ವಾಯುಗುಣ ಬದಲಾವಣೆ

(ಹವಾಮಾನ ಬದಲಾವಣೆ ಇಂದ ಪುನರ್ನಿರ್ದೇಶಿತ)

ವಾಯುಗುಣ ಬದಲಾವಣೆ ಭೂಮಿವಾಯುಗುಣದಲ್ಲಿ ಧೀರ್ಘ ಕಾಲದಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಗಳು.

ಕಳೆದ ೪೫೦,೦೦೦ ವರ್ಷಗಳಲ್ಲಿ ಭೂಮಿಯ ಹವಮಾನ ಬದಲಾವಣೆಗಳು

ಪರಿಣಾಮಗಳುಸಂಪಾದಿಸಿ

ವಾಯುಗುಣ ಬದಲಾವಣೆಯ ಘೋರ ಪರಿಣಾಮಗಳ ಕುರಿತು ಮೊದಲ ಬಾರಿ ಕೇಳುವವರಿಗೆ 'ಗೋಕುಲಾಷ್ಟಮಿಗೂ ಇಮಾಮ್ಸಾಬಿಗೂ ಏನು ಸಂಬಂಧ?' ಎಂಬಂತಿದೆ ಈ ಪ್ರಶ್ನೆ. ಆದರೆ, ವಾಯುಗುಣ ಬದಲಾವಣೆಯಿಂದ ಉಂಟಾಗುವ ಪ್ರವಾಹಗಳು, ಕ್ಷಾಮ ಮತ್ತು ಇತರ ನೈಸರ್ಗಿಕ ವಿಕೋಪಗಳು ಜನರಲ್ಲಿ ಮಾನಸಿಕ ರೋಗಗಳನ್ನು ಉಂಟು ಮಾಡುತ್ತವೆಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಮಾನಸಿಕ ರೋಗಗಳಿಗೂ ವಾಯುಗುಣ ಬದಲಾವಣೆಗೂ ಇರುವ ಸಂಬಂಧ ಕುರಿತ ವರದಿಯಲ್ಲಿ ಈ ಅಂಶವನ್ನು ತಿಳಿಸಲಾಗಿದೆ. ಚಂಡ ಮಾರುತದಿಂದ ನಲುಗಿದ ಒಡಿಶಾ ಮತ್ತು ಪ್ರವಾಹಗಳಿಂದ ಮುಳುಗಿದ ಇಂಗ್ಲೆಂಡ್ಗಳಲ್ಲಿ ವಿಕೋಪ-ನಂತರದ ವೈಪರೀತ್ಯಗಳು ಜನರನ್ನು ತೀವ್ರವಾಗಿ ಕಾಡಿವೆ. ಬರಪೀಡಿತ ಪ್ರದೇಶಗಳಲ್ಲಿನ ರೈತರು ತೀವ್ರ ಹಣಕಾಸು ಮುಗ್ಗಟ್ಟು ಮತ್ತು ಸಾಲದ ಹೊರೆಯಿಂದ ಹೆಚ್ಚು ಮಾನಸಿಕ ವ್ಯಾಧಿ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ. ಅಂಥಹ ಪರಿಸ್ಥಿತಿಯಲ್ಲಿ ಸೂಕ್ತ ಯೋಜನೆಯಂತೆ ಬೆಳೆ ಬೆಳೆಯಲು ಆಗದಿರುವುದು, ಬೆಳೆ ನಾಶ, ಫಸಲು ಸಂಗ್ರಹಣೆ, ಪಶುಪಾಲನೆ ಅಭಿವೃದ್ಧಿ, ಇವೆಲ್ಲವೂ ತೊಂದರೆಗೆ ಸಿಲುಕಿ ಇದು ಇತರ ವ್ಯಾಪಾರ-ವ್ಯವಹಾರಗಳಿಗೆ ಪೆಟ್ಟು ನೀಡುತ್ತದೆ. ಈಗಾಗಲೇ ಸರ್ಕಾರದ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳು ರೈತರನ್ನು ಆತ್ಮಹತ್ಯೆಯ ಕೂಪಕ್ಕೆ ತಳ್ಳುತ್ತಿರುವ ಜೊತೆಗೆ ವಾಯುಗುಣ ಬದಲಾವಣೆಯ ಪೆಡಂಭೂತವು ಸೇರಿಕೊಂಡಲ್ಲಿ ರೈತರ ಬದುಕು ಇನ್ನು ಸಮಾಧಿಯೇ ಸರಿ.

ಇಂಥಹ ನೈಸರ್ಗಿಕ ವಿಕೋಪ-ನಂತರದ ವೈಪರೀತ್ಯಗಳಿಂದ ಉಂಟಾಗುವ ಮಾನಸಿಕ ವ್ಯಾಧಿಗಳು ಈಗಾಗಲೇ ಪ್ರಪಂಚದಾದ್ಯಂತ ಶೇ.10 ರಷ್ಟು ದರದಲ್ಲಿ ವ್ಯಾಪಿಸುತ್ತಿವೆ. ಇದು ಸಂತ್ರಸ್ತರಲ್ಲಿ ತೀವ್ರತರದ ಒತ್ತಡ ನಿರ್ಮಾಣ ಮತ್ತು ಸಂಪನ್ಮೂಲ ನಷ್ಟಗಳಿಂದ ಶೀಘ್ರದಲ್ಲೇ ಶೇ. 20 ರಷ್ಟು ದರವನ್ನು ಮುಟ್ಟುತ್ತದೆ. ಇದಕ್ಕೆ ಇನ್ನಷ್ಟು ಉದಾಹರಣೆಗಳೆಂದರೆ, ಏಷ್ಯಾದಲ್ಲಿ ಸುನಾಮಿ ಅಪ್ಪಳಿಸಿದಾಗ, ಮತ್ತು ಅಮೇರಿಕಾದ ನ್ಯೂ ಆಲಾರನ್ಸ್ ನಗರದಲ್ಲಿ 'ಕತ್ರಿನಾ' ಬಿರುಗಾಳಿ ಸಂಭವಿಸಿದಾಗ ಶೇ. 70ರಷ್ಟು ಮಂದಿ ವಿಕೋಪ-ನಂತರದ ವೈಪರೀತ್ಯಗಳಿಂದ ಉಂಟಾಗುವ ಮಾನಸಿಕ ವ್ಯಾಧಿಯಿಂದ ನರಳಿದ್ದಾರೆ. ಜಗತ್ತಿನಾದ್ಯಂತ ವರ್ಷವೊಂದಕ್ಕೆ ವಿವಿಧ ರೋಗಗಳಿಂದ 1 ಕೋಟಿ ಹಸುಳೆಗಳು ಸಾಯುತ್ತಿರುವುದಕ್ಕೂ ಕೂಡ ವಾಯುಗುಣದ ಬದಲಾವಣೆಯೇ ಕಾರಣ ಎನ್ನಲಾಗಿದೆ.

ಜಾಗತಿಕ ತಾಪಮಾನಸಂಪಾದಿಸಿ

ಪ್ರಪಂಚದಾದ್ಯಂತ ಭೂಮಿಯ ತಾಪಮಾನವು ಹೆಚ್ಚಾಗುತ್ತಿರುವುದರಿಂದ ವಾಯುಗುಣ ಬದಲಾಗುತ್ತಿದೆ. ವಾಯುಗುಣದ ಬದಲಾವಣೆಯ ದುಷ್ಪರಿಣಾಮಗಳ ಹಲವಾರು ಮುಖಗಳು ತೀವ್ರಗತಿಯಲ್ಲಿ ನಮಗೆ ಗೋಚರವಾಗುತ್ತಿವೆ. ಭೂಮಿಯ ತಾಪಮಾನ ಇದೇ ಮಟ್ಟದಲ್ಲಿ ಏರಿಕೆಯಾದಲ್ಲಿ ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಉಷ್ಣಾಂಶ 4 ಡಿಗ್ರಿಯಷ್ಟು ಹೆಚ್ಚಾಗುತ್ತದೆಂದು ವಿಜ್ಞಾನಿಗಳು ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆ ಕುರಿತಾದ ಅಂತರ ಸರ್ಕಾರಿ ಸಂಸ್ಥೆಯು ತಿಳಿಸಿದೆ. ಆದರೆ, ಉಷ್ಣಾಂಶ ಇನ್ನೆರಡು ಡಿಗ್ರಿಯಷ್ಟು ಹೆಚ್ಚಾದರೂ ಮನುಷ್ಯರು ಬದುಕುವುದೂ ಕೂಡ ದುಸ್ತರ. ಭೂಮಿಯ ತಾಪಮಾನದ ಏರಿಕೆಗೆ ಕಾರಣವಾಗಿರುವ ಕೈಗಾರಿಕೆಗಳು ಬಿಡುಗಡೆ ಮಾಡುತ್ತಿರುವ ವಿಷಾನಿಲಗಳನ್ನು ಕಡಿತ ಮಾಡಬೇಕೆಂದು ವಿಶ್ವಾದ್ಯಂತ ಸಂಘ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಂದ ಒಕ್ಕೊರಲ ದನಿ ಮೂಡಿಬರುತ್ತಿದ್ದರೂ, ಅಮೇರಿಕಾವು ಒಳಗೊಂಡಂತೆ ಜಗತ್ತಿನ ಅತಿ ಹೆಚ್ಚು ಮಲಿನಕಾರಿ ರಾಷ್ಟ್ರಗಳು ವಿಷಾನಿಲ ವಿಸರ್ಜನೆ ಕಡಿತಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ.

