ಅಕ್ಕಣ್ಣ - ಮಾದಣ್ಣ

ಬದಲಾಯಿಸಿ

ವಾರಂಗಲ್ ಜಿಲ್ಲೆಗೆ ಸೇರಿದ ಹನುಮಕೊಂಡ ಗ್ರಾಮದಲ್ಲಿ ಬ್ರಾಹ್ಮಣ ಮನೆತನಕ್ಕೆ ಸೇರಿದ ಇಬ್ಬರು ಪಂಡಿತರೆಂದರೆ ಏಕನಾಥ ಮತ್ತು ಅವನ ಸಹೋದರ ಮಾದಣ್ಣ. ಇವರು ದಕ್ಷಿಣ ಭಾರತದ ಇತಿಹಾಸದಲ್ಲಿ ಅಕ್ಕಣ್ಣ-ಮಾದಣ್ಣ ಎಂಬುದಾಗಿ ಪ್ರಸಿದ್ಧರಾಗಿದ್ದಾರೆ. 17ನೆಯ ಶತಮಾನದಲ್ಲಿ ಗೋಲ್ಕೊಂಡ ಷಾಹಿ ರಾಜ್ಯವನ್ನಾಳುತ್ತಿದ್ದ ಕುತುಬ್ಷಾಹನ ವಿಖ್ಯಾತ ಮಂತ್ರಿಯಾದ ಮೀರ್ಜುಮ್ಲಾನ ಸೇವೆಯಲ್ಲಿದ್ದುಕೊಂಡು ತಮ್ಮ ಶಕ್ತಿ ಮತ್ತು ದಕ್ಷತೆಯಿಂದ ಉನ್ನತಾಧಿಕಾರಕ್ಕೆ ಬಂದರು. ಗಲಭೆಕೋರರನ್ನು ಅಡಗಿಸಲು ಮಾದಣ್ಣನೇ ಸರಿಯಾದ ವ್ಯಕ್ತಿಯೆಂದು ಅರಿತ ರಾಜನು ಅವನಿಗೆ ಉನ್ನತಾಧಿಕಾರವನ್ನು ಕೊಟ್ಟು ಆಡಳಿತ ಸುಧಾರಣಾಕಾರ್ಯವನ್ನು ವಹಿಸಿಕೊಟ್ಟ. ಬಹಳ ವರ್ಷಗಳ ಕಾಲ ಮಾದಣ್ಣ ಷಾಹನಿಗೆ ನಿಷ್ಠೆಯಿಂದಿದ್ದುಕೊಂಡು ತನ್ನ ಸೇವೆಯನ್ನು ಸಲ್ಲಿಸಿದನು. ಸಂಸ್ಕೃತ, ಪರ್ಷಿಯನ್ ಮತ್ತಿತರ ಭಾಷೆಗಳಲ್ಲಿ ಪ್ರವೀಣನೂ ದಕ್ಷಿಣ ಭಾರತದ ರಾಜಕೀಯದಲ್ಲಿ ತಕ್ಕಷ್ಟು ಪಳಗಿದವನೂ ಆದ ಮಾದಣ್ಣ ಕುತುಬ್ಷಾಹಿ ರಾಜ್ಯಭಾರವನ್ನು ನಿರ್ವಹಿಸಿದ. ಮಾದಣ್ಣ ಪಂಡಿತನೂ ನಿಗರ್ವಿಯೂ ಶಾಂತಸ್ವಭಾವದವನೂ ಆದರೆ ಅವನ ಅಣ್ಣನಾದ ಅಕ್ಕಣ್ಣ ಮುಂಗೋಪಿಯೂ ಚಪಲಸ್ವಭಾವದವನೂ ಆಗಿದ್ದ ಎಂಬುದಾಗಿ ಆಗಿನ ಕಾಲದ ಯುರೋಪಿಯನ್ ಪ್ರವಾಸಿಗಳು ವರ್ಣಿಸಿದ್ದಾರೆ. ಕುತುಬ್ಷಾಹಿ ರಾಜ್ಯಕ್ಕೆ ಸೇರಿದ ಕರ್ನಾಟಕದ ಪ್ರದೇಶಗಳ ಆಡಳಿತವನ್ನು ಅಕ್ಕಣ್ಣ ಕೆಲವು ಕಾಲ ನಿರ್ವಹಿಸಿದ ಅನಂತರ ಮಾದಣ್ಣ ಪ್ರಧಾನಿಯಾಗಿದ್ದು, ಅನಂತರ ಬಿಜಾಪುರದಲ್ಲಿ ರಾಯಭಾರಿಯಾಗಿದ್ದ. ಆಮೇಲೆ ಷಾಹಿ ಸೈನ್ಯದ ದಂಡನಾಯಕನಾದ. 1677ರಲ್ಲಿ ಶಿವಾಜಿ ಕರ್ನಾಟಕದ ದಂಡಯಾತ್ರೆಯನ್ನು ಕೈಗೊಂಡಾಗ ಈ ಸಹೋದರರೂ ಅವನೊಂದಿಗೆ ಬಹಳವಾಗಿ ಸಹಕರಿಸಿದರು.