ಹಸಿರುಮನೆ ವಿದ್ಯಮಾನ
ಹಸಿರುಮನೆ ವಿದ್ಯಮಾನ ಅಥವಾ "ಹಸಿರುಮನೆ ಪ್ರಭಾವ"ವು ( ಇಂಗ್ಲಿಷ್ ನಲ್ಲಿ ಗ್ರೀನ್ ಹೌಸ್ ಎಫೆಕ್ಟ್) ಗ್ರಹ ಮತ್ತು ನೈಸರ್ಗಿಕ ಉಪಗ್ರಹಗಳ ವಾತಾವರಣದ ತಾಪಮಾನಕ್ಕೆ ಸಂಬಂಧಿಸಿದ ವಿದ್ಯಮಾನ.ವಾತಾವರಣದಲ್ಲಿ ಇನ್-ಫ್ರಾ-ರೆಡ್ ವಿಕಿರಣವನ್ನು ಹೀರಿಕೊಳ್ಳುವಂತಹ ಅನಿಲಗಳ ಉಪಸ್ಥಿತಿಯಿಂದ ಗ್ರಹ ಅಥವಾ ಉಪಗ್ರಹದ ಮೇಲ್ಮೈ ಬಿಸಿಯಾಗುವಿಕೆ ಅಥವಾ ಮೇಲ್ಮೈ ಉಷ್ಣತೆಯ ಏರುವಿಕೆಯನ್ನು ಹಸಿರುಮನೆ ವಿದ್ಯಮಾನವೆಂದು ಕರೆಯುತ್ತಾರೆ. ವಾತಾವರಣದ ಈ ಅನಿಲಗಳನ್ನು ಹಸಿರುಮನೆ ಅನಿಲಗಳೆಂದು ಕರೆಯುತ್ತಾರೆ.ಈ ಅನಿಲಗಳು ಉಷ್ಣತೆಯನ್ನು ಗ್ರಹದ ಮೇಲ್ಮೈಗೆ ತಾಗಿಕೊಂಡಿರುವ ವಾತಾವರಣದ ಟ್ರೋಪೋಸ್ಫಿಯರ್ ನಲ್ಲೇ ಹಿಡಿದಿಡುವುದರಿಂದ,ಗ್ರಹದ ಮೇಲ್ಮೈ ಉಷ್ಣತೆ ಏರುತ್ತದೆ. ಈ ಕ್ರಿಯೆಯು ಪ್ರಯೋಗಕ್ಕಾಗಿ ಅಥವಾ ಕೃಷಿಗಾಗಿ ಬಿಸಿ ಗಾಳಿಯನ್ನು ಹಿಡಿದಿಡುವ ಗಾಜಿನ ಕಟ್ಟಡವಾದ ಬರಿಯ "ಹಸಿರುಮನೆ"ಯಿಂದ ಪೂರ್ಣವಾಗಿ ಬೇರೆಯದು ಮತ್ತು ಅದಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲವೆನ್ನುವುದನ್ನು ಗಮನಿಸಬೇಕು.ಭೂಮಿಯಲ್ಲಿ ಈ 'ಹಸಿರುಮನೆ ವಿದ್ಯಮಾನ'ದ ಹೆಚ್ಚಳಿಕೆಯಿಂದ ಅನೇಕ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿದೆ