ಸಿರಾಜುದ್ದೌಲ

ಮಿರ್ಜಾ ಮಹಮ್ಮದ್ ಸಿರಾಜುದ್ದೌಲ (೧೭೩೩ - ಜುಲೈ ೨, ೧೭೫೭) ಬಂಗಾಳ, ಬಿಹಾರ ಮತ್ತು ಒಡಿಶಾ ಪ್ರಾಂತ್ಯಗಳ ಕೊನೆಯ ಸ್ವತಂತ್ರ ನವಾಬ. ೧೭೫೭ ರಲ್ಲಿ ಬ್ರಿಟಿಷರ ಮೇಲೆ ಪ್ಲಾಸಿ ಕದನವನ್ನು ಸೋತ ನಂತರ ಈತನ ಆಳ್ವಿಕೆ ಕೊನೆಗೊಂಡಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯ ಆರಂಭವನ್ನೂ ಈ ಕದನದಿಂದಲೇ ಗುರುತಿಸಲಾಗುತ್ತದೆ. ಸಿರಾಜುದ್ದೌಲ ೧೭೫೬ ರ ಏಪ್ರಿಲ್ ನಲ್ಲಿ ಬಂಗಾಳದ ನವಾಬನಾದ. ಆಗ ಆತನಿಗೆ ೨೩ ವರ್ಷ ವಯಸ್ಸು. ಸಿರಾಜುದ್ದೌಲ ನವಾಬನಾಗಿದ್ದರ ಬಗ್ಗೆ ಅನೇಕರಲ್ಲಿ ಅಸಮಾಧಾನವಿತ್ತು. ಆತನ ದೊಡ್ಡಮ್ಮ ಘಸೇಟಿ ಬೇಗಮ್, ರಾಜಾ ರಾಜ್ ಬಲ್ಲಭ್, ಮೀರ್ ಜಾಫರ್ ಅಲಿ ಖಾನ್, ಶೌಕತ್ ಜಂಗ್ ಮೊದಲಾದವರು ಇವರಲ್ಲಿ ಪ್ರಮುಖರು. ತನ್ನ ದೊಡ್ಡಮ್ಮನಿಂದ ತೀವ್ರ ಪ್ರತಿಭಟನೆಯನ್ನು ನಿರೀಕ್ಷಿಸಿ ಸಿರಾಜುದ್ದೌಲ ಆಕೆಯನ್ನು ಬಂಧನದಲ್ಲಿಟ್ಟ. ಹಾಗೆಯೇ ತನಗೆ ಆಪ್ತರಾದವರನ್ನು ಉನ್ನತ ಸ್ಥಾನಗಳಿಗೆ ನೇಮಿಸಿಕೊಂಡ. ಶೌಕತ್ ಜಂಗನ ಪ್ರತಿಭಟನೆಯನ್ನು ಹತ್ತಿಕ್ಕಿದ.

ಪ್ಲಾಸಿ ಕದನಸಂಪಾದಿಸಿ

ಪ್ಲಾಸಿ ಕದನ ಭಾರತೀಯ ಇತಿಹಾಸದ ಮುಖ್ಯ ಘಟನೆಗಳಲ್ಲಿ ಒಂದಾಗಿದೆ. ಸಿರಾಜುದ್ದೌಲ ೧೭೫೭ ರಲ್ಲಿ ಕೋಲ್ಕತ್ತ ವನ್ನು ಆಕ್ರಮಿಸಿದ. ಇದರ ಸೇಡು ತೀರಿಸಲು ಬ್ರಿಟಿಷರು ಮದರಾಸಿನಿಂದ ಸೈನ್ಯವನ್ನು ರವಾನಿಸಿದರು. ಸಿರಾಜುದ್ದೌಲನ ಸೈನ್ಯ ಮತ್ತು ಬ್ರಿಟಿಷರ ಸೈನ್ಯ ಪ್ಲಾಸಿಯಲ್ಲಿ ಸಂಧಿಸಿದವು. ಸಿರಾಜುದ್ದೌಲನ ಬಗ್ಗೆ ಅಸಮಾಧಾನ ಹೊಂದಿದ್ದ ಮೀರ್ ಜಾಫರ್ ಬ್ರಿಟಿಷರ ಪರವಾಗಿ ಕಾರ್ಯ ನಿರ್ವಹಿಸಿದ ನಂತರ ಬ್ರಿಟಿಷರು ರಾಬರ್ಟ್ ಕ್ಲೈವ್ ನ ನೇತೃತ್ವದಲ್ಲಿ ಕದನವನ್ನು ಗೆದ್ದರು. ಜುಲೈ ೨, ೧೭೫೭ ರಲ್ಲಿ ಸಿರಾಜುದ್ದೌಲನನ್ನು ಮರಣದಂಡನೆಗೆ ಗುರಿಪಡಿಸಲಾಯಿತು.