೧೩ ಉಪನಿಷತ್ತುಗಳ ಸಾರಾಂಶ
ಉಪನಿಷತ್ತುಗಳು:
ಬದಲಾಯಿಸಿ- ವೇದಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಈ ಹೆಸರಿನಿಂದ ಕರೆಯುತ್ತಾರೆ. ಉಳಿದ ಮೊದಲ ಮೂರು ಭಾಗಗಳೆಂದರೆ ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು. ಆದ್ದರಿಂದಲೇ ಉಪನಿಷತ್ತುಗಳಿಗೆ ವೇದಾಂತವೆಂಬ ಹೆಸರೂ ರೂಢಿಯಲ್ಲಿದೆ. ಉಪನಿಷತ್ತುಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವೇದಧರ್ಮದ ಅತ್ಯುನ್ನತ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಮೋಕ್ಷ ಶಾಸ್ತ್ರಗಳೆನ್ನಿಸಿಕೊಂಡಿರುವ ಇವು ವೇದಗಳ ಸಾರಸರ್ವಸ್ವವಾಗಿ ಮಾನವನನ್ನು ಅಮೃತತ್ವಕ್ಕೆ ಒಯ್ಯುವ ಹಂತಪಂಕ್ತಿಗಳೆನ್ನಬಹುದು. ಇವುಗಳಲ್ಲಿ ವಿಚಾರದ ಅಂತ್ಯವನ್ನು ಮೀರಿ ಹೋಗಿರುವ ಮಹಾಮಹಿಮರ, ಋಷಿಗಳ, ಮಂತ್ರದ್ರಷ್ಟಾರರ, ಅಂತರ್ದೃಷ್ಟಿ ಗೋಚರವಾದ ಪರಬ್ರಹ್ಮವಸ್ತುವಿನ ಸ್ವರೂಪ ನಿರೂಪಣೆ ದಿವ್ಯಜ್ಯೋತಿಯಂತೆ ಬೆಳಗುತ್ತಿದೆ. ಇವು ಭಾರತೀಯ ದರ್ಶನಗಳೆಲ್ಲಕ್ಕೂ ಸಿದ್ಧಾಂತಗಳೆಲ್ಲಕ್ಕೂ ಮೂಲವಾದ ತತ್ತ್ವ ತರಂಗಗಳ ಪಾವನ ಬುಗ್ಗೆಗಳಂತಿವೆ. ಅಂತೆಯೇ ವಿದ್ವಾಂಸರು ಇವನ್ನು ವೇದಗಳೆಂಬ ಪರ್ವತಪಂಕ್ತಿಗಳಲ್ಲಿನ ಗಗನಸ್ಪರ್ಶಿ ಶಿಖರಗಳೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಅಡಗಿರುವ ಮಹತ್ತ್ವವನ್ನು, ಆತ್ಮ ಪರಮಾತ್ಮ ಜ್ಞಾನವನ್ನು, ಗುರುವಿನ ಪದತಲದಲ್ಲಿ ಕುಳಿತು ಭಕ್ತಿಯಿಂದ ಕೇಳಿ ತಿಳಿಯಬೇಕಾಗಿರುವುದರಿಂದ ಈ ಅರ್ಥವನ್ನೊಳಗೊಂಡ ಉಪನಿಷತ್ ಎಂಬ ಹೆಸರು ಅನ್ವರ್ಥವಾಗಿದೆ. ಇವುಗಳಲ್ಲಿ ಬಹುಭಾಗ ಗುರುಶಿಷ್ಯರ ಸಂವಾದ ರೂಪದಲ್ಲಿದೆ.
- ತತ್ತ್ವದೃಷ್ಟಿಯಿಂದ ಹೇಗೋ ಸಾಹಿತ್ಯದೃಷ್ಟಿಯಿಂದಲೂ ಇವು ಅದ್ಭುತವಾಗಿವೆ. ಸಂಸ್ಕೃತ ಭಾಷೆಯನ್ನು ಎಷ್ಟು ವೀರ್ಯವತ್ತಾಗಿ ಗದ್ಯದಲ್ಲಿ ಬಳಸಬಹುದೆಂಬುದಕ್ಕೆ ಇವು ನಿದರ್ಶನಗ ಳಾಗಿವೆ. ಕೆಲವು ಭಾಗಗಳಂತೂ ವಿಶ್ವಸಾಹಿತ್ಯದಲ್ಲಿಯೇ ಅತ್ಯುತ್ತಮವಾದುವೆನ್ನಬಹುದು.
ವೇದಗಳ ಸಂಬಂಧ
ಬದಲಾಯಿಸಿ- ಋಗ್ವೇದಕ್ಕೆ ಐತರೇಯ, ಕೌಷೀತಕಿ ಉಪನಿಷತ್ತುಗಳೂ ಸಾಮವೇದಕ್ಕೆ ಛಾಂದೋಗ್ಯ ಮತ್ತು ಕೇನ ಉಪನಿಷತ್ತುಗಳೂ ಕೃಷ್ಣ ಯಜುರ್ವೇದಕ್ಕೆ ಕಠ, ಶ್ವೇತಾಶ್ವತರ, ಮೈತ್ರಾಯಣೀಯ, ತೈತ್ತಿರೀಯ ಮತ್ತು ಮಹಾ ನಾರಾಯಣೀಯ ಉಪನಿಷತ್ತುಗಳೂ ಶುಕ್ಲಯಜುರ್ವೇದಕ್ಕೆ ಬೃಹದಾರಣ್ಯಕ ಮತ್ತು ಈಶಾವಾಸ್ಯೋಪನಿಷತ್ತುಗಳೂ ಅಥರ್ವವೇದಕ್ಕೆ ಮುಂಡಕ, ಪ್ರಶ್ನ, ಮಾಂಡೂಕ್ಯ ಉಪನಿಷತ್ತುಗಳೂ ಸೇರಿವೆ.
- ಉಪನಿಷತ್ತುಗಳ ಸಂಖ್ಯೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಮುಕ್ತಿಕೋಪನಿಷತ್ತಿನಲ್ಲಿ ಇವು 108 ಎಂದು ತಿಳಿಸಲಾಗಿದೆ. ಬೇರೆ ಬೇರೆ ವೇದಶಾಖೆಗಳಿಗೆ ಸೇರಿದ ಅನೇಕ ಉಪನಿಷತ್ ಗಳಿದ್ದರೂ ಅತ್ಯಂತ ಪ್ರಾಚೀನವೂ ಮಹತ್ತ್ವಪೂರ್ಣವೂ ಆದವೆನ್ನಿಸಿಕೊಂಡಿರುವವು 13. ಅವುಗಳಲ್ಲಿ ದಶೋಪನಿಷತ್ತುಗಳೆಂದು ಸುಪ್ರಸಿದ್ಧವಾಗಿರುವವು ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕಗಳು. ಉಳಿದವು ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ. ಈ 13 ಉಪನಿಷತ್ತುಗಳಿಂದ ಭಾಷ್ಯಕಾರರು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ; ಮತ್ತು ಇವನ್ನು ಕುರಿತು ಭಾಷ್ಯ ಬರೆದಿದ್ದಾರೆ.
ಉಪನಿಷತ್ತುಗಳ ಕಾಲ
ಬದಲಾಯಿಸಿ- ಉಪನಿಷತ್ತುಗಳ ಕಾಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಇವು ಬೌದ್ಧ ಧರ್ಮಕ್ಕೆ ಹಿಂದಿನವು ಎಂಬಲ್ಲಿ ಒಮ್ಮತವಿದೆ. ಅಂದರೆ ಇವು ಪ್ರ.ಶ.ಪು. 600ಕ್ಕೆ ಹಿಂದಿನವು. ಋಗ್ವೇದ ಸಂಹಿತೆಗಳ ಕಾಲಕ್ಕೆ ಈಚಿನವು ಎಂದು ಹೇಳಬೇಕಾಗಿರುವುದರಿಂದಲೂ ಋಗ್ವೇದದ ಕಾಲ ಸು. ಪ್ರ.ಶ.ಪು. 1200 ಎಂದು ಪಂಡಿತರ ಅಭಿಪ್ರಾಯವಿರುವುದರಿಂದಲೂ ಉಪನಿಷತ್ತುಗಳ ಕಾಲವನ್ನು ಪ್ರ.ಶ.ಪು.(ಕ್ರಿ.ಪೂ.) 1200 ಮತ್ತು ಪ್ರ.ಶ.ಪು. (ಕ್ರಿ.ಪೂ.)600ರ ಮಧ್ಯಕಾಲವೆನ್ನ ಬಹುದು. ಆದರೆ ಮೈತ್ರಾಯಣೀಯ ಉಪನಿಷತ್ತಿನಲ್ಲಿ ಬಂದಿರುವ ಜ್ಯೋತಿಶ್ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಉಲ್ಲೇಖದ ಆಧಾರದ ಮೇಲೆ ಬಾಲಗಂಗಾಧರ ತಿಲಕರು ಕಾಲವನ್ನು ಪ್ರ.ಶ.ಪು. 2000ದ ಹಿಂದಕ್ಕೆ ಹಾಕಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಅತ್ಯಂತ ಪ್ರಾಚೀನ ವಾದವು ಛಾಂದೋಗ್ಯ, ಬೃಹದಾರಣ್ಯಕಗಳು.
ಅಪೌರುಷೇಯ
ಬದಲಾಯಿಸಿ- ವೇದಗಳೆಂಬ ಕ್ಷೀರಸಾಗರವನ್ನು ಮಥಿಸಿ ತೆಗೆದ ಅಮೃತಕಲಶವೇ ಉಪನಿಷತ್ ಗಳೆನ್ನಬಹುದು. ಇವುಗಳಲ್ಲಿ ಕೇಳಿಬರುವುದು ಮಾನವವಾಣಿಯಲ್ಲ. ವೇದಗಳಂತೆ ಇವೂ ಅಪೌರುಷೇಯವೆಂದೇ ಆಸ್ತಿಕರ ನಂಬಿಕೆ. ಇವುಗಳ ನಿಗೂಢ ತತ್ತ್ವವನ್ನು ಪ್ರತಿಪಾದಿಸಿದವರು ವಿಚಾರಮಂಥನದ ಸೀಮೆಯನ್ನು ದಾಟಿಹೋದ ದೈವಾಂಶಸಂಭೂತರು. ತಮ್ಮ ದಿವ್ಯದೃಷ್ಟಿಗೆ ಗೋಚರವಾದ ದೇಶಕಾಲಾತೀತವಾದ ಪರಮ ಸತ್ಯವನ್ನು ಅಮೃತವಾಣಿಯಲ್ಲಿ ಅವರು ನುಡಿದಿದ್ದಾರೆ. ಉಪನಿಷತ್ತುಗಳು ವಿಶ್ವದ ಜ್ಞಾನಭಂಡಾರದಲ್ಲಿರುವ ಜ್ಯೋತಿರ್ಮಯವಾದ ಅಮೂಲ್ಯ ರತ್ನಗಳು. ಇವು ಭಾರತೀಯ ತತ್ತ್ವಸಾಮ್ರಾಜ್ಯದ ಸಿಂಹಾಸನವನ್ನಲಂಕರಿಸಿವೆ. ಇವುಗಳ ಪ್ರಭೆಗೆ ಭಾರತೀಯ ತತ್ತ್ವಜ್ಞರು, ಆಚಾರ್ಯರು, ದರ್ಶನಕಾರರಷ್ಟೇ ಅಲ್ಲದೆ ಪಾಶ್ಚಾತ್ಯ ಜ್ಞಾನವೇತ್ತರೂ ಮಣಿದು ಮಾರುಹೋಗಿದ್ದಾರೆ. ಷೋಪೆನ್ಹೌರ್, ಮ್ಯಾಕ್ಸ್ ಮ್ಯೂಲರ್, ಡೌಸನ್, ಹ್ಯೂಮ್ ಮೊದಲಾದವರು ಮುಕ್ತಕಂಠದಿಂದ ಇವನ್ನು ಶ್ಲಾಘಿಸಿದ್ದಾರೆ.
- ಪ್ರಸ್ಥಾನತ್ರಯಗಳೆನ್ನಿಸಿಕೊಂಡ ಶಾಸ್ತ್ರಗ್ರಂಥಗಳಲ್ಲಿ ಉಪನಿಷತ್ತುಗಳು ಪ್ರಧಾನವಾದವು. ಬ್ರಹ್ಮಸೂತ್ರಗಳೂ ಭಗವದ್ಗೀತೆಯೂ ಇವನ್ನೇ ಆಶ್ರಯಿಸಿದ ಉಳಿದ ಎರಡು ಪ್ರಸ್ಥಾನಗಳು. ಬ್ರಹ್ಮಸೂತ್ರಗಳಲ್ಲಿ ಉಪನಿಷತ್ತುಗಳ ತೊಡಕಾದ ತತ್ತ್ವಗಳನ್ನು ಕ್ರಮಬದ್ಧವಾಗಿ ಸೂತ್ರಗಳ ರೂಪದಲ್ಲಿ ಜೋಡಿಸಲಾಗಿದೆ. ಭಗವದ್ಗೀತೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಈ ತತ್ತ್ವಗಳನ್ನು ವಿಶದಪಡಿಸಲಾಗಿದೆ. ಉಪನಿಷತ್ತೆಂಬ ಗೋವಿನಿಂದ ಗೀತೆಯೆಂಬ ಕ್ಷೀರವನ್ನು ಕೃಷ್ಣನೇ ಗೊಲ್ಲನಾಗಿ ಕರೆದುಕೊಟ್ಟಿದ್ದಾನೆ-ಎಂದು ಒಂದು ಹೇಳಿಕೆ ಇದೆ. ಹೀಗೆ ಉಪನಿಷತ್ ಪ್ರಸ್ಥಾನತ್ರಯಗಳಲ್ಲಿ ಆಧಾರಸ್ತಂಭದಂತೆ ನಿಂತಿದ್ದು ಎಲ್ಲ ತತ್ತ್ವಗಳೂ ಇದರ ಶಾಖೋಪಶಾಖೆಗಳಾಗಿವೆ.
ಪ್ರಧಾನ ಉಪನಿಷತ್ತುಗಳ ಸ್ಥೂಲಪರಿಚಯ
ಬದಲಾಯಿಸಿಈಶೋಪನಿಷತ್
ಬದಲಾಯಿಸಿ- ಪ್ರಮುಖ ಉಪನಿಷತ್ ಗಳಲ್ಲಿ ಒಂದು. ಯಜುರ್ವೇದದ ವಾಜಸನೇಯ ಶಾಖೆಗೆ ಸೇರಿದೆ. ಇದಕ್ಕೆ ಈಶಾವಾಸ್ಯೋಪ ನಿಷತ್ ಎಂಬ ಹೆಸರೂ ಇದೆ. ಗಾತ್ರದಲ್ಲಿ ಚಿಕ್ಕದು. ಕೇವಲ 18 ಶ್ಲೋಕಗಳಿಂದ ಕೂಡಿದೆ. ಆದರೂ ತತ್ತ್ವಗಾಂಭೀರ್ಯದಿಂದ ಅರ್ಥ ಸಂಪತ್ತಿನಿಂದ ಅತಿ ಮಹತ್ತ್ವದ್ದಾಗಿದೆ. ಇದರಲ್ಲಿ ಜಗತ್ತಿಗೂ ಬ್ರಹ್ಮನಿಗೂ ಇರುವ ಸಂಬಂಧ ವಿವರಣೆ ಪರಿಷ್ಕಾರವಾಗಿ ಬಂದಿದೆ. ಮಾನವಜೀವ ನದ ಅಂತರಾರ್ಥವನ್ನಿಲ್ಲಿ ಬಿಡಸಲಾಗಿದೆ. ಎಲ್ಲದಕ್ಕೂ ಪ್ರಭುವಾದ ಭಗವಂತನಲ್ಲಿ ಸಮರ್ಪಣ ಭಾವದಿಂದ ಕರ್ಮಮಾಡಿ ಪರೋಪಕಾರಿಯಾಗಿ ಸೇವಾನಿಷ್ಠನಾಗಿ ಮನುಷ್ಯಜೀವನವನ್ನು ಸಾಗಿಸಬೇಕೆಂಬ ಬೋಧೆ ಇಲ್ಲಿದೆ. ಭಗವದ್ಗೀತೆಯ ವಿಸ್ತಾರವಾದ ಉಪದೇಶ ಈ ಉಪನಿಷತ್ತಿನ ವಿವರಣೆಯಂತಿದೆ. ವಿವರಗಳಿಗೆ ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಈಶೋಪನಿಷತ್.
