ಅಕ್ಷಯ ತೃತೀಯಾ

(ಅಕ್ಷಯ ತೃತೀಯ ಇಂದ ಪುನರ್ನಿರ್ದೇಶಿತ)

ಅಕ್ಷಯ ತೃತೀಯಾ (ಕನ್ನಡದಲ್ಲಿ: ಅಕ್ಷಯ ತದಿಗೆ) ಹಿಂದೂ ಮತ್ತು ಜೈನ ಧರ್ಮೀಯರಿಗೆ ಮಂಗಳಕರವಾದ ದಿನವಾಗಿದ್ದು, ವೈಶಾಖ ಮಾಸದ ಶುಕ್ಲ ಪಕ್ಷ ಮೂರನೆಯ ದಿನ(ತದಿಗೆ)ದಂದು ಅಕ್ಷಯ ತೃತೀಯಾವನ್ನು ಆಚರಿಸಲಾಗುತ್ತದೆ. ಈ ದಿನ ಖರೀದಿಸಿದ ಬಂಗಾರವು ಎಂದಿಗೂ ಅಕ್ಷಯವಾಗಿ ಉಳಿಯುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಶಾಶ್ವತ ಇದೆ. ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮುಗಿಯದಂತಹ (ಅ-ಕ್ಷಯ) ಮಂಗಳಕರವಾದ ಸಿದ್ಧಿಗಳು ಉಂಟಾಗುವವು ಎಂಬ ನಂಬಿಕೆಯಿದೆ.[]

ಹಿಂದೂ ಧರ್ಮದಲ್ಲಿ

ಬದಲಾಯಿಸಿ

ಪಾಂಡವರು ವನವಾಸದಲ್ಲಿ ಇದ್ದ ಸಂದರ್ಭದಲ್ಲಿ, ಪಾಂಡವರು ಮತ್ತು ಅವರ ಪತ್ನಿ ದ್ರೌಪದಿ ಆಹಾರದ ಕೊರತೆಯಿಂದ ಬಳಲುತ್ತಿದ್ದರು. ಮಾತ್ರವಲ್ಲ, ತಮ್ಮಲ್ಲಿಗೆ ಭೇಟಿ ಕೊಟ್ಟ ಅತಿಥಿಗಳಿಗೆ ಸರಿಯಾದ ಭೋಜನವನ್ನು ಪೂರೈಸಲು ಕಷ್ಟವಾಗುತ್ತಿತ್ತು. ಒಮ್ಮೆ ಇಂತಹ ಪರಿಸ್ಥಿತಿಯಲ್ಲಿರುವಾಗ, ಭಗವಾನ್ ಶ್ರೀಕೃಷ್ಣ, ತಯಾರಿಸಿದ ಆಹಾರ ಎಂದಿಗೂ ಕ್ಷಯವಾಗದಂತಹ ಪಾತ್ರೆಯೊಂದನ್ನು ದ್ರೌಪದಿಗೆ ನೀಡಿದನು. ಇದರ ಸಹಾಯದಿಂದ ಪಾಂಡವರಿಗೆ, ತಮ್ಮಲ್ಲಿಗೆ ಬಂದ ಅತಿಥಿಗಳಿಗೆ ಬೇಕುಬೇಕಾದ ಆಹಾರ ಪದಾರ್ಥಗಳನ್ನು ಕ್ಷಣಾರ್ಧದಲ್ಲಿ ತಯಾರಿಸಲು ಸಹಕಾರಿಯಾಗುತ್ತಿತ್ತು. ಹೀಗೆ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಪಾತ್ರೆಯನ್ನು ನೀಡಿದ್ದು ಇದೇ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ, ಕೃತಯುಗವು ಅಕ್ಷಯ ತದಿಗೆಯಂದು ಆರಂಭವಾಯಿತು.

