ಅಕ್ಕಸಾಲಿಗರ ಉದ್ಯಮ

(ಅಕ್ಕಸಾಲಿ ಇಂದ ಪುನರ್ನಿರ್ದೇಶಿತ)

ಅಕ್ಕಸಾಲಿಗರ ಉದ್ಯಮ

ಬದಲಾಯಿಸಿ

ಅಕ್ಕಸಾಲಿಗ ಪದದ ಮೂಲ ರೂಪ ಅರ್ಕಶಾಲಿ. ಜಗತ್ತನ್ನು ಸೃಷ್ಟಿಸಿದವನೆಂದೂ ಜಗಚ್ಛಿಲ್ಪಿಯೆಂದೂ ಸರ್ವಹೃದಯಗಳಲ್ಲೂ ಸ್ಥಿತನಾಗಿರುವ ಪರಬ್ರಹ್ಮರೂಪಿಯೆಂದೂ ವೇದಗಳಲ್ಲಿ ವರ್ಣಿತವಾಗಿರುವನು ವಿಶ್ವಕರ್ಮ. ವಿಶ್ವಕರ್ಮ (ಅಕ್ಕಸಾಲಿಗ) ವಂಶದ ಮೂಲಪುರುಷ. ಇವನ 5 ಮಂದಿ ಮಕ್ಕಳು ಋಷಿಪುಂಗವರಾಗಿದ್ದು 5 ಶಿಲ್ಪಕಾಯಕಗಳ ಪ್ರವರ್ತಕರಾಗಿದ್ದಾರೆ; ಮನು ಕಬ್ಬಿಣದ ಕೆಲಸಗಳನ್ನು ಪ್ರವರ್ತಿಸಿದವನು. ಮಯ ಮರಗೆಲಸವನ್ನು ತಿಳಿಸಿದವನು. ಯಜ್ಞಕರ್ಮಗಳಿಗೆ ಬೇಕಾದ ಪಾತ್ರೆ ಪಡಗಗಳನ್ನು ತಯಾರಿಸಿದವನು ತ್ವಷ್ಟೃ. ವಿಗ್ರಹ ಹಾಗೂ ದೇವಾಲಯಗಳ ಕರ್ತೃವೇ ಶಿಲ್ಪಿ. ಮಾಂಗಲ್ಯಾದಿ ಆಭರಣಗಳನ್ನು ಮಾಡಿದವನು ವಿಶ್ವಜ್ಞ. ಈ ವಿವರ ಅಕ್ಕಸಾಲಿಗರ ಉದ್ಯಮದ ವ್ಯಾಪ್ತಿಯನ್ನು ಚೆನ್ನಾಗಿ ತಿಳಿಸುತ್ತದೆ.

ಬಂಗಾರದ ಆಭರಣಗಳನ್ನು ಮಾಡುವೆಡೆಯನ್ನು ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಅಕ್ಷಶಾಲೆಯೆಂದು ಪ್ರಸ್ತಾಪಿಸುತ್ತಾನೆ. ಅಕ್ಷಶಾಲೆಗೆ ಈಗ ಕನ್ನಡ ಪ್ರತ್ಯಯ ಸೇರಿ ತದ್ಭವವಾದಾಗ ಅಕ್ಕಸಾಲಿಗ ಆಗುತ್ತದೆ. ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ತಯಾರಿಸುವ ಕುಶಲಕರ್ಮಿಗಳಾದ ಅಕ್ಕಸಾಲಿಗರಿಗೆ ಓಜರು, ಚಿನಿವಾರರು, ರಥಕಾರರು, ನಾಡಿಂದಮರು, ಸೊನೆಗಾರರು ಎಂಬ ಹೆಸರುಗಳು ಇವೆ. ಬಂಗಾರ, ಬೆಳ್ಳಿ, ವಜ್ರ, ರತ್ನ, ಮಣಿಗಳು ಮುಂತಾದ ಪ್ರಶಸ್ತ ವಸ್ತುಗಳನ್ನು ಬಳಸಿ ಸೂಕ್ಷ್ಮತಮ ಕುಸುರಿಕೆಲಸಗಳನ್ನು ನಡೆಸಿ ಆಭರಣಗಳನ್ನು ಸಿದ್ಧಪಡಿಸುವುದರಲ್ಲಿ ಇವರು ನಿಷ್ಣಾತರು.

