ಮುಳ್ಳಯ್ಯನಗಿರಿ


ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ). ಇತಿವೃತ್ತ

   ಹಬ್ಬದ ದಿನಗಳಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹಾಗೆಯೆ ಇದು ಚಾರಣಿಗರ ಸ್ವರ್ಗವೆನಿಸಿದೆ. ಬೆಟ್ಟದ ಮೇಲ್ಬಾಗಕ್ಕೆ ಹೋಗಲು ರಸ್ತೆಯು ಇದೆ ಮತ್ತು ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಮತ್ತೊಂದು ಕಾಲು ದಾರಿ ಕೂಡ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ತೆರಳಿದರೆ ಮುಳ್ಳಯ್ಯ ಸ್ವಾಮಿಗಳ ದೇವಾಲಯದ ಗರ್ಭ ಗುಡಿಯವರೆಗೆ ಹೋಗುತ್ತದೆ ಎಂದು ಪ್ರತೀತಿ. ಮುಳ್ಳಯ್ಯನಗಿರಿ ಬೆಟ್ಟದಿಂದ ಕಾಣುವ ನೋಟವು ಬಹು ಸುಂದರ.