ಸಿದ್ಧವನಹಳ್ಳಿ ಕೃಷ್ಣಶರ್ಮ

(ಸಿದ್ಧವ್ವನಹಳ್ಳಿ ಕೃಷ್ಣಶರ್ಮ ಇಂದ ಪುನರ್ನಿರ್ದೇಶಿತ)

ಸಿದ್ಧವನಹಳ್ಳಿ ಕೃಷ್ಣಶರ್ಮ (ಜುಲೈ ೪, ೧೯೦೪ - ಅಕ್ಟೋಬರ್ ೧೪, ೧೯೭೩) ಗಾಂಧಿ ವಿಚಾರವಾದಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ವಾಗ್ಮಿಗಳಾಗಿ, ಲೇಖಕರಾಗಿ, ಸಹಕಾರಿ ಕ್ಷೇತ್ರದ ಹರಿಕಾರರಾಗಿ ಮತ್ತು ಶ್ರೇಷ್ಠ ಪತ್ರಕರ್ತರಾಗಿ ಕನ್ನಡ ನಾಡಿನಲ್ಲಿ ಮಹಾನ್ ಸೇವೆ ಸಲ್ಲಿಸಿದವರಾಗಿದ್ದಾರೆ.

ಸಿದ್ಧವನಹಳ್ಳಿ ಕೃಷ್ಣಶರ್ಮ
ಜನ್ಮನಾಮಜುಲೈ ೪, ೧೯೦೪
ಚಿತ್ರದುರ್ಗ ಜಿಲ್ಲೆಯ ಸಿದ್ಧವನಹಳ್ಳಿ
ಮರಣಅಕ್ಟೋಬರ್ ೧೪, ೧೯೭೩
ವೃತ್ತಿಸಾಹಿತಿ, ಪತ್ರಕರ್ತ, ಅಧ್ಯಾಪಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಸಹಕಾರಿ ಕ್ಷೇತ್ರದ ಹರಿಕಾರ, ಗಾಂಧೀ ವಿಚಾರವಾದಿ, ಸಂಸ್ಥೆಗಳ ಸ್ಥಾಪಕ

ಜೀವನಸಂಪಾದಿಸಿ

ಕೃಷ್ಣಶರ್ಮರು ಹುಟ್ಟಿದ್ದು ೧೯೦೪ರ ಜುಲೈ ೪ರಂದು ಚಿತ್ರದುರ್ಗ ತಾಲ್ಲೂಕಿನ ಸಿದ್ಧವನ ಹಳ್ಳಿಯಲ್ಲಿ. ತಂದೆ ರಂಗಾಚಾರ್ ಮತ್ತು ತಾಯಿ ಶೇಷಮ್ಮನವರು. ತಂದೆಯ ತಾತಂದಿರು ಮೈಸೂರು ಪರಕಾಲ ಮಠದ ಕಾರ್ಯಕರ್ತರಾಗಿದ್ದರೆ ಅವರ ಅಣ್ಣಂದಿರು ಪರಕಾಲಮಠದ ಸ್ವಾಮಿಗಳಾಗಿದ್ದ ಪ್ರಕಾಂಡ ಪಂಡಿತರಾದ ಶ್ರೀ ಶ್ರೀನಿವಾಸ ಬ್ರಹ್ಮತಂತ್ರ ಪರಕಾಲ ಯತೀಂದ್ರರು. ಇವರು ಅಂದಿನ ಮೈಸೂರು ಮಹಾರಾಜರಿಗೆ ರಾಜಗುರುಗಳಾಗಿದ್ದವರು. ಇಂತಹ ವಂಶದಲ್ಲಿ ಹುಟ್ಟಿದ ಕೃಷ್ಣಶರ್ಮರಿಗೂ ಸ್ವಾಭಾವಿಕವಾಗಿ ವಿದ್ವತ್‌, ಸಂಸ್ಕಾರ, ಸುಸಂಸ್ಕೃತ ನಡವಳಿಕೆಗಳು ರಕ್ತಗತವಾಗಿ ಬಂದಿದ್ದವು.

ಶರ್ಮರ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಹುಟ್ಟಿದ ಹಳ್ಳಿಯಲ್ಲಿಯೆ. ಶಾಲೆಯ ಉಪಾಧ್ಯಾಯರಾಗಿದ್ದ ಸೂರಪ್ಪನವರು ಸಂಜೆಯ ವೇಳೆ ಓದುತ್ತಿದ್ದ ಭಾರತವಾಚನ ಇವರನ್ನು ಅಪಾರವಾಗಿ ಆಕರ್ಷಿಸಿತ್ತು.