ಗತಕಾಲದ ನಾಗರಿಕತೆಯನ್ನು ಗುರುತಿಸುವಾಗೆಲ್ಲ ಆ ತಲೆಮಾರುಗಳ ಅಕ್ಕಸಾಲಿಗರು ರಚಿಸಿದ ವಿನ್ಯಾಸಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ; ಪ್ರಾಚೀನ ಶಿಲ್ಪ ಹಾಗೂ ಚಿತ್ರಗಳಲ್ಲಿ ಅಕ್ಕಸಾಲಿಗರ ನಿರ್ಮಾಣ ಕೌಶಲ್ಯ ವ್ಯಕ್ತವಾಗುತ್ತದೆ. ಅನೇಕ ವೇಳೆ ಶಿಲ್ಪಗಳಲ್ಲಿ ಉಡುಪಿಗಿಂತಲೂ ಹೆಚ್ಚಾಗಿ ಧರಿಸಲಾಗಿರುವ ಆಭರಣಗಳನ್ನು ಕಾಣಬಹುದಲ್ಲದೆ ಅವುಗಳ ವಿನ್ಯಾಸವೂ ಕಾಲಕಾಲಕ್ಕೆ ಬದಲಾಗಿರುವುದು ಗೋಚರವಾಗುತ್ತದೆ. ಪ್ರ.ಶ.ಪು.2500ರ ಸಮಯದ ಹಿಂದೂ ಕಣಿವೆ ನಾಗರಿಕತೆಯ ಅಕ್ಕಸಾಲಿಗರು ಬೆಳ್ಳಿ ಬಂಗಾರ ಮತ್ತು ತಾಮ್ರದ ಆಭರಣಗಳನ್ನು ತಯಾರಿಸಿದ್ದಾರೆ. ಛಂಕವನ್ನೂ (ಒಂದು ಬಗೆಯ ಕೊಂಬು) ರಕ್ತವರ್ಣದ ಮಣಿಗಳನ್ನೂ ಆಗಿನ ಜನ ಆಭರಣಗಳಿಗಾಗಿ ಬಳಸುತ್ತಿದ್ದರು. ಅಲ್ಲಿನ ಅಕ್ಕಸಾಲಿಗರು ಬೆಳ್ಳಿ, ಬಂಗಾರ, ಮಣಿಗಳು, ನುಣುಪು ಶಿಲೆಯ ಹರಳುಗಳು - ಇವನ್ನು ಬಳಸಿ ಹಾರಗಳನ್ನು ತಯಾರಿಸುತ್ತಿದ್ದರು. ಪ್ರ.ಶ.ಪು. 1500ರ ಹೊತ್ತಿಗೆ ಭಾರತಕ್ಕೆ ಬಂದ ಆರ್ಯರು ಅಳಿದುಳಿದ ಹಿಂದೂ ಕಣಿವೆ ನಾಗರಿಕರಂತೆಯೇ ಬೆಳ್ಳಿ ಬಂಗಾರಗಳ ಕುಶಲತೆಯಲ್ಲಿ ಚೆನ್ನಾಗಿ ತರಪೇತಾಗಿದ್ದವರೇ. ಅಲ್ಲಿಂದ ಮುಂದೆ ಪ್ರ.ಶ.ಪು.300ರವರೆಗೆ ಅಕ್ಕಸಾಲಿಗರ ಕಲೆಯ ಬಗ್ಗೆ ಸ್ಪಷ್ಟ ದಾಖಲೆ ಸಿಗುವುದಿಲ್ಲ. ಸುವರ್ಣಯುಗ ಎಂದು ಕರೆಯಲಾದ ಗುಪ್ತರ ಆಳ್ವಿಕೆಯ ಕಾಲವು ಭಾರತೀಯ ಕಲೆಯ ಚರಿತ್ರೆಯ ದೃಷ್ಟಿಯಿಂದ ಮಹತ್ತರವಾದದ್ದು. ಪ್ರ.ಶ.ಪು.300 ರಿಂದ ಪ್ರ.ಶ.ಪು.600ರವರೆಗೆ ಹರಡುವ ಆ ಅವಧಿಯಲ್ಲಿ, ಇಡೀ ಭರತಖಂಡವನ್ನು ಪ್ರತಿನಿಧಿಸಲಾಗುವಂಥ ಭಾರತೀಯ ವಿನ್ಯಾಸಕಲೆ ಮತ್ತು ನಿರ್ಮಾಣಕಲೆಗಳಿಗೆ ಮೂರ್ತರೂಪ ಬಂತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಅಕ್ಕಸಾಲಿಗರು, ಅವರ ವೃತ್ತಿ, ಸರ್ಕಾರದ ನಿಯಂತ್ರಣ ಇವುಗಳ ಬಗ್ಗೆ ಮಾಹಿತಿಗಳು ಸಿಗುತ್ತವೆ. ಹುಟ್ಟಿನಿಂದ ಪ್ರಶಸ್ತನಾದ ಮತ್ತು ಸದಾಚಾರವಂತನಾದ ನುರಿತ ಕುಶಲಿ ಅಕ್ಕಸಾಲಿಗನೊಬ್ಬನಿಗೆ ನಡುರಸ್ತೆಯಲ್ಲಿ ಅಂಗಡಿಯೊಂದನ್ನು ಇಟ್ಟುಕೊಳ್ಳಲು ನಿಯಮಿಸಲಾಗುತ್ತಿತ್ತು. ಬೆಳ್ಳಿ ಬಂಗಾರಗಳ ಆಭರಣಗಳನ್ನು ಜನರು ಕೊಳ್ಳುವುದರಲ್ಲೂ ಮಾರುವುದರಲ್ಲೂ ಅವರಿಗೆ ನೆರವಾಗುವುದು ಅವನ ಕೆಲಸ. ಆಸ್ಥಾನದ ಅಕ್ಕಸಾಲಿಗನು ಅಕ್ಷಶಾಲೆಯಲ್ಲಿ ಕೆಲಸ ಮಾಡಲು ಅಕ್ಕಸಾಲಿಗರನ್ನು ನಿಯಮಿಸುತ್ತಿದ್ದ. ಆ ಅಕ್ಕಸಾಲಿಗರು ನಾಗರಿಕರಿಂದ ಲೋಹವನ್ನು ಪಡೆದು ಬೆಳ್ಳಿ ಬಂಗಾರಗಳ ನಾಣ್ಯಗಳನ್ನೂ ಆಭರಣಗಳನ್ನೂ ತಯಾರಿಸಿಕೊಡುತ್ತಿದ್ದರು. ಗಟ್ಟಿ ಮೈಯಿನ ಆಭರಣಗಳ ತಯಾರಿಕೆ ಘನ; ಬಿಂದಿಗೆ ಲೋಟ ಮುಂತಾದ ಪೊಳ್ಳು ಮೈಯಿನ ವಸ್ತುಗಳ ತಯಾರಿಕೆ - ಘನಸುಶಿರ; ಬೆಸುಗೆ ಹಾಕುವಿಕೆ - ಸಂಯೂಹ್ಯ; ಧಾತುಗಳ ಸಂಯೋಜನೆ - ಅವಲೇಪ್ಯ; ಮುಲಾಮು ಹಾಕುವಿಕೆ - ವಾಸೀತಕಂ - ಇವು ಅಕ್ಕಸಾಲಿಗರು ನಡೆಸುತ್ತಿದ್ದ ಕುಶಲಕರ್ಮಗಳು. ರತ್ನಮಣಿ ಮುಂತಾದುವನ್ನು ಬಂಗಾರದ ಮೈಮೇಲೆ ಹುದಗುವುದನ್ನು ಕ್ಷೇಪಣ ಎಂದೂ ಬಂಗಾರವನ್ನು ಮತ್ತು ಬೆಳ್ಳಿಯನ್ನು ಎಳೆಗಳನ್ನಾಗಿ ಎಳೆಯುವುದನ್ನು ಗುಣ ಎಂದೂ ಕರೆಯಲಾಗುತ್ತಿತ್ತು. ಅಕ್ಕಸಾಲಿಗರ ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ದರಗಳಲ್ಲಿ ರುಸುಮನ್ನು ನಿಶ್ಚಯ ಮಾಡಲಾಗಿತ್ತು. ಕೆಲಸದಲ್ಲಿ ಅಜಾಗರೂಕತೆ ವಹಿಸಿದರೆ, ಮೋಸಗೊಳಿಸಿದರೆ ಅಕ್ಕಸಾಲಿಗ ತನ್ನ ವೇತನದ ರುಸುಮಿನ ಹಲವು ಪಟ್ಟು ದಂಡ ತೆರಬೇಕಾಗುತ್ತಿತ್ತು. ಅಕ್ಷಶಾಲೆಯ ಹೊರಗೆ ಮತ್ತೆಲ್ಲಿಯಾದರೂ ಆಭರಣದ ತಯಾರಿಕೆ ಅಥವಾ ಇನ್ನಾವುದೇ ಬೆಳ್ಳಿ ಬಂಗಾರಗಳ ಕೆಲಸ ನಡೆಸಿದರೆ ಅವರಿಗೆ ದಂಡ ವಿಧಿಸಲಾಗುತ್ತಿತ್ತು. ಅಕ್ಷಶಾಲೆಯ ಮೇಲ್ವಿಚಾರಕನಾದ ಆಸ್ಥಾನದ ಅಕ್ಕಸಾಲಿಗನು ವಿವಿಧ ಮೂಲಗಳಿಂದ ಬರುವ ವಜ್ರಗಳ ಗುಣ, ತೂಕ, ಸಂಯೋಜನೆ, ಜಾತಿಗಳು (ಪುದ್ಗಲ ಲಕ್ಷಣಗಳು); ಪ್ರಶಸ್ತ ಹರಳುಗಳು (ಮಣಿ); ಮುತ್ತು, ಹವಳ, ನಾಣ್ಯಗಳು (ರೂಪ); ಇವುಗಳಲ್ಲಿ ಪಾರಂಗತನಾಗಿರುತ್ತಿದ್ದ. ಕೌಟಿಲ್ಯನ ಅರ್ಥಶಾಸ್ತ್ರದ ಮೂಲಕ ಸುವರ್ಣಯುಗದಲ್ಲಿ ಅಕ್ಕಸಾಲಿಗರು ನಡೆಸುತ್ತಿದ್ದ ಕುಶಲಕರ್ಮಗಳ ವೈವಿಧ್ಯ ಮನದಟ್ಟಾದರೂ ಈವರೆಗೆ ದೊರೆತ ಅವಶೇಷಗಳಲ್ಲಿ ಆಗಿನ ಕಾಲದ ಆಭರಣಗಳು ದೊರೆತಿಲ್ಲ. ಆದರೆ ತಕ್ಷಶಿಲೆಯಲ್ಲಿ ಒಟ್ಟಾಗಿ ಸಿಕ್ಕ ಸುಮಾರು 180 ಆಭರಣಗಳು ಪ್ರ.ಶ.ಪು.1ನೆಯ ಶತಮಾನಕ್ಕೆ ಸೇರಿದುವೆಂದು ಹೇಳಲಾಗುತ್ತಿದೆ. ಆ ಆಭರಣಗಳಲ್ಲಿ ಅಕ್ಕಸಾಲಿಗರು ಬಳಸಿರುವ ಅಚ್ಚು, ಎರಕ, ಜಾಲಂದ್ರ ವಿನ್ಯಾಸ - ಈ ವಿಧಾನಗಳು ಪ್ರ.ಶ.ಪು.500ರ ಸಮಯದ ಗ್ರೀಕ್ - ರೋಮನ್ ಪದ್ಧತಿಗಳನ್ನು ಹೋಲುತ್ತದೆ. ಏನೇ ಆದರೂ, ಈ ಪೈಕಿ ಯಾವುದೇ ವಿಧಾನವೂ ಪಶ್ಚಿಮದಿಂದ ಪಡೆದದ್ದು ಎಂಬುದಾಗಿ ಭಾವಿಸಲು ಸಾಧ್ಯವಾಗುವುದಿಲ್ಲ ಎಂದು ಪಾಶ್ಚಾತ್ಯ ತಜ್ಞರು ಒಪ್ಪಿಕೊಳ್ಳುತ್ತಾರೆ.

