ಸಿಹಿತಿನಿಸುಗಳು:


ಮೈಸೂರ್ ಪಾಕ್: ಬೇಕಾಗುವ ಸಾಮಾಗ್ರಿಗಳು: ಕಡಲೆಹಿಟ್ಟು-ಒಂದು ಕಪ್ ಸಕ್ಕರೆ - ಒಂದುವರೆ ಕಪ್ ನೀರು - ಎರಡು ಕಪ್ ತುಪ್ಪ - ಎರಡು ಕಪ್ ತಯಾರಿಸುವ ವಿಧಾನ: ಮೊದಲಿಗೆ ಪಾಕವನ್ನು ತಯಾರಿಸಬೇಕು. ದಪ್ಪ ತಳದ ಪಾತ್ರೆಗೆ ಸಕ್ಕರೆಯನ್ನು ಹಾಕಿ ನೀರಿನೊಂದಿಗೆ ಬೆರೆಸಿ, ಕರಗಿ ಅದು ಎಳೆಪಾಕ ಬರುವವರೆಗೂ ಕುದಿಸಿ. ಎರಡು ಬೆರಳುಗಳ ಮದ್ಯೆ ಒಂದುಹನಿ ಪಾಕ ತೆಗೆದುಕೊಂಡು ನೋಡಿ ಪಾಕ ಬೆರಳುಗಳ ಮದ್ಯೆ ಎಳೆಯಂತೆ ಅಥವಾ ನಾರಿನಂತೆ ಬಂದ ತಕ್ಷಣ ಸ್ವಲ್ಪ ಸಣ್ಣ ಉರಿ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟು ಮತ್ತು ತುಪ್ಪವನ್ನು ಜೊತೆಯಲ್ಲಿಯೇ ಹಾಕುತ್ತಾ ಕೈ ಬಿಡದಂತೆ ತಿರುಗಿಸುತ್ತಿರಿ, ಗಂಟು ಗಂಟಾಗದಂತೆ ನೋಡಿಕೊಳ್ಳಿ. ಇದೇ ರೀತಿ ಎಲ್ಲಾ ಹಿಟ್ಟು ಮತ್ತು ತುಪ್ಪವನ್ನು ಹಾಕಿ, ಚೆನ್ನಾಗಿ ತಿರುಗಿಸುತ್ತಿರಿ. ಈ ಮಿಶ್ರಣವೂ ಗಟ್ಟಿಯಾಗುತ್ತಾ ಗೂಡು ಗೂಡಿನಂತೆ ಬಂದು ಪಾತ್ರೆಯ ತಳ ಬಿಡುತ್ತಾ ಬಂದ ತಕ್ಷಣ ಹದ ನೋಡಿಕೊಂಡು ಜಿಡ್ಡು ಸವರಿದ ತಟ್ಟೆಗೆ ಸುರಿದು ಆಯುತಾಕಾರವಾಗಿ ಅಥವಾ ಚೌಕಾಕಾರವಾಗಿ ಕತ್ತರಿಸಿ. ತಣ್ಣಗಾಗುವ ಮೊದಲೆ ಕತ್ತರಿಸಿ, ನಂತರ ಗಟ್ಟಿಯಾಗುತ್ತದೆ. ಒಮ್ಮೊಮ್ಮೆ ಹದ ಸರಿಯಾಗಿ ಬರದೇ ಇದ್ದಾಗ ಮೈಸೂರ್ ಪಾಕ್ ಗಟ್ಟಿಯಾಗಿ ಅಥವಾ ಮೆತ್ತಗೂ ಬರಬಹುದು, ಆದರೂ ತಿನ್ನಲು ರುಚಿಯಂತು ಇರುತ್ತದೆ. ಸವಿಯಾದ ಮೈಸೂರ್ ಪಾಕ್ ಸವಿಯಲು ಸಿದ್ದ.


ಹಾಲಿನ ಪೇಡ/ದೂದ್ ಪೇಡ: ಸಾಮಗ್ರಿಗಳು: ಹಾಲಿನಪುಡಿ - ಎರಡು ಬಟ್ಟಲು ಕಂಡೆನ್ಸ್ದ್ ಹಾಲಿನ ಟಿನ್ - ಒಂದು ಬೆಣ್ಣೆ - ಅರ್ಧ ಬಟ್ಟಲು ಏಲಕ್ಕಿ ಪುಡಿ ವಿಧಾನ: ಮೊದಲು ಬೆಣ್ಣೆಯನ್ನು ಕರಗಿಸಿ, ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ , ಹಾಲಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಗಂಟು ಆಗದಂತೆ ಕೈಯಾಡಿಸಿ, ಮಧ್ಯೆ ಮಧ್ಯೆ ತಿರುಗಿಸುತ್ತಿರಿ, ಅದು ಸ್ವಲ್ಪ ಗಟ್ಟಿಯಾದ ತಕ್ಷಣ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ . ತಳ ಬಿಟ್ಟು ಬರುತ್ತಿದೆ ಎನಿಸಿದಾಗ ಕೆಳಗಿಳಿಸಿ. ನಿಮಗೆ ಬೇಕಾದ ಆಕಾರದಲ್ಲಿ ಪೇಡಗಳನ್ನು ತಯಾರಿಸಿ. ಇದು ತಯಾರಿಸಲು ತುಂಬಾ ಸುಲಭ,ಬೇಗ ಆಗುತ್ತದೆ ಮತ್ತು ರುಚಿಯಾಗಿಯೂ ಇರುತ್ತದೆ. ಮಕ್ಕಳಿಗಂತು ಬಲು ಇಷ್ಟವಾಗುತ್ತದೆ.