ಕೃಷ್ಣಶರ್ಮರು ಮಾಧ್ಯಮಿಕ ಶಾಲೆಗೆ ಸೇರಿದ್ದು ಚಿತ್ರದುರ್ಗದ ಆಂಗ್ಲೋಏರ್ನಾಕ್ಯುಲರ್ ಶಾಲೆಗೆ. ಅಲ್ಲಿನ ಕನ್ನಡ ಪಂಡಿತರಾದ ಗರಣಿ ರಂಗಾಚಾರ್ಯರು ವ್ಯಾಕರಣದಲ್ಲಿ ನಿಷ್ಣಾತರಾಗಿದ್ದು ಸಂಸ್ಕೃತ, ಕನ್ನಡ ಎರಡು ಭಾಷೆಗಳಲ್ಲೂ ಪಂಡಿತರಾಗಿದ್ದರು. ಇವರ ಪ್ರೋತ್ಸಾಹದಿಂದ ಕೃಷ್ಣಶರ್ಮರಿಗೆ ಕನ್ನಡದಲ್ಲಿ ಅಭಿರುಚಿ ಬೆಳೆಯತೊಡಗಿತು. ಹೈಸ್ಕೂಲಿಗೆ ಬಂದಾಗ ಹನುಮಂತರಾಯರೆಂಬ ಕನ್ನಡ ಪಂಡಿತರು ಛಂದಸ್ಸನ್ನು ಕಲಿಸಿದರು. ಜೊತೆಗೆ ಚಿಕ್ಕಪ್ಪನವರ ಮನೆಯಲ್ಲಿ ತಂದಿಟ್ಟಿದ್ದ ಶ್ರೀರಾಮ ಪಟ್ಟಾಭಿಷೇಕ, ರಾಮಶ್ವಮೇಧ, ಆನಂದ ರಾಮಾಯಣ ಮುಂತಾದ ಕೃತಿಗಳಲ್ಲದೆ ದೈವಶಿಖಾಮಣಿ ಅಳಸಿಂಗಾಚಾರ್ಯರ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಗ್ರಂಥಗಳನ್ನೆಲ್ಲ ಓದಿ ಪರಿಚಯ ಮಾಡಿಕೊಂಡರು.

ಒಮ್ಮೆ ಹೈಸ್ಕೂಲಿನಲ್ಲಿದ್ದಾಗ ಇನ್‌ಸ್ಪೆಕ್ಷನ್‌ಗಾಗಿ ಬಂದ ಇನ್‌ಸ್ಪೆಕ್ಟರು ತರಗತಿಯಲ್ಲಿ ಪರೀಕ್ಷೆ ನಡೆಸಿ ಇವರಿಗಿದ್ದ ಸಂಸ್ಕೃತ, ಕನ್ನಡದ ಜ್ಞಾನವನ್ನು ಕಂಡು ಬಹುಮಾನ ರೂಪವಾಗಿ ಬಿ. ವೆಂಕಟಾಚಾರ್ಯರ ‘ವಂಗವಿಜೇತ’, ‘ವಿಷವೃಕ್ಷ’ ಕಾದಂಬರಿಗಳನ್ನು ನೀಡಿದರಂತೆ. ಹೀಗೆ ದೊರೆತ ಕನ್ನಡ ಕಾದಂಬರಿಗಳನ್ನು ಓದುತ್ತಾ ಹೋದಂತೆ ಕೃಷ್ಣಶರ್ಮರಲ್ಲಿ ಕನ್ನಡದ ಬಗ್ಗೆ ಹೆಚ್ಚು ಹೆಚ್ಚು ಆಸ್ಥೆ ಬೆಳೆಯತೊಡಗಿತು. ಹೀಗೆ ಓದುತ್ತಾ ಹೋದಂತೆಲ್ಲ ಬರವಣಿಗೆಯನ್ನೂ ಪ್ರಾರಂಭಿಸಿ, ಚಿಕ್ಕಪ್ಪನೊಡನೆ ಸೇರಿ ಹೊರತಂದ ಕೈಬರಹದ ಪತ್ರಿಕೆ ‘ವಾಣಿವಿಲಾಸ’. ಒಂದೆರಡು ಸಂಚಿಕೆಯ ನಂತರ ನಿಂತುಹೋದ್ದರಿಂದ, ಮೈಸೂರಿನ ‘ಮಧುರವಾಣಿ’ ಪತ್ರಿಕೆಗೆ ಕೆಲ ಕತೆಗಳನ್ನು ಬರೆದರು. ಕಾಲೇಜಿಗೆ ಸೇರಿದ್ದು ಮೈಸೂರಿನಲ್ಲಿ.