ಪ್ರಸಕ್ರ ಶಕ ಆರಂಭವಾದ ಮೇಲೂ ಅಕ್ಕಸಾಲಿಗ ಕುಶಲಕರ್ಮಗಳಿಗೆ ಅನ್ಯಾದೃಶವಾದ ಅವಕಾಶವಿತ್ತು. ಪ್ರ.ಶ. 1, 3, 4, 7ನೆಯ ಶತಮಾನಗಳ ಅಕ್ಕಸಾಲಿಗರು ತಯಾರಿಸಿದ ಕೆಲವು ಆಭರಣಗಳು ಲಭ್ಯವಾಗಿವೆ. ಏನೇ ಆದರೂ ಕ್ರಿಸ್ತಶಕೆಯ ಮೊದಲ ಹದಿನಾರು ಶತಮಾನಗಳ ಅಕ್ಕಸಾಲಿಗರ ಕಲೆಯನ್ನು ಅಭ್ಯಾಸ ಮಾಡಲು ವರ್ಣಚಿತ್ರಗಳ ಮತ್ತು ಶಿಲ್ಪಗಳ ಮೊರೆ ಹೋಗಬೇಕಾಗುತ್ತದೆ. ಸು. 2 - 7ನೆಯ ಶತಮಾನದವರೆಗಿನ ಅಕ್ಕಸಾಲಿಗರ ಕಲೆಯನ್ನು ಅಜಂತಾ ಗುಹೆಗಳು ಮುಂತಾದೆಡೆ ಸ್ಥಿತವಾಗಿರುವ ಕಲೆಯಲ್ಲಿ ಗುರುತಿಸಿಬಹುದು. ಅಲ್ಲಿ ಕಂಡುಬರುವ ಆಕೃತಿ ರಚನೆ ಮತ್ತು ನಿರ್ಮಾಣದ ವಿಧಾನ - ಇವು ಸು. 16ನೆಯ ಶತಮಾನದ ಐರೋಪ್ಯ ಅಕ್ಕಸಾಲಿಗ ಕಲೆಯನ್ನು ಮೀರಿಸಿವೆ. ಅನಂತರ ಭಾರತಕ್ಕೆ ಆಗಮಿಸಿದ ಮುಸ್ಲಿಂ ಅಕ್ಕಸಾಲಿಗರ ಕಲೆಯೂ ಪ್ರಸಿದ್ಧವಾದುವೇ. ಮುಸ್ಲಿಂ ರಚನಾ ವಿನ್ಯಾಸಗಳು ಹಿಂದೂ ವಿನ್ಯಾಸಗಳಿಗೆ ವ್ಯತಿರಿಕ್ತವಾದುವೇನೂ ಆಗಿರಲಿಲ್ಲ. ಕಾಲಕ್ರಮೇಣ ಎರಡೂ ವೈಖರಿಗಳು ಸರಿಸುಮಾರು ಒಂದೇ ಆಗಿ ಹೋದುವು. 17, 18, 19ನೆಯ ಶತಮಾನಗಳಲ್ಲಿ ಕಾಶ್ಮೀರ, ದೆಹಲಿ, ಜೈಪುರ, ಲಾಹೋರ್, ಕಲ್ಕತ್ತ, ಮುಂಬಯಿ, ಮದರಾಸು, ಹೈದರಾಬಾದ್ - ಇವು ಕುಶಲ ಅಕ್ಕಸಾಲಿಗರ ಕೇಂದ್ರಗಳಾಗಿದ್ದವು. ಕಾಶ್ಮಿರೀ ಮತ್ತು ಪಂಜಾಬಿ ಅಕ್ಕಸಾಲಿಗರು ಮಣಿಗಳನ್ನು ಹರಳುಗಳನ್ನು ಹುದುಗುವುದರಲ್ಲಿ ನಿಷ್ಣಾತರಾಗಿದ್ದರು. ರಜಪುತ ಅಕ್ಕಸಾಲಿಗರು ಮಿನಾಯಿ (ಎನಾಮಲ್) ಕಲೆಗೆ ಹೆಸರಾಗಿದ್ದರು.

ಬ್ಯಾಂಕಿಂಗ್ ಉದ್ಯಮದ ಮೂಲಪುರುಷ: ಇಂಗ್ಲೆಂಡಿನ ಬ್ಯಾಂಕಿಂಗ್ ಉದ್ಯಮದ ಮೂವರು ಮೂಲಪುರುಷರಲ್ಲಿ ಅಕ್ಕಸಾಲಿಗನೂ ಒಬ್ಬ. ಇನ್ನಿಬ್ಬರು ಮೂಲ ಪುರುಷರು - ಸಂಚಾರೀ ವ್ಯಾಪಾರಿ ಮತ್ತು ಲೇವಾದೇವಿ ಹಣವಂತ. 17ನೆಯ ಶತಮಾನದ ಇಂಗ್ಲೆಂಡಿನ ಅಕ್ಕಸಾಲಿಗ ತನ್ನ ವೃತ್ತಿಗನುಗುಣವಾಗಿ ತನ್ನ ಆಭರಣಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿರುತ್ತಿದ್ದ. ಅವನ ಗಿರಾಕಿಗಳು ತಮ್ಮ ಬೆಲೆ ಬಾಳುವ ವಸ್ತುಗಳನ್ನು ಸಂರಕ್ಷಣೆಗಾಗಿ ಆಗಾಗ ಅವನಲ್ಲಿ ಇಡುತ್ತಿದ್ದುದೂ ಉಂಟು. ವ್ಯಾಪಾರಗಾರರು ಬಂಗಾರದ ರೂಪದಲ್ಲಿರುತ್ತಿದ್ದ ತಮ್ಮ ಹಣದ ಥೈಲಿಗಳನ್ನು ಲಂಡನ್ ನಗರದ ಟವರ್ ಆಫ್ ಲಂಡನ್ ಗೋಪುರದಲ್ಲಿ ಭದ್ರಪಡಿಸುತ್ತಿದ್ದರು. ಆದರೆ 