ಸೋಲ್ ಲೈಟ್

ಕತ್ತಲಿನಲ್ಲಿ ಒಂದು ನೀರು ತುಂಬಿದ ಪ್ಲಾಸ್ಟಿಕ್ ಬಾಟಲಿ ಇರಿಸಿ ಇದರ ಮೂತಿಯಿಂದ ನೀರಿನೊಳಗೆ ಟಾರ್ಚ್ ಬೆಳಕು ಹರಿಸಿ, ಬೆಳಕು ನೀರಿನಲ್ಲಿ ಪ್ರತಿಫಲಿಸಿ, ಕೋಣೆಯ ತುಂಬ ಉಜ್ವಲ ಬೆಳಕು ಚೆಲ್ಲುತ್ತದೆ. ಕ್ಯಾಂಪ್ ಗಳಿಗೆ ಹೋಗುವವರು ರಾತ್ರಿಯ ವೇಳೆ ಈ ಟ್ರಿಕ್ ಬಳಸುತ್ತಾರೆ.

ಇದೇ ತಂತ್ರಜ್ಞಾನವನ್ನು ಬಳಸುವ ಸೋಲ್ ಲೈಟ್ ಕ್ಯಾಪ್ ಎಂಬ ಒಂದು ಆವಿಷ್ಕಾರವನ್ನು ಅಮೆರಿಕಾದ ಸಿಂಪ್ಲಿ ಬ್ರಿಲ್ಲಿಯಂಟ್ ಎಂಬ ಸಂಸ್ಥೆ ಮಾರುಕಟ್ಟೆಗೆ ತಂದಿದೆ. ಇದು ಬಾಟಲಿಯಲ್ಲ, ಬಾಟಲಿಯ ಒಂದು ಮುಚ್ಚಳ ಮಾತ್ರ. ಎರಡು ಇಂಚು ಅಗಲದ ಬಾಯಿಯ ಯಾವುದೇ ನೀರಿನ ಬಾಟಲಿಗೆ ಹಿಡಿಸುವ ಮುಚ್ಚಳ ಇದು. ಇದರ ಒಳಗೆ ಸೌರಶಕ್ತಿಯಿಂದ ನಡೆಯುವ ನಾಲ್ಕು ಶಕ್ತಿಶಾಲಿ ಎಲ್ ಇಡಿ ಬಲ್ಬ್ ಗಳಿರುತ್ತವೆ. ಇದನ್ನು ನೀರಿನ ಬಾಟಲಿಯ ಮೇಲೆ ಮುಚ್ಚಿ ಸ್ವಿಚ್ ಆನ್ ಮಾಡಿದರೆ ಇದರಿಂದ ಹೊರಡುವ ಬೆಳಕು ಬಾಟಲಿಯ ನೀರಿನಲ್ಲಿ ಪ್ರತಿಫಲಿಸಿ ಪ್ರಕಾಶಮಾನ ಬೆಳಕನ್ನು ನೀಡುತ್ತದೆ.

ಈ ಬಾಟಲಿ ಮುಚ್ಚಳದಲ್ಲಿ ವಿಶೇಷ ಬ್ಯಾಟರಿ ಮತ್ತು ಸೋಲಾರ್ ಫಲಕಗಳೂ ಇವೆ. ಸೋಲಾರ್ ಫಲಕ ಹೀರುವ ಸೌರಶಕ್ತಿ, ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಚಾರ್ಜಿಂಗ್ ವೇಳೆ ಮುಚ್ಚಳವನ್ನು ಕಿಟಕಿ, ಕಾರು, ಮರ ಮುಂತಾದ ಮೇಲ್ಮೈ ಗಳಲ್ಲಿ ಹಚ್ಚಿ ಇಡಲು ನಿರ್ವಾತ ವ್ಯವಸ್ಥೆ ಕೂಡಾ ಇದೆ.

ಹಗುರವಾದ ಈ ಮುಚ್ಚಳವನ್ನು ಎಲ್ಲಿ ಬೇಕಾದರೂ ಒಯ್ಯಬಹುದು. ಒಂದು ಎಮರ್ಜೆನ್ಸಿ ಲೈಟ್ ನಂತೆ ಸುಮಾರು ಆರುಗಂಟೆಯ ಕಾಲ ಉರಿಯುವ ಈ ಬೆಳಕಿನ ಬಾಟಲಿಯನ್ನು ವಿದ್ಯುತ್ ಸಂಪರ್ಕ ಇದರ ಕ್ಯಾಂಪ್ ಗಳಲ್ಲಿ, ದೋಣಿಗಳಲ್ಲಿ ಮಾತ್ರವಲ್ಲದೆ, ನೀರಿನ ಕೆಳಗೂ ಬಳಸಬಹುದು.