಗಳು

ಬದಲಾಯಿಸಿ

ಈ ಅಣಬೆಗಳು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುತ್ತವೆ. ಕೊಡೆಯಾಕಾರದಲ್ಲಿರುವುದರಿಂದ ಇವುಗಳನ್ನು ನಾಯಿಕೊಡೆಗಳೆಂದು ಕರೆಯುವುದುಂಟು. ಅಗ್ಯಾರಿಕೇಲ್ಸ್ ವರ್ಗಕ್ಕೆ ಸೇರಿದ ಈ ಅಣಬೆಗಳ ಬಾಹ್ಯರೂಪವನ್ನು ಕೊಡೆ, ಕಾಂಡ, ಕಿವಿರು ಮುಂತಾದ ಭಾಗಗಳಾಗಿ ವಿಂಗಡಿಸಬಹುದು. ಕೆಲವು ಜಾತಿಯ ಅಣಬೆಗಳ ತಳದಲ್ಲಿ ಬಟ್ಟಲಾಕಾರದ ರಚನೆಯಿದ್ದು ಅದನ್ನು ಕಪ್ ಎಂದು ಕರೆಯಲಾಗುತ್ತದೆ. ಇನ್ನು ಕೆಲವು ಅಣಬೆಗಳ ಕಾಂಡದ ಮೇಲೆ ಉಂಗುರಾಕಾರದ ಪೊರೆಯಿದ್ದು ಇದಕ್ಕೆ ಉಂಗುರ ಅಥವಾ ಅನ್ಯುಲಸ್ ಎಂದು ಹೆಸರು. ಇವುಗಳ ಬೀಜೋತ್ಪತ್ತಿಯ ಕಿವಿರುಗಳ ಪದರಿನೊಳಗಿರುವ ಬೆಸಿಡಿಯಂ ಮೇಲೆ ಆಗುತ್ತದೆ. ಅಗ್ಯಾರಿಕಸ್ ಬೈಸ್ಟೋರಸ್, ಅಗ್ಯಾರಿಕಸ್ ಬೈಟಾರ್ಕಿಸ್ ಎಂಬುವು ಪ್ರಮುಖ ಖಾದ್ಯ ಅಣಬೆಗಳಾಗಿವೆ. ಹಾಗೂ ಇದೇ ವರ್ಗದ ಅಮ್ಯಾನಿಟಾ ಜಾತಿಯ ಅಣಬೆಗಳು ಪ್ರಮುಖವಾಗಿ ವಿಷ ಅಣಬೆಗಳಾಗಿವೆ. ಕೊಡೆಯಲ್ಲಿ ಕಿವಿರಿಲ್ಲದ ಅಣಬೆಗಳು : ಈ ರೀತಿಯ ಅಣಬೆಗಳ ಕೊಡೆಯ ತಳಭಾಗದಲ್ಲಿ ಜೇನುಗೂಡಿನಂತಹ ಕೊಳವೆ ರಂಧ್ರಗಳಿರುತ್ತವೆ. ಈ ರಂಧ್ರಗಳಲ್ಲಿ ಬೆಸಿಡಿಯೋ ಸ್ಪೋರ್ ಎಂಬ ಬೀಜಾಣುವು ಉತ್ಪತ್ತಿಯಾಗುತ್ತವೆ ಹಾಗೂ ಅಣಬೆಗಳು ಜಿಗುಟಾಗಿರುತ್ತವೆ. ಬೋಲಿಟಸ್ ಜಾತಿಯ ಅಣಬೆಗಳು ಇದಕ್ಕೆ ಉದಾಹರಣೆಗಳಾಗಿವೆ.

ಭೂ ಚೆಂಡುಗಳು

ಬದಲಾಯಿಸಿ

ಇವು ಚೆಂಡಿನಾಕಾರದ ಮೇಲ್ಮೈ ರಚನೆ ಹೊಂದಿದ್ದು, ಹಳದಿ, ಮಾಸಲು ಬಿಳಿ ಇತ್ಯಾದಿ ಬಣ್ಣಗಳಿಂದ ಕೂಡಿರುತ್ತವೆ. ಇವು ದಪ್ಪವಾದ ಹೊರಪದರ ಹೊಂದಿದ್ದು, ಬೀಜೋತ್ಪತ್ತಿ ಒಳಗಡೆಯೇ ನಡೆಯುತ್ತದೆ. ಕಾಡಿನಲ್ಲಿ ಪ್ರಾಣಿಗಳು ಇವುಗಳನ್ನು ತುಳಿದಾಗ ಮತ್ತು ಕೆಲವೊಮ್ಮೆ ಒತ್ತಡದಿಂದ ಬೀಜಗಳು ತಾವಾಗಿಯೇ ಹೊರಚಿಮ್ಮಿ ಬೀಜ ಪ್ರಸಾರವಾಗುತ್ತದೆ. ಭೂ ಚೆಂಡುಗಳು ಇತರೆ ಅಣಬೆಗಳಿಗಿಂತ ಭಿನ್ನವಾಗಿದ್ದು, ಶಿಲೀಂಧ್ರ ವರ್ಗೀಕರಣದಲ್ಲಿ ಗ್ಯಾಸ್ಟ್ರೊಮೈಸೆಟ್ಸ್ ವರ್ಗಕ್ಕೆ ಸೇರಿವೆ. ಇವುಗಳಲ್ಲಿಯೂ ಸಹ ಸಾಮಾನ್ಯ ಅಣಬೆಗಳಂತೆ ಬೇರೆ ಬೇರೆ ಜಾತಿಗಳಿದ್ದು, ಅವುಗಳಲ್ಲಿ ಕ್ಯಾಲ್ವೇಸಿಯಾ ಜಿಂಗಾಂಸಿಯಾ ಎನ್ನುವುದು ಜಗತ್ತಿನಲ್ಲಿ ಅತಿದೊಡ್ಡ ಭೂಚೆಂಡು (ಅಣಬೆ) ಎಂದು ವರದಿಯಾಗಿದೆ. (ಗಿನ್ನಿಸ್ ದಾಖಲೆ 1991).ಭೂ ನಕ್ಷತ್ರಗಳು : ಈ ಶಿಲೀಂಧ್ರಗಳು ಸಹ ಗ್ಯಾಸ್ಟ್ರೋ ಮೈಸೆಟ್ಸ್ ಗುಂಪಿಗೆ ಸೇರಿವೆ. ಇವು ಭೂಮಿಯ ಮೇಲೆ ನಕ್ಷತ್ರಾಕಾರವಾಗಿ ಅರಳುವುದರಿಂದ ಈ ಹೆಸರು ಬಂದಿದೆ. ಇವುಗಳ ಹೊರಪದರ ಬಿಚ್ಚಿ ನಕ್ಷತ್ರಗಳಂತೆ ಅರಳುತ್ತದೆ ಮತ್ತು ಒಳಗಿನ ಪೊರೆ ಮುಚ್ಚಿದ್ದು ಒಂದು ಅಥವಾ ಹೆಚ್ಚಿನ ರಂಧ್ರಗಳಿರುತ್ತವೆ. ಈ ರಂಧ್ರಗಳು ಬೀಜಾಣುಗಳು ಹೊರಬರಲು ಸಹಾಯ ಮಾಡುತ್ತವೆ.

