ಅಂತಃಕಲಹಗಳು (List of civil wars) ಒಂದೇ ದೇಶದ ಭಿನ್ನ ಗುಂಪುಗಳ ಮಧ್ಯೆ ರಾಜಕೀಯ ಶಕ್ತಿಗಾಗಿ ನಡೆಯುವ ಯುದ್ಧಗಳು. ಇಂತಹ ಕಲಹಗಳಿಂದ ಅನೇಕ ಸಾಮಾಜಿಕ ಬದಲಾವಣೆಗಳು ಉಂಟಾದಲ್ಲಿ ಅಂತಹವುಗಳನ್ನು ಕ್ರಾಂತಿಗಳೆಂದು ಪರಿಗಣಿಸಲಾಗುತ್ತವೆ. ಇವನ್ನು ಅಂತರ್ಯುದ್ಧ(ಸಿವಿಲ್ವಾರ್). ಎಂದೂ ಕರೆಯುತ್ತಾರೆ

ಅಂತರ್ಯುದ್ಧಗಳು

ಬದಲಾಯಿಸಿ
 
೧೯೯೨ ರಲ್ಲಿ ಸೊಮಾಲಿಯಾದಲ್ಲಿ ನಡೆದ ಅಂತಃಕಲಹ

ಒಂದು ರಾಷ್ಟ್ರದ ರಾಜಕೀಯ ಪಕ್ಷ ಪ್ರತಿಪಕ್ಷಗಳು ಅಧಿಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಕಾದಾಟವನ್ನು ಪ್ರಾರಂಭಿಸುತ್ತವೆ. ಇಂಥ ಕಾದಾಟಕ್ಕೆ ಅಂತರ್ಯುದ್ಧವೆಂದು ಹೆಸರು(ಸಿವಿಲ್ವಾರ್). ರೋಸಸ್ ಕದನಗಳು, ಯುರೋಪಿನಲ್ಲಿ ನಡೆದ ಫೊಂಡೆ ಮತ್ತು ಲೀಗ್ ಕದನ ಹಾಗೆಯೆ ಅಮೆರಿಕ ಮತ್ತು ಸ್ಪೇನ್ಗಳಲ್ಲಿ ನಡೆದ ಯುದ್ಧಗಳು ಮತ್ತು 20ನೆಯ ಶತಮಾನದಲ್ಲಿ ಚೀನದಲ್ಲಿ ಕೋಮಿನ್ಟಾಂಗ್ ಮತ್ತು ಕಮ್ಯೂನಿಸ್ಟರ ನಡುವೆ ನಡೆದವು_ಇವು ಅಂತರ್ಯುದ್ಧದ ಚರಿತ್ರಾರ್ಹ ನಿದರ್ಶನಗಳು. ಇಂಗ್ಲೆಂಡಿನಲ್ಲಿ ಒಂದನೆಯ ಚಾಲ್ರ್ಸ್ ಚಕ್ರವರ್ತಿ ಮತ್ತು ಪಾರ್ಲಿಮೆಂಟ್ಗಳ ಮಧ್ಯೆ ನಡೆದ ಹೋರಾಟವನ್ನು ಅಂತರ್ಯುದ್ಧ ಎಂಬ ಹೆಸರಿನಿಂದ ಕರೆಯಲಾಗಿದೆ. ಸಂಯುಕ್ತಸಂಸ್ಥಾನಗಳಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ಮಧ್ಯೆ ನಡೆದ ಹೋರಾಟವನ್ನು ಅಮೆರಿಕದ ಅಂತರ್ಯುದ್ಧ ಎಂದು ಕರೆಯಲಾಗಿದೆ. ಪ್ರಪಂಚದ ಎರಡನೆಯ ಘೋರ ಯುದ್ಧಾನಂತರ ಅಂತರ್ಯುದ್ಧದ ವ್ಯಾಪಕತೆ ವಿಶೇಷವಾಗಿ ಹೆಚ್ಚಿತು. ಕೊನೆಯ ಪಕ್ಷ ಅಂತರ್ಯುದ್ಧವನ್ನು ಹೂಡಿ 12 ರಾಷ್ಟ್ರಗಳು ತಮ್ಮ ಸರ್ಕಾರದ ಸ್ವರೂಪಗಳನ್ನು