ಅಚ್ಛೋದ ಸರೋವರನಾಗವರ್ಮನ 'ಕರ್ಣಾಟಕ ಕಾದಂಬರಿಯಲ್ಲಿ ಕಂಡುಬರುವ ಒಂದು ವಿಶಿಷ್ಟ ಸರೋವರ.[೧][೨]

ಅಚ್ಛೋದ ಸರೋವರದ ವರ್ಣನೆ ಬದಲಾಯಿಸಿ

“ಕರ್ಣಾಟಕ ಕಾದಂಬರಿ”ಯಲ್ಲಿ ಬರುವ ಅಚ್ಛೋದ ಸರೋವರದ ವರ್ಣನೆಯನ್ನು ಕವಿ ನಾಗವರ್ಮ ಹೇಗೆ ಮಾಡಿದ್ದಾನೆ ಎಂದರೆ, ಓದುಗರಿಗೆ ಅದೊಂದು ‘ಜಲರೂಪಿಯೂ ಸರೋವರ ವೇಷಿಯೂ ಆದ ಬೃಹದ್ದೇವತೆಯಂತೆ’ ಭಾಸವಾಗುತ್ತದೆ. ಕಥೆಯ ಹಾದಿಯಲ್ಲಿ ಪ್ರಾಸಂಗಿಕವಾಗಿ ಕಣ್ಣಿಗೆ ಬೀಳುವ ಈ ನಿಸರ್ಗದ ಭಾಗವನ್ನು ಅವಸರದಿಂದಾಗಲೀ, ಉದಾಸೀನತೆಯಿಂದಾಗಲೀ ಕವಿ ವರ್ಣಿಸುವುದಿಲ್ಲ. ಒಬ್ಬ ಪೂಜ್ಯ ವ್ಯಕ್ತಿಗೆ ಅರ್ಹವಾದ ಗೌರವಪೂರ್ವಕವಾದ ಪೀಠಿಕೆಗಳನ್ನು ಹಾಕಿಯೇ ಸರೋವರದ ದರ್ಶನ ಮಾಡಿಸುತ್ತಾನೆ.

ಪುರಾಣದಲ್ಲಿ ಬದಲಾಯಿಸಿ

ಗೌರಿಯೊಡನೆ ಸರಸ-ಸಲ್ಲಾಪದಲ್ಲಿ ಮೈ ಮರೆತಿರುವ ಮಹೇಶ್ವರ ಯಾವುದೋ ವಿನೋದಕ್ಕೆ ನಗುತ್ತಾನೆ. ಅದು ರುದ್ರ ನಗೆ. ಹ್ಹ ಹ್ಹ ಹ್ಹ ಎಂದು ಲೋಕಗಳನ್ನು ಪ್ರತಿಧ್ವನಿಸುತ್ತದೆ. ಆ ರುದ್ರ ನಗೆಯೇ ಜಲವಾಯ್ತು ಎನ್ನುತ್ತಾನೆ. ಏಕೆಂದರೆ ಆ ಸರೋವರದ ಅಲೆಗಳು ಅಪ್ಪಳಿಸುವಾಗ ಬರುವ ಸದ್ದು ಹಾಗೆಯೇ ಇದೆ. ಹ್ಹ ಹ್ಹ ಹ್ಹ ಎಂದು ಕೇಳಿ ಬರುವ ರುದ್ರನ ಅಟ್ಟಹಾಸದಂತೆ.

