ಸಾವಯವದ ಸಾಧ್ಯತೆ

Organic matter 1

ಸಹಜ ಕೃಷಿ ಇಲ್ಲಾ ಸಾವಯವ ಕೃಷಿಯತ್ತ ಹೊರಳುವುದು ಇಂದು ಅನಿವಾರ್ಯವಾಗಿದೆ. ಅಂದರೆ ಪೂರ್ತಿಯಾಗಿ ಸಾಂಪ್ರದಾಯಿಕ ಕೃಷಿಯತ್ತ ಹೊರಳಬೇಕೆಂದಲ್ಲ ಹಾಗೆ ಹೊರಳುವುದು ಸುಲಭದ ಮಾತೂ ಅಲ್ಲ. ಯಾಕೆಂದರೆ ನಾವು ಬಿಸಿಲುಗುದುರೆಯ ಬೆನ್ನು ಹತ್ತಿ ಓಡಿ ಓಡಿ ದೂರ ಹೋಗಿದ್ದು ಸಾಕಷ್ಟು ದಣಿವೂ ನಮಗಾಗಿದೆ. ಒಮ್ಮೆಲೆ ಅಷ್ಟು ವೇಗದಿಂದ ಹಿಂದೆ ಬರಲು ಶಕ್ತಿಯೂ ಇಲ್ಲ, ನಿಧಾನವಾಗಿಯಾದರೂ ಹಿಂದಿರುಗಬೇಕಾಗಿದೆ ಎಂಬ ಮಾತನ್ನು ಒಪ್ಪಿಕೊಳ್ಳಬೇಕಾಗಿದೆ. ಅದಕ್ಕಾಗಿ ಹಿಂದಿನ ರೈತರು ಅನುಸರಿಸುತ್ತಿದ್ದ ಕೆಲವು ವಿಧಾನಗಳನ್ನು ಇಂದಿನ ಕೃಷಿಯಲ್ಲಿ ಅಳವಡಿಸಿಕೊಂಡರೆ ಕೆಲವಾದರೂ ಸಮಸ್ಯೆಗಳಿಗೆ ಪರಿಹಾರ ದೊರಕಬಲ್ಲದು. ಉತ್ಪಾದನಾ ವೆಚ್ಚವೂ ಕಡಿಮೆಯಾದೀತು. ಆ ವಿಧಾನಗಳೆಂದರೆ ಹದಾ, ಬೆದಿ, ಹಂಗಾಮು ಅತಿ ಮುಖ್ಯವಾದವು. ಸೆಗಣಿ ಗೊಬ್ಬರದ ಬಳಕೆ, ಮಣ್ಣಿನ ಹದಾ, ಪರಿಸರದ ಸಮತೋಲನವನ್ನು ಕಾಪಾಡುವ ಇನ್ನೂ ಹಲವಾರು ವಿಧಾನಗಳು ಇವೆ. ‘ಹದ ನೋಡಿ ಹರಗು’ ಇದೊಂದು ಹಳೆಯ ಗಾದೆಮಾತು. ನವಿಂದು ಭೂಮಿಯ ‘ಹದ’ವೆಂದರೇನೆಂಬದೇ ತಿಳಿಯದವರಾಗಿದ್ದೇವೆ. ಬೆಳಕಾಗುವುದರಲ್ಲಿ ರೈತ ಹೊಲದಲ್ಲಿರುತ್ತಿದ್ದ. ಈಗ ಹತ್ತು ಗಂಟೆಯಾದರೂ ಹೊಲಕ್ಕೆ ಹೋಗುವುದಿಲ್ಲ. ಹೊಲದ ಹದವೆಂದರೆ ಹೊಲದ ಮಣ್ಣು ಬಿರುಸಾಗಿರಬಾರದು. ಹೊಲದಲ್ಲಿ ತೇವಾಂಶ ಹೆಚ್ಚಿದ್ದು ರಾಡಿಯೂ ಇರಬಾರದು. ಅಂತಹ ಸಂದರ್ಭ ನೋಡಿ ಗಳೆ ಹೊಡೆಯುವುಚದರಿಂದ ಭೂಮಿಯ ಮಣ್ಣನ್ನು ಮೃದುವಾಗಿರಿಸಲುಬರುತ್ತದೆ. ಅಂಥ ಹೊಲದಲ್ಲಿ ಬೀಜಗಳು ಚೆನ್ನಾಗಿ ಬೆಳೆಯುತ್ತವೆ. ಹದ ಎಂದರೆ ಹೊಲದಲ್ಲಿ ಗೊಬ್ಬರ ಹಸಿ ಇರಬೇಕು. ಮಣ್ಣನ್ನುಮುಟಿಗೆಯಲ್ಲಿ ಹಿಡಿದು ಉಂಡಿ ಮಾಡಿದರೆ ಉಂಡಿ ಆಗಬೇಕು, ಅದು ಹದ ಬಂದ ಕಾಲ. ಟ್ರ‍್ಯಾಕ್ಟರ್‌ ಬೇಸಾಯದಿಮದ ಭೂಮಿಗೆ ಮಣ್ಣಿಗೆ ಎಷ್ಟಾದರೂಅನುಕೂಲವಿದೆ ಎಂಬುದನ್ನು ನಮ್ಮ ಕರಷಿ ವಿಜ್ಞಾನಿಗಳು, ಸಂಶೋಧಕರು ಈಗಲೂ ಬಾಯಿ ಬಿಡುತ್ತಿಲ್ಲ. ‘ಬೆದಿ’ ನೋಡಿ ಬಿತ್ತು: ಎನ್ನುವುದು ಇನ್ನೊಂದು ಗಾದೆ ಮಾತು. ಬಿತ್ತುವಾಗ ಭೂಮಿ ಒಂದು ರೀತಿಯಲ್ಲಿ ಹದಮಾಡಿ ಇಟ್ಟಂತಾಗಿದ್ದು ಮಣ್ಣಿನಲ್ಲಿ ಬೀಜ ಚೆಲ್ಲಿದರೆ ತಾನೇ ಮಣ್ಣಲ್ಲಿ ಮುಳುಗಬೇಕೆಂದು ಹೇಳುತ್ತಾರೆ. ಭೂಮಿಯ ಮಣ್ಣು ಮೃದುವಾಗಿದ್ದರೆ ಮಾತ್ರ ಇದು ಸಾಧ್ಯ. ರಾಸಾಯನಿಕ ಗೊಬ್ಬರ ಬಳಸಿ ಬಳಸಿ ಭೂಮಿಯ ಮಣ್ಣು ಕೆಟ್ಟಿದೆ. ಅದಕ್ಕೆ ನಮ್ಮ ತಿಪ್ಪೆಯ ಗೊಬ್ಬರ ಅಲಕ್ಷ್ಯ ಮಾಡಿದ್ದೇ ಕಾರಣವಾಗಿದೆ. ಸಾವಯವ ಪದಾರ್ಥಗಳನ್ನು ಎಷ್ಟು ಸಾಧ್ಯವೋ ಅಷ್ಟನ್ನು ಮಣ್ಣಿಗೆ ಸೇರಿಸಬೇಕು. ಇದು ಸಾವಯವ ಕೃಷಿಯ ಮುಖ್ಯ ಉದ್ದೇಶ. ದಾರಿಯಲ್ಲಿ ಸೆಗಣಿ ಬಿದ್ದರೆ ಅದನ್ನು ಕಾಲಿನಿಂದ ಗುರ್ತಿಸಿ ‘ಇದನ್ನು ನಾನು ಒಯ್ಯುತ್ತೇನೆ’ ಎಂದು ಸಂಕೇತ ಮಾಡಿ ಹೋಗುತ್ತಿದ್ದರು. ಇಂದು ನೋಡಿದರೆ ಸಗಣಿ ಇಲ್ಲಿ ಬಿದ್ದರೂ ನೋಡುವವರಿಲ್ಲ. ಬಾಗಿಲಲ್ಲೇ ಸೆಗಣಿ ಬಿದ್ದರೂ ಮನೆಯಲ್ಲಿರುವ ಹೆಂಗಸರು ಗಂಡಸರು ನೋಡುವುದಿಲ್ಲ.