1640ರಲ್ಲಿ ಮೊದಲ ಚಾರಲ್ಸ್ ದೊರೆ ತನಗೆ ಹಣದ ಅಗತ್ಯ ಬಿದ್ದಾಗ ಗೋಪುರದಲ್ಲಿದ್ದ ವ್ಯಾಪಾರಗಾರರ ಸಂಪತ್ತನ್ನು ಮುಟ್ಟುಗೋಲು ಪಡಿಸಲು ಬೇರೆ ನೆಲೆಗಳನ್ನು ಹುಡುಕಿದರು. ಆಗ ಅವರಿಗೆ ಅಕ್ಕಸಾಲಿಗನೇ ಸುರಕ್ಷಕನಾಗಿ ಕಂಡ. ಅಲ್ಲಿಂದಲೇ ಅಕ್ಕಸಾಲಿಗರ ಉಪವೃತ್ತಿ ಇತರ ವಾರಸುದಾರರ ಚಿನ್ನದ ರೂಪದ ಹಣವನ್ನು ಭದ್ರಪಡಿಸುವುದಾಯಿತು. ವಾರಸುದಾರರು ಠೇವಣಿ ಮಾಡಿದ ಬಂಗಾರಕ್ಕೆ ಅಕ್ಕಸಾಲಿಗ ರಶೀತಿಯೊಂದನ್ನು ಕೊಡುತ್ತಿದ್ದ. ಇಟ್ಟ ಬಂಗಾರವನ್ನು ಹಿಂದೆಗೆದುಕೊಳ್ಳಲು ರಶೀತಿ ಆಧಾರವಾಗಿರುತ್ತಿತ್ತು. ಆ ಉದ್ದೇಶಕ್ಕಾಗಿ ಮಾತ್ರ ರಶೀತಿಯನ್ನು ಬಳಸಲಾಗುತ್ತಿತ್ತು. ಕ್ರಮೇಣ ಅಕ್ಕಸಾಲಿಗರ ಪ್ರಸಿದ್ಧಿ ಹರಡಿದಂತೆ ವ್ಯಾಪಾರಗಾರರು ಬಂಗಾರದ ಥೈಲಿಗಳನ್ನು ಹೊತ್ತು ಹೋಗುವಾಗ ಜಾಗ್ರತೆ ವಹಿಸಬೇಕಾದುದು ಸಹ ತಪ್ಪುವುದೆಂಬ ಅರಿವು ಮೂಡಿದಂತೆ ಅಕ್ಕಸಾಲಿಗನ ರಶೀತಿಗೆ ಇದ್ದ ಪ್ರಾಶಸ್ತ್ಯ ಹೆಚ್ಚಿತು. ಹೀಗೆ ಘನರೂಪದ ಬಂಗಾರದ ನಾಣ್ಯಗಳ ಸ್ಥಾನವನ್ನು ಅಕ್ಕಸಾಲಿಗನ ರಶೀತಿ ಆಕ್ರಮಿಸಿತು. ಕಡೆಗೆ ಬೇರೆ ಬೇರೆ ಪ್ರದೇಶಗಳ ವ್ಯಾಪಾರಿಗಳು ರಶೀತಿಯ ಮೇಲಿನ ಹೆಸರುಗಳನ್ನು ಬದಲಾಯಿಸಿಕೊಳ್ಳುವುದರ ಮೂಲಕವೇ ಕೊಡುವ, ಕೊಳ್ಳುವ ಅನುಕೂಲತೆಯನ್ನು ಕಂಡುಕೊಂಡರು. ಇಂದಿನ ಚೆಕ್ ಹೀಗೆ ಅವತಾರ ತಾಳಿತು. ವಾರಸುದಾರರು ಯಾರೇ ಆಗಿರಲಿ, ತನ್ನ ರಕ್ಷಣೆಗೆ ಒಳಗಾಗಿರುವ ಬಂಗಾರದ ಪ್ರಮಾಣದ ಆಧಾರದ ಮೇಲೆ, ಇರುವ ಮೊಬಲಗಿಗಿಂತ ಒಂದಷ್ಟು ಪ್ರಮಾಣ ಹೆಚ್ಚು ಹಣಕ್ಕೆ ಅಕ್ಕಸಾಲಿಗ ರಶೀತಿಗಳನ್ನು ಚಲಾಯಿಸಲು ಮೊದಲುಮಾಡಿದ. ಹೀಗೆ ಹಣದ ಚಲಾವಣೆಯ ಜೊತೆಗೆ ಹಣವನ್ನು ಹುಟ್ಟುಹಾಕುವುದನ್ನೂ ಕಲಿತ. ಇಂದಿನ ಅಗಾಧ ಪ್ರಮಾಣದ ಬ್ಯಾಂಕಿಂಗ್ ವ್ಯವಸ್ಥೆಯ ಉಗಮಕ್ಕೆ ಹೀಗೆ ಅಕ್ಕಸಾಲಿಗ ಕಾರಣನಾದ. ಬ್ಯಾಂಕಿಂಗ್ ಉದ್ಯಮದ ಮೂಲಪುರುಷರಲ್ಲಿ ಮೊದಲನೆಯವನಾದ ಸಂಚಾರೀ ವ್ಯಾಪಾರಿ ಹಣದ ಚಲಾವಣೆಗೆ ಕಾರಣಪುರುಷನಾದ. ಎರಡನೆಯ ಮೂಲಪುರುಷನಾದ ಲೇವಾದೇವಿ ಮಾಡುವ ಹಣವಂತನು ಸಮಾಜದಲ್ಲಿ ಉಳಿತಾಯ ಮಾಡುವವರ ಹೆಚ್ಚುವರಿ ಹಣವನ್ನು, ಹಣದ ಅಗತ್ಯವಿರುವ ಇತರರಿಗೆ ಒದಗಿಸಿಕೊಡುವುದರಲ್ಲಿ ನೆರವಾದನು. ಆದರೆ ಮೂರನೆಯ ಮೂಲಪುರುಷನಾದ ಅಕ್ಕಸಾಲಿಗ ಇವರಿಬ್ಬರನ್ನೂ ಒಳಗೊಂಡಂತೆ ವಹಿವಾಟಿಗೆ ಒಂದು ವ್ಯವಸ್ಥೆಯನ್ನು ಒದಗಿಸಿಕೊಟ್ಟ.

