ಸುರಪುರದ ನಾಯಕರು-ಗುಲ್ಬರ್ಗ ಜಿಲ್ಲೆಯ ಸುರಪುರವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಆ ಸುತ್ತಣ ಪ್ರದೇಶಗಳನ್ನು ಆಳಿದ ಒಂದು ಮಾಂಡಲಿಕ ಮನೆತನ. ಇವರು ಬೇಡ ಸಮುದಾಯಕ್ಕೆ ಸೇರಿದವರು.

ಇತಿಹಾಸ

ಬದಲಾಯಿಸಿ

ಕಂಪಿಲಿಯ ರಾಮನಾಥನ ಸೈನ್ಯದಲ್ಲಿ ಇವರು ಸೇವೆಸಲ್ಲಿಸುತ್ತಿದ್ದರೆಂಬ ಸಂಗತಿ ನಂಜುಂಡಕವಿಯ (ಸು.1525) ರಾಮನಾಥಚರಿತದಿಂದ ತಿಳಿದುಬರುತ್ತದೆ. ಚಾಂದಬೀಬಿಯ ಗಂಡ ಮೃತನಾದ ಮೇಲೆ ಆಕೆಗೆ ಸಮರ್ಥ ಆಡಳಿತ ನಿರ್ವಹಿಸಲು ಈ ಬೇಡ ನಾಯಕರ ಸಹಾಯ ಸಹಕಾರಗಳು ದೊರೆತಿದ್ದುವು.

ವಿಜಯನಗರದ ಅರಸರ ಸಾಮಂತರಾಗಿದ್ದ ಇವರು ತಾಳಿಕೋಟೆ ಕದನದ ಅನಂತರ ಬಿಜಾಪುರ ಸುಲ್ತಾನನ ಅಧೀನಕ್ಕೆ ಒಳಗಾದರು. ಇವರ ಶೌರ್ಯ, ಸಾಹಸಗಳನ್ನು ಗುರುತಿಸಿದ ಸುಲ್ತಾನ ಇವರ ನಾಯಕರಿಗೆ ಬಿರುದುಗಳನ್ನು ನೀಡಿ ವಾಗಣಗೇರಿಯಲ್ಲಿ ಕಂದಾಯ ವಸೂಲಿ ಮಾಡುವ ಅಧಿಕಾರ ವಹಿಸಿಕೊಟ್ಟ. ಔರಂಗಜೇಬ್ ಬಿಜಾಪುರದ ಮೇಲೆ ದಾಳಿ ಮಾಡಿದಾಗ ಇವರು ತಮ್ಮ ಶೌರ್ಯ ಪ್ರತಾಪಗಳನ್ನು ಪ್ರದರ್ಶಿಸಿದರು. ವಾಗಣಗೇರಿಯನ್ನು ಔರಂಗಜೇಬ ಆಕ್ರಮಿಸಿದ ಅನಂತರ ಬೇಡರಸ ಸುರಪುರದಲ್ಲಿ ದುರ್ಗ ಕಟ್ಟಿಕೊಂಡ. ಬೇಡನಾಯಕನ ಪರಾಕ್ರಮಕ್ಕೆ ಮೆಚ್ಚಿದ ಔರಂಗಜೇಬ್ ಅವನಿಗೆ ಹಿಂದೆ ಇದ್ದ ಎಲ್ಲ ಹಕ್ಕು, ಬಾಧ್ಯತೆಗಳನ್ನು ನೀಡಿದ.

