ಸೋದರಿ ನಿವೇದಿತಾ

ಸ್ಕಾಟ್ಸ್-ಐರಿಶ್ ಸಾಮಾಜಿಕ ಕಾರ್ಯಕರ್ತೆ ಲೇಖಕಿ , ಶಿಕ್ಷಕಿ ಮತ್ತು ಸ್ವಾಮಿ ವಿವೇಕಾನಂದರ ಶಿಷ್ಯೆ

ಸೋದರಿ ನಿವೇದಿತಾ (ಅಕ್ಟೋಬರ್ ೨೮, ೧೮೬೭ - ನವೆಂಬರ್ ೧೧, ೧೯೧೧) ವಿದೇಶದಿಂದ ಬಂದು ಭಾರತೀಯ ಆಧ್ಯಾತ್ಮವನ್ನು ಆದರಿಸಿ, ಭಾರತೀಯರ ಸೇವೆಗೆ ಅದರಲ್ಲೂ ಮಹಿಳಾ ಜಾಗೃತಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಧೀಮಂತ ಮಹಿಳೆ. ಸ್ವಾಮಿ ವಿವೇಕಾನಂದರ ಪ್ರಭಾವಕ್ಕೊಳಗಾದ ನಿವೇದಿತಾ ಅವರು, ಹಿಂದೂ ಧರ್ಮವನ್ನು ಅರ್ಥೈಸಿಕೊಂಡು, ಅದರ ಆದರ್ಶಗಳಲ್ಲಿ ತಮ್ಮ ಬಾಳುವೆಯನ್ನು ನಡೆಸಿ ಸಮಾಜ ಸೇವಕಿಯಾಗಿ ಭಾರತೀಯ ಸಮಾಜದ ಔನ್ನತ್ಯಕ್ಕಾಗಿ ಹಗಲಿರುಳೂ ಶ್ರಮಿಸಿದರು.

ಸೋದರಿ ನಿವೇದಿತಾ
Image of Sister Nivedita, sitting!
ಜನನ
ಮಾರ್ಗರೆಟ್ ಎಲಿಜಬೆತ್ ನೊಬೆಲ್

ಅಕ್ಟೋಬರ್ ೨೮, ೧೮೬೭
ಕೌಂಟಿ ಟೈರೋನ್, ಐರ್ಲೆಂಡ್
ಮರಣಅಕ್ಟೋಬರ್ ೧೧, ೧೯೧೧
ಡಾರ್ಜಿಲಿಂಗ್, ಭಾರತ
ವೃತ್ತಿ(ಗಳು)ಸಮಾಜ ಕಾರ್ಯಕರ್ತೆ, ಬರಹಗಾರ್ತಿ, ಶಿಕ್ಷಕಿ, ಸುಶ್ರೂಷಕಿ, ಆಧ್ಯಾತ್ಮ ಉಪನ್ಯಾಸಗಾರ್ತಿ
ಪೋಷಕತಂದೆ ಸ್ಯಾಮ್ಯುಯಲ್ ರಿಚ್ಮಂಡ್ ನೊಬೆಲ್ ಮತ್ತು ತಾಯಿ ಮೇರಿ ಇಸಾಬೆಲ್