ಇಂದಿನ ಅಕ್ಕಸಾಲಿಗರು: ದಿನೇ ದಿನೇ ಅಕ್ಕಸಾಲಿಗ ಕಸಬಿನ ಜನರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಹಳ್ಳಿ ಮತ್ತು ನಗರಗಳಲ್ಲಿ ಅಕ್ಕಸಾಲಿಗರು ವಿಪುಲವಾಗಿದ್ದಾರೆ. ಅಕ್ಕಸಾಲಿಗರು ಒಬ್ಬೊಬ್ಬರೇ ಅಥವಾ ಗುಂಪುಗುಂಪಾಗಿ ತಮ್ಮ ಕರ್ಮಾಗಾರಗಳನ್ನು ಅನುಕೂಲಕ್ಕೆ ಅಗತ್ಯಕ್ಕೆ ತಕ್ಕಂತೆ ಏರ್ಪಡಿಸಿಕೊಳ್ಳುತ್ತಾರೆ. ಬಂಗಾರವನ್ನು ಕಾಯಿಸುವುದು, ಎರಕ ಹುಯ್ಯುವುದು, ಅಚ್ಚು ಒತ್ತುವುದು, ಬೇರೆ ಬೇರೆ ಬಗೆಯ ಆಭರಣಗಳನ್ನು ತಯಾರಿಸುವುದು - ಎಲ್ಲವನ್ನೂ ಒಬ್ಬ ಅಕ್ಕಸಾಲಿಗನೇ ಮಾಡಬಲ್ಲನಾದರೂ ಅನುಕೂಲದ ದೃಷ್ಟಿಯಿಂದ ಅಕ್ಕಸಾಲಿಗರು ಗುಂಪುಗೂಡುತ್ತಾರೆ. ನಗರಗಳಲ್ಲಂತೂ ಒಂದೇ ಒಂದು ಬಗೆಯ ಕೆಲಸ ಮಾಡುವ ಕರ್ಮಾಗಾರಗಳು ಹುಟ್ಟಿಕೊಂಡು ಅಕ್ಕಸಾಲಿಗರಿಗೆ ನೆರವಾಗುತ್ತಿವೆ. ಅಕ್ಕಸಾಲಿಗರು ಸಾಮಾನ್ಯವಾಗಿ ಬೆಳ್ಳಿ ಮತ್ತು ಬಂಗಾರ ಎರಡೂ ಲೋಹಗಳಿಂದ ಆಭರಣಗಳನ್ನು ತಯಾರಿಸುತ್ತಾರೆ. ಶುದ್ಧ ಬಂಗಾರದ ಶೇಕಡ ಮಟ್ಟವನ್ನು ಇಂತಿಷ್ಟು ಕ್ಯಾರೆಟ್ ಇದೆ ಎಂಬುದಾಗಿ ಹೇಳುವುದು ರೂಢಿಯಲ್ಲಿದೆ. ಬಂಗಾರದ ನ್ಯಾಯಬದ್ಧವಾದ ಮಟ್ಟಗಳು ಅನುಕ್ರಮವಾಗಿ ಶೇ.91.67, ಶೇ.75, ಶೇ.58.5, ಶೇ.37.5 ಶುದ್ಧ ಬಂಗಾರವನ್ನುಳ್ಳ 22, 18, 14 ಮತ್ತು 9 ಕ್ಯಾರೆಟ್ಗಳಾಗಿರುತ್ತವೆ. ಗಡುಸಾಗಿದ್ದು ಬಾಳಿಕೆ ಬರಲೆಂಬ ಉದ್ದೇಶದಿಂದ ಬಂಗಾರಕ್ಕೆ ಮಿಶ್ರ ಮಾಡುವ ಲೋಹಗಳು ತಾಮ್ರ ಮತ್ತು ಬೆಳ್ಳಿ. ಬಂಗಾರದ ಮಟ್ಟವನ್ನು ಕಂಡುಹಿಡಿಯುವ ಅತಿ ಸಾಮಾನ್ಯ ಹಾಗೂ ಪ್ರಚಲಿತ ವಿಧಾನವೆಂದರೆ ಒರೆಗಲ್ಲಿನ ಮೇಲೆ ಅದನ್ನು ತೀಡುವುದು. ಲೋಹವನ್ನು ಒರೆಗಲ್ಲಿನ ಮೇಲೆ ತೀಡಿದಾಗ ಉಂಟಾಗುವ ಗೆರೆಯ ಬಣ್ಣವನ್ನು ಶುದ್ಧಲೋಹದಿಂದಾದ ಗೆರೆಯ ಬಣ್ಣದ ಜೊತೆ ಹೋಲಿಸಿದಾಗ ಲೋಹದ ಪರಿಶುದ್ಧತೆ ವ್ಯಕ್ತವಾಗುತ್ತದೆ. ಅನುಭವಿಗಳಾದ ಅಕ್ಕಸಾಲಿಗರು ಮತ್ತು ವಣಿಕರು ಲೋಹದ ಮಟ್ಟವನ್ನು ಬಲುಬೇಗ ಕಂಡುಕೊಳ್ಳುತ್ತಾರೆ. ಬಂಗಾರದ ಜೊತೆ ಮಿಶ್ರ ಮಾಡಲಾಗಿರುವುದು ತಾಮ್ರವೋ ಅಥವಾ ಬೆಳ್ಳಿಯೋ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಈಗ ಚಿನ್ನದ ಶುದ್ಧತೆಯನ್ನು ಕಂಡುಹಿಡಿಯಲು ಯಂತ್ರಗಳು ಬಂದಿವೆ. ಅಕ್ಕಸಾಲಿಗರು ಆಭರಣಗಳನ್ನು ತಯಾರಿಸಲು ವಜ್ರ, ಕೆಂಪು, ನೀಲಮಣಿ, ಪಚ್ಚೆ, ಹಸಿರು - ನೀಲಮಣಿ (ಆಕ್ವಾಮೆರಿನ್), ಕ್ಷೀರಸ್ಫಟಿಕ (ಓಪಲ್), ರತ್ನ (ಗಾರ್ನೆಟ್), ಪದ್ಮರಾಗ, ರಕ್ತಶಿಲೆ, ವೈಡೂರ್ಯ (ನೀಲವರ್ಣದ ಅಥವಾ ಹಸಿರು ಛಾಯೆಯ ಪ್ರಶಸ್ತ ಶಿಲೆ), ತೈಲ ಸ್ಫಟಿಕ (ಅಂಬರ್), ಪಡಗ (ಹವಳ) ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ರಾಸಾಯನಿಕ ಸಂವಿಧಾನದ ಹರಳುಗಳು - ಇವುಗಳನ್ನೂ ಉಪಯೋಗಿಸುತ್ತಾರೆ. (ಈ ಪೈಕಿ ಪಚ್ಚೆಗಳನ್ನು ಮರಕತಮಣಿಗಳೆಂದೂ ಕರೆಯುತ್ತಾರೆ. ಇವು ಅಪರೂಪ ಮಣಿಗಳು. ಪ್ರಶಸ್ತವಾದ ಪಚ್ಚೆಮಣಿಯೆಂದರೆ ವಜ್ರಕ್ಕಿಂತಲೂ ಅಮೂಲ್ಯ). ಅಕ್ಕಸಾಲಿಗರು ಸಾಮಾನ್ಯವಾಗಿ ತಯಾರಿಸುವ ಆಭರಣಗಳನ್ನು ಹೀಗೆ ಹೆಸರಿಸಬಹುದು: ರಾಗಟೆ, ಜಡೆಬಿಲ್ಲೆ, ಚೌರಿ, ಬಾವಲಿ, ಓಲೆ, ಪದಕ, ಅಡ್ಡಿಕೆ, ಮೂಗುತಿ, ಲೋಲಕು, ಕಂಕಣಿ, ವಂಕಿ, ಬಾಜೂಬಂದ, ಡಾಬು, ಕಾಲುಗೆಜ್ಜೆ, ಪದಕಗಳಿಗೆ ಕೂಡಿಸಿದ ಒಂದು ಅಥವಾ ಹಲವಾರು ಎಳೆಗಳ ಸರಗಳು, ಕಾಸಿನ ಸರ, ಸೆರಗಿನ ಮತ್ತು ಹರಳಿನ ಬ್ರೋಚುಗಳು, ಉಂಗುರ, ಬಳೆ, ಕಾಲುಂಗರ, ಮಾಂಗಲ್ಯ - ಇತ್ಯಾದಿ. ಇವು ಸ್ತ್ರೀಯರ ಆಭರಣಗಳು. ಪುರುಷರಿಗಾಗಿ ಒಂದೆಳೆ ತುಂಡು ಸರ, ಶರಟಿನ ಗುಂಡಿಗಳು, ತೋಳಿನ ಗುಂಡಿಗಳು, ಕೈಗಡಿಯಾರದ ಸರಪಣಿ - ಇವುಗಳನ್ನು ತಯಾರಿಸುತ್ತಾರೆ. ಬೆಳ್ಳಿಯಿಂದ ತಟ್ಟೆ, ಲೋಟ, ಚಮಚೆ, ಬಟ್ಟಲು, ಭರಣಿ, ತಾಯಿತಿ, ಉಡಿದಾರ, ಪನ್ನೀರುದಾನಿ, ದೇವರಪಟಗಳು ಮುಂತಾದುವನ್ನು ತಯಾರಿಸುತ್ತಾರೆ. ಹಿಂದೂಗಳು ದೇವತಾರಾಧನೆಗೆ ಬಳಸುವ ಬೆಳ್ಳಿ ಮತ್ತು ಬಂಗಾರ ಎರಡೂ ಲೋಹಗಳಿಂದ ಆದ ವಿಗ್ರಹಗಳು, ಪ್ರಭಾವಳಿಗಳು, ಹಲವಾರು ಬಗೆಯ ಹಿಡಿಕೆಗಳು, ಛತ್ರಿಗಳು, ಬೀಸಣಿಕೆಗಳು, ಲಾಂಛನಗಳು ಇವುಗಳನ್ನು ತಯಾರಿಸಲು ಶಾಸ್ತ್ರ ಪ್ರಮಾಣಗಳ ಪರಿಜ್ಞಾನವಿರುವ ಅಕ್ಕಸಾಲಿಗರೇ ಆಗಬೇಕಾಗುತ್ತದೆ. ಇದ್ದಿಲನ್ನುರಿಸುವ ಅಗ್ಗಿಷ್ಟಿಕೆ, ಊದುಕೊಳವೆ, ತಿದಿ, ಮೂಸೆ, ಅಡಿಗಲ್ಲು (ಪಟ್ಟಡೆ), ಬಗೆಬಗೆಯ ಅಚ್ಚುಗಳು, ಸುತ್ತಿಗೆ, ಉಳಿ, ಕತ್ತರಿ, ಬೈರಿಗೆ, ತ್ರಿಜ್ಯಮಾಪಕ, ಇಕ್ಕಳ, ಚಿಮ್ಮಟ, ಅರಗಳು, ಕುಂಚಗಳು ಇವು ಅಕ್ಕಸಾಲಿಗರು ಸಾಮಾನ್ಯವಾಗಿ ಬಳಸುವ ಆಯುಧಗಳು. ಬಹುತೇಕ ಆಯುಧಗಳು ಕಬ್ಬಿಣ ಅಥವಾ ಉಕ್ಕಿನಿಂದ ಮಾಡಲ್ಪಟ್ಟಿರುತ್ತವೆ. ಕಾಲಕಳೆದಂತೆ ಅಕ್ಕಸಾಲಿಗರ ಆಯುಧಗಳಲ್ಲೇನೂ ವಿಶೇಷ ಬದಲಾವಣೆಗಳು ಕಂಡುಬರುವುದಿಲ್ಲ. (ಕೋಲಿನ ಎರಡು ತುದಿಗಳಿಗೆ ದಾರದ ಎರಡು ತುದಿಗಳನ್ನು ಬಿಗಿದು ಅದನ್ನು ಬೈರಿಗೆ ಸ್ತಂಭದ ಸುತ್ತ ಹಾಯಿಸಿ ಕೋಲನ್ನು ಅಡ್ಡಗಲಕ್ಕೆ ಆಡಿಸಿ ರಂಧ್ರಕೊರೆಯುವ ಬದಲು, ಮೇಲೆ - ಕೆಳಕ್ಕೆ ಒತ್ತುವ ಸ್ಪ್ರಿಂಗು ಬೈರಿಗೆ ಬಳಸುವುದು; ಇಂಥ ಅತಿ ಸಾಮಾನ್ಯ ಬದಲಾವಣೆಗಳು ಮಾತ್ರ ಕಾಣಸಿಗುತ್ತವೆ.)