ಮೊದಲ ಬಿ.ಎ. ಓದುತ್ತಿದ್ದಾಗ ಗಾಂಧೀಜಿಯವರ ಕರೆಗೆ ಓಗೊಟ್ಟು ಕಾಲೇಜು ತೊರೆದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದರು.

೧೯೨೦-೨೧ರ ಸುಮಾರಿನಲ್ಲಿ, ಆಯುರ್ವೇದ, ಯೋಗ, ಶಿಕ್ಷಣ ತಜ್ಞರಾಗಿದ್ದ ಪಂಡಿತ ತಾರಾನಾಥರ ಪರಿಚಯವಾಗಿ ‘ಪ್ರೇಮಾಯತನ’ ಆಶ್ರಮದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದರು. ಹುಡುಗ ಸಂನ್ಯಾಸಿಯಾಗಿ ಬಿಡುತ್ತಾನೆ ಎಂದು ಹೆದರಿದ ಮನೆಯವರು ಹಿಂದಕ್ಕೆ ಕರೆತಂದು ೧೯೨೫ರಲ್ಲಿ ಮದುವೆ ಮಾಡಿದರು. ಮದುವೆಯಾದದ್ದು ಹೈದರಾಬಾದಿನ ಸಬ್‌ಇನ್‌ಸ್ಪೆಕ್ಟರರ ಪುತ್ರಿಯಾದ್ದರಿಂದ ಹೈದರಾಬಾದಿಗೆ ಉದ್ಯೋಗಕ್ಕಾಗಿ ತೆರಳಿ ಮೆಥಡಿಸ್ಟ್‌ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಸೇರಿದರು. ಆಗ ಹೈದರಾಬಾದಿನ ಶಾಲೆಗಳಲ್ಲಿ ಕನ್ನಡವನ್ನೂ ಉರ್ದುವಿನಲ್ಲಿ ಬೋಧಿಸುತ್ತಿದ್ದರು. ಇವರು ಕನ್ನಡವನ್ನೂ ಕನ್ನಡದಲ್ಲೆ ಬೋಧಿಸಿದ ಮೊದಲ ಅಧ್ಯಾಪಕರೆನಿಸಿದರು.

ಕನ್ನಡದ ಕೆಲಸಸಂಪಾದಿಸಿ

ಅಧ್ಯಾಪಕರಾಗಿದ್ದರೂ ನಿಜಾಮರ ಆಡಳಿತದ ವಿರುದ್ಧ ತೆಲುಗು, ಮರಾಠಿ, ಕನ್ನಡ ಸಂಘಗಳನ್ನೂ ಸ್ಥಾಪಿಸಿ , ಆಯಾಯ ಭಾಷೆಯ ಜನ ಒಂದೆಡೆ ಸೇರುವಂತೆ ಮಾಡುತ್ತಿದ್ದ ರಾಜಕೀಯ ನಾಯಕರಿಗೆ ಒತ್ತಾಸೆಯಾಗಿ ಕನ್ನಡಿಗರನ್ನೂ ಒಗ್ಗೂಡಿಸುವ ಕೆಲಸವನ್ನು ಶರ್ಮರು ಕೈಗೊಂಡರು. ಖಾದಿ ಪ್ರಚಾರ, ಪ್ರಭಾತ್‌ ಫೇರಿ, ರಾಷ್ಟ್ರೀಯ ಹಾಡುಗಳನ್ನೂ ಸಾರ್ವಜನಿಕವಾಗಿ ಹಾಡುವುದು, ಸಾಮೂಹಿಕಗಾನ ಇವುಗಳಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಿದ ನಿಜಾಮ್‌ ಸರಕಾರ ಶರ್ಮರನ್ನು ಹೈದರಾಬಾದಿನಿಂದ ಗಡಿಪಾರುಮಾಡಿತು. ಅಲ್ಲಿಂದ ಚಿತ್ರದುರ್ಗಕ್ಕೆ ಹಿಂದಿರುಗಿದ ಶರ್ಮರು ಕನ್ನಡ ಕೆಲಸವನ್ನು ಮುಂದುವರೆಸಿದರು. ಧಾರವಾಡದಲ್ಲಿ ಬೇಂದ್ರೆ, ಗೋಕಾಕ್‌, ಬೆಟಗೇರಿ ಕೃಷ್ಣಶರ್ಮ ಮುಂತಾದವರು ನಡೆಸುತ್ತಿದ್ದ ಗೆಳೆಯರ ಗುಂಪಿನ ಸದಸ್ಯರಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.