ಹಕ್ಕಿ ಗೂಡಿನ ಅಣಬೆ

ಬದಲಾಯಿಸಿ

ಇವು ಸಹ ಗ್ಯಾಸ್ಟ್ರೋ ಮೈಸೆಟ್ಸ್ ವರ್ಗಕ್ಕೆ ಸೇರಿವೆ. ಇವುಗಳ ಬಟ್ಟಲಾಕಾರದ ಆವರಣದಲ್ಲಿ ಮೊಟ್ಟೆಗಳಂತಹ ಪೆರಿಡಿಯೋಲ್ಗಳಿರುತ್ತವೆ. ಈ ಪೆರಿಡಿಯೋಲ್ಗಳು ಹಕ್ಕಿಗಳು ಗೂಡಿನಲ್ಲಿಟ್ಟ ಮೊಟ್ಟೆಗಳಂತೆ ಕಾಣುತ್ತವೆ. ಆದ್ದರಿಂದ ಇವುಗಳಿಗೆ ಹಕ್ಕಿ ಗೂಡಿನ ಅಣಬೆ ಎಂದು ಕರೆಯಲಾಗಿದೆ.ಬಟ್ಟಲು ಅಣಬೆ : ಇವು ಡಿಸ್ಕೋಮೈಸೆಟ್ಸ್ ವರ್ಗಕ್ಕೆ ಸೇರಿವೆ. ಬಟ್ಟು ಅಣಬೆಗಳು ಬೋಗುಣಿಯಾಕಾರದಲ್ಲಿದ್ದು, ಜಿಗುಟಾಗಿರುತ್ತವೆ ಮತ್ತು ವಿವಿಧ ಬಣ್ಣಗಳನ್ನು ಹೊಂದಿರುತ್ತವೆ.ಸ್ವಿಂಕ್ ಹಾರ್ನ್ ಶಿಲೀಂಧ್ರಗಳು : ಈ ಗುಂಪಿನ ಅಣಬೆಗಳು ಸಾಮಾನ್ಯವಾಗಿ ಕೆಟ್ಟ ವಾಸನೆಯಿಂದ ಕೂಡಿದ್ದು, ಈ ಹೆಸರು ಬಂದಿದೆ. ಇವು ಕೊಳೆತ ಸಾವಯವ ವಸ್ತುಗಳ ಮೇಲೆ ಬೆಲೆಯುತ್ತವೆ. ಈ ಗುಂಪಿನ ಕೆಲವು ಅಣಬೆಗಳ ಅಂಗ ರಚನೆಗಳು ಎಲೆ ಅಥವಾ ಪುಷ್ಪ ದಳಗಳ ಹೋಲಿಕೆಯನ್ನು ಹೊಂದಿದ್ದು, ಬಗೆ ಬಗೆಯ ಬಣ್ಣಗಳಿಂದ ಕೂಡಿರುತ್ತವೆ. ಆದ್ದರಿಂದ ಇವುಗಳನ್ನು ಶಿಲೀಂಧ್ರ ಪುಷ್ಪಗಳೆಂದು ಕರೆಯುವುದುಂಟು. ಈ ಗುಂಪಿನ ಒಂದು ಅಣಬೆಗೆ ಬಲೆಯಾಕಾರದ ಮುಸುಕಿದ್ದು ಇದನ್ನು ಕನ್ಯಾಸ್ತ್ರಿ ಎಂದು ಕರೆಯಲಾಗುತ್ತದೆ.

