ಹೆನ್ರಿ ಜಾರ್ಜ್
ಹೆನ್ರಿ ಜಾರ್ಜ್ - (1839-1897). ಅಮೆರಿಕ ಸಂಯುಕ್ತ ಸಂಸ್ಥಾನಗಳ ಅರ್ಥಶಾಸ್ತ್ರಜ್ಞ, ಭೂಸುಧಾರಣೆಯಲ್ಲಿ ಆಸಕ್ತ, ವಿಚಾರವಾದಿ. ಈತ ಬರೆದ ಪ್ರೋಗ್ರೆಸ್ ಅಂಡ್ ಪಾವರ್ಟಿ ಎಂಬ ಪುಸ್ತಕ ಇವನಿಗೆ ಲೋಕವಿಖ್ಯಾತಿ ತಂದಿತು.
ಬದುಕು
ಬದಲಾಯಿಸಿಜನನ 1839ರ ಸೆಪ್ಟೆಂಬರ್ 2ರಂದು, ಫಿಲಡೆಲ್ಫಿಯದಲ್ಲಿ, ಶ್ರದ್ಧಾವಂತ ಮಧ್ಯಮವರ್ಗದ ಕುಟುಂಬವೊಂದರಲ್ಲಿ. ಹೆನ್ರಿ ಜಾರ್ಜ್ 14 ವರ್ಷಗಳ ಬಾಲಕನಾಗಿದ್ದಾಗಲೇ ವಿದ್ಯಾಭ್ಯಾಸವನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಉದ್ಯೋಗ ಹುಡುಕಬೇಕಾಯಿತು. ಆಯಾತ ಸಂಸ್ಥೆಯೊಂದರಲ್ಲಿ ಎರಡು ವರ್ಷಗಳ ಕಾಲ ಗುಮಾಸ್ತೆಯಾಗಿ ಕೆಲಸ ಮಾಡಿ ಸಾಗರಾಂತರ ನೌಕಾ ಕಂಪನಿಯ ಹಡಗೊಂದರಲ್ಲಿ ನಾವಿಕನಾಗಿ ಸೇರಿ ಆಸ್ಟ್ರೇಲಿಯ, ಭಾರತಗಳಿಗೆ ಪ್ರಯಾಣ ಮಾಡಿದ. 1856ರಲ್ಲಿ ಫಿಲಡೆಲ್ಫಿಯಕ್ಕೆ ಹಿಂದಿರುಗಿ ಮೊಳೆ ಜೋಡಿಸುವ ಕೆಲಸಕ್ಕೆ ಸೇರಿದ. ಫೆಸಿಫಿಕ್ ಸಾಗರಯಾನ ಮಾಡುತ್ತಿದ್ದ ಹಡಗೊಂದರಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಮೇಲೆ ಚಿನ್ನದಾಸೆಯಿಂದ ಕೆನಡಕ್ಕೆ ಹೋಗಿ ಅಲ್ಲಿಂದ ಬರಗೈಯಲ್ಲಿ ಹಿಂದಿರುಗಿದ. 1858ರಿಂದ 1880ರವರೆಗೆ ಕ್ಯಾಲಿಫೋರ್ನಿಯದಲ್ಲಿ ಮೊಳೆ ಜೋಡಿಸುವವನಾಗಿ, ಪತ್ರಿಕೋದ್ಯಮಿಯಾಗಿ ಕೆಲಸ ಮಾಡುತ್ತ, ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡನಲ್ಲದೆ ಭಾಷಣ ಲೇಖನ ಕಲೆಗಳನ್ನೂ ಗಳಿಸಿಕೊಂಡ. ಇವನು ಖಾಸಗಿ ಏಕಸ್ವಾಮ್ಯದ ವಿರುದ್ಧ ಬರೆವಣಿಗೆಯ ಮೂಲಕ ನಿರಂತರವಾಗಿ ಚಳವಳಿ ನಡೆಸಿದ. ಇದರಿಂದಾಗಿ ಇವನು ಪಟ್ಟಭದ್ರ ಹಿತಗಳ ರೋಷಕ್ಕೆ ತುತ್ತಾಗಿ ಆಗಾಗ್ಗೆ ಉದ್ಯೋಗ ಕಳೆದುಕೊಂಡು ಕಷ್ಟ ಪಡಬೇಕಾಯಿತು. 