ಮಹಾಘನ ಸೋಮೇಶ್ವರ ಅಂಕಿತದ ಅಜಗಣ್ಣನ 10 ವಚನಗಳು ದೊರೆತಿವೆ ಆಸಕ್ತರು ಕರ್ನಾಟಕ ಸರ್ಕಾರ ಪ್ರಕಟಿಸಿದ ಎಂಎಂ ಕಲಬುರ್ಗಿ ಸಂಪಾದನೆಯ ಸಮಗ್ರ ವಚನ ಸಂಪುಟಗಳ ಆರನೇಯ ಸಂಪುಟವನ್ನು ನೋಡಬಹುದು

[]12ನೆಯ ಶತಮಾನಕರ್ಣಾಟಕದ ಶಿವಶರಣರಲ್ಲಿ ಒಬ್ಬ, ಅಂದಿನ ವಚನಕಾರರಲ್ಲಿ ಮೊದಲ ಸಾಲಿಗೆ ಸೇರಿದವನು. ಇವನು ತನ್ನ ಎಳವೆಯಲ್ಲಿ ಒಂದು ಅದ್ಭುತ ದೃಶ್ಯವನ್ನು ಕಂಡನಂತೆ; ಸರ್ಪವೊಂದು ತನ್ನ ಹೆಡೆಯಲ್ಲಿ ರತ್ನವನ್ನು ನೆಲದ ಮೇಲಿರಿಸಿ, ಅದರ ಬೆಳಕಿನಲ್ಲಿ ತನ್ನ ಆಹಾರವನ್ನು ಹುಡುಕಿ ನುಂಗಿದ ಮೇಲೆ ಆ ರತ್ನವನ್ನು ಮತ್ತೆ ಹೆಡೆಯಲ್ಲಿ ಅಡಗಿಸಿಟ್ಟುಕೊಂಡು ಸಳಸಳನೆ ಹರಿದು ಅದೃಶ್ಯವಾಯಿತು. ಈ ದೃಶ್ಯದಿಂದ ಅಜಗಣ್ಣನಿಗೆ ತನ್ನ ಇಷ್ಟಲಿಂಗವನ್ನು ಗೋಪ್ಯವಾಗಿ ಧರಿಸಬೇಕು ಎಂಬ ತತ್ತ್ವದರ್ಶನ ಹೃದ್ಗತವಾಯಿತು. ಅಂದಿನಿಂದ ಶಿವಭಕ್ತಿಯನ್ನು ಹೊರಗೆ ತೋರಗೊಡದೆ ನಿರಾಡಂಬರದ ಹಾಗೂ ಋಜುಮಾರ್ಗದ ದಿವ್ಯಜೀವನವನ್ನು ನಡೆಸುವ ಕನಸನ್ನು ಕಟ್ಟಿಕೊಂಡ. ಆ ಧ್ಯೇಯದತ್ತ ತನ್ನ ಆಚಾರವನ್ನು ದೃಢವಾಗಿ ತಿದ್ದಿಕೊಂಡ. ಬಹಿರಂಗದ ಪೂಜೋಪಚಾರಗಳು ಅವನಿಗೆ ಒಗ್ಗದೇ ಹೋದವು. ಅಂತರಂಗದ ಧ್ಯಾನಧಾರುಣಗಳೇ ಅವನ ಸಾಧನೆಯ ಸೂತ್ರಗಳಾದವು.

ಸುತ್ತಮುತ್ತಲಿನ ಜನಕ್ಕೆ ಇದು ಅರ್ಥವಾಗಲಿಲ್ಲ. ಲಿಂಗಪೂಜೆಯನ್ನು ಎಲ್ಲರಂತೆ ಮಾಡದ ಅಜಗಣ್ಣ ಅನಾಚಾರಿ ಎಂಬ ಮಾತು ಪ್ರಚಲಿತವಾಯಿತು. ಬಹಿರಂಗ ಮುಗ್ಧನೂ ಅಂತರಂಗಸಿದ್ದನೂ ಆದ ಬಾಲಕ ಅಜಗಣ್ಣನನ್ನು ಅವನ ಒಡನಾಡಿಗಳು ಗೇಲಿಮಾಡಿ ಹಿಂಸಿಸತೊಡಗಿದರು. ಅವರು ಒಂದು ದಿನ ವಿನೋದಕ್ಕಾಗಿ ಅಜಗಣ್ಣನನ್ನು ತಡೆದು ನಿಲ್ಲಿಸಿ 'ಬೆಲ್ಲ ಕೊಡುತ್ತೇವೆ ನಿನ್ನ ಇಷ್ಟಲಿಂಗವನ್ನು ಕೊಡು' ಎಂದು ಪೀಡಿಸಿದರು. ಆಗ ಅಜಗಣ್ಣ ತನ್ನ ಇಷ್ಟಲಿಂಗವನ್ನು ಅಂಗೈಯೊಳಗೆ ಬಿಗಿಯಾಗಿ ಹಿಡಿದು, ದೃಷ್ಟಿ ನುಸುಳಿಸಿ, ನಟ್ಟು ನೋಡಿ, ಬಾಯಲ್ಲಿ ಹಾಕಿಕೊಂಡು ಓಂ ನಮಃಶಿವಾಯ ಎನ್ನುತ್ತ ನುಂಗಿಬಿಟ್ಟ. ಆಗ ಅದು ಅವನ ಹೃದಯಕಮಲಕರ್ಣೀಕಾ ಮಧ್ಯದಲ್ಲಿ ಜ್ಯೋತಿರ್ಲಿಂಗವಾಗಿ ಥಳಥಳಿಸಿತಂತೆ. ಆದರೇನು ಅವನು ಜನರ ಕಣ್ಣಿಗೆ ಮಾತ್ರ ಅರೆಮರುಳನಂತೆ ವಿಪರೀತವಾಗಿ ಕಂಡ.

ತಂಗಿಯಾದ ಮುಕ್ತಾಯಿ ಪೇಚಿ

ಬದಲಾಯಿಸಿ

ತಂಗಿಯಾದ ಮುಕ್ತಾಯಿ ಪೇಚಿನ ಪರಿಸ್ಥಿತಿಯಲ್ಲಿದ್ದ ಅಜಗಣ್ಣನನ್ನು ಮನೆಗೆ ಕರೆತಂದಳು. ಆದರೆ ದೇಹದ ಮೇಲೆ ಲಿಂಗವಿಲ್ಲದ ಹುಡುಗನನ್ನು ಆಚಾರವಂತರೆನಿಸಿಕೊಂಡಿದ್ದ ಅವನ ತಂದೆತಾಯಿಗಳು ಮನೆಯೊಳಗೆ ಇಟ್ಟುಕೊಳ್ಳಲಿಲ್ಲ; ಮೇಲಾಗಿ ಅವನನ್ನೇಕೆ ಮನೆಗೆ ಕರೆತಂದುದೆಂದು ಮುಕ್ತಾಯಿಯನ್ನು ಹೊರನೂಕಿದರು. ಅಣ್ಣ ತಂಗಿಯರಿಬ್ಬರೂ ಅಡಕ ಎಂಬ ಊರಿಗೆ ಹೋಗಿ ಅಲ್ಲಿದ್ದ ಸೋದರಮಾವನ ಮನೆ ಸೇರಿದರು. ಸೋದರಮಾವ ತನ್ನ ಮಗಳನ್ನು ಅಜಗಣ್ಣನಿಗೆ ಕೊಟ್ಟು ಮದುವೆ ಮಾಡಿದ. ಆ ಮಾವನ ಮಗಳು ತನ್ನನ್ನು ಅನಾಚಾರಿಯಾದೊಬ್ಬನಿಗೆ ಕೊಟ್ಟರೆಂದು ತೀವ್ರ ಅಸಮಾಧಾನಪಟ್ಟಳು. ಸಮರಸದಿಂದ ಒಗೆತನಮಾಡದೆ ಗಂಡನೊಡನೆ ಉದಾಸೀನದಿಂದ ವರ್ತಿಸಿದಳು.