ಬುವಿಯ ಗರ್ಭದೊಳಕ್ಕೆ ವಿಷಾನಿಲ ತುಂಬುವ ಆಸ್ಟ್ರೇಲಿಯಾ ಯೋಜನೆಸಂಪಾದಿಸಿ

 • ಈ ನಡುವೆ, ಇಂಗಾಲದ ಡೈ ಆಕ್ಸೈಡ್ ನ್ನು ಭೂಮಿಯೊಳಗೆ ಹೂತು ಹಾಕಲು ಆಸ್ಟ್ರೇಲಿಯಾದ ವಿಜ್ಞಾನಿಗಳು ಕಸರತ್ತು ನಡೆಸಿದ್ದಾರಂತೆ. ಪುರಾಣದ 'ಶಿವ'ನಂತೆ ಭೂಮಿಯೇನೂ ವಿಷವನ್ನೇ ಕುಡಿಯುವ ನೀಲಕಂಠ ಅಲ್ಲ. ಇಂಥಹ ವಿಷಾನಿಲಗಳನ್ನು ಕೈಗಾರಿಕೆಗಳು ಹೆಚ್ಚಾಗಿ ಬಿಡುಗಡೆ ಮಾಡದಂತೆ ತಡೆಗಟ್ಟುವ ಬದಲು, ಆಸ್ಟ್ರೇಲಿಯಾ ಸರಕಾರವು ಕೈಗಾರಿಕೆಗಳಿಂದ ಬಿಡುಗಡೆಯಾಗುವ ವಿಷಾನಿಲಗಳನ್ನು ಭೂಮಿಯೊಳಕ್ಕೆ ಪಂಪ್ ಮಾಡುವ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ, ಈಗಾಗಲೇ ಉಪಯುಕ್ತ ನೈಸರ್ಗಿಕ ಅನಿಲವನ್ನು ಭೂಮಿಯಿಂದ ಹೊರತೆಗೆದಿರುವಂತಹ ಖಾಲಿ ಭೂಭಾಗದೊಳಕ್ಕೆ ಸುಮಾರು 1.0 ಲಕ್ಷ ಟನ್ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಅಂದಾಜು 2 ಕಿಲೋಮೀಟರ್ ಆಳಕ್ಕೆ ಪಂಪ್ ಮಾಡಲಾಗುತ್ತದೆ. ಭೂಮಿಯ ಗರ್ಭದೊಳಕ್ಕೆ ವಿಷಾನಿಲವನ್ನು ತುಂಬಿ ಕೈತೊಳೆದುಕೊಳ್ಳುವುದು ಕೂಡ ಭೂಮಿಯ ತಾಪಮಾನ ಕಡಿಮೆಗೊಳಿಸುವ ಒಂದು ಪರಿಹಾರ ಮಾರ್ಗವೆಂದು ಸಾಧಿಸಲು ಆಸ್ಟ್ರೇಲಿಯಾ ಹೆಣಗುತ್ತಿದೆಯಷ್ಟೆ.

ವಾಯು ಮಾಲಿನ್ಯಸಂಪಾದಿಸಿ

 • 3 Dec, 2016;
 • ಕಲ್ಲಿದ್ದಲು ಮತ್ತು ಇನ್ನಿತರ ಪಳೆಯುಳಿಕೆ ಇಂಧನಗಳಿಂದುಂಟಾದ ಮಾಲಿನ್ಯದಿಂದಾಗಿ ಚೀನಾ ಮತ್ತು ಭಾರತದಲ್ಲಿ ಕಳೆದ ವರ್ಷ ಸರಿ ಸುಮಾರು 16 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂದು ಗ್ರೀನ್‍ಪೀಸ್ ಸಂಸ್ಥೆ ವರದಿಯಲ್ಲಿ ಹೇಳಿದೆ. ಪಳೆಯುಳಿಕೆ ಇಂಧನ (ಕಲ್ಲಿದ್ದಲು) ದಿಂದ ಉಂಟಾಗಿರುವ ಮಾಲಿನ್ಯದಿಂದಲೇ ಭಾರತ ಮತ್ತು ಚೀನಾದಲ್ಲಿ ಜನರನ್ನು ಬಲಿತೆಗೆದುಕೊಂಡಿದೆ ಎಂದು ಸಂಸ್ಥೆ ಹೇಳಿದೆ.
 • ಭಾರತ ಸೇರಿದಂತೆ 10 ದೇಶಗಳಲ್ಲಿ ವಾಯು ಮಾಲಿನ್ಯದಿಂದ ಸಂಭವಿಸಿರುವ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ವಾಯು ಮಾಲಿನ್ಯದಿಂದಾಗಿ ಸಂಭವಿಸುವ ಸಾವುಗಳು ದೇಶದ ಜಿಡಿಪಿ ಮೇಲೆ ಪರಿಣಾಮ ಬೀರುತ್ತದೆ. ಚೀನಾ ಮತ್ತು ಭಾರತದಲ್ಲಿ ಇತ್ತೀಚೆಗೆ ಆರ್ಥಿಕ ಅಭಿವೃದ್ಧಿ ಹೆಚ್ಚಾಗಿದ್ದರೂ, ವಾಯು ಮಾಲಿನ್ಯ ಸಮಸ್ಯೆ ಇಲ್ಲಿ ಜಾಸ್ತಿಯಾಗುತ್ತಲೇ ಇದೆ. 1990ರ ನಂತರ ವಾಯು ಮಾಲಿನ್ಯದಿಂದಾಗಿ ಸಂಭವಿಸುವ ಸಾವಿನ ಸಂಖ್ಯೆ ಚೀನಾ ಮತ್ತು ಭಾರತದಲ್ಲಿ ಕಡಿಮೆಯಾಗಿದೆ. 2010ರ ನಂತರ ಭಾರತದಲ್ಲಿ ಸಾವಿನ ಸಂಖ್ಯೆಗಳಲ್ಲಿ ಹೆಚ್ಚಳವಾಗಿಲ್ಲ. ಆದರೆ ಕಲ್ಲಿದ್ದಲಿನಿಂದ ಉಂಟಾಗುವ ವಾಯು ಮಾಲಿನ್ಯ ಜೀವಕ್ಕೆ ಮಾರಕವಾಗಿದೆ ಎಂದು ಗ್ರೀನ್‍ಪೀಸ್ ವರದಿಯಲ್ಲಿ ಹೇಳಲಾಗಿದೆ.
 • 2015ರಲ್ಲಿ 1,00,000 ಜನರ ಪೈಕಿ ಭಾರತದಲ್ಲಿ 138 ಮತ್ತು ಚೀನಾದಲ್ಲಿ 115 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.[೧]

