ದೀಪಾವಳಿಯ ದಿನದಿಂದ ಪ್ರಾರಂಭವಾಗಿ ಮೂರುದಿನಗಳ ಕಾಲ ದೀಪವನ್ನು ಹಿಡಿದುಕೊಂಡು ಮನೆಮನೆಗೆ ಹೋಗಿ ದೀಪವನ್ನು ಕೊಡುತ್ತಾರೆ. ಹೀಗೆ ದೀಪವನ್ನು ಕೊಡುವಾಗ ವಿಶಿಷ್ಟವಾದ ಪದವನ್ನು ಹಾಡುತ್ತಾರೆ. ಈ ಪದವನ್ನು ಹಬ್ಬಾಡುವ ಪದ ಎನ್ನುತ್ತಾರೆ.

ಸಾಂಪ್ರದಾಯಿಕವಾಗಿ ಇದಕ್ಕೆ ತುಂಬಾ ಮಹತ್ತ್ವವನ್ನು ನೀಡಲಾಗಿದೆ. ಮಲೆನಾಡಿನಲ್ಲಿ ಹಾಗೂ ಕರಾವಳಿಯ ಕೆಲವು ಭಾಗಗಳಲ್ಲಿ ಈ ಸಂಪ್ರದಾಯ ರೂಢಿಯಲ್ಲಿದೆ. ದೀಪಾವಳಿಯ ದಿನ ಸಂಜೆ ನಿರ್ದಿಷ್ಟವಾದ ಮನೆಯಿಂದ ಹೊತ್ತಿಸಿದ ಈ ದೀಪವನ್ನು ಮೂರು ರಾತ್ರಿಗಳ ಕಾಲ ಊರಿನ ಎಲ್ಲ ಮನೆಗಳಿಗೂ ತಲುಪಿಸುತ್ತಾರೆ. ಅದಕ್ಕಾಗಿ ಹಲವಾರು ಜನರು ಕೂಡಿಕೊಂಡು ಹಬ್ಬಾಡುವ ಪದಗಳನ್ನು ಹಾಡುತ್ತಾ ಹೋಗುತ್ತಾರೆ.

ಈ ಹಬ್ಬಾಡುವ ಪದಗಳು ಜಾನಪದ ಶೈಲಿಯಲ್ಲಿ ಇರುತ್ತವೆ. ಈ ಹಾಡಿಗೆ ಕೆಲವು ಪ್ರದೇಶಗಳಲ್ಲಿ "ಅಂಟಿಕೆ -ಪಂಟಿಕೆ" ಪದಗಳು ಎಂದೂ ಕರೆಯುತ್ತಾರೆ.