ಮಳೆರಾಯನ ಪೊಜೆ ಮತ್ತು ಕುಣಿತ ಬದಲಾಯಿಸಿ

ಸಕಲ ಜೀವರಾಶಿಗಳ ಬದುಕಿಗೆ ಕಾರಣವಾದ ಮಳೆ ಮೂಲಭೂತ ಅಗತ್ಯಗಳನ್ನು ಪೂರೈಸುವ ಒಂದು ಮಹತ್ವದ ದೈವ ಪದ್ಧತಿ. ಸಕಾಲಕ್ಕೆ ಮಳೆಯಾದರೆ ಬೆಳೆ, ಬೆಳೆಯಾದರೆ ಬದುಕು. ಅದರೆ ಮಳೆಗಾಲ ಸಮೀಪಿಸಿಯೂ ಮಳೆ ಬಾರದೇ ಹೋದರೆ ಕಂಗಾಲಾದ ರೈತರು ಮಳೆರಾಯನಿಗೆ ಮೊರೆ ಹೋಗುತ್ತಾರೆ. ಕೃಷಿಯನ್ನು ನಂಬಿದ ರೈತರು ಅದಕ್ಕಾಗಿ ಕೆಲವು ಆಚರಣೆಗಳನ್ನು ಮಾಡುವುದುಂಟು. ಅಂತಹ ಸಂದರ್ಭಗಳಲ್ಲಿ ಮಳೆಗಾಗಿ ಪ್ರಾ‍ರ್ಥಿಸುವ ಆಚರಣೆಯ ಜೊತೆ ಮಳೆರಾಯನ ಕುಣಿತವೂ ಇರುತ್ತದೆ. ಇದು ಕರ್ನಾಟಕದಾದ್ಯಂತ ಕಂಡು ಬರುತ್ತಾದೆಯಾದರೂ ಪ್ರದೇಶದಿಂದ ಪ್ರದೇಶಕ್ಕೆ ಅವರ ವಿಧಾನದಲ್ಲಿ ವ್ಯತ್ಯಾಸವಿರುವುದನ್ನು ಗುರುತಿಸಬಹುದಾಗಿದೆ.

ಮಳೆರಾಯನ ಮೆರವಣಿಗೆ ಬದಲಾಯಿಸಿ

ದಕ್ಷಿಣ ಕರ್ನಾಟಕದಲ್ಲಿ ಹುಡುಗರೆಲ್ಲರು ಸೇರಿ ಜೇಡಿಮಣ್ಣಿನಿಂದ ಮಳೆರಾಯನ ವಿಗ್ರಹವನ್ನು ಮಾಡಿ ಅದನ್ನು ಹಲಗೆ ಮೇಲಿಟ್ಟು ಅರಿಶಿನ, ಕುಂಕುಮವಿಟ್ಟು ಕಣಗಲೆ, ಮುತ್ತುಗ, ಮಲ್ಲಿಗೆ ಮುಂತಾದ ಹೂವುಗಳಿಂದ ಅಲಂಕರಿಸಿ ಪೂಜೆ ಮಾಡುತ್ತಾರೆ. ಬೆತ್ತಲೆ ಇರುವ ಓರ್ವ ಬಾಲಕ ಮಳೆರಾಯನ ವಿಗ್ರಹವನ್ನು ಹೊತ್ತುಕೊಳ್ಳುತ್ತಾನೆ. ಇವನ ಹಣೆಗೂ ಅರಿಶಿನ ಕುಂಕುಮ ಹಚ್ಚಿ ಕೊರಳಿಗೆ ಹೂಮಾಲೆಯನ್ನು ಹಾಕಿರುತ್ತಾರೆ. ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಹುಡುಗರೆಲ್ಲರೂ ಸೇರಿಕೊಂಡು ವಿವಿಧ ಹಾಡುಗಳನ್ನು ಹಾಡುತ್ತಾ ಮಳೆರಾಯನ ವಿಗ್ರಹವನ್ನು ಹೊತ್ತ ಬೆತ್ತಲೆ ಬಾಲಕನ ಜೊತೆಯಲ್ಲಿ ಮನೆ ಮನೆ ಬಾಗಿಲಿಗೆ ಹೋಗುತ್ತಾರೆ. ಅವರಲ್ಲಿ ಒಬ್ಬ ಕೈಯಲ್ಲಿ ಗರುಡಗಂಬ ಹಿಡಿದಿರುತ್ತಾನೆ. ಪ್ರತಿಯೊಂದು ಮನೆ ಬಾಗಿಲಿಗೆ ಹೋದಾಗಲೂ ಮನೆಯ ಹೆಂಗಸರು ಮಳೆರಾಯನ ವಿಗ್ರಹ ಹೊತ್ತ ಹುಡುಗನ ತಲೆ ಮೇಲೆ ಒಂದೊಂದು ಕೊಡ ತಣ್ಣೀರನ್ನು ಸುರಿದು ವಿಗ್ರಹಕ್ಕೆ ಅರಿಶಿನ ಕುಂಕುಮ ಹಚ್ಚಿ ಹೂವು ಇಟ್ಟು ಗರುಡಗಂಬಕ್ಕೆ ಎಣ್ಣೆ ಹಾಕಿ ಪೂಜೆ ಮಾಡಿ ಧವಸ ಧಾನ್ಯ ಅಥವಾ ಹಣದ ರೂಪದ ಕಾಣಿಕೆಯನ್ನು ನೀಡುತ್ತಾರೆ.