Organicmatter

ಹಂಗಾಮಿಗನಸರಿಸಿ ಬೆಳೆ ಮಾಡುವುದು: ಹಂಗಾಮುಗಳಲ್ಲಿ ಎರಡು ವಿಧಗಳು: ಮುಂಗಾರಿ ಹಾಗೂ ಹಿಂಗಾರಿ. ಬೆಳೆಗಳನ್ನು ಹಂಗಾಮಿಗೆ ಅನುಸರಿಸಿ ಮಾಡುವುದರಿಂದ ಕಳೆಗಳ ನಿಯಂತ್ರಣ ಮಾಡಲು, ಕೂಲಿಕಾರರ ಕೊರತೆ ನೀಗಿಸಲು, ಕೀಟ ಹಾಗೂ ರೋಗಗಳ ಬಾಧೆಯಿಂದ ಬೆಳೆಗಳನ್ನು ರಕ್ಷಿಸಲು ಬರುತ್ತದೆ. ಮುಂಗಾರಿ ಹಂಗಾಮಿನಲ್ಲಿ ಚಳಿಗಾಲವಿರುತ್ತದೆ. ನಂತರ ಬೇಸಿಗೆ ಪ್ರಾರಂಭವಾಗುವುದು. ಮಳೆಗಾಲವಿರುವುದರಿಂದ ಮುಂಗಾರಿಯಲ್ಲಿ ಜೋಳ ಬಿತ್ತಿದರೆ ಕಳೆ ಕಸಗಳು ಹೆಚ್ಚುವುವು. ಕಾಳುಕರ‍್ರಗಾಗುತ್ತವೆ. ಒಕ್ಕುವ ಸಮಯದಲ್ಲಿ ಒಕ್ಕಣೆ ಮಾಡಲು ಮಳೆಗಾಲವಿದ್ದು ಕೊಯ್ಲು ಮತ್ತು ಒಕ್ಕಣೆಗೆ ತೊಂದರೆಯಾಗುತ್ತದೆ. ಅದೆ ಜೋಳವನ್ನು ಹಿಂಗಾರಿಯಲ್ಲಿ ಬಿತ್ತಿದರೆ ಹಿಂಗಾರಿಯಲ್ಲಿ ಚಳಿ ಇರುವುದರಿಂದ ಸುಳಿ ಬೀಳುವ, ಹೇನು ನುಸಿಗಳ ಕಾಟ, ಕಾಳು ಕೊರೆವ ಕೀಟದ ಹಾವಳಿ ಇಲ್ಲದೆ, ಕಳೆಕಸಗಳ ಸಮಸ್ಯೆ ಇಲ್ಲದೆ ಉತ್ತಮ ರೀತಿಯ ಬೆಳೆ ಬರುವುದು. ಹಾಗೂ ಕೊಯ್ಲಿನ ಸಂದರ್ಭದಲ್ಲಿ ಒಕ್ಕುವಾಗ ಮಳೆ ಇಲ್ಲದಿರುವುದರಿಂದ ಅನುಕೂಲಕರವಾಗುವುದು. ಮುಂಗಾರಿನಲ್ಲಿ ಮಳೆ ಬರುವದೆಂಬ ಭಯದಿಂದ ಕೂಲಿಗಳು ಕೇಳಿದಷ್ಟು ಹಣ ಕೊಟ್ಟು ಕೊಯ್ಲು ಮಾಡಬೇಕಾಗುತ್ತದೆ. ಹಿಂಗಾರಿಯಲ್ಲಿ ಯಾವ ಭಯವೂ ಇಲ್ಲ. ಹೆಚ್ಚಾಗಿ ಹಿಂಗಾರಿ ಬೆಳೆಗಳು ಹುಟ್ಟಲು ಅನುಕೂಲಕರ ತೇವಾಂಶವಿದ್ದರೆ ಸಾಕು. ಚಳಿಯ ವಾತಾವರಣದಲ್ಲೇ ಬೆಳೆಯುತ್ತದೆ. ಇನ್ನೊಂದು ಉದಾಹರಣೆ ಎಂದರೆ ಡಿ.