ಪ್ರಾರಂಭಿಕ ಜೀವನ

ಬದಲಾಯಿಸಿ

ಸ್ವಾಮಿ ವಿವೇಕಾನಂದರ ಪ್ರಮುಖ ಅನುಯಾಯಿಗಳಲ್ಲೊಬ್ಬರಾದ ಸೋದರಿ ನಿವೇದಿತಾ ಅವರು ಜನಿಸಿದ ದಿನ ಅಕ್ಟೋಬರ್ ೨೮, ೧೮೬೭. ಐರ್ಲೆಂಡ್ ದೇಶದ ಮಗಳಾಗಿ ಜನಿಸಿದ್ದ ಮಾರ್ಗರೆಟ್ ನೊಬೆಲ್ ಬೆಳೆದ ವಾತಾವರಣ ಆಧ್ಯಾತ್ಮಿಕತೆಯಿಂದ ಕೂಡಿತ್ತು. ಅವರ ತಾಯಿ ಇಸಬೆಲ್, ತಂದೆ ಸಾಮ್ಯುಅಲ್. ಮಾರ್ಗರೆಟ್ ನೋಬೆಲ್ಲರ ಅಜ್ಜಿ ಸದಾ ಭಗವದ್ವಾಣಿಗಳನ್ನು, ಬೈಬಲ್ಲಿನ ಅನೇಕ ವಿಚಾರಗಳನ್ನೂ ಕತೆಗಳನ್ನೂ ಹೇಳುತ್ತಿದ್ದರು. ದೇವರು – ದೇಶ ಎರಡರ ಸೇವೆಗೂ ಆಕೆಯ ತಂದೆ, ತನ್ನನ್ನು ತಾನು ಅರ್ಪಿಸಿಕೊಂಡಿದ್ದರು. ಅಜ್ಜ ಹ್ಯಾಮಿಲ್ಟನ್ ಪ್ರಖರ ರಾಷ್ಟ್ರಪ್ರೇಮಿ. ಹೀಗಾಗಿ ನೊಬೆಲ್ಲರಲ್ಲಿ ಬಾಲ್ಯದಲ್ಲೇ ದೈವಭಕ್ತಿ ಮತ್ತು ರಾಷ್ಟ್ರಭಕ್ತಿ ಎರಡೂ ಬೆಳೆದ ಬರಲು ಸಹಾಯಕವಾಯಿತು.

ಸ್ವಾಮಿ ವಿವೇಕಾನಂದರ ಪ್ರಭಾವ

ಬದಲಾಯಿಸಿ

ಬಾಲ್ಯದಿಂದಲೇ ಆಧ್ಯಾತ್ಮದ ನವಿರು ಭಾವನೆಗಳನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡ ಮಾರ್ಗರೆಟ್ ನೊಬೆಲ್ಲರಿಗೆ ಲಂಡನ್ನಿನಲ್ಲಿ ಮೊತ್ತಮೊದಲು ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಅವರ ದಿವ್ಯ ಗಂಭೀರವಾಣಿಯನ್ನು ಆಲಿಸುವ ಸದವಕಾಶ ದೊರೆಯಿತು. ಅವರ ಉಜ್ವಲ ಮಾತುಗಳು ಆಕೆಯ ಹೃದಯವನ್ನು ಬೆಳಗಿದವು. ಬುದ್ಧಿಯನ್ನು ಮಥಿಸಿದವು. ಸತ್ಯದ ಹೊನಲಿನಂತೆ ಹರಿದ ಅವರ ಮಾತುಗಳಿಂದ ಮಂತ್ರಮುಗ್ಧರಾದ ಆಕೆ, ಅವರನ್ನೇ ತನ್ನ ‘ಗುರುದೇವ’ ಎಂದು ಗುರುತಿಸಿಕೊಂಡರು.

ಸ್ವತಂತ್ರ ಮನೋಭಾವದ ಈ ಧೀರ ತರುಣಿ ಮಾರ್ಗರೆಟ್ ನೊಬೆಲ್ ಅವರಿಗೆ ತನ್ನನ್ನು ತಾನು ಗುರುಗಳ ಪಾದದಲ್ಲಿ ಸಮರ್ಪಿಸಿಕೊಂಡು, ಸಮಾಜಸೇವೆಗಾಗಿ ಭಾರತಕ್ಕೆ ಬರುವ ತೀವ್ರ ಹಂಬಲವಿತ್ತು. ಸ್ವಾಮೀಜಿ ಅವರೊಂದಿಗೆ ನಿರಂತರವಾಗಿ ಪತ್ರ ಸಂಪರ್ಕದಲ್ಲಿದ್ದ ಅವರಿಗೆ ಒಮ್ಮೆ ಸ್ವಾಮೀಜಿ ಹೀಗೆ ಬರೆದರು: “ನನ್ನ ದೇಶದ ಸ್ತ್ರೀಯರಿಗೆ ವಿದ್ಯಾಭ್ಯಾಸ ಕೊಡುವ ಅಗತ್ಯ ತುಂಬಾ ಇದೆ. ಅದಕ್ಕೆ ತಕ್ಕ ಯೋಜನೆಗಳನ್ನು ಹಾಕುತ್ತಿದ್ದೇನೆ. ನಿನ್ನಿಂದ ನನಗೆ ತುಂಬಾ ಸಹಾಯವಾದೀತು. ಸಹಸ್ರಾರು ಮಹಿಳೆಯರು ಕಾಯುತ್ತಿದ್ದಾರೆ.” ಎಂದು ಬರೆದರು. ಈ ಕರೆಗೆ ಮಾರ್ಗರೆಟ್ ಭಾರತಕ್ಕೆ ಬಂದು ಇಲ್ಲಿಯ ಸ್ತ್ರೀಯರ ಅನಕ್ಷರತೆ, ಅಜ್ಞಾನಗಳನ್ನು ತೊಡೆದು ಅವರ ಸರ್ವಾಂಗೀಣ ಉದ್ಧಾರಕ್ಕೆ ತೊಡಗಬೇಕೆಂಬ ನಿರ್ಧಾರವನ್ನು ಮನದಾಳದಿಂದ ಕೈಗೊಂಡರು.

