ಸೂರ್ಯ ವಾದ್ಯ-ಚಂದ್ರ ವಾದ್ಯ

ಸೂರ್ಯವಾದ್ಯ ಮತ್ತು ಚಂದ್ರ ವಾದ್ಯ ಜನಪದ ಚರ್ಮವಾದ್ಯಗಳಾದ 'ಸೂರ್ಯವಾದ್ಯ' ಮತ್ತು 'ಚಂದ್ರವಾದ್ಯ' ಪ್ರಕಾರವು ಕರಾವಳಿ ಕರ್ನಾಟಕ ಹಾಗೂ ಉತ್ತರ ಕರ್ನಾಟಕಗಳಲ್ಲಿ ಈ ಮುಕುಟವಾದ್ಯಗಳು ಇತ್ತೆಂಬುದನ್ನು ತಿಳಿಯಬಹುದು. ಈ ವಾದ್ಯಗಳು ಹೆಚ್ಚಾಗಿ ಮಠ, ದೇವಾಲಯಗಳಲ್ಲಿನ ಉತ್ಸವದಲ್ಲಿ ಉಪಯೋಗಿಸುತ್ತಿದ್ದರು. ಸುಮಾರು 1940-ರ ದಶಕದ ಲ್ಲಿ ಈ ಮುಕುಟವಾದ್ಯಗಳನ್ನು (ಸೂರ್ಯವಾದ್ಯ ಮತ್ತು ಚಂದ್ರ ವಾದ್ಯ)ಸಾಂಪ್ರದಾಯಿಕವಾಗಿ ಪಂಚವಾದ್ಯಗಳ ಜತೆಯಾಗಿ ಅಥವಾ ದೇವಸ್ಥಾನದ ಉತ್ಸವಗಳಲ್ಲಿ ನುಡಿಸುತ್ತಿದ್ಫರೆಂದು ತಿಳಿಯಲಾಗಿದೆ.

ಸೂರ್ಯವಾದ್ಯ: ಎಂಟು ಹತ್ತು ಇಂಚು ವ್ಯಾಸವುಳ್ಳ ಕಬ್ಬಿಣ ಅಥವಾ ಹಿತ್ತಾಳೆಯ ಬಳೆಗೆ ಆಡಿನ ಚರ್ಮದ ಹೊದಿಕೆ ಬಿಗಿಗೊಳಿಸಿ, ವಾದ್ಯಕಾರ ತನ್ನ ಹಣೆಯ ಮುಂಭಾಗಕ್ಕೆ ಬರುವಂತೆ ಧರಿಸುತ್ತಿದ್ದ. ತಲೆಯ ಮುಂಭಾಗದಲ್ಲಿ ಕಟ್ಟಿಕೊಳ್ಳಲು ಈ ವಾದ್ಯಕ್ಕೆ ತನ್ನದೇ ಆದ ವಿಶೇಷ ಕೊಂಡಿಗಳಿರುವ ವ್ಯವಸ್ಥೆ ಇರುವುದು. ಆಕಾರದಲ್ಲಿ ವೃತ್ತಾಕಾರ ಹೊಂದಿರುವ ಈ ವಾದ್ಯವನ್ನು 'ಸೂರ್ಯವಾದ್ಯ' ಎಂದು ಕರೆಯಲಾಗಿದೆ. ಇದೇ ಮುಕುಟವಾದ್ಯ ಕೊಂಚ ಭಿನ್ನವಾಗಿ ಅರ್ಧಚಂದ್ರಾಕೃತಿಯನ್ನು ಹೋಲುವಂತೆ ಆಕಾರದಲ್ಲಿ ತೋರ್ಪಡಿಸಿದ್ದರಿಂದ 'ಚಂದ್ರ ವಾದ್ಯ' ಎಂಬುದಾಗಿ ಕರೆಯಲಾಗಿದೆ. ಸೂರ್ಯ ಹಾಗೂ ಚಂದ್ರಾಕೃತಿಯ ಈ ಎರಡೂ ವಾದ್ಯಗಳನ್ನು 1982ರಲ್ಲಿ ಹುಬ್ಬಳ್ಳಿಯ ಮಠ ಪರಂಪರೆಯಲ್ಲಿ ಬಳಸುತ್ತಿದ್ದುದನ್ನು ಗಮನಿಸಲಾಗಿದೆ. (ಸಂದರ್ಶನ ಮಾಹಿತಿ-4-4-1982).

