ಸರಳ ಮದ್ದು ಶುಂಠಿ
ಸಾವಿರಾರು ವರ್ಷಗಳಿಂದಲೂ ಶುಂಠಿ ನಮ್ಮ ಆಹಾರ ಸಂಸ್ಕೃತಿ ಮತ್ತು ಔಷಧ ಸಂಸ್ಕೃತಿ ಎರಡರಲ್ಲೂ ಮಹತ್ವದ ಸ್ಥಾನ ಗಳಿಸಿಕೊಂಡಿದೆ. ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಇದರ ಬಳಕೆ ಹೆಚ್ಚು.ಶೀತವಾಗಲಿ, ಅಜೀರ್ಣವಾಗಲಿ, ತಲೆನೋವಾಗಲಿ... ಮನೆಮದ್ದುಗಳ ಪೈಕಿ ತಕ್ಷಣ ನೆನಪಿಗೆ ಬರುವುದು ಶುಂಠಿ. ಅರ್ಧಕಪ್ ಶುಂಠಿ ಕಷಾಯ ಕುಡಿದರೆ ಸಣ್ಣಪುಟ್ಟ ತೊಂದರೆಗಳೆಲ್ಲಾ ಮಾಯ. ಹೀಗಾಗಿಯೇ ನಮ್ಮ ಹಿತ್ತಲುಗಳಲ್ಲಿ ಶುಂಠಿಗಿಡಕ್ಕೆ ಕಾಯಂ ಸ್ಥಾನ. ಶಹರಗಳಲ್ಲಿಯೂ ಮಡಿಕೆಗಳಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು. ಶುಂಠಿ ತೀವ್ರ ಥರದ ಸಂಧಿವಾತವನ್ನೂ ನಿಯಂತ್ರಣಕ್ಕೆ ತರುತ್ತದೆ ಎನ್ನುತ್ತಾರೆ ಡೆನ್ಮಾರ್ಕ್ನ ಒಡೆನ್ಸ್ ವಿಶ್ವವಿದ್ಯಾಲಯದ ಡಾ.ಕೃಷ್ಣ ಶ್ರೀವಾತ್ಸವ. ಸಂಧಿವಾತದಿಂದ ಬಳಲುತ್ತಿದ್ದ ವ್ಯಕ್ತಿಗೆ ಅವರು ನಿತ್ಯ 50 ಗ್ರಾಂ ನಷ್ಟು ಶುಂಠಿಯನ್ನು ಒಂದು ತಿಂಗಳು ಸೇವಿಸಲು ಸಲಹೆ ಮಾಡಿದ್ದರು. ಮೂರು ತಿಂಗಳ ಬಳಿಕ ಅವರನ್ನು ಪರೀಕ್ಷಿಸಿದಾಗ ಸಂಧಿವಾತದಿಂದ ಸಂಪೂರ್ಣ ಗುಣಮುಖರಾಗಿದ್ದರು. ಇದು ಹತ್ತು ವರ್ಷ ಹಿಂದಿನ ಘಟನೆ. ಆನಂತರ ಒಮ್ಮೆಯೂ ಆ ವ್ಯಕ್ತಿಯನ್ನು ವಾತ ಕಾಡಿಲ್ಲ ಎನ್ನುತ್ತಾರೆ ಡಾ.ಕೃಷ್ಣ. ಸಂಧಿವಾತದಿಂದ ಬಳಲುತ್ತಿರುವವರು ಒಂದು ಸಲಕ್ಕೆ 5 ಗ್ರಾಂ ನಂತೆ ದಿನಕ್ಕೆ ಮೂರು ಸಲ, ಒಂದು ತಿಂಗಳ ಕಾಲ ಶುಂಠಿ ಸೇವಿಸುವುದು ಉತ್ತಮ ಎನ್ನುವುದು ಅವರ ಸಲಹೆ.