ಮಾರೆಲ್ಗಳು

ಬದಲಾಯಿಸಿ

ಈ ಅಣಬೆಗಳು ಅಸ್ಕೊಮೈಸಿಟಸ್ ವರ್ಗದಲ್ಲಿ ಡಿಸ್ಕೊಮೈಸೆಟ್ಸ್ ಗುಂಪಿಗೆ ಸೇರಿವೆ. ಇವುಗಳ ಮೇಲ್ಮೈ ಸ್ಪಂಜುಗಳಂತಿದ್ದು ಗದೆಯಾಕಾರದ ಸುಕ್ಕಲುಗಟ್ಟಿದ ರೀತಿಯ ತಲೆಯನ್ನು ಹೊಂದಿದೆ. ಈ ಗುಂಪಿನಲ್ಲಿ ಮಾರ್ಬೆಲ್ಲಾ ಎಸ್ಕುಲೆಂಟಾ ಎಂಬ ಅಣಬೆ ತುಂಬಾ ರುಚಿಕರವಾದ ಖಾದ್ಯ ಅಣಬೆಯಾಗಿದ್ದು, ಬ್ರಿಟನ್ ದೇಶದ ಅತ್ಯಂತ ಬೆಲೆಬಾಳುವ ಮತ್ತು ಹೆಸರುವಾಸಿಯಾದ ಅಣಬೆಯಾಗಿದೆ. ಭಾರತದ ಹಿಮಾಚಲ ಪ್ರದೇಶದಲ್ಲಿ ಇದು ದೊರೆಯುತ್ತದೆ. ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ಇದನ್ನು ಶೋಧನೆ ಮಾಡಬೇಕಾಗಿದೆ.ಅಣಬೆಯ ರಚನಾಂಗಗಳು : ಸಾಮಾನ್ಯ ಅಣಬೆಯು ಸಂಪೂರ್ಣವಾಗಿ ಬಲಿತಾಗ, ಅದನ್ನು 4 ಭಾಗಗಳಾಗಿ ವಿಂಗಡಿಸಬಹುದು. ಕೊಡೆ ಅಥವಾ ತಲೆ, ಕಾಂಡ, ಕಾಂಡದ ಸುತ್ತಲೂ ಕಾಣುವ ಉಂಗುರ, ಬಟ್ಟಲು ಇವುಗಳು. ಈ ಭಾಗಗಳಲ್ಲಿ ಕೆಲವು ಅಂಗಗಳು ಕೆಲವು ಅಣಬೆಯಲ್ಲಿ ಇರುವುದಿಲ್ಲ. ಕೆಲವು ಅಣಬೆಗಳಲ್ಲಿ ಪೂರ್ಣವಾಗಿರುತ್ತವೆ. ಇದ್ದಾಗ ಅವು ವಿವಿಧ ಆಕಾರದಲ್ಲಿ ಇರಬಹುದು. ಎಲ್ಲಾ ರೀತಿಯ ಅಣಬೆಯಲ್ಲೂ ಇವು ಒಂದೇ ರೀತಿಯಾಗಿರುವುದಿಲ್ಲ. ಉದಾಹರಣೆಗೆ, ತಲೆಯು (ಕೊಡೆ) ಮೇಲಕ್ಕೆ ಬಾಗಿರಬಹುದು, ಕೆಲವರಲ್ಲಿ ಕಾಂಡವಿಲ್ಲದೇ ಇರಬಹುದು, ಕೆಲವು ಅಣಬೆಗಳಲ್ಲಿ ತಳದಲ್ಲಿಯ ಬಟ್ಟಲು ಇರುವುದಿಲ್ಲ, ಕೆಲವುಗಳಲ್ಲಿ ಕೊಡೆ ಗಂಟೆಯಾಕಾರವಿರಬಹುದು. ಈ ರೀತಿಯ ವಿಶಿಷ್ಟ ಲಕ್ಷಣಗಳು ಅಣಬೆಗಳನ್ನು ಯಾವ ಗುಂಪಿಗೆ ಸೇರಿರುತ್ತವೆಂದು ಗುರುತಿಸಲು ಸಹಾಯಕವಾಗಿವೆ.

