ಸ್ತೂಪವು ಬೌದ್ಧರ ವಾಸ್ತುಶಿಲ್ಪದಲ್ಲಿ ಪ್ರಮುಖವಾದುದು. ಬುದ್ಧನ ಅಥವಾ ಬೌದ್ಧ ಭಿಕ್ಷುವಿನ ಅವಶೇಷಗಳ ಮೇಲೆ ಕಟ್ಟಿದ ಸಮಾಧಿ ಅಥವಾ ಸ್ಮಾರಕ. ಬುದ್ಧನ ಪರಿನಿರ್ವಾಣದ ಅನಂತರ ಅವನ ಕಳೇಬರವನ್ನು ದಹಿಸಿ ಅವಶೇಷಗಳನ್ನು ಹತ್ತು ವಿಭಾಗಮಾಡಿ ಒಂದೊಂದು ವಿಭಾಗದ ಮೇಲೂ ಸ್ತೂಪಗಳನ್ನು ಕಟ್ಟಿಸಲಾಯಿತೆಂಬ ಪ್ರತೀತಿ ಇದೆ. ಅವಶೇಷಕ್ಕೆ ಧಾತುವೆಂದು ಇದನ್ನು ಒಳಗೊಂಡ ಈ ಗೋಳಾಕಾರದ ಘನಕಟ್ಟಡಕ್ಕೆ ಧಾತುಗರ್ಭವೆಂದು (ಸಿಂಹಳದಲ್ಲಿ ದಾಗೋಬಾ) ಹೆಸರಿದ್ದಿತು. ಈ ಅವಶೇಷಗಳಲ್ಲಿ ಮೂರು ಬಗೆ-ಶಾರೀರಕ (ಮೂಳೆ, ಭಸ್ಮ, ಕೂದಲು, ಹಲ್ಲು ಇತ್ಯಾದಿ), ಪರಿಭೋಗಿಕ (ಉಪಯೋಗಿಸುತ್ತಿದ್ದ ವಸ್ತುಗಳು, ಭಿಕ್ಷಾಪಾತ್ರೆ, ಜೀವರ ಇತ್ಯಾದಿ) ಮತ್ತು ಉದ್ದೇಶಿಕ (ಸಾಂಕೇತಿಕ). ಅಶೋಕಚಕ್ರವರ್ತಿಯ ಕಾಲಕ್ಕೆ ಇವು ಪೂಜಾಸ್ಥಾನಗಳಾಗಿ ಮಾರ್ಪಟ್ಟವು. ಅಶೋಕನೆ ಹಲವಾರು ಸ್ತೂಪಗಳನ್ನು ಸಂದರ್ಶಿಸಿ ಬಂದ. ಇವುಗಳಲ್ಲಿ ಗೌತಮಬುದ್ಧನಿಗೆ ಹಿಂದಿನವನಾದ ಕನಕಮುನಿಯ ಸ್ತೂಪವೂ ಒಂದು. ಅಶೋಕನ ಕಾಲದಿಂದ ಮುಂದಕ್ಕೆ ಸ್ತೂಪಗಳು ಕೇವಲ ಸಮಾಧಿಸ್ಥಾನಗಳಾಗಿರದೆ, ವಿಶೇಷವಾದ ಸಂದರ್ಭವನ್ನು ಸೂಚಿಸುವ ಸ್ಮಾರಕಮಂದಿರಗಳಾದವು. ನಿದರ್ಶನಕ್ಕೆ ಬುದ್ಧನು ಧರ್ಮಚಕ್ರಪ್ರವರ್ತನ ಮಾಡಿದ ಸ್ಥಳದಲ್ಲಿ ಅಶೋಕ ಧರ್ಮಚಕ್ರಸ್ತೂಪವನ್ನು (ಈಗಿನ ಸಾರನಾಥದಲ್ಲಿರುವ ಧಾಮೋಕ್‍ಸ್ತೂಪ)ಕಟ್ಟಸಿದ.

