ಸಿಲಿಕಾನ್     
  
    ಸಿಲಿಕಾನ್ ಒಂದು ಅಲೋಹ ಮೂಲಧಾತು. ಇದು ಆಮ್ಲಜನಕದ ನಂತರ ಭೂಮಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವ ಮೂಲವಸ್ತು. ಭೂಪದರದಲ್ಲಿ ಸುಮಾರು ೨೮ ಶೇಕಡಾ ಸಿಲಿಕಾನ್ ಇದೆ ಎಂದು ಅಂದಾಜು. ಸಿಲಿಕಾನ್ ಭೂಮಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ. ಹೆಚ್ಚಾಗಿ ಮರಳಿನಲ್ಲಿ ಮುಖ್ಯ ವಸ್ತುವಾಗಿರುವ ಸಿಲಿಕ (ಸಿಲಿಕಾನ್ ಡೈ ಆಕ್ಸೈಡ್)ದ ರೂಪದಲ್ಲಿ ಹೇರಳವಾಗಿದೆ. ಜ್ವಾಲಾಮುಖಿಗಳ ಲಾವಾರಸವು ಈ ಸಿಲಿಕದ ದ್ರವ ರೂಪವಾಗಿದೆ. ಸಿಲಿಕಾನ್ ಅನ್ನು ೧೮೨೩ರಲ್ಲಿ ಸ್ವೀಡನ್ ದೇಶದ ಜೋನ್ಸ್ ಬೆರ್ಜೆಲಿಯಸ್ ಎಂಬ ವಿಜ್ಞಾನಿ ಕಂಡುಹಿಡಿದರು. ಸಿಲಿಕಾನ್ ಹಾಗೂ ಇದರ ಸಂಯುಕ್ತಗಳು ಗಾಜಿನ ತಯಾರಿಕೆಯಲ್ಲಿ, ವಿದ್ಯುನ್ಮಾನ (electronics) ಉಪಕರಣಗಳಲ್ಲಿ, ಟ್ರಾನ್ಸಿಸ್ಟರ್ ಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತಿದೆ.

ಆವರ್ತಕ ಕೋಷ್ಟಕದಲ್ಲಿ ಪಟ್ಟಿ ಮಾಡುವ ೧೦೩ ಧಾತುಗಳಲ್ಲಿ, ೨೨ ಆಲೋಹಗಳು. ಇವುಗಳಲ್ಲಿ ೧೦ ಘನ, ೧ ದ್ರವ ಹಾಗು ಉಳಿದವು ೧೧ ಅನಿಲಗಳಾಗಿವೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಆಮ್ಲಜನಕ, ಸಾರಜನಕ,ಸಿಲಿಕಾನ್, ರಂಜಕ ಮತ್ತು ಗಂಧಕಗಳು.

ಆವರ್ತಕ ಕೋಷ್ಟಕ ಸಿಲಿಕಾನ್ ಭೂತೊಗಟೆಯಲ್ಲಿ ದೊರೆಯುವ ಆಲೋಹ ಧಾತು.ಇದು ಭೂಮಿಯಲ್ಲಿ ಸಿಗುವ ಎರಡನೆ ಸಮೃದ್ಧ ಮೂಲವಸ್ತು.ಇದು ಯಾವಾಗಲು ಆಮ್ಲಜನಕದೊಡನೆ ಸಂಯೋಗಗೊಂಡು ಸಂಯುಕ್ತ ವಸ್ತುವಾಗಿ ದೊರಕುತ್ತದೆ. ನಿಸರ್ಗದಲ್ಲಿ ದೊರಕುವ ಸಿಲಿಕಾನ್ ಮತ್ತು ಆಮ್ಲಜನಕದ ಅತ್ಯಂತ ಸರಳ ಸಂಯುಕ್ತ ಸಿಲಿಕಾನ್ ಡೈಆಕ್ಸೈಡ್. ಇದನ್ನು ಸಿಲಿಕಾ ಅಥವಾ ಮರಳು ಎನ್ನುತ್ತಾರೆ. ಸಿಲಿಕಾನನ್ನು ಸಿಲಿಕಾದಿಂದ ಪಡೆಯಬಹುದು.ಇದು ಪ್ಲಿಂಟ್(ಒಂದು ಜಾತಿಯ ಕಲ್ಲು), ಕ್ವಾರ್ಟ್ಸ್, ಕ್ಷೀರಸ್ಪಟಿಕ(ಓಫಲ್)ರೂಪದಲ್ಲಿ ಸಹ ದೊರಕುತ್ತದೆ. ನಿಜಾಂಶವೆಂದರೆ ಮಣ್ಣು ಎಲ್ಲೇ ಇರಲಿ ಅದರಲ್ಲಿ ಕೆಲವಾದರೂ ಸಿಲಿಕಾನ್ ಸಂಯುಕ್ತಗಳು ಇದ್ದೇ ಇರುತ್ತದೆ.

