ಹಿಮವತ್ ಗೋಪಾಲ ಸ್ವಾಮಿ ಬೆಟ್ಟ
(ಹಿಮವದ್ಗೋಪಾಲಸ್ವಾಮಿಬೆಟ್ಟ ಇಂದ ಪುನರ್ನಿರ್ದೇಶಿತ)
ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಕರ್ನಾಟಕ ರಾಜ್ಯದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಮೈಸೂರಿನ ದಕ್ಷಿಣಕ್ಕೆ ಸುಮಾರು ೮೦ ಕಿ.ಮೀ. ದೂರದಲ್ಲಿ ಊಟಿ ಹೆದ್ದಾರಿಯ ಅಂಚಿನಲ್ಲಿರುವ ಈ ಬೆಟ್ಟವು ಅದ್ಭುತ ಪ್ರಕೃತಿ ಸೌಂದರ್ಯದ ತಾಣ. ಸಮುದ್ರಮಟ್ಟದಿಂದ ಸುಮಾರು ೧೪೪೦ ಮೀ. ಎತ್ತರದಲ್ಲಿ ಮಲೆಯ ಮೇಲೆ ಶ್ರೀಕೃಷ್ಣನ ದೇವಾಲಯವಿದೆ.
ಇತಿವೃತ್ತ
ಬದಲಾಯಿಸಿ- ವರ್ಷದ ಎಲ್ಲಾ ಕಾಲದಲ್ಲೂ ತಂಪಾದ ಹವಾಗುಣವಿರುವ ಈ ಪ್ರದೇಶದಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಸದಾ ಮಂಜುಮುಸುಕಿದ ವಾತಾವರಣ. ಮಂಜಿನ ಜೊತೆಗೆ ಮಳೆಯ ತುಂತುರು ಹನಿಗಳ ಮಧ್ಯೆ ಹಾಗೂ ವಾಸ್ತವವಾಗಿ ಮೋಡಗಳ ನಡುವೆಯೇ ನಡೆದಾಡಬೇಕಾದ ಸನ್ನಿವೇಶ ಇಲ್ಲಿ ಸಾಮಾನ್ಯ. ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ನಿರಂತರವಾಗಿ ಹಿಮದನೀರು ಜಿನುಗುತ್ತಿರುತ್ತದೆ.
- ಆದ್ದರಿಂದಲೇ ಹಿಮವದ್ಗೋಪಾಲಸ್ವಾಮಿ ಎಂಬ ಹೆಸರು ಇಲ್ಲಿಯ ದೇವನಿಗೆ. ಬೆಟ್ಟವನ್ನೇರುವ ರಸ್ತೆ ಬಲು ಕಡಿದು. ಮಲೆಯ ಮೇಲ್ಭಾಗದಿಂದ ಕಾಣಬರುವ ನೋಟ ಅಸದೃಶ. ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವುದರಿಂದ ಪ್ರವಾಸಿಗರಿಗೆ ಎಲ್ಲ ಕಡೆ ಮುಕ್ತವಾಗಿ ಓಡಾಡುವ ಅವಕಾಶವಿಲ್ಲ. ಜಗತ್ತಿನಲ್ಲಿ ಸಮಸ್ತ ಸೌಂದರ್ಯವನ್ನು ಒಂದೆಡೆ ರಾಶಿ ಹಾಕಿದರೆ ಅದೇ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ.
- ಮೂಲತಃ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದರೂ ತನ್ನ ಅನುಪಮ ಸೌಂದರ್ಯದಿಂದ, ತನ್ನದೆ ಆದ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತದೆ. ಕರ್ನಾಟಕದ ಅತ್ಯಂತ ಹೆಮ್ಮೆಯ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಪ್ರಚಾರದಿಂದ ತುಂಬಾ ದೂರ. ಅದರಿಂದಾನೆ ಇರಬೇಕು ಇಲ್ಲಿನ ವನ್ಯ ಸಿರಿ ತೀರ ಸಹಜವಾಗಿದೆ.