ಸ್ವಾಮೀಜಿ ಮುಂದುವರೆದು ಹೀಗೆ ಬರೆದರು: “ಇಲ್ಲಿ ಕಷ್ಟಗಳೂ ಬೇಕಾದಷ್ಟಿವೇ. ಇಲ್ಲಿನ ಸಂಕಟ ಮೂಢನಂಬಿಕೆ, ದಾಸ್ಯಮನೋಭಾವ – ಇವುಗಳನ್ನು ನೀನು ಕಲ್ಪಿಸಿಕೊಳ್ಳುವುದಕ್ಕೂ ಕೂಡ ಸಾಧ್ಯವಿಲ್ಲ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ಈಗ ನನಗೆ ಖಚಿತವಾಗಿ ಗೊತ್ತಾಗಿದೆ. ಭಾರತಕ್ಕೆ ಸೇವೆ ಸಲ್ಲಿಸುವ ವಿಷಯದಲ್ಲಿ ನಿನಗೆ ಉಜ್ವಲವಾದ ಭವಿಷ್ಯವಿದೆ. ನಿನ್ನ ವಿದ್ಯೆ, ಪ್ರಾಮಾಣಿಕತೆ, ಪರಿಶುದ್ಧತೆ, ಅನಂತಪ್ರೇಮ, ನಿರ್ಧಾರ ಮನೋಭಾವ – ಇವು ನಮಗೀಗ ಬೇಕಾಗಿರುವ ಮಹಿಳೆ ನೀನೇ ಎಂಬುದನ್ನು ತೀರ್ಮಾನಿಸಿವೆ. ಇಲ್ಲಿ ಪಾಶ್ಚಾತ್ಯ ಒಂದೂ ಇಲ್ಲ. ಇವೆಲ್ಲವನ್ನೂ ಸಹಿಸಿಯೂ ನಾನಿಲ್ಲಿ ಇರುತ್ತೇನೆ ಎಂದು ನೀನು ಧೈರ್ಯ ಮಾಡಿದರೆ ನಿನಗೆ ಸ್ವಾಗತ, ನೂರು ಸಲ ಸ್ವಾಗತ.” ಭಾರತೀಯ ಮಹಿಳೆಯರ ಸೇವೆಗಾಗಿ ದೃಢ ನಿರ್ಧಾರ ಕೈಗೊಳ್ಳುವಂತೆ ನೊಬೆಲ್ ಅವರಿಗೆ ಸ್ವಾಮೀಜಿ ಹೀಗೆ ಧೈರ್ಯ ತುಂಬಿದರು. ಜೊತೆಗೆ ಇಲ್ಲಿ ಯಾರನ್ನೂ ಆಶ್ರಯಿಸದೆ ಸ್ವಾವಲಂಬಿಕೆಯಾಗಿರಬೇಕು ಎಂದು ಒತ್ತಿ ಹೇಳಿದ ಸ್ವಾಮೀಜಿ “ನೀನು ಭಾರತಕ್ಕೆ ಎಷ್ಟಾದರೂ ಕೆಲಸ ಮಾಡು, ಇಲ್ಲಿಯ ವೇದಾಂತವನ್ನು ನಂಬು ಅಥವಾ ಬಿಡು, ನಾನು ಸಾಯುವವರೆಗೆ ಬೆಂಬಲ ನೀಡುತ್ತೇನೆ” ಎಂಬ ಭರವಸೆಯ ಮಾತುಗಳನ್ನು ಹೇಳಿದರು. ಈ ಭರವಸೆಯ ಮಾತುಗಳು ಆಕೆಯ ಮನದಾಳದಲ್ಲಿ ಅಚ್ಚೊತ್ತಿದಂತೆ ಉಳಿದವು. ಮಾರ್ಗರೆಟ್ ನೊಬೆಲ್ ತಮ್ಮ ನಾಡನ್ನು ತ್ಯಜಿಸಿ ಭಾರತವನ್ನು ತಲುಪಲು ಹಡಗನ್ನೇರಿದರು.