ಕೇನೋಪನಿಷತ್
ಬದಲಾಯಿಸಿ- ತಲವಕಾರ ಶಾಖೆಗೆ ಸೇರಿರುವುದರಿಂದ ಇದಕ್ಕೆ ತಲವಕಾರೋಪ ನಿಷತ್ತೆಂದೂ ಹೆಸರಿದೆ. ಇದರಲ್ಲಿ ನಾಲ್ಕು ಖಂಡಗಳಿವೆ. ಮೊದಲೆರಡು ಖಂಡಗಳು ಪದ್ಯಮಯವಾಗಿಯೂ ಕೊನೆಯ ಎರಡು ಖಂಡಗಳು ಗದ್ಯಮಯವಾಗಿಯೂ ಇದ್ದು ಒಟ್ಟು 34 ಮಂತ್ರಗಳಿವೆ. ಕೇನ (ಯಾರಿಂದ) ಎಂಬ ಪದದಿಂದ ಸಾಹಿತ್ಯ ಆರಂಭವಾಗುತ್ತದೆ. ಚಿಕ್ಕ ಚಿಕ್ಕ ಮಂತ್ರಗಳಲ್ಲಿ ಬ್ರಹ್ಮಸ್ವರೂಪವನ್ನು ಮಾರ್ಮಿಕವಾಗಿ ಇದು ವರ್ಣಿಸಿದೆ. ಯಾವುದನ್ನು ಕಣ್ಣಿನಿಂದ ಕಾಣಲಾಗುವುದಿಲ್ಲವೋ ಯಾವುದರಿಂದ ಕಣ್ಣು ಕಾಣುತ್ತದೋ ಅದು ಬ್ರಹ್ಮವೆಂದು ತಿಳಿ ಎಂಬುದು ಮೊದಲ ಬೋಧೆ. ಸರ್ವವೂ ಬ್ರಹ್ಮಮಯವಾಗಿರುವುದಲ್ಲದೆ ಪರತತ್ತ್ವ ಸಾಕ್ಷಾತ್ಕಾರ ಇಂದ್ರಿಯಾತೀತವೆಂಬುದು ತಾತ್ಪರ್ಯ. ಮೂರು ಮತ್ತು ನಾಲ್ಕನೆಯ ಖಂಡದಲ್ಲಿ ಬರುವ ವ್ಯಾಖ್ಯಾನದಲ್ಲಿ, ದೇವತೆಗಳು ಬ್ರಹ್ಮನಿಂದಾದ ವಿಜಯವನ್ನು ತಮ್ಮಿಂದಾದುದೆಂದು ಭ್ರಮಿಸಿ ಯಕ್ಷರೂಪದಲ್ಲಿ ಕಾಣಿಸಿಕೊಂಡ ಬ್ರಹ್ಮನನ್ನು ತಿಳಿಯಲಾಗದೆ, ಆತ ತಮ್ಮ ಮುಂದೆ ಇಟ್ಟ ಒಂದು ಹುಲ್ಲುಕಡ್ಡಿಯನ್ನು ದಹಿಸಲು, ಅಲುಗಿಸಲು ಅಗ್ನಿವಾಯುಗಳು ಅಸಮರ್ಥರಾ ದಾಗ, ಅಂತರ್ಧಾನನಾದ ಯಕ್ಷನೇ ಬ್ರಹ್ಮನೆಂದು, ಹೈಮವತಿ ಉಮಾದೇವಿಯಿಂದ ಅರಿತುಕೊಂಡರೆಂದು ಬೋಧಿಸಲಾಗಿದೆ. ಶ್ರೇಷ್ಠನಾಗಿದ್ದರೂ ಇಂದ್ರನೇ ಇಲ್ಲಿ ಪರಬ್ರಹ್ಮನಲ್ಲ.
ಕಠೋಪನಿಷತ್
ಬದಲಾಯಿಸಿ- ಇದು ಎರಡು ಅಧ್ಯಾಯಗಳಿಂದ ಕೂಡಿದೆ. ಬ್ರಹ್ಮವಿದ್ಯೆಯನ್ನು ಬೇಡಿದ ನಚಿಕೇತನಿಗೆ ಯಮದೇವ ಪ್ರಲೋಭನಗಳನ್ನು ಒಡ್ಡಿದರೂ ಆತ ಅದಾವುದನ್ನೂ ಲಕ್ಷಿಸದೆ ಬ್ರಹ್ಮವಿದ್ಯೆಯನ್ನೇ ವರವಾಗಿ ಪಡೆದ ರೋಮಾಂಚನಕಾರಿ ಕಥೆ ಇರುವುದರಿಂದ ಅತ್ಯಂತ ಪ್ರಸಿದ್ಧವಾಗಿದೆ. ಜನ್ಮ, ಪುನರ್ಜನ್ಮಗಳು, ಮರಣಾನಂತರ ಆತ್ಮದ ಸ್ಥಿತಿ, ಇಂದ್ರಿಯನಿಗ್ರಹ ದಿಂದ ಪರಮಾತ್ಮಪ್ರಾಪ್ತಿ, ಶ್ರದ್ಧೆ, ಧೈರ್ಯಗಳಿಂದ ಪರಮಾತ್ಮ ಸ್ವರೂಪಜ್ಞಾನ, ಶಾಶ್ವತಸುಖ ಶಾಂತಿಗಳ ಪ್ರಾಪ್ತಿ-ಇವನ್ನು ಯಮ ಪ್ರಣವದಿಂದ ಸಂಗ್ರಹವಾಗಿ ನಚಿಕೇತನಿಗೆ ಉಪದೇಶಿಸಿ ದ್ದಾನೆ. ತಂದೆಯಾದ ವಾಜಶ್ರವಸ್ ಯಾಗ ಸಂದರ್ಭದಲ್ಲಿ ಕುಪಿತನಾಗಿ ತನ್ನನ್ನು ಯಮನಿಗೆ ಒಪ್ಪಿಸಿದರೂ ಧೈರ್ಯಗೆಡದೆ ಮಗನಾದ ನಚಿಕೇತ ಯಮನೊಂದಿಗೆ ವಾದಮಾಡಿ ಅಮೃತತ್ವವನ್ನು ಪಡೆಯುತ್ತಾನೆ. ತಂದೆಯ ಪ್ರಸನ್ನತೆಯೊಂದಿಗೆ ಅಗ್ನಿವಿದ್ಯೆಯನ್ನೂ ವರವಾಗಿ ಪಡೆಯುತ್ತಾನೆ. ಈ ಆಖ್ಯಾನವನ್ನು ಹೇಳಿದರೂ ಕೇಳಿದರೂ ಬ್ರಹ್ಮಲೋಕಪ್ರಾಪ್ತಿಯೆಂದು ಫಲಶ್ರುತಿ ಇದೆ. ಇದರಲ್ಲಿ ಮಾನವನ ಹುಟ್ಟು ಸಾವುಗಳ ಪ್ರಶ್ನೆಗೂ ಅವನ ಸುಖಕ್ಕೆ ಶ್ರೇಯ ಪ್ರೇಯಗಳಾವುವು ಎಂಬ ಪ್ರಶ್ನೆಗೂ ಉತ್ತರವಿದೆ. ನಿತ್ಯರಲ್ಲಿ ನಿತ್ಯನೂ ಚೇತನರಲ್ಲಿ ಚೇತನನೂ ಆಗಿ ಸಮಸ್ತಕ್ಕೂ ಏಕೈಕ ಕಾರಣನಾದ ಪರಮಾತ್ಮನನ್ನು ನಚಿಕೇತನಂಥ ಅಸಾಧಾರಣ ಧೀರನಾದವ ಮಾತ್ರ ಹೃದಯಗಹ್ವರದಲ್ಲಿ ಕಂಡುಕೊಳ್ಳುವನೆಂದು ಸ್ಪಷ್ಟಪಡಿಸಲಾಗಿದೆ. ಕೆಲವು ಸ್ವಾರಸ್ಯವಾದ ಅಂಶಗಳೂ ಇದರಲ್ಲಿ ಕಂಡುಬಂದಿವೆ. ಪರಲೋಕದಲ್ಲಿ ನಂಬಿಕೆ ಇಲ್ಲದವರು ಆ ಕಾಲದಲ್ಲೂ ಇದ್ದರೆಂದು ಸೂಚಿಸಲಾಗಿದೆ. ‘ಆಶ್ಚರ್ಯೋ ವಕ್ತಾ’. ‘ಅಣೋರಣೀಯಾನ್’, ‘ಅಜೋ ನಿತ್ಯಃ ಶಾಶ್ವತೋಯ ಪುರಾಣಃ’ ಎಂಬ ಉಕ್ತಿಗಳನ್ನು ಗೀತೆಯಲ್ಲಿ ತೆಗೆದುಕೊಳ್ಳಲಾಗಿದೆ.
ಸಾಂಖ್ಯ ಮತ್ತು ಯೋಗದರ್ಶನಗಳಿಗಿಂತ ಈ ಉಪನಿಷತ್ ಹಿಂದಿನದೆಂದು ಕೆಲವು ವಾಕ್ಯಗಳು ಸೂಚಿಸುತ್ತವೆ: `ತದ್ವಿಷ್ಣೋಃ ಪರಮಂ ಪದಮ್’ ಎಂಬ ವಾಕ್ಯ ವಿಷ್ಣುವೇ ಪರಬ್ರಹ್ಮನೆಂದು ಈ ಉಪನಿಷತ್ತಿನ ನಿರ್ಣಯವೆಂದು ತೋರಿಸುತ್ತದೆ. ‘ಮೃತ್ಯೋಃ ಸಮೃತ್ಯುಮಾಪ್ನೋತಿ ಯ ಇಹ ನಾನೇವಪಶ್ಯತಿ’ ಎಂಬ ವಾಕ್ಯದಲ್ಲಿ ಅದ್ವೈತ ತತ್ತ್ವದ ಅಭಿಪ್ರಾಯವಿದೆ.
ಪ್ರಶ್ನೋಪನಿಷತ್
ಬದಲಾಯಿಸಿ- ‘ಭದ್ರಂ ಕರ್ಣೇಭಿಃ ಶೃಣು ಯಾಮ ದೇವಾಃ’ ಎಂಬುದು ಇದರ ಶಾಂತಿಮಂತ್ರ. ಪ್ರಶ್ನೆಗಳಿಂದ ಕೂಡಿದ ಇದು ಅಥರ್ವವೇದಕ್ಕೆ ಸೇರಿದ್ದು. ಗದ್ಯಮಯವಾಗಿದ್ದು, ಆರು ಮಂದಿ ಬ್ರಹ್ಮಾನ್ವೇಷಕರು ಭಗವಂತನಾದ ಪಿಪ್ಪಲಾದ ಮಹರ್ಷಿಯೊಡನೆ ಮಾಡಿದ ಸಂವಾದ ರೂಪದ ಆರು ಪ್ರಶ್ನೆಗಳನ್ನೊಳಗೊಂಡಿದೆ. ಲೋಕದಲ್ಲಿ ಪ್ರಜೆಗಳು ಹೇಗೆ ಎಲ್ಲಿಂದ ಜನಿಸುತ್ತಾರೆ ? ಎಂಬುದು ಕಬಂಧಿ ಕಾತ್ಯಾಯನ ಮೊದಲು ಕೇಳಿದ ಪ್ರಶ್ನೆ. ಪ್ರಜಾಪತಿಯ ತಪಸ್ಸಿನ ಫಲವಾಗಿ ಆದಿತ್ಯನೂ (ಪ್ರಾಣ) ಚಂದ್ರಮನೂ (ರಯಿ) ಸೃಷ್ಟಿಯಾಗಿ ಅವರಿಂದ ಪ್ರಜಾಸೃಷ್ಟಿಯಾಯಿತು ಎಂಬುದು ಅದಕ್ಕೆ ಉತ್ತರ. ದೇವತೆಗಳೆಷ್ಟು ಮಂದಿ ಪ್ರಜೆಗಳಿಗೆ ಆಧಾರಭೂತರು ? ಅವರಲ್ಲಿ ವರಿಷ್ಠರು ಯಾರು ? ಎಂಬುದು ಭಾರ್ಗವ ವೈದರ್ಭಿ ಕೇಳಿದ ಎರಡನೆಯ ಪ್ರಶ್ನೆ. ಆಕಾಶ, ವಾಯು, ಅಗ್ನಿ, ಆಪಃ, ಪೃಥಿವೀ, ವಾಕ್, ಮನಸ್ಸು, ಚಕ್ಷುಸ್ಸು, ಶ್ರೋತ್ರ ಇವರು ದೇವತೆಗಳು; ಇವರಲ್ಲಿ ವರಿಷ್ಠ ಪ್ರಾಣ, ಇದು ಉತ್ತರ. ಕೊನೆಯಲ್ಲಿ ಪ್ರಾಣಸ್ವರೂಪಿಯಾದ ಪರಬ್ರಹ್ಮನ ಸ್ತುತಿ ಇದೆ. ಮೂರನೆಯ ಪ್ರಶ್ನೆ ಈ ಪ್ರಾಣ ಎಲ್ಲಿಂದ ಹುಟ್ಟಿ ಈ ಶರೀರಕ್ಕೆ ಹೇಗೆ ಬಂದು ವಿಭಾಗ ಮಾಡಿಕೊಂಡು ಪ್ರತಿಷ್ಠಿತವಾಗುತ್ತದೆ ? ಎಂಬುದು ಅಶ್ವಲಾಯನ ಕೇಳಿದುದು. ಇದಕ್ಕೆ ಉತ್ತರ: ಪುರುಷನನ್ನು ನೆರಳು ಹಿಂಬಾಲಿಸುವಂತೆ, ಈ ಶರೀರದಲ್ಲಿ ಆತ್ಮನಿಂದ ಕರ್ಮನಿಮಿತ್ತವಾಗಿ ಪ್ರಾಣ ಜನಿಸುತ್ತದೆ. ಸಾಮ್ರಾಟನಾದವ ಬೇರೆ ಬೇರೆ ಗ್ರಾಮಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವಂತೆ ಇದು ಇತರ ಪ್ರಾಣಗಳನ್ನು ನಿಯೋಜಿಸುತ್ತದೆ. ಪುಣ್ಯಾಧಿಕ್ಯವಾದರೆ ದೇವಲೋಕಕ್ಕೂ ಪಾಪಾಧಿಕ್ಯವಾದರೆ ನರಕಕ್ಕೂ ಮೇಲ್ಮುಖವಾದ ನಾಡಿಯಿಂದ ಇದು ಉತ್ಕ್ರಮಿಸುತ್ತದೆ. ನಾಲ್ಕನೆಯ ಪ್ರಶ್ನೆ ಸೌರ್ಯಾಯಣಿ ಗಾಗರ್ಯ್‌ರದು: ಈ ಪುರುಷನಲ್ಲಿ ನಿದ್ರಿಸುವವರು ಯಾರು ? ಜಾಗೃತರಾಗಿರುವವರು ಯಾರು ? ಸ್ವಪ್ನಗಳನ್ನು ಕಾಣುವವರೂ ಅನುಭವಿಸುವವರೂ ಯಾರು ? ಯಾರಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗುತ್ತಾರೆ ? ಉತ್ತರ: ಶ್ರೋತ್ರಾದಿ ಇಂದ್ರಿಯಗಳು ಮನಸ್ಸಿನಲ್ಲಿ ಏಕೀಭವಿಸಿ ನಿದ್ರಿಸುವುವು. ಪ್ರಾಣಾದಿ ಪಂಚವಾಯುಗಳು ಎಚ್ಚರವಾಗಿರುವುವು. ಮನಸ್ಸೆಂಬ ದೇವ ಸ್ವಪ್ನಗಳನ್ನು ಕಾಣುವಾತ. ಪಕ್ಷಿಗಳು ವೃಕ್ಷದಲ್ಲಿರುವಂತೆ ಅಕ್ಷರರೂಪಿಯಾದ ಪರಮಾತ್ಮನಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗಿರುತ್ತಾರೆ. ಶೈಬ್ಯ ಸತ್ಯಕಾಮನದು ಐದನೆಯ ಪ್ರಶ್ನೆ. ಪ್ರಣವೋಪಾಸಕ ಯಾವ ಲೋಕವನ್ನು ಜಯಿಸುತ್ತಾನೆ ? ಅಂಥವ ಸೂರ್ಯನಲ್ಲಿ ಸಂಗತವಾಗಿ ಪಾಪವಿಮುಕ್ತ ನಾಗಿ ಬ್ರಹ್ಮಲೋಕವನ್ನು ಸೇರುತ್ತಾನೆಂದು ಪಿಪ್ಪಲಾದಿ ಋಷಿ ಉತ್ತರ ಹೇಳಿದ್ದಾನೆ. ಸುರೇಶ ಭಾರದ್ವಾಜ ಷೋಡಶ ಕಲಾ ಪುರುಷನ ವಿಚಾರವಾಗಿ ಕೇಳಿದ ಆರನೆಯ ಪ್ರಶ್ನೆಗೆ ಪ್ರಾಣಾದಿ ಷೋಡಶ ಕಲೆಗಳು ಹೃದಯ ಪುಂಡರೀಕಾಕ್ಷದ ಮಧ್ಯದಲ್ಲಿ ಸಂಭವಿಸುವುದರಿಂದ ಆ ಪುರುಷ ಶರೀರದೊಳಗಿದ್ದಾನೆಂಬ ಉತ್ತರವಿದೆ. ಅನಂತರ ಆರು ಮಂದಿ ಶಿಷ್ಯರೂ ತಮ್ಮ ಅವಿದ್ಯೆಯನ್ನು ಹೋಗಲಾಡಿಸಿದ ಆಚಾರ್ಯರನ್ನು ವಂದಿಸುತ್ತಾರೆ.