ಸಿಲಿಕಾನ್ ಉಪಯೋಗಗಳು:
       ರಬ್ಬರ್, ಕೀಲ್ಲೆಣ್ಣೆ, ಪಾಲಿಷ್ ಮೊದಲಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಕಬ್ಬಿಣ, ಅಲ್ಯುಮಿನಿಯಂ, ತಾಮ್ರ ಮತ್ತು ಮ್ಯಾಂಗನೀಸ್ ಹೀಗೆ ಮಿಶ್ರಲೋಹಗಳನ್ನು ಗಟ್ಟಿಗೊಳಿಸಲು ಉಪಯೋಗಿಸುತ್ತಾರೆ. ಸಿಲಿಕಾನ್ ಕಾರ್ಬೈಡ್(ಕಾರ್ಬೊರೆಂಡಮ್) ಎಂಬುದು ತುಂಬ ಕಠಿಣವಾದ ಒಂದು ಪದಾರ್ಥ.ಅದ್ದರಿಂದ ಕತ್ತರಿಸುವ ಮತ್ತು ಉಜ್ಜುವ ಹತಾರಗಳಲ್ಲಿ ಉಪಯೋಗಿಸುತ್ತಾರೆ. ಸಿಲಿಕಾನ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಇಲೆಕ್ಟ್ರಾನಿಕ್ ಉದ್ದಿಮೆಯಲ್ಲಿ ಕ್ರಾಂತಿಯುಂಟು ಮಾಡಿರುವ ಅನುಕಲಿತ ಚಿಪ್ ಗಳ (Integrated chips) ತಯಾರಿಕೆಯಲ್ಲಿ. ಸಿಲಿಕಾನ್ ವ್ಯಾಪಕವಾಗಿ ಘನವಸ್ತುಗಳಲ್ಲಿ ಅರೆವಾಹಕವಾಗಿ ಬಳಸುತ್ತಾರೆ.ಉದಾ:ಗಣಕಯಂತ್ರ, ಸೂಕ್ಷ್ಮ ಇಲೆಕ್ಟ್ರಾನಿಕ್ ಕೈಗಾರಿಕೆಗಳು ಇತ್ಯಾದಿ. ಸೌರಶಕ್ತಿಯನ್ನು ತಾಪಶಕ್ತಿಯನ್ನಾಗಿ ಪರಿವರ್ತಿಸಲು ಸಿಲಿಕಾನ್ ಬಳಸಲಾಗುತ್ತದೆ. ಸಿಲಿಕಾನ್ ಸಂಯುಕ್ತಗಳನ್ನು ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಇಲ್ಲಿ ಕೆಲವನ್ನು ಕೊಡಲಾಗಿದೆ. ದರ್ಪಣ ಗ್ಯಾಲ್ವನೋಮಿಟರ್ನಂತಹ ವಿದ್ಯುತ್ ಉಪಕರಣಗಳಲ್ಲಿ ಬಳಸುವ ಹೆಚ್ಚಿನ ಸ್ಥಿತಿಸ್ಥಾಪಕ ಗುಣವಿರುವ ಉತ್ಪಾದನೆಯಲ್ಲಿ ಕ್ವಾಟ್ರ್ಸ್ ಗಾಜನ್ನು ಬಳಸಲಾಗುತ್ತದೆ. ದೃಕ್ ಉಪಕರಣಗಳು ಮತ್ತು ರಾಸಾಯನಿಕ ಉಪಕರಣಗಳ ತಯಾರಿಕೆಯಲ್ಲಿ ಕ್ವಾಟ್ರ್ಸ್ ಅನ್ನು ಬಳಸಲಾಗುತ್ತದೆ. ಮರಳನ್ನು ಗಾಜು ಮತ್ತು ಪಿಂಗಾಣಿ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಮರಳು ಮತ್ತು ಕಲ್ಲನ್ನು ಕಟ್ಟಡ ಸಾಮಗ್ರಿಗಳನ್ನಾಗಿ ಬಳಸಲಾಗುತ್ತದೆ. ಸೋಡಿಯಮ್ ಸಿಲಿಕೇಟ್ ಅನ್ನು ಜಲಗಾಜು ಎಂದು ಕರೆಯಲಾಗುತ್ತದೆ. ರಾಸಾಯನಿಕವಾಗಿ ಜಲಗಾಜು ಹೆಚ್ಚಿನ ಸಿಲಿಕಾದೊಂದಿಗೆ ಸೋಡಿಯಮ್ ಸಿಲಿಕೇಟ್ ಆಗಿದೆ. ಇದನ್ನು ಕ್ಯಾಲಿಕೋ ಪ್ರಿಂಟಿಂಗ್ ಗಳಲ್ಲಿ ಬಳಸಲಾಗುತ್ತದೆ. ಸಿಲಿಕಾನ್ ಕಾರ್ಬೇಡ್‍ನ್ನು (Sic) ಗಾಜನ್ನು ಉಜ್ಜಲು ಉಜ್ಜುಗೊರಡಾಗಿ ಬಳಸಲಾಗುತ್ತದೆ. ವಿದ್ಯುತ್ ಮೋಟಾರ್ ಮತ್ತು ಇತರೆ ಸಲಕರಣೆಗಳಿಗೆ ಸಿಲಿಕೋನುಗಳು ಅತ್ಯುತ್ತಮವಾದ ಇನ್ಸಲೇಟರ್ ಗಳಾಗಿವೆ. ಸೋಡಿಯಮ್ ಅಲ್ಯೂಮಿನಿಯಮ್ ಸಿಲಿಕೇಟ್ ಅನ್ನು ಗಡಸು ನೀರನ್ನು ಮೆದುಗೊಳಿಸಲು ಬಳಸಲಾಗುತ್ತದೆ.