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ದೇವಾಲಯಗಳಲ್ಲಿ ಪ್ರಚಲಿತವಿದ್ದ ಅಂಗಭೋಗ ಮತ್ತು ರಂಗಭೋಗ ಸೇವೆಗಳಲ್ಲಿ, ದೇವರ ಉತ್ಸವ ಮೂರ್ತಿಬಲಿ (ಪ್ರದಕ್ಷಿಣೆ) ಬರುವಾಗ ಲಘು ಕುಣಿತವು ತಂತ್ರಿಗಳಿಂದ ಜರುಗುತಿತ್ತು. ಈ ಸೇವೆಯಲ್ಲಿ ದೇವಡಿಗ ಯಾನೆ ಶೇರಿಗಾರ ವಂಶಸ್ಥರು ಅಥವಾ ಪಾಟಳಿಗಳೆಂಬ ವರ್ಗದವರು ವಾದ್ಯಗಳನ್ನು ನರ್ತನಕ್ಕೆ ಹೊಂದುವಂತೆ ನುಡಿಸುತ್ತಿದ್ದರು, ಇದರ ಜೊತೆಯಾಗಿ ಮುಕುಟವಾದ್ಯ ಬಳಸುತಿದ್ದುದು ಗಮನಾರ್ಹ. ದೇವರ ಬಲಿ-ಉತ್ಸವವನ್ನು ನೋಡುತ್ತಾ ಹಿಮ್ಮುಖವಾಗಿ ವಾದ್ಯವನ್ನು (ಸೂರ್ಯ-ವಾದ್ಯಕಾರ) ನುಡಿಸಿಕೊಂಡು ಹೋಗುವುದು ಒಂದು ಸಂಪ್ರದಾಯವಾಗಿತ್ತು. ಜೊತೆಯಲ್ಲಿ ಚಾಮರ ಸೇವೆಯ ನರ್ತಕಿಯರು ದೇವರ ಉತ್ಸವದಲ್ಲಿ ಹಿಮ್ಮುಖ ನಡಿಗೆಯಿಂದ ಪಾಲ್ಗೊಳ್ಳುತ್ತಿದ್ದರು. (ಇಂದು ಈ ಬಗೆಯ ಸೇವೆಗಳು ಹಾಗೂ ಮುಕುಟವಾದ್ಯ ನುಡಿಸುವಿಕೆ ಅಪರೂಪವಾಗಿದೆ).

'ಸೂರ್ಯವಾದ್ಯ'-ನುಡಿಸುವವರು ಮತ್ತು ಈ ವಾದ್ಯ ಪರಿಚಯ ಉಳ್ಳವರು ಇಂದು ಕಾಣ ಸಿಗುವುದೇ ಅಪರೂಪವಾಗಿದೆ. ಈ ವಾದ್ಯದ ಧ್ವನಿ ಕಂಚಿನ ಸ್ವರದಂತೆ ನಿನಾದ ಹೊರ ಹೊಮ್ಮುವುದು ಈ ನಿನಾದ ಇತರೆ ಚರ್ಮ ವಾದ್ಯಗಳಿಗಿಂತ ಭಿನ್ನವಾಗಿರುವುದು ಇದರ ವಿಶೇಷತೆ. ಸಧ್ಯದ ಸ್ಥಿತಿಯಲ್ಲಿ ಈ ಮುಕುಟವಾದ್ಯಗಳನ್ನು ನುಡಿಸುವವರು ಬಹು ವಿರಳವಾಗಿದ್ದು ಒಂದಲ್ಲ ಒಂದು ದಿನ '..ಇತ್ತೆಂಬ..'-ಕೋಶಕ್ಕೆ ಸೇರಿ ವಸ್ತು ಸಂಗ್ರಹಾಲಯದಲ್ಲಿಯೋ ಅಥವಾ ದಾಖಲಾತಿ ಕೇಂಧ್ರಗಳಲ್ಲಿ ಉಳಿಯುವ ಸ್ಥಿತಿಗೆ ಬರಬಹುದು ಎಂದರೂ ತಪ್ಪಾಗದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಸೂರ್ಯವಾದ್ಯ'-ವನ್ನು ಕರಾರುವಕ್ಕಾಗಿ ನುಡಿಸುವ ಏಕೈಕ ಕಲಾವಿದ ಶ್ರೀ ದುಗ್ಗ ದೇವಡಿಗ ಇವರು ಪ್ರಸಿದ್ಧರಾಗಿದ್ದರು. ಇವರ ಕಾಲಾನಂತರ ಕೋಟೇಶ್ವರದಲ್ಲಿ ಹಾಗೂ ಉಡುಪಿಯಲ್ಲಿ 'ಸೂರ್ಯವಾದ್ಯ' ಹೊಂದಿರುವ ಕಲಾವಿದರಿದ್ದಾರೆ. ಇತ್ತಿಚಿಗೆ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರ ಹಾಗೂ ಕರ್ನಾಟ ಕಜಾನಪದ ಮತ್ತು ಯಕ್ಷಗಾನ ಅಕಾಡೆಮಿ ನಡೆಸಿದ ವಾದ್ಯಗಳ ಸಮಗ್ರ ಮಾಹಿತಿಯನ್ನು ಸಾಕ್ಷೀಕರಣಗೊಳಿಸಿದೆ.

