ಚಕ್ಕೋತ ಹಣ್ಣು
ಚಕ್ಕೋತ ಹಣ್ಣು ಕಿತ್ತಳೆ ಜಾತಿಗೆ ಸೇರಿದ್ದು. ಆಕಾರ ಮತ್ತು ತೂಕದಲ್ಲಿ ಅದಕ್ಕಿಂತ ಜಾಸ್ತಿ. ಹಣ್ಣು ರುಚಿಯಲ್ಲಿ ತುಸು ಕಹಿ, ಕಡಿಮೆ ಸಿಹಿ, ಹೆಚ್ಚು ಹುಳಿಯಿಂದ ಕೂಡಿರುವ ಹಣ್ಣಾಗಿದೆ.
ರಾಜ್ಯದಲ್ಲಿ ರುಚಿಕರವಾಗಿ ತುಂಬ ಸಿಹಿಯಾಗಿರುವುದು ದೇವನಹಳ್ಳಿ ಚಕೋತ ತಳಿ. ಇಲ್ಲಿ ಬೆಳೆಯುವ ಹಣ್ಣಿನ ಸವಿ ನೋಡಿದರೆ ಮೂಲ ಗುಣವನ್ನು ಅದು ಉಳಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ.
ಈ ವಿಶಿಷ್ಟ ಚಕ್ಕೋತದ ಸಿಪ್ಪೆ ಬಹು ತೆಳ್ಳಗೆ. ಒಳಗಿರುವ ತೊಳೆಗಳು ಕೆಂಪು. ಜೇನಿನಂತಹ ಸಿಹಿ. ಮೋಸಂಬಿಯಂತೆ ಉತ್ತಮ ಜ್ಯೂಸ್ ಮಾಡಬಹುದು. ಆರೋಗ್ಯಕ್ಕೂ ಒಳ್ಳೆಯದು.
ಚಕ್ಕೋತ ಗಿಡಕ್ಕೆ ವಿಪರೀತ ಬಿಸಿಲು ಬೀಳಬಾರದು. ತೆಂಗು ಮತ್ತು ಅಡಿಕೆ ತೋಟದಲ್ಲಿ ಮಿಶ್ರಬೆಳೆಯಾಗಿಯೂ ಇದನ್ನು ಬೆಳೆಯಬಹುದು. ಹಲವಡೆ ವಾಣಿಜ್ಯ ಬೆಳೆಯಾಗಿದೆ.
ಚಕ್ಕೋತ ಗಿಡ ನೆಟ್ಟು 1-2 ವರ್ಷಗಳಕಾಲ 2 ದಿನಗಳಿಗೊಮ್ಮೆ ನೀರುಣಿಸುವ ಅಗತ್ಯವಿರುತ್ತದೆ. ಅನಂತರ 30 ದಿನಗಳಿಗೊಮ್ಮೆ ಬುಡ ನೆನೆಸಿದರೂ ಸಾಕಾಗುತ್ತದೆ. ಚಕ್ಕೋತ ಬೀಜದಿಂದ ತಯಾರಿಸಿದ ಗಿಡದಲ್ಲಿ ಫಸಲು ಬರಲು 4 ವರ್ಷ ಬೇಕಾಗುತ್ತದೆ. ಆದರೆ ಚಕ್ಕೋತ ಮರದ ಬಲಿತ ಕೊಂಬೆಯನ್ನು ಕತ್ತರಿಸಿ ನೆಟ್ಟರೆ 2 ವರ್ಷದಲ್ಲೇ ಫಲ ಪಡೆಯಬಹುದು.
ಚಕ್ಕೋತ ಮರ ಒಂದು ಸಲಕ್ಕೆ 300ಕ್ಕಿಂತ ಹೆಚ್ಚು ಹಣ್ಣುಗಳನ್ನು ನೀಡುತ್ತದೆ. ಮರ ಬೆಳೆಯುತ್ತಾ ಹೋದಂತೆ ಪ್ರತಿ ಕೊಯ್ಲಿನಲ್ಲೂ 1000ಕ್ಕಿಂತ ಅಧಿಕ ಹಣ್ಣು ಸಿಗುತ್ತದೆ.