ಇದು ಕೊಡೆಯಾಕಾರದ, ಹೊರಹೊಮ್ಮಿದ ಅಣಬೆಯ ಭಾಗ, ಇದು ದಪ್ಪವಾಗಿ, ರಸಭರಿತವಾಗಿ ಅಥವಾ ದಪ್ಪಪೊರೆಯಂತೆ ಅಥವಾ ಜಿಗುಟಾಗಿರಬಹುದು. ಇದರ ಆಕಾರಗಳು ಬೇರೆ ಬೇರೆ ಅಣಬೆಗಳಲ್ಲಿ ಬೇರೆ ಬೇರೆಯಾಗಿರುತ್ತವೆ. ಗಾತ್ರ ಮತ್ತು ಬಣ್ಣಗಳು ಸಹ ವ್ಯತ್ಯಾಸವನ್ನು ಹೊಂದಿರುತ್ತವೆ. ಇದರ ಮೇಲ್ಮೈ ಪದರ, ಮೆತ್ತೆಯಾಗಿರಬಹುದು ಅಥವಾ ಒರಟಾಗಿಯೂ ಇರಬಹುದು ಮತ್ತು ಕೆಲವು ಅಣಬೆಗಳಲ್ಲಿ ಹುರುಕಾದಂತೆ ಇರುತ್ತದೆ. ಇದರ ತಳಭಾಗದಲ್ಲಿ ನೆರಿಗೆಯಾಕಾರದ ಕಿವಿರುಗಳಿದ್ದು ಅವುಗಳೊಳಗೆ ಬೀಜಾಣುಗಳು ಉತ್ಪತ್ತಿಯಾಗುತ್ತವೆ.ಕಿವಿರುಗಳು : ತಲೆಯ ಕೆಳಭಾಗದಲ್ಲಿರುವ ನೆರಿಗೆಯಂತಹ ಜೋಡಣೆಗೆ ಕಿವಿರುಗಳೆಂದು ಕರೆಯುತ್ತೇವೆ. ಅವು ಕಾಂಡದಿಂದ ಪ್ರಾರಂಭವಾಗಿ ಕೊಡೆಯ ತುದಿಯವರೆಗೂ ನೇರವಾಗಿ ಬೆಳೆದಿರುತ್ತವೆ. ಈ ಕಿವಿರುಗಳ ಒಳಭಾಗದ ಮೇಲ್ಮೈನಲ್ಲಿ ಬೀಜಾಣು ಉತ್ಪತ್ತಿಯಾಗುತ್ತವೆ. ಇದರಿಂದ ಅವುಗಳ ಬಣ್ಣವು ಸಹ ಬೀಜಾಣುಗಳ ಬಣ್ಣಕ್ಕೆ ಸರಿಯಾಗಿ ಬದಲಾಗುತ್ತವೆ. ಉದಾ: ಅಗ್ಯಾರಿಕಸ್ ಬೈಸ್ಪೋರಸ್ ಅಣಬೆ ಚಿಕ್ಕದಿದ್ದಾಗ, ಕಿವಿರಿನ ಬಣ್ಣ ನಸುಗೆಂಪು ಬಣ್ಣವಾಗಿದ್ದು ಅದು ಬಲಿತಂತೆ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಕಿವಿರುಗಳು ವಿವಿಧ ಜಾತಿಯ ಅಣಬೆಗಳಲ್ಲಿ ಬೇರೆ ಬೇರೆ ವಿಧವಾಗಿ ಕಾಂಡಕ್ಕೆ ಅಂಟಿಕೊಂಡಿರುತ್ತವೆ. ಮತ್ತು ಕಿವಿರಿನ ಕೆಳಭಾಗದ ಆಕಾರದಲ್ಲಿಯೂ ಸಹ ಒಂದು ಗುಂಪಿನ ಅಣಬೆಗೂ ಇನ್ನೊಂದು ಗುಂಪಿನ ಅಣಬೆಗೂ ವ್ಯತ್ಯಾಸವನ್ನು ಕಾಣಬಹುದು. ಈ ವ್ಯತ್ಯಾಸಗಳು ಅಣಬೆಗಳ ವರ್ಗಗಳನ್ನು ಗುರುತಿಸುವಲ್ಲಿ ಸಹಾಯವಾಗುತ್ತವೆ. ಉದಾಹರಣೆಗೆ ಕಿವಿರುಗಳು ಅಣಬೆಯ ಕಾಂಡಕ್ಕೆ ಮುಟ್ಟದೇ ಇದ್ದಲ್ಲಿ ಅದನ್ನು ಫ್ರೀ ಕಿವಿರುಗಳೆಂದು, ಅವುಗಳು ನೇರವಾಗಿ ಕಾಂಡಕ್ಕೆ ಸೇರಿಕೊಂಡಿದ್ದಲ್ಲಿ ಅವುಗಳಿಗೆ ಅಡ್ನೇಟ್ ಎಂದೂ, ಹಾಗೂ ಪಾಶ್ರ್ವವಾಗಿ ಸೇರಿಕೊಂಡಿದ್ದಾರೆ (ಒಂದು ಬದಿ ಮಾತ್ರ) ಅಂತಹವನ್ನು ಅಡ್ನೆಕ್ಸೆಡ್ ಕರೆಯಲಾಗುತ್ತದೆ. ಕಿವಿರುಗಳು ಕಾಂಡದುದ್ದಕ್ಕೂ (ಚಿಪ್ಪಣಬೆಯಲ್ಲಿದ್ದಂತೆ) ಬೆಳೆದಿದ್ದಾಗ ಅವುಗಳನ್ನು ಡಿಕರೆಂಟ್ ಎಂದೂ, ಅವು ಕಾಂಡದ ಬದಿಯಲ್ಲಿ ಕತ್ತರಿಸಿದಂತಿದ್ದಲ್ಲಿ ಸಿನುಯೇಟ ಎಂತಲೂ ಕರೆಯಲಾಗುತ್ತದೆ. ಕಿವಿರುಗಳು ಕೆಲವು ಅಣಬೆಗಳಲ್ಲಿ ಗರಗಸದ ಹಲ್ಲುಗಳಂತಿದ್ದರೆ ಅವುಗಳನ್ನು ಸೆರ್ರೇಟ್ ಎಂದು ಕರೆಯಲಾಗುತ್ತದೆ.