ಸಾಂಚಿ ಸ್ತೂಪ

ಅವಶೇಷವನ್ನು ಒಳಗೊಂಡ ಕರಂಡವನ್ನಿಟ್ಟು ಅದರ ಮೇಲೆ ಹಾಗೂ ಸುತ್ತಲೂ ಮಣ್ಣು ಕಲ್ಲುಗಳಿಂದ ಗುಮ್ಮಟ (ಗರ್ಭ ಅಥವಾ ಅಂಡ) ಮತ್ತು ಸ್ತೂಪವನ್ನು ನಿರ್ಮಿಸುತ್ತಿದ್ದರು. ಅದು ಪೂಜಾಸ್ಥಾನವಾದಾಗ ನೆಲದ ಮೇಲೆ, ಸುತ್ತಲೂ ಪ್ರದಕ್ಷಿಣೆಮಾಡಲು ಅನುಕೂಲವಾಗುವಂತೆ ವೇದಿಕೆಗೆ ಆಲಂಬನ, ಸ್ತಂಭಗಳು, ತೋರಣದಂತಿರುವ ಅಡ್ಡಪಟ್ಟಿಗಳು (ಸೂಚಿ), ಉಷ್ಣೀಷವೂ (ಮೇಲುಭಾಗ) ಇರುತ್ತಿದ್ದುವು. ಅಶೋಕನ (ಕಾಲಾನಂತರ ಸೊಗಸಾದ ಭವ್ಯ ಬೌದ್ಧಶಿಲ್ಪಗಳ ನಿರ್ಮಾಣವಾಗಿವೆ. ವೇದಿಕಾಶಿಲ್ಪಿಗಳಿಂದ ಸಾಂಚಿಸ್ತೂಪ, ಬಾರ್ಹುತ್ ಸ್ತೂಪಗಳು ಪ್ರಪಂಚ ಪ್ರಸಿದ್ಧವಾಗಿವೆ. ಪ್ರದಕ್ಷಿಣಾಪಥವನ್ನು ಹಂತಹಂತಗಳಾಗಿ ನಿರ್ಮಿಸಿದಾಗ ಏರಿಹೋಗಲು ಅನುಕೂಲವಾಗುತ್ತಿತ್ತು. ಸ್ತೂಪದ ಮೇಲ್ಭಾಗದಲ್ಲಿ ಚಚ್ಚೌಕವಾದ ಸಮಪ್ರದೇಶದ ಹರ್ಮಿಗಳನ್ನು (ಸಿಂಹಳದಲ್ಲಿ ದೇವತಾ ಕೊಡುವ) ಮಾಡುತ್ತಿದ್ದರು. ಮರದಿಂದ (ಸ್ಟಕ್ಕೋದಿಂದ) ಮಾಡಿದ ಛತ್ರವನ್ನು (ಛತ್ರಾವಳಿ) ಆಸರೆಗಾಗಿ ಇಡುತ್ತಿದ್ದರು. ಮಳೆನೀರನ್ನು ಶೇಖರಿಸಲು ವರ್ಷಭಾಂಡವನ್ನೂ ಹರ್ಮಿಕೆಯಲ್ಲಿ ಇಡುವ ಪದ್ಧತಿಯಿದ್ದಿತು. ಒಟ್ಟಿನಲ್ಲಿ ಸ್ತೂಪವನ್ನು ಸಣ್ಣಪ್ರಮಾಣದ ಗೋಳಾಕಾರದ ಪಿರಮಿಡ್ ಎಂದು ಬಣ್ಣಿಸಲಾಗುತ್ತದೆ. ಸ್ತೂಪವು ಸುಮೇರು ಪರ್ವತದ ಪ್ರತೀಕವೆಂದೂ ಮೇಲುಭಾಗದ ಹರ್ಮಿಕೆ ಅಮರಾವತಿ (ಇಂದ್ರನ ರಾಜಧಾನಿ) ಸಂಕೇತವೆಂದೂ ಭಾವಿಸಲಾಗಿತ್ತು.

ಸ್ತೂಪನಿರ್ಮಾಣ ಶ್ರೀಮಂತರಿಗೆ ಪುಣ್ಯಪ್ರದವೆಂಬ ಕಲ್ಪನೆಯಿದ್ದಿತು. ಸದ್ಧರ್ಮದ ಪ್ರಸಾರದಲ್ಲಿ ನೆರವಾಗಲು ಈ ಸ್ತೂಪ ಯಂತ್ರವೆಂದೂ ಸ್ತೂಪವನ್ನು ಪೂಜಿಸಿದರೆ ಬುದ್ಧನನ್ನೇ ಪೂಜಿಸಿದಂತೆ ಎಂಬ ನಂಬಿಕೆಗಳಿದ್ದುವು. ಇದ್ದ ಸ್ತೂಪಗಳನ್ನು ದುರಸ್ತಿಮಾಡಿಸುವುದು, ಅವುಗಳ ಗಾತ್ರವನ್ನು ಹೆಚ್ಚಿಸುವುದೂ ಪುಣ್ಯ ಕಾರ್ಯವಾಗಿತ್ತು. ಅಶೋಕ ತನ್ನ ರಾಜ್ಯಭಾರವನ್ನು ಆರಂಭಿಸಿದ ಇಪ್ಪತ್ತನೆಯ ವರ್ಷದಲ್ಲಿ ಕನಕಮುನಿ-ಬುದ್ಧನ ಸ್ತೂಪವನ್ನು ಇದ್ದ ಪ್ರಮಾಣಕ್ಕೆ ದ್ವಿಗುಣವಾಗಿ ವಿಸ್ತರಿಸಿದನೆಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ದೊಡ್ಡ ಹಾಗೂ ಚಿಕ್ಕ ಪ್ರಮಾಣದ ಸ್ತೂಪಗಳನ್ನು ನಿರ್ಮಿಸಲಾಗಿತ್ತು. ಸಣ್ಣಸಣ್ಣ ಸ್ತೂಪಗಳ ಮೇಲೆ ಮಂದಿರಗಳನ್ನು ನಿರ್ಮಿಸುವ ಸಂಪ್ರದಾಯವಿದ್ದು, ಇವುಗಳನ್ನು ಚೈತ್ಯವೆಂದು ಕರೆಯಲಾಗುತ್ತಿತ್ತು.