ಹದಿನೆಂಟನೆಯ ಶತಮಾನದ ಅಂತ್ಯಭಾಗದಲ್ಲಿ ನಿಜಾಮ ಮತ್ತು ಮರಾಠರು ಒಂದಾದಾಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೇಡನಾಯಕನು ನಿಜಾಮನಿಗೆ 50,000 ರೂಪಾಯಿ ಕಾಣಿಕೆ ಸಲ್ಲಿಸಿ ಅಪಾಯದಿಂದ ಪಾರಾದ. ಪ್ರಬಲ ದೊರೆಯಾಗಿದ್ದ ಸುರಪುರದ ಯಂಕಪ್ಪನಾಯಕನ ಮೈತ್ರಿ ಗಳಿಸಲು ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರು ಪ್ರಯತ್ನಿಸಿ ವಿಫಲರಾದರು. ಯಂಕಪ್ಪನಾಯಕನ ರಾಜ್ಯದ ಹಲವು ಭಾಗಗಳನ್ನು ಟಿಪ್ಪು ಆಕ್ರಮಿಸಿದರೂ ಆತ ಸುರಪುರದ ಮೇಲೆ ದಾಳಿ ಮಾಡಲಿಲ್ಲ. ಯಂಕಪ್ಪನಾಯಕನ ಮರಣಾನಂತರ ನಿಜಾಮ ಸುರಪುರದ ಮೇಲೆ 5 ಲಕ್ಷ ರೂ.ಗಳ ಉತ್ತರಾಧಿಕಾರ ಶುಲ್ಕ ವಿಧಿಸಿದ. ಇದರಲ್ಲಿ ಬಹುಭಾಗ ವನ್ನು ನಗದು ರೂಪದಲ್ಲಿ ಸಲ್ಲಿಸಿದ ಸುರಪುರದ ಅರಸನು ಉಳಿದ ಹಣವನ್ನು ಬ್ರಿಟಿಷರಿಗೆ ಜಾಮೀನಿನ ಮೇಲೆ ಸಲ್ಲಿಸುತ್ತ ಬಂದ. ಕೃಷ್ಣಪ್ಪನಾಯಕ 1841ರಲ್ಲಿ ತೀರಿಕೊಳ್ಳುವ ವೇಳೆಗೆ ಸುರಪುರ ರಾಜ್ಯ ಸಾಲದ ಹೊರೆಗೆ ಗುರಿಯಾಗಿ ತನ್ನ ಸತ್ತ್ವವನ್ನು ಕಳೆದುಕೊಂಡಿತು. ಬ್ರಿಟಿಷರ ಮತ್ತು ನಿಜಾಮನ ಕುಟಿಲೋಪಾಯಗಳಿಂದ ಸುರಪುರದ ಬೊಕ್ಕಸ ಬರಿದಾಯಿತು.

ಕೃಷ್ಣಪ್ಪನಾಯಕ ತೀರಿಕೊಂಡಾಗ ಅವನ ಮಗ ವೆಂಕಟಪ್ಪನಾಯಕ ಅಪ್ರಾಪ್ತ ವಯಸ್ಕನಾಗಿದ್ದರಿಂದ ಮೆಡೋಸ್ ಟೇಲರ್‍ನನ್ನು ಸುರಪುರದ ರಾಜಕೀಯ ಕಾರ್ಯಭಾರಿಯಾಗಿ ನೇಮಕ ಮಾಡಲಾಯಿತು. 1853ರಲ್ಲಿ ವೆಂಕಟಪ್ಪನಾಯಕನಿಗೆ ರಾಜ್ಯದ ಆಡಳಿತವನ್ನು ವಹಿಸಿಕೊಡಲಾಯಿತು. ಬ್ರಿಟಿಷ್ ಅಧಿಕಾರಿಯೊಬ್ಬನನ್ನು ರಾಜಕೀಯ ಸಲಹೆಗಾರನನ್ನಾಗಿ ನೇಮಿಸಿಕೊಂಡು ಅವನ ವೆಚ್ಚಕ್ಕೆ 20,000 ರೂ.ಗಳನ್ನು ತೆರಬೇಕೆಂಬ ಡಾಲ್‍ಹೌಸಿಯ ಸೂಚನೆಯನ್ನು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ ವೆಂಕಟಪ್ಪನಾಯಕ ನಿರಾಕರಿಸಿದ. ಅಂತೆಯೇ ತನ್ನ ಸೈನ್ಯಕ್ಕೆ ಅರಬರು, ರೋಹಿಲರು ಮೊದಲಾದವರನ್ನು ಸೇರಿಸಿಕೊಂಡು ವ್ಯವಸ್ಥಿತಗೊಳಿಸಿದ. ನಾನಾಸಾಹೇಬನೊಡನೆ ರಾಜಕೀಯ ಸಂಪರ್ಕ ಬೆಳೆಸಿಕೊಂಡ. ಅನೇಕ ಜಮೀನುದಾರರು ವೆಂಕಟಪ್ಪನಾಯಕನಿಗೆ ಧನಸಹಾಯ ಮಾಡಲು ಮುಂದಾದರು. ಇಂಥ ಯುದ್ಧಸಿದ್ಧತೆಗಳು ಬ್ರಿಟಿಷರ ಗಮನಕ್ಕೆ ಬಾರದಿರಲಿಲ್ಲ. ಮಹಿಪಾಲ್‍ಸಿಂಗ್‍ಜವಹರ್‍ಸಿಂಗ್ ಎಂಬವನು ಸುರಪುರದ ರಾಜನಿಂದ ಪ್ರೇರಿತನಾಗಿ ಬೆಳಗಾಂವಿಯಲ್ಲಿ ಬ್ರಿಟಿಷ್ ಸೈನ್ಯ ದಂಗೆ ಏಳಲು ಉತ್ತೇಜನ ನೀಡಿದ. ಇದನ್ನರಿತ ಬ್ರಿಟಿಷರು ಮಹಿಪಾಲಸಿಂಗನನ್ನು ಬಂಧಿಸಿ, ಗುಂಡಿಟ್ಟು ಕೊಂದುದಲ್ಲದೆ ಸುರಪುರದ ನಾಯಕನಿಗೆ ಬೆದರಿಕೆ ಪತ್ರ ಕಳುಹಿಸಿದರು. ವೆಂಕಟಪ್ಪನಾಯಕ ತನ್ನ ಸ್ವಾಮಿನಿಷ್ಠೆಯನ್ನು ಸಾರಿದ. ಈ ಮಧ್ಯದಲ್ಲಿ ಸುರಪುರದಲ್ಲಿ ನಡೆದ ಹಲವು ದರೋಡೆಗಳಿಗೆ ನಾಯಕನೇ ಕಾರಣನೆಂದು ವಿಚಾರಣೆ ನಡೆಸಲು ಬ್ರಿಟಿಷರು ಕ್ಯಾಪ್ಟನ್ ಬೆಲ್‍ನನ್ನು ನೇಮಿಸಿದರು.