ಮುಸುಕು ಅಥವಾ ವೇಲ್

ಬದಲಾಯಿಸಿ

ಫಲೋತ್ಪಾದಕ ಎಳೆ ಅಣಬೆಗಳಲ್ಲಿ ಕಿವಿರುಗಳು ಹೊರ ಪೊರೆಯ ಅಂಗಾಂಶವೊಂದರಿಂದ ಸಂಪೂರ್ಣವಾಗಿ ಆವರಿಸಲ್ಪಟ್ಟಿರುತ್ತವೆ. ಇದನ್ನು ವೇಲ್ ಅಥವಾ ಮುಸುಕು ಎಂದು ಕರೆಯುತ್ತೇವೆ. ಈ ಮುಸುಕು ಕ್ರಮೇಣವಾಗಿ ಅಣಬೆ ಬಲಿತ ನಂತರ ಹರಿದು ಹೋಗಿರುತ್ತದೆ. ಇದರಲ್ಲಿ ಸ್ವಲ್ಪಭಾಗ ಅಣಬೆಯ ಕೊಡೆಯಲ್ಲಿ ಅಂಟಿಕೊಂಡಿದ್ದು ಉಳಿದ ಭಾಗವು ಕಾಂಡದ ಮೇಲೆ ಉಂಗುರವಾಗಿ ಮಾರ್ಪಾಡಾಗುತ್ತದೆ. ಈ ಉಂಗುರವು ತುಂಬಾ ಸೂಕ್ಷ್ಮವಾಗಿರುತ್ತದೆ.ಕಾಂಡ : ಇದು ಕೊಡೆಗೆ ಆಧಾರವನ್ನು ಕೊಡುತ್ತದೆ. ಇದು ಕೆಲವು ಅಣಬೆಗಳಲ್ಲಿ ಇರುವುದಿಲ್ಲ (ಉದಾ: ಚಿಪ್ಪಣಬೆ) ಹಾಗೂ ತಲೆಗೆ ಬೇರೆ ಬೇರೆ ಕೋನದಲ್ಲಿ ಸೇರಿಕೊಂಡಿರುತ್ತದೆ. ಸಾಮಾನ್ಯವಾಗಿ ಇದು ಕೊಡೆಯ ಮಧ್ಯೆಯಿರುತ್ತದೆ. ಅಣಬೆಯನ್ನು ಛತ್ರಿಯಂತೆ ಹಿಡಿದಿರುತ್ತದೆ. ಹೀಗೆ ಅಣಬೆಯ ಕಾಂಡಭಾಗವು ಕೊಡೆ ತಲೆಯ ಮಧ್ಯ ಭಾಗದಲ್ಲಿದ್ದರೆ ಅದಕ್ಕೆ ಕೇಂದ್ರಿತ ಎಂದೂ ಹಾಗೂ ಕಾಂಡವು ತಲೆಯ ಮಧ್ಯದಿಂದ ದೂರವಿದ್ದರೆ ಅದಕ್ಕೆ ವಿಕೇಂದ್ರಿಯ ಎಂದು ಕರೆಯಲಾಗುತ್ತದೆ. ಕಾಂಡವು ಗಟ್ಟಿಯಿರಬಹುದು ಅಥವಾ ಟೊಳ್ಳಾಗಿರಬಹುದು. ಕೆಲವು ಜಾತಿಯ ಅಣಬೆಗಳಲ್ಲಿ ಬೇರೆ ಬೇರೆ ಆಕಾರವನ್ನು ಸಹ ಹೊಂದಿರುತ್ತದೆ. ಈ ಎಲ್ಲಾ ರಚನೆಗಳೂ ಅಣಬೆಯನ್ನು ಯಾವ ಜಾತಿಯದೆಂದು ಗುರುತಿಸಲು ಸಹಾಯಕವಾಗುತ್ತದೆ. ಕೆಲವು ಅಣಬೆಗಳ ಕಾಂಡವು ಭೂಮಿಯ ಒಳಗೆ ಹೋದಂತೆಲ್ಲಾ ಬೇರಿನಂತಾಗುತ್ತದೆ. (ಉದಾ: ಬೇರಣಬೆ ಅಥವಾ ಹುತ್ತದ ಅಣಬೆ) ಇನ್ನು ಕೆಲವು ಅಣಬೆಗಳಲ್ಲಿ ಕಾಂಡದ ತಳವು ಊದಿಕೊಂಡಿದ್ದು ಇದಕ್ಕೆ ಬಲ್ಬಸ್ ಎಂದು ಕರೆಯಲಾಗುತ್ತದೆ.

ಬಟ್ಟಲು

ಬದಲಾಯಿಸಿ

ಎಳೆಯ ಅಣಬೆಯು ವಿವಿಧ ಅಂಗಗಳಾಗಿ ಬೇರ್ಪಡುವುದಕ್ಕಿಂತ ಮೊದಲು ಹೊರಭಾಗವು ಸರ್ವೇ ಸಾಧಾರಣ ಪೊರೆಯಿಂದ ಆವರಿಸಿಕೊಂಡು ಮೊಟ್ಟೆಯಾಕಾರವಾಗಿರುತ್ತದೆ. ಕ್ರಮೇಣ ಅಣಬೆಯು ಬಲಿತು ವಿಕಾಸ ಹೊಂದುತ್ತ, ಹೊರಗಿನ ಪೊರೆಯು ಸಮಾನಾಂತರವಾಗಿ ಹರಿದು ತಳದ ಭಾಗವು ಬಟ್ಟಲಾಗುತ್ತದೆ ಮೇಲ್ಭಾಗವು ಕೊಡೆಯೊಂದಿಗೆ ಸೇರಿ ಕೊಡೆಯ ಮೇಲ್ಮೈಯಲ್ಲಿ ಪೊರೆಯಾಗಿ ಮಾರ್ಪಾಡು ಹೊಂದುತ್ತದೆ.ಅಣಬೆಯಲ್ಲಿ ಈ ಉಂಗುರ ಮತ್ತು ಬಟ್ಟಲುಗಳ ಅನುಪಸ್ಥಿತಿ ಮತ್ತು ಉಪಸ್ಥಿತಿಗಳ ಆಧಾರದ ಮೇಲೆ ಅಣಬೆಗಳನ್ನು ವಿವಿಧ ಪಂಗಡಗಳಲ್ಲಿ ಇರಿಸಲಾಗಿದೆ. ಉದಾ: ಉಂಗುರ ಮತ್ತು ಬಟ್ಟಲುಗಳಿರುವ ಅಣಬೆಗಳು ಅಮ್ಯಾನಿಟ ಗುಂಪಿಗೆ ಸೇರಿವೆ(2) ಉಂಗುರವಿದ್ದು, ಬಟ್ಟಲು ಇಲ್ಲದಿದ್ದರೆ ಅದು ಅಗ್ಯಾರಿಕಸ್ ಅಣಬೆಯ ಗುಂಪಿಗೆ ಸೇರಿಕೊಳ್ಳುತ್ತದೆ. (3) ಉಂಗುರವಿಲ್ಲದಿದ್ದು, ಬರೀ ಬಟ್ಟಲು ಇದ್ದಲ್ಲಿ ಅದು ಭತ್ತದ ಹುಲ್ಲಿನ ಅಣಬೆ ಗುಂಪಿಗೆ ಸೇರಿರುತ್ತದೆ. ಉಂಗುರ ಮತ್ತು ಬಟ್ಟಲು ಎರಡೂ ಇಲ್ಲದಿದ್ದರೆ ಅವು ಪ್ರೆಯ್ರೀರಿಂಗ್ ಅಣಬೆಗಳ ಗುಂಪಿಗೆ ಸೇರಿಕೊಳ್ಳುತ್ತದೆ.ಹೀಗೆ ಅಣಬೆಯ ರಚನಾಂಗಗಳಾದ ತಲೆ (ಕೊಡೆ), ಕಾಂಡ, ಕಿವಿರು, ಉಂಗುರ, ಬಟ್ಟಲು ಉಪಸ್ಥಿತಿ ಮತ್ತು ಅನುಪಸ್ಥಿತಿ ಹಾಗೂ ಇವುಗಳ ಆಕಾರ, ಬಣ್ಣ ಇತ್ಯಾದಿಗಳು ಅಣಬೆಗಳ ವರ್ಗೀಕರಣಕ್ಕೆ ಸಹಾಯಕವಲ್ಲದೆ, ಅವು ವಿಷ ಅಣಬೆಗಳ ಗುಂಪಿನವೇ ಅಥವಾ ಬಾಧ್ಯ ಗುಂಪಿನವೇ ಎಂದು ತಿಳಿಯಲು ಸಹ ಕೆಲವೊಮ್ಮೆ ಅನುಕೂಲವಾಗುತ್ತದೆ.