ಉತ್ತರ ಕರ್ನಾಟಕದ ಧಾರವಾಡ-ಹುಬ್ಬಳ್ಳಿಯ ಮೂರು ಸಾವಿರ ಮಠ ಪರಂಪರೆಯಲ್ಲಿ ಈ ಮುಕುಟವಾದ್ಯಗಳು ಪಂಚವಾದ್ಯಗಳಲ್ಲಿ ಸೇರ್ಪಡೆಯಾಗಿ ನುಡಿಸುತ್ತಿದ್ದರೆಂಬುದಾಗಿ ಶ್ರೀ ವೀರಭದ್ರಪ್ಪ ಎಂಬ ಕಲಾವಿದನಿಂದ ತಿಳಿಯಲಾಗಿದೆ (ಸಂದರ್ಶನ:4-4-1982). ಶ್ರೀ ಮಠದ ಜಗದ್ಗುರುಗಳು ವಿಶೇಷವಾಗಿ ಅಡ್ಡ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೊರಟಾಗ ಈ ಮುಕುಟವಾದ್ಯಗಳನ್ನು ನುಡಿಸುವುದು ಒಂದು ಸಂಪ್ರದಾಯವಾಗಿತ್ತು. ಬುಹಶಃ ಸೂರ್ಯ-ಚಂದ್ರ-ರ ಸಾಕ್ಷಿಯೆಂದು ಅಭಿವ್ಯಕ್ತಿಸುವ ಈ ಸಂಕೇತವು ಲೋಕದೃಷ್ಟಿಯ (World View)ಪ್ರತೀಕವಾಗಿ ಬಳಕೆಯಾಗಿರುವುದನ್ನು ಇಲ್ಲಿ ಗಮನಿಸಬಹುದು. ಇಂದಿಗೂ ಸೂರ್ಯ-ಚಂದ್ರ-ರ ಚಿಹ್ನೆಗಳನ್ನು ಧರ್ಮ ಪರಂಪರೆಯ ಮೆರವಣಿಗೆಯ ಬಿರುದಾವಳಿಗಳಲ್ಲಿನ ಧ್ವಜಗಳಲ್ಲಿ ಕಾಣಬಹುದಾಗಿದೆ.

