ಸದಸ್ಯ:Varsha Prabhu. T/ನನ್ನ ಪ್ರಯೋಗಪುಟ5
ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶಿಶಿಲ ಈ ಬಸದಿಯು ಬೆಳ್ತಂಗಡಿ ತಾಲೂಕು ಕೇಂದ್ರದಿಂದ ೪೮ ಕಿಲೋಮೀಟರ್ ದೂರದಲ್ಲಿರುವ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ.
ಬಸದಿಯ ಇತಿಹಾಸ
ಬದಲಾಯಿಸಿಕ್ರಿ.ಶ. ೧೮೨೮ ರಲ್ಲಿ ತುಳು ನಾಡಿನ ಎಲ್ಲಾ ಬಸದಿಗಳ ಕುರಿತು ಹೇಳುವಾಗ ಚಂದಯ್ಯ ಉಪಾಧ್ಯಾಯ ಎಂಬ ಕವಿಯು ತನ್ನ ‘ಜೈನಾಚಾರ’ ಎಂಬ ಸಾಂಗತ್ಯ ಗ್ರಂಥದ ೨೬ನೇ ಸಂಧಿಯಲ್ಲಿ… ‘ಬೈಪಾಡಿ ಶಾಂತೀಶ ಬಲ್ಲನಾಡಾದೀಶ ದೆಶಿಲ ಚೆಲ್ವೆತ್ತ ಚಂದ್ರ ಜಿನೇಂದ್ರನು ಶಿರಾಡಿ…’ (ಪದ್ಯ ೮೬) ಹೇಳಿರುವುದರಿಂದ ದೆಶಿಲ ಎಂದು ಕರೆಯಲ್ಪಡುತ್ತಿದ್ದ ಶಿಶಿಲದ ಈ ಜಿನಾಲಯದಲ್ಲಿ ಚಂದ್ರನಾಥ ತೀರ್ಥಂಕರನೇ ಪೂಜಿಸಲ್ಪಡುತ್ತಿದ್ದಿರಬೇಕು ಎಂದು ಹೇಳಬಹುದು.
ಬಸದಿಯ ವಿನ್ಯಾಸ
ಬದಲಾಯಿಸಿಪೂರ್ಣ ಶಿಲಾಮಯವಾಗಿರುವ ಈ ಜಿನಾಲಯದ ಕೆಲವು ಗೋಡೆಗಳು ಮಾತ್ರ ಮಣ್ಣಿನಿಂದ ಕಟ್ಟಲ್ಪಟ್ಟಿದ್ದವು. ಅವುಗಳೆಲ್ಲಾ ಈಗ ಜರಿದು ಬಿದ್ದಿವೆ. ಇದಕ್ಕೆ ಘಂಟಾ ಮಂಟಪ, ಪ್ರಾರ್ಥನಾ ಮಂಟಪ, ಸುಕನಾಸಿ ಮತ್ತು ಗರ್ಭಗೃಹ ಎಂಬ ಮಂಟಪಗಳಿದ್ದು, ಅವುಗಳ ಸುತ್ತಲೂ ಪ್ರದಕ್ಷಿಣಾ ಪಥವೂ ಇತ್ತು. ಗೋಡೆಗಳ ಮಣ್ಣು ಜರಿದು ಬಿದ್ದಿರುವುದರಿಂದ ಇದರ ಒಳಗೆ ಸರಾಗವಾಗಿ ನಡೆದುಕೊಂಡು ಹೋಗಲು ಬಹಳ ಕಷ್ಟವಾಗುತ್ತದೆ. ಮೂಲ ನಾಯಕರ ಬಿಂಬ ಇರಬೇಕಾದ ಸಿಂಹಪೀಠದ ಮೇಲೆ ಮಣ್ಣು ರಾಶಿ ಬಿದ್ದಿರುವುದರಿಂದ ಇದರ ಒಳಗೆ ಮೂಲ ನಾಯಕರ ಬಿಂಬವು ಕಂಡು ಬರುವುದಿಲ್ಲ. ಅಂತಹ ಮೂರ್ತಿ ಇಲ್ಲಿ ಇರಲಿಲ್ಲವೆಂದು ಹೇಳುತ್ತಾರೆ. ಆದರೆ ಆ ಮಣ್ಣಿನ ರಾಶಿಯ ಮೇಲೆ ಶ್ರೀ ಚಂದ್ರನಾಥ ತೀರ್ಥಂಕರ ಸುಮಾರು ೯ ಇಂಚು ಎತ್ತರದ ಒಂದು ಶಿಲಾ ಬಿಂಬವಿದೆ. ಚಂದ್ರ ಲಾಂಛನ ಮತ್ತು ಎಡಬಲಗಳಲ್ಲಿ ಯಕ್ಷಯಕ್ಷಿಯರನ್ನು ತೋರಿಸಲಾಗಿದೆ. ಬಳಿಯಲ್ಲಿ ಪ್ರಭಾವಲಯವಿರುವ ಇನ್ನೊಂದು ಗುರುತಿಸಲಾಗದ ಜಿನಬಿಂಬವು ಸಿಕ್ಕಿದೆ. ಪ್ರಾರ್ಥನಾ ಮಂಟಪದಲ್ಲಿ ಉತ್ತರಾಭಿಮುಖವಾಗಿರುವ ಎತ್ತರದ ಬಂದು ಪೀಠವಿದೆ. ಇದು ಶ್ರೀ ಪದ್ಮಾವತಿ ದೇವಿಯದ್ದೇ ಆಗಿರಬೇಕು. ಘಂಟಾ ಮಂಟಪದಲ್ಲಿ ತೀರಾ ಚರಸ್ಥಿತಿಯಲ್ಲಿರುವ ಸುಮಾರು ೩ ಇಂಚು ಎತ್ತರದ ಲೋಹದ ಶ್ರೀ ಪದ್ಮಾವತಿಯ ಚಿಕ್ಕ ಒಂದು ಬಿಂಬವು ಕಂಡು ಬಂದಿದೆ.