ತನಗೆ ಇಕ್ಕಟ್ಟಾದರೂ ತನ್ನ ಹೆಂಡತಿಯ ಶಿವಾಚಾರನಿಷ್ಠೆಯನ್ನು ಕಂಡು ಒಂದು ವಿಧವಾದ ಸಮಾಧಾನ, ಅಜಗಣ್ಣನಿಗೆ. ತನ್ನನ್ನು ಅವಳು ಪುರಸ್ಕರಿಸದಿರುವುದಕ್ಕೆ ಅನಾಚಾರಿಯಾದವನು ಗಂಡನಾದನಲ್ಲಾ ಎಂಬ ಒಳಗುದಿ ಕಾರಣವೇ ಹೊರತು ಅನ್ಯಥಾ ಅಲ್ಲವೆಂಬ ಸಹಾನುಭೂತಿಯೇ ಅವನ ಸಮಾಧಾನಕ್ಕೆ ಪ್ರೇರಕವಾಗಿತ್ತು. ತನ್ನ ಭಕ್ತಿ ತಾನು ಕೈ ಹಿಡಿದ ಹೆಂಡತಿಗೂ ತಿಳಿಯಬಾರದೆಂಬುದೇ ಅವನ ಮಹದಾಕಾಂಕ್ಷೆ. ಇದನ್ನು ಸಾಧಿಸುವಲ್ಲಿ ಮನೆಯೊಳಗೆ ಹೆಂಡತಿ ಮಕ್ಕಳಿಂದಾಗಲಿ, ಮನೆಯಿಂದ ಹೊರಗೆ ಜನಜಂಗುಳಿಯಿಂದಾಗಲಿ ಏನೇ ಅವಜ್ಞೆ ತಿರಸ್ಕಾರ ಬಂದರೂ ಅವನ್ನೆಲ್ಲ ನಿತ್ತರಿಸಿ ನಿರಾಡಂಬರದ ಸಾತ್ವಿಕ ಜೀವನದ ಸ್ಮಾರಕವಾಗಬಯಸಿದ ಅಜಗಣ್ಣನೊಬ್ಬ ಅಪೂರ್ವ ಮಹನೀಯ.

ಇತ್ತಕಡೆ ಮುಕ್ತಾಯಿಗೂ ಮದುವೆಯಾಯಿತು. ಅವಳು ಗಂಡನ ಮನೆಗೆ ಹೋಗುವಾಗ ಅಣ್ಣನನ್ನು ಅಗಲಲಾರದೆ ಅಣ್ಣನ ಸಾವಿನ ಸೂಚನೆಯೇನೆಂದು ಕೇಳಿದಳು. ಅದಕ್ಕೆ ಅಜಗಣ್ಣ, 'ನಿನ್ನ ಹಿತ್ತಲಲ್ಲಿ ಒಂದು ಮಲ್ಲಿಗೆಯ ಗಿಡವನ್ನು ನೆಡು, ನೆಟ್ಟು ಆರೈಕೆ ಮಾಡುತ್ತಿರು. ಅದು ಒಣಗಿದರೆ ನಾನು ಸತ್ತೆನೆಂದು ತಿಳಿ' ಎಂದ. ತಂಗಿ ಗಂಡನ ಮನೆಗೆ ಹೋದಳು. ಪರಪೀಡಕಪ್ರವೃತ್ತಿಯ ಪುಂಡರು ಕೆಲವರು ಒಂದು ದಿನ ಭಾರವಾದ ಒಂದು ಗೋದಿಯ ಮೂಟೆಯನ್ನು ಅಜಗಣ್ಣನ ಮೇಲೆ ಹೇರಿ ತಮ್ಮ ಮನೆಗೆ ಅಟ್ಟಿಕೊಂಡು ಹೋದರು. ಆ ರಭಸದಲ್ಲಿ ಮನೆಯ ಒಳಗೆ ಹೋಗುವಾಗ ಅಜಗಣ್ಣನ ತಲೆ ಬಾಗಿಲುವಾಡಕ್ಕೆ ಘಟ್ಟಿಸಿ ಒಡೆದು ಹೋಯಿತು; ಪ್ರಾಣಪಕ್ಷಿ ಹಾರಿ ಹೋಗಿ ಶಿವನ ಗೂಡು ಸೇರಿತು.

ಅಣ್ಣನ ಸಾವಿನ ಸುದ್ದಿಯನ್ನು ತಿಳಿದು ತಂಗಿ ಮುಕ್ತಾಯಿ ಕಣ್ಣೀರಿಟ್ಟು, ಕಂಗಾಲಾದಳು. ಅವಳಿಂದ ಮೊಸಳೆಕಲ್ಲೆಂಬ ಊರಿಗೆ ಆಕಸ್ಮಿಕವಾಗಿ ಬಂದ ಪ್ರಭುದೇವ ಅವಳನ್ನು ಸಂತೈಸಿ, ಅಜಗಣ್ಣನಂಥವರು ಸಾಯುವವರ ಸಾಲಿಗೆ ಸೇರುವವರಲ್ಲವೆಂಬುದನ್ನೂ ಅವರ ದಿವ್ಯಾತ್ಮಗಳು ಮಾನವರ ಮನೋಮಂದಿರದಲ್ಲಿ ಮಸುಕಾಗದೆ ಎಂದೆಂದಿಗೂ ಮಿನುಗುತ್ತಿರುವ ಅಮರದೀವಿಗೆಗಳೆಂಬುದನ್ನೂ ಮನದಟ್ಟು ಮಾಡಿಕೊಟ್ಟ.

ವಚನಕಾರರ ಮಾತು

ಬದಲಾಯಿಸಿ

ಚೆನ್ನಬಸವಣ್ಣ ಅಜಗಣ್ಣನ ಬಗ್ಗೆ ಹೀಗೆ ಹೇಳಿದ್ದಾನೆ; 'ಆದ್ಯರ ಅರುವತ್ತು ವಚನಕ್ಕೆ ಪ್ರಭುದೇವರ ಹತ್ತುವಚನ. ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ. ಅಜಗಣ್ಣನ ಐದು ವಚನಕ್ಕೆ (ಕೂಡಲ ಚೆನ್ನಸಂಗಯ್ಯನಲ್ಲಿ) ಮಹಾದೇವಿಯಕ್ಕಗಳ ಒಂದು ವಚನ ನಿರ್ವಚನ.

ಮಹಾದೇವಿಯಕ್ಕನನ್ನು ಬಿಟ್ಟರೆ ಎರಡನೆಯ ಸ್ಥಾನವೇ ಅಜಗಣ್ಣನದು--ಶ್ರೇಷ್ಠ ವಚನಕಾರರಾದ ಪ್ರಭುದೇವ, ಬಸವಣ್ಣ ಮತ್ತು ಅವರಿಗಿಂತ ಪೂರ್ವದವರಾದ ದೇವರದಾಸಿಮಯ್ಯ ಮುಂತಾದವರಿಂದ ಸಂತಸಾಹಿತಿಗಳ ಪ್ರಥಮಶ್ರೇಣಿಯಲ್ಲಿ.

ಅಜಗಣ್ಣನ ವಚನಗಳು ಇಂದು ನಮಗೆ ಒಂದೂ ಸಿಕ್ಕಿಲ್ಲ. ಆದರೂ ಶೂನ್ಯ ಸಂಪಾದನೆಯಲ್ಲಿ ಬರುವ ಮುಕ್ತಾಯಕ್ಕಗಳ ಪ್ರಸಂಗಗಳನ್ನು ಅವಲೋಕಿಸಿದರೆ--ಅಜಗಣ್ಣನ ನಡೆನುಡಿಗಳ ಪ್ರಭೆ ಅಲ್ಲಿನ ಮುಕ್ತಾಯಿ ಅಲ್ಲಮರ ವಾಣಿಯ ಮೂರೇಣಿನ ಸ್ಫಟಿಕದ ಮೂಲಕ ಹಾಯ್ದು, ಒಡೆದು ಬಣ್ಣ ಬಣ್ಣವಾಗುವ ಬೆಡಗು ದೃಗ್ಗೋಚರವಾಗುವುದು.

ಉಲ್ಲೇಖನಗಳು

ಬದಲಾಯಿಸಿ
"https://kn.wikipedia.org/w/index.php?title=ಅಜಗಣ್ಣ&oldid=1094232" ಇಂದ ಪಡೆಯಲ್ಪಟ್ಟಿದೆ