ಮುಂಡಕೋಪನಿಷತ್
ಬದಲಾಯಿಸಿ- ಅಥರ್ವ ವೇದದ ಶೌನಕ ಶಾಖೆಗೆ ಸೇರಿದ ಇದರಲ್ಲಿ 3 ಮುಂಡಕಗಳು, 6 ಖಂಡಗಳು, 64 ಮಂತ್ರಗಳು ಇವೆ. ಇಡೀ ಉಪನಿಷತ್ತು ಪದ್ಯಮಯ ವಾಗಿದೆ. ಮೊದಲ ಮುಂಡಕದಲ್ಲಿ ಅಥರ್ವಣ ಪರಂಪರೆಯ ವಿವರಣೆಯೂ ಪರಾಪರ ವಿದ್ಯೆಗಳ ವಿಭಾಗವೂ ಕರ್ಮಕಾಂಡದ ನಿರಾಕರಣೆಯೂ ಜ್ಞಾನಕಾಂಡದ ಪ್ರಾಧಾನ್ಯವೂ ಸನ್ಯಾಸದ ಶ್ರೇಷ್ಠತೆಯೂ ನಿರೂಪಿತವಾಗಿವೆ. ಋಗ್ವೇದ, ಯಜುರ್ವೇದಗಳನ್ನು ಅಪರಾವಿದ್ಯೆಗೆ ಸೇರಿಸಿರುವುದೂ ಯಜ್ಞಸಂಸ್ಥೆಯ ಫಲದ ನಶ್ವರತೆಯನ್ನು ಸ್ಪಷ್ಟಪಡಿಸಿರುವುದೂ ಗಮನಾರ್ಹ ವಾಗಿದೆ. ವೇದಾಂಗಗಳ ಸಂಖ್ಯೆಯನ್ನೂ ಹೆಸರುಗಳನ್ನೂ ಕ್ರಮವಾಗಿ ಇಲ್ಲಿ ಕೊಡಲಾಗಿದೆ. ಎರಡನೆಯ ಮುಂಡಕದಲ್ಲಿ ಸೃಷ್ಟಿಸ್ಥಿತಿ ನಾಶಗಳಿಗೆ ಸರ್ವಭೂತಾಂತರಾತ್ಮವಾದ ಬ್ರಹ್ಮವಸ್ತುವೇ ಕಾರಣವೆಂದೂ ಅಮೃತತ್ವಕ್ಕೆ ಸೇತುವಾದ ಆ ಪರಮಾತ್ಮನೊಬ್ಬನನ್ನೇ ತಿಳಿಯಬೇಕೆಂದೂ ಇತರ ವಿಷಯಗಳಲ್ಲಿ ವಿರಕ್ತಿ ಇರಬೇಕೆಂದೂ ಬೋಧಿಸಲಾಗಿದೆ. ತದೇ ತತ್ಸತ್ಯಂ ತದಮೃತಂ ತದ್ವೇದ್ಧವ್ಯಂ, ತಮೇವೈಕಂ ಜಾನಥ ಆತ್ಮಾನಂ ಅನ್ಯವಾಚೋ ವಿಮುಂಚಥ-ಎಂದು ಇಲ್ಲಿ ಸಾರಿದೆ. ಮೂರನೆಯ ಮುಂಡಕದಲ್ಲಿ ವೇದಾಂತ ದರ್ಶನದ ಮುಖ್ಯ ವಿಚಾರವಾದ ಜೀವಾತ್ಮ ಪರಮಾತ್ಮರನ್ನು ಒಂದೇ ವೃಕ್ಷವನ್ನಾಶ್ರಯಿಸಿ ಅದರ ಫಲವನ್ನು ಭುಂಜಿಸುವ, ಭುಂಜಿಸದೇ ಇರುವ, ಎರಡು ಪಕ್ಷಿಗಳ ದೃಷ್ಟಾಂತದಿಂದ ನಿರೂಪಿಸಲಾಗಿದೆ. ದ್ವೈತಾದ್ವೈತ ಪಂಥಗಳು ಇದನ್ನು ಬಗೆಬಗೆಯಾಗಿ ವಿವರಿಸುತ್ತವೆ. ಜ್ಞಾನ ಪ್ರಸಾದದಿಂದ ಮಾತ್ರವೇ ಪರಮಾತ್ಮನನ್ನು ಪಡೆಯಬಹುದೆಂಬುದನ್ನು ಪರಮಾತ್ಮನನ್ನು ಕಂಡವನು ಪುಣ್ಯಪಾಪ ವಿಮುಕ್ತನಾಗಿ ಪರಮಾತ್ಮನ ಪರಮ ಸಾಮ್ಯವನ್ನು ಪಡೆಯುತ್ತಾನೆಂದು ಹೇಳಲಾಗಿದೆ. ಕಾಮಗಳನ್ನು ಜಯಿಸಿದವನಿಗೆ ಭಗವಂತನ ದಯೆಯಿಂದ ಬ್ರಹ್ಮಪ್ರಾಪ್ತಿಯಾಗುವುದೆಂದು ತಿಳಿಸಲಾಗಿದೆ. ವೇದಾಂತ ಶಬ್ದದ ಪ್ರಯೋಗ ಇಲ್ಲಿಯೇ ಮೊದಲು ಬಂದಿರುವುದು. ಇದರಲ್ಲಿ (ಮುಂಡನ ಮಾಡಿಕೊಂಡು) ವಿರಕ್ತಿಯಿಂದ ಇಂದ್ರಿಯಾತೀತವಾದ ಬ್ರಹ್ಮಾನಂದವನ್ನು ಪಡೆಯುವ ಸಾಧನೆ, ತಪಸ್ಸು, ಇಹಲೋಕ ತ್ಯಾಗ ಇವನ್ನು ವಿಶೇಷವಾಗಿ ವಿವರಿಸಿರುವುದರಿಂದ ಸಂನ್ಯಾಸಿಗಳ (ಮುಂಡಕ) ಉಪನಿಷತ್ತು ಎಂದು ಪರ್ಯಾಯವಾಗಿ ಇದನ್ನು ಕರೆಯಲಾಗಿದೆ.
ಮಾಂಡೂಕ್ಯೋಪನಿಷತ್
ಬದಲಾಯಿಸಿಅಥರ್ವವೇದಕ್ಕೆ ಸೇರಿದ ಇದು ಅತ್ಯಂತ ಚಿಕ್ಕದಾಗಿದ್ದು ಕೇವಲ ಹನ್ನೆರಡು ಮಂತ್ರಗಳಿಂದ ಕೂಡಿದೆ. ಇದರಲ್ಲಿ ಓಂಕಾರದ ಮಹಿಮೆ, ಮನುಷ್ಯನ ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳ ವಿವರಣೆ ಇದೆ. ಸೂತ್ರ ಗ್ರಂಥದಂತಿದ್ದರೂ ಓಂಕಾರವೇ ಸಮಸ್ತ ವಿಶ್ವವೂ ಭೂತ ಭವಿಷ್ಯದ್ವರ್ತಮಾನಗಳೂ ಆಗಿದೆ ಎಂದು ವಿವರಿಸುವ ಈ ಉಪನಿಷತ್ತಿಗೆ ಗೌಡಪಾದರೂ ವಿಸ್ತಾರವಾದ ಕಾರಿಕೆಯನ್ನು ಬರೆದಿದ್ದಾರೆ. ಅದ್ವೈತ, ಪ್ರಪಂಚ ಎಂಬ ಪದಗಳು ಇದರಲ್ಲಿಯೇ ಮೊದಲು ಬಂದಿರುವುದು.
ತೈತ್ತಿರೀಯೋಪನಿಷತ್
ಬದಲಾಯಿಸಿ- ಇದರ ಶಾಂತಿಮಂತ್ರ ‘ಶಂ ನೋ ಮಿತ್ರಃ ಶಂ ವರುಣಃ’ ಎಂಬುದು. ಕೃಷ್ಣ ಯಜುರ್ವೇದದ ಶಾಖೆಗೆ ಸೇರಿದ್ದು ಮೂರು ವಲ್ಲಿಗಳಿಂದ ಕೂಡಿದೆ. ಶಿಕ್ಷಾವಲ್ಲೀ (ಶಿಕ್ಷಾಧ್ಯಾಯ), ಬ್ರಹ್ಮಾನಂದವಲ್ಲೀ, ಭೃಗುವಲ್ಲೀ ಎಂದು ಮೊದಲ ಶಬ್ದಗಳಿಂದ ಹೆಸರುಗಳನ್ನು ಕೊಡಲಾಗಿದೆ. ಅನುವಾಕಗಳಾಗಿ ವಿಭಜಿಸಲ್ಪಟ್ಟು ಚಿಕ್ಕ ಚಿಕ್ಕ ಗದ್ಯವಾಕ್ಯಗಳಿಂದ ಕೂಡಿದೆ. ಶಿಕ್ಷಾಧ್ಯಾಯದಲ್ಲಿ ಅಧ್ಯಯನವನ್ನು ಮುಗಿಸಿರುವ ಶಿಷ್ಯನಿಗೆ ಮಾಡಿರುವ ಉಪದೇಶ ಎಲ್ಲ ದೇಶಕಾಲಗಳಿಗೂ ಅನ್ವಯಿಸುವಂತಿದ್ದು ಸಾರ್ವತ್ರಿಕ ಧರ್ಮನಿರೂಪಣೆಯಂತಿದೆ. ಬ್ರಹ್ಮಾನಂದವಲ್ಲಿಯಲ್ಲಿ ‘ಸತ್ಯಂ ಜ್ಞಾನಂ ಅನಂತಂ ಬ್ರಹ್ಮ’ ಎಂಬ ಬ್ರಹ್ಮವಸ್ತುಲಕ್ಷಣಗಳು, ಸೃಷ್ಟಿಕ್ರಮದ ವಿವೇಚನೆ ಇರುವುದಲ್ಲದೆ ವಾಙ್ಮನದರನಾದ ಬ್ರಹ್ಮವಸ್ತುವಿನಲ್ಲಿ ನೆಲೆನಿಂತವ ಭಯವಿದೂರನಾಗುವನೆಂಬ ಉಪದೇಶವಿದೆ. ಭೃಗುವಲ್ಲಿಯಲ್ಲಿ ಬ್ರಹ್ಮವಸ್ತು ಸೃಷ್ಟಿಸ್ಥಿತಿಲಯಗಳಿಗೆ ಕಾರಣವೆಂದೂ ಅದೇ ಆನಂದ ಸ್ವರೂಪಿ ಎಂದೂ ‘ಆನಂದೋ ಬ್ರಹ್ಮೇತಿ ವ್ಯಜಾನಾತ್’ ಎಂದೂ ತಿಳಿಸಲಾಗಿದೆ. ಪಂಚಕೋಶಗಳ ನಿರೂಪಣೆ ಸ್ಪಷ್ಟವಾಗಿದೆ. ಅವು ಒಂದರಿಂದ ಮತ್ತೊಂದು ಹುಟ್ಟುವುವೆಂಬ ಸಿದ್ಧಾಂತವಿದೆ. ಆಕಾಶ ಆತ್ಮನಿಂದ ಹುಟ್ಟಿತು ಎಂಬ ತತ್ತ್ವ ಸಾಂಖ್ಯದರ್ಶನದ ಬೆಳೆವಣಿಗೆಗೆ ಸಹಾಯಕವಾಯಿತು. ಇದರಲ್ಲಿ ಆಜಾನಜ, ಕರ್ಮಜ ಎಂದು ದೇವತೆಗಳನ್ನು ವಿಭಾಗಿಸಲಾಗಿದೆ. ಬ್ರಹ್ಮನೇ ದೇವತೆಗಳಿಗಿಂತ ಅಧಿಕನೆಂದು ಸಾರಿದೆ. ಬ್ರಹ್ಮಾನಂದವನ್ನು ಪಡೆದವ ಹಾಡುವ ಸಾಮವೊಂದು ಕೊನೆಯಲ್ಲಿ ಇದೆ.
ಐತರೇಯೋಪನಿಷತ್
ಬದಲಾಯಿಸಿ- ಋಗ್ವೇದದ ಐತರೇಯ ಆರಣ್ಯಕಕ್ಕೆ ಸೇರಿದೆ. ‘ವಾಙ್ಮೇ ಮನಸಿ ಪ್ರತಿಷ್ಠಿತಾ’ ಎಂಬುದು ಇದರ ಶಾಂತಿಮಂತ್ರ. ಗಾತ್ರದಲ್ಲಿ ಬಹಳ ಚಿಕ್ಕದು. ಮೂರು ಅಧ್ಯಾಯಗಳಿವೆ. ಆತ್ಮನಿಂದ ಲೋಕಗಳೆಲ್ಲದರ ಸೃಷ್ಟಿಯಾಯಿತೆಂದು ಮೊದಲು ತಿಳಿಸಲಾಗಿದೆ. ಅನಂತರ ಅಶನಾ ಪಿಪಾಸೆಗಳ ವೃತ್ತಾಂತ. ಪುರುಷ ಲೋಕಗಳಿಗೂ ಲೋಕಪಾಲಕರಿಗೂ ಅನ್ನವನ್ನು ಸೃಜಿಸಲು ಮಾಡಿದ ಸಂಕಲ್ಪ, ಇಂದ್ರ ಶಬ್ದದ ಅರ್ಥ, ಪುರುಷನ ಮೂರು ಜನ್ಮಗಳು, ಮನೋವ್ಯಾಪಾರಗಳ ವಿಶ್ಲೇಷಣೆ-ಇವನ್ನು ನಿರೂಪಿಸಲಾಗಿದೆ. ಕೊನೆಯಲ್ಲಿ ‘ಪ್ರಜ್ಞಾನಂ ಬ್ರಹ್ಮ’ ಎಂಬ ಉಪದೇಶವಿದೆ.