ಪುರಾಣ ಹಿನ್ನೆಲೆ
ಬದಲಾಯಿಸಿ- ದ್ವಾಪರದ ಕೃಷ್ಣನ ವೇಣುಗಾನಕ್ಕೆ ಗೋವುಗಳೆಲ್ಲಾ ಅವನ ಸುತ್ತಲು ಬಂದು ಸೇರುತ್ತಿದ್ದವಂತೆ. ಇಂದು ಅದೇ ಕೃಷ್ಣ, ಬೆಟ್ಟದ ತುದಿಯಲ್ಲಿ ನಿಂತು ತನ್ನ ಕೊಳಲಿನಿಂದ ಸುಮಧುರ ಗಾನ ಸುಧೆ ಹರಿಸುತ್ತಿದ್ದಾನೆ, ಪ್ರಕೃತಿ ದೇವತೆ ಅವನ ಸುತ್ತಲು ಅಮೋಘವಾಗಿ ನರ್ತಿಸುತ್ತಿದ್ದಾಳೆ. ಗೋಪಾಲಸ್ವಾಮಿ ವಿಗ್ರಹದ ಕಲ್ಲಿನ ಮೇಲೆ ವರ್ಷದ ೩೬೫ ದಿನಗಳೂ ನೀರು ಜಿನುಗುತ್ತಿರುತ್ತದೆ.
- ಈ ಬೆಟ್ಟದಲ್ಲಿ ಸುಮಾರು ೭೭ ತೀರ್ಥ ಸ್ಥಳಗಳಿವೆ. ಇವುಗಳಲ್ಲಿ ಕೆಲವನ್ನು ದೇವಸ್ಥಾನದ ಸುತ್ತ ಮುತ್ತ ನೋಡಬಹುದು. ಮತ್ತೊಂದು ಅಚ್ಚರಿ ಎಂದರೆ ಇಲ್ಲಿ ಕಾಗೆಗಳು ಕಾಣ ಸಿಗುವುದಿಲ್ಲ. ಒಂದು ಐತಿಹ್ಯದ ಪ್ರಕಾರ ಕಾಗೆಗಳು ಇಲ್ಲಿರುವ ತೀರ್ಥ ಸ್ಥಳಗಳಲ್ಲಿ ಮಿಂದು ಹಂಸಗಳಾಗಿ ಹಾರಿ ಹೋದವು ಎನ್ನುತ್ತಾರೆ.
ಮಾರ್ಗಸೂಚಿ
ಬದಲಾಯಿಸಿ- ಮಾರ್ಗ:ಬೆಂಗಳೂರು-ಮೈಸೂರು-ಗುಂಡ್ಲುಪೇಟೆ-ಅಲ್ಲಿಂದ ಕೇವಲ ೨೨ ಕಿ.ಮೀ. ಬಂಡಿಪುರದಿಂದ ೧೦ ಕಿ,ಮೀ. ಸಮಯ: ಬೆಳಿಗ್ಗೆ: ೭ ರಿಂದ ಸಂಜೆ ೫ (ಇದು ಅರಣ್ಯ ಇಲಾಖೆ ವಿಧಿಸಿರುವ ಸಮಯ) ಪ್ರವೇಶ ಧನ ಕಾರಿನಲ್ಲಾದರೆ ೫೦ ರೂಪಾಯಿ, ಬೈಕಿನಲ್ಲಾದರೆ ೨೫ ರೂಪಾಯಿಗಳು. ಬೆಂಗಳೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಸಹ ಬೆಟ್ಟಕ್ಕೆ ನೇರವಾಗಿ ಬಸ್ಸೊಂದು ಸಂಚರಿಸುತ್ತದೆ. ಬೆಂಗಳೂರಿನಿಂದ ೫ ಘಂಟೆಗಳ ಪ್ರಯಾಣದ ಅವಧಿಯಲ್ಲಿ(೨೦೫ ಕಿ,ಮೀ.)
