ಮೈಸೂರು ವಿಶ್ವವಿದ್ಯಾನಿಲಯ: ಪುರಾತನ ಪಟ್ಟಣದ ಇತಿಹಾಸ ಗಮನಾರ್ಹ. ದಕ್ಷಿಣ ದೇಶದ ಮತಚರಿತ್ರೆಯಲ್ಲಿ ಇದರ ಪಾತ್ರ ಮಹತ್ತರವಾದುದು. ಇದು ಎರಡು ಸಾವಿರ ವರ್ಷಗಳ ಹಿಂದೆ ದಕ್ಷಿಣದಲ್ಲಿ ಬೌದ್ಧಧರ್ಮ ಮುಖ್ಯ ಕೇಂದ್ರವಾಗಿತ್ತು. ಶಂಕರಾಚಾರ್ಯರು ಇದನ್ನು ಶೈವ ಮತ್ತು ವೈಷ್ಣವ ಕೇಂದ್ರವಾಗಿ ಪರಿವರ್ತಿಸಿದರು. ಕಂಚಿಯ ಒಂದು ಭಾಗದಲ್ಲಿ ಬೌದ್ಧಸ್ತೂಪಗಳಿದ್ದುವೆಂದು ಹ್ಯೂಯೆನ್ತ್ಸಾಂಗ್ ಹೇಳಿದ್ದಾನಾದರೂ ಅದಕ್ಕೆ ಸರಿಯಾದ ರುಜುವಾತುಗಳು ಇನ್ನೂ ಸಿಕ್ಕಿಲ್ಲ. ಊರಿನ ಇನ್ನೊಂದು ಭಾಗ ಶೈವದೇವಾಲಯಗಳುಳ್ಳದ್ದು, ಮತ್ತೊಂದು ವೈಷ್ಣವ ದೇವಾಲಯಗಳುಳ್ಳದ್ದು, ಕಾಮಾಕ್ಷಿ ದೇವಾಲಯ ಶಂಕರಾಚಾರ್ಯರಿಂದ ಸ್ಥಾಪಿತವಾದುದೆಂದು ಪ್ರಸಿದ್ಧವಾಗಿದೆ. ವೈಷ್ಣವ ದೇವಾಲಯಗಳಲ್ಲಿ ವರದಸ್ವಾಮಿಯ ದೇವಸ್ಥಾನ ಪ್ರಸಿದ್ಧವಾದುದ್ದು. ರಾಮಾನುಜಾಚಾರ್ಯರು ಶ್ರೀರಂಗಕ್ಕೆ ಹೋಗುವುದಕ್ಕೆ ಮುಂಚೆ ಕಂಚೀ ಪುರ್ಣರ ಶಿಷ್ಯರಾದ ವರದರಾಜಸ್ವಾಮಿಗೆ ಸೇವೆ ಸಲ್ಲಿಸುತ್ತಿದ್ದರು. ಶಂಕರಾಚಾರ್ಯರು ಜೈನವಿದ್ವಾಂಸರೊಡನೆ ಚರ್ಚೆ ನಡೆಸಿದರೆಂದು ಐತಿಹ್ಯವಿರುವುದರಿಂದ ಆ ಕಾಲದಲ್ಲಿ ಕಂಚಿಯಲ್ಲಿ ಜೈನಧರ್ಮದವರೂ ಗಣ್ಯರಾಗಿದ್ದಿರಬೇಕು. ಈಗಲೂ ಕಂಚಿಯಲ್ಲಿ ಒಂದು ಪುರಾತನ ಜೈನ ದೇವಾಲಯವಿದೆ. ಗುರುನಾನಕ್ ಕಂಚಿಯಲ್ಲಿ ತನ್ನ ಧರ್ಮಪ್ರಚಾರ ಮಾಡಿದನೆಂದು ಐತಿಹ್ಯವಿದೆ. ಇದಕ್ಕೆ ಸಾಕ್ಷಿಯಾಗಿ ಇಲ್ಲಿ ಒಂದು ಸಿಖ್ಖರ ಮಠವಿದೆ. ಕಾಲಕ್ರಮದಲ್ಲಿ ಕಂಚಿ ಮುಸಲ್ಮಾನರ ದಾಳಿಗೆ ಸಿಕ್ಕಿ ಅಪಾರ ನಷ್ಟಕ್ಕೊಳಗಾಯಿತು. ಇಲ್ಲಿಯ ಕೆಲವು