ಮಳೆರಾಯನ ಹಾಡು ಬದಲಾಯಿಸಿ

ಬಾರಪ್ಪ ಮಳೆರಾಯ

ನೀನು ಬಂದಂತ ದಿನದೊಳಗೆ

ಹಳ್ಳದಿಣ್ಣೆ ಎಲ್ಲ ದಾಟಿ

ಒಂದು ದುಂಡು ಮಲ್ಲಿಗೆ ಹೂವ ತಂದೆ

ಹೂವ ಮುಡಿಯೋ ಮಳೆರಾಯ

ನೀನು ಬಂದಂತಾ ದಿನದೊಳಗೆ...

ಊರನ್ನೆಲ್ಲ ಸುತ್ತಿದ ಬಳಿಕ ಸಂಗ್ರಹಿಸಿದ ಧವಸ ಧಾನ್ಯವನ್ನೆಲ್ಲ ಮಾರಾಟ ಮಾಡಿ ಬಂದ ಹಣದಿಂದ ಪುರಿ, ಬೆಲ್ಲ, ಕಾಯಿ, ಬಾಳೆಹಣ್ಣು, ಕರ್ಪೂರ, ಊದುಬತ್ತಿಗಳನ್ನು ತಂದು ಊರ ಹೊರಗಿನ ಕೆರೆ ಇಲ್ಲವೇ ಬಾವಿಯ ಹತ್ತಿರ ಹೋಗಿ ಮಳೆರಾಯನಿಗೆ ಪೂಜೆ ಮಾಡಿ ಬಂದವರಿಗೆಲ್ಲ "ಚರ್ಪು" ಹಂಚಿ ಬಾವಿ ಅಧವಾ ಕೆರೆಯಲ್ಲಿ ಮಳೆರಾಯನನ್ನು ಬಿಟ್ಟು ಬರುತ್ತಾರೆ.