ಗಾಂಧೀಜಿಯವರ ಜೊತೆಸಂಪಾದಿಸಿ

೧೯೪೧ರ ಸುಮಾರಿಗೆ ಅಹಮದಾಬಾದಿಗೆ ತೆರಳಿ ಗಾಂಧೀಜಿಯವರ ಆಶ್ರಮದಲ್ಲಿ ಕೆಲಕಾಲವಿದ್ದು, ಗಾಂಧೀಜಿಯವರ ದಿನಚರಿಯ ಬಗ್ಗೆ ‘ವಾರ್ಧಾಯಾತ್ರೆ’ ಮತ್ತು ‘ಪರ್ಣಕುಟಿ’ ಎಂಬ ಎರಡು ಗ್ರಂಥಗಳನ್ನೂ ರಚಿಸಿದರು . ಇವೆರಡೂ ಗಾಂಧೀಜಿಯವರ ಬಗ್ಗೆ ಬರೆದ ಶ್ರೇಷ್ಠ ಗದ್ಯ ಕೃತಿಗಳೆನಿಸಿವೆ.

ಪತ್ರಿಕೋದ್ಯಮದಲ್ಲಿಸಂಪಾದಿಸಿ

1942ರ ಸುಮಾರಿಗೆ ಬೆಂಗಳೂರಿಗೆ ಹಿಂದಿರುಗಿದ ಶರ್ಮರು ತಿ.ತಾ.ಶರ್ಮರು ನಡೆಸುತ್ತಿದ್ದ ವಿಶ್ವಕರ್ನಾಟಕ ಪತ್ರಿಕೆಯ ಸಹಸಂಪಾದಕತ್ವವನ್ನು ವಹಿಸಿಕೊಂಡರು. ಪತ್ರಿಕೆಯ ಮೂಲಕ ಯುವಜನರಲ್ಲಿ ರಾಷ್ಟ್ರೀಯ ಭಾವನೆಯನ್ನೂ ನಿಸ್ವಾರ್ಥ ಮನೋಭಾವವನ್ನೂ ಪ್ರೇರೇಪಿಸುವುದು ಅವರ ಗುರಿಯಾಗಿತ್ತು. ಜೊತೆಗೆ ಭೂದಾನ ಹಾಗೂ ಸಹಕಾರ ಚಳವಳಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು.

ವಿಶ್ವಕರ್ನಾಟಕ ಪತ್ರಿಕೆಯ ಸಹಸಂಪಾದಕರಾದಾಗ, ಸಂಪಾದಕರಾದ ತಿ.ತಾ. ಶರ್ಮರ ಲೇಖನ ಯಾವುದು, ಕೃಷ್ಣಶರ್ಮರ ಲೇಖನ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗದ ಏಕರೂಪದ ಬರವಣಿಗೆ ಈ ಈರ್ವರದಾಗಿತ್ತು. ಇಬ್ಬರದೂ ಒಂದು ರೀತಿಯ ಹರಿತವಾದ ಭಾಷಾಪ್ರಯೋಗ, ಓದುಗರಲ್ಲಿ ಕಿಚ್ಚೆಬ್ಬಿಸುವ ಪದ ಪ್ರಯೋಗ, ರಾಷ್ಟ್ರೀಯ ಭಾವನೆಗಳನ್ನು ಬಡಿದೆಬ್ಬಿಸುವ ದಿಟ್ಟತನದ ಬರವಣಿಗೆ. ಇವುಗಳ ಜೊತೆಗೆ ಇವರು ನಿರ್ವಹಿಸುತ್ತಿದ್ದ ‘ಮಾತಿನ ಮಂಟಪ’, ‘ಚಿಂತನ-ಮಂಥನ’ ಅಂಕಣಗಳು ಬಹು ಪ್ರಸಿದ್ಧವಾಗಿದ್ದವು. ವಿಶ್ವಕರ್ನಾಟಕ ಪತ್ರಿಕೆಯಲ್ಲದೆ ವಾಹಿನಿ, ಜಯಕರ್ನಾಟಕ, ನವೋದಯ, ಭೂದಾನ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನುಡಿ ಮುಂತಾದ ಪತ್ರಿಕೆಗಳಲ್ಲಿಯೂ ಕೃಷ್ಣಶರ್ಮರು ಕಾರ್ಯನಿರ್ವಹಿಸಿದರು.