ಸೋದರಿ ನಿವೇದಿತಾ ಆಗಿ

ಬದಲಾಯಿಸಿ

ಮಾರ್ಗರೆಟ್ ನೊಬೆಲ್ಲರ ಜೀವನದ ಮಹಾದಿನ ೧೮೯೮, ಮಾರ್ಚ್ ೨೫ರ ಶುಕ್ರವಾರ. ಅಂದು ಸ್ವಾಮೀಜಿ ಆಕೆಯನ್ನು ತಮ್ಮ ಆರಾಧ್ಯದೈವದ ಪಾದಪದ್ಮಗಳಲ್ಲಿ ಮತ್ತು ಭಾರತದ ಸೇವೆಗೆಂದು ಸಮರ್ಪಿಸಿದರು. ಅಂದೇ ಆಕೆಯನ್ನು ಕರೆದೊಯ್ದು ಅಲ್ಲಿ ದೇವರಮನೆಯೊಳಕ್ಕೆ ಕರೆದು ಕೂಡಿಸಿದರು; ಶಿವನನ್ನು ಪೂಜಿಸುವ ವಿಧಾನವನ್ನು ಆಕೆಗೆ ಹೇಳಿಕೊಟ್ಟರು. ನಂತರ ಆಕೆಗೆ ಬ್ರಹ್ಮಚರ್ಯ ದೀಕ್ಷೆ ನೀಡಿ ಅಲ್ಲಿಯೇ ‘ನಿವೇದಿತಾ’ ಎಂಬ ಹೆಸರನ್ನು ಕೊಟ್ಟರು.

ಶಿಕ್ಷಕಿಯಾಗಿ

ಬದಲಾಯಿಸಿ

ಇಂಗ್ಲೆಂಡಿನಲ್ಲಿ ಶಿಕ್ಷಕಿಯಾಗಿದ್ದ ನಿವೇದಿತಾ ಭಾರತದಲ್ಲೂ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತ, ಆಶ್ರಮವಾಸಿಗಳಿಗೆ ಶರೀರಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳನ್ನು ವೈಜ್ಞಾನಿಕವಾಗಿ ಭೋದಿಸತೊಡಗಿದರು. ಮಹಿಳೆ ತನ್ನ ಜಾಣತನ, ತಾಳ್ಮೆ ಹಾಗೂ ಸೇವಾಮನೋಭಾವದ ಜೊತೆಗೆ ಆಧ್ಯಾತ್ಮಿಕವಾಗಿಯೂ ಪ್ರಗತಿ ಸಾಧಿಸಬಲ್ಲಳು ಎಂಬ ಸಂದೇಶವನ್ನು ನಾವು ನಿವೇದಿತಾರ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುತ್ತೇವೆ. “ಎಷ್ಟೇ ಕೆಲಸಕಾರ್ಯಗಳಿದ್ದರೂ ಧ್ಯಾನ ಪ್ರಾರ್ಥನೆಗಳಿಗೆ ಸಮಯವಿಲ್ಲ ಎಂದು ಮಾತ್ರ ಹೇಳಬೇಡ. ಅದು ಅವಿರತವಾಗಿ ಸಾಗಬೇಕು” ಎಂಬ ಸ್ವಾಮೀಜಿಯವರ ಮಾತು ಅವರ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿತ್ತು.