- ಇಂತಹ ರುದ್ರ-ರಮಣೀಯ ಸ್ಥಳ ಇದೆ. ಬೆಟ್ಟದ ಪ್ರವೇಶದಲ್ಲೆ ಅರಣ್ಯ ಇಲಾಖೆಯ ಚೆಕ್ ಪೋಸ್ಟಿದೆ. ಅಲ್ಲಿ ಶುಲ್ಕ ಕಟ್ಟುವಾಗ, ಮಧ್ಯಪಾನ, ಧೂಮಪಾನ, ಮಾಂಸಾಹಾರಕ್ಕೆ ಅವಕಾಶವಿಲ್ಲ. ಸಂಜೆ ೬ ಘಂಟೆ ಮೇಲೆ ಅಲ್ಲಿ ಇರೋಹಾಗಿಲ್ಲ. ರಾತ್ರಿ ವಾಸ್ತವ್ಯ ಅಂತೂ ಇಲ್ಲವೇಇಲ್ಲಾಂತ ವನಪಾಲಕರೆ ಎಚ್ಚರಿಸ್ತಾರೆ. ಸಂಜೆ ೭ ರ ನಂತರ ಕಾಡಾನೆಗಳ ಸಂಚಾರ ಶುರುವಾಗತ್ತೆ. ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ಅದು.
ಪ್ರಯಾಣದ ಅನುಭವ/ನಿಸರ್ಗದ ರಮಣೀಯತೆ
ಬದಲಾಯಿಸಿ- ಬೆಟ್ಟ ಹತ್ತೋಕೆ ಮುಂಚೆ ಮೇಲೆ ನಡುಕ ಹುಟ್ಟಿಸೋಷ್ಟು ಚಳಿಯಾಗುತ್ತೆ ಅನ್ನೋ ಯಾವ ಸೂಚನೆನೂ ಅಲ್ಲಿನ ವಾತಾವರಣದಲ್ಲಿ ಸಿಗೋಲ್ಲ. ಎರಡು ಕಿಲೋಮೀಟರ್ ಅಂತರದಲ್ಲಿ ಶುರುವಾಗುತ್ತೆ ನೋಡಿ ಥಂಡಿಯ ಅನುಭವ. ಪ್ರಾರಂಭದಲ್ಲಿ, ಹವಾ ನಿಯಂತ್ರಣದ ಅನುಭವ ಅನ್ನಿಸಿದ್ರು, ಆಮೇಲೆ ಗಾಳಿ ಬೀಸೋಕೆ ಶುರುವಾದ್ರೆ, ಹಲ್ಲುಗಳೆಲೆಲ್ಲಾ ಕಟಕಟಾಂತಾ ಮೈ ನಡುಗೋಕೆ ಶುರುವಾಗುತ್ತೆ.
- ೬ ಕಿ.ಮಿ. ಕೆಳಗಿನ ಪ್ರದೇಶದಲ್ಲಿ ಶೆಖೆ. ಅಲ್ಲಿ ಮೇಲೆ ಗಡಗಡ ನಡುಗಿಸೋ ಚಳಿ. ಜೂನ್ನಲ್ಲೆ ಹೀಗೆ ಇನ್ನು ಡಿಸೆಂಬರ್‍ನಲ್ಲಿ ಆ ಕೃಷ್ಣನೆ ಗತಿ. ಬೆಟ್ಟದ ತುದಿ ತಲುಪುತ್ತಿದ್ದಂತೆ ಬೆಕ್ಕಸ ಬೆರೆಗಿನ ಉದ್ಗಾರ. ಅರಳಿದ ಕಂಗಳು, ಮೂಕ ವಿಸ್ಮಿತ ನೋಟ, ಮಾತು ಮರೆತ ಮೆದುಳು, ಭೂಲೋಕವೋ, ಗಂಧರ್ವ ಲೋಕವೋ, ಒಂದು ತಿಳಿಯದ ಗೊಂದಲ. ಇದು ತಕ್ಷಣಕ್ಕಾಗುವ ಅನುಭವ.
