ಮನೆ ಸೇವಕ

(ಸೇವಕ ಇಂದ ಪುನರ್ನಿರ್ದೇಶಿತ)

ಮನೆ ಸೇವಕ ಅಥವಾ ಮನೆಗೆಲಸದವ(ಳು) ಉದ್ಯೋಗದಾತನ ಮನೆಯ ಒಳಗೆ ಕೆಲಸಮಾಡುವ ವ್ಯಕ್ತಿ. ಮನೆ ಸೇವಕರು ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕಾಗಿ, ಮಕ್ಕಳು ಮತ್ತು ಹಿರಿಯ ಅವಲಂಬಿತರಿಗೆ ಆರೈಕೆ ಒದಗಿಸುವುದರಿಂದ ಸ್ವಚ್ಛಗೊಳಿಸುವಿಕೆ ಹಾಗೂ ಮನೆ ನಿರ್ವಹಣೆಯಂತಹ ಮನೆಗೆಲಸದ ವರೆಗೆ ವಿವಿಧ ಗೃಹ ಸೇವೆಗಳನ್ನು ಮಾಡುತ್ತಾರೆ. ಇತರ ಜವಾಬ್ದಾರಿಗಳು ಅಡುಗೆ, ಬಟ್ಟೆ ಒಗೆಯುವುದು ಮತ್ತು ಇಸ್ತ್ರಿ ಮಾಡುವುದು, ಅಂಗಡಿಯಿಂದ ಆಹಾರ ಖರೀದಿ ಮತ್ತು ಇತರ ಮನೆ ಕೆಲಸಗಳನ್ನು ಒಳಗೊಳ್ಳಬಹುದು. ಅಂತಹ ಕೆಲಸ ಮಾಡುವುದು ಯಾವಾಗಲೂ ಅಗತ್ಯವಿತ್ತು, ಆದರೆ ಕೈಗಾರಿಕಾ ಕ್ರಾಂತಿ ಮತ್ತು ಶ್ರಮ ಉಳಿತಾಯ ಸಾಧನಗಳ ಆಗಮನದ ಮುಂಚೆ ಅದು ದೈಹಿಕವಾಗಿ ಹೆಚ್ಚು ಕಷ್ಟಕರವಾಗಿತ್ತು.

ಕೆಲವು ಮನೆಗೆಲಸದವರು ತಮ್ಮ ಉದ್ಯೋಗದಾತನ ಮನೆಯಲ್ಲಿ ಇರುತ್ತಾರೆ. ಕೆಲವು ಸಂದರ್ಭಗಳಲ್ಲಿ, ದೊಡ್ಡ ಮನೆಗಳಲ್ಲಿ ಸಂಕೀರ್ಣ ನಿರ್ವಹಣಾ ಕಾರ್ಯಗಳನ್ನು ಒಳಗೊಳ್ಳುವ ಕೆಲಸ ಮಾಡುವ ಸೇವಕರ ಕೊಡುಗೆ ಮತ್ತು ಕೌಶಲಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದರೆ ಬಹುತೇಕವಾಗಿ, ಅಗತ್ಯವಾದರೂ ಮನೆಗೆಲಸ ಬೇಡಿಕೆಯ ಮತ್ತು ಕಡೆಗಣಿಸಲ್ಪಟ್ಟ ಕೆಲಸವಾಗಿದೆ. ಅನೇಕ ದೇಶಗಳಲ್ಲಿ ಮನೆಗೆಲಸದವರನ್ನು ರಕ್ಷಿಸುವ ಕಾನೂನು ಕಾರ್ಯಗತವಾಗಿದೆಯಾದರೂ, ಅದನ್ನು ಹಲವುವೇಳೆ ವ್ಯಾಪಕವಾಗಿ ಜಾರಿಗೊಳಿಸಲಾಗುವುದಿಲ್ಲ. ಅನೇಕ ಆಡಳಿತ ವ್ಯಾಪ್ತಿಗಳಲ್ಲಿ, ಮನೆಗೆಲಸವನ್ನು ಕಳಪೆಯಾಗಿ ಕ್ರಮಗೊಳಿಸಲಾಗುತ್ತದೆ ಮತ್ತು ಮನೆಗೆಲಸದವರು ಗುಲಾಮಗಿರಿಯನ್ನು ಒಳಗೊಂಡಂತೆ ಗಂಭೀರ ನಿಂದನೆಗೆ ಒಳಪಡುತ್ತಾರೆ.[]