ಈ ವೇಳೆಗಾಗಲೇ ತಮ್ಮ ಕುಟಿಲತಂತ್ರಗಳಿಂದ ನಿಜಾಮ ಮತ್ತು ಬ್ರಿಟಿಷರು ವೆಂಕಟಪ್ಪ ನಾಯಕನನ್ನು ಕೆರಳಿಸಿದ್ದರು. ಬ್ರಿಟಿಷರ ವಿರುದ್ಧ ನಾಯಕನಿಗೆ ಸಹಾಯ ಮಾಡಲು ಮುಂಡರಗಿ ಭೀಮರಾಯ, ನರಗುಂದದ ಬಾಬಾಸಾಹೇಬ ಮೊದಲಾದವರು ಸಿದ್ಧರಿದ್ದರು. ಬ್ರಿಟಿಷರು ರಾಜಕೀಯ ಕುತಂತ್ರ ಆಪಾದನೆಯನ್ನು ಸುರಪುರದ ಮೇಲೆ ಹೊರಿಸಿ ಅದರ ಆಕ್ರಮಣಕ್ಕೆ ಸನ್ನದ್ಧರಾದರು. ಅಭೇದ್ಯವಾದ ಸುರಪುರದ ದುರ್ಗವನ್ನು ಪ್ರವೇಶಿಸಲು ಕ್ಯಾಪ್ಟನ್ ವೈಂಡ್‍ಹ್ಯಾಮ್ ಸತತ ಪ್ರಯತ್ನ ನಡೆಸಿದ. ಕೊನೆಗೂ ಭೀಮರಾಯನೆಂಬ ದೇಶದ್ರೋಹಿಯ ಕುತಂತ್ರದಿಂದಾಗಿ ಸುರಪುರ ಬ್ರಿಟಿಷರ ಕೈವಶವಾಯಿತು. ತಲೆತಪ್ಪಿಸಿಕೊಂಡು ಹೈದರಾಬಾದು ತಲುಪಿದ ವೆಂಕಟಪ್ಪನಾಯಕ ನಿಜಾಮನ ಮುಖಾಂತರ ಬ್ರಿಟಿಷರ ಬಂದಿಯಾಗಿ ಸಿಕಂದರಾಬಾದಿನ ಸೆರೆಮನೆ ಸೇರಿದ. ಮುಂದೆ ವಿಚಾರಣೆ ನಡೆಸಿದ ಬ್ರಿಟಿಷ್ ನ್ಯಾಯಾಲಯ ಘೋರಾಪರಾಧಗಳನ್ನು ಸಾಬೀತು ಮಾಡಿ ಅವನಿಗೆ ಮರಣದಂಡನೆ ವಿಧಿಸಿತು. ಆದರೆ ಮೆಡೋಸ್ ಟೇಲರ್ ಮಧ್ಯ ಪ್ರವೇಶಿಸಿ ಮರಣದಂಡನೆಯನ್ನು ಜೀವಾವಧಿ ಕಾರಾಗೃಹವಾಸಕ್ಕೆ ಇಳಿಸಿದ. ಅನಂತರ ಆ ಶಿಕ್ಷೆಯನ್ನೂ ಕೇವಲ ನಾಲ್ಕು ವರ್ಷಗಳ ಬಂಧನವಾಸಕ್ಕೆ ಸೀಮಿತಗೊಳಿಸಲಾಯಿತು. ಆದರೆ ಕಾರಾಗೃಹಕ್ಕೆ ಹೋಗುವ ಮಾರ್ಗಮಧ್ಯದಲ್ಲೇ ವೆಂಕಟಪ್ಪನಾಯಕ ಆತ್ಮಹತ್ಯೆ ಮಾಡಿಕೊಂಡು ಮರಣಹೊಂದಿದ. 1861ರಲ್ಲಿ ಸುರಪುರ ಸಂಸ್ಥಾನ ನಿಜಾಮನ ಸ್ವಾಧೀನಕ್ಕೆ ಒಳಪಟ್ಟಿತ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: