ಹ್ಯಾಮಿಲ್ಟನ್ ಯಂಗ್ ಕ್ಯಾಸನರ್
ಹ್ಯಾಮಿಲ್ಟನ್ ಯಂಗ್ ಕ್ಯಾಸನರ್,(ಸೆಪ್ಟಂಬರ್ 11, 1858 – ಒಕ್ಟೋಬರ್ 11, 1899) ಅಮೆರಿಕದ ಪ್ರತಿಭಾವಂತ ಕೈಗಾರಿಕಾ ರಸಾಯನವಿಜ್ಞಾನಿ.
ಹ್ಯಾಮಿಲ್ಟನ್ ಯಂಗ್ ಕ್ಯಾಸನರ್ | |
---|---|
ಜನನ | Brooklyn, New York | ೧೧ ಸೆಪ್ಟೆಂಬರ್ ೧೮೫೮
ಮರಣ | October 11, 1899 Saranac Lake, New York | (aged 41)
ವಾಸಸ್ಥಳ | United States, England |
ಪೌರತ್ವ | ಅಮೆರಿಕ |
ರಾಷ್ಟ್ರೀಯತೆ | American |
ಕಾರ್ಯಕ್ಷೇತ್ರ | Chemist |
ಅಭ್ಯಸಿಸಿದ ವಿದ್ಯಾಪೀಠ | Brooklyn Polytechnic Institute Columbia University School of Mines |
ಪ್ರಸಿದ್ಧಿಗೆ ಕಾರಣ | invention of methods to produce sodium metal and sodium hydroxide from soda ash and salt respectively |
ಗಮನಾರ್ಹ ಪ್ರಶಸ್ತಿಗಳು | John Scott Medal (1889) Elliott Cresson Medal (1897) |
ಬಾಲ್ಯ
ಬದಲಾಯಿಸಿನ್ಯೂ ಯಾರ್ಕಿನ ಬ್ರೂಕ್ಲಿನ್ನಿನಲ್ಲಿ 1858ರ ಸೆಪ್ಟೆಂಬರ್ 11ರಂದು ಜನಿಸಿದ. ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ವಿಶ್ಲೇಷಣ ಮತ್ತು ಔದ್ಯೋಗಿಕ ರಸಾಯನಶಾಸ್ತ್ರವನ್ನು ಅಭ್ಯಸಿಸಿದ. ಆದರೆ ವಿಶ್ವವಿದ್ಯಾಲಯದ ನೀರಸ ಏಕತೆ ಈತನಿಗೆ ಹಿಡಿಸಲಿಲ್ಲ. ಹೀಗಾಗಿ ಸಾಂಪ್ರದಾಯಿಕ ವಿದ್ಯಾರ್ಜನಕ್ರಮವನ್ನು ತೊರೆದು ತನ್ನ ಸಮಸ್ತ ಸಾಧನೆಯನ್ನೂ ರಸಾಯನಶಾಸ್ತ್ರದ ಕಡೆಗೆ ಕೇಂದ್ರೀಕರಿಸಲು ನಿರ್ಧರಿಸಿದ. ಇದರಿಂದಾಗಿ ಅವನಿಗೆ ಮುಂದೆ ಡಿಗ್ರಿ ದೊರೆಯುವುದು ತಪ್ಪಿಹೋಯಿತು.
ಸಾಧನೆ