ಉತ್ತರ ಪ್ರದೇಶ, ಶೂನ್ಯಕ್ಕಿಂತಲೂ ಕೆಳಕ್ಕಿಳಿದ ತಾಪಮಾನಸಂಪಾದಿಸಿ

 • 14.01.2017,ವಿಜಯವಾಣಿ ಸುದ್ದಿಜಾಲ
 • ತೀವ್ರ ಚಳಿಗಾಳಿಯ ಪರಿಣಾಮವಾಗಿ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ 9 ಮಂದಿ ಸಾವನ್ನಪ್ಪಿದ್ದು, ಹಿಮಾಚಲ ಪ್ರದೇಶದಲ್ಲಿ ರಸ್ತೆಗಳು ಸಂಪೂರ್ಣ ಹಿಮಾವೃತಗೊಂಡಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂಬ ವರದಿಗಳು ಬಂದಿವೆ ಎಂದು ಅಧಿಕಾರಿಗಳು ಶನಿವಾರ ಇಲ್ಲಿ ತಿಳಿಸಿದರು. ಮುಂದಿನ ಕೆಲವು ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗುವುದು. ಚಳಿ ಇನ್ನಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನವರಿ 19ರವರೆಗೂ ತಾಪಮಾನ ಇನ್ನಷ್ಟು ಕುಗ್ಗಲಿದ್ದು ಬಳಿಕ ಹವಾಮಾನ ಪರಿಸ್ಥಿತಿ ಸುಧಾರಿಸಬಹುದು ಎಂದು ಹವಾಮಾನ ಕಚೇರಿ ಹೇಳಿದೆ. ಲಖನೌದಲ್ಲಿ ತಾಪಮಾನ 7 ಡಿಗ್ರಿಗಿಂತಲೂ ಕೆಳಗಿಳಿದಿದ್ದು, ಕೆಲವೆಡೆಗಳಲ್ಲಿ ಶೂನ್ಯಕ್ಕಿಂತಕ್ಕಿಂತಲೂ ಕೆಳಕ್ಕೆ ಹೋಗಿದೆ. ಇಂತಹ ಪರಿಸ್ಥಿತಿ ಅಭೂತಪೂರ್ವ ಎಂದು ಪ್ರಾದೇಶಿಕ ಹವಾಮಾನ ಕಚೇರಿ ತಿಳಿಸಿದೆ.
 • ಹಿಮಾಚಲ ಪ್ರದೇಶದಲ್ಲಿ ರಸ್ತೆಗಳಲ್ಲಿ ಹಿಮದ ರಾಶಿ ಬಿದ್ದಿದ್ದು, ಸುಗಮ ವಾಹನ ಸಂಚಾರಕ್ಕಾಗಿ ಹಿಮವನ್ನು ತೆಗೆದು ರಸ್ತೆ ಬದಿಗಳಿಗೆ ಸರಿಸಲಾದ ಚಿತ್ರ ವರದಿಗಳು ಬಂದಿವೆ.[೨]

2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್‌ ಒಪ್ಪಂದಕ್ಕೆ ಹಿನ್ನೆಡೆಸಂಪಾದಿಸಿ

 • ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ಕಾರ್ಯ. ಸರಾಸರಿ ತಾಪಮಾನ ಔದ್ಯೋಗೀಕರಣ ಪೂರ್ವಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ದಾಟದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಪ್ಯಾರಿಸ್‌ ಒಪ್ಪಂದಕ್ಕೆ ಸಮ್ಮತಿ ಇಲ್ಲ ಎನ್ನುವ ಟ್ರಂಪ್‌ ಅವರ ನಿಲುವು ಭೂಮಿಯ ಅಸ್ತಿತ್ವಕ್ಕೇ ಅಪಾಯ ತರುವಂಥದ್ದು[೩]
 • ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ 2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಭಾರತ ಮತ್ತು ಚೀನಾದಂತಹ ದೇಶಗಳಿಗೆ ಲಾಭಕರವಾಗಿರುವ ಈ ಕ್ರೂರ ಒಪ್ಪಂದ ಅಮೆರಿಕಕ್ಕೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಳವಳಕ್ಕಿಂತಲೂ ತಮಗೆ ಅಮೆರಿಕನ್ನರ ಉದ್ಯೋಗವೇ ಹೆಚ್ಚು ಪ್ರಮುಖ ಎಂಬ ಮಾತನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಿದ್ದಾರೆ.
 • ‘ಒಪ್ಪಂದದಿಂದ ಹೆಚ್ಚು ಲಾಭ ಆಗುವುದು ಭಾರತ ಮತ್ತು ಚೀನಾಕ್ಕೆ; ಅತಿ ಹೆಚ್ಚು ಅನ್ಯಾಯ ಆಗುವುದು ಅಮೆರಿಕಕ್ಕೆ’ ಎಂಬ ವಿತಂಡ ವಾದ ಅವರದು. ಅಮೆರಿಕದ ಐಷಾರಾಮಿತನಕ್ಕೆ ಎಳ್ಳಷ್ಟೂ ತೊಂದರೆ ಆಗಬಾರದು ಎಂಬ ಸ್ವಾರ್ಥ, ಸಂಕುಚಿತ ಧೋರಣೆ. ‘ತಾಪಮಾನ ಏರಿಕೆಗೆ ಕಾರಣವಾಗುವ ಹಸಿರು ಮನೆ ಅನಿಲಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಚೀನಾಕ್ಕೆ 2030ರ ವರೆಗೂ ಅವಕಾಶವಿದೆ. ಪ್ಯಾರಿಸ್‌ ಒಪ್ಪಂದದ ಪ್ರಕಾರ ರೂ. 1.61 ಲಕ್ಷ ಕೋಟಿ ನೆರವು ಸಿಗುವ ತನಕ ವಾಯು ಮಾಲಿನ್ಯ ತಡೆಯಲು ಭಾರತ ಮುಂದಾಗುವುದಿಲ್ಲ. ತಕ್ಷಣದ ಕ್ರಮ ತೆಗೆದುಕೊಂಡು ಅಮೆರಿಕನ್ನರೇಕೆ ಕಷ್ಟ ಪಡಬೇಕು’ ಎಂಬ ಅವರ ಸರ್ಕಾರದ ವಾದ ಕೂಡ ಸರಿಯಲ್ಲ. [೪]
 