ಮುಂದೆ ನಿವೇದಿತಾ ಅವರು ಕೊಲ್ಕತ್ತಾದಲ್ಲಿ ಶಾಲೆ ತೆರೆಯುವ ಇಚ್ಛೆ ವ್ಯಕ್ತಪಡಿಸಿದಾಗ ಕಾಶಯಲ್ಲಿದ್ದ ಸ್ವಾಮೀಜಿ ಆಕೆಗೆ ಪ್ರೋತ್ಸಾಹರೂಪದಲ್ಲಿ “ಎಲ್ಲ ಶಕ್ತಿಗಳೂ ನಿನ್ನಲ್ಲಿಗೆ ಹರಿಯಲಿ! ಜಗನ್ಮಾತೆಯೇ ನಿನ್ನ ಬುದ್ಧಿ ಹಸ್ತಗಳಾಗಲಿ. ಅನಂತಶಕ್ತಿ ಮತ್ತು ಅನಂತಶಾಂತಿ ನಿನಗೆ ದೊರಕಲೆಂದು ಪ್ರಾರ್ಥಿಸುತ್ತೇನೆ” ಎಂದು ಪತ್ರ ಬರೆದು ಹರಸಿದರು. ಮುಂದೆ ೧೮೯೯ರಲ್ಲಿ ಸ್ವಾಮೀಜಿಯವರೊಂದಿಗೆ ಮತ್ತೊಮ್ಮೆ ಅಮೆರಿಕಕ್ಕೆ ಹೋದ ಸಂದರ್ಭದಲ್ಲಿ ಸ್ವಾಮೀಜಿಯವರು ನ್ಯೂಯಾರ್ಕಿಗೆ ತೆರಳಿ, ನಿವೇದಿತಾ ಅವರು ಶಿಕಾಗೋದಲ್ಲಿ ಉಪನ್ಯಾಸ ನೀಡುವ ಜವಾಬ್ಧಾರಿ ನಿರ್ವಹಿಸಬೇಕಾಗಿತ್ತು. “ಏನಾದರೂ ಪ್ರಾರಂಭ ಮಾಡುವಾಗ, ಎಲ್ಲಾದರೂ ಹೋಗುವಾಗ, ‘ದುರ್ಗಾ ದುರ್ಗಾ’ ಎಂದು ಉಚ್ಚರಿಸು, ಅದು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುತ್ತದೆ” ಎಂದು ಸ್ವಾಮೀಜಿ ನಿವೇದಿತಾರಿಗೆ ಧೈರ್ಯ ತುಂಬಿದ್ದರು.

ಸಮಾಜ ಸೇವಕಿಯಾಗಿ

ಬದಲಾಯಿಸಿ

ಸೋದರಿ ನಿವೇದಿತಾ ಲೇಖನಿ, ಪುಸ್ತಕಗಳನ್ನು ಹಿಡಿದು ಶಿಕ್ಷಕಿಯಾಗಿ ಕೇವಲ ಪಾಠಪ್ರವಚನ ನೀಡಲಿಲ್ಲ. ಅನೇಕ ಕಡೆ ವಿಶಿಷ್ಟ ಉಪನ್ಯಾಸಗಳನ್ನು ನೀಡಿದರು. ಭಾರತೀಯ ಸ್ತ್ರೀಯರ ಮೂಢ ನಂಬಿಕೆಗಳನ್ನೂ, ಅಜ್ಞಾನಗಳನ್ನೂ ತೊಡೆದು ಅವರ ಕರ್ತವ್ಯಪರತೆಯನ್ನು ಎಚ್ಚರಿಸಿ ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತನೆಯಲ್ಲಿ ತೊಡಗುವಂತೆ ಪ್ರೇರಣೆ ನೀಡಿದರು. ಅವರು ಕೈಯಲ್ಲಿ ಪೊರಕೆ ಬುಟ್ಟಿ ಹಿಡಿದು ಬೀದಿಗಳನ್ನು ಗುಡಿಸಿ ಸ್ವಚ್ಚಗೊಳಿಸುವುದಕ್ಕೂ ಮುಂದೆಬಂದರು. ಒಮ್ಮೆ ಕಲ್ಕತ್ತಾದಲ್ಲಿ ಪ್ಲೇಗ್ ಹರಡಿದಾಗ ನಿವೇದಿತಾ ಅವರು ಕೈಗೊಂಡ ಸ್ವಚ್ಚತಾ ಕಾರ್ಯಗಳು ಮತ್ತು ಸೇವಾಕಾರ್ಯಗಳು ಮನಮುಟ್ಟುವಂತದ್ದು. ಇದಲ್ಲದೆ, ಸ್ವಯಂಸೇವಕರನ್ನು ಸಂಘಟಿಸಿ ತಂಡ ತಂಡಗಳನ್ನಾಗಿ ಮಾಡಿ, ಪ್ಲೇಗ್ ಹರಡಿದ ಕಡೆಯಲ್ಲೆಲ್ಲಾ ಓಡಾಡಿ, ರೋಗಿಗಳನ್ನು ಶುಶ್ರೂಷೆಗೈದರು.