ಕಂಬಳಿ ಬೀಸುವುದು ಬದಲಾಯಿಸಿ

ಮಳೆಯ ಅಭಾವ ತೀವ್ರಾವಾಗಿ ಕಂಡುಬಂದಾಗ ಗ್ರಾಮಸ್ಧರು ಮಳೆರಾಯನನ್ನು ಕರೆಯುವ ಕಾರ್ಯಕ್ರಮವನ್ನು ಒಂದು ದಿನ ನಿಗದಿಪಡಿಸುತ್ತಾರೆ, ಊರ ಪ್ರಮುಖರು ಸ್ನಾನಾದಿಗಳನ್ನು ಮುಗಿಸಿ ಶುದ್ಧ ಮನಸ್ಸಿನಿಂದ, ಭಕ್ತಿ ಭಾವದಿಂದ ಮಳೆರಾಯನನ್ನು ಕರೆಯಲು ಊರ ಬಯಲು ದಿಬ್ಬದ ಮೇಲೆ ಏರಿ ಆಕಾಶಕ್ಕೆ ಮುಖಮಾಡಿ ಕೈ ಜೋಡಿಸಿ ನಿಲ್ಲುತ್ತಾರೆ. ಹಾಲುಮತದ (ಕುರುಬ) ವ್ಯಕ್ತಿಯೊಬ್ಬ ತನ್ನ ಕಂಬಳಿಯನ್ನು ಬೀಸಿ ಮಳೆ ಮರಳಿ ಮನೆಗೆ ಬರುವಷ್ಟರಲ್ಲಿ ಮಳೆ ಬೀಳುತ್ತದೆಂದು ಈಗಲೂ ನಂಬುತ್ತಾರೆ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಈ ಪದ್ದತಿ ಇನ್ನೂ ಆಚರಣೆಯಲ್ಲಿದೆ.

ಗುರ್ಚಿ ಹೊರುವುದು ಬದಲಾಯಿಸಿ

ಉತ್ತರ ಕರ್ನಾಟಕದಲ್ಲಿ ಮಳೆ ಬರದಿರುವಾಗ ಗುರ್ಚಿಯನ್ನು ಹೊತ್ತು ತಿರುಗುವ ಪರಿಪಾಠವಿದೆ. ಮಲೆನಾಡಿನ ಗಡಿ ಭಾಗಗಳಲ್ಲಿ ಊರ ಹುಡುಗರೇ ಗುರ್ಚಿಯನ್ನು ಹೊತ್ತು ತಿರುಗಿ ದೇವರಿಗೆ ಕಾಯಿ-ಕರ್ಪೂರ ಬೆಳಗಿ ಮಳೆಯಾಗಲೆಂದು ಬೇಡಿಕೊಳ್ಳುತ್ತಾರೆ. ಬೆಳವಲಯದಲ್ಲಿ ಕುಂಚಿ ಕೊರವರ ಮಕ್ಕಳು ಗುರ್ಚಿಯನ್ನು ತಲೆಯ ಮೇಲೆ ಹೊತ್ತು ತಿರುಗುತ್ತಾರೆ. ಇನ್ನು ಹಲವು ಕಡೆ ಕೊರವರು, ಊರಲ್ಲಿಯ ಹುಡುಗರು ಗುರ್ಚಿಯನ್ನು ಹೊತ್ತು ತಿರುಗುತ್ತಾರೆ. ರೊಟ್ಟಿಯ ಹಂಚನ್ನು ಬೋರಲು ಮಾಡಿ ಅದರ ಮೇಲೆ ಲಿಂಗದಾಕೃತಿಯ ಸಗಣಿಯ ಉಂಡೆಯನ್ನು ಸ್ಧಾಪಿಸುವರು. ಇದನ್ನು ಏಳು ಅಧವಾ ಎಂಟು ವರುಷದ ಒಳಗಿನ ಹುಡುಗ ಅಧವಾ ಹುಡುಗಿಯಾಗಲಿ ಅರೆ ಬೆತ್ತಲೆಯಾಗಿ ಹೊತ್ತು ಹೋಗುತ್ತಾರೆ. ಹೊತ್ತವರ ಹಿಂದೆ ಹಲವರು ಬೆನ್ನು ಹತ್ತಿ ಮನೆ ಮನೆ ತಿರುಗಿ,