ಸಬ್ಬಕ್ಕಿ-ಶ್ಯಾವಿಗೆ ಪಾಯಸ: ಸಾಮಗ್ರಿಗಳು: ಸಬ್ಬಕ್ಕಿ - ಒಂದು ಕಪ್ ಶ್ಯಾವಿಗೆ - ಅರ್ಧ ಕಪ್ ಹಾಲು - ಒಂದು ಕಪ್ ಸಕ್ಕರೆ ಅಥವ ಬೆಲ್ಲ ರುಚಿಗೆ ದ್ರಾಕ್ಷಿ ಮತ್ತು ಗೋಡಂಬಿ ತುಪ್ಪ ಏಲಕ್ಕಿ ಪುಡಿ ತಯಾರಿಸುವ ರೀತಿ: ಒಂದೆರಡು ಚಮಚ ತುಪ್ಪವನ್ನು ಕಾಯಿಸಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ. ಅದೇ ತುಪ್ಪದಲ್ಲಿ ಶ್ಯಾವಿಗೆಯನ್ನು ಹಾಕಿ ಚೆನ್ನಾಗಿ ಹುರಿದಿಡಿ. ಅದಕ್ಕೆ ಸಬ್ಬಕ್ಕಿಯನ್ನು ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಅರ್ಧ ಬೆಂದಿದೆ ಎನಿಸಿದಾಗ ಹಾಲು ಮತ್ತು ಸಕ್ಕರೆ ಸೇರಿಸಿ ಕುದಿಸಿ. ಸಬ್ಬಕ್ಕಿ ಮತ್ತು ಶ್ಯಾವಿಗೆ ಎರಡು ಚೆನ್ನಾಗಿ ಬೇಯಿಸಿ, ಅದಕ್ಕೆ ಏಲಕ್ಕಿ ಪುಡಿ,ಮತ್ತೆ ಒಂದೆರಡು ಚಮಚ ತುಪ್ಪ ಸೇರಿಸಿ.ಬೆರೆಸಿ. ಸಬ್ಬಕ್ಕಿಯು ದುಂಡಾಗಿ ಆಗಿ ಬೆಂದಿದೆ ಎನಿಸಿದ ಮೇಲೆ ಇಳಿಸಿ. ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ. ಕೇಸರಿ ದಳಗಳನ್ನು ಹಾಲಿನಲ್ಲಿ ನೆನೆಸಿ ಹಾಕಬಹುದು ಬೇಕಾದರೆ. ಅಥವ ನಿಮಗೆ ಇಷ್ಟವಾದ ಎಸೆನ್ಸ್ ಹಾಕಿಕೊಳ್ಳಬಹುದು. ಬರೀ ಶ್ಯಾವಿಗೆ ಪಾಯಸ ತಯಾರಿಸುವ ಬದಲು,ಈ ತರಹ ಬೇರೆ ರೀತಿಯಲ್ಲಿ ತಯಾರಿಸಬಹುದು. ಸಬ್ಬಕ್ಕಿ-ಶ್ಯಾವಿಗೆ ಪಾಯಸ ತಯಾರ್. * ಸಬ್ಬಕ್ಕಿ ಮತ್ತು ಶ್ಯಾವಿಗೆಯನ್ನು ಮೊದಲೇ ಬೇಯಿಸಿ ಕೂಡ ಇಟ್ಟುಕೊಳ್ಳಬಹುದು. * ಸಬ್ಬಕ್ಕಿಯಲ್ಲಿ ಕೆಲವು ತರ ಇದೆ. ನೀವು ಉಪಯೋಗಿಸುವ ಸಬ್ಬಕ್ಕಿ ಯಾವುದೆಂದು ತಿಳಿದು,ಅದಕ್ಕೆ ಯಾವ ರೀತಿ ತಯಾರಿಸಬೇಕೋ. ಆ ರೀತಿ ತಯಾರಿಸಿ.ಸಬ್ಬಕ್ಕಿ ಬೇಗ ಬೇಯುತ್ತದೆ. ಬೆಂದ ಮೇಲೆ ನೋಡಲು ಚೆನ್ನಾಗಿ ಕಾಣುತ್ತದೆ.