1871ರಲ್ಲಿ ಇಬ್ಬರು ಪಾಲುದಾರರೊಂದಿಗೆ ಸ್ಯಾನ್‍ಫ್ರಾನ್ಸಿಸ್ಕೋ ಡೇಲಿ ಈವನಿಂಗ್ ಪೋಸ್ಟ್ ಎಂಬ ಪತ್ರಿಕೆ ಆರಂಭಿಸಿದ. ಆ ಪತ್ರಿಕೆ ನಾಲ್ಕು ವರ್ಷ ನಡೆದು ಆರ್ಥಿಕ ಮುಗ್ಗಟ್ಟಿನಿಂದಾಗಿ ನಿಂತು ಹೋಯಿತು, ಹೆನ್ರಿ ಜಾರ್ಜನ ರಾಜಕೀಯ ಒಲವು ಡೆಮೊಕ್ರಾಟಿಕ್ ಪಕ್ಷದ ಕಡೆಗೆ ಇತ್ತು. 1876ರಲ್ಲಿ ಸ್ಯಾನ್‍ಫ್ರಾನ್ಸಿಸ್ಕೋದ ಗವರ್ನರ್ ಆಗಿ ಅಧಿಕಾರಕ್ಕೆ ಬಂದಾತ, ಹೆನ್ರಿ ಜಾರ್ಜನಿಗೆ ಸರ್ಕಾರದಲ್ಲಿ ಒಂದು ದೊಡ್ಡ ಹುದ್ದೆ ಕೊಡಿಸಿದ. ಮೂರು ವರ್ಷಗಳ ಅವಧಿಯ ಆ ಹುದ್ದೆಯಲ್ಲಿ ಹೆನ್ರಿ ಜಾರ್ಜನಿಗೆ ನೆಮ್ಮದಿಯ ಜೀವನಕ್ಕೆ ಅವಕಾಶವಾಯಿತು. ಸಾಕಷ್ಟು ಬಿಡುವಿದ್ದ ಆ ಅವಧಿಯಲ್ಲಿ ಹೆನ್ರಿ ಜಾರ್ಜ್ ತನ್ನ ಅತ್ಯಂತ ಪ್ರಮುಖ ಗ್ರಂಥವಾದ ಪ್ರೋಗ್ರೆಸ್ ಅಂಡ್ ಪಾವರ್ಟಿಯನ್ನು ಬರೆದು ಪ್ರಕಟಿಸಿದ (1877-79).
ಹೆನ್ರಿ ಜಾರ್ಜ್ ಎರಡು ಬಾರಿ ನ್ಯೂಯಾರ್ಕಿನ ಮೇಯರ್ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡ. ಎರಡನೆಯ ಸಾರಿ ಚುನಾವಣೆಗೆ ನಿಂತಾಗ ತೀವ್ರ ಪ್ರಯಾಸವಾಗಿ ಅವನ ಆರೋಗ್ಯ ಕೆಟ್ಟಿತು. 1897ರಲ್ಲಿ ಅವನು ನಿಧನಹೊಂದಿದ.
ವಿಚಾರಗಳು
ಬದಲಾಯಿಸಿತಂತ್ರಜ್ಞಾನ, ಔದ್ಯೋಗೀಕರಣ, ಸಾರಿಗೆ ಅಭಿವೃದ್ಧಿ ಇವುಗಳ ಮೂಲಕ ದೇಶದ ಆರ್ಥಿಕ ಪ್ರಗತಿ ಆಗಿದ್ದರೂ ಬಡತನ ಕಡೆಮೆಯಾಗುವುದಕ್ಕೆ ಬದಲು ತೀವ್ರವಾಗಿ ಹೆಚ್ಚಿರುವುದನ್ನು ಅವನು "ಪ್ರೋಗ್ರೆಸ್ ಅಂಡ್ ಪಾವರ್ಟಿ" ಗ್ರಂಥದಲ್ಲಿ ತೋರಿಸಿಕೊಟ್ಟಿದ್ದಾನೆ. ಪ್ರಗತಿಯ ಜೊತೆಜೊತೆಯಲ್ಲೇ ಬಡತನದ ಏರಿಕೆಗೆ ಸಮಾಜದ ಮೂಲಭೂತ ಸ್ಥಿತಿಗತಿಗಳೇ ಕಾರಣವೆಂದು ಹೆನ್ರಿ ಜಾರ್ಜನ ಅಭಿಮತ. ರಿಕಾರ್ಡೋನ ಗೇಣಿ ಸಿದ್ಧಾಂತವನ್ನು ಈತ ಸಾಮಾನ್ಯರ ದೃಷ್ಟಿಯಿಂದ ವಿಶ್ಲೇಷಿಸಿ, ಅದನ್ನು ಹೊಸರೀತಿಯಲ್ಲಿ ಅರ್ಥೈಸಿದ. ಭೂಮಿಗೆ ಸಂಬಂಧಿಸಿದಂತೆ ಇಳಿಮುಖ ಪ್ರತಿಫಲ ನಿಯಮದ, ಸೀಮಾಂತ ಉತ್ಪಾದಕತೆಯ ನಿಯಮದ ಅರ್ಥವನ್ನು ಇಲ್ಲಿ ವಿಸ್ತರಿಸಿದ್ದಾನೆ. ಆರ್ಥಿಕ ಪ್ರಗತಿಯೊಂದಿಗೆ ನೆಲದ ಅಭಾವ ಅಧಿಕವಾಗುತ್ತದೆ. ಉತ್ಪಾದನಾಂಗಗಳಾದ ಶ್ರಮ ಮತ್ತು ಬಂಡವಾಳಕ್ಕೆ ಸಲ್ಲಬೇಕಾದ ಪ್ರತಿಫಲದ ಬಹುಬಾಗವನ್ನು ನೆಲದ ಒಡೆಯನೇ ಕಸಿದುಕೊಂಡು ಹೆಚ್ಚುಹೆಚ್ಚು ಪ್ರತಿಫಲ ಪಡೆಯುತ್ತಾನೆ, ಎಂಬುದು ಹೆನ್ರಿ ಜಾರ್ಜ್‍ನವಾದ. ಖಾಸಗಿ ಏಕಸ್ವಾಮ್ಯಪಡೆದವರು ಸಂಪತ್ತಿನ ಮಾಲೀಕರಾಗಿ ಸಮಾಜದಲ್ಲಿ ಏರ್ಪಡಿಸುವ ಏರುಪೇರುಗಳ ಚಿತ್ರವನ್ನು ಆ ಪುಸ್ತಕದಲ್ಲಿ ನೀಡಲಾಗಿದೆ. ಸಂಪತ್ತಿನ ಖಾಸಗಿ ಏಕಸ್ವಾಮ್ಯವನ್ನು ಹೆನ್ರಿ ಜಾರ್ಜ್ ಖಂಡಿಸಿದ. ರೈಲ್ವೆ, ಅಂಚೆ, ಸಂಪರ್ಕ ಇಲಾಖೆ ಮುಂತಾದ ರಾಷ್ಟ್ರೀಯ ಉದ್ಯಮಗಳು ಸರ್ಕಾರದ ಒಡೆತನದಲ್ಲಿರಬೇಕೆಂದು ವಾದಿಸಿದ್ದಾನೆ.
ನಿಸರ್ಗದತ್ತವಾದ ಭೂಮಿಯ ಮೇಲೆ ಖಾಸಗಿ ಸ್ವಾಮ್ಯ ಇರಕೂಡದು. ಅದು ಜನರಿಗೆಲ್ಲ ಸೇರಿದ್ದು. ಅದರ ಪ್ರಯೋಜನ ಎಲ್ಲರಿಗೂ ಆಗಬೇಕು. ಕೃಷಿ ಮಾಡಲು ಅಪೇಕ್ಷೆ ಇರುವವರಿಗೆ ಭೂಮಿ ಧಾರಾಳವಾಗಿ ಸಿಗುವಂತಿರಬೇಕು. ಗೈರುಹಾಜರಿ ಭೂಮಾಲೀಕತ್ವ ಖಂಡನೀಯ. ಭೂಮಾಲೀಕತ್ವದಿಂದ ಅಧಿಕ ಲಾಭ ಪಡೆಯುವವರಿಂದ ತೆರಿಗೆ ವಸೂಲು ಮಾಡಿ ಅದರಿಂದ ಬಂದ ಹಣವನ್ನು ಜನಸಾಮಾನ್ಯರ ಹಿತಕ್ಕಾಗಿ ಉಪಯೋಗಿಸಬೇಕು. ಭೂ ಹಿಡುವಳಿಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಮುನ್ನ ಆ ಹಿಡುವಳಿಗಳ ಮೌಲ್ಯ ಏನಿದ್ದೀತೋ ಅದಕ್ಕನುಗುಣವಾಗಿ ತೆರಿಗೆ ಹಾಕಬೇಕು. ಹೀಗೆ ಭೂಮಿಯ ಮೌಲ್ಯದ ಮೇಲೆ ಏಕಮಾತ್ರ ತೆರಿಗೆ ವಿಧಿಸಿದರೆ ಸಾಕು. ಸರ್ಕಾರ ಬೇರೆ ಯಾವ ರೀತಿಯ ತೆರಿಗೆಯನ್ನೂ ಹಾಕುವ ಅವಶ್ಯಕತೆ ಇರುವುದಿಲ್ಲ. ಇವು ಹೆನ್ರಿ ಜಾರ್ಜ್ ಮಂಡಿಸಿದ ಇನ್ನು ಕೆಲವು ವಿಚಾರಗಳು.