ದೇವಸ್ಥಾನಗಳು ನೆಲಸಮವಾದುವು. ದೊಡ್ಡ ಮಂಟಪಗಳು ಮಸೀದಿಗಳಾಗಿ ಮಾರ್ಪಟ್ಟುವು. ಮದ್ರಾಸ್ ಪ್ರಾಂತ್ಯ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಕ್ರೈಸ್ತರ ಚರ್ಚುಗಳು ನಿರ್ಮಾಣವಾದುವು. (ಜಿ.ಎಚ್.) ಪ್ರ.ಶ.ಪು. 150ರಲ್ಲೇ ಪತಂಜಲಿ ಕಂಚಿಯ ವಿಚಾರವನ್ನು ಪ್ರಸ್ತಾಪಿಸಿದ್ದಾನೆ. ದಕ್ಷಿಣ ಭಾರತದಲ್ಲಿ 5ನೆಯ ಶತಮಾನದಲ್ಲಿದ್ದ ತೊಂಡಮಂಡಲಂ ಪ್ರದೇಶಕ್ಕೆ ಕಂಚಿ ರಾಜಧಾನಿಯಾಗಿತ್ತು. ಶಾಸನಾಧಾರದಂತೆ ಈ ಪ್ರದೇಶವನ್ನು ಪಲ್ಲವರು ಆಳುತ್ತಿದ್ದರೆಂದು ಗೊತ್ತಾಗುವುದು. ಇವರಿಗೆ ತೊಂಡಮಾನ್ ರಾಜರೆಂದು ಹೆಸರಿತ್ತೆಂದು ತಮಿಳು ಸಾಹಿತ್ಯದಿಂದ ತಿಳಿದುಬರುತ್ತದೆ. ವಿಷ್ಣುಗೋಪ ಎಂಬಾತ ಪಲ್ಲವ ರಾಜನಾಗಿದ್ದನೆಂದೂ ಉತ್ತರದಿಂದ ದಂಡೆತ್ತಿ ಬಂದ ಸಮುದ್ರಗುಪ್ತ ಇವನನ್ನು ಸೋಲಿಸಿದನೆಂದೂ ಇತಿಹಾಸ ಹೇಳುತ್ತದೆ. ಉತ್ತರದಲ್ಲಿ ಕೃಷ್ಣಾನದಿಯವರೆಗೂ ದಕ್ಷಿಣದಲ್ಲಿ ಪಾಂಡ್ಯರ ಮಧುರೆ ಹೊರವಲಯದವರೆಗೂ ಪಲ್ಲವರ ಆಳ್ವಿಕೆ ಹರಡಿತ್ತು. ಈ ಸಮುದ್ರದಲ್ಲಿ ಕಂಚಿ ದಕ್ಷಿಣದ ಮಹತ್ತ್ವದ ಪಟ್ಟಣವೆನಿಸಿತ್ತು; ಉತ್ತಮ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯ ಕೇಂದ್ರವಾಗಿತ್ತು. ಪಲ್ಲವರು ಸಂಸ್ಕೃತದ ಅಭಿಮಾನಿಗಳೂ ಪ್ರತಿಪಾದಕರೂ ಆಗಿದ್ದು ಅವರ ಶಾಸನಗಳೆಲ್ಲ ಆ ಭಾಷೆಯಲ್ಲೇ ಇವೆ. ಅಂದು ಕಂಚಿಯಿಂದ ಸಂಸ್ಕೃತ ಪ್ರಸಾರ ಅವ್ಯಾಹತವಾಗಿ ನಡೆದಿತ್ತು. ದಕ್ಷಿಣದಲ್ಲಿ ಮಾತ್ರವಲ್ಲದೆ, ದೂರಪ್ರಾಚ್ಯದಲ್ಲಿದ್ದ ಭಾರತೀಯ ಸ್ವಾಸ್ಥ್ಯಗಳಿಗೂ ಅದು ಹರಡಿ ಜನಪ್ರಿಯತೆ ಗಳಿಸಿತ್ತು. ಪಲ್ಲವರು ತಮ್ಮದೇ ಆದ ವೈಶಿಷ್ಟ್ಯಮಯ ಶಿಲ್ಪಕಲಾವೈಭವವನ್ನು ನಿರ್ಮಾಣ ಮಾಡಿದರು. ಮುಂದೆ ಆಕ್ರಮಣ ನಡೆಸಿದೆ ರಾಜ ವಂಶೀಕರು ಇಲ್ಲಿನ ಕಲಾ ವೈಭವಕ್ಕೆ ಮುಗ್ದರಾಗಿ ತಮ್ಮ ರಾಜ್ಯಗಳಲ್ಲಿ ಇದನ್ನು ಬೆಳೆಸಿ ಪೋಷಿಸಿದ ನಿದರ್ಶನಗಳು ಕಂಡುಬರುತ್ತವೆ. ಹ್ಯೂಯೆನ್ತ್ಸಾಂಗ್ ಇಲ್ಲಿನ ವಿಶ್ವವಿದ್ಯಾನಿಲಯದ ಶ್ರೇಷ್ಠತೆಯನ್ನು ಕೊಂಡಾಡಿದ್ದಾನೆ. ತರ್ಕಶಾಸ್ತ್ರನಿಪುಣನೂ ನ್ಯಾಯಭಾಷ್ಯದ ಕರ್ತೃವೂ ಆದ ವಾತ್ಸಾಯನ ಕಂಚಿಯಲ್ಲಿ ಅಂದು ಪಂಡಿತನಾಗಿದ್ದನೆಂದೂ ಆತ ಹೇಳಿದ್ದಾನೆ. ಇಂಥ ಶಿಕ್ಷಣಕೇಂದ್ರವಾದ ಈ ಪಟ್ಟಣದಲ್ಲಿ ಅನೇಕ ಮಹಿಮಾನ್ವಿತರು ಶಿಕ್ಷಣ ಪಡೆದರು. ವಿಶಿಷ್ಟಾದ್ವೈತ ಧರ್ಮಸ್ಥಾಪನಾಚಾರ್ಯರಾದ ರಾಮಾನುಜಾಚಾರ್ಯರು ಮೊಟ್ಟಮೊದಲು ಇಲ್ಲಿ ಶಿಕ್ಷಣ ಹೊಂದಿದರು. 5ನೆಯ ಶತಮಾನದಲ್ಲಿ ಕದಂಬಕುಲದ ಮಯೂರಶರ್ಮ ಉನ್ನತಶಿಕ್ಷಣಕ್ಕಾಗಿ ಕಂಚಿಗೆ ಬಂದಿದ್ದನೆಂದು ಶಾಸನಗಳು ತಿಳಿಸುತ್ತವೆ. ಈ ಸಂದರ್ಭದಲ್ಲಿ ನಡೆದ ಒಂದು ಘಟನೆ ಅತ್ಯಂತ ಗಮನಾರ್ಹ. ಶಿವಮೊಗ್ಗ ಜಿಲ್ಲೆಯ ತಾಳಗುಂದದ ಬ್ರಾಹ್ಮಣ ವರ್ಗದ ಈ ಮಯೂರಶರ್ಮ ತನ್ನ ಗುರು ವೀರಶರ್ಮನೊಂದಿಗೆ ಕಂಚಿಯ ಘಟಿಕಾಶ್ರಮದಲ್ಲಿ ವೇದಾಧ್ಯಯನ ಮಾಡಲು ತೆರಳಿದಾಗಿ ಅಲ್ಲಿನ ಪಲ್ಲವರಾಜನ ಅಶ್ವಾರೋಹಿ ಕಾವಲುಗಾರರಿಂದ ಅವಮಾನಿತನಾಗಿ ನೊಂದನೆಂದೂ ಆಗ್ಗೆ ಅವನಲ್ಲಿ ಸೇಡಿನ ಕಿಡಿ ಹೊತ್ತಿ, ಕಡೆಗೆ ಯುದ್ಧಕಲೆಯನ್ನು ಹಸ್ತಗತಮಾಡಿಕೊಳ್ಳಲು ನಿರ್ಧರಿಸಿದನೆಂದೂ ಹೇಳಲಾಗಿದೆ. ಕಡೆಗೆ ತನ್ನ ನಿರ್ಧಾರದಂತೆ ಅವನು ಖಡ್ಗವನ್ನು ಹಿಡಿದು ದಿಗ್ವಿಜಯಕ್ಕೆ ಹೊರಟು