ಬದಲಾಯಿಸಿಸ್ವಂತ ಪ್ರಯೋಗಾಲಯವನ್ನು ಕ್ಯಾಸನರ್ ಸ್ಥಾಪಿಸಿ ವಿಶ್ಲೇಷಣ ಹಾಗೂ ಸಲಹೆಗಾರ ರಸಾಯನವಿಜ್ಞಾನಿಯಾಗಿ ಕಾರ್ಯೋದ್ಯುಕ್ತನಾದ. ಇಲ್ಲಿ ಆತ ಪ್ರವರ್ಧಿಸಿದ. ಹೀಗಾಗಿ ತನ್ನ ಪ್ರಯೋಗಶಾಲೆಯನ್ನು ವಿಶಾಲಗೊಳಿಸಬೇಕಾಯಿತು. ಇಲ್ಲಿ ತನ್ನ ಆಸಕ್ತ ಕಾರ್ಯಚಟುವಟಿಕೆಗಳ ಮಧ್ಯೆ ಬಿಡುವು ಮಾಡಿಕೊಂಡು, ಕ್ಷಾರಲೋಹಗಳು ಮತ್ತು ಅವುಗಳ ಸಂಯುಕ್ತಗಳನ್ನು ಉತ್ಪಾದಿಸುವ ವಿಧಾನಗಳ ಬಗ್ಗೆ ಸಂಶೋಧನೆ ಮಾಡಲು ಉಪಕ್ರಮಿಸಿದ. ಕಾಸ್ಟಿಕ್ ಸೋಡವನ್ನು ಕಬ್ಬಿಣದ ಕಾರ್ಬೈಡ್ ಅಥವಾ ತತ್ಸಮ ವಸ್ತುವಿನಿಂದ ಅಪಕರ್ಷಿಸಿ ಸೋಡಿಯಂ ಲೋಹವನ್ನು ಉತ್ಪಾದಿಸುವ ವಿಧಾನಕ್ಕೆ ಅವನಿಗೆ 1886ರ ಪೂರ್ವದಲ್ಲಿ ಏಕಸ್ವ (ಪೇಟೆಂಟ್) ದೊರೆಯಿತು. ಈ ವಿಧಾನ ಹಿಂದಿನ ವಿಧಾನಗಳಿಗಿಂತ ದಕ್ಷವಾಗಿತ್ತು. ಇದು ಸೋಡಿಯಂ ಲೋಹದ ಬೆಲೆ ಕಡಿಮೆಯಾಗಲು ಕಾರಣವಾಯಿತು. ಒಂದು ಪೌಂಡ್ ಸೋಡಿಯಂ 25 ಸೆಂಟುಗಳಿಗೆ ಇಳಿಯಿತು. ಇದು ಪ್ರಪಂಚದಾದ್ಯಂತ ಕೈಗಾರಿಕೋದ್ಯಮಿಗಳ ಗಮನ ಸೆಳೆಯಿತು. ಈ ವಿಧಾನಕ್ಕಾಗಿ ಮುಂದೆ ಫ್ರ್ಯಾಂಕ್ಲಿನ್ ಇನ್ಸ್‍ಟಿಟ್ಯೂಟ್ ತನ್ನ ಪ್ರತಿಷ್ಠಿತ ಸ್ವರ್ಣಪದಕವನ್ನಿತ್ತು ಕ್ಯಾಸನರನನ್ನು ಗೌರವಿಸಿತು.
ಸಾಧನೆಯ ಮಹತ್ವ
ಬದಲಾಯಿಸಿಕ್ಯಾಸನರ್ ಹುಟ್ಟುವ ವರ್ಷಗಳು ಮುಂಚಿತವಾಗಿ ಫ್ರಾನ್ಸಿನ ರಸಾಯನವಿಜ್ಞಾನಿ ಹೆನ್ರಿ ಸೇಂಟ್‍ಕ್ಲೇರ್ ಡೆವಿಲ್ಲ್ ಅಲ್ಯೂಮಿನಿಯಂ ಸೋಡಿಯಂ ಕ್ಲೋರೈಡ್ ಯುಗ್ಮಲವಣವನ್ನು ಸೋಡಿಯಂ ಲೋಹದಿಂದ ಅಪಕರ್ಷಿಸಿ ಅಲ್ಯೂಮಿನಿಯಂ ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದ. ಈ ವಿಧಾನದಿಂದ ಒಂದು ಪೌಂಡು ಅಲ್ಯೂಮಿನಿಯಂ ತಯಾರಿಸಲು ಬೆಲೆಯುಳ್ಳ ಮೂರು ಪೌಂಡು ಸೋಡಿಯಂ ಬೇಕಾಗುತ್ತಿತ್ತು. ಅಲ್ಯೂಮಿನಿಯಮಿನ ಬೆಲೆ ಗಗನ ಮುಟ್ಟಿತ್ತು. ಇದರ ಬೆಲೆ ಕೆಳಗಿಳಿಸುವುದಕ್ಕಾಗಿ ಹಲವಾರು ವಿಜ್ಞಾನಿಗಳು ಎಷ್ಟೇ ಸಂಶೋಧಿಸಿದರೂ ಜಯಶೀಲರಾಗಿರಲಿಲ್ಲ. ಕ್ಯಾಸನರನಿಂದ ಇದು ಸಾಧ್ಯವಾಯಿತು (1886).