ಪ್ರಮುಖ ಖಾದ್ಯ ಅಣಬೆಗಳು:

  1. ಅಗ್ಯಾರಿಕಸ್ ಬೈಸ್ಪೋರಸ್ : ಇದು ಜನಪ್ರಿಯವಾದ ಖಾದ್ಯ ಅಣಬೆ, ಇದನ್ನು ಸಮಶೀತೋಷ್ಣವಲಯದ ಅಣಬೆ, ಯುರೋಪಿನ ಅಣಬೆ ಹಾಗೂ ಗುಂಡಿ ಅಣಬೆ ಎಂದು ಕರೆಯುವುದುಂಟು.
  2. ಅಗ್ಯಾರಿಕಸ್ ಕಾಂಪೆಸ್ಟ್ರೀಸ್ : ಇದು ಸಹ ಜನಪ್ರಿಯವಾದ ಅಣಬೆ. ಇದು ಸಹ ಹೊಲಗಳಲ್ಲಿ, ಹುಲ್ಲು ಬಯಲಿನಲ್ಲಿ ಕಂಡು ಬರುತ್ತದೆ. ಕೊಡೆಯ ಮೇಲ್ಭಾಗ ಸ್ವಲ್ಪ ಉರುಕಾಗಿರಬಹುದು. ಬಿಳಿ ಅಥವಾ ಸ್ವಲ್ಪ ಕಂದು ಬಣ್ಣವನ್ನು ಹೊಂದಿರುತ್ತದೆ.
  3. ಮಾರ್ಚೆಲ್ಲಾ ಕೊನಿಕಾ : ಇದು ಕಾಡಿನಲ್ಲಿ ಬೆಳೆಯುತ್ತದೆ. ಇದರ ತಲೆ ಶಂಕಾಕೃತಿಯಲ್ಲಿದದು ಅದರ ಸುತ್ತಲೂ ಸಾಲಾಗಿ ಗುಂಡಿಗಳಿರುತ್ತದೆ ಅವುಗಳ ಉದ್ದ, ಅಗಲಕ್ಕಿಂತ ಹೆಚ್ಚಾಗಿರುತ್ತದೆ. ಇದು ಎಳೆಯದಿದ್ದಾಗ ಹಳದಿಯಾಗಿದ್ದು ಬಲಿತಂತೆ ನಸುಕಪ್ಪಾಗುತ್ತದೆ.
  4. ಮಾರ್ಚೆಲ್ಲಾ ಡೆಲಿಸಿಯೋಸಾ : ಇದರ ತಲೆ ಕೊಳವೆಯಾಕಾರವಾಗಿದ್ದೂ ತುದಿಯು ಮೊಂಡವಾಗಿರುತ್ತದೆ. ಇದು ಕಾಡಿನಲ್ಲಿ ಮರಗಳ ಬೇರುಗಳ ಹತ್ತಿರ ಕಾಣಿಸಿಕೊಳ್ಳುತ್ತದೆ. ಇದರ ಕೊಡೆಯ ಮೇಲಿನ ಗುಂಡಿಗಳು ಉದ್ದವಾಗಿರುತ್ತವೆ.
  5. ಫ್ಲುರೋಟಸ್ ಫ್ಲಾಬೆಲೇಟಸ್ : ಇದು ಚಿಪ್ಪಣಬೆಯಾಗಿದ್ದು ಒಣಗಿದ ಮರಗಳ ಮಳೆಯಲ್ಲಿ ನೆನೆದಾಗ ಮರಗಳ ಮೇಲೆ ಮತ್ತು ನೆಲದಲ್ಲಿ ಬೆಳೆಯುತ್ತದೆ. ಇದರ ಫಲೋಷ್ಪಾದಕ ಸ್ಪಂಜಿನಂತಿದ್ದು ಅದರ ತಲೆ ಫ್ಯಾನಿನ ರೆಕ್ಕೆಯಾಕಾರದಲ್ಲಿರುತ್ತದೆ. ಮೊದಲು ಸ್ವಲ್ಪ ಗುಲಾಬಿ ಬಣ್ಣದಿದ್ದು ಬಲಿತ ನಂತರ ಬಿಳಿಬಣ್ಣಕ್ಕೆ ತಿರುಗುತ್ತದೆ.
  6. ಫ್ಲುರೋಟಸ್ ಆಯಸ್ಟ್ರೇಟಸ್ : ಇದು ಒಣಗಿದ ಮರ ಮಳೆಯಲ್ಲಿ ನೆನೆದಾಗ ಅದರ ಬಿರುಕುಗಳಲ್ಲಿ ಗೊಂಚಲು ಗೊಂಚಲಾಗಿ ಬೆಳೆಯುತ್ತದೆ. ಇದು ಬೂದಿ ಅಥವಾ ಬಿಳಿಬಣ್ಣದ್ದಾಗಿದ್ದು, ಒಣಗಿದಾಗ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರ ಕಾಂಡ ಚಿಕ್ಕದಾಗಿದ್ದು ಮೇಲ್ಮೈ ಮೃದುವಾಗಿರುತ್ತದೆ.