2015 ರ ಜಾಗತಿಕ ಉಷ್ಣಾಂಶದ ವೈಪರೀತ್ಯಗಳು 1951-1980 ಬೇಸ್ಲೈನ್ಗೆ ಹೋಲಿಸಿದರೆ. 1880 ರಲ್ಲಿ ಆರಂಭವಾದ ಎನ್ಎಎಸ್ಎ / ಎನ್ಒಎಎ-ತಾಪಮಾನದ ದಾಖಲೆಯ ಅತ್ಯಂತ ಬೆಚ್ಚನೆಯ ವರ್ಷ 2015. ಇದು 2016 ರಲ್ಲಿ ಇನ್ನೂ ಹೆಚ್ಚಾಗಿದೆ.

ವಿಶ್ವ ಅಪಾಯದಲ್ಲಿಸಂಪಾದಿಸಿ

 • ಅಪಾಯಕಾರಿ ಸಂದರ್ಭವೊಂದನ್ನು ವಿಶ್ವ ಎದುರಿಸುತ್ತಿದೆ. ಆದರೆ ಭಾರತದ ಮಾಧ್ಯಮಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ಕಾರ್ಯದಲ್ಲಿ ಸಹಕಾರ ನೀಡುವುದಾಗಿ ಮಾತು ಕೊಟ್ಟಿದ್ದ ಅಮೆರಿಕ, ಈಗ ಆ ಮಾತಿನಿಂದ ಹಿಂದೆ ಸರಿದಿದೆ. ಕೈಗಾರಿಕಾ ಘಟಕಗಳು ಹಾಗೂ ವಾಹನಗಳು ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು 2015ರಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿದ್ದವು. ಒಪ್ಪಂದದ ಅನ್ವಯ, ಈ ದೇಶಗಳು ಕಲ್ಲಿದ್ದಲು, ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು ಸ್ವಯಂಪ್ರೇರಿತವಾಗಿ ಕಡಿಮೆ ಮಾಡಿ, ಸೌರಶಕ್ತಿ ಹಾಗೂ ಪವನ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಮೂಲಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಗ್ಗಿಸುವ ಕೆಲಸ ಮಾಡಬೇಕು. ಭಾರತ ಈಗಾಗಲೇ ಸೌರಶಕ್ತಿಯ ಅತಿದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ, ಸೌರಶಕ್ತಿ ವೆಚ್ಚ ಇಲ್ಲಿ ತೀರಾ ಕಡಿಮೆಯಾಗಿದೆ.
 • ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿದ ಎಲ್ಲ ದೇಶಗಳೂ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡರೆ, ಜಾಗತಿಕ ತಾಪಮಾನದ ಹೆಚ್ಚಳವು ಕೈಗಾರಿಕೀಕರಣಕ್ಕಿಂತ ಮೊದಲು ಇದ್ದ ತಾಪಮಾನಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್‌ಗಳಿಗೆ ಸೀಮಿತವಾಗಿರಲಿದೆ.

ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಸಂಪಾದಿಸಿ

 • ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಚೀನಾ ಎಲ್ಲರಿಗಿಂತ ಮುಂದಿದೆ,
 • ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆಯಲ್ಲಿ ಚೀನಾದ ಕೊಡುಗೆ ಶೇಕಡ 30ರಷ್ಟು.
 • ಚೀನಾದ ನಂತರದ ಸ್ಥಾನಗಳಲ್ಲಿ ಅಮೆರಿಕ (ಶೇ 15),
 • 28 ದೇಶಗಳ ಐರೋಪ್ಯ ವಲಯ (ಶೇ 9) ಇವೆ.
 • ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ ಶೇಕಡ 7ರಷ್ಟು.
  • ಆದರೆ ವಿಶ್ವದ ಅಂದಾಜು ಶೇಕಡ 15ರಷ್ಟು ಜನ ಇರುವುದು ಭಾರತದಲ್ಲಿ ಎಂಬುದನ್ನು ಮರೆಯಬಾರದು. ಹಾಗಾಗಿ, ತಲಾವಾರು ಲೆಕ್ಕಾಚಾರದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಭಾರತದ ಪಾಲು ಅಮೆರಿಕ ಅಥವಾ ಚೀನಾದಷ್ಟಿಲ್ಲ.
 • ಆದರೆ, ಭಾರತದಲ್ಲಿ ಕೈಗಾರಿಕೀಕರಣದ ಪ್ರಕ್ರಿಯೆ ವೇಗವಾಗಿ ಆಗುತ್ತಿದೆ. ಇಲ್ಲಿ ವಿದ್ಯುತ್, ಪೆಟ್ರೋಲ್ ಮತ್ತು ಡೀಸೆಲ್ ಬಳಸುವ ಮಧ್ಯಮ ವರ್ಗದ ಜನರ ಸಂಖ್ಯೆ ಹೆಚ್ಚುತ್ತಿದೆ.
 • ‘ಪ್ಯಾರಿಸ್ ಒಪ್ಪಂದ ಇರಲಿ, ಇಲ್ಲದಿರಲಿ. ಮುಂದಿನ ಪೀಳಿಗೆಯನ್ನು ಗಮನದಲ್ಲಿ ಇರಿಸಿಕೊಂಡು ನಾವು ತಾಪಮಾನ ಹೆಚ್ಚಳ ತಡೆಯುವ ಬದ್ಧತೆ ಹೊಂದಿದ್ದೇವೆ’ ಎಂದು ಭಾರತದ ಪ್ರಧಾನಿ ಮೋದಿ ಅವರು ಕಳೆದ ವಾರ ಹೇಳಿದ್ದಾರೆ. ದೇಶದಲ್ಲಿ ಮಾರಾಟವಾಗುವ ಎಲ್ಲ ಕಾರುಗಳು 2030ರೊಳಗೆ ವಿದ್ಯುತ್ ಚಾಲಿತ ಆಗಿರಬೇಕು ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಅದು ಹೇಗೆ ಸಾಧ್ಯವಾಗುತ್ತದೆ ಎಂಬುದರ ವಿವರಗಳು ಇನ್ನೂ ಬಹಿರಂಗವಾಗಿಲ್ಲ.
 • ಅಧ್ಯಕ್ಷ ಡೊನಾಲ್ಡ್ ಟ್ರಂಪ್:ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಳವಳಕ್ಕಿಂತಲೂ ತಮಗೆ ಅಮೆರಿಕನ್ನರ ಉದ್ಯೋಗವೇ ಹೆಚ್ಚು ಪ್ರಮುಖ ಎಂಬ ಮಾತನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಿದ್ದಾರೆ. ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕ ಬದ್ಧವಾಗಿ ಉಳಿದರೆ, ಮುಂದಿನ ಏಳು ವರ್ಷಗಳಲ್ಲಿ 27 ಲಕ್ಷ ಉದ್ಯೋಗಗಳು ನಷ್ಟವಾಗಲಿವೆ ಎಂದು ಅವರು ಹೇಳಿದ್ದಾರೆ. ಈ ಮಾತಿನ ಬಗ್ಗೆ ಒಮ್ಮತ ಇಲ್ಲ. ವಾಸ್ತವದಲ್ಲಿ ಕಳೆದ ದಶಕದಲ್ಲಿ ಅಮೆರಿಕದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಿದ ಉದ್ಯಮ ಕ್ಷೇತ್ರಗಳ ಪಟ್ಟಿಯಲ್ಲಿ ವಿದ್ಯುತ್ ಚಾಲಿತ ಕಾರು ತಯಾರಿಕೆ ಹಾಗೂ ಸೌರವಿದ್ಯುತ್ ಉತ್ಪಾದನೆ ಸೇರಿವೆ. ಅಮೆರಿಕ ಈಗ ತೆಗೆದುಕೊಂಡಿರುವ ತೀರ್ಮಾನ ತಪ್ಪು ಎಂದು ಆ ದೇಶದ ಹಲವು ಬೃಹತ್ ಕಂಪೆನಿಗಳು ಮತ್ತು ಅಲ್ಲಿನ ಉದ್ಯಮಿಗಳು ಹೇಳಿದ್ದಾರೆ.