ಗು‍ರ್ಚಿಗುರ್ಚಿ ಎಲ್ಯಾಡಿ ಬಂದಿ

ಹಳ್ಳಾ ಕೊಳ್ಳ ತಿರುಗಾಡಿ ಬಂದೆ

ಕಾರ ಮಳೆಯೆ ಕಪ್ಪತ ಮಳಿಯೇ

ಸುರಿ ಮಳಿಯೇ ಸುರಿ ಮಳಿಯೇ

ಇತ್ಯಾದಿ ಹಾಡುತ್ತಾರೆ. ಮನೆಯವರು ತಂಬಿಗೆಯಲ್ಲಿ ನೀರು ತಂದು ಗುರ್ಚಿಯ ಮೇಲೆ ಸುರಿಯುತ್ತಾರೆ. ಆಗ ಆತ ಒಂದೇ ಸ್ಧಳದಲ್ಲಿ ನಿಲ್ಲದೇ ತನ್ನ ಸುತ್ತಾ ತಿರುಗುತ್ತಾನೆ ಹೀಗೆ ತಿರುಗುವಿಕೆಯಿಂದಾಗಿ ಗುರ್ಚಿಯ ಮೇಲೆ ಸುರಿದ ನೀರು ಹಂಚಿನ ಅಂಚಿನಿಂದ ಹನಿ ಹನಿಯಾಗಿ ನೆಲಕ್ಕೆ ಬೀಳುವುದರ ಮೂಲಕ ಹಳೇಯ ನೆನಪನ್ನು ತಾರದೇ ಇರದು. ನೀರೆರೆದ ಮೇಲೆ ಮನೆಯ ಹೆಣ್ಣು ಮಕ್ಕಳು ಮೊರದ ತುಂಬಾ ಜೋಳ ಹಾಕುವರು, ಅಲ್ಲದೇ ದುಡ್ಡನ್ನು ಕೊಟ್ಟು ಕಳಿಸುವರು. ಹೀಗೆ ಓಣಿ ಓಣಿಯಲ್ಲಿ ತಿರುಗಿ ಊರೆಲ್ಲ ಅಡ್ಡಾಡಿದ ಮೇಲೆ ಮಳೆ ಬರಲೆಂದು ಆ ಗುರ್ಚಿಯುನ್ನು ಹೊತ್ತು ತಿರುಗಿ ಪೂಜೆ ಮಾಡುವುದರಿಂದ ಮಳೆಯಾಗುವುದೆಂಬ ನಂಬಿಕೆ ಈಗಲೂ ಬೆಳೆದು ಬಂದಿದೆ.

ತುಂಬಿದ ಕೊಡ ಪೂಜೆ ಬದಲಾಯಿಸಿ

ನೀರು ತುಂಬಿದ ಕೊಡದ ಮೇಲೆ ತೆಂಗಿನ ಕಾಯಿ ಇರಿಸಿ ಕೊಡದ ಬುಡದಲ್ಲಿ ಜೋಳ ಇಲ್ಲವೇ ಗೋಧಿಯನ್ನು ಸುರಿಯುತ್ತಾರೆ. ಕೊಡದ ಕಂಠಕ್ಕೆ ಹೆಣ್ಣು ಮಕ್ಕಳ ಎಲ್ಲಾ ತರಹದ ಕೊರಳ ದಾಗೀನುಗಳನ್ನು ಹಾಕಿ ಸಿಂಗರಿಸುತ್ತಾರೆ. ಕುಂಕುಮ, ವಿಭೂತಿ ಹಚ್ಚಿ ಐದು ಜನ ಮುತ್ತೈದೆಯರು ಪೂಜೆ ವಿಧಿವಿಧಾನಗಳನ್ನು ಮುಗಿಸುತ್ತಾರೆ. ನಂತರ ತುಂಬಿದ ಕೊಡಕ್ಕೆ ಆರತಿಯನ್ನು ಬೆಳಗುತ್ತಾರೆ. ನಂತರ ಮುತ್ತೈದೆಯರು ಒಬ್ಬೊಬ್ಬರಾಗಿ ಕೊಡದ ಕಂಠವನ್ನು ಹಿಡಿದು ತಿರುವಿದಾಗ ಕೂಡ ತನ್ನ ಮೈಸುತ್ತು ಐದು ಸುತ್ತು ಬಿಡದೆ ಹಾಕಿದರೆ ಐದು ದಿನಗಳಲ್ಲಿ ಮಳೆಯಾಗುವುದು ಖಂಡಿತ ಎಂದು ಜನ ಹೇಳುತ್ತಾರೆ. ಕೊಡವನ್ನು ಸಾರ್ವ‍ಜನಿಕ - ಧಾರ್ಮಿ‍ಕ ಸ್ಥಳದಲ್ಲಿ ಇರಿಸುತ್ತಾರೆ.

ಕಪ್ಪೆ-ಒನಕೆ ಮೆರವಣಿಗೆ ಬದಲಾಯಿಸಿ

ಮೈಸೂರು ಭಾಗದಲ್ಲಿ ಇನ್ನೊಂದು ರೀತಿಯ ಸಂಪ್ರದಾಯವಿದೆ. ಹುಡುಗರೆಲ್ಲರೂ ಸೇರಿ ಊರಿನ ಕೆರೆಯೊಂದರಲ್ಲಿ ಹೋಗಿ ಇಬ್ಬರು ಚಿಕ್ಕ ಹುಡುಗರಿಗೆ ಸ್ನಾನ ಮಾಡಿಸುತ್ತಾರೆ. ಒನಕೆ ಹಾಗೂ ಜೀವ ಇರುವ ಕಪ್ಪೆಗೆ ಪೂಜೆ ಸಲ್ಲಿಸುತ್ತಾರೆ. ಅನಂತರ ಸ್ನಾನ ಮಾಡಿದ ಹುಡುಗರು ಬೆತ್ತಲೆಯಾಗಿ ಒನಕೆಯನ್ನು ಒಂದೊಂದು ತುದಿಯಲ್ಲಿ ಹೊತ್ತು ನಿಲ್ಲುತ್ತಾರೆ. ಆ ಒನಕೆಯ ಮೇಲೆ ಕಪ್ಪೆಯನ್ನು ಕಟ್ಟಿ ಇಡುತ್ತಾರೆ. ಇದನ್ನು ಹೊತ್ತು ಊರಿನ ಎಲ್ಲಾ ಮನೆ ಮುಂದೆ

ಹುಯ್ಯ ಹುಯ್ಯ ಮಳೆದೇವ

ಹೂವಿನ ತೋಟಕ್ಕೆ ನೀರಿಲ್ಲ

ಹುಯ್ಯ ಹುಯ್ಯ ಮಳೆದೇವ

ಬಾಳೇ ತೋಟಕ್ಕೆ ನೀರಿಲ್ಲ

ಎಂದು ಹಾಡು ಹೇಳುತ್ತಾ ಬರುತ್ತಾರೆ. ಈ ಹಾಡು ಒಂದೊಂದು ಹಳ್ಳಿಗೂ ವ್ಯತ್ಯಾಸವಾಗುವುದುಂಟು. ಆಗ ಅವರಿಗೆ ಒಂದೊಂದು ಕೊಡ ನೀರನ್ನು ತಲೆಯ ಮೇಲೆ ಸುರಿಯುವರು ಹಾಗೂ ಧವಸ ಧಾನ್ಯವನ್ನು ಕೊಡುವರು. ಕೊನೆಯಲ್ಲಿ ಕಪ್ಪೆಯನ್ನು ಕೆರೆಯಲ್ಲಿ ಬಿಡುವರು ಸಂಗ್ರಹಿಸಿದ ಧವಸ ಧಾನ್ಯದಲ್ಲಿ ಅಂಬಲಿ (ಗಂಜಿ) ಕಾಯಿಸಿ ಹುಣಸೆಸೊಪ್ಪು ಬೇಯಿಸಿ ಬಿಂದಿಯಲ್ಲಿ ತುಂಬಿಕೊಂಡು ಬೀದಿಯುದ್ದಕ್ಕೂ ಜನರಿಗೆಲ್ಲ ಅಂಬಲಿ ಬಿಡುತ್ತಾ ಸೊಪ್ಪು ಕೊಡುತ್ತಾ ಹೋಗುವರು ಈ ಸಂದರ್ಭದಲ್ಲಿ ಅನೇಕ ರೀತಿಯ ಹಾಡುಗಳನ್ನು ಹಾಡುವುದುಂಟು.