ಉದ್ಯಮಿಯಾಗಿ
ಬದಲಾಯಿಸಿಕ್ಯಾಸನರ್ ವಿಧಾನಕ್ಕೆ ಆರ್ಥಿಕ ನೆರವು ದೊರೆಯದ್ದರಿಂದ ಈತ 1886-87ರ ಚಳಿಗಾಲದಲ್ಲಿ ಇಂಗ್ಲೆಂಡಿಗೆ ಪ್ರಯಾಣ ಮಾಡಿದ ಅಲ್ಲಿ ಹೊಸದಾಗಿ ಸ್ಥಾಪಿತವಾಗಿದ್ದ ಅಲ್ಯೂಮಿನಿಯಂ ಅಂಡ್ ಕಂಪನಿ ಲಿಮಿಟೆಡ್ಡಿನ ಮ್ಯಾನೇಜಿಂಗ್ ಡೈರೆಕ್ಟರಾಗಿ ಅಧಿಕಾರ ವಹಿಸಿಕೊಂಡ. ಅಲ್ಯೂಮಿನಿಯಮಿಗೆ ವಿಶ್ವ ಮಾರುಕಟ್ಟೆಯನ್ನು ಅವನ ಕಂಪನಿ ಗಳಿಸಿ ಎರಡು ವರ್ಷಗಳ ಕಾಲ ಈ ಲೋಹದ ಪೂರ್ಣಾಧಿಕಾರವನ್ನು ಅನುಭವಿಸಿತು. ಆದರೆ ಆ ವೇಳೆಗಾಗಲೇ ಅಲ್ಯೂಮಿನಿಯಮನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವ ಹಾಲನ ವಿಧಾನ ಪ್ರಪಂಚದ ಮಾರುಕಟ್ಟೆಯಲ್ಲಿ ಪರಿಣಾಮ ಬೀರಿತ್ತು. ಮುಂದೆ 1891ರಲ್ಲಿ ಕಾಸ್ಟಿಕ್ ಸೋಡವನ್ನು ವಿದ್ಯುದ್ವಿಶ್ಲೇಷಿಸಿ ಸೋಡಿಯಮನ್ನು ಇನ್ನೂ ಕಡಿಮೆ ಬೆಲೆಗೆ ತಯಾರಿಸುವುದನ್ನು ಕಂಡುಹಿಡಿದಾಗ ಡೆವಿಲ್-ಕ್ಯಾಸನರ್ ವಿಧಾನ ನಿರ್ನಾಮವಾಯಿತು. ಇದರಿಂದಾಗಿ ಕ್ಯಾಸನರ್ ಸೋಡಿಯಂ ಲೋಹಕ್ಕೆ ಬೇರೆ ಉಪಯೋಗಗಳನ್ನು ಕಂಡುಹಿಡಿಯುವ ಕಡೆ ದೃಷ್ಟಿ ಹರಿಸಿದ. ಆಗ್ರ್ಯಾನಿಕ್ ಸಂಶ್ಲೇಷಣೆಗಳಲ್ಲಿ ಸೋಡಿಯಂ ಪೆರಾಕ್ಸೈಡ್ ಮತ್ತು ಚೆಲುವೆಕಾರಿಗಳ ತಯಾರಿಕೆಯಲ್ಲಿ ಮತ್ತು ವಾಣಿಜ್ಯ ಸಯನೈಡುಗಳ ಉತ್ಪಾದನೆಯಲ್ಲಿ ಸೋಡಿಯಂ ಲೋಹದ ಉಪಯೋಗವನ್ನು ಕಂಡುಕೊಳ್ಳುವುದರಲ್ಲಿ ಸಫಲನಾದ. ಈತನ ಇತರ ಗಮನಾರ್ಹ ಸಾಧನೆಗಳಲ್ಲಿ ಕೆಲವು ಹೀಗಿವೆ: ಕರಗಿದ ಕಾಸ್ಟಿಕ್ ಸೋಡಾ ಅಥವಾ ಕಾಸ್ಟಿಕ್ ಪೊಟ್ಯಾಷನ್ನು ವಿದ್ಯುದ್ವಿಶ್ಲೇಷಿಸಿ ಅನುಕ್ರಮವಾಗಿ ಸೋಡಿಯಂ ಮತ್ತು ಪೊಟಾಸಿಯಂ ಲೋಹವನ್ನು ಉತ್ಪಾದಿಸುವ ವಿಧಾನ (1891); ಉಪ್ಪನ್ನು ವಿದ್ಯುದ್ವಿಶ್ಲೇಷಿಸಿ ಕಾಸ್ಟಿಕ್ ಸೋಡ ಮತ್ತು ಕ್ಲೋರಿನ್ ಅನಿಲವನ್ನು ಉತ್ಪಾದಿಸುವ ವಿಧಾನ (1894).
ನಿಧನ
ಬದಲಾಯಿಸಿ1898ರ ವೇಳೆಗೆ ಕ್ಯಾಸನರನ ಆರೋಗ್ಯ ಕೆಡುತ್ತ ಬಂತು. ಆರೋಗ್ಯ ಸುಧಾರಿಸಿಕೊಳ್ಳುವುದಕ್ಕಾಗಿ ಫ್ಲಾರಿಡದಲ್ಲಿ ಚಳಿಗಾಲವನ್ನು ಕಳೆದು ನ್ಯೂ ಯಾರ್ಕಿನ ಸಾರನಾಕಿಗೆ ಹಿಂತಿರುಗಿದ. 41ನೆಯ ವಯಸ್ಸಿನಲ್ಲಿ 1899ರ ಅಕ್ಟೋಬರ್ 11ರಂದು ಕ್ಷಯರೋಗದಿಂದ ನಿಧನಹೊಂದಿದ. ಇವನ ತಂದೆ ಮತ್ತು ಇಬ್ಬರು ಸಹೋದರರೂ ಕ್ಷಯರೋಗಕ್ಕೆ ತುತ್ತಾಗಿದ್ದರು. ವಿವಾಹಿತ ಕ್ಯಾಸನರನಿಗೆ ಮಕ್ಕಳಿರಲಿಲ್ಲ[೧].
ಉಲ್ಲೇಖಗಳು
ಬದಲಾಯಿಸಿ- ↑ Williams, Trevor I. (2004), "Castner, Hamilton Young (1858–1899)", Oxford Dictionary of National Biography, Oxford University Press, retrieved August 3, 2013 ((subscription or UK public library membership required))