ಸದಸ್ಯ:Srivilasini123/sandbox
ಪ್ರೊ ಎಂ. ರಾಮಚಂದ್ರ
ಮೂಲತಃ ಕೇರಳ ಕರ್ನಾಟಕ ಗಡಿನಾಡಿನವರಾದರೂ ಕಾರ್ಕಳದಲ್ಲಿ ನೆಲೆಸಿದ ಪ್ರೊ.ಎಂ. ರಾಮಚಂದ್ರ (ಜನನ 1939) ಅವರು ತಮ್ಮ ಸಾಹಿತ್ಯಸಂಘಟನೆಯ ಕಾರ್ಯಗಳಿಂದ ನಾಡಿನಲ್ಲಿ ಪರಿಚಿತರು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸದ ಅನಂತರ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಅಧ್ಯಯನ ಮಾಡಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗಮುಖ್ಯಸ್ಥರಾಗಿ ಉದ್ಯೋಗವಿಶ್ರಾಂತಿ ಪಡೆದರು. ಸೇಡಿಯಾಪು ಅವರ ಪ್ರಿಯಶಿಷ್ಯರಾದ ಇವರು ‘ಸೇಡಿಯಾಪು ಕೃಷ್ಣ ಭಟ್ಟರು’ ಎಂಬ ಕಿರುಹೊತ್ತಗೆಯನ್ನೂಸಾಹಿತ್ಯ ಅಕಾಡೆಮಿಗಾಗಿ ಅದೇ ಹೆಸರಿನ ವಿವರವಾದ ಕೃತಿಯನ್ನೂ ‘ಪತ್ರಾವಳಿ’ ಎಂಬ ಹೆಸರಿನಲ್ಲಿ ಸೇಡಿಯಾಪು ಅವರ ಪತ್ರಸಂಗ್ರಹವನ್ನೂ ಪ್ರಕಟಿಸಿದ್ದಾರೆ. ‘ಬಾಡದ ಹೂಗಳು’ ಎಂಬ ಪುಸ್ತಕದಲ್ಲಿ ಕನ್ನಡದ ವಿಶಿಷ್ಟ ಸಾಹಿತ್ಯಕೃತಿಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ರಸಾಯನ ಎಂಬುದು ಇವರ ಸಾಹಿತ್ಯ ವಿಮರ್ಶೆಯ ಪ್ರಬಂಧ ಸಂಕಲನ ಇದು ಪದವಿ ತರಗತಿಗೆ ಪಠ್ಯವೂ ಆಗಿತ್ತು. ‘ನೆನಪಿನ ಬುತ್ತಿ’ ಎಂಬುದು ಸಂದರ್ಭವಿಶೇಷಗಳನ್ನು ದಾಖಲಿಸುವ ಲೇಖನಸಂಚಯ. ಜಿ. ಪಿ. ರಾಜರತ್ನಂ ಅವರ ಕುರಿತು ಬರೆದ ಪುಸ್ತಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಅಲ್ಲದೆ ಬಾಸಿಗ, ನಂದಾದೀವಿಗೆ, ತುರಾಯಿ ಮೊದಲಾದ ಹಲವು ಲೇಖನಸಂಕಲನಗಳನ್ನು ಇವರು ಸಂಪಾದಿಸಿಕೊಟ್ಟಿದ್ದಾರೆ. ಜಿ. ಪಿ. ರಾಜರತ್ನಂ ಅವರ ಅಧ್ಯ್ಷಕತೆಯಲ್ಲಿ ಕಾರ್ಕಳದಲ್ಲಿ ನಡೆಸಲಾದ ಜಿಲ್ಲಾ ಸಾಹಿತ್ಯ ಸಮ್ಮೇಳನವು ಕರಾವಳಿ ಪ್ರದೇಶದಲ್ಲಿ ಅನೇಕ ಸಾಹಿತ್ಯ ಸಮ್ಮೇಳನಗಳಿಗೆ ಮಾದರಿಯಾದುದೆಂದು ಈಗಲೂ ನೆನಪಿಸಲ್ಪಡುತ್ತದೆ. ಈ ಸಮ್ಮೇಳನದ ಮುಖ್ಯ ಸಂಘಟಕರು ಪ್ರೊ. ಎಂ. ರಾಮಚಂದ್ರ ಅವರೇ ಆಗಿದ್ದರು. ಪ್ರಸ್ತುತ ಪ್ರಬಂಧವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ‘ಸಮುಚ್ಚಯ’ ಎಂಬ ಇವರ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಉತ್ತಮ ವಾಗ್ಮಿಗಳೂ, ಸಂಘಟಕರೂ ಆದ ಇವರು ಕಾರ್ಕಳದಲ್ಲಿ ಸಾಹಿತ್ಯಸಂಘವನ್ನು ಕಟ್ಟಿ ಅದರ ಸಂಚಾಲಕರಾಗಿದ್ದುಕೊಂಡು ಒಂದು ಉತ್ತಮ ಮಟ್ಟದ ಸಾಹಿತ್ಯಕವಾತಾವರಣವನ್ನು ನಿರ್ಮಿಸಿದ್ದಾರೆ. ತಾವು ಸಾಹಿತ್ಯಪರಿಚಾರಕರೆಂಬ ವಿನಯ ಅವರದು. ಕನ್ನಡದ ಎಲ್ಲ ಹಿರಿಯ ವಿದ್ವಾಂಸರ ನಿಕಟಪರಿಚಯ ಇವರಿಗಿದೆ. ಕನ್ನಡದ ಸೇವೆಗಾಗಿಯೇ ನೀಡಲ್ಪಡುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರ ಹೆಸರಿನ ಪ್ರಶಸ್ತಿ ಇವರಿಗೆ ಸಂದಿದೆ.