ಛಾಂದೋಗ್ಯೋಪನಿಷತ್
ಬದಲಾಯಿಸಿ- ಇದು ಅತ್ಯಂತ ಪ್ರಾಚೀನವಾದುದೆಂದು ಎಲ್ಲರೂ ಒಪ್ಪುತ್ತಾರೆ. ಸಾಮವೇದಕ್ಕೆ ಸೇರಿದ್ದು ಪ್ರಾಚೀನತೆ, ಅರ್ಥಗಾಂಭೀರ್ಯ, ಬ್ರಹ್ಮಜ್ಞಾನ ಪ್ರತಿಪಾದನೆ-ಈ ದೃಷ್ಟಿಗಳಿಂದ ಇದು ಬಹಳ ಪ್ರೌಢವೂ ಪ್ರಮೇಯ ಬಹುಲವೂ ಆಗಿದೆ. ಎಂಟು ಅಧ್ಯಾಯಗಳೂ (ಪ್ರಪಾಠಕಗಳು) ಒಂದೊಂದರಲ್ಲೂ ಅನೇಕಾನೇಕ ಖಂಡಗಳೂ ಇವೆ. ಒಂದೊಂದು ಖಂಡದಲ್ಲೂ ಹಲವಾರು ಗದ್ಯ ಮಂತ್ರಗಳಿವೆ. ಈ ಖಂಡಗಳು ಬೇರೆ ಬೇರೆ ವಿಚಾರಗಳನ್ನು ವಿವೇಚಿಸುವುದರಿಂದ ಇವು ಬೇರೆ ಬೇರೆ ಕಾಲಕ್ಕೆ ಸೇರಿರಬಹುದೆಂದು ವಿಮರ್ಶಕರು ಭಾವಿಸುತ್ತಾರೆ. ಗೃಹಸ್ಥಜೀವನ ಬ್ರಹ್ಮಲೋಕ ಪ್ರಾಪ್ತಿಗೆ ವಿಹಿತಮಾರ್ಗವೆಂದು ಕೊನೆಯ ಖಂಡದಲ್ಲಿ ಹೇಳಿರುವುದರಿಂದ ಯಾಗಾದಿಗಳ ಪ್ರಾಧಾನ್ಯ ತಪ್ಪುವುದಕ್ಕೆ ಮುಂಚೆಯೇ ಇದು ಸಂಕುಲಿತವಾಗಿರಬೇಕೆಂದು ನಿರ್ಣಯಿಸಬಹುದು. ಪಶುಹಿಂಸೆಯೂ ಅನುಮೋದಿತ ವಾಗಿದೆ. ಆಚಾರ್ಯ ಪರಂಪರೆಯನ್ನೂ ಸಂಗ್ರಹವಾಗಿ ಕೊಡಲಾಗಿದೆ. ಮೊದಲ ಅಧ್ಯಾಯದಲ್ಲಿ ಪ್ರಣವ ಸ್ವರೂಪವನ್ನೂ ಸಾಮಗಾನದ ಗೂಢ ಸ್ವರೂಪವನ್ನೂ ಮಾರ್ಮಿಕವಾಗಿ ತಿಳಿಸಲಾಗಿದೆ. ಉದ್ಗೀಥ ವಿದ್ಯೆಯ ಮಹತ್ತ್ವದ ನಿರೂಪಣೆಯೊಂದಿಗೆ ಉದ್ಗೀಥ, ಪ್ರಣವಗಳ ತಾದಾತ್ಮ್ಯವನ್ನು ಹೇಳಲಾಗಿದೆ. ಎರಡನೆಯ ಅಧ್ಯಾಯದಲ್ಲಿ ವಿಶ್ವವೇ ಸಾಮವೆಂದು ಸಾರಿ ಪಂಚವಿಧ ಸಪ್ತವಿಧ ಸಾಮೋಪಾಸನೆಯನ್ನು ಬೋಧಿಸಲಾಗಿದೆ. 3ನೆಯ ಅಧ್ಯಾಯದಲ್ಲಿ ಮಧುವಿದ್ಯೆಯ ನಿರೂಪಣೆಯೊಂದಿಗೆ ಆದಿತ್ಯನೇ ದೇವಮಧು, ಅವನೇ ಆತ್ಮ ಎಂದು ಸಾರಲಾಗಿದೆ. ಶಾಂಡಿಲ್ಯ ವಿದ್ಯೆ ಉಪವರ್ಣಿತವಾಗಿದೆ. 4ನೆಯ ಅಧ್ಯಾಯದಲ್ಲಿ ರೈಕ್ವನೆಂಬ ಬ್ರಹ್ಮಜ್ಞನಿಂದ ಜಾನು ಶ್ರುತಿ ಪೌತ್ರಾಯಣ ರಾಜಬ್ರಹ್ಮೋಪದೇಶವನ್ನು ಪಡೆದ ಕಥಾನಿರೂಪಣೆ ಇದೆ. ಸಂವರ್ಗ ವಿದ್ಯೆ ಮತ್ತು ಉಪಕೋಸಲ ವಿದ್ಯೆಗಳ ಉಪದೇಶ, ಸತ್ಯಕಾಮ ಜಾಬಾಲನ ವೃತ್ತಾಂತ, ದೇವಯಾನದ ಮುಖಾಂತರ ಆತ್ಮ ಬ್ರಹ್ಮಲೋಕವನ್ನು ಸೇರುವ ಕ್ರಮದ ವರ್ಣನೆಗಳು ಬಂದಿವೆ. 5ನೆಯ ಅಧ್ಯಾಯದಲ್ಲಿ ಇಂದ್ರಿಯಗಳಲ್ಲೆಲ್ಲ ಪ್ರಾಣವೇ ಶ್ರೇಷ್ಠವೆಂದು ತಿಳಿಸಲಾಗಿದೆ. ಜೈವಲಿಯಲ್ಲಿ ಪಂಚಾಗ್ನಿ ವಿದ್ಯೆಯ ಉಪದೇಶವಿದೆ. ಐದು ಜನ ಜಿಜ್ಞಾಸುಗಳು ಕೇಕಯ ಅಶ್ವಪತಿಯಿಂದ ವೈಶ್ವಾನರವಿದ್ಯೆಯ ಉಪದೇಶವನ್ನು ಪಡೆದ ಸಂವಾದವಿದೆ. 6ನೆಯ ಅಧ್ಯಾಯದಲ್ಲಿ ಉದ್ದಾಲಕ ಆರುಣಿ ಮಗನಾದ ಶ್ವೇತಕೇತುವಿಗೆ ಆತ್ಮವಿದ್ಯೆಯನ್ನು ಬೋಧಿಸಿದ ಸುಂದರವಾದ ಸಂವಾದವಿದೆ. ವಿಶ್ವವಿಖ್ಯಾತವಾದ ತತ್ತ್ವಮಸಿ ಮಂತ್ರದ ಉಪದೇಶ ಇದರಲ್ಲಿಯೇ ಬರುತ್ತದೆ. 7ನೆಯ ಅಧ್ಯಾಯದಲ್ಲಿ ನಾರದನಿಗೆ ಸನತ್ಕುಮಾರ ಮಾಡಿದ ಆತ್ಮವಿದ್ಯೋಪದೇಶವಿದೆ. 8ನೆಯ ಅಧ್ಯಾಯದಲ್ಲಿ ದಹರ ವಿದ್ಯೆಯ ಉಪದೇಶವೂ ಪ್ರಜಾಪತಿಯಿಂದ ಇಂದ್ರ ಆತ್ಮೋಪದೇಶವನ್ನು ಪಡೆದ ವೃತ್ತಾಂತವೂ ಇದೆ. ಇದು ಈ ಉಪನಿಷತ್ತಿಗೆ ಶಿಖರಪ್ರಾಯವಾಗಿದೆ. ಈ ಉಪನಿಷತ್ತಿನಲ್ಲಿ ತಿಳಿದುಬರುವ ಅಂಶಗಳು ಹೀಗಿವೆ: ಋಗ್ವೇದ ಸಾಮವೇದಗಳನ್ನು ಇನ್ನೂ ಅಧ್ಯಯನ ಮಾಡುತ್ತಿದ್ದರು; ಸಾಮದ ಸ್ವರವನ್ನೂ ಋಷಿದೇವತೆಗಳನ್ನೂ ನಿರ್ಧರಿಸಲಾಗಿತ್ತು; ಸಾಮಗಾನದೊಂದಿಗೆ ವೀಣಾಗಾನವೂ ಇತ್ತು; ಮಾಂಸಭಕ್ಷಣವನ್ನು ನಿಷೇಧಿಸಲಾಗಿತ್ತು; ಗೋತ್ರ ಪದ್ಧತಿ ದೃಢವಾಗಿತ್ತು; ವ್ಯಾಕರಣದ ಅಧ್ಯಯನವನ್ನೂ ಇತರ ವಿದ್ಯೆಗಳ ಅಧ್ಯಯನವನ್ನೂ ಗುರುವಿನ ಆವಶ್ಯಕತೆಯನ್ನೂ ಸ್ಪಷ್ಟಪಡಿಸಲಾಗಿತ್ತು. ದೇವಕೀಪುತ್ರನಾದ ಕೃಷ್ಣನಿಗೆ ಘೋರ ಅಂಗೀರಸ ಅಧ್ಯಾತ್ಮವಿದ್ಯೆಯನ್ನು ಉಪದೇಶಿಸಿದನೆಂದು 3ನೆಯ ಅಧ್ಯಾಯದಲ್ಲಿ ಹೇಳಲಾಗಿದೆ.
ಬೃಹದಾರಣ್ಯಕೋಪನಿಷತ್
ಬದಲಾಯಿಸಿ- ಈ ಹೆಸರು ಪಾಣಿನಿಗಿಂತ ಈಚೆಗೆ ಬಂದ ಶಬ್ದದಿಂದ ಬಂದಿದೆ. ಇದನ್ನು ಬೇರೆ ಬೇರೆ ಕಾಲದಲ್ಲಿದ್ದ ಅನೇಕರು ರಚಿಸಿದ್ದಾರೆ. ಇದರ ಸಂಗ್ರಹವಾದದ್ದು ಛಾಂದೋಗ್ಯಕ್ಕಿಂತ ಈಚೆಗೆ. ಇದು ಶುಕ್ಲ ಯಜುರ್ವೇದಕ್ಕೆ ಸೇರಿದುದು. ಇದರ ಅವಾಂತರ ಭಾಗಗಳನ್ನು ಶತಪಥ ಬ್ರಾಹ್ಮಣದ ಖಿಲಭಾಗಗಳೆಂದು ಎಣಿಸಲಾಗಿತ್ತು. ಆರು ಅಧ್ಯಾಯಗಳೂ ಒಟ್ಟು 57 ಬ್ರಾಹ್ಮಣಗಳೂ ಇವೆ. 5ನೆಯ ಅಧ್ಯಾಯದ ಆರಂಭದಲ್ಲಿ ಬರುವ ‘ಪೂರ್ಣಮದಃ, ಪೂರ್ಣಮಿದಂ’ ಎಂಬುದು ಇದರ ಶಾಂತಿಮಂತ್ರ. ಇದು ಗದ್ಯಮಯವಾಗಿದೆ. ಇದರಲ್ಲಿ ಭಿನ್ನ ಭಿನ್ನವಾದ ವಂಶ ವಿವರಣೆಗಳಿವೆ. ಮಧ್ಯೆ ಮಧ್ಯೆ ಪ್ರಮಾಣ ಶ್ಲೋಕಗಳಿವೆ. ಒಟ್ಟು 3 ಕಾಂಡಗಳೂ ಆರು ಅಧ್ಯಾಯಗಳೂ ಇವೆ.
ಮೊದಲ ಅಧ್ಯಾಯದಲ್ಲಿ ಯಜ್ಞಾಶ್ವದ ವರ್ಣನೆ ಇದೆ. ಈ ಅಶ್ವವೇ ವಿರಾಟ್ಪುರುಷನೆಂದೂ ಆತ್ಮವಸ್ತುವೇ ಸರ್ವಕ್ಕಿಂತ ಶ್ರೇಷ್ಠವೆಂದೂ ಪ್ರೇಯವೆಂದೂ ತಿಳಿಸಲಾಗಿದೆ. ದ್ವಿತೀಯಾಧ್ಯಾಯದಲ್ಲಿ ದೃಪ್ತಬಾಲಾಕಿ, ಗಾಗರ್ಯ್ ಮತ್ತು ಅಜಾತಶತ್ರು-ಇವರಲ್ಲಿ ಆತ್ಮವಸ್ತುವನ್ನು ಕುರಿತು ನಡೆದ ಸಂವಾದವಿದೆ. ಇದಲ್ಲದೆ ಯಾಜ್ಞವಲ್ಕ್ಯ ಮತ್ತು ಮೈತ್ರೇಯಿ ಇವರ ಸುಪ್ರಸಿದ್ಧ ಸುಂದರ ಸಂವಾದವಿದೆ. ಸುಂದರವಾದ ಉಪಮಾನಗಳಿಂದ ಬ್ರಹ್ಮ ಸರ್ವಕ್ಕೂ ಏಕಾಯನವಾಗಿದೆ ಎಂಬುದನ್ನೂ ಜೇಡರಹುಳುವಿನ ನಿದರ್ಶನದಿಂದ ಭಗವಂತನೇ ಸಮಸ್ತಕ್ಕೂ ಕಾರಣ ಎಂಬುದನ್ನೂ ವರ್ಣಿಸಿ ಮಹೋನ್ನತ ಉಪದೇಶವನ್ನು ನೀಡಲಾಗಿದೆ. ಇದೇ ಅಧ್ಯಾಯದಲ್ಲಿ ಮಧುವಿಧ್ಯೆಯ ವಿವರಣೆಯೂ ಕೊನೆಯ ಭಾಗದಲ್ಲಿ ವಂಶಕ್ರಮ ನಿರೂಪಣೆಯೂ ಇವೆ. 3ನೆಯ ಅಧ್ಯಾಯದಲ್ಲಿ ಜನಕರಾಜನ ಸಭೆಯಲ್ಲಿ ಯಾಜ್ಞವಲ್ಕ್ಯರಿಗೆ ತತ್ತ್ವಜ್ಞರು ಪ್ರಶ್ನೆಗಳನ್ನು ಕೇಳಿ ಪರಾಭವ ಹೊಂದಿದ್ದು, ಗಾರ್ಗಿ ವಾಚಕ್ನವೀ ಎಂಬ ಬ್ರಹ್ಮವಾದಿನಿ ಈ ಚರ್ಚೆಯಲ್ಲಿ ಭಾಗವಹಿಸಿದ್ದು, ಕೊನೆಯಲ್ಲಿ ಯಾಜ್ಞವಲ್ಕ್ಯರಿಗೆ ಜನಕರಾಜನ ಸಂಭಾವನೆ ಸಲ್ಲುವುದು-ಇವನ್ನು ಸ್ವಾರಸ್ಯವಾಗಿ ಚಿತ್ರಿಸಲಾಗಿದೆ. 4ನೆಯ ಅಧ್ಯಾಯದಲ್ಲಿ ಜನಕನಿಗೆ ಯಾಜ್ಞವಲ್ಕ್ಯ ಮಾಡಿದ ಆತ್ಮತತ್ತ್ವ ವಿವರಣೆ ಈ ಉಪನಿಷತ್ತಿಗೇ ರತ್ನಪ್ರಾಯವಾಗಿದೆ. ಮೈತ್ರೇಯಿಯ ವೃತ್ತಾಂತವೂ ಬಂದಿದೆ. 5ನೆಯ ಅಧ್ಯಾಯದಲ್ಲಿ ಪೂರ್ಣಮಿದಂ ಎಂಬ ಮಂತ್ರದ ಆವೃತ್ತದಿಂದ ಪ್ರಾರಂಭವಾಗಿ ನೀತಿ, ಸೃಷ್ಟಿ, ಪರಲೋಕ ಇವುಗಳ ಅನೇಕ ವಿಚಾರಗಳಿವೆ. ದಯೆ, ದಾನ, ಧರ್ಮ ಇವುಗಳ ಪ್ರಶಂಸೆ ಇದೆ. 6ನೆಯ ಅಧ್ಯಾಯದಲ್ಲಿ ಛಾಂದೋಗ್ಯ ಉಪನಿಷತ್ತಿನಲ್ಲಿ ಬಂದಿರುವ ಆತ್ಮದ (ಪ್ರಾಣ) ಶ್ರೇಷ್ಠತೆಯನ್ನೇ ಪುನಃ ಪ್ರಸ್ತಾಪಿಸಿ ಪಂಚೇಂದ್ರಿಯ ಗಳನ್ನು ಕುರಿತ ರೂಪಕವನ್ನು ಕೊಡಲಾಗಿದೆ. ಇದರಲ್ಲೂ ಶ್ವೇತಕೇತು ಜೈವಲಿಗಳ ದಾರ್ಶನಿಕ ಸಂವಾದ, ಜೈವಲಿಯ ಪಂಚಾಗ್ನಿ ವಿದ್ಯೆಯ ಉಪದೇಶಗಳು ಇವೆ. ಈ ಉಪನಿಷತ್ತಿನಲ್ಲಿ ಗಮನಾರ್ಹ ಅಂಶಗಳು ಇವು; ದೇವತೆಗಳಲ್ಲೂ ವರ್ಣಭೇದಗಳನ್ನು ನಿರೂಪಿಸಲಾಗಿದೆ. ಪುಷನ್ ಶೂದ್ರ, ಅಗ್ನಿ ಮಾತ್ರ ಬ್ರಾಹ್ಮಣ, ಇಂದ್ರಾದಿಗಳು ಕ್ಷತ್ರಿಯರು, ವೈಶ್ಯರು, ಕ್ಷತ್ರಿಯರು ಸರ್ವಶ್ರೇಷ್ಠರೆಂದೂ ಬ್ರಾಹ್ಮಣಹಿಂಸೆ ಮಹಾಪಾಪವೆಂದೂ ಹೇಳಲಾಗಿದೆ. ಅಹಿಂಸಾ ಪರಮೋಧರ್ಮಃ ಎಂಬ ತತ್ತ್ವ ಬೆಳೆಯುತ್ತ ಇತ್ತು. ಇದರಲ್ಲಿ ಉದಾಹರಿಸಲ್ಪಟ್ಟಿರುವ ಶ್ಲೋಕಗಳು ಸಂಹಿತೆಗಳಿಂದ ತೆಗೆದುಕೊಂಡವಾಗಿರದೆ ಬ್ರಹ್ಮವಾದಿಗಳೂ ಆಚಾರ್ಯರೂ ರಚಿಸಿದವಾಗಿವೆ.
ಶ್ವೇತಾಶ್ವತರೋಪನಿಷತ್
ಬದಲಾಯಿಸಿ- ಇದು ಕೃಷ್ಣ ಯಜುರ್ವೇದಕ್ಕೆ ಸೇರಿದುದಾಗಿದ್ದು ಆರು ಅಧ್ಯಾಯಗಳಿಂದ ಕೂಡಿದೆ. ಪದ್ಯಮಯವಾಗಿದೆ. ಸಹನಾವವತು ಎಂಬುದು ಇದರ ಶಾಂತಿಮಂತ್ರ, ವಿಚಾರಪುರಿತವಾದ 113 ಮಂತ್ರಗಳಿವೆ. ಜಗತ್ಕಾರಣವಾವುದು ? ನಾವು ಎಲ್ಲಿಂದ ಬಂದೆವು ? ಯಾರ ಕಟ್ಟಳೆಗೊಳಗಾಗಿ ಸುಖ ದುಃಖಗಳುಂಟಾಗುವುವು ? ಎಂಬ ಪ್ರಶ್ನೆಗಳ ಮಾಲೆಯಿಂದ ಇದು ಪ್ರಾರಂಭವಾಗಿದೆ. ಜೀವ, ಬ್ರಹ್ಮರ (ಜ್ಞ, ಅಜ್ಞ) ವಿಚಾರ ಪ್ರಸ್ತುತವಾಗಿದೆ. 2ನೆಯ ಅಧ್ಯಾಯದ ಯೋಗದ, ಯೋಗಾನುಭವದ ನಿರೂಪಣೆ ಇದೆ. ಇದು ಪಾತಂಜಲಯೋಗದ ಪೀಠಿಕೆಯಂತಿದೆ. 3-4ನೆಯ ಅಧ್ಯಾಯಗಳಲ್ಲಿ ಬ್ರಹ್ಮತತ್ತ್ವ, ಆತ್ಮತತ್ತ್ವಗಳ ಸ್ವರೂಪ ನಿರೂಪಣೆ ಇದೆ. ಬ್ರಹ್ಮವನ್ನು ಮಹೇಶ್ವರ ಎಂದು ಕರೆಯಲಾಗಿದೆ. 5ನೆಯ ಅಧ್ಯಾಯದಲ್ಲಿ ಕಪಿಲ ಋಷಿಯ ಸಾಂಖ್ಯತತ್ತ್ವದ ಉಲ್ಲೇಖವಿದೆ. ಆದರೆ ನಿರೀಶ್ವರ ಸಿದ್ಧಾಂತದ ಛಾಯೆ ಇಲ್ಲ. ಏಕೈಕ ಕಾರಣನೂ ಸರ್ವಾಧಿಪನೂ ಆದ ಅದ್ವಿತೀಯನನ್ನು ಅರಿಯುವುದರಿಂದ, ಮುಕ್ತಿ ಎಂದು ಹೇಳಲಾಗಿದೆ. 6ನೆಯ ಅಧ್ಯಾಯದಲ್ಲಿ ಕರ್ಮಸಿದ್ಧಾಂತದ ನಿರೂಪಣೆ ಇದ್ದು ಕರ್ಮಕ್ಷಯದಿಂದ ಮೋಕ್ಷಪ್ರಾಪ್ತಿ ಎಂದೂ ಮಹೇಶ್ವರ ಕರ್ಮಚಕ್ರದಿಂದ ಹೊರಗಿರುವ, ಕರ್ಮಾಧ್ಯಕ್ಷನೆಂದೂ ಶ್ವೇತಾಶ್ವತರ ಉಪದೇಶಿಸಿದ್ದಾನೆ. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಎಲ್ಲಕ್ಕಿಂತಲೂ ಮೊದಲಾಗಿ ಗುರುಭಕ್ತಿ ಇರಬೇಕೆಂಬುದನ್ನು ಕೊನೆಯಲ್ಲಿ ಒತ್ತಿಹೇಳಲಾಗಿದೆ.
