ಸುಪಾರ್ಶ್ವನಾಥ ಸ್ವಾಮಿ ಬಸದಿ, ಬಲಸೆ

ಶ್ರೀ ಸುಪಾರ್ಶ್ವನಾಥ ಸ್ವಾಮಿ ಬಸದಿಯು ಕರಾವಳಿಯ ಜೈನ ಬಸದಿಗಳಲ್ಲೊಂದು.

ಸ್ಥಳ ಬದಲಾಯಿಸಿ

ಈ ಬಸದಿಯು ಭಟ್ಕಳ ತಾಲೂಕು ಮುರ‍್ಡೇಶ್ವರ ಮಾವಳ್ಳಿ ಗ್ರಾಮದ ಬಲಸೆಯೆಂಬ ಊರಿನಲ್ಲಿದೆ. ಇದು ತುಂಬಾ ಜೀರ್ಣಗೊಂಡು ಹರಿದು ಮುರಿದು ಬಿದ್ದಿರುವ ಸ್ಥಿತಿಯಲ್ಲಿದೆ. ಆದರೆ ಮುರಕಲ್ಲಿನಿಂದ ನಿರ್ಮಾಣವಾಗಿರುವ ಗರ್ಭಗೃಹ ಮಾತ್ರ ದೂರದಿಂದಲೇ ಗೋಚರಿಸುತ್ತದೆ. ಇಲ್ಲಿಗೆ ಭಟ್ಕಳದಿಂದ ೧೫ ಕಿ.ಮೀ ದೂರ. ಮಂಗಳೂರು - ಕಾರವಾರ ರಾಷ್ಟ್ರೀಯ ಹೆದ್ದಾರಿಯಿಂದ ೧ ಕಿ.ಮೀ. ದೂರದಲ್ಲಿ ಬಸ್ತಿಮಕ್ಕಿಯ ಭತ್ತ ಬೆಳೆಯುವ ಗದ್ದೆಗಳ ಮಧ್ಯದಲ್ಲಿರುವ ಒಂದು ದಿನ್ನೆಯ ಮೇಲೆ ಇದೆ.

ಆವರಣ ಬದಲಾಯಿಸಿ

ಗರ್ಭಗೃಹದ ದ್ವಾರ ಬಂಧವೂ ಮುರಿದಿದೆ. ಮೇಲೆ ಮಾಡು, ಶಿಖರ ಇತ್ಯಾದಿ ಯಾವುದೂ ಇಲ್ಲ. ಸುತ್ತಲೂ ಮುಳ್ಳು ಗಿಡಗಂಟಿಗಳು ಬೆಳೆದುಕೊಂಡಿವೆ. ಆದರೂ ಹಿಂದೆ ಇಲ್ಲಿ ಬಸದಿಯೊಂದು ಇತ್ತು ಎಂಬುದನ್ನು ಇಲ್ಲಿ ಜರಿದು ಬಿದ್ದಿರುವ ಗೋಡೆಗಳೇ ಸಾಕ್ಷೀಕರಿಸುತ್ತವೆ. ಇದು ಸೋಂದಾ ಮಠಕ್ಕೆ ಸೇರಿರುತ್ತದೆ.

ಕಲಾಕೃತಿ ಬದಲಾಯಿಸಿ

ಇಲ್ಲಿ ಪ್ರಧಾನವಾಗಿ ಮೂರು ಮೂರ್ತಿಗಳ ಅವಶೇಷಗಳನ್ನು ಕಾಣಬಹುದು. ಅವುಗಳೆಂದರೆ ;

  • ಗರ್ಭಗೃಹದಲ್ಲಿರುವ ಶ್ರೀ ಸುಪಾರ್ಶ್ವನಾಥ ಸ್ವಾಮಿಯ ಬಿಂಬ.
  • ನಿಂತುಕೊಂಡಿರುವ ಸ್ವತಂತ್ರವಾಗಿರುವ ಒಂದು ಸ್ತ್ರೀ ಬಿಂಬ.
  • ಒಂದು ಶಿಲಾಶಾಸನ ಗರ್ಭಗೃಹದಲ್ಲಿರುವ ಭಗವಾನ್ ಸುಪಾರ್ಶ್ವನಾಥ ಸ್ವಾಮಿಯ ಬಿಂಬವು ಪರ್ಯಾಂಕಾಸನ ಭಂಗಿಯಲ್ಲಿದೆ.
  • ಇವುಗಳು ನಸು ನೀಲಿ ಬಣ್ಣ ಅಥವಾ ಬೂದು ಬಣ್ಣದ ಶಿಲೆಯಿಂದ ಮಾಡಲ್ಪಟ್ಟಿದೆ.