ಅನೇಕ ಮನೆಗೆಲಸದವರು ಮನೆಯಲ್ಲೇ ಇರುತ್ತಾರೆ. ಅವರು ಹಲವುವೇಳೆ ಸ್ವಂತದ ಕೋಣೆಗಳನ್ನು ಹೊಂದಿರುತ್ತಾರಾದರೂ, ಅವರ ನಿವಾಸಗಳು ಸಾಮಾನ್ಯವಾಗಿ ಕುಟುಂಬ ಸದಸ್ಯರಿಗೆ ಮೀಸಲಾದ ಕೋಣೆಗಳಷ್ಟು ಆರಾಮದಾಯಕವಾಗಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಅವರು ಅಡುಗೆ ಮನೆ ಅಥವಾ ಕೆಲವೊಮ್ಮೆ ನೆಲಮಾಳಿಗೆ ಅಥವಾ ಮೇಲಟ್ಟದಲ್ಲಿ ಸ್ಥಿತವಾಗಿರುವ ಸಣ್ಣ ಕೋಣೆಗಳಲ್ಲಿ ಮಲಗುತ್ತಾರೆ. ಮನೆಗೆಲಸದವರು ತಮ್ಮ ಸ್ವಂತ ಮನೆಯಲ್ಲಿ ಇರಬಹುದು, ಆದರೆ ಹೆಚ್ಚಿನ ವೇಳೆ ಅವರು ಉದ್ಯೋಗದಾತನ ಮನೆಯಲ್ಲಿ ಇರುತ್ತಾರೆ, ಅಂದರೆ ತಮ್ಮ ಸಂಬಳಗಳ ಭಾಗವಾಗಿ ಅವರಿಗೆ ಇರಲು ಕೋಣೆ, ಆಹಾರ ಸಿಗುತ್ತದೆ. ಕೆಲವು ದೇಶಗಳಲ್ಲಿ, ನಗರ ಮತ್ತು ಗ್ರಾಮೀಣ ಆದಾಯಗಳ ನಡುವಿರುವ ದೊಡ್ಡ ಅಂತರ, ಮತ್ತು ಗ್ರಾಮಾಂತರದಲ್ಲಿ ಉದ್ಯೋಗಾವಕಾಶಗಳ ಕೊರತೆಯ ಕಾರಣ, ಒಬ್ಬ ಸಾಮಾನ್ಯ ಮಧ್ಯಮ ವರ್ಗದ ನಗರ ಕುಟುಂಬವು ಕೂಡ ಪೂರ್ಣ ಸಮಯದ ಮನೆಗೆಲಸದವರನ್ನು ನೇಮಿಸಿಕೊಂಡು ನಿಭಾಯಿಸಬಲ್ಲದು. ಚೀನಾ, ಭಾರತ, ಮೆಕ್ಸಿಕೊ, ಮತ್ತು ಇತರ ಜನನಿಬಿಡ ಅಭಿವೃದ್ಧಿಶೀಲ ದೇಶಗಳಲ್ಲಿನ ಮನೆಗೆಲಸದವರಲ್ಲಿ ಬಹುಪಾಲು, ನಗರ ಕುಟುಂಬಗಳಿಂದ ನೇಮಕಗೊಂಡ ಗ್ರಾಮೀಣ ಪ್ರದೇಶದವರಾಗಿರುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "Domestic Work and Slavery". Archived from the original on 2014-09-30. Retrieved 2017-04-21.