ಕೌಷೀತಕಿ ಉಪನಿಷತ್
ಬದಲಾಯಿಸಿ- ಕೌಷೀತಕಿ ಎಂಬ ಆಚಾರ್ಯರಿಂದ ಇದಕ್ಕೆ ಈ ಹೆಸರು. ಋಗ್ವೇದಕ್ಕೆ ಸೇರಿದ್ದು ಗದ್ಯಮಯವಾಗಿದೆ. 4 ಅಧ್ಯಾಯಗಳಿವೆ. ವಾಙ್ಮೇ ಮನಸಿ ಪ್ರತಿಷ್ಠಿತಾ ಎಂಬುದು ಇದರ ಶಾಂತಿಮಂತ್ರ. ಮೊದಲ ಅಧ್ಯಾಯದಲ್ಲಿ ದೇವಯಾನದ ವಿಸ್ತಾರವಾದ ವರ್ಣನೆ ಇದೆ. ದೇವಯಾನದಲ್ಲಿ ಹೋಗುವವ ಬ್ರಹ್ಮಲೋಕಕ್ಕೆ ಸೇರುವ ರೀತಿ ವಿವರವಾಗಿ ಬಂದಿದೆ. 2ನೆಯ ಅಧ್ಯಾಯದಲ್ಲಿ ಪ್ರಾಣವಿದ್ಯೆಯ ವಿವೇಚನೆ ಇದೆ. ಸಂನ್ಯಾಸಾಶ್ರಮದ ಪ್ರಶಂಸೆಯೂ ಸಾಧಕರು ಅನುಸರಿಸಬೇಕಾದ ವ್ರತಗಳ ವಿವರಣೆಯೂ ಇವೆ. 3-4ನೆಯ ಅಧ್ಯಾಯಗಳಲ್ಲಿ ಬೃಹದಾರಣ್ಯಕ ಮತ್ತು ಛಾಂದೋಗ್ಯೋಪನಿಷತ್ತಿನ ಪ್ರಸಂಗಗಳಿವೆ.
ಮೈತ್ರಾಯಣೀಯೋಪನಿಷತ್
ಬದಲಾಯಿಸಿ- ಕೃಷ್ಣಯಜುರ್ವೇದಕ್ಕೆ ಸೇರಿದ್ದು 7 ಅಧ್ಯಾಯಗಳ ನ್ನೊಳಗೊಂಡಿದೆ. ಶಾಕಾಯನರಿಗೆ ಮೈತ್ರೀ ಋಷಿ ಉಪದೇಶಿಸಿದ ಬ್ರಹ್ಮ ತತ್ತ್ವವನ್ನು ಬೃಹದ್ರಥನಿಗೆ ಹೇಳಲಾಗಿದೆ. ಜ್ಯೋತಿಶ್ಶಾಸ್ತ್ರದ ವಿಚಾರವಾಗಿ ಉಲ್ಲೇಖವಿರುವುದರಿಂದ ಇದರ ಕಾಲವನ್ನು ಪ್ರ.ಶ.ಪು. 1900 ಎಂದು ವಿಮರ್ಶಕರು ನಿರ್ಣಯಿಸಿದ್ದಾರೆ. ಇದರಲ್ಲಿ ಇತರ ಉಪನಿಷತ್ತುಗಳ ವಾಕ್ಯಖಂಡಗಳಿರುವುದರಿಂದ ಅವು ಇದಕ್ಕೂ ಪ್ರಾಚೀನವಾದವು ಗಳೆಂದು ತೀರ್ಮಾನಿಸಬಹುದು. ಇದರಲ್ಲಿ ಗಮನಿಸಬೇಕಾದ ಅಂಶಗಳು: ಚಂದ್ರವಂಶ ಸೂರ್ಯವಂಶಗಳನ್ನು ಬೇರೆ ಬೇರೆ ಹೇಳಿರುವುದು, ಜ್ಯೋತಿರ್ಗಣದ ನಿರೀಕ್ಷಣೆ ನಡೆಯುತ್ತಿದ್ದುದು, ಸಾಂಖ್ಯ ಸಿದ್ಧಾಂತದ ಪರಿಚಯವಿದ್ದುದು, ಪಾತಂಜಲ ಯೋಗಕ್ಕಿಂತ ಬೇರೆಯಾದ ಷಡಂಗಯೋಗದ ವಿಚಾರ ಪ್ರಸ್ತುತವಾಗಿರುವುದು, ತ್ರಿಮೂರ್ತಿಗಳನ್ನೂ ಅವರ ವಿಶಿಷ್ಟ ಗುಣಗಳನ್ನೂ ಹೇಳಿರುವುದು.
ಉಳಿದ ಕೆಲವು ಉಪನಿಷತ್ತುಗಳ ಬಹುಸ್ಥೂಲ ಪರಿಚಯ
ಬದಲಾಯಿಸಿ- ಹಿಂದೆ ವಿವರಿಸಿದ ಮುಖ್ಯ ಉಪನಿಷತ್ತುಗಳಲ್ಲದೆ ಉಳಿದ ಕೆಲವು ಉಪನಿಷತ್ತುಗಳ ಬಹುಸ್ಥೂಲ ಪರಿಚಯ ಹೀಗಿದೆ:
- ನಾರಾಯಣೀಯ: ಗಾಯತ್ರೀ ಮಂತ್ರದಂತೆಯೇ ಇತರ ದೇವತೆಗಳನ್ನು ಸ್ತುತಿಸುವ ಮಂತ್ರಗಳಿಂದ ಕೂಡಿ ಬಹಳ ದೀರ್ಘವಾಗಿದೆ. ಆತ್ಮಯಾಗದ ನಿರೂಪಣೆಯಿದೆ.
ಕೈವಲ್ಯೋಪನಿಷತ್: ಶೈವಪರವಾಗಿದೆ. ಸಂನ್ಯಾಸಾಶ್ರಮ ಮತ್ತು ಗುರುವಿನ ಪ್ರಾಮುಖ್ಯ ಗಳನ್ನು ಒತ್ತಿಹೇಳುತ್ತದೆ. ಗೀತೆಯ ಶ್ಲೋಕಗಳು ಸೇರಿಕೊಂಡಿವೆ. ಜಾಬಾಲೋಪನಿಷತ್: ಶತರುದ್ರೀಯ ಜಪವನ್ನು ಇದು ವಿಧಿಸುತ್ತದೆ. ಇದೂ ಶಿವಪರವಾಗಿದೆ. ಬೃಹಜ್ಜಾಬಾಲ ಉಪನಿಷತ್: ಭಸ್ಮಧಾರಣೆಯ ಮಹತ್ತ್ವವನ್ನು ಕುರಿತದ್ದು. ಅನೇಕ ಪರಮಹಂಸರುಗಳ ಹೆಸರುಗಳನ್ನು ಉಲ್ಲೇಖಿಸಿದೆ. ಜಾಬಾಲೀ ಉಪನಿಷತ್: ಜೀವವನ್ನು ಪಶುವೆಂದೂ ಈಶನನ್ನು ಪಶುಪತಿ ಎಂದೂ ಕರೆಯಲಾಗಿದೆ. ನಾಮಜಪಕ್ಕೆ ಪ್ರಾಶಸ್ತ್ಯ ಕೊಡುತ್ತದೆ. ಮುಕ್ತಿಕೋಪನಿಷತ್: ಇದರಲ್ಲಿ ನೂರೆಂಟು ಉಪನಿಷತ್ತುಗಳನ್ನು ವಿಂಗಡಿಸಲಾಗಿದೆ. ಋಗ್ವೇದಕ್ಕೆ 10, ಶುಕ್ಲಯಜುರ್ವೇದಕ್ಕೆ 19, ಕೃಷ್ಣಯಜುರ್ವೇದಕ್ಕೆ 32, ಸಾಮವೇದಕ್ಕೆ 16, ಅಥರ್ವವೇದಕ್ಕೆ 31 ಸೇರಿವೆಯೆಂದು ತಿಳಿಸಿದೆ.
ತತ್ತ್ವಪ್ರತಿಪಾದನೆ
ಬದಲಾಯಿಸಿ- ಉಪನಿಷತ್ತುಗಳನ್ನು ಪರಮ ಪ್ರಮಾಣವಾದ ಅಪೌರುಷೇಯ ಮಂತ್ರಗಳೆಂಬ ದೃಷ್ಟಿಯಿಂದ ಪರಿಶೀಲಿಸಿದಾಗ ಅವೆಲ್ಲವೂ ಒಂದೇ ತತ್ತ್ವವನ್ನು ಪ್ರತಿಪಾದಿಸು ವುವು ಎಂದು ಒಪ್ಪಿಕೊಳ್ಳಬೇಕಾಗುತ್ತದಾದರೂ ಭಾಷ್ಯಕಾರರ ದೃಷ್ಟಿಯಲ್ಲಿ ಅವುಗಳಲ್ಲಿ ಭಿನ್ನ ಭಿನ್ನ ಸಿದ್ಧಾಂತಗಳ ನಿರೂಪಣೆ ಇದೆ. ಬಾದರಾಯಣರು ವೇದಾಂತಸೂತ್ರದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಅನೇಕ ಸಿದ್ಧಾಂತಗಳ ಉಲ್ಲೇಖವಿದ್ದರೂ ಅವುಗಳೆಲ್ಲಕ್ಕೂ ಸಮಪ್ರಾಧಾನ್ಯ ದೊರೆತಿಲ್ಲ. ಕೆಲವು ಮಿಂಚಿನಂತೆ ಕಂಡು ಮಾಯವಾಗುವುವು. ಕೆಲವು ಸಂಗ್ರಹವಾಗಿ ಬಂದರೆ ಮತ್ತೆ ಕೆಲವು ಹಳೆಯ ತತ್ತ್ವಗಳನ್ನೇ ಸಮರ್ಥಿಸುವುವು. ಆದರೆ ಈ ಎಲ್ಲ ಸಂಶಯಗಳನ್ನೂ ಬದಿಗೊತ್ತಿ ಪರಿಶೀಲಿಸಿದಲ್ಲಿ ಪ್ರಧಾನವಾಗಿ ಅಲ್ಲಿ ಘೋಷಿತವಾಗಿ ರುವ ತತ್ತ್ವ ವೇದಾಂತ ದರ್ಶನವೆನ್ನಿಸಿಕೊಂಡಿರುವ ಬ್ರಹ್ಮತತ್ತ್ವ ಅಥವಾ ಬ್ರಹ್ಮ ಮತ್ತು ಆತ್ಮಗಳೆಂಬ ಆಧಾರಸ್ತಂಭಗಳ ಮೇಲೆ ನಿಂತಿರುವ ಭಾರತೀಯ ದರ್ಶನಸಾರ.
- ಉಪನಿಷತ್ತುಗಳು ಬ್ರಾಹ್ಮಣಗಳೊಂದಿಗೆ ಸೇರಿಕೊಂಡಿದ್ದರೂ ಇವುಗಳ ವಿಚಾರಧಾರೆ ಬೇರೆಯಾಗಿವೆ. ಬ್ರಾಹ್ಮಣಗಳು ಪ್ರತಿಪಾದಿಸುವ ಯಾಗಾದಿಗಳನ್ನು ಕಾಮ್ಯ ಕರ್ಮಗಳೆಂದು ಉಪನಿಷತ್ತುಗಳು ತಿರಸ್ಕರಿಸಿ ಅವುಗಳಿಂದ ಆತ್ಮೋದ್ಧಾರವಿಲ್ಲವೆನ್ನುತ್ತವೆ; ಮತ್ತು ಬಾಹ್ಯಯಜ್ಞ ಆತ್ಮಯಜ್ಞದ ಪ್ರತೀಕವೆಂದು ಹೇಳಿವೆ. ಹೀಗೆ ಉಪನಿಷತ್ತುಗಳ ಕಾಲಕ್ಕೆ ಭಾರತೀಯ ದರ್ಶನದ ಸರಣಿಯಲ್ಲಿ ಗಮನಾರ್ಹವಾದ ಬದಲಾವಣೆಯಾಗಿತ್ತು. ಅದಲ್ಲದೆ ಉಪನಿಷತ್ ರಹಸ್ಯವಾದ ವಿದ್ಯೆ ಎಂಬ ಅರ್ಥವನ್ನೂ ಹೊಂದಿದೆ. ಇದನ್ನು ಗುರುಮುಖೇನ ಪಡೆಯುವವ ಅಸಾಧಾರಣ ಶ್ರದ್ಧಾಭಕ್ತಿಗಳಿಂದ ಕೂಡಿದವನಾಗಿದ್ದು ಜ್ಞಾನಪಿಪಾಸುವೂ ಸಮ್ಯಗುಪಸನ್ನನೂ ಶಮಾನ್ವಿತನೂ ಆಗಿರಬೇಕು. ಈ ಆದರ್ಶವಿದ್ಯೆಗೆ ಆದರ್ಶ ಶಿಷ್ಯನೇ ಪಾತ್ರವೆಂದು ಕಟ್ಟುನಿಟ್ಟಾಗಿ ನಿರ್ದೇಶಿಸ ಲಾಗಿದೆ. ಮೇಲೆ ಹೇಳಿದ ಉಪನಿಷತ್ತುಗಳಲ್ಲಿ ಈ ಬಗೆಯ ಗುರುಶಿಷ್ಯ ಸಂವಾದಗಳೇ ಚಿತ್ರಿತವಾಗಿವೆ. ಪ್ರವಚನದಲ್ಲೂ ಕೆಲವು ಗೂಢತತ್ತ್ವಗಳು ಸೂತ್ರರೂಪದಲ್ಲಿವೆಯೇ ಹೊರತು ಸ್ಪಷ್ಟವಾದ ವಿವರಣೆ ಇಲ್ಲ. ಈ ಕಾರಣದಿಂದಲೇ ಅರ್ಥವೃತ್ತಿಗಳಲ್ಲಿ ಭಿನ್ನತೆಗೆ ಅವಕಾಶವಾಗಿದೆ. ಸಂಹಿತೆಗಳಂತೆ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದಾರ್ಶನಿಕರಿಂದ ಸಂಗ್ರಹವಾಗಿರುವುದು ಸಿದ್ಧಾಂತಗಳ ವ್ಯತ್ಯಾಸಕ್ಕೆ ಕಾರಣವಿರಬಹುದೆಂದು ವಿದ್ವಾಂಸರ ಅಭಿಪ್ರಾಯ.
ಬ್ರಹ್ಮತತ್ವ - ಬ್ರಹ್ಮಶಬ್ದ
ಬದಲಾಯಿಸಿ- ಬ್ರಹ್ಮತತ್ವ :ಮೂಲ ಎಂಬ ಅರ್ಥವುಳ್ಳ ಬೃಃ ಶಬ್ದದಿಂದ ಬ್ರಹ್ಮಶಬ್ದ ಬಂದಿದೆ. ಯಾವುದು ತಾನೇ ತನ್ನ ಅಂತಃಶಕ್ತಿಯಿಂದಲೇ ನಿರಾತಂಕವಾಗಿ ಆವಿರ್ಭವಿಸುವುದೋ ಅದೇ ಬ್ರಹ್ಮ. ಇದೇ ಜಗತ್ತಿಗೆ ಏಕೈಕ ಕಾರಣ ಮತ್ತು ಏಕಮೇವಾದ್ವಿತೀಯವಾದದ್ದು. ಉಪನಿಷತ್ಕಾರರ ಮೊದಲ ತತ್ತ್ವವೇ ಬ್ರಹ್ಮನನ್ನು ಕುರಿತದ್ದು. ಬ್ರಹ್ಮ ಮತ್ತು ಆತ್ಮ ಎಂಬ ಶಬ್ದಗಳು ಮೊಟ್ಟಮೊದಲು ಅಥರ್ವವೇದದಲ್ಲಿ ಉಪಯೋಗಿಸಲ್ಪಟ್ಟಿವೆ. ಪರಮಾತ್ಮಪರವಾಗಿ ಬ್ರಹ್ಮಶಬ್ದದ ಅರ್ಥಪುಷ್ಟಿಯನ್ನು ಅಲ್ಲಿ ಕಾಣುತ್ತೇವೆ.
ಜಗತ್ತು ಮತ್ತು ಜೀವಿಗಳ ಮೂಲ
ಬದಲಾಯಿಸಿ- ಉಪನಿಷತ್ಕಾರರ ಮೊದಲ ಪ್ರಶ್ನೆ ಜಗತ್ತು ಮತ್ತು ನಾವು ಎಲ್ಲಿಂದ ಬಂದೆವು ? ನಮ್ಮ ಮುಂದಿನ ಗತಿಗೂ ಸುಖದುಃಖಗಳಿಗೂ ಕಾರಣರಾರು ? ಎಂಬುದೇ ಆಗಿದೆ. ಉತ್ತರವಾಗಿ ಸತ್, ಆತ್ಮ, ಬ್ರಹ್ಮ, ಅಕ್ಷರ, ಆಕಾಶ ಶಬ್ದಗಳಿಂದ ಜಗತ್ಕಾರಣವಾದ ಪರವಸ್ತುವನ್ನು ಹೇಳಲಾಗಿದೆ. ಬ್ರಹ್ಮನೇ ಜಗತ್ತಿಗೆ ಉಪಾದಾನ ಕಾರಣ ಮತ್ತು ನಿಮಿತ್ತಕಾರಣ ಎರಡೂ. ಬ್ರಹ್ಮ ಹೊರತು ಮತ್ತಾವುದೂ ಮೊದಲು ಇರಲಿಲ್ಲವಾದ್ದರಿಂದ ಜಗತ್ತು ಬ್ರಹ್ಮಮಯ. ಸಂಕಲ್ಪ ಮಾತ್ರದಿಂದ ಜಗತ್ತನ್ನು ಸೃಷ್ಟಿಸಿ ಅದರಲ್ಲಿ ಬ್ರಹ್ಮ ಅಂತರ್ಯಾಮಿಯಾಗಿದೆ. ಸರ್ವಭೂತಗಳಿಗೂ ಅಂತರಾತ್ಮನಾದ ಬ್ರಹ್ಮವೊಂದೇ ಶಾಶ್ವತ, ಸರ್ವಶಕ್ತ, ಅನಂತ, ಪೂರ್ಣಕಾಮ. ಸರ್ವರಿಗೂ ಅಂತರಾತ್ಮನಾದ ಬ್ರಹ್ಮನಲ್ಲಿ ಸರ್ವ ಆತ್ಮಗಳೂ ಚಕ್ರದ ನೇಮಿ ಮತ್ತು ನಾಭಿಯಲ್ಲಿ ಅರೆಕಾಲುಗಳು ಹೇಗೋ ಹಾಗೆ ಅಡಕವಾಗಿದ್ದಾರೆ. ಲವಣ ನೀರಿನಲ್ಲಿ ಕರಗಿ ವ್ಯಾಪಿಸುವಂತೆ ಬ್ರಹ್ಮ ಸರ್ವವನ್ನೂ ವ್ಯಾಪಿಸಿದ್ದಾನೆ. ಅಗ್ನಿಯಿಂದ ಅಗ್ನಿಕಣಗಳೂ ಜೇಡರ ಹುಳುವಿನಿಂದ ಬಲೆಯ ಎಳೆಗಳೂ ವೇಣುವಿನಿಂದ ನಾದದ ಅಲೆಗಳೂ ಉದ್ಭವಿಸುವಂತೆ ಎಲ್ಲ ಭೂತಜಾತಗಳೂ ಬ್ರಹ್ಮನಿಂದಲೇ ಉದ್ಭವಿಸುತ್ತವೆ. ಎಲ್ಲ ಭೂತ ಜಾತಗಳಿಗೂ ಬ್ರಹ್ಮ ಏಕಾಯನನಾಗಿದ್ದಾನೆ.
ಬ್ರಹ್ಮ ಮತ್ತು ಜಗತ್ತಿನ ಸಂಬಂಧ
ಬದಲಾಯಿಸಿ- ಬ್ರಹ್ಮನಿಗೂ ಜಗತ್ತಿಗೂ ಹೇಗೆ ಸಂಬಂಧ ಎಂಬ ವಿಚಾರದಲ್ಲಿ ಉಪನಿಷತ್ತುಗಳು ಹೀಗೆಯೇ ಎಂದು ಸ್ಪಷ್ಟವಾಗಿ ಹೇಳಿಲ್ಲ. ಅಂದರೆ ಆತ ವಿಶ್ವಾಂತರ್ಯಾಮಿಯೆಂದೂ ವಿಶ್ವಾತೀತನೆಂದೂ ಎರಡು ಬಗೆಯಾಗಿ ಹೇಳಿವೆ. ಹಾಗೆಯೇ ಸಪ್ರಪಂಚ ಬ್ರಹ್ಮ, ನಿಷ್ಪ್ರಪಂಚ ಬ್ರಹ್ಮರ ವಿಚಾರವೂ ಬರುತ್ತದೆ. ಈ ಎರಡು ವಾದಗಳ ಸಮರ್ಥನೆಗೂ ಉಪನಿಷತ್ತಿನಲ್ಲಿ ಸಾಕಷ್ಟು ತತ್ತ್ವಪ್ರತಿಪಾದನೆಯನ್ನು ಕಾಣುತ್ತೇವೆ. ಮುಂಡಕೋಪನಿಷತ್ತಿನಲ್ಲಿ ಎರಡು ವಾದಗಳನ್ನೂ ಸಮನ್ವಯ ಮಾಡುವ ಅರ್ಥವುಳ್ಳ ಒಂದು ಮಂತ್ರವಿದೆ. ಬ್ರಹ್ಮನನ್ನು ಬಿಟ್ಟು ಜಗತ್ತಿಗೆ ಬೇರೆ ಅಸ್ತಿತ್ವವಿಲ್ಲ. ಆದರೆ ಬ್ರಹ್ಮ ಜಗತ್ತಿಗೆ ಪರಿಮಿತನಾಗಿಲ್ಲ. ನಾಮರೂಪಗಳಿಗೆ ಸಿಲುಕಿಲ್ಲ. ಬ್ರಹ್ಮ ಪರಿಣಾಮವಾದದ ಪ್ರಕಾರ ಬ್ರಹ್ಮನೇ ಜಗತ್ತಿನ ರೂಪವನ್ನು ತಾಳುತ್ತಾನೆ. ಇದು ಸಪ್ರಪಂಚವಾದ. ಬ್ರಹ್ಮ ಜಗತ್ತಿಗೆ ಕಾರಣನಾಗಿದ್ದು, ನಾಮರೂಪ ಜಗತ್ತು ಬ್ರಹ್ಮನಷ್ಟು ಸತ್ಯವಲ್ಲವೆಂಬುದು ನಿಷ್ಪ್ರಪಂಚವಾದ. ಇದರ ಪ್ರಕಾರ ಬ್ರಹ್ಮ ಜಗತ್ತಿನಂತೆ ಕಾಣಿಸಿಕೊಳ್ಳುತ್ತಾನೆ. ಅಂದರೆ ಬ್ರಹ್ಮವಿವರ್ತವಾದ ಸಮರ್ಥನೆ ಇದೇ. ಆದರೆ ಬ್ರಹ್ಮನೇ ಏಕಮೇವಾದ್ವಿತೀಯವಾದ ಸತ್ಯ ಎಂಬುದನ್ನು ನಿಸ್ಸಂಶಯವಾಗಿ ಸಾರಲಾಗಿದೆ. ನಿಷ್ಪ್ರಪಂಚನಾದ ಬ್ರಹ್ಮ ಸಪ್ರಪಂಚನಂತೆ ಕಾಣಿಸುತ್ತಾನೆಂದು ಹೇಳುವುದು ಮಾಯಾವಾದ. ಅದ್ವೈತವಾದ ಇದನ್ನೇ ಹೆಚ್ಚು ವಿಸ್ತಾರವಾಗಿ ವಿವರಿಸಿದೆ. ಉಪನಿಷತ್ತುಗಳಲ್ಲಿ ಮಾಯೆ ಎಂಬ ಶಬ್ದ ಅಷ್ಟು ನಿರ್ದಿಷ್ಟವಾಗಿಲ್ಲ. ಇದರ ಅರ್ಥವನ್ನೇ ಕೊಡುವ ಅವಿದ್ಯೆ ಎಂಬ ಮತ್ತೊಂದು ಪದದ ಪ್ರಯೋಗವೂ ಇದೆ.
ಚೇತನ ಮತ್ತು ಅಚೇತನ
ಬದಲಾಯಿಸಿ- ನಾಮರೂಪ ಜಗತ್ತಿನ ಸೃಷ್ಟಿಕ್ರಮವನ್ನು ಉಪನಿಷತ್ತುಗಳು ಹೇಳುವಾಗ ಚೇತನ, ಅಚೇತನ ಎಂಬ ಭೇದವನ್ನು ಹೇಳಿವೆ. ಅಚೇತನ ಜಗತ್ತು ಚೇತನ ಜೀವಗಳಿಗೆ ಸಾಧನಸಾಮಗ್ರಿ ಮಾತ್ರ. ಅದು ಪಂಚಭೂತಗಳಿಂದ ಕೂಡಿದೆ. ಪೃಥ್ವಿ, ಅಪ್, ತೇಜಸ್, ವಾಯು, ಆಕಾಶ ಎಂಬುವೇ ಇವು. ಛಾಂದೋಗ್ಯೋಪನಿಷತ್ತಿನಲ್ಲಿ ಅಗ್ನಿ, ಜಲ, ಪೃಥ್ವಿ ಎಂಬುವು ಬ್ರಹ್ಮನಿಂದ ಕ್ರಮವಾಗಿ ಸೃಷ್ಟಿಯಾದುವೆಂದು ಹೇಳಲಾಗಿದೆ. ತೇಜಸ್ಸು, ಜಲ, ಅನ್ನಗಳೇ ಇತರ ಸಕಲ ಭೂತಜಾತಗಳಿಗೆ ಮೂಲಕಾರಣ. ಈ ಮೂರನ್ನು ಸೃಷ್ಟಿಸಿದ ಮೇಲೆ ಇದನ್ನು ಒಂದುಗೂಡಿಸಿ ಅವುಗಳೊಂದಿಗೆ ಜೀವನಸಹಿತ ಪ್ರವೇಶಿಸಿ ನಾಮರೂಪಾತ್ಮಕವಾದ ಜಗತ್ತನ್ನು ಸೃಜಿಸಲು ಬ್ರಹ್ಮ ಸಂಕಲ್ಪಿಸಿತು. ಹೀಗೆ ಜಗತ್ತಿಗೆ ಬ್ರಹ್ಮವೇ ಉಪಾದಾನಕಾರಣ, ನಿಮಿತ್ತಕಾರಣ ಎರಡೂ ಆಗಿದೆ. ಐತರೇಯ, ತೈತ್ತಿರೀಯ ಉಪನಿಷತ್ತುಗಳಲ್ಲಿಯೂ ಪರಮಾತ್ಮಸಂಕಲ್ಪದಿಂದ ಸೃಷ್ಟಿ ಯೆಂದೂ ಅದರೊಳಗೆ ಬ್ರಹ್ಮನೇ ಅಂತಃಪ್ರವೇಶ ಮಾಡಿದನೆಂದೂ ಭಾವವಿದೆ. ಕಾರಣರೂಪಿ ಯಾದ ಬ್ರಹ್ಮನನ್ನು ತಿಳಿದವ ಅದರಿಂದಾದ ಪಂಚಭೌತಿಕ ಜಗತ್ತನ್ನೂ ಅರಿಯುತ್ತಾನೆ.
ಪರಾವಿದ್ಯೆ - ಅಪರಾವಿದ್ಯೆಗಳು
ಬದಲಾಯಿಸಿ- ಬ್ರಹ್ಮಜ್ಞಾನವನ್ನು ಪಡೆಯುವ ಕ್ರಮವನ್ನು ಕುರಿತು ಪರಾವಿದ್ಯೆ, ಅಪರಾವಿದ್ಯೆಗಳ ಭೇದವನ್ನು ಹೇಳಿದೆ. ಬ್ರಹ್ಮನನ್ನು ತಿಳಿಯುವುದು ಪರಾವಿದ್ಯೆ. ನಾಮರೂಪವಾದ ಜಗತ್ತನ್ನು ತಿಳಿಯುವುದು ಅಪರಾವಿದ್ಯೆ. ಮಣ್ಣನ್ನು ತಿಳಿಯುವುದರಿಂದ ಮಣ್ಣಿನಿಂದಾದುವೆಲ್ಲವನ್ನೂ ತಿಳಿಯುವಂತೆ, ಬ್ರಹ್ಮನನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ, ಇದಕ್ಕಿಂತ ಹೆಚ್ಚಿನ ವಿದ್ಯೆ ಯಾವುದೂ ಇಲ್ಲ. ಹೀಗೆಂದು ಮುಂಡಕೋಪನಿಷತ್ ಹೇಳುತ್ತದೆ. ಆದರೆ ಈಶೋಪನಿಷತ್ ಬ್ರಹ್ಮನನ್ನು ಅರಿಯಲು ಸಾಧ್ಯವಿಲ್ಲವೆಂದು ಬ್ರಹ್ಮಸ್ವರೂಪವನ್ನು ಹೇಳುವಾಗ ಸೂಚಿಸುತ್ತದೆ. ‘ಚಲಿಸುತ್ತದೆ, ಚಲಿಸುವುದಿಲ್ಲ, ದೂರದಲ್ಲಿದೆ, ಸಮೀಪದಲ್ಲಿದೆ, ಒಳಗೂ ಇದೆ, ಹೊರಗೂ ಇದೆ.’ ಹೀಗೆಯೇ ಬೃಹದಾರಣ್ಯಕದಲ್ಲಿ ಅಕ್ಷರರೂಪಿಯಾದ ವಿಶ್ವಾತ್ಮನನ್ನು ಕುರಿತು `ಸ್ಥೂಲನಲ್ಲ, ಅಣುವಲ್ಲ, ಹ್ರಸ್ವನಲ್ಲ, ದೀರ್ಘನಲ್ಲ, ಅಗ್ನಿಯಂತೆ ಕೆಂಪಾಗಿಲ್ಲ, ಜಲದಂತೆ ಹರಿಯುವುದಿಲ್ಲ. ನೆರಳಲ್ಲ, ಕತ್ತಲೆಯಲ್ಲ, ವಾಯುವಾಗಲೀ ಆಕಾಶವಾಗಲೀ ಅಲ್ಲ, ಸಂಸರ್ಗವುಳ್ಳದ್ದಲ್ಲ, ರಸವಲ್ಲ, ಗಂಧವಲ್ಲ. ಅದಕ್ಕೆ ಕಣ್ಣುಗಳಿಲ್ಲ, ಅದು ಅಳತೆಗೊಳಗಾದುದಲ್ಲ, ಒಳಗಿಲ್ಲ, ಹೊರಗಿಲ್ಲ’ ಎಂಬ ವಿವರಣೆ ಇದೆ. ಕೊನೆಯಲ್ಲಿ ಅರಿಯಲ್ಪಡುವವನೂ ನೋಡುವವನೂ ಮನನಮಾಡು ವವನೂ ಅರಿಯುವವನೂ ಅದಲ್ಲದೆ ಬೇರೆಯಲ್ಲ. ಈ ಅಕ್ಷರನಲ್ಲಿ ಎಲ್ಲವೂ ಓತಪ್ರೋತವಾಗಿದೆ. ಯಾವನು ಈ ಅಕ್ಷರನನ್ನು ತಿಳಿದು, ಈ ಲೋಕವನ್ನೇ ಬಿಡುವನೋ ಅವನು ಬ್ರಹ್ಮಜ್ಞನೆನಿಸುವನು ಎಂದು ಹೇಳಿದ್ದರೂ ವಾಕ್ಕಿಗೂ ಮನಸ್ಸಿಗೂ ದೂರನಾಗಿರುವನೆಂಬ ಸೂಚನೆ ಇದೆ. ಇದು ವಾಚಕ್ನವೀಗಾರ್ಗಿಗೆ ಯಾಜ್ಞವಲ್ಕ್ಯ ಜನಕನ ಸಭೆಯಲ್ಲಿ ಮಾಡಿದ ಉಪದೇಶ. ಧನದಲ್ಲಿ ನಿರಾಸಕ್ತಳಾಗಿ, ಅಮೃತತ್ವವನ್ನು ಪಡೆಯುವ ಅಭಿಲಾಷೆಯಿಂದ ತನ್ನ ಪತ್ನಿ ಮೈತ್ರೇಯಿ ಬ್ರಹ್ಮೋಪದೇಶ ಮಾಡಬೇಕೆಂದು ಬೇಡಿದಾಗಲೂ ಯಾಜ್ಞವಲ್ಕ್ಯ ಸರ್ವಾಂತರ್ಯಾಮಿಯಾದ ಆತ್ಮನನ್ನು (ಬ್ರಹ್ಮ) ತಿಳಿಯುವುದರಿಂದ ಮಾತ್ರವೇ ಅಮೃತತ್ವವನ್ನು ಪಡೆಯಬಹುದೆಂದೂ ಅವನೊಬ್ಬನನ್ನು ತಿಳಿದರೆ ಸರ್ವವನ್ನೂ ತಿಳಿದಂತಾಗುವುದೆಂದೂ ಹೇಳುತ್ತಾನೆ. ಆದರೆ ಬ್ರಹ್ಮತತ್ತ್ವವನ್ನು ತಿಳಿಯುವುದಾಗುವುದಿಲ್ಲ. ಬ್ರಹ್ಮನ ಹೊರತು ಮತ್ತಾವುದೂ ಇಲ್ಲ ಎಂದು ತಿಳಿಯಬೇಕಾದರೆ ಬ್ರಹ್ಮತ್ವವನ್ನು ಪಡೆಯುವುದರಿಂದ ಮಾತ್ರ ಸಾಧ್ಯ ಎಂದೂ ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ ಎಂಬ ಜ್ಞಾನವುಂಟಾಗಬೇಕೆಂದೂ ಇದೇ ಉಪನಿಷತ್ತಿನ ಸಾರವೆಂದೂ ಶಂಕರಾಚಾರ್ಯರು ಪ್ರತಿಪಾದಿಸುತ್ತಾರೆ. ಅವರ ವೇದಾಂತಸೂತ್ರಭಾಷ್ಯದಲ್ಲಿ ಬಾಷ್ಕಲಿ ಎಂಬ ಶಿಷ್ಯ ಬಾಧ್ವ ಎಂಬ ಗುರುವಿನಲ್ಲಿ ಬ್ರಹ್ಮಜ್ಞಾನವನ್ನು ಉಪದೇಶಿಸಬೇಕೆಂದು ಕೋರಿದ ಸಂದರ್ಭದಲ್ಲಿ ಮೂರನೆಯ ಸಲ ಕೇಳಿದಾಗಲೂ ಮೌನವಾಗಿದ್ದ ಗುರು ‘ಉಪಶಾಂತೋಯಂ ಆತ್ಮಾ’ ಎಂದು ಕೊನೆಯಲ್ಲಿ ಉಪದೇಶಿಸಿದುದನ್ನು ಉದಾಹರಿಸಿದ್ದಾರೆ. ಬ್ರಹ್ಮನನ್ನು ವರ್ಣಿಸಲು ಸಾಧ್ಯವಿಲ್ಲ, ಬ್ರಹ್ಮನನ್ನು ಅರಿತವ ಬ್ರಹ್ಮನಾಗುತ್ತಾನೆ-ಎಂಬುದೇ ಸಾರಾಂಶ. ಬೃಹದಾರಣ್ಯಕ ‘ನೇತಿ, ನೇತಿ’ ಎಂದು ಬ್ರಹ್ಮಸ್ವರೂಪವನ್ನು ತಿಳಿಸಲೆತ್ನಿಸಿದೆ.