ಒಳಾಂಗಣ ಬದಲಾಯಿಸಿ

ಇಲ್ಲಿನ ಮೂರ್ತಿ ಸುಮಾರು ೨.೫ ಅಡಿ ಎತ್ತರವಿದೆ. ಪೀಠದ ಮೇಲೆ ಸ್ವಸ್ತಿಕ ಲಾಂಛನವು ಸ್ಪಷ್ಟವಾಗಿ ಕಾಣುತ್ತದೆ . ಸ್ವಾಮಿಯ ಕಾಲು ಮತ್ತು ತೊಡೆಯ ಭಾಗವು ಮುರಿದು ಹೋಗಿ, ಆ ಶಿಲಾಖಂಡವೇ ಇಲ್ಲಿಂದ ಕಾಣೆಯಾಗಿದೆ, ಎಡಬಲಗಳಲ್ಲಿ ನಿಂತುಕೊಂಡಿರುವ ಭಂಗಿಯ ಯಕ್ಷ ಯಕ್ಷಿಯರಿದ್ದಾರೆ. ಐದು ಹೆಡೆಗಳಿರುವ ಸರ್ಪವು ಸ್ವಾಮಿಯ ಶಿರವನ್ನು ಮೇಲ್ಗಡೆಯಿಂದ ಕಾಯುತ್ತಿದ್ದು, ಹಿಂಬದಿಯಿಂದ ಸುತ್ತಿಕೊಂಡಿದೆ. ಮೇಲ್ಗಡೆ ಮುಕ್ಕೊಡೆ ಹಾಗೂ ಕೀರ್ತಿ ಮುಖಗಳಿವೆ . ಪ್ರಭಾವಲಯದಲ್ಲಿ ಮಕರ ತೋರಣವಿದೆ. ಇದು ಸುಮಾರು ೧೩ ನೇ ಶತಮಾನದ ವಿಗ್ರಹವೆನ್ನಬಹುದು. ಗರ್ಭಗೃಹ ಶಿಲಾಮಯವಾಗಿ ನಿರ್ಮಾಣಗೊಂಡಿದೆ. ಗರ್ಭಗೃಹದ ಹೊರಗಡೆಯಲ್ಲಿ ಪ್ರಾಯಶಃ ಇನ್ನೊಂದು ಪ್ರತ್ಯೇಕ ಕೋಣೆಯಲ್ಲಿ ಸುತ್ತಲೂ ಪ್ರಭಾವಲಯವಿದ್ದು ನಿಂತುಕೊಂಡಿರುವ ಸುಮಾರು ಮೂರುವರೆ ಅಡಿ ಎತ್ತರದ ಒಂದು ಸ್ತ್ರೀಯ ಮೂರ್ತಿ ಇದೆ. ಬಲ ಕೈಯಲ್ಲಿ ಅಭಯ ಮುದ್ರೆಯನ್ನು ತೋರಿಸುತ್ತಾ ಎಡಗೈಯಲ್ಲಿ ದುಂಡಧಾರಿಯಾಗಿ ಯಾವುದೋ ವಸ್ತುವನ್ನು ತನ್ನ ಅಂಗೈಯಲ್ಲಿ ಹಿಡಿಕೊಂಡಿದೆ. ಅಲಂಕೃತವಾದ ಸೀರೆಯನ್ನೂ , ಕುಪ್ಪಸವನ್ನೂ ತೊಟ್ಟುಕೊಂಡಿದೆ. ಬಳೆ, ಆಭರಣಗಳನ್ನು ಧರಿಸಿಕೊಂಡಿದೆ. ಕಿವಿಯಾಭರಣ , ಮೂಗುತಿಗಳನ್ನು ಹಾಕಿಕೊಂಡಿದೆ. ಸಾಂಪ್ರದಾಯಿಕ ರೀತಿಯಲ್ಲಿ ತಲೆಯನ್ನು ಬಾಚಿಕೊಂಡಿದೆ. ಮುಖ ಮುದ್ರೆಯು ಅಷ್ಟು ಪ್ರಸನ್ನವಾಗಿರುವಂತೆ ಕಂಡುಬರುವುದಿಲ್ಲ. ಎರಡೂ ಕಡೆ ಇರುವ ಪ್ರಭಾವಳಿಯು ಕೆಳಗೆ ಸ್ತಂಭಗಳನ್ನೂ ಮೇಲ್ಗಡೆ ಲತಾ ತೋರಣವನ್ನೂ ಹೊಂದಿದೆ. ಇಲ್ಲಿಯವರು ಇದನ್ನು ಪದ್ಮಾವತಿ ಎಂದು ಕರೆಯುತ್ತಾರೆ. ಆದರೆ ಸಂಶಯವಿದೆ. ಬಸದಿಯ ಬಳಿಯಲ್ಲಿ ಒಂದು ಪ್ರಾಚೀನ ಶಿಲಾಶಾಸನವಿದೆ . ದೀರ್ಘವಾಗಿ ಬರೆದಿದ್ದರೂ ಅಕ್ಷರಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಶಾಸನದ ಮೇಲ್ಗಡೆಯಲ್ಲಿ ಮಧ್ಯದ ಮಂಟಪವೊಂದರಲ್ಲಿ ಪದ್ಮಾಸನಸ್ಥ ಜಿನ ಬಿಂಬವೊಂದು ಮೇಲ್ಗಡೆಯಲ್ಲಿ ಕೀರ್ತಿ ಮುಖವಿದ್ದಂತೆ ಕಂಡುಬರುತ್ತದೆ. ಹಿಂದೆ ಇದರ ಮೇಲೆ ಇದ್ದಿರಬಹುದಾದ ಇತರ ಆಕೃತಿಗಳು, ಹೊಡೆತಗಳಿಂದಾಗಿ ಅಥವಾ ಮಳೆ ಬಿಸಿಲುಗಳಿಂದಾಗಿ ಸವೆದು ಹೋಗಿ ಈಗ ಅಸ್ಪಷ್ಟವಾಗಿವೆ.[೧]

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೬೬.