- ಎತ್ತಣಿಂದೆತ್ತ ನೋಡಿದರೂ ಹಚ್ಚ ಹಸುರಿನ ರಾಶಿ. ಅತ್ತ ಓಡುವಾಸೆ, ಆದರೆ ಗೋಪಾಲನನ್ನು ಕಾಣದೆ ಹೋಗುವುದಾದ್ರು ಹೇಗೆ. ದೈವ ಭಕ್ತಿ ನಮ್ಮ ಕಾಲುಗಳನ್ನು ದೇವಾಲಯದೆಡೆಗೆ ಎಳೆದರೆ, ಕಣ್ಣು ಮತ್ತು ಮನಸ್ಸು ಮಾತ್ರ ಕೃಷ್ಣನ ಲೀಲಾಲೋಕದ ಕಡೆ. ನಮಗೆ ಅರಿವಿಲ್ಲದಂತೆ ದೇವಾಲಯದ ಬಳಿ ಬಂದಿರುತ್ತೀವಿ. ಆ ಕಾಡಿನ ಸೌಂದರ್ಯಕ್ಕೆ ಮನಸೋತ ಆ ಕೃಷ್ಣನೇ ನಾಟ್ಯಭಂಗಿಯಲ್ಲಿ ನಿಂತು, ಕೊಳಲು ನುಡಿಸುತ್ತಾ ಮಂದಸ್ಮಿತವಾಗಿ ನಸುನಗುತ್ತಾ ಗರ್ಭಗುಡಿಯಲ್ಲಿ ನಿಂತಿದ್ದಾನೆ. ಅದೆಂತಹ ಸುಂದರ ಮೂರ್ತಿ. * ಅವನೆದುರು ನಿಂತು ಕಣ್ಮುಚ್ಚಿದರೆ, ಕಿವಿಗೆ ಕೊಳಲಿನ ಇಂಪಿನ ದನಿ. ಮನದಲ್ಲಿ ಹೊರಗಿನ, ಪ್ರಕೃತಿಸೌಂದರ್ಯ, ಇವೆರೆಡರಲ್ಲು ಲೀನವಾಗಿ ನಾನು ನಿನ್ನೊಳಗೋ, ನೀನು ನನ್ನೊಳಗೊ ಎಂಬಂತೆ ದರುಶನ ನೀಡುವ ಆ ಭಗವಂತ. ದರುಶನ ಮುಗಿಸಿ ಅಲ್ಲಿನ ಅರ್ಚಕರು ಕೊಡುವ ಅಮೃತ ಸಮಾನವಾದ, ರುಚಿಯಾದ ಸಿಹಿ ಪೊಂಗಲ್ ಮತ್ತು ಪುಳಿಯೋಗರೆ ಎಂಬ ಪ್ರಸಾದ ಸವಿದು ಹೊರ ಬಂದರೆ ಕೃಷ್ಣನ ಲೀಲಾ ಲೋಕ, ಕಾಡಿನ ರೂಪದಲ್ಲಿ ನಮ್ಮನ್ನು ಕೈ ಬೀಸಿ ಕರೆಯುತ್ತೆ.
- ಪುಟಿದೇಳುವ ಮನಸ್ಸು, ಚಿಗರೆಯಂತ ಉತ್ಸಾಹ, ಕಾಡಿನ ಗರ್ಭದಲ್ಲಿ ಲೀನವಾಗಿ ಬಿಡಬೇಕೆಂಬ ಬಯಕೆ. ಕಾಡಿನೊಳಗೆ ಪ್ರಯಾಣ ಶುರುವಾದ್ರೆ ಅವರ್ಣನೀಯ ಅನುಭವ. ಹಚ್ಚ ಹಸಿರಿನ ಬೋಳುಗುಡ್ಡ. ಅದರ ಹಿಂದೆ ಅಗಾಧ ಮರಗಳಿಂದ ತುಂಬಿದ ದಟ್ಟ ಹಸಿರಿನ ವನ, ಅಲ್ಲಲ್ಲಿ ಬಂಡೆಗಳು, ಕೊಳಗಳು, ಎಲ್ಲಿಂದಲೋ ಕೇಳುವ ಹಕ್ಕಿಗಳ ಗಾನ, ತಂಪಾದ ಗಾಳಿ, ಅವುಗಳ ಕೂಗು, ಸಾರಂಗ, ಜಿಂಕೆಗಳ ನೆಗೆದಾಟ. ಅಬ್ಬಬ್ಬ ಇದೇ ಇರಬೇಕು ಕೃಷ್ಣನ ಗೋವರ್ಧನ ಗಿರಿ.
- ಮುಂಜಾನೆ ಭೇಟಿ ನಿಜಕ್ಕು ಅವಿಸ್ಮರಣೀಯ. ಅರಣ್ಯವೇ ಮಾಯ. ಆಗಸದಲ್ಲಿ ನಿಂತ ನಾರದನಂತೆ ನಾವುಗಳು. ಮೋಡಗಳ ಮಡಿಲಿನಲ್ಲಿ ಓಲಾಡುತ್ತಿರುವ ಅನುಭವ. ಸುತ್ತಲು ನಮ್ಮನ್ನಾವರಿಸಿದ ಹಿಮ, ಆ ಹಿಮದಲ್ಲಿ ಲೀನವಾದ ಅರಣ್ಯ. ಅದರೊಳಗೆ ನಾವು ನಮ್ಮೊಳಗೆ ಭಗವಂತ. ಅದೊಂದು ಆಧ್ಯಾತ್ಮಿಕ ಅನುಭವ. ಮಧ್ಯಾಹ್ನ ೧೧ ಘಂಟೆವರೆಗೂ ಹಿಮದ ರಾಶಿ. ಹತ್ತಿಪ್ಪತ್ತು ಅಡಿಯ ದೂರದ ದೃಶ್ಯಗಳು ಕಣ್ಮರೆ.
- ಗಾಳಿ ಬೀಸಿದಾಗ ಕಾಣುವ ಅರಣ್ಯ, ಅಬ್ಬಬ್ಬಾ ಇಂತಹ ರಮಣೀಯ ದೃಶ್ಯಗಳು ಅಡಿಗಡಿಗೆ ಹಿಂದಿನ ದಿನ ಸಂಜೆನೆ ಚಳಿ ಅನುಭವ ಆಗಿದ್ರಿಂದ ಬೆಚ್ಚಗಿನ ಉಡುಪು ಧರಿಸಿ ಬಂದಿದ್ರಿಂದ ಚಳಿಯಿಂದ ಸ್ವಲ್ಪ ಪಾರಾದ್ವಿ. ಆದರು ಗಡಗಡ ನಡುಗಿಸುವ ಚಳಿ. ಊಟಿ ಕೊಡೈಕೆನಾಲ್ನ ನೀವಾಳಿಸಬೇಕು. ಇದರ ಸೌಂದರ್ಯದ ಮುಂದೆ. ಹನ್ನೊಂದರ ನಂತರ ಶುರುವಾಯ್ತು. ಪ್ರಕೃತಿ ಮಾತೆಯ ನರ್ತನದ ದೃಶ್ಯಗಳ ಸರಮಾಲೆ.