ಪಲ್ಲವರಾಜ್ಯದ ಗಡಿಯನ್ನು ರಕ್ಷಿಸುತ್ತಿದ್ದ ಕಾವಲು ಅಧಿಕಾರಿಗಳನ್ನು ಸೋಲಿಸಿ ಅನೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡನೆಂತಲೂ ಆಗ್ಗೆ ಪಲ್ಲವರು ಮಣಿಯಬೇಕಾಯಿತೆಂದೂ ಇತಿಹಾಸ ಹೇಳುತ್ತದೆ. ಕಂಚಿಯ ಚರಿತ್ರೆಯಲ್ಲಿ ಈ ಘಟನೆ ಅತಿ ಮುಖ್ಯವಾಗಿ ಪರಿಣಮಿಸಿತು. ಇಷ್ಟೇ ಅಲ್ಲ, ಇನ್ನೊಂದು ಬಗೆಯಲ್ಲಿಯೂ ಕಂಚಿ ಗಮನಾರ್ಹವಾದುದು. ಚಾಲುಕ್ಯ ಅರಸನಾದ ಎರಡನೆಯ ಪುಲಿಕೇಶಿಯನ್ನು ಪಲ್ಲವ ನರಸಿಂಹ ಸೋಲಿಸಿದ್ದರಿಂದ ಚಾಲುಕ್ಯರ ಆಳ್ವಿಕೆಗೆ ಭಾರಿ ಪೆಟ್ಟು ಬಿದ್ದಂತಾಯಿತು. ಆದರೆ ಚಾಲುಕ್ಯರ ಎರಡನೆಯ ವಿಕ್ರಮಾದಿತ್ಯ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದು, ಕಡೆಗೊಮ್ಮೆ ದಂಡೆತ್ತಿಬಂದು ಕಂಚಿಯನ್ನು ವಶಪಡಿಸಿಕೊಂಡ; ಪಲ್ಲವ ಸಿಂಹಾಸನಕ್ಕೆ ಹಾತೊರೆಯುತ್ತಿದ್ದ ವಿರೋಧವಾದಗಳಿಗೆ ಸಿಂಹಾಸನ ದಕ್ಕುವಂತೆ ಮಾಡಿದ. ಈ ಸಂದರ್ಭದಲ್ಲಿ ವಿಕ್ರಮಾದಿತ್ಯ ಕಂಚಿಯಿಂದ ಹಿಂತಿರುಗುವಾಗ ಅಲ್ಲಿನ ಪ್ರಖ್ಯಾತ ಶಿಲ್ಪಿ ಸರ್ವಸಿದ್ಧಿ ಆಚಾರ್ಯನನ್ನು ಕರೆದೊಯ್ದು ಅವನಿಂದ ದೇವಾಲಯಗಳನ್ನು ತನ್ನ ರಾಜ್ಯದಲ್ಲಿ ನಿರ್ಮಿಸಿದನೆಂದು ಇತಿಹಾಸದಿಂದ ತಿಳಿದುಬರುತ್ತದೆ. ಪಲ್ಲವರ ತರುವಾಯ ಚೋಳರು ಮುನ್ನೂರು ವರ್ಷಗಳ ತನಕ ಅಲ್ಲಿ ರಾಜ್ಯಭಾರ ನಡೆಸಿದರು. ಅಷ್ಟರಲ್ಲೇ ಮುಸಲ್ಮಾನರ ದಾಳಿ ಮೊದಲಾಯಿತು. ಕ್ವಿಲಾನಿನ ವೀರ ಕವಿವರ್ಮನ್ ಕುಲಶೇಖರ ಅವರ ದಾಳಿಯನ್ನು ಅಡಗಿಸಿ ಕಂಚಿಯಲ್ಲಿ ತಾನೇ ಅರಸನಾಗಿ ಪಟ್ಟಾಭಿಷಿಕ್ತನಾದ. ಇದಕ್ಕೂ ಪುರ್ವದಲ್ಲಿ ರಾಷ್ಟ್ರಕೂಟದ ಮೂರನೆಯ ಕೃಷ್ಣ ಕಂಚಿಯನ್ನು ವಶಪಡಿಸಿಕೊಂಡಿದ್ದನೆಂದು ಇತಿಹಾಸ ಹೇಳುತ್ತದೆ. ಹೀಗೆ ಕಂಚಿ ಇತಿಹಾಸಪ್ರಸಿದ್ಧವಾಗಿ ಕೆಲವು ರಾಜವಂಶದವರ ಹಸ್ತಕ್ಷೇಪಕ್ಕೆ ಒಳಗಾಯಿತು. (ಎಂ.