ಭೂಸುಧಾರಣೆ, ಸಾಮಾಜಿಕ ಬೆಳವಣಿಗೆ, ಸಮಾನತೆ, ಸ್ವಾತಂತ್ರ್ಯ ಈ ಮೌಲಿಕ ವಿಚಾರಗಳ ಬಗ್ಗೆ ಅತ್ಯಂತ ಪ್ರಾಮಾಣಿಕತೆಯಿಂದ ಚಳವಳಿ ನಡೆಸಿದ ಮಾನವತಾವಾದಿ ಹೆನ್ರಿ ಜಾರ್ಜನನ್ನು ಸ್ಯಾನ್ ಫ್ರಾನ್ಸಿಸ್ಕೋದ ಪ್ರವಾದಿ ಎಂದು ಅವನ ಸಮಕಾಲೀನರು ಕರೆದರು. ಅವನ ಗ್ರಂಥ ಹಲವಾರು ಭಾಷೆಗಳಿಗೆ ಅನುವಾದಿತವಾಯಿತು. ಆತ ಧಾರಾಳವಾಗಿ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದ, ಉಪನ್ಯಾಸಗಳನ್ನೂ ಮಾಡಿದ. ಇದರಿಂದ ಅವನ ಕೀರ್ತಿ ಬೆಳೆಯಿತು. ಅವನ ಪುಸ್ತಕಗಳು ಹೆಚ್ಚುಹೆಚ್ಚು ಪ್ರಸಿದ್ಧವಾದುವು. 1881ರಲ್ಲಿ ನ್ಯೂಯಾರ್ಕಿಗೆ ಹೋಗಿ ನೆಲೆಸಿದ ಹೆನ್ರಿ ಜಾರ್ಜ್ ಪತ್ರಿಕೋದ್ಯಮ, ರಾಜಕಾರಣ, ವಿಚಾರಪ್ರಚಾರ, ಈ ಕಾರ್ಯಗಳನ್ನು ಮುಂದುವರಿಸಿದ. ಐರ್ಲೆಂಡ್, ಇಂಗ್ಲೆಡ್, ಫ್ರಾನ್ಸ್ ಮುಂತಾದ ದೇಶಗಳಿಗೆ ಭೇಟಿ ನೀಡಿ ತನ್ನ ಸೈದ್ಧಾಂತಿಕ ವಿಚಾರಗಳನ್ನು ಮಂಡಿಸಿದ. ಲಂಡನ್ನಿನಲ್ಲಿ ಹೆನ್ರಿ ಜಾರ್ಜ್ ಮಾಡಿದ ಭಾಷಣವನ್ನು ಜಾರ್ಜ್ ಬರ್ನಾರ್ಡ್ ಷಾ ಕೇಳಿ ಅದರಿಂದ ತಾನು ಸಮಾಜ ಸುಧಾರಣೆಯ ಬಗ್ಗೆ ತುಂಬ ಪ್ರಭಾವಿತನಾದುದಾಗಿ ಹೇಳಿದ್ದಾನೆ.
ಗ್ರಂಥಗಳು
ಬದಲಾಯಿಸಿಪ್ರೋಗ್ರೆಸ್ ಅಂಡ್ ಪಾವರ್ಟಿ ಅಲ್ಲದೆ ಹೆನ್ರಿ ಜಾರ್ಜ್ ಬರೆದಿರುವ ಮುಖ್ಯ ಕೃತಿಗಳು ಐರಿಷ್ ಲ್ಯಾಂಡ್ ಕ್ವೆಶ್ಚನ್ (1881), ಸೋಷಿಯಲ್ ಪ್ರಾಬ್ಲಮ್ಸ್ (1883), ಪ್ರೋಟೆಕ್ಷನ್ ಆರ್ ಫ್ರೀ ಟ್ರೇಡ್ (1886). ಇವನ ಮಗ ಹೆನ್ರಿ (1862-1916) ಒಬ್ಬ ಪತ್ರಿಕೋದ್ಯಮಿ. ಆತ ತನ್ನ ತಂದೆಯ ಜೀವನ ಚರಿತ್ರೆ (ಲೈಫ್ ಆಫ್ ಹೆನ್ರಿ ಜಾರ್ಜ್) ಬರೆದಿದ್ದಾನೆ (1900).