ಸಂಘ ಸಂಸ್ಥೆಗಳ ಸ್ಥಾಪನೆಸಂಪಾದಿಸಿ

ಕೃಷ್ಣಶರ್ಮರು ಹಲವಾರು ಸಂಘ ಸಂಸ್ಥೆಗಳ ಸ್ಥಾಪನೆಗೂ ಕಾರಣರಾದರು. ಗಾಂಧಿಜಯಂತಿಯನ್ನು ಆಚರಿಸಿ ಉಳಿದ ಹಣದಲ್ಲಿ ಪುಸ್ತಕಭಂಡಾರವನ್ನೂ ಸ್ಥಾಪಿಸಿದ್ದಲ್ಲದೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಗಾಂಧಿಸಾಹಿತ್ಯಸಂಘವನ್ನು ಸ್ಥಾಪಿಸಿದರು . ಇದಲ್ಲದೆ ಸಾರ್ವಜನಿಕರ ಉಪಯೋಗಕ್ಕಾಗಿ ಮಲ್ಲೇಶ್ವರಂ ಶ್ರೀರಾಮ ಕೋ-ಆಪರೇಟಿವ್‌ ಬ್ಯಾಂಕ್‌, ಶ್ರೀ ಆಂಜನೇಯ ಕೋ-ಆಪರೇಟಿವ್‌ ಬ್ಯಾಂಕ್‌, ಬೆಂಗಳೂರು ಎಜುಕೇಷನ ‌ಸೊಸೈಟಿ, ಗಣೇಶನಗರ ನಿವೇಶನದಾರರ ಸಂಘ, ಮೈಸೂರಿನ ವಿದ್ಯೋದಯಸಭಾ, ಶ್ರೀನಿವಾಸ ಮಂದಿರ ಧರ್ಮಸಂಸ್ಥೆ, ಬೆಂಗಳೂರು ನಗರ ಪುಸ್ತಕ ಭಂಡಾರ, ಪ್ರಭಾತ್‌ ಸಾಹಿತ್ಯ, ಮುಂತಾದವುಗಳಲ್ಲದೆ ಹೈದರಾಬಾದಿನಲ್ಲೂ ಕೆಲ ಸಂಘಸಂಸ್ಥೆಗಳನ್ನು ಸ್ಥಾಪಿಸಿ ೪೦ಕ್ಕೂ ಹೆಚ್ಚು ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಕೃತಿಗಳುಸಂಪಾದಿಸಿ

ಅನುವಾದ ಶರ್ಮರ ಆಸಕ್ತಿಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು ಕೆ.ಎಂ. ಮುನ್ಷಿಯವರ ‘ಕೃಷ್ಣಾವತಾರ’, ನೆಹರುರವರ ‘ಗ್ಲಿಂಪ್ಸ್‌ ಆಫ್‌ ವರ್ಲ್ಡ್ ಹಿಸ್ಟರಿ’, ವಿನೋಬಾ ಭಾವೆಯವರ ‘ಗೀತಾ ಪ್ರವಚನ’ ಮುಂತಾದ ಮಹತ್ವದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಲ್ಲದೆ, ಇಂಗ್ಲಿಷ್‌, ಹಿಂದಿ, ತೆಲುಗು ಭಾಷಣಗಳನ್ನೂ ಪರಿಣಾಮಕಾರಿಯಾಗಿ ಕನ್ನಡಕ್ಕೆ ಅನುವಾದ ಮಾಡುತ್ತಿದ್ದುದರಿಂದ ರಾಜಕೀಯ ನಾಯಕರೆಲ್ಲರೂ ತಮ್ಮ ಭಾಷಣದ ತರ್ಜುಮೆಗೆ ಇವರನ್ನೇ ಕರೆಯುತ್ತಿದ್ದರು. ವಿನೋಬಾರವರು ಭೂದಾನ ಯಜ್ಞ ಪ್ರಚಾರ ಯಾತ್ರೆ ಕೈಗೊಂಡಾಗ ಅವರೊಡನಿದ್ದು ಅನುವಾದ ಕಾರ್ಯವನ್ನು ಮಾಡಿದರು. ಗಾಂಧಿಸಾಹಿತ್ಯ, ವಿನೋಬಾ ಸಾಹಿತ್ಯ, ಸರ್ವೋದಯ ಸಾಹಿತ್ಯ, ವ್ಯಕ್ತಿ ಚತ್ರ, ಧಾರ್ಮಿಕ ಮುಂತಾದವುಗಳಿಗೆ ಸಂಬಂಧಿಸಿದಂತೆ ಶರ್ಮರು ರಚಿಸಿರುವ ಸಾಹಿತ್ಯ ಕೃತಿಗಳ ಒಟ್ಟು ಸಂಖ್ಯೆಯೇ ಸುಮಾರು ೧೪೦ಕ್ಕೂ ಹೆಚ್ಚು.