ಪರಿಣಾಮಗಳುಸಂಪಾದಿಸಿ

 • 1880ರ ನಂತರ ಭೂಮಿಯ ಮೇಲ್ಮೈ ತಾಪಮಾನವು ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಸರಾಸರಿ 0.07 ಡಿಗ್ರಿ ಸೆಲ್ಸಿಯಸ್‌ನಂತೆ ಏರಿಕೆ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಆಗಿರುವ ತಾಪಮಾನದ ಒಟ್ಟು ಹೆಚ್ಚಳ 0.95 ಡಿಗ್ರಿ ಸೆಲ್ಸಿಯಸ್. ಇಲ್ಲಿಯವರೆಗೆ ಸಮುದ್ರದಲ್ಲಿನ ತಾಪಮಾನಕ್ಕಿಂತ ಭೂಪ್ರದೇಶದ ತಾಪಮಾನದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ. ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿಮೆ ಮಾಡದಿದ್ದರೆ ಪರಿಸ್ಥಿತಿ ಹೀಗೇ ಇರುವುದಿಲ್ಲ. ಸಮುದ್ರದ ತಾಪಮಾನ ಹೆಚ್ಚಲು ಆರಂಭವಾದರೆ, ಹಲವು ದೇಶಗಳು ತಕ್ಷಣ ಭಾರಿ ತೊಂದರೆಗೆ ಸಿಲುಕಲಿವೆ.
 • ಇದು ಭಾರತೀಯರಿಗೆ ಮೂರು ರೀತಿಯಲ್ಲಿ ತೊಂದರೆ ತರಲಿದೆ. ಹವಾಮಾನ ಬದಲಾವಣೆಯ ಪರಿಣಾಮವಾಗಿ ಸಮುದ್ರದ ಮಟ್ಟದಲ್ಲಿ ಹೆಚ್ಚಳ ಆಗಲಿದೆ. ಇದು ಮುಂಬೈ, ಚೆನ್ನೈ, ಕೋಲ್ಕತ್ತದಂತಹ ಸಮುದ್ರದ ದಂಡೆಯ ಮೇಲಿನ ನಗರಗಳಿಗೆ ಭಾರಿ ಸಮಸ್ಯೆ ತಂದಿಡಲಿದೆ. ಅಲ್ಲದೆ, ಮುಂಗಾರು ಮಳೆ ತೀರಾ ಅನಿಶ್ಚಿತವಾಗಲಿದೆ. ಇದರ ದುಷ್ಪರಿಣಾಮ ದೇಶದ ರೈತನ ಮೇಲೆ ಆಗಲಿದೆ. ಭಾರತದಲ್ಲಿ ಪ್ರತಿ ವರ್ಷ 12 ಲಕ್ಷಕ್ಕಿಂತ ಹೆಚ್ಚು ಜನ ಮಾಲಿನ್ಯದ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. [೫]

ದೆಹಲಿ ಕೆಂಡದ ಉಷ್ಣೋಗ್ರತೆಸಂಪಾದಿಸಿ

 • ಮಿತಿ ಮೀರಿದ ಕಟ್ಟಡ ನಿರ್ಮಾಣದಿಂದ ರಾತ್ರಿ ಉಷ್ಣಾಂಶ ಏರಿಕೆ; ದೆಹಲಿ ಕೆಂಡವಾಗಿದೆ; ಉಷ್ಣೋಗ್ರತೆಗೆ ತತ್ತರಿಸಿದ ಉತ್ತರ ಭಾರತ
 • ಪ್ರಜಾವಾಣಿ ವಾರ್ತೆ;8 ಜೂನ್, 2017
 • ದೇಶದ ರಾಜಧಾನಿ ದೆಹಲಿ ವಾರದೊಪ್ಪತ್ತಿನಿಂದ ‘ಕೆಂಡದ ಹೊಂಡ’­ದಂತಾಗಿ ಜನಜೀವನ ತತ್ತರಿಸಿದೆ. ಮಹಾನಗರದ ಕೆಲ ಭಾಗಗಳಲ್ಲಿ ಉಷ್ಣೋಗ್ರತೆ 47 ಡಿಗ್ರಿ ಸೆಲ್ಸಿಯಸ್‌ಗೆ ಜಿಗಿದಿದೆ. ರೋಹಿಣಿಯ ರಾಣಿಬಾಗ್ ಬಳಿ ಬಿಸಿಲಿನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಆಕಸ್ಮಿಕವಾಗಿ ಹೊಕ್ಕ ಆರು ವರ್ಷದ ಬಾಲಕ ಸೋನು ಹೊರಬರಲಾಗದೆ ಉಷ್ಣೋಗ್ರತೆ ಕಾರಣ ಅಲ್ಲಿಯೇ ಉಸಿರು ಕಟ್ಟಿ ಮೃತಪಟ್ಟ ದಾರುಣ ಘಟನೆ ಜರುಗಿದೆ. ಉತ್ತರಪ್ರದೇಶದ ನಾನಾ ಭಾಗಗಳಲ್ಲಿ ಕಳೆದ 24 ತಾಸುಗಳಲ್ಲಿ ಉಷ್ಣೋಗ್ರತೆಗೆ ಹತ್ತು ಮಂದಿ ಬಲಿಯಾಗಿದ್ದಾರೆ, ಒಡಿಶಾದಲ್ಲಿ 34 ಮಂದಿ ಅಸುನೀಗಿದ್ದಾರೆ.
 • ನೆರೆಯ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನೂರ್ ಪುರ್ಥಲ್ ಮತ್ತ ಭಕ್ಕರ್ 52 ಡಿಗ್ರಿ ಸೆಲ್ಶಿಯಸ್, ಖೈಬರ್ ಪಖ್ತೂನ್ ನ ಡೇರಾ ಇಸ್ಮಾಯಿಲ್ ಖಾನ್ ಹಾಗೂ ಸಿಬ್ಬಿ 51 ಡಿಗ್ರಿ ಸೆಲ್ಶಿಯಸ್, ಸರ್ಗೋಧ ಮತ್ತು ರಿಸಾಲ್ಪುರ್ 50 ಡಿಗ್ರಿ ಸೆಲ್ಸಿಯಸ್‌ ಝಳದಲ್ಲಿ ಬಸವಳಿದಿವೆ.
 • ದೆಹಲಿಗೆ ಅಂಟಿಕೊಂಡಿರುವ ಉತ್ತರಪ್ರದೇಶದ ನೋಯ್ಡಾ, ಘಾಜಿಯಾ­ಬಾದ್, ಹರಿಯಾಣದ ಗುಡಗಾಂವ್ ಸೇರಿರುವ ರಾಷ್ಟ್ರೀಯ ರಾಜಧಾನಿ ಕ್ಷೇತ್ರದ ಸರಾಸರಿ 44.6 ಡಿಗ್ರಿ ಸೆಲ್ಸಿಯಸ್‌ಗೆ ಏರಿ ಸ್ಥಿರಗೊಂಡಿದೆ. ಗರಿಷ್ಠ ಉಷ್ಣೋಗ್ರತೆಯ ಜೊತೆಗೆ ಕನಿಷ್ಠ ಉಷ್ಣಾಂಶವು 33.6 ಸೆಲ್ಸಿಯಸ್‌ಗೆ ಏರಿದ್ದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಧ್ಯಾಹ್ನದ ವೇಳೆಯಲ್ಲಿ ರಾಜಧಾನಿಯಲ್ಲಿ ಜನ-ವಾಹನ ಸಂಚಾರ ಅತಿ ವಿರಳವಾಗಿದೆ.
 • ಕಾರಣ:ಮಿತಿ ಮೀರಿದ ಕಟ್ಟಡ ನಿರ್ಮಾಣದಿಂದ ರಾತ್ರಿ ಉಷ್ಣಾಂಶದಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಈ ಕಟ್ಟಡಗಳು ಹಗಲಿನಲ್ಲಿ ಹೀರಿ ಹಿಡಿದಿರಿಸಿಕೊಳ್ಳುವ ಉಷ್ಣಾಂಶದ ಬಿಡುಗಡೆಗೆ ದೀರ್ಘ ಸಮಯ ಹಿಡಿಯುತ್ತಿರುವುದು ಇದಕ್ಕೆ ಕಾರಣವೆಂದು ಅಧ್ಯಯನಗಳು ತಿಳಿಸಿವೆ. [೬]

