ಸದ್ದುಕಾಯರು
ಸದ್ದೂಕೀ(Sadducees)ಯರು ಯೆಹೂದ್ಯರ ದ್ವಿತೀಯ ದೇವಾಲಯದ ಅವಧಿಯಲ್ಲಿ (ಕ್ರಿ.ಪೂ.೫೧೬ರಲ್ಲಿ ದೇವಾಲಯವು ನಿರ್ಮಾಣಗೊಂಡು, ಕ್ರಿ.ಶ. ೭೦ರಲ್ಲಿ ನಾಶವಾಗುವವರೆಗೆ) ಇದ್ದರೆನ್ನಲಾದ ಒಂದು ಪುರಾತನ ಪಂಗಡ. ಇವರ ಬಗ್ಗೆ ಕನ್ನಡದ ಬೈಬಲ್‌ಗಳಲ್ಲಿ 'ಸದ್ದೂಕಾಯರು' ಎಂಬ ಪದ ಬಳಕೆಯಿದೆ. ಹೀಬ್ರೂ ಭಾಷೆಯಲ್ಲಿ ಇವರನ್ನು 'ಸೆದ್ದೂಕಿಂ' ಎಂದು ಕರೆಯುತ್ತಾರೆ. ಯೆಹೂದಿ ಪಂಗಡವೊಂದಕ್ಕೆ ಈ ಹೆಸರು ಅನ್ವಯಿಸಲು ಕಾರಣವಾದದ್ದು, ಯೆಹೂದ್ಯರ 'ಪ್ರಥಮ ದೇವಾಲಯದ ಪ್ರಧಾನ ಯಾಜಕ(Kohen Gadol)'ನೆನಿಸಿದ, ಜ಼ಡೋಕ್(Tzadok). ಈತನ ವಂಶಜರನ್ನು 'ಸದ್ದೂಕೀ' ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ದೇವದೂತರು, ದೆವ್ವಗಳು, ವಿಧಿನಿಯಮ, ಸಾಂಪ್ರದಾಯಿಕ ವಿಧಿನಿಯಮಗಳ ನಿರ್ಬಂಧ, ಸತ್ತವರ ಪುನರುತ್ಥಾನ, ಸ್ವರ್ಗನರಕ ಅಥವಾ ಸತ್ತ ನಂತರ ದೊರೆಯಬಹುದಾದ ಪ್ರತಿಫಲ ಅಥವಾ ಶಿಕ್ಷೆಗಳು, ಮುಂತಾದವುಗಳ ಬಗ್ಗೆ ಇವರಲ್ಲಿ ನಂಬಿಕೆಯಿರಲಿಲ್ಲ. ದೇವಾಲಯಗಳಲ್ಲಿ ಯಾಜಕರು ಇತರ ಪಂಗಡಗಳವರಿದ್ದರೂ, ಪ್ರಧಾನ ಯಾಜಕನ ಪಟ್ಟಕ್ಕೆ ಅರ್ಹತೆಯನ್ನು ಪಡೆಯುತ್ತಿದ್ದುದು ಸದ್ದೂಕಿಯೇ. ದೇವಾಲಯಗಳ ನಿರ್ವಹಣೆ, ದೇವಾಲಯಗಳಲ್ಲಿ ಬಲಿಯರ್ಪಣೆಯ ಹೊಣೆಗಾರಿಕೆ, ಹಣಕಾಸಿನ ನಿರ್ವಹಣೆ, ರಾಜ್ಯದ ಆಡಳಿತ, ಅಂತರರಾಷ್ಟ್ರೀಯ ಪ್ರತಿನಿಧಿತ್ವ, ಸೆನೆಡ್ರಿನ್ ಸಭೆಯಲ್ಲಿ ಭಾಗವಹಿಸುವುದು, ತೆರಿಗೆ ವಸೂಲಾತಿ, ಸೈನ್ಯದ ನಿರ್ವಹಣೆ, ರೋಮನರೊಂದಿಗಿನ ಸಂಬಂಧಗಳ ನಿಯಂತ್ರಣ ಮುಂತಾದ ಕೆಲಸಕಾರ್ಯಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದುದೇ ಸದ್ದೂಕೀಯರು.