ಐರ್ಲೆಂಡಿನವರಾಗಿದ್ದ ನಿವೇದಿತಾ ಅವರು ಭಾರತಕ್ಕೆ ಬಂದ ಮೇಲೆ, ಸ್ವಾಮೀಜಿಯವರ ಆದೇಶದಂತೆ ಸ್ತ್ರೀಯರ ಉನ್ನತಿ ಮತ್ತು ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತ ತಮ್ಮ ಕರ್ತ್ಯವ್ಯದಲ್ಲಿ ಗಾಢವಾಗಿ ಮಗ್ನರಾಗಿರುತ್ತಿದ್ದರು. ಅನೇಕರು ಆಕೆಯನ್ನು ‘ಮ್ಲೇಚ್ಛಳು’ ಎಂದು ಕರೆದರೂ, ಅದೇ ಕಾರಣದಿಂದ ದಕ್ಷಿಣೇಶ್ವರದ ಭವತಾರಿಣಿಯ ಗುಡಿಯೊಳಗೆ ಪ್ರವೇಶ ದೊರೆಯದಿದ್ದರೂ, ಸ್ವಲ್ಪ ಕೂಡ ಗೊಣಗದೆ, ಒದಗಿಬಂದ ಪರಿಸ್ಥಿತಿಗೆ ಹೊಂದಿಕೊಂಡುಬಿಡುತ್ತಿದ್ದರು. ಹಿಂದೂ ಸಮಾಜದ ರೀತಿನೀತಿಗಳನ್ನು ಒಮ್ಮೆಯೂ ಟೀಕಿಸದೆ, ಹಿಂದೂ ದೇಶದ ಮಹಿಳೆಯರ ಉದ್ಧಾರಕ್ಕಾಗಿ ಮನಃಪೂರ್ವಕವಾಗಿ ಶ್ರಮಿಸುತ್ತಿದ್ದರು.

ಭಾರತೀಯತೆಯೊಂದಿಗೆ

ಬದಲಾಯಿಸಿ

ನಿವೇದಿತಾ ಭಾರತದಾದ್ಯಂತ ಪ್ರವಾಸ ಮಾಡಿದರು. ಭಾರತದ ಅಧ್ಯಯನ ಮಾಡಿದರು. ಭಾರತದ ಹೃದಯದ ತುಡಿತವನ್ನು ಸರಿಯಾಗಿ ಅರ್ಥಮಾಡಿಕೊಂಡ ಕೆಲವೇ ಜನರಲ್ಲಿ ಅವರೂ ಒಬ್ಬರಾಗಿದ್ದರು. ಕಾಲಕ್ರಮೇಣ ಹಿಂದೂಧರ್ಮದ ಬಗ್ಗೆ ಅತ್ಯಂತ ಸ್ಪಷ್ಟವಾದ ಪರಿಜ್ಞಾನ ಅವರಿಗಾಯಿತು. ಗುರುಕೃಪೆಯಿಂದ ಆಧ್ಯಾತ್ಮಿಕ ಜೀವನದ ಅನೇಕ ಸಿದ್ಧಿಗಳನ್ನು ಅವರು ಪಡೆದುಕೊಂಡರು. ಎಲ್ಲಕ್ಕೂ ಮಿಗಿಲಾಗಿ ಜಗನ್ಮಾತೆ ಶ್ರೀ ಶಾರದಾದೇವಿಯವರ ಕೃಪೆಗೆ ಪಾತ್ರರಾದರು. ಭಾರತದ ಅಂದಿನ ಅನೇಕ ಮಹನೀಯರಿಗೆ ನಿವೇದಿತಾ ಸ್ಪೂರ್ತಿ ನೀಡಿದರು. ಗೋಪಾಲಕೃಷ್ಣ ಗೋಖಲೆ, ರವೀಂದ್ರನಾಥ ಠಾಗೂರ್, ಜಗದೀಶ್ ಚಂದ್ರ ಬೋಸ್ ಮೊದಲಾದ ದಿಗ್ಗಜರ ಸಾಧನೆಯಲ್ಲಿ ನಿವೇದಿತಾ ಅವರ ಪಾತ್ರ ಸುಸ್ಪಷ್ಟವಾಗಿದೆ.