ಪರಿಹಾರ ಕ್ರಮಗಳುಸಂಪಾದಿಸಿ

 • ಮುಖ್ಯವಾಗಿ ಕಲ್ಲಿದ್ದಲು, ಪೆಟ್ರೋಲ್, ಡೀಸಲ್, ಬಳಕೆ ಅಥವಾ ಸುಡುವುದನ್ನು ಕಡಿಮೆ ಮಾಡಿ ಪರ್ಯಾಯವಾಗಿ ಸೂರ್ಯನ (ಬಿಸಿಲಿನ) ಶಾಕವನ್ನು ಬಳಸಬೇಕು. ಇಲ್ಲದಿದ್ದರೆ ಸಮುದ್ರತೀರದ ನಗರಗಳು ಮುಳುಗಬಹುದು.

ನೋಡಿಸಂಪಾದಿಸಿ

ಗಮನಿಸಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. 2015ರಲ್ಲಿ ಮಾಲಿನ್ಯದಿಂದಾಗಿ ಭಾರತ ಮತ್ತು ಚೀನಾದಲ್ಲಿ ಸಾವಿಗೀಡಾದವರ ಸಂಖ್ಯೆ 16 ಲಕ್ಷ!
 2. ದೇಶ ಉತ್ತರ ಪ್ರದೇಶ, ಶೂನ್ಯಕ್ಕಿಂತಲೂ ಕೆಳಕ್ಕಿಳಿದ ತಾಪಮಾನ, 9 ಸಾವು;
 3. "ಆರ್ಕೈವ್ ನಕಲು". Archived from the original on 2017-06-04. Retrieved 2017-06-05.
 4. ಜಾಗತಿಕ ಒಪ್ಪಂದ;ಪ್ಯಾರಿಸ್‌ ಒಪ್ಪಂದ: ಅಮೆರಿಕ ಹೊರಕ್ಕೆ;3 Jun, 2017
 5. "ಆಕಾರ್‌ ಪಟೇಲ್;ಟ್ರಂಪ್ ನೆವದಲ್ಲಿ ಹವಾಮಾನ ಬದಲಾವಣೆ ಜಿಜ್ಞಾಸೆ;5 Jun, 2017". Archived from the original on 2017-06-04. Retrieved 2017-06-05.
 6. ಮಿತಿ ಮೀರಿದ ಕಟ್ಟಡ ನಿರ್ಮಾಣದಿಂದ ರಾತ್ರಿ ಉಷ್ಣಾಂಶ ಏರಿಕೆ; ದೆಹಲಿ ಕೆಂಡವಾಗಿದೆ; ಉಷ್ಣೋಗ್ರತೆಗೆ ತತ್ತರಿಸಿದ ಉತ್ತರ ಭಾರತ;ಪ್ರಜಾವಾಣಿ ವಾರ್ತೆ;8 ಜೂನ್, 2017