ಚಿತ್ತಾರದ ಚಂದ್ರಮ ಬದಲಾಯಿಸಿ

ಆಂಧ್ರದ ಪ್ರಭಾವವಿರುವ ಕೋಲಾರದಲ್ಲಿ ರೂಢಿಯಲ್ಲಿರುವ ಆಚರಣೆ ಈ ರೀತಿ ಇದೆ. ರೈತ ವರ್ಗದ ಜನರು ಗುಂಪು ಸೇರಿಕೊಂಡು ಕಲ್ಲುಗಳನ್ನು ಎತ್ತಿಕೊಂಡು ಹಾಡು ಹೇಳುತ್ತಾ ಮನೆವರೆಗೂ ಹೋಗುತ್ತಾರೆ. ಪ್ರತಿ ಮನೆಯಲ್ಲೂ ಅಸಿಟ್ಟನ್ನು ಕೊಟ್ಟು ಅವರ ಮೇಲೆ ನೀರನ್ನು ಎರಚ್ಚುತ್ತಾರೆ. ಬಳಿಕ ಚಂದ್ರನನ್ನು ರಂಗೋಲಿಯಲ್ಲಿ ಬಿಡಿಸಿ ಆ ಚಿತ್ತಾರವನ್ನು ಮುಂದೆ ರೊಟ್ಟಿ, ಅನ್ನವನ್ನು ರಂಗದ ಕಲ್ಲಿಗೆ ಒಯ್ದು ಮುಟ್ಟಿಸಿ ಹಿಂದಿರುಗುವಂತೆ ಹೇಳುತ್ತಾರೆ. ಆಗ ಹೆಂಗಸರು ಮಕ್ಕಳು ಅವನ್ನು ಅಲ್ಲಿಗೆ ಹೋಗಲು ಬಿಡದಂತೆ ನೀರು ಎರಚುತ್ತಾರೆ. ಆದರೂ ಹೆಗೋ ತಪ್ಪಿಸಿಕೊಂದು ಹೋಗಿ ರಂಗದ ಕಲ್ಲನ್ನು ಮುಟ್ಟಿಸಿ ಬಂದು ನೆರೆಯವರಿಗೂ ಅನ್ನ ರೊಟ್ಟಿಯ ಪ್ರಸಾದ ಹಂಚುತ್ತಾರೆ. ಈ ರೀತಿ ಎಂಟು ದಿನ ಜರುಗುತ್ತದೆ. ಒಂಭತ್ತನೇ ದಿನದಂದು ಬಾವಿಯ ಹತ್ತಿರ ಊಟದ ವ್ಯವಸ್ಥೆ ಮಾಡಿರುತ್ತಾರೆ, ಆಗ ಚಿತ್ತಾರದ ಚಂದ್ರನನ್ನು ವಿಸರ್ಜಿಸುತ್ತಾರೆ. ಈ ಸಂದರ್ಭದಲ್ಲಿ ಮಳೆರಾಯನನ್ನು ಕುರಿತು ಹಾಡುವುದು ಉಂಟು. ಹಾಗೆಯೇ, ಹಾಸನ ಜಿಲ್ಲೆಯಲ್ಲಿಯೂ ಈ ಕಲೆ ಪ್ರಚಲಿತವಿದ್ದು ಹೊಗೆಸೊಪ್ಪು ಕಟ್ಟಿಕೊಂಡು ಹುಡುಗರು ಕುಣಿಯುತ್ತಾರೆ. ಆದರೆ ರೊಟ್ಟಿ ಅನ್ನವನ್ನು ಕರೆ ಕಲ್ಲಿಗೆ ಮುಟ್ಟಿಸುವುದು ಇಲ್ಲಿಯ ವಿಶೇಷ.