ಬಸದಿಯ ಪರಿಸರ
ಬದಲಾಯಿಸಿತುಂಬಾ ಜೀರ್ಣಗೊಂಡಿರುವ ಈ ಬಸದಿಯ ಪರಿಸರವೂ ಹಾಳಾಗಿದ್ದು, ಗಿಡ, ಮುಳ್ಳುಗಂಟೆಗಳಿಂದ ತುಂಬಿಕೊಂಡಿದೆ. ಆದರೆ ಎರಡು ಪಾರಿಜಾತ ಪುಷ್ಪದ ಚಿಕ್ಕ ಮರಗಳಿವೆ. ಬಸದಿಯ ನೈರುತ್ಯ ಮೂಲೆಯಲ್ಲಿ ಶಕುನದ ಕಲ್ಲು ಇದೆ. ಬಳಿಯಲ್ಲಿ ಶಾಸನದ ಕಲ್ಲು ಎಂದು ಕರೆಯಲ್ಪಡುವ ಲಿಂಗಾಯತರು ನೆಟ್ಟಿರುವ ಗಡಿಕಲ್ಲು ಇದೆ. ಸದಿಗೆ ಮೇಗಿನ ನೆಲೆಯೂ ಇದ್ದಿರುವ ಸಾಧ್ಯತೆ ಇದೆ. ಬಲವಾದ ಶಿಲೆಯ ಕಂಬಗಳು, ಅದರ ಮೇಲೆ ಹಾಸಿರುವ ಶಿಲೆಯ ನೀರು ಹರಿಯುವ ದಂಬೆ, ಪಕ್ಕಾಸುಗಳು, ಅವನ್ನು ಆಧರಿಸಿರುವ ಶಿಲೆಯ ಬೀಮುಗಳು ಮತ್ತು ಅಧೋಮುಖ ಕಮಲದ ಆರೂಢವಿರುವ ಈ ವಾಸ್ತು ನಿರ್ಮಾಣವು ಒಂದು ಬೃಹತ್ತಾದ ಹಾಗೂ ಬಲಯುತವಾದ ಕಟ್ಟಡವಾಗಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ.
ಬಸದಿಯ ಶಿಲ್ಪ ಶೈಲಿ
ಬದಲಾಯಿಸಿಈ ಬಸದಿಯ ಹಿನ್ನೆಲೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಸಿಗುವುದಿಲ್ಲ. ಆದರೆ ಇವರ ಸುತ್ತಲಿರುವ ಶಿಲಾಸ್ತಂಭಗಳು ಪಟ್ಟಕದ ರಚನೆ ಹಾಗೂ ಮೇಲ್ಗಡೆ ಬೋದಿಗೆಗಳನ್ನು ಹೊಂದಿವೆ. ಈ ಕಂಬಗಳು ಹಾಗೂ ಒಳಗಿನ ಮಂಟಪ ಗಳಲ್ಲಿರುವ ಕುಸುರಿ ಕೆಲಸವಿರುವ ಕಂಬಗಳು ವಿಜಯನಗರ ಕಾಲದ ಶಿಲ್ಪಶೈಲಿಯನ್ನೇ ಹೊಂದಿವೆ. ಕೆಲವು ಕಂಬಗಳು ಮೂಡುಬಿದಿರೆಯ ಸಾವಿರ ಕಂಬದ ಬಸದಿಯ ಕಂಬಗಳನ್ನೇ ಹೋಲುತ್ತವೆ. ಆದುದರಿಂದ ಈ ಜಿನಾಲಯವು ಕ್ರಿಸ್ತ ಶಕ ೧೫ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದೆಂದು ಹೇಳಬಹುದು. ಇದೇ ಶಿಶಿಲದಲ್ಲಿ ಕ್ರಿ.ಶ. ೧೬ನೇ ಶತಮಾನದವರೆಗೆ ಬೈಲಂಗಡಿ ಆಳುತ್ತಿದ್ದ ಮೂಲರು ಎಂಬ ಜೈನ ಅರಸರಿಗೆ ಒಂದು ಕೋಟೆಯೂ, ಒಂದು ಅರಮನೆಯೂ ಇದ್ದವು. ಅದರ ಕುರುಹುಗಳನ್ನು ಈ ಬಸದಿಯ ಸಮೀಪದ ಕಾಡಿನಲ್ಲಿ ಇಂದಿಗೂ ಕಾಣಬಹುದು. [೧]
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. pp. ೧೮೧.