- ಅಷ್ಟರಲ್ಲಿ ಅಲ್ಲಿ ನೋಡಿ ಆನೆಗಳು ಅನೋ ಉದ್ಗಾರ. ದೂರದಲ್ಲ್ ನಾಲ್ಕು ಆನೆಗಳೊಂದಿಗೆ ಬರ್ತಿದೆ ಸಣ್ಣ ಮರಿಯಾನೆಯೊಂದು. ಅದೆಂತಹ ಗಜ ಗಾಂಭೀರ್ಯ. ಝೂನಲ್ಲಿ ನೋಡೋಕ್ಕೂ ಆ ಕಾಡಿನ ಮದ್ಯ ನೋಡೊಕು. ಅದೆಂತಹ ವ್ಯತ್ಯಾಸ. ಸುಮಾರ್ ೪೫ ನಿಮಿಷ ಗಜ ಪಡೆಯ ದರ್ಶನ. ಅಷ್ಟ್ರಲ್ಲಿ ನಾವೇನ್ ಕಮ್ಮಿ ನಮ್ಮನ್ನೂ ನೋಡಿಂತ ಬಂದ್ವು ಸಾರಂಗಗಳ ಹಿಂಡು. ಅಯ್ಯಯ್ಯೊ ಬೈನಾಕುಲರ್ ತರಲಿಲ್ವೆ ಅನ್ನೋ ಸಂಕಟ.
- ಆದ್ರು ಕಣ್ಣಿಗೆ ಸ್ಪಷ್ಟವಾಗಿ ಗೋಚರ, ಸಾರಂಗಗಳು ಮೇಯ್ತಿದ ಬೋಳುಗುಡ್ಡದ ಪಕ್ಕದ ಗುಡ್ಡದಿಂದ ಬಂತು ನೋಡಿ ಜಿಂಕೆಗಳ ಹಿಂಡು. ಜಿಂಕೆ, ಸಾರಂಗ, ಆನೆಗಳು, ಒಂದೆಡೆ ಕೂತು ಮೂರು ವನ್ಯಜೀವಿಗಳ ಗುಂಪನ್ನು ನೋಡೋ ಸೌಭಾಗ್ಯ. ನಮ್ಮನ್ನು ಕಂಡು ಬೆದರಿದಂತೆ ವರ್ತಿಸಿದ ಆನೆಗಳ ಹಿಂಡು ಒಮ್ಮೆ ಜೋರಾಗಿ ಘೀಳಿಟ್ವು. ನಮ್ಮನ್ನು ಹೆದರಿಸಲಿಕ್ಕೆ ಶುರು ಮಾಡಿದ್ವು. ಕೆಲ ಕ್ಷಣದ ನಂತರ ನಮ್ಮಿಂದ ಅವಕ್ಕೇನು ತೊಂದರೆ ಇಲ್ಲಾಂತ ಗೊತ್ತಾಗಿ ಹಾಯಾಗಿ ಮರಿ ಜೊತೆ ಮೇಯ್ತಾ ಮೇಯ್ತಾ ನಲಿದಾಡೋಕೆ ಶುರು ಮಾಡಿದ್ವು. ನಮ್ಮ ಕಣ್ಣುಗಳಿಗೂ ಮತ್ತು ಕ್ಯಾಮರಾಕ್ಕೂ ಬಿಡುವು ಅಂಬೋದೆ ಇಲ್ಲಾ. ಗಜಪಡೆಯನ್ನ ಕ್ಯಾಮರಾದಲ್ಲಿ ಹೆಡೆಮುರಿಕಟ್ಟಿ ಸೆರೆಹಿಡಿದ್ದಾಯ್ತು. ಜಿಂಕೆ ಸಾರಂಗಗಳು ತುಂಬಾ ದೂರದಲ್ಲಿ ಇದ್ದಿದ್ರ್ರಿಂದ ಅಷ್ಟಾಗಿ ಚಿತ್ರೀಕರಿಸಲಿಕ್ಕಾಗಲಿಲ್ಲ.
Gallery
ಬದಲಾಯಿಸಿ-
The Road to GS Hill
-
helianthus garden -
Views from the hill
-
The temple arch
-
The temple road
-
View of the temple
-
The temple courtyard