ಕುವೆಂಪು - ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿಗಳಲ್ಲೊಬ್ಬರು, ಎರಡನೆ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಪ್ರಥಮ ವ್ಯಕ್ತಿ. 'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ಮೊದಲ ಕಾವ್ಯನಾಮ-"ಕಿಶೋರ ಚಂದ್ರವಾಣಿ" -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯತೊಡಗಿದರು. ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಪತ್ನಿ ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು - ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ.
                  ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು
  1. ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
  2. ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
  3. ಕುವೆಂಪು - ಲೇ: ದೇಜಗೌ
  4. ಯುಗದ ಕವಿ - ಲೇ: ಡಾ.ಕೆ.ಸಿ.ಶಿವಾರೆಡ್ಡಿ
  5. ಹೀಗಿದ್ದರು ಕುವೆಂಪು - ಲೇ: ಪ್ರಭುಶಂಕರ
  6. ಕುವೆಂಪು - ಲೇ: ಎಸ್.ವಿ.ಪರಮೇಶ್ವರಭಟ್ಟ
  7. ಶ್ರೀ ಕುವೆಂಪು ಸಂಭಾಷಣೆ ಮತ್ತು ಸಂದರ್ಶನ - ಲೇ: ಎಸ್.ವೃಷಭೇಂದ್ರಸ್ವಾಮಿ
  8. ತರಗತಿಗಳಲ್ಲಿ ಕುವೆಂಪು - ಲೇ: ಎಸ್.ವೃಷಭೇಂದ್ರಸ್ವಾಮಿ
  9. ಕುವೆಂಪು ಕಾವ್ಯಯಾನ - ಲೇ: ಬಿ.ಆರ್. ಸತ್ಯನಾರಾಯಣ
  10. ಕುವೆಂಪು ನುಡಿತೋರಣ - ಸಂ: ಬಿ.ಆರ್.ಸತ್ಯನಾರಾಯಣ