ಬ್ರಹ್ಮಜ್ಞಾನ ಪ್ರಾಪ್ತಿ - ಮಾರ್ಗ
ಬದಲಾಯಿಸಿ- ಜ್ಞಾನಮಾರ್ಗವನ್ನಷ್ಟೇ ಅಲ್ಲದೆ, ಉಪನಿಷತ್ತುಗಳು ಭಕ್ತಿ ಮತ್ತು ಕರ್ಮಮಾರ್ಗಗಳನ್ನೂ ಅನುಮೋದಿಸಿವೆ. ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳಲ್ಲಿ ನಾಲ್ಕನೆಯದರಲ್ಲಿ ಯೋಗಶಕ್ತಿಯಿಂದ ಬ್ರಹ್ಮಜ್ಞಾನ ಉಂಟಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಆದರೂ ಈ ಜ್ಞಾನಮಾರ್ಗದಲ್ಲಿ ಕರ್ಮಕ್ಕೂ ಭಕ್ತಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ತೈತ್ತಿರೀಯೋಪನಿಷತ್ತಿನಲ್ಲಿ ಸತ್ಯನಿಷ್ಠೆ, ತಪಸ್ಸು, ವೇದಾಧ್ಯಯನಗಳಿಂದ ಅಮೃತತ್ವವುಂಟಾಗುತ್ತದೆ ಎಂದು ಹೇಳಲಾಗಿದೆ. ಅಹಂಕಾರನಿವೃತ್ತಿಯಾದಾಗಲೇ ಬ್ರಹ್ಮಜ್ಞಾನ ಪ್ರಾಪ್ತಿ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಎಂಬ ಮೂರು ಆಶ್ರಮಗಳಲ್ಲಿದ್ದು ಮಾನವ ಸರ್ವಸಂಗ ಪರಿತ್ಯಾಗ ಭಾವನೆಯಿಂದ ವೈರಾಗ್ಯವನ್ನು ಅಭ್ಯಾಸ ಮಾಡಿದರೆ ಸಂನ್ಯಾಸಾಶ್ರಮ, ಅದರೊಂದಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತವೆ ಎಂದು ತಿಳಿಸಲಾಗಿದೆ. ಹೀಗೆ ಮೋಕ್ಷಕ್ಕೆ ಅಂದರೆ ಬ್ರಹ್ಮಸಾಕ್ಷಾತ್ಕಾರಕ್ಕೆ ಪೂರ್ವಭಾವಿಯಾಗಿ ಸಾಧನೆಯೂ ಅಗತ್ಯ. ಬೃಹದಾರಣ್ಯಕದಲ್ಲಿ ಪ್ರಜಾಪತಿಯ ಮಕ್ಕಳನ್ನು ದೇವ, ಮನುಷ್ಯ, ಅಸುರ ಎಂದು ವರ್ಗೀಕರಿಸಿ ಅವರಿಗೆ ಪ್ರಜಾಪತಿ ಕರ್ತವ್ಯವನ್ನು ವಿಧಿಸುವಾಗ ಅಸುರರಿಗೆ ದಯಧ್ವಂ ಎಂದೂ ಮನುಷ್ಯರಿಗೆ ದತ್ತ ಎಂದೂ ದೇವತೆಗಳಿಗೆ ದಾಮ್ಯತ ಎಂದೂ ವಿಧಿಸಿರುವ ಸಂಗತಿ ಇದೆ. ಅಂದರೆ ಮಾನವರು ಸಮಾಜದಲ್ಲಿ ಪರಹಿತವನ್ನು ಆಚರಿಸತಕ್ಕದ್ದು, ಲೋಕವನ್ನು ತ್ಯಜಿಸಿ ಒಂಟಿಯಾಗಿದ್ದರೆ ಮಾತ್ರ ಮೋಕ್ಷಪ್ರಾಪ್ತಿಯಲ್ಲ ಎಂಬುದೇ ಸಾರಾಂಶ.
ಸಾಧನ ಚತುಷ್ಟಯ
ಬದಲಾಯಿಸಿ- ವೈರಾಗ್ಯ ಮಾನವನನ್ನು ಜ್ಞಾನಕ್ಕೆ ಒಯ್ಯುತ್ತದೆ. ಜ್ಞಾನಮಾರ್ಗದಲ್ಲಿ ಶ್ರವಣ, ಮನನ, ನಿಧಿಧ್ಯಾಸನ ಎಂಬ ಮೂರು ವಿಧವಾದ ಸಾಧನೆ ಇದೆ. ಮೊದಲನೆಯದಾಗಿ ಉಪನಿಷತ್ತುಗಳನ್ನು ಸರಿಯಾದ ಗುರುವಿನಲ್ಲಿ ಅಧ್ಯಯನ ಮಾಡುವುದು ಶ್ರವಣ. ಬ್ರಹ್ಮಜ್ಞಾನಿಯಾದ ಗುರುವಿನ ಸಂಗದಿಂದಲೇ ಜ್ಞಾನ ಪ್ರಾಪ್ತಿಯಾಗಬೇಕಾದರೆ. ಶ್ರವಣ ಮಾತ್ರ ಸಾಲದು. ಪದೇ ಪದೇ ಕೇಳಿದುದನ್ನು ಮನನ ಮಾಡಿ ಮಂದಟ್ಟು ಮಾಡಿಕೊಳ್ಳಬೇಕು. ಅನಂತರ ನಿಧಿಧ್ಯಾಸನದಿಂದ ಜಗತ್ತಿನ ಏಕೈಕ ಸತ್ಯವನ್ನು ಕಂಡುಕೊಳ್ಳಬೇಕು. ನಿಧಿಧ್ಯಾಸನವೆಂಬ ಸಾಧನೆಯಲ್ಲಿ ಉಪಾಸನೆ ಗಳಿವೆ. ಈ ಉಪಾಸನೆಗಳು ಬ್ರಾಹ್ಮಣಗಳಲ್ಲಿ ಹೇಳಿರುವ ಯಜ್ಞಯಾಗಾದಿಗಳಂತೆ ಪ್ರಾಧಾನ್ಯವನ್ನು ಪಡೆದಿವೆ. ಬ್ರಹ್ಮಜ್ಞಾನಿಯಾಗಲು ಸಾಮಾನ್ಯ ಮನುಷ್ಯನಿಗೆ ಸಾಧ್ಯವಿಲ್ಲವೆಂತಲೂ ಅಂಥವನು ಅತ್ಯಂತ ವಿರಳನೆಂದೂ ಕಠೋಪನಿಷತ್ತಿನಲ್ಲಿ ಹೇಳಲಾಗಿದೆ.
ಸರ್ವಶಕ್ತನಾದ ಪರಬ್ರಹ್ಮ ನಿರ್ಗುಣನಂತೆ ನಿರೂಪಿತನಾಗಿದ್ದರೂ ಅವನು ದಯಾಮಯ ನೆಂದೂ ಸಂಸಾರ (ಜನ್ಮ, ಮೃತ್ಯು) ಬಂಧನದಿಂದ ನಮ್ಮನ್ನು ಬಿಡುಗಡೆ ಮಾಡುವವನೆಂದೂ ತಿಳಿಸಿ 32 ಉಪಾಸನೆಗಳನ್ನು ಹೇಳಿದೆ. ಅದರಲ್ಲಿ ಶರಣಾಗತಿ ಎಂಬುದನ್ನು ಸೇರಿಸಲಾಗಿದೆ.
ಏಕೈಕ ಸತ್ಯವೇ- ಆತ್ಮ ಮತ್ತು ಬ್ರಹ್ಮ
ಬದಲಾಯಿಸಿ- ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ-ಎಂಬುದನ್ನು ಶ್ವೇತಾಶ್ವತರೋಪನಿಷತ್ತಿನಲ್ಲಿ ಹೇಳಿದೆ. ಆದ್ದರಿಂದ ದಯಾಮಯನಾದ ಭಗವಂತನನ್ನು ಭಜಿಸುವ ಭಕ್ತಿಗೂ ಉಪನಿಷತ್ತುಗಳಲ್ಲಿ ಪ್ರಶಂಸೆ ಇದೆ.
- ಆತ್ಮ ಮತ್ತು ಜೀವಾತ್ಮ: ಉಪನಿಷತ್ತುಗಳು ಮೊದಮೊದಲು ಆತ್ಮನಿಗೂ ಬ್ರಹ್ಮನಿಗೂ ಭೇದವನ್ನು ಹೇಳುವಂತೆ ತೋರುತ್ತವೆ. ಆತ್ಮ ಎಂದರೆ ಚೇತನದಲ್ಲಿರುವ ಪರತತ್ತ್ವ, ಬ್ರಹ್ಮ ಎಂದರೆ ಜಗತ್ತಿನಲ್ಲಿರುವ ಪರತತ್ತ್ವ ಎಂಬ ಭಾವನೆ ಇದೆ. ಅವಿನಾಶಿಯಾದ ಚೇತನ ಅಥವಾ ಪ್ರಾಣವೇ ಆತ್ಮ. ಮಾನವನಲ್ಲಿ ಇರುವ ಅಂತಸ್ಸತ್ತ್ವ ಯಾವುದು ? ದೇಹ ನಾಶವಾದಾಗ ಅವನು ಏನಾಗುತ್ತಾನೆ? ಎಂಬ ಪ್ರಶ್ನೆಗಳನ್ನು ಉಪನಿಷತ್ತುಗಳು ಕೇಳಿವೆ. ಆತ್ಮ ಎಂದರೆ ಮಾನವನ ಅಂತಸ್ಸತ್ತ್ವ: ನಾಶವಾಗದೆ ಉಳಿಯುವ ಸತ್ಯ. ಅದರಂತೆ ಜಗತ್ತಿಗೆ ಅಂತಸ್ಸತ್ತ್ವ ಬ್ರಹ್ಮ. ಈ ಎರಡು ಅಂತಸ್ಸತ್ತ್ವಗಳೂ ಒಂದೇ ಎಂಬ ತತ್ತ್ವ ಕ್ರಮೇಣ ಬೆಳೆಯಿತು. ಆತ್ಮ ಮತ್ತು ಬ್ರಹ್ಮ ಶಬ್ದಗಳನ್ನು ಒಂದೇ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ತನ್ನಲ್ಲಿರುವ ಸತ್ಯ ಯಾವುದು ? ಜಗತ್ತಿನಲ್ಲಿ ಯಾವ ಸತ್ಯವಿದೆ ? ಎಂದು ಮಾನವ ಒಳಗೂ ಹೊರಗೂ ಶೋಧನೆ ಮಾಡಲು ಯತ್ನಿಸಿ ಕೊನೆಗೆ ಏಕೈಕ ಸತ್ಯವೇ ತನಗೂ ಜಗತ್ತಿಗೂ ಕಾರಣವಾಗಿದೆ ಎಂದು ತತ್ತ್ವವನ್ನು ಕಂಡುಕೊಂಡನೆಂದು ಉಪನಿಷತ್ತುಗಳು ಹೇಳಿವೆ. ಒಳಗೂ ಹೊರಗೂ ಬ್ರಹ್ಮವೊಂದೇ ಇರುವುದು. ಉಳಿದುದೆಲ್ಲ ಅಸತ್ಯ, ಅನಿತ್ಯ-ಎಂಬುದೇ ಸಾರಾಂಶ. ದೇಹಕ್ಕೂ ಆತ್ಮಕ್ಕೂ ಯಾವ ಸಂಬಂಧವಿದೆಯೋ ಅದೇ ಜಗತ್ತಿಗೂ ಬ್ರಹ್ಮನಿಗೂ ಇರುವ ಸಂಬಂಧ ವೆಂದೂ ತಿಳಿಸಲಾಗಿದೆ. ಆತ್ಮನಿಗೂ ಬ್ರಹ್ಮನಿಗೂ ಸಮನ್ವಯ ಮಾಡಿ `ಸತ್ಯಂ ಜ್ಞಾನಂ ಅನಂತಂ’ ಆಗಿರುವ ಪರವನ್ನು ನಿರ್ದೇಶಿಸಲಾಗಿದೆ.
ನೋಡುವ ಅವನೇ ಆತ್ಮ
ಬದಲಾಯಿಸಿ- ಜೀವಾತ್ಮನ ಸ್ವರೂಪವನ್ನು ಹೇಳುವಾಗ ಕಠೋಪನಿಷತ್ತಿನಲ್ಲಿ ಶರೀರವೆಂಬ ವೃಕ್ಷದಲ್ಲಿ ಜೀವ ಈಶ್ವರನೊಡನೆ ವಾಸಿಸುತ್ತಾನೆಂದೂ ಈಶ್ವರನನ್ನು ಕಾಣುವವರೆಗೂ ಮೋಹದಿಂದ ದೇಹವೇ ತಾನೆಂದು ಭ್ರಮಿಸಿ ತನ್ನ ಅಸಹಾಯಕತೆಗೂ ದುಃಖಸ್ಥಿತಿಗೂ ಶೋಕಿಸುತ್ತಾನೆಂದೂ ಆದರೆ ನಿತ್ಯನೂ ಜನನ ಮರಣ ರಹಿತನೂ ಆದ ಆತ್ಮನ ಸ್ವರೂಪವನ್ನು ಅರಿತಾಗ ಅವನ ಶೋಕಗಳು ಕಳೆದುಹೋಗುವುವೆಂದೂ ಹೇಳಿದೆ. ಜೀವಾತ್ಮನ ಸ್ವರೂಪವನ್ನು ಹೇಳುವಾಗ ಪ್ರಜಾಪತಿ ಛಾಂದೋಗ್ಯೋಪನಿಷತ್ತಿನಲ್ಲಿ ಉಪದೇಶಿಸಿದ್ದು ಹೀಗಿದೆ: ಇದನ್ನು ನೋಡುವೆನು, ತಿಳಿಯುವೆನು ಎಂದು ಯಾರು ತಿಳಿಯುವನೋ ಅವನೇ ಆತ್ಮ. ಅಮೃತಸ್ವರೂಪಿಯೂ ಅಶರೀರಿಯೂ ಆದ ಆತ್ಮನಿಗೆ ಅವನ ಕರ್ಮಾನುಗುಣವಾಗಿ ಈ ದೇಹ ವಾಸಸ್ಥಾನವಾಗುವುದು. ದೇಹಸಂಬಂಧದಿಂದ ಪ್ರಿಯ ಅಪ್ರಿಯಗಳಿಂದ ಆವೃತವಾಗುವ ಆತ್ಮನಿಗೆ ದೇಹವಿರುವವರೆಗೂ ಸುಖದುಃಖಗಳು ತಪ್ಪುವುದಿಲ್ಲ.