‘ಜಗತ್ಕಥಾವಲ್ಲರಿ’ಯು ಒಂದು ವಿಶಿಷ್ಟ ಕೃತಿಯಾಗಲು ಒಂದು ಪ್ರಮುಖ ಕಾರಣವೆಂದರೆ ನೆಹರು ರವರ ‘ಗ್ಲಿಂಪ್ಸ್‌ಸ್‌ ಆಫ್‌ ವರ್ಲ್ಡ್ ಹಿಸ್ಟರಿ’ಯನ್ನು ತಿ.ತ. ಶರ್ಮರೊಡನೆ ಸೇರಿ ಅನುವಾದಿಸಿದ್ದು, ಆದರೆ ಅದರಲ್ಲಿ ಕೃಷ್ಣಶರ್ಮರ ಭಾಗ ಯಾವುದು, ತಿ.ತಾ. ಶರ್ಮರ ಭಾಗ ಯಾವುದು ಎಂದು ಪತ್ತೆ ಹಚ್ಚಲಾಗದಂತಹ ಅನುವಾದವಿದ್ದು, ಈ ಇಬ್ಬರೂ ಹತ್ತು ಹತ್ತು ಪತ್ರಗಳನ್ನು ಅನುವಾದಿಸಿದ ಏಕರೂಪದ ಬರವಣಿಗೆಯಿಂದ ಕೂಡಿರ ವಿಶಿಷ್ಟ ಗ್ರಂಥವಾಗಿದೆ.

ಇದಲ್ಲದೆ ಶರ್ಮರ ಇತರ ಅನುವಾದಗಳೆಂದರೆ – ಸಹಕಾರ, ಸರ್ವೋದಯ, ಭೂದಾನದ ಕತೆ, ವಿನೋಬಾ, ಭೂದಾನಯಜ್ಞ, ವಿನೋಬಾ ವಿಚಾರ ಲಹರಿ ಮುಂತಾದ ವಿನೋಬಾರವರ ಸಾಹಿತ್ಯ ಕೃತಿಗಳು.

ಯತಿರಾಜ ರಾಮಾನುಜ, ದೀಪಮಾಲೆ, ಕುಲದೀಪಕರು, ಕನ್ನಡದ ಕಿಡಿಗಳು, ಸರದಾರ್ ವಲ್ಲಬಾಯ್‌ ಪಟೇಲ್‌, ಜಮನ್‌ಲಾಲಾ‌ಬಜಾಜ್‌, ಸತಿ ಕಸ್ತೂರಿಬಾ, ನೆನಪಿನ ಚಿತ್ರಗಳು ಮುಂತಾದವು ವ್ಯಕ್ತಿಚಿತ್ರಗಳು.

ಸಹಕಾರ-ಪಂಚಾಯಿತಿ, ಮಾತಿನ ಮಂಟಪ, ನಮ್ಮ ಊರು,ನಮ್ಮ ಭೂಮಿ ಮುಂತಾದವು ಇತರ ಪ್ರಮುಖ ಕೃತಿಗಳು.

ಸಂವಾದಮಾಲೆ, ಪ್ರಸಾರ ದೀಕ್ಷೆ, ಸಂಕ್ಷಿಪ್ತ ಆತ್ಮಕಥೆ, ಮಂಗಳ ಪ್ರಭಾತ, ರಾಜಕೀಯ ಪತ್ರಗಳು, ಗೀತಾಮಾತೆ ಮೊದಲಾದವು ಗಾಂಧಿ ಸಾಹಿತ್ಯ ಕೃತಿಗಳು.

