ಸ್ವಾಮಿ ದಯಾನಂದ ಪ್ರಭು
ಪರಿಚಯ
ಬದಲಾಯಿಸಿಸ್ವಾಮಿ ಡಾ.ದಯಾನಂದ ಪ್ರಭು ಅವರು ೧೯೪೮, ನವೆಂಬರ್ ೨೩ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಮಾರ್ಟಿನ್ ಮತ್ತು ತಾಯಿ ರೋಸ್ ಮೇರಿ. ಮೈಸೂರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ಹಾಸನದ ಸಂತ ಜೋಸೆಫರ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಂದುವರಿಸಿ ೧೯೬೭ರಲ್ಲಿ ಮೈಸೂರಿನ ಸಂತ ಮೇರಿ ಕಿರಿಯ ಗುರುಮಠಕ್ಕೆ ಸೇರುವ ಮೂಲಕ ಸನ್ಯಾಸ ದೀಕ್ಷೆ ಪಡೆದರು. ಅಲ್ಲಿ ಪಿಯುಸಿಯೊಂದಿಗೆ ಲತೀನ್ ಭಾಷೆಯ ಅಭ್ಯಾಸ ಮಾಡಿದರು. ಗುರುಮಠದಲ್ಲಿದ್ದಾಗಲೇ ಬರೆಯುವ ಹವ್ಯಾಸ ಮೈಗೂಡಿತು. ದೂತ, ನವಜ್ಯೋತಿ, ಕರ್ನಾಟಕ ತಾರೆಗಳಿಗೆ ಇವರ ಲೇಖನಗಳು ಸಾಲುಸಾಲಾಗಿ ಹರಿದು ಬಂದವು.
ಮುಂದೆ ಬೆಂಗಳೂರಿನ ಸಂತ ರಾಯಪ್ಪರ ಗುರುಮಠ ಸೇರಿದರು. ಅಲ್ಲಿ ಆರು ವರ್ಷಗಳ ಕಾಲ ಅಭ್ಯಾಸ. ಈ ಅವಧಿಯಲ್ಲಿ ಇವರಿಂದ ಇಂಗ್ಲಿಷಿನ 'ಎಕ್ಸೈಲ್ಡ್' ಎಂಬ ಕಾದಂಬರಿಯ ಕನ್ನಡ ರೂಪಾಂತರ. ಕರ್ನಾಟಕ ತಾರೆಯಲ್ಲಿ ಅದು 'ಕ್ರೈಸ್ತ ಗುರು ಕೊಲೆಗಾರರೆ?' ಎಂಬ ಹೆಸರಿನಲ್ಲಿ ಪ್ರಕಟ. ೧೯೭೭ರಲ್ಲಿ ಅದು 'ಗಡಿಪಾರು' ಎಂಬ ಹೆಸರಿನಲ್ಲಿ ಪುಸ್ತಕವೂ ಆಯಿತು. ಕನ್ನಡದಲ್ಲಿ 'ಎಂಎ', ಇತಿಹಾಸದಲ್ಲಿ 'ಎಂಎ' ಹಾಗೂ ಕ್ರೈಸ್ತಧರ್ಮ ಎಂಬ ವಿಷಯದ ಮೇಲೂ 'ಎಂಎ' ಪದವಿಗಳನ್ನು ಇವರು ಪಡೆದಿದ್ದಾರಲ್ಲದೇ ಡಾಕ್ಟರೇಟನ್ನೂ ಗಳಿಸಿದ್ದಾರೆ.
ದೂತನ ಸಂಪಾದಕರಾಗಿ...
ಬದಲಾಯಿಸಿ೧೯೭೭ರಲ್ಲಿ ಪೂಜ್ಯ ಬಿಷಪ್ ಮಥಿಯಾಸ್ ಫೆರ್ನಾಂಡಿಸ್ ರವರ ಅಮೃತ ಹಸ್ತದಿಂದ ಗುರುಪಟ್ಟಾಭಿಷೇಕ ಹೊಂದಿದರು. ಅಂದೇ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ನ ಸಹಾಯಕ ಗುರುವಾಗಿ ನೇಮಕಗೊಂಡರು. ೧೯೮೦ರಿಂದ ಸಂತ ಫಿಲೋಮಿನಾ ಬೋರ್ಡಿಂಗ್ ವಾರ್ಡನ್ ಆಗಿ ನೇಮಕ. ಇದೇ ಅವಧಿಯಲ್ಲಿ ದೂತ ಮಾಸಪತ್ರಿಕೆಯ ಸಂಪಾದಕರಾಗಿಯೂ ದುಡಿದರು. ದೂತನನ್ನು ತಮ್ಮ ಮಗುವಿನಂತೆ ಪೋಷಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಎದ್ದು ನಿಲ್ಲುವಂತೆ ಮಾಡಿದ ಶ್ರೇಯಸ್ಸು ಸ್ವಾಮಿ ದಯಾನಂದ ಪ್ರಭು ಅವರಿಗೆ ಸಲ್ಲುತ್ತದೆ. ಡಾ.ಎಚ್ಚೆಸ್ಕೆ, ಡಾ.ಸಿ.ಪಿ.ಕೆ ಮತ್ತು ಹಂಪನಾರಿಂದ 'ದೂತ'ನಿಗಾಗಿ ಲೇಖನಗಳನ್ನು ಬರೆಸಿದರು. ಇವರ ಅವಧಿಯಲ್ಲಿ 'ದೂತ' ವಜ್ರಮಹೋತ್ಸವವನ್ನು ಆಚರಿಸಿತು. ಅದರ ನೆನಪಿಗೆ ವಿಶೇಷ ಸ್ಮರಣ ಸಂಚಿಕೆಯನ್ನೂ ಇವರು ಹೊರತಂದರು.
ವಿವಿಧ ಧರ್ಮಕೇಂದ್ರಗಳಲ್ಲಿ...
ಬದಲಾಯಿಸಿ೧೯೮೯ರಲ್ಲಿ ಕೊಡಗಿನ ಸೋಮವಾರಪೇಟೆಯ ಜಯವೀರ ಮಾತೆಯ ದೇವಾಲಯದ ಗುರುವಾಗಿಯೂ, ಸಂತ ಜೋಸೆಫರ ಶಾಲೆಯ ವ್ಯವಸ್ಥಾಪಕರಾಗಿಯೂ ಅಧಿಕಾರ ಸ್ವೀಕಾರ. ಅಲ್ಲಿದ್ದ ಸಮಯದಲ್ಲಿ, ಬಾಲಯೇಸುವಿಗಾಗಿ ಪುಟ್ಟ ಗುಡಿಯನ್ನೂ, ಮರಿಯಮ್ಮನವರಿಗಾಗಿ ಗ್ರೊಟ್ಟೊವನ್ನೂ ಕಟ್ಟಿಸಿದ ಹೆಗ್ಗಳಿಕೆ ಇವರದು. ಅಲ್ಲದೇ ದೇವಾಲಯವನ್ನು ಸರ್ವಾಂಗೀಣವಾಗಿ ಸುಂದರಗೊಳಿಸಿದ, ಶಾಲೆಯ ಕಚೇರಿ, ಗ್ರಂಥಾಲಯ, ಪ್ರಯೋಗಾಲಯಗಳಿಗೆ ಹೊಸ ಕಟ್ಟಡವನ್ನು ನಿರ್ಮಿಸಿ ಕೊಟ್ಟ ಕೀರ್ತಿಯೂ ಇವರಿಗೇ ಸಲ್ಲುತ್ತದೆ.
೧೯೯೬ರಲ್ಲಿ ಮೈಸೂರಿನ ದೀನರ ಮಾತೆಯ ದೇವಾಲಯಕ್ಕೆ ವರ್ಗ. ಅಲ್ಲಿ ಧರ್ಮಕೇಂದ್ರದ ಬಡ ಮಕ್ಕಳಿಗಾಗಿ ಬಡ ಮಕ್ಕಳ ಶೈಕ್ಷಣಿಕ ನಿಧಿಯ ಹಾಗೂ ಬಡ ರೋಗಿಗಳಿಗಾಗಿ ದೀನರ ಮಾತೆಯ ಆರೊಗ್ಯ ನಿಧಿಯನ್ನು ಸ್ಥಾಪಿಸಿದರು.
೨೦೦೫ರಿಂದ ತಿರುಮಕೂಡಲು ನರಸಿಪುರದ ಯೇಸುಬಾಲರ ದೇವಾಲಯದ ಧರ್ಮಗುರುವಾಗಿ ವರ್ಗ. ಅಲ್ಲಿ ಲಿಟ್ಲ್ ಫ್ಲವರ್ ಪ್ರೌಢಶಾಲೆಯ ಸ್ಥಾಪನೆ. ಪ್ರಭು ಯೇಸುಕ್ರಿಸ್ತರ ಕುರಿತಾದ ಸಮಗ್ರ ಗ್ರಂಥವಾದ 'ಭುವನಜ್ಯೋತಿ'ಯ ಪ್ರಕಟಣೆ ೨೦೦೬ರಲ್ಲಿ. ಹೀಗೆ ಹೋದ ಕಡೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಏನಾದರೊಂದು ಮಾಡುವುದು ಗುರುವರ್ಯರ ಕಾಯಕ.
ಗುರುವರ್ಯರ ಕೃತಿಗಳು
ಬದಲಾಯಿಸಿ- ಗಡಿಪಾರು, ೧೯೭೭
- ಯೇಸು ಮತ್ತು ನಾನು, ೧೯೭೮
- ಕ್ರಿಸ್ತನೆಡೆಗೆ, ೧೯೭೭
- ಗೊಲ್ಗೊಥ ೧೯೮೭
- ಹದಿಹರೆಯದ ರೂಪರೇಷೆಗಳು, ೧೯೮೯
- ಮೈಸೂರು ಸಂಸ್ಥಾನದ ಕ್ರೈಸ್ತರ ಇತಿಹಾಸ, ೧೯೯೪
- ಮಾರಕ ರೋಗ ಏಡ್ಸ್
- ಧ್ಯಾನ ಸಂಗಮ, ೧೯೯೬
- ಯೇಸುಕ್ರಿಸ್ತರ ಕೊನೆಯ ೨೪ ಗಂಟೆಗಳು, ೧೯೯೭
- ಸಂಸ್ಕಾರ ವಿಧಿಗಳು ಮತ್ತು ವಿವಿಧ ಸಂದರ್ಭಗಳ ಅಶೀರ್ವಚನಗಳು