ಹಿಂದುಗಳಿಗೆ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಾದ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳು ಭಕ್ತರ ದರ್ಶನಕ್ಕಾಗಿ ತೆರೆಯಲ್ಪಡುವುದೂ ಸಹ ಅಕ್ಷಯ ತೃತೀಯಾದಂದು.[]

ಇನ್ನು, ಇದೇ ದಿನ ಭಗೀರಥನ ಪ್ರಯತ್ನದಿಂದಾಗಿ ಗಂಗೆಯು ಧರೆಗೆ ಇಳಿದು ಬಂದಳು. ವಿಷ್ಣುವು ಪರಶುರಾಮ ಅವತಾರ ತಾಳಿದ್ದು ಇಂದಿನ ದಿನ. ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಬರವಣಿಗೆ ಆರಂಭಿಸಿದರು ಎಂಬ ನಂಬಿಕೆ ಇದೆ. ಭಕ್ತಿ ಭಂಡಾರಿ ಬಸವೇಶ್ವರರು ಜನಿಸಿದ್ದು ಸಹ ಇದೇ ದಿನ ಆಗಿದೆ.

ವರ್ತಮಾನ ಕಾಲದ ೨೪ ತೀರ್ಥಂಕರರಲ್ಲಿ ಮೊದಲನೆಯವರಾದ ಭಗವಾನ್ ಆದಿನಾಥ(ವೃಷಭದೇವ)ರು, ತಮ್ಮ ಉಪವಾಸವನ್ನು ಕೊನೆಗೊಳಿಸಿ, ಆಹಾರವನ್ನು ಸ್ವೀಕರಿಸಿದ್ದು ಇದೇ ದಿನವಾಗಿದೆ.[] ಮುನಿ ದೀಕ್ಷೆ ಸ್ವೀಕರಿಸಿದ ಆದಿನಾಥರಿಗೆ ಒಂದು ವರ್ಷ ಕಾಲ ಆಹಾರವೇ ಸಿಕ್ಕಿರಲಿಲ್ಲ. ಯಾಕೆಂದರೆ ಆಗ ಜನರಿಗೆ ಆಹಾರ ತಯಾರಿಸುವುದು ಗೊತ್ತಿರಲಿಲ್ಲ!

ಇದಕ್ಕೊಂದು ಹಿನ್ನೆಲೆಯಿದೆ- ಆಗಷ್ಟೆ ಕಲಿಯುಗವು ಆರಂಭವಾಗಿತ್ತು. ಕಲಿಯುಗಕ್ಕೆ ಮುನ್ನ ಭೂಮಿಯಲ್ಲಿ ಇದ್ದ ಕಲ್ಪವೃಕ್ಷಗಳು, ಜನರು ಕೇಳಿದಾಗೆಲ್ಲ, ಬೇಕುಬೇಕಾದ್ದನ್ನು ಕೊಡುತ್ತಿದ್ದವು. ಹಾಗಾಗಿ ಜನರಿಗೆ ಆಹಾರ ತಯಾರಿಸುವುದನ್ನು ಕಲಿಯುವ ಸಂದರ್ಭವೇ ಬರಲಿಲ್ಲ. ಕಲಿಯುಗ ಬರುತ್ತಿದ್ದಂತೆ , ಭೂಮಿಯಲ್ಲಿ ಅಧರ್ಮವು ಹೆಚ್ಚಿದಂತೆಲ್ಲ ಕಲ್ಪವೃಕ್ಷಗಳು ಮಾಯವಾಗಲು ಆರಂಭವಾಗಿತ್ತು. ಆಗ ಅನಿವಾರ್ಯವಾಗಿ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದನ್ನು ಕಲಿಯಬೇಕಾಯಿತು. ಆದರೆ ಹೇಳಿಕೊಡುವವರು ಯಾರು?

