ಸೆಸಿಲ್ ಬಿ ಡ ಮಿಲ್ (1881-1959). ಹಾಲಿವುಡ್‍ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ.

೧೯೨೦ ರಲ್ಲಿ ಸೆಸಿಲ್ ಬಿ ಡಮಿಲ್

ಬದುಕು ಮತ್ತು ಸಾಧನೆ

ಬದಲಾಯಿಸಿ

ಚಿತ್ರಕಥಾಲೇಖಕನೂ ನಟನೂ ಆಗಿದ್ದ ಹೆನ್ರಿ ಚರ್ಚಿಲ್ ಡ ಮಿಲ್ ಇವನ ತಂದೆ. ತಾಯಿ ನಟಿ. ಮ್ಯಾಸಚೂಸಟ್ಸಿನಿಂದ ನ್ಯೂ ಜರ್ಸಿಗೆ ವಲಸೆ ಬಂದ ತಂದೆ ಮತೋಪದೇಶಕನಾದ; ತಾಯಿ ಹೆಣ್ಣು ಮಕ್ಕಳ ಶಾಲಾ ಮೇಲ್ವಿಚಾರಕಳಾದಳು. ಸೆಸಿಲ್ 1898ರ ವರೆಗೆ ಪೆನ್ಸಿಲ್‍ವೇನಿಯ ಸೈನಿಕ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಸ್ಪ್ಯಾನಿಷ್ ಅಮೆರಿಕನ್ ಯುದ್ಧದಲ್ಲಿ ಭಾಗವಹಿಸ ಹೋಗಿ ಅಪ್ರಬುದ್ಧನೆಂದು ತಿರಸ್ಸ್ಕೃತನಾದ. 1900ರ ನ್ಯೂ ಯಾರ್ಕ್‍ನ ಅಕಾಡೆಮಿ ಆಫ್ ಡ್ರಮ್ಯಾಟಿಕ್ ಆಟ್ರ್ಸ್ ಕಾಲೇಜು ಸೇರಿದ. ಹಾರ್ಟ್ಸ್ ಆರ್ ಟ್ರಂಪ್ಸ್ ಎಂಬ ನಾಟಕದ ಮೂಲಕ ರಂತ ಪ್ರವೇಶ ಮಾಡಿದ. 1902ರಲ್ಲಿ ನಟಿ ಕಾನ್‍ಸ್ಟನ್ಸ್ ಆಡಮ್ಸ್‍ಳನ್ನು ವಿವಾಹವಾದ. ಸೋದರ ವಿಲಿಯಮ್‍ನೊಂದಿಗೆ ಹಲವು ನಾಟಕಗಳನ್ನು ಬರೆದ. ಸಂಗೀತ ವೃಂದದ, ಸಂಗೀತ ಪ್ರಧಾನ ನಾಟಕಗಳ ನಿರ್ದೇಶಕ ಹಾಗೂ ಹಾಡುಗಾರ ಆದ. 1913ರಲ್ಲಿ ಮಿತ್ರರೊಂದಿಗೆ ಕೂಡಿ ಲಾಸ್ಕಿ ಫೀಚರ್ ಪ್ಲೇ ಕಂಪನಿಯನ್ನು ಸ್ಥಾಪಿಸಿದ.

ದಿ ಸ್ಕ್ವಾ ಮ್ಯಾನ್ (1914) ಇವನ ಪ್ರಥಮ ನಿರ್ದೇಶಿತ ಚಿತ್ರ. ಡೆವಿಡ್ ಬೆಲಾಸ್ಲೊನ ಹಲವು ನಾಟಕಗಳನ್ನು ಚಿತ್ರೀಕರಿಸಿದ. ತನ್ನ ಸೋದರನೊಂದಿಗೆ ದಿ ವೈಲ್ಡ್ ಗೂಸ್ ಚೇಸ್ ಹಾಗೂ ತಾಯಿಯೊಂದಿಗೆ ದಿ ಡೆವಿಲ್ ಸ್ಟೋನ್ ಚಿತ್ರಗಳಿಗೆ ಚಿತ್ರಕಥೆ ಬರೆದ.