ಶ್ರೀಮಾತೆ ಶಾರದಾದೇವಿಯವರೊಡನೆ

ಬದಲಾಯಿಸಿ

ಶ್ರೀಮಾತೆ ಶಾರದಾದೇವಿಯವರ ಬಳಿ ನಿವೇದಿತಾ ಅವರು ಹೋದಾಗ ಅವರು ತೋರಿದ ನಿಷ್ಕಳಂಕ ಪ್ರೇಮ, ಮಧುರವಾದ ಮಾತುಗಳು, ಆಕೆಯ ಜೊತೆ ಕುಳಿತು ಊಟ ಮಾಡಿದ್ದು – ಈ ಎಲ್ಲದರಲ್ಲೂ ನಿವೇದಿತಾ ಒಬ್ಬ ಹಿಂದೂ ಮಾತೆಯಲ್ಲಿ ಅಂತರ್ಗತವಾದ ಸಭ್ಯ ಸಂಸ್ಕೃತಿಯ ರೀತಿ ನೀತಿಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿದರು. ಜಾತಿ ಮತ ದೇಶಗಳಿಗೆ ಸಂಬಂಧಿಸಿದ ಎಲ್ಲವೂ ಬಾಹ್ಯಾಚರಣೆಗಳು; ಅಂತರಂಗದ ನಿರ್ಮಲ ಪ್ರೇಮದ ಭಾವವೆಂದರೆ ಮಾನವೀಯತೆ ತುಂಬಿದ ನಡೆನುಡಿಗಳು; ಅವೇ ಸತ್ಯ ಎಂಬುದನ್ನು ಆಕೆ ಮನಗಂಡರು.

ಬರಹಗಾರ್ತಿಯಾಗಿ

ಬದಲಾಯಿಸಿ

ನಿವೇದಿತಾ Kali the Mother, The Web of Indian Life, Cradle Tales of Hinduism, An Indian Study of Love and Death, The Master as I Saw Him, Select essays, Studies from an Eastern Home, Myths of the Hindus & Buddhists, Notes of some wanderings with the Swami Vivekananda, Footfalls of Indian History, Religion and Dharma, Civic & national ideals. ಮುಂತಾದ ಹದಿನಾರು ಪುಸ್ತಕಗಳನ್ನು ಬರೆದಿದ್ದಾರೆ. “ನನ್ನ ಪುಸ್ತಕಗಳ ವಿಷಯ ಕುರಿತು ಹೇಳುವುದಾದರೆ ಅವೆಲ್ಲ ಸ್ವಾಮೀಜಿಯವರದೇ. ಅವರೇ ನನಗೆ ಶಕ್ತಿ ಸ್ಫೂರ್ತಿಗಳನ್ನಿತ್ತವರು” ಎಂಬುದು ನಿವೇದಿತಾ ಅವರ ಭಕ್ತಿಯ ನುಡಿ.