ಉತ್ತರ ಕರ್ನಾಟಕದ ಭಾಗಗಳಲ್ಲಿ ಸೂರ್ಯ ವಾದ್ಯ ನುಡಿಸುವ ವಾದ್ಯ ಪ್ರಕಾರಗಳಲ್ಲಿ ಅಥವಾ ಮೇಳದಲ್ಲಿ ಒಟ್ಟಾಗಿ ಆರು ಜನ ಕಲಾವಿದರು ಒಂದುಗೂಡಿ ನುಡಿಸುತ್ತಿರುವುದನ್ನು ಗಮನಿಸಲಾಗಿದೆ. ಸಾಮಾನ್ಯ ಹೇಳಿಕೆಯಲ್ಲಿ ಇದನ್ನು ಪಂಚವಾದ್ಯಗಳ ಮೇಳ ಎಂಬುದಾಗಿ ಕರೆಯುವರು. ಮೇಳದಲ್ಲಿ ಬಳಸುವ ವಾದ್ಯಗಳು ಮುಖ್ಯವಾಗಿ 'ಡಮರು' 'ಸೂರ್ಯವಾದ್ಯ', 'ಚಂದ್ರವಾದ್ಯ', 'ಮುಖವೀಣೆ'(ಎರಡು ಜನ ಕಲಾವಿದರು) (ಮಹಾರಾಷ್ಟ ಹಾಗೂ ಕರ್ನಾಟಕ ಗಡಿಭಾಗಗಳಲ್ಲಿ 'ಮುಖವೀಣೆ'-ಗೆ 'ಸುಂದರಿ' ವಾದ್ಯ ಎಂತಲೂ ಕರೆಯುವರು) ಮತ್ತು ಕೈ-ತಾಳ ಈ ಸಮಾಗಮದ ನಾದ ಪಂಚವಾದ್ಯದ ಸಂಗೀತವಾಗಿ ಹೊಮ್ಮುತ್ತಿತ್ತು. ಶ್ರೀ ಮಲ್ಲಿಕಾರ್ಜುನಪ್ಪ (ಸು.1894-1969) ಕಲಾಕಾರರು ಹುಬ್ಬಳ್ಳಿ ಸಂಸ್ಥಾನದ ಮಠದಲ್ಲಿ ಮುಕುಟವಾದ್ಯ ನುಡಿಸುವುದರಲ್ಲಿ ಖ್ಯಾತಿಗಳಿಸಿದ ಕಲಾವಿದರಾಗಿದ್ದರು. ಇವರ ತರುವಾಯ ಉತ್ತರ ಕರ್ನಾಟಕ ಮುಕುಟವಾದ್ಯ ಬಳಕೆ ಕ್ಷೀಣಿಸುತ್ತಾ ಬಂದಿರುವುದಾಗಿ ತಿಳಿಯಲಾಗಿದೆ. (ಸಂದರ್ಶನ-ಟಿಪ್ಪಣಿ-4-4-1982)

ಮುಕುಟವಾದ್ಯದವರ ವೇಷ-ಭೂಷಣ ಮತ್ತು ಸಂಪ್ರದಾಯ

ಮುಕುಟವಾದ್ಯ ನುಡಿಸುವವರು (ಉತ್ತರ ಕರ್ನಾಟಕ) ಲಿಂಗಧಾರಣೆಯಾಗಿರಬೇಕು. ಎರಡು ರುದ್ರಾಕ್ಷಿ ಮಣಿಯನ್ನು ಲಾಂಛನವಾಗಿ ಕೊರಳಲ್ಲಿ ಧರಿಸಿರಬೇಕು. ವೀರಶೈವ ಪಂಗಡದ ಮೊತ್ತೊಂದು ವರ್ಗ ಪಂಚಮಶಾಲಿ ಬೆಡಗಿನವರು ಒಂದು ರುದ್ರಾಕ್ಷಿಕಾಯಿ ಮಣಿಯನ್ನು ಧರಿಸಿ ಲಿಂಗಾಧಾರಣೆ ದೀಕ್ಷೆಗೆ ಒಳಗಾದರೆ ಮುಕುಟವಾದ್ಯ ನುಡಿಸಲು ಧಾರ್ಮಿಕ ಹಕ್ಕು ಹೊಂದಿದವರಾಗುತ್ತಾರೆ.