  7. ಫ್ಲುರೋಟಸ್ ಸಜೋರ್ಕಾಜು : ಇದು ಕೊಳೆಯುತ್ತಿರುವ ಮರದಲ್ಲಿ ಒಂಟಿಯಾಗಿ ಅಥವಾ ಗುಂಪಾಗಿ ಬೆಳೆಯುತ್ತದೆ. ಇದು ಆಯಿಸ್ಟರ್ ಆಕಾರದ ಫಲೋತ್ಪಾದಕ ಅಂಗಗಳನ್ನು ಪುಷ್ಪದಳಗಳಂತೆ ಕಾಣುತ್ತದೆ. ಇದರ ಬಣ್ಣ ಬಿಳಿ ಅಥವಾ ಮುಸುಕಾಗಿದ್ದು ತಲೆಯ ಅಂಚು ಅಸಮಾನವಾಗಿರುತತದೆ. ಮೇಲ್ಮೈ ಮೃದುವಾಗಿರುತ್ತದೆ.
  8. ರಸುಲ್ಲಾ ಎಮಿಟಿಕಾ : ಇದು ಒಂಟಿಯಾಗಿ ಅಥವಾ ಅಲ್ಲಲ್ಲಿ, ಕಾಡುಗಳಲ್ಲಿ, ಕೊಳೆಯುತ್ತಿರುವ ಮರಗಳ ದಿಮ್ಮಿಗಳಲ್ಲಿ ಇನ್ನು ಅನೇಕ ಜಾಗದಲ್ಲಿ ಬೆಳೆಯುತ್ತದೆ. ಇದರ ಮೇಲ್ಮೈ ಮೃದುವಾಗಿದ್ದು, ಗುಲಾಬಿ ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿ ತಲೆಯ ಪೊರೆ ಸುಲಭವಾಗಿ ತೆಗೆಯಬಹುದಾಗಿದೆ.
  9. ವಲ್ವೇರಿಯಲ್ಲಾ ವಲ್ವೇಸಿಯಾ : ಇದನ್ನು ಭತ್ತದ ಹುಲ್ಲಿನ ಅಣಬೆ ಎಂದು ಕರೆಯಲಾಗುತ್ತದೆ. ಇದು ಉಷ್ಣವಲಯದ ಅಣಬೆಯಾಗಿದೆ. ಇದರ ತಳದಲ್ಲಿ ಎದ್ದು ಕಾಣುವ ಬಟ್ಟಲನ್ನು ಹೊಂದಿರುತ್ತದೆ. ಆದ್ದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ಇದರ ಇತರೆ ಪ್ರಭೇದಗಳೆಂದರೆ, ವಲ್ವೇರಿಯಲ್ಲಾ, ಡಿಪ್ಲೇಸಿಯಾ, ವಲ್ವೇರಿಯಲ್ಲಾ ಎಸ್ಕುಲೆಂಟಾ ಇತ್ಯಾದಿಗಳು.
  10. ಲೆಂಟಿನಸ್ ಇಡೋಡಸ್ : ಇದನ್ನು ಜಪಾನಿನ ಶಿಟಾಕೆ ಅಣಬೆಯೆಂದು ಕರೆಯಲಾಗುತ್ತದೆ. ಇದು ಮರಗಳ ದಿಮ್ಮಿಗಳ ಮೇಲೆ ಬೆಳೆಯುತ್ತದೆ. ಇತರ ಫಲೋತ್ಪಾದಕ ಅಂಗ ಕಂದು ಬಣ್ಣದ್ದಾಗಿರುತ್ತದೆ. ಈ ಅಣಬೆಯು ಆಹಾರ ಅಣಬೆಯಲ್ಲದೆ, ಔಷಧಿಯ ಗುಣಗಳನ್ನು ಹೊಂದಿರುತ್ತದೆ. ಮೇಲೆ ಹೆಸರಿಸಿದ ಅಣಬೆಗಳಲ್ಲದೆ, ಅನೇಕ ತಿನ್ನುವ ಅಣಬೆಗಳಾದ ಬೇರಣಬೆ, ತುಪ್ಪದ ಅಣಬೆ, ಅರಿಕ್ಯಲೇರಿಯಾ, ಇತ್ಯಾದಿ ಜಾತಿಗಳನ್ನು ಸ್ವಾಭಾವಿಕವಾಗಿ ಕಾಣಬಹುದಾಗಿದೆ.
  11. ಹಾಲಣಬೆ : ಇದು ಅನೇಕ ರೀತಿಯ ಸಾವಯವ ವಸ್ತುಗಳ ಮೇಲೆ ಬೆಳೆಯಬಲ್ಲದು. ಇದು ಇತ್ತೀಚೆಗೆ ಜನಪ್ರಿಯ ವಾಣಿಜ್ಯ ಅಣಬೆಯಾಗಿದೆ.