ಭಾರತೀಯ ಮಹಿಳೆಯರ ಘನತೆ ಎತ್ತಿಹಿಡಿದದ್ದು

ಬದಲಾಯಿಸಿ

“ಮನೆಯ ಹಿರಿಮೆ ಗೃಹಿಣಿಯ ತಪಸ್ಸನ್ನು ಅವಲಂಬಿಸಿರುತ್ತದೆ. ಮನೆಯಲ್ಲಿ ತಪಸ್ವಿನಿ ಯರಂತೆ ಶಾಶ್ವತವಾಗಿ, ನೀರವವಾಗಿ ಬದುಕಿದ ಹಿಂದೂ ಮಾತೆಯರು, ಪರಿಪೂರ್ಣತೆಯ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ವಿದ್ಯಾರ್ಥಿಜೀವನದ ಆದರ್ಶ ಇಲ್ಲಿರುವಷ್ಟು ಉನ್ನತವಾಗಿ ಬೇರೆ ಯಾವ ದೇಶದಲ್ಲಿಯೂ ಇಲ್ಲ. ತಮ್ಮ ಮಕ್ಕಳೆಲ್ಲರೂ ಮಹಾತ್ಮರಾಗಲಿ ಎಂದು ಎಲ್ಲ ಮಾತೆಯರೂ ಇಚ್ಛಿಸುತ್ತಾರೆ” ಎಂದು ಹೇಳುತ್ತಿದ್ದ ನಿವೇದಿತಾ “ಭಾರತೀಯ ಮಹಿಳೆಯ ಸಂತೋಷ, ಸಾಮಾಜಿಕ ಪ್ರಾಮುಖ್ಯತೆ ಮತ್ತು ಚಾರಿತ್ರ್ಯದ ಉನ್ನತಿ – ಇವೇ ರಾಷ್ಟ್ರಜೀವನದ ಅತಿ ಭವ್ಯ ಸಂಪತ್ತು” ಎಂದು ಭಾರತೀಯ ಮಹಿಳೆಯರ ಘನತೆಯನ್ನು ಎತ್ತಿಹಿಡಿದರು.

ಸ್ವಾಮಿ ವಿವೇಕಾನಂದರ ನಂತರದಲ್ಲಿ

ಬದಲಾಯಿಸಿ

೧೯೦೨ರ ಜುಲೈ ೪ರಂದು ಸ್ವಾಮೀಜಿ ಇಹಲೋಕದ ಎಲ್ಲ ಭಾರಗಳಿಂದ ಬಿಡುಗಡೆ ಹೊಂದಿ, ಶಾಂತಿ ಪಡೆದು ದೇಹತ್ಯಾಗ ಮಾಡಿದರು. ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತಾದರೂ ನಿವೇದಿತಾ, ಸ್ವಾಮಿ ವಿವೇಕಾನಂದರು ತಮಗೆ ವಹಿಸಿದ್ದ ಸೇವಾಕಾರ್ಯಗಳನ್ನು ನಿಷ್ಠೆಯಿಂದ ಮುಂದುವರಿಸಿದರು. ಶ್ವೇತ ಶುಭ್ರವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆ ಹಾಕಿಕೊಂಡು ನಾಡಿನೆಲ್ಲೆಡೆ ಸಂಚರಿಸಿ, ಹಿಂದೂ ಮಹಿಳೆಯರ ಕಣ್ಮನಗಳನ್ನು ತೆರೆಸಿದರು.

ಸೋದರಿ ನಿವೇದಿತಾ ಅವರು ೧೯೧೧ರ ಅಕ್ಟೋಬರ್ ರಂದು ಡಾರ್ಜಿಲಿಂಗಿನಲ್ಲಿ ಈ ಲೋಕವನ್ನಗಲಿದರು.

ಮಾಹಿತಿ ಕೃಪೆ

ಬದಲಾಯಿಸಿ
  1. ರಾಮಕೃಷ್ಣ ಮಿಷನ್ನಿನ ಪ್ರಕಟಣೆಯಾದ "ವಿವೇಕ ಪ್ರಭ" ಪತ್ರಿಕೆ ಜನವರಿ ೨೦೧೩ ಸಂಚಿಕೆಯಲ್ಲಿ ಪಾರ್ವತಮ್ಮ ಚಂದ್ರಣ್ಣ ಅವರ ಲೇಖನ
  2. ರಾಮಕೃಷ್ಣ ಮಿಷನ್ನಿನ ಪ್ರಕಟಣೆಯಾದ "ವಿವೇಕ ಪ್ರಭ" ಪತ್ರಿಕೆ ನವೆಂಬರ್ ೨೦೧೧ ಸಂಚಿಕೆಯಲ್ಲಿ ಸ್ವಾಮಿ ಸುನಿರ್ಮಲಾನಂದ ಅವರ ಲೇಖನ
  3. Sister Nivedita - English Wikipedia ಲೇಖನ