ಸಮುದ್ರದ ಉಪ್ಪು, ಪೆಟ್ಲುಪ್ಪು (ಪೊಟಾಸಿಯಂ ನೈಟ್ರೇಟ್), ನುಣ್ಣನೆಯ ಕೆಂಪು ಮರಳು, ಪಟಿಕ, ರಸಕರ್ಪುರ (ಪಾದರಸದಿಂದಾದ ಒಂದು ಸಿದ್ಧವಸ್ತು - ಕ್ಯಾಲೊಮೆಲ್), ಗಂಧಕಾಮ್ಲ, ನೈಟ್ರಿಕ್ ಆಮ್ಲ, ಬಿಳಿಗಾರ (ಬೋರಾಕ್ಸ್) - ಇವನ್ನು ಅಕ್ಕಸಾಲಿಗರು ವಿಶೇಷವಾಗಿ ಬಳಸುತ್ತಾರೆ.

ತಯಾರಿಸಿದ ಇಂಥ ಆಭರಣಕ್ಕೆ ಇಂತಿಷ್ಟು ಎನ್ನುವ ಪ್ರಕಾರ ಸಿದ್ಧಪಡಿಸಿದ ತೂಕವನ್ನು ಅನುಸರಿಸಿ ಅಕ್ಕಸಾಲಿಗರು ಪ್ರತಿಫಲವನ್ನು ಪಡೆಯುತ್ತಾರೆ. ಅಕ್ಕಸಾಲಿಗರ ಉದ್ಯಮದ ಉದ್ದಕ್ಕೂ ಅವರ ಅವಿಭಾಜ್ಯ ಅಂಗವಾಗಿ ಮತ್ತು ಬಹುತೇಕ ಸಂದರ್ಭಗಳಲ್ಲಿ ಅಕ್ಕಸಾಲಿಗರಿಗೂ ಗ್ರಾಹಕರಿಗೂ ನಡುವೆ ಬಂಡವಾಳಕಾರ ಮಧ್ಯಸ್ಥಕಾರರಾಗಿ ಷರಾಫರು ನಿಲ್ಲುತ್ತಾರೆ. 1962ರ ಭಾರತ ಸುವರ್ಣ ನಿಯಂತ್ರಣ ಆಜ್ಞೆ ಅಕ್ಕಸಾಲಿಗರ ಜೀವನೋಪಾಯದ ಮೇಲೆಯೇ ತೀವ್ರತರವಾದ ಪರಿಣಾಮ ಬೀರಿತು. ಬಂಗಾರವನ್ನು ಶೇಖರಿಸಬಾರದೆಂದೂ ಶೇ.58.5 (14 ಕ್ಯಾರೆಟ್)ಗಿಂತ ಹೆಚ್ಚು ಶುದ್ಧ ಬಂಗಾರವನ್ನೊಳಗೊಂಡ ಆಭರಣಗಳನ್ನು ತಯಾರಿಸಬಾರದೆಂದೂ ನಿರ್ಬಂಧವನ್ನು ಹೇರಿದ ನಿಯಂತ್ರಣ ಆಜ್ಞೆಯನ್ನು ಮಾರ್ಪಾಟು ಮಾಡಲಾಯಿತಾದರೂ ಹಲವಾರು ನಿರ್ಬಂಧಗಳು ಅಕ್ಕಸಾಲಿಗರ ಪಾಲಿಗೆ ಪ್ರೋತ್ಸಾಹಕರವಾಗಲಿಲ್ಲ. ತಮ್ಮ ಕಲೆಯನ್ನು ಇತರ ಕ್ಷೇತ್ರಗಳಿಗೆ ಹಾಯಿಸಿಕೊಳ್ಳಲು ಕಾಲಾವಕಾಶವೇ ಇಲ್ಲದಂತಾದಾಗ ಬಹುತೇಕ ಅಕ್ಕಸಾಲಿಗರು ಆಭರಣ ನಿರ್ಮಾಣ ಕಲೆಯನ್ನೇ ತೊರೆದರು. ನಿಜವಾಗಿ ಅಕ್ಕಸಾಲಿಗರದು ಲಾಭದಾಯಕವಾದ ಒಂದು ಉದ್ಯಮ. ಅದರಲ್ಲಿ ಬಹು ಉತ್ತಮಮಟ್ಟದ ಕಲೆಯೂ ಇದೆ. ಪಶ್ಚಿಮ ರಾಷ್ಟ್ರಗಳಲ್ಲಿ ಈ ಉದ್ಯಮವನ್ನು ಬೃಹದ್ ಪ್ರಮಾಣದಲ್ಲಿ ಬೆಳೆಸಿಕೊಂಡಿದ್ದಾರೆ. ಭಾರತೀಯರೂ ಈ ಕಡೆ ಗಮನ ಹರಿಸಬೇಕಾದುದು ಅಗತ್ಯ.