ಕಲಾವಿದರು ಶ್ವೇತವರ್ಣದ ದೋತ್ರ (ಪಂಚೆ) ಜುಬ್ಬ (ಕುರ್ತ) ಹಾಗೂ ತಲೆಗೆ ಕೆಂಪು ರುಮಾಲು ಧರಿಸಿ, ಅದರ ಮೇಲ್ಭಾಗಕ್ಕೆ ಮುಕುಟವಾದ್ಯ ಕಟ್ಟಿಕೊಳ್ಳುತ್ತಿದ್ದರು. ಮುಕುಟವಾದ್ಯಗಳಾದ 'ಸೂರ್ಯವಾದ್ಯ' 'ಚರ್ಮವಾದ್ಯ'-ಗಳಿಗೆ ಜಿಂಕೆ ಚರ್ಮವನ್ನು ಹೊರಮೈ ಕವಚವಾಗಿ ಉತ್ತರ ಕರ್ನಾಟಕದಲ್ಲಿ ಬಳಸುತ್ತಿದ್ದುದಾಗಿ ತಿಳಿದುಬಂದಿದೆ. ಇಂದು ಜಿಂಕೆ ಚರ್ಮ ಲಭ್ಯ ಇಲ್ಲದಿರುವುದರಿಂದ ಆಡಿನ ಚರ್ಮ ಬಳಸುವುದು ಪದ್ಧತಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಈ ವಾದ್ಯಗಳ ಅಲಂಕರಣಕ್ಕಾಗಿ 1962ರ ತರುವಾಯ ಕೆಂಪು, ನೀಲ, ಹಳದಿ ಬಣ್ಣದ ಕುಚ್ಚುಗಳನ್ನು ವಾದ್ಯದ ಹೊರಭಾಗಕ್ಕೆ ಸೇರ್ಪಡೆಗೊಳಿಸಿರುವರು.

ಮುಕುಟ ವಾದ್ಯ ನುಡಿಸಲು ಕೈ-ಚಳಕದ ತಂತ್ರ ಹಾಗೂ ತಾಳ ಜ್ಞಾನ ಅಗತ್ಯ. ಕಲಾಕಾರ ತನ್ನ ಹಣೆಯ ಮುಂಭಾಗಕ್ಕೆ ಧರಿಸಿದ 'ಸೂರ್ಯವಾದ್ಯ' ಅಥವಾ 'ಚಂದ್ರವಾದ್ಯ'-ದ ಎರಡೂ ಮಗ್ಗಲುಗಳಿಗೆ ತಾಡನ ಮಾಡುವ ತಂತ್ರಕ್ಕೆ ಕಿರುಬೆರಳು ಗಾತ್ರದ ಛಡಿ (ಬೆತ್ತ) ಹಾಗೂ ಬಾಗಿರುವ 'ಗುಣಿಕೆ' ಉಪಯೋಗಿಸುವರು. ವಾದ್ಯದ ಬಲಭಾಗಕ್ಕೆ ಕಲಾಕಾರ ಛಡಿ-ಯ (ಬೆತ್ತ) ಮೂಲಕ ತಾಳದ ಪೆಟ್ಟುಗಳನ್ನು (ಬೋಲ್ಸ್) ನುಡಿಸಿದರೆ, ತನ್ನ ಎಡಕೈ 'ಗುಣಿಕೆ'-ಯಿಂದ ಲಯ ಅನುಸರಿಸಿ ವಾದ್ಯದ ಮಧ್ಯಭಾಗವನ್ನು ಉಜ್ಜುತ್ತಾ ಮಂದ್ರ ಸ್ವರ ಹೊರಡಿಸುವನು. ಎಡಭಾಗದಲ್ಲಿನ ವಾದ್ಯದ ಹೊರಮೈಗೆ (ಮಧ್ಯ ಭಾಗಕ್ಕೆ) ಗೇರು ಬೀಜದ ಎಣ್ಣೆ ಹಾಗೂ ಸುಟ್ಟ ಹುಲ್ಲಿನ ಕರಿ-ಮಸಿಯನ್ನು ಮಿಶ್ರಯಿಸಿ ವಿಶೇಷವಾದ 'ಗಸಿ' (ಮಂದವಾದ ಅಂಟು) ಲೇಪಿಸಿರುತ್ತಾನೆ. ಕಲಾಕಾರ ಎಡಕೈ 'ಗುಣಿಕೆ'-ಯಿಂದ ಗಸಿಲೇಪಿತ ನಡುಭಾಗಕ್ಕೆ ಉಜ್ಜಿದಾಗ ಮಂದ್ರಸ್ವರ ಹೊಮ್ಮವುದು. ಮಂದ್ರಸ್ವರದ ನಾದ ಹಾಗೂ ಬಲಕೈಯಿಂದ ಬೀಳುವ ಛಡಿ (ಬೆತ್ತದ) ಪೆಟ್ಟುಗಳ (ನುಡಿತಗಳ) ಸಮ್ಮಿಶೃಣದ ನಾದ ಕಂಚಿನ ಸ್ವರದ ಮಾಧುರ್ಯದಂತೆ ತೇಲಿ ಬರುವುದು. ಪ್ರತಿಬಾರಿ ಮುಕುಟವಾದ್ಯಗಳನ್ನು ಬಿಗಿಗೊಳಿಸಲು ಬೆಂಕಿಯಿಂದ ಕಾಯಿಸಿಕೊಳ್ಳುವ ಔಚಿತ್ಯ ಅವಶ್ಯವಿರುತ್ತದೆ ಹಾಗೂ ಮಂದ್ರ ಸ್ವರ ಬರುವಲ್ಲಿನ ಭಾಗಕ್ಕೆ ಒಣಹುಲ್ಲಿನ ಕರಿಯನ್ನು (ಮಸಿ) ಗಸಿ ಹಚ್ಚಿದ ಭಾಗಕ್ಕೆ ಲೇಪನ ಮಾಡಿಕೊಳ್ಳಲೇಬೇಕು, ಇಲ್ಲವಾದರೆ ಮಂಧ್ರ ಸ್ವರದ ನಾದ ಸರಿಯಾಗಿ ಹೊರ ಹೊಮ್ಮಲಾರದು ಎಂದು ಕಲಾವಿದರ ಅಭಿಪ್ರಾಯ.