ಸೋಪಾಧಿಕ ಬ್ರಹ್ಮ
ಬದಲಾಯಿಸಿ- ಜಗತ್ತಿನ ಚೇತನಾಚೇತನ ವಸ್ತುಗಳಲ್ಲಿ ಸೂತ್ರದಂತೆ ಒಂದಾಗಿರುವ ಬ್ರಹ್ಮವಸ್ತು ಅಸಂಖ್ಯಾತ ಜೀವರನ್ನು ಸೃಷ್ಟಿಸಿ ಜೀವಾತ್ಮನೂ ಆಗಿದೆ. ಇವರನ್ನು ಸೃಷ್ಟಿಸುವಾಗ ಅವರವರ ಕರ್ಮಾನುಸಾರವಾದ ಜನ್ಮಪ್ರಾಪ್ತಿಯಾಗುತ್ತದೆ. ಅನಾದಿಯಾದ ಅವಿದ್ಯೆಯೇ ಅವರ ಪುಣ್ಯಪಾಪರೂಪವಾದ ಕರ್ಮಕ್ಕೆ ಕಾರಣ. ಶರೀರದಲ್ಲಿ ವಾಸಿಸುವುದರಿಂದ ಜೀವಾತ್ಮನಿಗೆ ಪುರುಷ (ಪುರೀಶಯಃ) ಎಂದು ನಿರ್ದೇಶ. ಪಂಚಭೂತಗಳಿಂದ ಉತ್ಪನ್ನವಾಗಿರುವ ಶರೀರೇಂದ್ರಿಯಗಳಿಗೆ ಸಂಬಂಧಿಸಿರುವ ಸೋಪಾಧಿಕ ಬ್ರಹ್ಮನಿಗೆ ಮೂರ್ತ, ಮತರ್ಯ್, ಪರಿಚ್ಛಿನ್ನ, ಸರ್ತ ಎಂಬ ರೂಪವುಂಟು. ಇದಕ್ಕೆ ವಿರೋಧವಾದ ಅಜವೂ ಅಜರವೂ ಅಮೃತವೂ ಅಭಯವೂ ಆಗಿ ಅದ್ವೈತವಾಗಿರುವ ಬ್ರಹ್ಮನನ್ನು ನೇತಿ ನೇತಿ ಎಂದು ನಿರ್ದೇಶಿಸಲಾಗಿದೆ. ಆದರೆ ಶರೀರಗಳನ್ನು ಪ್ರವೇಶಿಸಿದ ಪರಮಾತ್ಮ ಜೀವಾತ್ಮನಂತೆ ಕಾಣುತ್ತಾನೆಯೇ ಹೊರತು ಬ್ರಹ್ಮ ಜೀವಾತ್ಮನಿಂದ ಭಿನ್ನವಾಗಿಲ್ಲ. ಜೀವಾತ್ಮ ಸತ್ಯ, ಬ್ರಹ್ಮ ಸತ್ಯದ ಸತ್ಯ. ಪ್ರಾಣ, ಇಂದ್ರಿಯ, ಮನಸ್ಸು ಜೀವಾತ್ಮನಿಗೋಸ್ಕರವಾಗಿಯೇ ಜೀವನಿಗೆ ಅಧೀನವಾಗಿವೆ. ಸುಷುಪ್ತಿಯಲ್ಲಿ ಆತ್ಮ ಬ್ರಾಹ್ಮೀಸ್ಥಿತಿಯಲ್ಲಿ, ತನ್ನ ಪರಮಪದದಲ್ಲಿ ಪರಮ ಸಂಪತ್ತಿನಿಂದ ಕೂಡಿ ಪರಮಾನಂದದಿಂದಿರುತ್ತಾನೆ. ಇದೇ ಅವನ ಸ್ವಾಭಾವಿಕ ಸ್ಥಿತಿ, ಇತರ ಸಂಪತ್ತುಗಳೆಲ್ಲ ಕೃತಕ. ಜಾಗ್ರದವಸ್ಥೆಯಲ್ಲಿ ಅಹಂಕಾರದಿಂದ ಆವೃತನಾಗುತ್ತಾನೆ. ಬ್ರಹ್ಮನಿಂದ ತಾನು ಭಿನ್ನವೆಂದು ಭ್ರಮಿಸುತ್ತಾನೆ. ಸರ್ವವೂ ಆತ್ಮನೆಂದು (ಬ್ರಹ್ಮನೆಂದು) ಅರಿಯದೆ ಎಲ್ಲವನ್ನೂ ಆತ್ಮನಿಗಿಂತ ಭಿನ್ನವೆಂದು ಅರಿಯುವವನನ್ನು ಎಲ್ಲವೂ ನಿರಾಕರಿಸುವುವು. ಅಸಂಗನೂ ನಿರಾಸಕ್ತನೂ ಬಂಧರಹಿತನೂ ಶೋಕರಹಿತನೂ ಆದ ಆತ್ಮನಿಗಾಗಿಯೇ ಅಂದರೆ ಆತ್ಮನ ಪ್ರಯೋಜನಕ್ಕಾಗಿಯೇ ಎಲ್ಲವೂ ಪ್ರಿಯವಾಗಿರುತ್ತದೆ. ಎಲ್ಲದರ ಪ್ರಯೋಜನ ಕ್ಕಾಗಿ ಎಲ್ಲವೂ ಪ್ರಿಯವಾಗಿರುವುದಿಲ್ಲ. ಆದ್ದರಿಂದ ಆತ್ಮನನ್ನೇ ಕೇಳಬೇಕು, ಮನನ ಮಾಡಬೇಕು. ನಿಧಿಧ್ಯಾಸನ ಮಾಡಿ ಆತ್ಮಸಾಕ್ಷಾತ್ಕಾರ-ಅಂದರೆ ಬ್ರಹ್ಮಸಾಕ್ಷಾತ್ಕಾರ ಹೊಂದಬೇಕು.
ಕರ್ಮ ಮತ್ತು ಜನ್ಮ
ಬದಲಾಯಿಸಿ- ಕರ್ಮಸಿದ್ಧಾಂತವನ್ನೂ ಉಪನಿಷತ್ತುಗಳಲ್ಲಿ ನಿರೂಪಿಸಲಾಗಿದೆ. ಜನನಮರಣ ಪರಂಪರೆಗಳಿಗೆ ಜೀವಾತ್ಮನ ಕರ್ಮವೇ ಕಾರಣ. ಜೀವರುಗಳು ಅವರವರ ಪುಣ್ಯ ಪಾಪಾನುಸಾರವಾದ ಪುನರ್ಜನ್ಮಗಳನ್ನು ಪಡೆಯುತ್ತಾರೆ. ಭಗವಂತ ನಿಷ್ಪಕ್ಷಪಾತಿ. ಪುಣ್ಯಪಾಪ ಫಲಗಳ ನಿಯಾಮಕ. ಆದ್ದರಿಂದ ಕರ್ಮವನ್ನು ಮಾಡುವುದಕ್ಕೆ ಮಾತ್ರ ಜೀವ ಅಧಿಕಾರಿ, ಫಲವನ್ನು ಕೊಡುವವ ಪರಮಾತ್ಮ. ಆದ್ದರಿಂದ ಕರ್ಮವನ್ನು ನಿಷ್ಕಾಮಬುದ್ಧಿಯಿಂದ ಮಾಡಬೇಕು. ಆತ್ಮರು ಅನಾದಿಯಾದ ಅವಿದ್ಯೆಯ ಸಂಬಂಧದಿಂದ ತಮ್ಮ ನಿಜಸ್ವರೂಪವನ್ನರಿ ಯದೆ ಕರ್ಮಬಂಧನಕ್ಕೂ ಅದರಿಂದ ಸಂಸಾರಕ್ಕೂ ಸಿಕ್ಕಿ ನರಳುತ್ತಾರೆ-ಎಂದು ಉಪನಿಷತ್ ಗಳು ಹೇಳಿವೆ. ಐಹಿಕ ಸುಖಗಳು ಪ್ರೇಯವೇ ವಿನಾ ಶ್ರೇಯವಲ್ಲ. ನಿರತಿಶಯವಾದ ಆನಂದವನ್ನೂ ಪಡೆಯುವುದು ಬ್ರಹ್ಮಸಾಕ್ಷಾತ್ಕಾರದಿಂದ ಮಾತ್ರ. ಆನಂದಂ ಬ್ರಹ್ಮಣೋ ವಿದ್ವಾನ್ ನಬಿಭೇತಿ ಕದಾಚನೇತಿ.
ಪುನರ್ಜನ್ಮ ಸಿದ್ಧಾಂತ
ಬದಲಾಯಿಸಿ- ಜನ್ಮಕಾರಣವನ್ನಷ್ಟೇ ಹೇಳದೆ ಜನಿಸುವ ಬಗೆಯನ್ನು ಬೃಹದಾರಣ್ಯಕ ಪಂಚಾಗ್ನಿ ವಿದ್ಯೆಯಲ್ಲಿ ಹೇಳಿದೆ. ಪಾಂಚಾಲ ರಾಜನಾದ ಜೈಬಲಿ ಆರುಣಿಗೂ ಅವನ ಮಗ ಶ್ವೇತಕೇತು ವಿಗೂ ಈ ವಿದ್ಯೆಯನ್ನು ಉಪದೇಶಿಸುತ್ತಾನೆ. ಮೃತರಾದ ಮೇಲೆ ಜೀವರು ಯಾವ ಯಾನದಲ್ಲಿ ಹೋಗಿ ಯಾವ ರೀತಿ ಪುನಃ ಭೂಲೋಕಕ್ಕೆ ಹಿಂತಿರುಗುತ್ತಾರೆ ಎಂದು ವಿವರಿಸಲಾಗಿದೆ. ಬ್ರಹ್ಮಜ್ಞಾನಿಗಳು ದೇವಯಾನದಲ್ಲಿ ಪ್ರಯಾಣ ಮಾಡಿ ಬ್ರಹ್ಮಲೋಕಕ್ಕೆ ಹೋಗಿ ಸೇರುವರು. ಪುನಃ ಸಂಸಾರಕ್ಕೆ ಹಿಂತಿರುಗುವುದಿಲ್ಲ. ಬ್ರಹ್ಮೋಪಾಸನೆಯನ್ನು ಮಾಡದೆ, ಯಜ್ಞದಾನಾದಿಗಳಲ್ಲಿ ನಿರತರಾಗಿ ಕರ್ಮ ಮಾಡುವವರು ಪಿತೃಯಾನವೆಂಬ ಧೂಮಮಾರ್ಗದಲ್ಲಿ ಚಲಿಸಿ ಕರ್ಮಫಲಕ್ಷಯವಾದ ಮೇಲೆ ಭೂಮಿಗೆ ಹಿಂತಿರುಗುವರು. ಇದೇ ಪುನರ್ಜನ್ಮ ಸಿದ್ಧಾಂತ.
ಮೋಕ್ಷ
ಬದಲಾಯಿಸಿ- ದುಃಖಕರವಾದ ಸಂಸಾರಚಕ್ರದಿಂದ ಬಿಡುಗಡೆ ಹೊಂದುವುದೇ ಮೋಕ್ಷ. ಮೋಕ್ಷೋಪಾಯವಾಗುವುದು? ಎಂಬ ಪ್ರಶ್ನೆಯನ್ನು ಉಪನಿಷತ್ತುಗಳಲ್ಲಿ ಪುನಃ ಪುನಃ ವಿಮರ್ಶಿಸಲಾಗಿದೆ. ಪರಿಶುದ್ಧವಾದ ನಡತೆ, ಇಂದ್ರಿಯನಿಗ್ರಹ, ಆತ್ಮಶುದ್ಧಿ ಅತ್ಯಾವಶ್ಯಕವೆಂದೂ ಬ್ರಹ್ಮಸಾಕ್ಷಾತ್ಕಾರವೇ ಮಾನವನ ಗುರಿಯೆಂದೂ ಉಪನಿಷತ್ತುಗಳ ಉತ್ತರ. ನಿಜವಾದ ಯೋಗಿಯನ್ನು ಶಾಂತ, ದಾಂತ, ತಿತಿಕ್ಷು, ಉಪರತ, ಸಮಾಹಿತ ಎಂದು ವರ್ಣಿಸುತ್ತವೆ. ಮುಕ್ತರಾದವರು ನದಿಗಳು ಸಾಗರವನ್ನು ಸೇರುವಂತೆ, ನಾಮರೂಪಗಳನ್ನು ಕಳೆದುಕೊಂಡು ಸರ್ವಾತ್ಮಗಳನ್ನು ಸೇರುವರು. ಮೋಕ್ಷ ಆತ್ಮನಾಶವಲ್ಲ. ಅನಾದಿಯಾಗಿದ್ದ ಕರ್ಮಲೇಪ ಪುರ್ತಿಯಾಗಿ ತೊಳೆದು ಹೋಗಿ ಆತ್ಮ ಸ್ವರೂಪಾವಿರ್ಭಾವದಿಂದ, ಪೂರ್ಣವಿಕಾಸವಾದ ಜ್ಞಾನದಿಂದ ಪ್ರಜ್ವಲಿಸುತ್ತ ನಿರತಿಶಯವಾದ ಆನಂದವನ್ನು ಅನುಭವಿಸುವುದೇ ಮೋಕ್ಷ.
ಕೆಲವು ಉಪನಿಷತ್ತುಗಳು ಮುಕ್ತರು ಪರಮಾತ್ಮನಿಗೆ ಸಮರಾಗುವರೆಂದೂ ಮತ್ತೆ ಕೆಲವು ಪರಮಾತ್ಮನೊಡನೆ ಸೇರಿಹೋಗುವವೆಂದೂ ಹೇಳಿವೆ. ಇನ್ನು ಕೆಲವು ಮಂತ್ರಗಳು ಜೀವ ಪರಮರಿಗೆ ಭೇದ ಮತ್ತು ಐಕ್ಯ ಎರಡನ್ನೂ ಹೇಳುವ ಘಟಕಶ್ರುತಿಗಳಾಗಿವೆ.
ಸರ್ವ ದರ್ಶನಗಳಿಗೂ ಪರಮಾಧಾರ- ಉಪನಿಷತ್ತುಗಳು
ಬದಲಾಯಿಸಿ- ಅಭೇದ ಶ್ರುತಿಗಳು ಅದ್ವೈತ ದರ್ಶನಕ್ಕೂ ಭೇದಶ್ರುತಿಗಳು ಭೇದದರ್ಶನಕ್ಕೂ ಆಧಾರವಾಗಿವೆ. ಭೇದಾಭೇದ ದರ್ಶನಗಳು ಎರಡು ವಿಧವಾದ ಶ್ರುತಿಗಳನ್ನೂ ಸ್ವೀಕರಿಸುತ್ತವೆ.
ಸಗುಣ ಬ್ರಹ್ಮನನ್ನು ಕೆಲವು ಉಪನಿಷತ್ತುಗಳೂ ನಿರ್ಗುಣ ಬ್ರಹ್ಮವನ್ನು ಮತ್ತೆ ಕೆಲವೂ ಪ್ರತಿಪಾದಿಸುತ್ತವೆ, ಸಗುಣ ಶ್ರುತಿಗಳಿಗೆ ಪ್ರಾಧಾನ್ಯ ಕೊಡುವ ದರ್ಶನಗಳು ನಿರ್ಗುಣ ಶ್ರುತಿಗಳಿಗೆ ಹೇಯಗುಣರಾಹಿತ್ಯವೆಂದು ವಿವರಣೆ ಕೊಡುತ್ತವೆ. ನಿರ್ಗುಣ ಶ್ರುತಿಗಳಿಗೇ ಪ್ರಾಧಾನ್ಯ ಕೊಡುವ ದರ್ಶನಗಳು ಸಗುಣ ಶ್ರುತಿಗಳೇ ಪರಮಾಧಾರವೆಂದೂ ಹೇಳುತ್ತವೆ. ಹೀಗೆ ಉಪನಿಷತ್ತುಗಳು ಸರ್ವ ದರ್ಶನಗಳಿಗೂ ಪರಮಾಧಾರವಾಗಿಯೂ ರಹಸ್ಯವಾದ ಜ್ಞಾನಪ್ರಚೋದಕವಾಗಿಯೂ ಮಾನವ ಕೋಟಿಯ ಉದ್ಧಾರದ ಅಮೃತಧಾರೆಯಾಗಿಯೂ ಇವೆ. (ಎಸ್.ಎಸ್.ಆರ್.)[೧][೨]
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪನಿಷತ್ತುಗಳು
- ↑ ಉಪನಿಷತ್ತುಗಳು