ಸಿ.ಎಚ್. ಹತ್ತಿಯನ್ನು ಮುಂಗಾರಿಯಲ್ಲಿ ಬೆಳೆಯುವುದರಿಂದ ಕಳೆ ಕಸಗಳ ಸಮಸ್ಯೆ, ರೋಗ ಕೀಟಗಳ ಉಪದ್ರವ, ಹತ್ತಿ ಬಿಡಿಸುವಾಗ ಮೇಲೆ ಮಳೆಯಾದೀತೆಂಬ ಭಯವಿರುತ್ತದೆ. ಅದರ ಬದಲಾಗಿ ಜೈಧರ ಹತ್ತಿಯನ್ನು (ಹಿಂಗಾರಿಯಲ್ಲಿ ಈಗಲೂ ಕುಂದಗೋಳ ತಾಲೂಕಿನಲ್ಲಿ ರೈತರೂ ಬೆಳಯುತ್ತಿರುವಂತೆ) ಬೆಳೆದರೆ, ಕಳೆ ಕಸಗಳ ಬಾಧೆ ಇರದು. ರೋಗ ಕೀಟಗಳ ಬಾಧೆ ಇರದು. ಕೊಯ್ಲಿಗೆ ಬಂದಾಗ ಮಳೆ ಇರುವುದಿಲ್ಲ. ಹೀಗೆ ಹಲವಾರು ರೀತಿಯ ಲಾಭಗಳು ರೈತರಿಗೆ ಆಗುತ್ತವೆ. ಆದರೆ ಇಂದಿನ ಹೈಬ್ರಿಡ್ (ಸಂಕರಣ) ತಳಿಗಳ ಬೆಳೆಗಳಿಗೆ, ಆಧುನಿಕ ಕೃಷಿ ಪದ್ಧತಿಯಲ್ಲಿ ಇದು ಸಾಧ್ಯವಿಲ್ಲ. ಇದು ಸಾಧ್ಯವಾಗುವುದು ಜವಾರಿ ಬೀಜಗಳನ್ನು ಬಿತ್ತಿದರೆ ಮಾತ್ರ ಮೇಲಿನ ಅನುಕೂಲತೆ ಸಿಗುತ್ತದೆ. ಹಿಂದಿನವರು ಅಷ್ಟೇ ಏಕೆ ಇಂದಿಗೂ ಸಾಕಷ್ಟು ರೈತರು ಜವಾರಿ ಬೀಜಗಳನ್ನು ಹಂಗಾಮಿಗನುಸರಿಸಿಯೇ ಬೆಳೆಯುತ್ತಿದ್ದಾರೆ. ಈ ಸಂಕರಣ ತಳಿಯ ಬೀಜಗಳು ಯಾವುದೇ ಹಂಗಾಮಿನಲ್ಲಿಯೂ ಬೆಳೆಯಬಲ್ಲವು. ಆದರೆ ಸಮಸ್ಯೆಗಳು ಬಹಳ. ಹದಾ, ಬೆದಿ, ಹಂಗಾಮು ಮತ್ತು ಹವಾಮಾನಗಳನ್ನು ಒಕ್ಕಲುತನ ಮಾಡುವವರು ಅನುಸರಿಸಿದರೆ ಸಾಕಷ್ಟು ಸಮಸ್ಯೆಗಳ ಪರಿಹಾರ ಸಾಧ್ಯವಿದೆ.