೬ ತಿಂಗಳು ಕಠಿಣ ತಪಸ್ಸನ್ನು ಮಾಡಿದ ಮೇಲೆ ಭಗವಾನ್ ಆದಿನಾಥರು ಆಹಾರಕ್ಕೆಂದು ನಗರಕ್ಕೆ ಆಗಮಿಸುತ್ತಾರೆ. ಆದರೆ ದಿಗಂಬರ ಮುನಿಗಳಿಗೆ ನವವಿಧ ಭಕ್ತಿಯಿಂದ ಆಹಾರವನ್ನು ಕೊಡುವ ವಿಧಿಯನ್ನು ಯಾರೂ ತಿಳಿದಿರುವುದಿಲ್ಲ. ಆ ಕಾರಣ ಜನರು, ಮೊದಲೇ ಮಹಾರಾಜರಾಗಿದ್ದ ಅವರನ್ನು ಸತ್ಕರಿಸುವ ಭಾವನೆಯಿಂದ ವಿವಿಧ ಒಡವೆ, ವಸ್ತ್ರಗಳನ್ನು ಕೆಲವು ನೀಡಲು ಮುಂದಾಗುತ್ತಾರೆ, ಕೆಲವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾರೆ. ಆದರೆ ಇದಾವುದನ್ನು ಬಯಸದ ಅವರು ಪುನಃ ಕಾಡಿಗೆ ತಪ್ಪಸ್ಸಿಗೆಂದು ಮರಳುತ್ತಾರೆ.ಇದಾಗಿ ಮತ್ತೆ ೭ ತಿಂಗಳು ೯ ದಿನಗಳ ಉಪವಾಸದ ನಂತರ ಹಸ್ತಿನಾಪುರ ಎಂಬ ನಗರಕ್ಕೆ ಆಹಾರಕ್ಕೆಂದು ಆಗಮಿಸುತ್ತಾರೆ. ಆವಾಗಲು ಪುನಃ ಅದೇ ಘಟನೆಗಳು ಮರುಕಳಿಸುತ್ತವೆ. ಆದರೆ ಅದೇ ನಗರದ ಶ್ರೇಯಾಂಸ ಮಹಾರಾಜ ಇವರ ದರ್ಶನಕ್ಕೆಂದು ಪರಿವಾರ ಸಹಿತ ಆಗಮಿಸುತ್ತಾನೆ. ಆಗ ಅವನಿಗೆ ತನ್ನ ಹಿಂದಿನ ಜನ್ಮದಲ್ಲಿ ಆದಿನಾಥ ಮತ್ತು ಶ್ರೇಯಾಂಸ ಮಹಾರಾಜ, ವಜ್ರಜಂಘ-ಶ್ರೀಮತಿ ದಂಪತಿಗಳಾಗಿ, ಚಾರಣ ದಿಗಂಬರ ಮುನಿಗಳಿಗೆ ನವವಿಧ ಭಕ್ತಿಯಿಂದ ಆಹಾರ ನೀಡಿದ ಸ್ಮರಣೆ ಉಂಟಾಗುತ್ತದೆ.

ಹಿಂದಿನ ಜನ್ಮದ ಸ್ಮರಣೆಯನ್ನು ಮಾಡಿಕೊಂಡ ಶ್ರೆಯಾಂಸನು, ಆದಿನಾಥರಿಗೆ ಇಕ್ಷುರಸ(ಕಬ್ಬಿನ ಹಾಲು)ವನ್ನು ನೀಡುತ್ತಾನೆ.[]

ಉಲ್ಲೇಖಗಳು

ಬದಲಾಯಿಸಿ
  1. "Akshaya Tritiya Facts". calendarlabs.com. calendarlabs. Retrieved 10 September 2021.
  2. "Gangotri Temple opening". euttaranchal.com. euttaranchal. Retrieved 10 September 2021.
  3. ೩.೦ ೩.೧ "ಜೈನ ಧರ್ಮದಲ್ಲಿ ಅಕ್ಷಯ ತೃತೀಯ". pratikshana.com. pratikshana.com. Archived from the original on 10 ಸೆಪ್ಟೆಂಬರ್ 2021. Retrieved 10 September 2021.