ವಿ.ಕೆ.) 14ನೆಯ ಶತಮಾನದಲ್ಲಿ ಕಂಚಿ ವಿಜಯನಗರ ರಾಜ್ಯದ ರಾಜಧಾನಿಯಾಗದಿದ್ದರೂ ತೊಂಡಮಂಡಲದ ಮುಖ್ಯಪಟ್ಟಣವಾಗಿ ಶೋಭಿಸಿತು. ವಿಜಯನಗರದ ರಾಜರು ಇಲ್ಲಿಗೆ ಪದೇ ಪದೇ ಬಂದು ಇಲ್ಲಿನ ದೇವರುಗಳಿಗೆ ಸೇವೆ ಸಲ್ಲಿಸುತ್ತಿದ್ದರು. ಕೆಲವು ರಾಜರ ಪಟ್ಟಾಭಿಷೇಕ ಕಂಚಿಯಲ್ಲಿ ನಡೆಯಿತು. ಈ ರಾಜರ ಕಾಲದಲ್ಲಿ ಕಂಚಿಯ ದೇವಸ್ಥಾನಗಳು ತುಂಬ ವಿಸ್ತರಿಸಿದುವು. ದೇವಸ್ಥಾನಗಳು: ಈಗಲೂ ಕಂಚಿ ಪ್ರಸಿದ್ಧ ಯಾತ್ರಾಸ್ಥಳವೆನಿಸಿದೆ. ಅಲ್ಲಿನ ಏಕಾಂಬರ ದೇವಸ್ಥಾನ ಇಡೀ ಭಾರತದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ. ಅದರ ಗೋಪುರದ ಎತ್ತರ 57.24 ಮೀ. ಅದರ ಪೌಳಿಯ ಗೋಡೆ ಇಪ್ಪತ್ತೈದು ಎಕರೆ ಪ್ರದೇಶವನ್ನು ಒಳಗೊಂಡಿದೆ. ಕೇಂದ್ರ ದೇವಸ್ಥಾನದ ಸುತ್ತ ಅರುವತ್ತುಮೂರು ಪುರಾತನರ ವಿಗ್ರಹಗಳಿವೆ. ಇತ್ತೀಚೆಗೆ ನಾಟುಕೋಟಿ ಶೆಟ್ಟರು ಶಿಥಿಲವಾಗಿದ್ದ ಭಾಗಗಳನ್ನು ಹತ್ತಿಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸರಿಪಡಿಸಿರುತ್ತಾರೆ. ಏಕಾಂಬರನಾಥ ದೇವಸ್ಥಾನವನ್ನು ಬಿಟ್ಟರೆ ಉಳಿದ ಶೈವ ದೇವಸ್ಥಾನಗಳಲ್ಲಿ ಕಾಮಾಕ್ಷಿ ದೇವಸ್ಥಾನ ಪ್ರಸಿದ್ಧವಾದುದು. ಮೊದಲಿಗೆ ಈ ದೇವಸ್ಥಾನದಲ್ಲಿ ಪಶುಬಲಿ ಯಥೇಷ್ಟವಾಗಿ ನಡೆಯುತ್ತಿತ್ತು. ಶಂಕರಾಚಾರ್ಯರು ಈ ದುಷ್ಟ ಸಂಪ್ರದಾಯವನ್ನು ತಪ್ಪಿಸಿ ಸಾತ್ತ್ವಿಕ ಪುಜೆ ನಡೆಯುವಂತೆ ಕಟ್ಟುಮಾಡಿದರು. ಇಲ್ಲಿದ್ದ ಪುಜಾರಿಗಳನ್ನು ಓಡಿಸಿ ತಮ್ಮ ಸ್ಥಳದಿಂದ ನಂಬೂದರಿ ಬ್ರಾಹ್ಮಣರನ್ನು ಕರೆಸಿ ಅವರನ್ನು ಅರ್ಚಕರನ್ನಾಗಿ ನೇಮಿಸಿದರು. ಈಗಲೂ ಇಲ್ಲಿನ ಅರ್ಚಕರು ಆ ಸಂತತಿಯವರೇ ಆಗಿದ್ದಾರೆ. ವಿಷ್ಣುಕಂಚಿಯಲ್ಲಿ ತುಂಬ ಪ್ರಸಿದ್ಧವಾದದ್ದು ವರದರಾಜಸ್ವಾಮಿ ದೇವಸ್ಥಾನ. ಅದರಲ್ಲಿ ಚೋಳರ ಮತ್ತು ವಿಜಯನಗರ ರಾಜರ ಶಾಸನಗಳಿವೆ. ದೇವಸ್ಥಾನದ ಉದ್ದ 1,200 ಅಡಿ, ಅಗಲ 800 ಅಡಿ. ವಿಸ್ತಾರದಲ್ಲಿ ಇದು ಇತರ ದೇವಸ್ಥಾನಗಳಿಗಿಂತ ದೊಡ್ಡದಾದರೂ ಏಕಾಂಬರನಾಥ ದೇವಸ್ಥಾನದಷ್ಟು ದೊಡ್ಡದಲ್ಲ. ಏಕಾಂಬರನಾಥ ದೇವಸ್ಥಾನದಲ್ಲಿ ಶೈವಪುರಾತನರಿಗೆ ಪುಜೆ ಸಲ್ಲುವಂತೆ ಈ ದೇವಸ್ಥಾನದಲ್ಲಿ ವಿಷ್ಣುಭಕ್ತರಾದ ಆಳ್ವಾರುಗಳಿಗೆ ಮತ್ತು ರಾಮಾನುಜಾಚಾರ್ಯರಿಗೆ ಪುಜೆ ಸಲ್ಲುತ್ತದೆ. ಕಂಚಿಯಲ್ಲಿ ನಡೆಯುವ ಉತ್ಸವಗಳೆಲ್ಲೆಲ್ಲ ವರದರಾಜಸ್ವಾಮಿಯ ಉತ್ಸವಗಳು ತುಂಬ ಜನಮೆಚ್ಚಿನವು. ನಿತ್ಯೋತ್ಸವ, ಮಾಸೋತ್ಸವಗಳು ವಿಜೃಂಭಣೆಯಿಂದ ಜರುಗುತ್ತದೆ. ಇಲ್ಲಿನ ಸಂವತ್ಸರೋತ್ಸವ ಹತ್ತುಹನ್ನೆರಡು ದಿನಗಳ ಕಾಲ ನಡೆಯುತ್ತದೆ. ಇಲ್ಲಿ ನಡೆಯುವ ದೇವರ ಮೆರವಣಿಗೆಯ ಬಳಸು ಆರು ಮೈಲಿ; ಉತ್ಸವ ವಿಷ್ಣುಕಂಚಿಯಿಂದ ಶಿವಕಂಚಿಗೆ ಹೋಗಿ ಮತ್ತೆ ವಿಷ್ಣುಕಂಚಿಗೆ ಹಿಂತಿರುಗುತ್ತದೆ. ಇಲ್ಲಿಯ ಸ್ಥಳಪುರಾಣದ ಪ್ರಕಾರ ಶಿವನೂ ವಿಷ್ಣುವೂ ಭಾವ ಮೈದುನರು. ವಾರ್ಷಿಕೋತ್ಸವದ ಏಳನೆಯ ದಿವಸ ಹೊರಟ ಮೆರವಣಿಗೆ ಕೆಲವು ಕಾಲ ಏಕಾಂಬರ ದೇವಾಲಯದ ಮುಂದೆ ತಂಗುತ್ತದೆ. (ಚಿ.