ಧಾರ್ಮಿಕ ಸಮಾರಂಭಗಳಲ್ಲಿ ಈ ಮುಕುಟವಾದ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಇತ್ತೀಚಿಗೆ ಈ ವಾದ್ಯಗಳನ್ನು ನುಡಿಸುವುದು ತೀರಾ ಅಪರೂಪವಾಗಿದೆ. ಈ ವಾದ್ಯ ಪರಂಪರೆ ಶೃಂಗೇರಿ ಮಠ ಪರಂಪರೆಯಲ್ಲಿಯೂ ಇದ್ದಿತು ಎಂಬುದು ಗಮನಾರ್ಹ. ಆಂಧ್ರ ಪ್ರದೇಶ ಹಾಗೂ ತಮಿಳು ನಾಡಿನಲ್ಲಿ ಈ ಮುಕುಟವಾದ್ಯಗಳು ಬಳಕೆಯಲ್ಲಿದ್ದುದಾಗಿ ಪುಣೆಯ ದಾಖಲಾತಿ ಸಂಗ್ರಹಾಲಯದ ಕೇಂದ್ರದಿಂದ ತಿಳಿಯಬಹುದಾಗಿದೆ. ತೆಲುಗಿನಲ್ಲಿ 'ಸೂರ್ಯವಾದ್ಯ'-ಕ್ಕೆ 'ಸೂರ್ಯ ಪಿರಾಯಿ'-ಎಂತಲೂ 'ಚಂದ್ರ ವಾದ್ಯ'-ಕ್ಕೆ 'ಚಂದ್ರ ಪಿರಾಯಿ' ಎಂದು ಕರೆದಿರುವರು.

ಮೂಲಗಳು

ಬದಲಾಯಿಸಿ
  • ಲೇ 11 ಸಂದರ್ಶನ: ಶ್ರೀ ಎಂ.ಕಲ್ಲಪ್ಪ ಹೂಗಾರ, ಹೂಗಾರ ಓಣಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆ (ಸಂದರ್ಶನ ದಿನಾಂಕ: 4-ಏಪ್ರಿಲ್-1982).
  • ಲೇ 11 ಸಂದರ್ಶನ: ಶ್ರೀ ದುಗ್ಗ ದೇವಡಿಗ, ತ್ರಾಸಿ ಅಂಚೆ, ಗಂಗೊಳ್ಳಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ (ಸಂದರ್ಶನ ದಿನಾಂಕ: 26-ಫೆಬ್ರವರಿ-1986).