ಕರ್ಣಾಟಕ ಕಾದಂಬರಿಯಲ್ಲಿ ಅಚ್ಛೋದ ಸರೋವರದ ವರ್ಣನೆ ಬದಲಾಯಿಸಿ

ನಾಗವರ್ಮನು ತನ್ನ ಕಥೆಗೆ, ತನ್ನ ಪಾತ್ರಕ್ಕೆ, ತನ್ನ ಸನ್ನಿವೇಶಕ್ಕೆ, ತನ್ನ ಕಾವ್ಯೋದ್ದೇಶಕ್ಕೆ ಮತ್ತು ತನ್ನ ‘ದರ್ಶನ’ದ ಅಂತಿಮ ಪ್ರಯೋಜನಕ್ಕೆ ತಕ್ಕಂತೆ ಆಶ್ಚರ್ಯ, ಆನಂದ, ಸತ್ತ್ವ, ಸಂತೋಷ, ಸೌಂದರ್ಯ, ಬೃಹತ್ತು, ಮಹತ್ತು, ಭವ್ಯತೆ ಈ ದೈವೀಭಾವಗಳ ಉನ್ಮೀಲನ ಮತ್ತು ಉನ್ಮೇಷಣಕ್ಕೆ ಪ್ರೇರಕವಾಗುವ ತಪೋಲೋಕಪ್ರಕೃತವಾದ ಪದಶ್ರೀಯಿಂದ ಪ್ರಚುರನಾಗಿ ಅಚ್ಛೋದ ಸರೋವರ ನಮ್ಮ ಮನಸ್ಸನ್ನು ಹೈಮಾಚಲದ ಔನ್ನತ್ಯಕ್ಕೇರಿಸಿದ ವರ್ಣನೆಗೆ ತೊಡಗುತ್ತಾನೆ:

ಎಲೆ ತಾರಾಗಂ ಹರಂ ಕಣ್ಣಿಡೆ ಕರಗಿದುದಂತಲ್ತು ರುದ್ರಾಟ್ಟಹಾಸಂ
ಜಲಮಾದತ್ತಲ್ತು ಚಂದ್ರಾತಪಮಮೃತರಸಾಕಾರಮಾಯ್ತಲ್ತು ಹೈಮಾ
ಚಲಮಂಭೋರೂಪದಿಂದಂ ಪರಿಣಮಿಸಿದುದಂತಲ್ತು ನೈರ್ಮಲ್ಯ ಶೋಭಾ
ಕಲಿತಂ ತ್ರೈಲೋಕ್ಯ ಲಕ್ಷೀ ಮಣಿಮುಕುರಮೆನಲ್ ಚೆಲ್ವದಾಯ್ತಬ್ಜಷಂಡಂ

ಕುದುರೆ ಏರಿ, ಪರ್ವತಶ್ರೇಣಿಯ ಕಂದರ ಶಿಖರಪ್ರದೇಶಗಳ ನಿಮ್ನೋನ್ನತಗಳನ್ನು ಇಳಿದೇರಿ, ಮುಂಬರಿಯುತ್ತಿದ್ದ ಚಂದ್ರಾಪೀಡನು ಅದೊಂದು ದಿಣ್ಣೆಯನ್ನೇರುತ್ತ ಅದರ ನೆತ್ತಿಯನ್ನು ಸೇರಿದೊಡನೆ, ತೆಕ್ಕನೆ ಕಣ್ಗೊಳಿಸುತ್ತದೆ, ಅನಿರೀಕ್ಷಿತವಾಗಿ, ಆಶ್ಚರ್ಯೋದ್ದೀಪಕವಾಗಿ, ಅಚ್ಛೋದ ಸರೋವರ. ಆ ನೀರಿನ ಹರವು ಬಿಸಿಲನ್ನು ಮರುಬಿಂಬಿಸಿ ತಳತಳನೆ ಕರಗಿದ ಬೆಳ್ಳಿಯಂತೆ ರಾರಾಜಿಸುತ್ತದೆ. ಯೋಜನ ಯೋಜನ ಹಸರಿಸಿರುವ ಪಳುಕಿನ ಕನ್ನಡಿಯಂತೆ ಬಾನನ್ನೂ ಅಲ್ಲಿ ತೇಲುವ ಮೋಡಗಳನ್ನೂ ದಡದಲ್ಲಿ ಉಕ್ಕಿ ಬೆಳೆದಿರುವ ವನಶ್ರೀಯನ್ನೂ ದಿಗ್ಭಿತ್ತಿ ಎಂಬಂತೆ ಒಂದೆಡೆಗೆ ಎದುರಾಗಿ ಹಬ್ಬಿರುವ ಬೆಳ್ಳನೆಯ ಕೈಲಾಸ ಪರ್ವತವನ್ನೂ ಮನೋಹರವಾಗಿ ಪ್ರತಿಬಿಂಬಿಸಿ ‘ನೈರ್ಮಲ್ಯ ಶೋಭಾಕಲಿತಂ ತ್ರೈಲೋಕ್ಯಲಕ್ಷ್ಮೀ ಮಣಿಮುಕುರಮೆನಲ್ ಚೆಲ್ವದಾಯ್ತಬ್ಜಷಂಡಂ!’ ತ್ರಿಲೋಕಲಕ್ಷ್ಮಿ ತನ್ನ ಸೌಂದರ್ಯದರ್ಶನಕ್ಕಾಗಿ ಹಿಡಿದಿರುವ ಶೋಭಾಕಲಿತವಾದ ಮಣಿದರ್ಪಣವಲ್ಲದೆ ಮತ್ತೇನು, ಆ ಮಣಿನಿಕಾಶೋದಕದ ಅಚ್ಛೋದ ಸರೋವರ! ವೈರಾಗಿಗಳ ಚಕ್ರವರ್ತಿ ಪರಮೇಶ್ವರನಿಗೂ ಮೋಹಕಾರಿಯಾಗಿತ್ತು ಎಂದಮೇಲೆ ಹೇಳುವುದೇನು ಆ ಸರೋವರದ ಸೌಂದರ್ಯವನ್ನು:

ಆವುವುಱೆದೆಡೆಗಳೆಂದು ಸ
ರೋವರಮಂ ನೋಡುತಿರ್ಪ ಬಗೆಯಿಂ ಕೈಲಾ
ಸಾವಾಸಮಂ ಬಿಡಂ ಗೌ
ರೀವಲ್ಲಭನೆಂದೊಡಾರಿದಂ ನೆಱೆಪೊಗೞ್ವರ್

ಹೀಗೆ ಮೊದಲಾಗುವ ಅಚ್ಛೋದ ಸರೋವರದ ಪರಿಚಯ ಬರಬರುತ್ತ ಗಾಢತರವೂ ಗಂಭೀರತರವೂ ಆಗಿ, ಕಡೆಗೆ ಗೌರವಪೂರ್ವವಾದ ಪೂಜ್ಯಭಾವಕ್ಕೂ ಭಾಜನವಾಗುತ್ತದೆ. ಮಹಾಶ್ವೇತೆಯ ತಪಸ್ಯೆಯಲ್ಲಿ ಕಂಡುಬರುವ ಶ್ರದ್ಧೆ, ದೃಢತೆ, ಪರಿಶುದ್ಧಿ, ಅಚಂಚಲತೆ, ಕುಶಲ ಪರಿಣಾಮದಲ್ಲಿ ನಿಸ್ಸಂಶಯತೆ, ಇತ್ಯಾದಿ ದೈವೀಗುಣಗಳಿಗೆ ಅಚ್ಛೋದ ನೀರಾಕರದ ನಿತ್ಯಸಾನ್ನಿಧ್ಯವೂ ನಿತ್ಯಸಂಸರ್ಗವೂ ನಿತ್ಯಸಂದರ್ಶನವೂ ಬಹುಮಟ್ಟಿಗೆ ಪ್ರೇರಕವೂ ಪ್ರೋತ್ಸಾಹಕವೂ ಪೋಷಕವೂ ಆಗಿದ್ದುವೆಂದರೆ ಸಂದೇಹಪಡವುದು ನಷ್ಟಚೇತಸ ಲಕ್ಷಣವಾದೀತು.

ಉಲ್ಲೇಖಗಳು ಬದಲಾಯಿಸಿ

  1. ತಪೋನಂದನ : ಸರೋವರದ ಸಿರಿಗನ್ನಡಿಯಲ್ಲಿ
  2. "ಆರ್ಕೈವ್ ನಕಲು". Archived from the original on 2016-03-06. Retrieved 2015-06-22.