ಎಚ್.) ಉತ್ಖನನಗಳು ಇಲ್ಲಿ ಹಲವಾರು ಬಾರಿ ನಡೆದ ಪ್ರ್ರಾಕ್ತನ ಶಾಸ್ತ್ರೀಯ ಉತ್ಖನನಗಳು ಕಂಚಿಯ ಇತಿಹಾಸದ ಆರಂಭಕಾಲದ ಮಾಹಿತಿಗಳನ್ನು ಒದಗಿಸಿಕೊಡುತ್ತವೆ. ಪಾಲೆಯರ ದಿಬ್ಬ ಅಥವಾ ಪಲ್ಲವ ಮೇಟು ಎಂಬ ಇತ್ತರವಾದ ಸ್ಥಳದಲ್ಲಿ 1952-53ರಲ್ಲಿ ನಡೆಸಿದ ಉತ್ಖನನದಿಂದ ಪಲ್ಲವರ ಕಾಲಕ್ಕೆ ನಿರ್ದೇಶಿಸಬಹುದಾದ ಯಾವ ಮಾಹಿತಿಗಳೂ ದೊರಕಿರಲಿಲ್ಲ. ಅನೇಕ ಶಂಖಗಳೂ ಶಂಖಗಳಿಂದ ಮಾಡಿದ ಬಳೆಯ ಚೂರುಗಳೂ ದೊರಕಿದುವು. ಆನಂತರ 1965-66ರಲ್ಲಿ ಅದೇ ಇಲಾಖೆಯವರು ಉತ್ಖನನ ನಡೆಸಿದರು. ಇತ್ತೀಚೆಗೆ 1968-69ಮತ್ತು 1969-70ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದವರು ಉತ್ಖನನಗಳನ್ನು ನಡೆಸಿದರು. ಈ ಸಂಶೋಧನೆಗಳಿಂದ ಕಂಚಿ ಪ್ರ.ಶ.ದ ಆರಂಭ ಕಾಲದಿಂದಲೂ ನಾಗರಿಕತೆಯ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ಪ್ರ.ಶ.ದ ಮೊದಲೆರಡು ಶತಮಾನಗಳಲ್ಲಿ ರೋಮನರು ದಕ್ಷಿಣ ಭಾರತದೊಡನೆ ವಾಣಿಜ್ಯ ಸಂಬಂಧ ಪಡೆದಿದ್ದ ಸಂಗತಿ ಪುರ್ವತೀರದಲ್ಲಿ ಪಾಂಡಿಚೇರಿಯ ಬಳಿಯಿರುವ ಅರಿಕಮೇಡು ಮತ್ತು ಕಾವೇರಿಯ ಮುಖಜಭೂಮಿಯಲ್ಲಿರುವ ಕಾವೇರಿ ಪುಂಪಟ್ಟಿನಮ್ ಉತ್ಖನನಗಳಿಂದ ತಿಳಿದು ಬಂದಿದೆ. (ನೋಡಿ- ಅರಿಕಮೇಡು) (ನೋಡಿ- ಕಾವೇರಿ-ಪೊಂಪಟ್ಟಿನಂ) ಒಳಪ್ರದೇಶದಲ್ಲಿ ಅವರ ವ್ಯಾಪಾರ ಕೇಂದ್ರಗಳಿದ್ದುದಕ್ಕೆ ದಕ್ಷಿಣ ಭಾರತದ ಹಲವಾರು ಭಾಗಗಳಲ್ಲಿ ದೊರೆತಿರುವ ಅವರ ನಾಣ್ಯಗಳು ಮತ್ತಿತರ ಅವಶೇಷಗಳು ಸಾಕ್ಷಿಗಳಾಗಿವೆ. ಚಿತ್ರದುರ್ಗದ ಪರಿಸರದಲ್ಲಿರುವ ಚಂದ್ರವಳ್ಳಿ, ಕಾವೇರಿ ದಂಡೆಯಲ್ಲಿ ತಿರುಚಿರಾಪಳ್ಳಿಯ ಭಾಗವಾದ ಪ್ರಾಚೀನ ಚೋಳ ರಾಜಧಾನಿ ಉರೈಯೂರುಗಳಲ್ಲಿ ನಡೆದ ಉತ್ಖನನಗಳೂ ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನೊದಗಿಸಿವೆ. ಪ್ರಸ್ತುತ ಕಂಚಿ ಉತ್ಖನನಗಳು ಸಹ ಸಮಕಾಲೀನ ರೋಮನರ ಅವಶೇಷಗಳನ್ನು ಒದಗಿಸಿವೆ. ಪ್ರ.ಶ.ದ ಆರಂಭಕಾಲಕ್ಕೆ ನಿರ್ದೇಶಿಸಿಬಹುದಾದ ಪದರಗಳಲ್ಲಿ ರೋಮನರು ಎಣ್ಣೆ ಮತ್ತು ಮದ್ಯಗಳ ದಾಸ್ತಾನಿಗೆ ಉಪಯೋಗಿಸುತ್ತಿದ್ದ ಸುಟ್ಟ ಮಣ್ಣಿನ ನೀಳವಾದ ಹೂಜಿಗಳು (ಅಂಪೋರ) 36ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರಕಿ, ಇಲ್ಲಿದ್ದ ರೋಮನರ ವ್ಯಾಪಾರಕೋಠಿಯಪ್ರಾಮುಖ್ಯವನ್ನು ತೋರಿಸುತ್ತದೆ. ಸು. ಅದೇ ಕಾಲಕ್ಕೆ ನಿರ್ದೇಶಿಸಬಹುದಾದ ಸುಟ್ಟ ಇಟ್ಟಿಗೆಯ ಕಟ್ಟಡವೊಂದರ ಅವಶೇಷಗಳೂ ಬೆಳಕಿಗೆ ಬಂದಿವೆ. ಸರಾಸರಿ 18´9´3 ಅಂಗುಲಗಳ ಅಳತೆಯ ಇಟ್ಟಿಗೆಗಳು ದಕ್ಷಿಣ ಭಾರತದಲ್ಲಿ ಶಾತವಾಹನರ ಕಾಲದಿಂದ ಹಲವಾರು ಶತಮಾನಗಳವರೆಗೂ ಬಳಕೆಯಲ್ಲಿದ್ದುವು. ಈ ಉತ್ಖನನಗಳಲ್ಲಿ ಬೆಳಕಿಗೆ ಬಂದ ಮತ್ತೊಂದು ಮುಖ್ಯ ಸಂಗತಿಯೆಂದರೆ ಮಧ್ಯ ಚಾರಿತ್ರಿಕ ಯುಗಕ್ಕೆ ನಿರ್ದೇಶಿಸಬಹುದಾದ ಸುಟ್ಟಮಣ್ಣಿನ ಬಳೆಯಾಕಾರದ ವಲಯಗಳಿಂದ ಪಕ್ಕಗಳನ್ನು ಭದ್ರಪಡಿಸಿದ ನೀರಿನ ಬಾವಿಗಳು. ಈ ರೀತಿಯ ಬಾವಿಗಳು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದುವು. ಇವಲ್ಲದೆ ವಿವಿಧ ರೀತಿಯ ಮಡಕೆ ಚೂರುಗಳನ್ನು ಮಣಿಗಳು, ಬಳೆ ಚೂರುಗಳು, ಸುಟ್ಟಮಣ್ಣಿನ ವಸ್ತುಗಳು ಮತ್ತು ಕೆಲವು ಪುರಾತನ ನಾಣ್ಯಗಳು ದೊರಕಿ ಅಂದಂದಿನ ಜನಜೀವನದ ಮೇಲೆ ಬೆಳಕನ್ನು ಬೀರಿವೆ.