ಸದಸ್ಯ:Swathi Abhyankar/sandbox
ಬೂಡು ಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
ಹಚ್ಚ ಹಸುರಿನ ಪ್ರಶಾಂತವಾದ ನಿಸರ್ಗದ ಮಡಿಲಿನಲ್ಲಿ, ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ದೆವಿ ದೇವಸ್ಥಾನ ಇದಾಗಿದೆ. ಬೂಡು ಮುಗೇರಿನ ಈ ದೇವಾಲಯ ಪ್ರಾಚೀನತೆಯನ್ನು ಹೊಂದಿರುವ ದೇವಾಲಯವಾಗಿದ್ದು, ನಂಬಿದ ಭಕ್ತರ ಅಭೀಷ್ಟಗಳನ್ನು ಈಡೇರಿಸಿ, ಗ್ರಾಮಕ್ಕೂ ಸುಭೀಕ್ಷೆಯನ್ನು ನೀಡುತ್ತಲಿದೆ. ಇದರ ಇತಿಹಾಸದ ಬಗೆಗೆ ಹೇಳುವುದಾದರೆ ಸುಮಾರು 800 ವರ್ಷಗಳ ಹಿಂದೆ ಜೈನ ಅರಸರ ಆಳ್ವಿಕೆಯ ಕಾಲದಲ್ಲಿ ಈ ದೇವಿ ಗುಡಿಯು ರೂಪುಗೊಂಡಿದೆ ಎಂದು ಹೇಳಲಾಗಿದೆ. ಬಲ್ಲ ಮೂಲದ ಪ್ರಕಾರ ಹಿಂದೆ ಶಿಬಾಜೆ ಗ್ರಾಮದಲ್ಲಿ ವಾಸಿಸುತಿದ್ದ ಕುಮಾರನೆಂಬುವನು ಈಚಲು ತಾಳೆಮರಗಳಿಂದ ಸಂಗ್ರಹಿಸಿ ಇಳಿದು ಬಂದಾಗ ವನದಲ್ಲಿ ದುರ್ಗೆ ಉಯ್ಯಾಲೆಯಲ್ಲಿ ಕುಳಿತು ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಿದ್ದಳು. ಈತನು ದೂರದಲ್ಲೆ ಮರೆಯಾಗಿ ನಿಂತು ದೇವಿಯ ಲಾವಣ್ಯವನ್ನು ಎವೆಯಿಕ್ಕದೆ ನೋಡಿ ಮನೆಗೆ ಮರಳಿದನು. ಇದೇ ಅಭ್ಯಾಸವಾಗಿ ಪ್ರತಿದಿನ ಗುಡಿಸಲಿಗೆ ಬಹಳ ತಡವಾಗಿ ಹಿಂತಿರುಗುತ್ತಿದ್ದ. ಇದರಿಂದ ಸಂಶಯಗೊಂಡ ಆತನ ಹೆಂಡತಿ ಒಂದು ದಿನ ಅವನನ್ನು ಹಿಂಬಾಲಿಸಿದಳು. ಆತ ದೇವಿಯನ್ನು ನೋಡುತ್ತಿದ್ದಾಗ ಅವಳಲ್ಲಿ ಅನುರಕ್ತನಾಗಿರುವನೆಂದು ತಿಳಿದು ಅವ್ಯಾಚವಾಗಿ ಬಯ್ಯತೊಡಗಿದಳು. ಇದನ್ನು ಕೇಳಿದ ದುರ್ಗಾದೇವಿ ಶರೀರವು ಕೋಪದಿಂದ ಕಂಪಿಸಿ ಒಡೆದು ಅನೇಕ ಶಿಲಾಭಾಗಗಳಾಗಿ ರೂಪುಗೊಂಡ, ಒಂದು ಭಾಗವು 'ಬೂಡು ಮುಗೇರು' ಎಂಬಲ್ಲಿ ಸಿಡಿದು ಬಿತ್ತು ಎಂಬ ಪ್ರತೀತಿ ಇದೆ. ಈ ದೇವಾಲಯದ ವಿಶೇಷತೆ ಎಂದರೆ ಭಕ್ತರು ದೇವಿಗೆ ಹರಕೆಯಾಗಿ "ಬೊಂಕ" (ಬಿದಿರಿನ ಮೊಂಟೆ), ಕರಿಬಳೆಗಳನ್ನು ನೀಡುವ ವಾಡಿಕೆಯಿದೆ. ಕಂಕಣ ಭಾಗ್ಯದ ಪ್ರಾಪ್ತಿಗಾಗಿ ಕರಿಬಳೆಗಳನ್ನು ಹರಕೆಯಾಗಿ ಮತ್ತು ಜಾನುವಾರುಗಳ ಕಾಯಿಲೆಯು ವಾಸಿಯಾಗಲೆಂದು 'ಬೊಂಕ'ಗಳನ್ನು ಸಮರ್ಪಿಸುವುದು ಇಲ್ಲಿನ ವಿಶಿಷ್ಟತೆ.