ಈಗ ಇರುವ ಸ್ತೂಪಗಳಲ್ಲೆಲ್ಲ ಸಾಂಚಿ ಸ್ತೂಪವೇ ಪ್ರಾಚೀನವಾದುದು. ಅದಕ್ಕಿಂತ ಹಿಂದಿನ ಸ್ತೂಪಗಳ ಅವಶೇಷಗಳು ದೊರಕಿಲ್ಲ. ಕ್ರಿಸ್ತಶಕ ಮೊದಲನೆಯ ಶತಮಾನದ ಬಾರ್ಹುತ್ ಸ್ತೂಪದಲ್ಲಿರುವ ಶಿಲ್ಪಗಳು ಪ್ರಪಂಚಖ್ಯಾತವಾಗಿವೆ. ಇಲ್ಲಿಯೂ ಸಾಂಚಿಯಲ್ಲಿದ್ದಂತೆ ಜಾತಕ ಕಥೆಗಳನ್ನು ಚಿತ್ರಿಸಿ ಬೌದ್ಧಪ್ರಸಂಗಗಳನ್ನು ನಿರೂಪಿಸಲಾಗಿದೆ. ಅನಾಥಪಿಂಡಕನು ಜೇತವನವನ್ನು ದಾನಮಾಡುತ್ತಿರುವುದು. (ಈ ಫಲಕದಲ್ಲಿ “ಜೇತನನ ಅನಾಥಪೇಡಿಕೋದೇತಿ” ಎಂಬ ಲೇಖವೂ ಇದೆ), ಬುದ್ಧನು ತ್ರ್ಯಯಸ್ತ್ರಿಂಶಸ್ವರ್ಗದಿಂದ ಹಿಂದಿರುಗಿ ಬರುತ್ತಿರುವುದು, ಕುರಂಗಮಿಗಜಾತಕ ಮುಂತಾದ ದೃಶ್ಯಗಳು ಸೊಗಸಾಗಿವೆ. ಕನಿಷ್ಕನ ಕಾಲದಲ್ಲಿ ರೂಪಗೊಂಡ ಸಾರನಾಥ (ವಾರಾಣಸಿ) ಸ್ತೂಪದಲ್ಲಿ ರಮಣೀಯವಾದ ಶಿಲ್ಪಗಳಿವೆ. 2ನೆಯ ಶತಮಾನದ ಅಮರಾವತಿಯ ಸ್ತೂಪ, ಬತನ್‍ಪೂರಾಸ್ತೂಪ, ಜಗ್ಗಯ್ಯಪೇಟೆಯ ಸ್ತೂಪ-ಇವು ಪ್ರಸಿದ್ಧವಾದ ಕಲಾಕೃತಿಗಳು. ಸಿಂಹಳದಲ್ಲಿ ರುವನ್‍ವೆಲಿ ದಾಗಬ ಎಂಬ ಸ್ತೂಪವನ್ನು ದುಟ್ಠಗಾಮನಿ (ಕ್ರಿ.ಪೂ. 101-77) ಎಂಬ ಚಕ್ರವರ್ತಿ ಅನುರಾಧಪುರದಲ್ಲಿ ಕಟ್ಟಿಸಿದ. ಮಿರಿಸ್ವೇಟಿಯ ಮತ್ತು ಅಭಯಗಿರಿ ದಾಗಬಗಳು ಪ್ರಾಚೀನವಾದುವು. ನೇಪಾಲದಲ್ಲಿ ಷೊರ್ಟೆನ್ ಎಂಬ ಪೂಜಾಸ್ಥಳಗಳು ಸ್ತೂಪದ ಮಾದರಿಯಲ್ಲಿವೆ. ಬರ್ಮಾದ (ಈಗ ಮಯನ್ಮಾರ್) ಮಿಂಗಲಚೇದಿಸ್ತೂಪ (1274ರಲ್ಲಿ ಪಾಗನ್‍ನಲ್ಲಿ ಕಟ್ಟಿದ್ದು) ಪ್ರಖ್ಯಾತವಾಗಿದೆ. ಪ್ರಪಂಚಖ್ಯಾತವಾದ ಅಂಗ್ಕೋರ್‍ವಾಟ್ ದೇವಾಲಯವನ್ನು ಸ್ತೂಪವೆಂದು ಹೇಳಲಾಗಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸ್ತೂಪ&oldid=919317" ಇಂದ ಪಡೆಯಲ್ಪಟ್ಟಿದೆ