ಸರ್ವೋದಯ ಯಾತ್ರೆ, ಸರ್ವೋದಯ ಒಂದು ದರ್ಶನ, ಸರ್ವೋದಯ ಸಾಂಸ್ಕೃತಿಕ ಆಧಾರ ಮೊದಲಾದವು ಸರ್ವೋದಯ ಕೃತಿಗಳು – ಹೀಗೆ ಸುಮಾರು ನೂರಾರು ಹೆಚ್ಚು ವೈವಿಧ್ಯಮಯ ಕೃತಿಗಳನ್ನೂ ರಚಿಸಿದ್ದರೂ ಬಹುಪಾಲು ಕೃತಿಗಳು ಗಾಂಧಿವಿಚಾರಧಾರೆ, ವಿನೋಬರವರ ವಿಚಾರಧಾರೆಗೆ ಮೀಸಲಾಗಿದ್ದು, ಸತ್ಯ, ನಿಷ್ಠೆ, ರಾಷ್ಟ್ರೀಯ ಭಾವನೆಗಳ ಜೊತೆಗೆ ನಿಸ್ವಾರ್ಥಜೀವನದ, ಸೇವಾ ಮನೋಭಾವದ, ಸಹಕಾರದ ತತ್ತ್ವಗಳನ್ನು ಮುಂದಿನ ಜನಾಂಗಕ್ಕೆ ತಿಳಿಸಲು ರಚಿಸಿದ ಕೃತಿಗಳಾಗಿವೆ.

ಸಿದ್ಧವನಹಳ್ಳಿ ಕೃಷ್ಣಶರ್ಮರ ಬಹುಮುಖ ಪ್ರತಿಭೆಗೆ ಗೌರವ ಸೂಚಿಸಲು ಅಭಿಮಾನಿಗಳು, ಗೆಳೆಯರು ಅರ್ಪಿಸಿದ ಗೌರವ ಗ್ರಂಥ ಸಿದ್ಧಹಸ್ತ (೧೯೭೩).

ವಿದಾಯಸಂಪಾದಿಸಿ

ಇಂತಹ ವಿಶಿಷ್ಟ ಶೈಲಿಯ ಬರಹಗಾರ, ಮೋಡಿ ಮಾಡುವ ಮಾತಿನ ಚತುರ ನಾಲ್ಕು ವರ್ಷಗಳ ಕಾಲ ಹಾಸಿಗೆ ಹಿಡಿದು ಮಲಗಿದ್ದಲ್ಲದೆ ಮಾತನಾಡಲೂ ಆಗದ ಸ್ಥಿತಿ ತಲುಪಿದ್ದರು. ಗಾಂಧೀಜಿ, ವಿನೋಬ ಅವರ ಸಂದೇಶಗಳನ್ನು ಕನ್ನಡ ನಾಡಿಗೆ ಬಿತ್ತಿದ ಶರ್ಮರು ನಿಧನರಾದದ್ದು ೧೯೭೩ರ ಅಕ್ಟೋಬರ್ ೧೪ರಂದು.

ಜನ್ಮಶತಾಬ್ದಿಸಂಪಾದಿಸಿ

೨೦೦೪ರಲ್ಲಿ ಶರ್ಮರ ಜನ್ಮಶತಾಬ್ದಿ ಸಂದರ್ಭದಲ್ಲಿ, ಸಿದ್ಧವನಹಳ್ಳಿ ಕೃಷ್ಣಶರ್ಮರ ವಿಶಿಷ್ಟ ರೀತಿಯ ನಾಡು-ನುಡಿ, ದೇಶಸೇವೆಯನ್ನು ನೆನಪಿಸುವ ಸಲುವಾಗಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಸರ್ವೋದಯ ಸಂಪುಟ, ನಾಡು-ನುಡಿ ಸಂಪುಟ, ಮತ್ತು ರಾಮಾವತಾರ ಸಂಪುಟ ಎಂಬ ಬೃಹತ್‌ ಸಂಪುಟಗಳು ಬಿಡುಗಡೆ ಮಾಡಲಾಯಿತು.

ಕೃಪೆಸಂಪಾದಿಸಿ

ಕಣಜ