ಅಣಬೆ ಸೊಂಕುಗಳು

ಬದಲಾಯಿಸಿ

ಮಾನವನಲ್ಲೂ ಪ್ರಾಣಿಗಳಲ್ಲೂ ಐವತ್ತಕ್ಕೂ ಮೀರಿದ ಬಗೆಗಳ ಅಣಬೆ (ಬೂಜು,ಬೂಷ್ಟು,ಶಿಲೀಂಧ್ರ) ಗಳಿಂದ ಸೊಂಕು ರೋಗ ಕಾಣಿಸಿಕೊಳ್ಳುತ್ತವೆ. ಚರ್ಮ,ಕೂದಲು,ಉಗುರುಗಳ ಮೇಲ್ಮೇಲಿನ ಸೊಂಕುಗಳು ಚರ್ಮಜೀವಿಸಸಿಬೇನೆಗಳು (ಡರ್ಮಟೋಫೈಟೋಸಸ್) ಎಂದೂ ಇನ್ನೂ ಆಳದ ಕಣಜಾಲಗಳಲ್ಲೂ ಅಂಗಗಳಲ್ಲೂ ಆಗುವವು ಅಣಬೇನೆಗಳು(ಮೈಕೋಸಸ್) ಎಂದೂ ಹೆಸರಾಗಿವೆ. ಬಹುಮಟ್ಟಿಗೆ ಈ ಅಣಬೇನೆಗಳೆಲ್ಲ ನಿರಪಾಯಕರವಾದುವು.ಆದರೂ ಕೆಲವು ಮಾರಕ. ಏಕಾಣುಜೀವಿಗಳಿಂದಾದ ರೋಗಗಳಲ್ಲಿ ಬಳಸುವ ಎಂದಿನ ಸಾಮಾನ್ಯ ಜೀವಿರೋಧಕಗಳು ಅಣಬೆಗಳ ಎದುರಾಗಿ ಚಿಕಿತ್ಸೆಗೆ ಬಾರದಿದ್ದರೂ ಅಣಬೆಗಂತಿಗಳಲ್ಲಿ (ಮೈಸಿಟೋಮಾಸ್) ಕೆಲವಕ್ಕೆ ಸಲ್ಫ ಮತ್ತು ಸಲ್ಫೋನು ಮದ್ದುಗಳಿಂದ ಚಿಕಿತ್ಸೆ ಆಗುತ್ತಿದೆ. ಮೈಯೊಳಗಿನ ಕೆಲವು ಅಣಬೇನೆಗಳು ಆಂಫೊಟೆರಿಸಿಸ್ ಬಿ ಇಂದ ವಾಸಿಯಾಗಿವೆ. ಜಗ್ಗದಿರುವ ಚರ್ಮಜೀವಿಸಸಿಗಳಲ್ಲಿ ಕೆಲವಂತೂ ಜೀವಿರೋಧಕವಾದ ಗ್ರಿಸಿಯೊಫಲ್ವಿನ್ ನಿಂದ ಗುಣವಾಗಿವೆ.

ಉಪಯೋಗಗಳು

ಬದಲಾಯಿಸಿ
  • ಸಿಲೋಸೈಬೆ ಮೆಕ್ಸಿಕಾನ ಎಂಬ ಜಾತಿಯ ಅಣಬೆ ಮೆಕ್ಸಿಕನರಿಗೆ ಪ್ರಿಯವೆನಿಸಿದೆ. ಈ ಜಾತಿಯಲ್ಲಿ ಹಲ್ಲೊಸಿನೊಜೆನಿಕ್ ಎಂಬ ರಾಸಾಯನಿಕ ವಸ್ತುವಿದೆ. ಈ ವಸ್ತುವನ್ನು ಮನೋರೋಗ ಚಿಕಿತ್ಸೆಯಲ್ಲಿ ಬಳಸುತ್ತಾರೆ.
  • ಅಮಾನಿಟ ಮಸ್ ಕೇರಿಯಾ ಎಂಬ ಅಣಬೆಗಯನ್ನೂ ಕೆಲವು ಔಷಧಗಳಿಗೆ ಬಳಸುತ್ತಾರೆ.
  • ಅಣಬೆಗಳಿಂದ ಹಲವು ಜೀವಿರೋಧಕಗಳನ್ನು ತಯಾರಿಸುವರು.
  • ಅಗ್ಯಾರಿಕಸ್ ಕಂಪೆಸ್ಟ್ರಿಸ್ ಎಂಬ ಅಣಬೆ ವಿಷಮಶೀತಜ್ವರ,ರಕ್ತದ ಒತ್ತಡ ಮುಂತಾದುವನ್ನು ಗುಣಪಡಿಸುವುದರಲ್ಲಿ ಯಶಸ್ವಿಯಾಗಿದೆ.
  • ಅಗ್ಯಾರಿಕಸ್ ಇಗ್ನೇರಿಯಸ್, ಅಗ್ಯಾರಿಕಸ್ ಆಲ್ಬಸ್,ಅಗ್ಯಾರಿಕಸ್ ಅಸ್ಟ್ರಾಯಟಸ್,ಅಗ್ಯಾರಿಕಸ್ ಕಂಪೆಸ್ಟ್ರಿಸ್ ಮುಂತಾದುವನ್ನು ಹೋಮಿಯೋಪತಿ ಔಷಧ ಪದ್ಧತಿಯಲ್ಲಿ ಉಪಯೋಗಿಸುತ್ತಾರೆ.

ಕರ್ನಾಟಕದ ಮುಶ್ರೂಮ್ ಮಾಹಿತಿ ಕೇಂದ್ರ

ಬದಲಾಯಿಸಿ

ಮಶ್ರೂಮ್ ಕಲಿಕಾ ಕೇಂದ್ರ ಕೊಲ್ಹಾಪುರ ಕರ್ನಾಟಕ ಮತ್ತು ಮಹಾರಾಷ್ಟ್ರದ ಉನ್ನತ ಮಶ್ರೂಮ್ ಮಾಹಿತಿ ಮತ್ತು ಸಂಪನ್ಮೂಲ ಕೇಂದ್ರವಾಗಿದೆ. ಇದು ವಿವಿಧ ರೀತಿಯ ಅಣಬೆಗಳ ಬಗ್ಗೆ ಅಣಬೆ ತರಬೇತಿ ಮಾಹಿತಿಯನ್ನು ಒದಗಿಸುತ್ತದೆ.

ಹೊರಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. http://vijaykarnataka.indiatimes.com/state/-/articleshow/21654924.cms
  2. http://www.thefoodmakesthefight.com/app/index.jsp?showbarcode=4000400139535&l=kn
  3. "ಆರ್ಕೈವ್ ನಕಲು". Archived from the original on 2011-06-10. Retrieved 2017-01-26.
"https://kn.wikipedia.org/w/index.php?title=ಅಣಬೆ&oldid=1128037" ಇಂದ ಪಡೆಯಲ್ಪಟ್ಟಿದೆ