ನವಧಾನ್ಯದ ಪೂಜೆ ಬದಲಾಯಿಸಿ

ಕೋಲಾರ ಜಿಲ್ಲೆಯ ಕೆಲವು ಕಡೆ ಮಳೆರಾಯನ ಕುರಿತು ಮತ್ತೊಂದು ಆಚರಣೆ ರೂಢಿಯಲ್ಲಿದೆ. ಮಳೆ ಬಾರದ ಸಮಯದಲ್ಲಿ ಹಳ್ಳಿಯ ಜನ ಒಂದೆಡೆ ಸೇರಿ ನವಧಾನ್ಯಗಳನ್ನು ರಾಶಿ ಮಾಡಿ ನೆನೆಸುತ್ತಾರೆ. ಅದರ ಮೇಲೆ ಹೊಸ ಮಡಿಕೆ ಒಂದನ್ನು ಇಟ್ಟು ಪೂಜೆ ನೈವೇದ್ಯ ಮಾಡಿ ಸುಮಾರು ಐದರಿಂದ ಆರು ವರ್ಷ‍ದ ಮೂವರು ಮಕ್ಕಳನ್ನು ಆ ಮಡಿಕೆಯ ಮೇಲೆ ಕೈ ಇರಿಸುವಂತೆ ಹೇಳುತ್ತಾರೆ. ಆಗ ಆ ಹೊಸ ಮಡಕೆ ಸುತ್ತಲೂ ಕೋಲಾಟವು ನಡೆಯುತ್ತದೆ. ಈ ಆಚರಣೆ ನಡೆದ ಒಂದು ತಿಂಗಳಿಗೆ ಸರಿಯಾಗಿ ಮಳೆ ಬರುವುದಾಗಿ ನಂಬುತ್ತಾರೆ. ಈ ಪೂಜೆ ಹುಣ್ಣಿಮೆಯಲ್ಲಿ ಮಾತ್ರ ನೆರವೇರುತ್ತದೆ. ಪೂಜೆ ನಡೆಯುವ ಸಂದರ್ಭ‍ದಲ್ಲಿ ಜನರು ನಿಶ್ಯಬ್ಧವಾಗಿರುತ್ತಾರೆ. ಬಳಿಕ ಪೂಜಿಸಿದ ಧಾನ್ಯಗಳನ್ನು ಊರಿನ ತೊಟ್ಟಿ ತಳವಾರ, ಆಗಸ, ನೀರಗಂಟೆಯವರಿಗೆ ದಾನ ಮಾಡುತ್ತಾರೆ.

ಮಳೆರಾಯನ ಹಾಡುಗಳು ಬದಲಾಯಿಸಿ

ಮಳೆ ಹೋಯ್ತೆಂದು ಮಳೆರಾಯನ ಬೈಯದಿರಿ

ಸಾವಿರ ಹೊನ್ನಿನ ಸರಗಂಟೇ |ತಕ್ಕೋಂಡು

ಸಾಲಕೆ ಹೋಗವನೆ ಮಳೆರಾಯ||

ಅಪ್ಪ ನೀನಿಲ್ಲದೆ ಬೆಪ್ಪದೋ ಈ ಭೂಮಿ

ಬಿಟ್ಟ ನೂಲಾದೊ ದನಕರ ಮಳೆರಾಯ

ಅಂಬಾರದ ಕರುಣೆ ದಯಮಾಡೊ||

ಆಕಾಶದಲ್ಲಿ ಯಾಕೆ ನಿಂತೋ ಮಳೆರಾಯ

ಗೊಂಬೆ ಹಚ್ಚಡದ ದೊರೆ ಮಗನ| ಹೊಲದಲ್ಲಿ

ದುಂಡಕ್ಕಿ ಬಾಯ ಬಿಡುತಾವೆ||

ಗುಡಗೀದ ಗುಡಗಿದ ಗುಬ್ಬೀಲಿ ಮಿಂಚಿದ

ಹಬ್ಬೂರಿನ ಮ್ಯಾಲೆ ಮಳೆಬಿದ್ದೂ ನಂಜನಗೂಡು

ತೇರಿನ ಮ್ಯಾಲೆ ಹನಿ ಬಿದ್ದೂ||

ಸ್ವಾತಿಯ ಮಳೆ ಬಂದು ಮಳೆರಾಜ

ಸುತ್ತ ದೆಸಕ್ಕೆ ಆಗ್ಯಾದೆ ಮಳೆರಾಜ|

ಹಳ್ಳಕೊಳ್ಳ ಹೆಣ ಹರಿದಾಡಿ ಹೋದವು

ಯಾವಾಗ ಬಂದ್ಯಪ್ಪ ಮಳೆರಾಜ||

ಉಲ್ಲೇಖ ಬದಲಾಯಿಸಿ

  1. ಗೋ.ರು ಚನ್ನಬಸವಪ್ಪ, ಕನಾ‍ಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೧೫-೧೬