ಬದಲಾಯಿಸಿವೆ. ಅಂಗೋಲ, ಕಾಂಬೋಡಿಯ, ಕಾಂಗೋ, ಕ್ಯೂಬ, ವಿಯಟ್ನಾಮ್, ಲಾವೋಸ್, ಸೈಪ್ರೆಸ್, ನ್ಯೂಗಿನಿ, ಯೆಮೆನ್ ಆದಿಯಾಗಿ ಹನ್ನೊಂದು ರಾಷ್ಟ್ರಗಳು 1964ನೆಯ ಇಸವಿಯೊಂದರಲ್ಲೇ ಅಂತರ್ಯುದ್ಧದ ಮೂಲಕ ಬೇರೆ ಸರ್ಕಾರಗಳನ್ನು ರಚಿಸಿಕೊಂಡವು. ಇಂಥ ಘಟನೆಗಳಲ್ಲಿ ನಾಗರಿಕರೂ ಭಾಗವಹಿಸುವುದರಿಂದ ಮತ್ತು ಹಿಂಸಾಕೃತ್ಯಗಳು ನಡೆಯುವುದರಿಂದ ಇವಕ್ಕೆ ಅಂತರ್ಯುದ್ಧಗಳೆಂದು ಹೆಸರಾಗಿದೆ. ಅಂತರ್ಯುದ್ಧ ಸಮಾಜದ ಚೌಕಟ್ಟಿನೊಳಗೆ ಒಂದೇ ಗುಂಪಿನ ಮಧ್ಯದಲ್ಲೂ ನಡೆಯಬಹುದು. ಅದು ರಾಜಕೀಯ, ಮತೀಯ, ಸಾಮಾಜಿಕ ಅಥವಾ ಆರ್ಥಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಥವಾ ಇವುಗಳಲ್ಲಿ ಯಾವುದಾದರೂ ಒಂದೇ ಕ್ಷೇತ್ರದ ಆಧಾರದ ಮೇಲೆ ರೂಪುಗೊಳ್ಳಬಹುದು. ಅಂತರ್ಯುದ್ಧಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು. ಒಂದು ಸಹಜವಾದುದು; ಅದಕ್ಕೆ ಯಾವ ವಿಧವಾದ ಮುಂದಾಲೋಚನೆಯ ಆಧಾರವಿರಬೇಕಾದ್ದಿಲ್ಲ. ಹಾಗೂ ಯಾರ ನಾಯಕತ್ವದ ಅಗತ್ಯವೂ ಅದಕ್ಕೆ ಬೇಡ. ಇಂಥ ಸಂದರ್ಭದಲ್ಲಿ ರಸ್ತೆಯಲ್ಲಿನ ಗುಂಪೊಂದರಿಂದ ಅನಿರೀಕ್ಷಿತ ತೊಡಕು ಸಂಭವಿಸಿ ಅಸ್ತಿತ್ವದಲ್ಲಿರುವ ಸರ್ಕಾರವೇ ಉರುಳಬಹುದು. ಅಂಥ ಅನಿರೀಕ್ಷಿತ ಭಯೋತ್ಪಾದಕ ಘಟನೆಯಿಂದ ರಾಷ್ಟ್ರದಲ್ಲಿ ಅನಾಯಕತೆ ಮತ್ತು ಅಧಿಕಾರಶೂನ್ಯತೆ ಮೂಡಿ ಸರ್ಕಾರ ಬದಲಾಗುತ್ತದೆ. ಸಾಮಾನ್ಯವಾಗಿ ಅಂತರ್ಯುದ್ಧ ವಿಶಿಷ್ಟ ರಾಜಕೀಯ ಪರಂಪರೆಯನ್ನು ಹೊಂದಿರದ ಮತ್ತು ದುರ್ಬಲ ಸರ್ಕಾರವಿರುವ ರಾಷ್ಟ್ರಗಳಲ್ಲಿ ಸಂಭವಿಸುತ್ತದೆ. ಮತ್ತೊಂದು ರೀತಿಯ ಅಂತರ್ಯುದ್ಧಕ್ಕೆ ಅಧಿಕಾರದಲ್ಲಿರುವ ಸರ್ಕಾರವನ್ನುರುಳಿಸಲು ಪುರ್ವಸಿದ್ಧತೆಯೂ ವ್ಯವಸ್ಥೆಯೂ ಸಾಕಷ್ಟು ನಡೆದಿರುತ್ತದೆ. ಪುರ್ವಯೋಜಿತ ಆಧಾರದ ಮೇಲೆ ನಡೆಯುವ ಅಂತರ್ಯುದ್ಧವನ್ನು ರಾಜಕೀಯದ ಮಹಾಬೇನೆ ಎಂದು ಕರೆಯಬಹುದು. ಇವುಗಳನ್ನು ಕ್ಷಿಪ್ರಕ್ರಾಂತಿ ಎನ್ನುತ್ತಾರೆ. ವೈಜ್ಞಾನಿಕವಾಗಿ ಪರಿಶೀಲಿಸಿದಲ್ಲಿ ಪುರ್ವಯೋಜಿತ ಅಂತರ್ಯುದ್ಧಕ್ಕೆ ಎರಡು ಪ್ರಮುಖವಾದ ಅಂಶಗಳಿರುತ್ತವೆ. ಒಂದು ರಾಜಕೀಯ ಅಭದ್ರತೆ ಮತ್ತು ಅಡಚಣೆಗಳ ನಿವಾರಣೆಗೆ ರಚನಾತ್ಮಕ ಮಾರ್ಗಗಳಿಲ್ಲದಿರುವುದು. ರಾಜಕೀಯ ಒಳ ಜಗಳಗಳ ಮತ್ತು ನ್ಯೂನತೆಗಳ ನಿವಾರಣೆಗೆ ಹಿಂಸಾಕೃತ್ಯವನ್ನುಳಿದು ಬೇರೆ ಯಾವ ಮಾರ್ಗವೂ ಇಲ್ಲದಿರುವುದು ಎರಡನೆಯದು. ಯೋಜಿತ ಅಂತರ್ಯುದ್ಧಗಳಲ್ಲಿ ಬುಡಮೇಲು ಕೃತ್ಯಗಳು ಪ್ರಾರಂಭವಾಗುತ್ತವೆ. ತಾಂತ್ರಿಕವಾಗಿ ಹಾಗೂ ಕೈಗಾರಿಕೆಗಳಲ್ಲಿ ಮುಂದುವರಿದ ದೇಶಗಳಲ್ಲಿ ಬುಡಮೇಲು ಕೃತ್ಯದ ಕೇಂದ್ರವೊಂದು ಸ್ಥಾಪಿತವಾಗಿ ಗೆರಿಲ್ಲ್ಲಾ ಗುಪ್ತಪಡೆಗಳನ್ನು ರಾಷ್ಟ್ರದಲ್ಲಿ ವ್ಯಾಪಕವಾಗಿ ಸ್ಥಾಪಿಸಿ ಕಾರ್ಯೋನ್ಮುಖವಾಗಲು ಒಂದು ಅಥವಾ ಎರಡು ವರ್ಷಗಳ ಅವಧಿ ಸಾಕು. ಹೋರಾಟದ ಕೊನೆಯಲ್ಲಿ ಭೀಕರವಾದ ಬಂಡಾಯವಾಗಿ ಅದು ಹಿಂಸಾಕೃತ್ಯಗಳಲ್ಲಿ ಕೊನೆಗೊಳ್ಳುತ್ತದೆ. ಅಂತರ್ಯುದ್ಧಗಳಿಗೆ ಅತ್ಯವಶ್ಯಕ ಅಂಶಗಳೆಂದರೆ 1. ನಾಗರಿಕ ಮುಖಂಡತ್ವ 2. ಸೈನ್ಯದ ಕೇಂದ್ರ 3.ಗುಪ್ತ ವಾರ್ತಾಪ್ರಸಾರ ಸಾಧನ 4. ಸಾಗಾಣಿಕೆ 5. ಪ್ರಸಾರ ಸಾಧನ 6. ಮೀಸಲು ಪಡೆ 7. ತಾರ್ಕಿಕ ಸಿದ್ಧಾಂತ 8. ಯುದ್ಧೋಪಕರಣಗಳು ಮತ್ತು ಗೆರಿಲ್ಲಾ ಪಡೆಗಳು (ಗೆರಿಲ್ಲಾ ಪಡೆಗಳು ಸೈನ್ಯದ ರೀತಿಯಲ್ಲಿ ಸಜ್ಜಾಗಿರುವುದೂ ಉಂಟು). ಆಧುನಿಕ ಕಾಲದಲ್ಲಿ ಅಂತರ್ಯುದ್ಧಗಳು ರಾಷ್ಟ್ರೀಯತೆಯ ಉಗ್ರರೂಪ ಹಾಗೂ ವಸಾಹತುಶಾಹಿಯ ಕಡು ವಿರೋಧ _ ಈ ಪರಿಸ್ಥಿತಿಗಳನ್ನು ಬಹುಮಟ್ಟಿಗೆ ಅವಲಂಬಿಸಿರುತ್ತದೆ.

"https://kn.wikipedia.org/w/index.php?title=ಅಂತಃಕಲಹ&oldid=842437" ಇಂದ ಪಡೆಯಲ್ಪಟ್ಟಿದೆ