ಈತನ ಸಂಸ್ಥೆಯಲ್ಲೇ ವಿಶೇಷವಾಗಿ ತಯಾರಾದ ಬಣ್ಣ ಬಳಿಯುವ ಯಂತ್ರದ ಸಹಾಯದಿಂದ ಜೋನ್ ದಿ ವುಮನ್ ಎಂಬ ಪೂರ್ಣ ವರ್ಣಚಿತ್ರ ಪ್ರದರ್ಶನಕ್ಕೆ ಬಂತು. 1919ರಲ್ಲಿ ಅಮೆರಿಕದ ಖಾಸಗಿ ವಾಣಿಜ್ಯ ವಿಮಾನಯಾನ ಸಂಸ್ಥೆಯನ್ನು ಈತ ಅಸ್ತಿತ್ವಕ್ಕೆ ತಂದೆ. 1920ರಲ್ಲಿ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ. 1925ರಲ್ಲಿ ತಾಮಸ್ ಪ್ರಡ್ಯೂಸರ್ಸ್ ಡಿಸ್ಟ್ರಿಬ್ಯೂಟಿಂಗ್ ಕಂಪನಿಯನ್ನು ಕೊಂಡುಕೊಂಡು ಸಿನಿ ಕಾರ್ಪೊರೇಷನ್ ಆಫ್ ಅಮೆರಿಕ ಎಂಬ ಸ್ವಂತ ಕಂಪನಿಯನ್ನು ಸ್ಥಾಪಿಸಿದ. ಇದರೊಂದಿಗೆ ಹಲವು ಚಿತ್ರಮಂದಿರಗಳನ್ನು ಕೊಂಡುಕೊಂಡ. ಎಂ. ಜಿ. ಎಂ. ಮತ್ತು ಪ್ಯಾರಾಮೌಂಟ್ ಚಿತ್ರಸಂಸ್ಥೆಗಳಿಗಾಗಿ ಹಲವು ಚಿತ್ರಗಳನ್ನು ನಿರ್ದೇಶಿಸಿದ. ಲಕ್ಸ್ ರೇಡಿಯೊ ತಿಯೇಟರ್ ಎಂಬ ಸಂಸ್ಥೆಯನ್ನು 1936ರಲ್ಲಿ ಪ್ರಾರಂಭಿಸಿ ಚಿತ್ರಕಥೆಗಳನ್ನೇ ನಾಟಕಗಳನ್ನಾಗಿ ಮಾರ್ಪಡಿಸಿ ನಾಟಕಗಳ ಪ್ರದರ್ಶನ ನಡೆಸಿದ. 1937ರಲ್ಲಿ ಈತನ ಜನಪ್ರಿಯತೆಯನ್ನು ಅಮೆರಿಕದ ರಿಪಬ್ಲಿಕನ್ ಪಕ್ಷ ಗುರುತಿಸಿ ಅಮೆರಿಕದ ಸೆನೆಟ್ ಚುನಾವಣೆಗೆ ಸ್ಪರ್ಧಿಸಲು ಈತನ ಹೆಸರನ್ನು ಅನುಮೋದಿಸಿತು. ಆದರೆ ಈ ಅವಕಾಶವನ್ನು ಈತ ಉಪಯೋಗಿಸಿಕೊಳ್ಳಲಿಲ್ಲ. 1940ರಲ್ಲಿ ಲ್ಯಾಂಡ್ ಆಫ್ ಲಿಬರ್ಟಿ ಎಂಬ ಡಾಕ್ಯುಮೆಂಟರಿ ಚಿತ್ರವನ್ನು ತಾನೇ ನಿರ್ಮಿಸಿದ ಹಾಗೂ ಇದರ ನಿರ್ದೇಶಕ, ಕಥಾಲೇಖಕ ಮತ್ತು ಸಂಕಲನಕಾರನಾಗಿಯೂ ಕರ್ತವ್ಯ ನಿರ್ವಹಿಸಿದ. ಸೆಸಿಲ್‍ನ ಚಿತ್ರಗಳ ವೈಶಿಷ್ಟ್ಯಗಳೆಂದರೆ ನಯನಮನೋಹರ ಭವ್ಯ ದೃಶ್ಯಗಳು. ಅತಿ ಎನಿಸುವ ಧಾರ್ಮಿಕ ಕಥೆ. ಇವುಗಳ ಜೊತೆಗೆ ಹಲವಾರು ಸುಪ್ರಖ್ಯಾತ ನಟ ನಟಿಯರ ಮೇಳ. ಇಂಥ ಚಿತ್ರಗಳಿಗೆ ಈತ ಹೆಸರಾಗಿದ್ದರೂ ಇವನ ನಿರ್ದೇಶನದಲ್ಲಿ ಹಲವಾರು ಕಾಪ್ರಧಾನ ಕಥಾಚಿತ್ರಗಳು, ಸ್ನಾನಗೃಹ ದೃಶ್ಯಗಳು, ಕಾಲ್ಪನಿಕ ಕ್ರೈಸ್ತ ಧಾರ್ಮಿಕ ಕಥಾಪವಾಡ ದೃಶ್ಯಗಳು ಚಿತ್ರಿತವಾಗಿವೆ.

ದಿ ಚೀಟ್ (1915), ಜೋನ್ ದಿ ವುಮನ್ (1917), ಮೇಲ್ ಅಂಡ್ ಫೀಮೇಲ್ (1919), ದಿ ಟೆನ್ ಕಮ್ಯಾಂಡ್‍ಮೆಂಟ್ಸ್ (1926) ಮತ್ತು 1956), ದಿ ಕಿಂಗ್ ಆಫ್ ಕಿಂಗ್ಸ್ (1927), ದಿ ಸೈನ್ ಆಫ್ ದಿ ಕ್ರಾಸ್ (1932), ಕ್ಲಿಯೋಪಾತ್ರ (1934), ದಿ ಪ್ಲೇನ್ಸ್‍ಮನ್ (1936)-ಇದು ಚಿತ್ರವಿಮರ್ಶಕರಿಂದ ಅತ್ಯಂತ ಉತ್ತಮ ಚಿತ್ರವೆಂದು ಹೊಗಳಿಸಿಕೊಂಡಿತು. ಸ್ಯಾಮ್ಸನ್ ಅಂಡ್ ಡಿಲೈಲ (1949), ದಿ ಗ್ರೇಟೆಸ್ಟ್ ಷೊ ಆನ್ ಅರ್ತ್ (1952)-ಇವು ಈತನ ಪ್ರಖ್ಯಾತ ಚಿತ್ರಗಳಲ್ಲಿ ಇನ್ನು ಕೆಲವು.

1959ರಲ್ಲಿ ಈತನ ಆತ್ಮಕಥೆ ಅಚ್ಚಾಯಿತು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: